ಲೇಖನಗಳು

ಸರ್ಕಾರದ ವಿರುದ್ಧ ದಾವೆ ಸಲ್ಲಿಸುವಿಕೆ – ಕಾನೂನು ಮತ್ತು ಪ್ರಕ್ರಿಯೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ನಮ್ಮ ಭಾರತ ದೇಶವು ಪ್ರಜಾಪ್ರಭುತ್ವ ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ಸಂಯುಕ್ತ ದೇಶವಾಗಿದೆ. ಆಡಳಿತದ ಚುಕ್ಕಾಣಿ ಪ್ರಜೆಗಳಿಂದ ಆರಿಸಲ್ಪಡುತ್ತವೆ, ಹಾಗಾಗಿ ನಮ್ಮನಾಳುವ ವರ್ಗ ಸರ್ವಾಧಿಕಾರದ ನಿಲುವನ್ನು ತೋರುವಂತಿಲ್ಲ. ಜನರ ತೆರಿಗೆ ಹಣದಿಂದ ದೇಶವನ್ನು ನಡೆಸುವ ಸರ್ಕಾರ  ಪ್ರಜೆಗಳ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿಯುತ ಸ್ಥಾನದಲ್ಲಿದೆ. ಆಳುವ ವರ್ಗ ಪ್ರಶ್ನಾತೀತವಲ್ಲ, ಆಡಳಿತದ ಚುಕ್ಕಾಣಿ ಹಿಡಿದವರು ನ್ಯಾಯಸಮ್ಮತವಾಗಿ ನಡೆದುಕೊಳ್ಳುತ್ತಿಲ್ಲ ಅಥವಾ ಪ್ರಜೆಗಳ ಸಾಂವಿಧಾನಿಕ ಅಥವಾ ಕಾನೂನಾತ್ಮಕ ಹಕ್ಕುಗಳ ಉಲ್ಲಂಘನೆ ಸರ್ಕಾರದಿಂದಲೇ ನಡೆಯುತ್ತಿದೆ ಎಂದಾಗ ಪ್ರಜೆಗಳು ಸರ್ಕಾರವನ್ನು ಪ್ರಶ್ನಿಸಬಹುದು ಹಾಗೆಯೇ ಅವರ ವಿರುದ್ಧ ದಾವೆಯನ್ನೂ ಸಲ್ಲಿಸಬಹುದು. ಇದಕ್ಕೆ ನಮ್ಮ ಸಂವಿಧಾನ ಮತ್ತು ದಿವಾನಿ ಪ್ರಕ್ರಿಯಾ ಸಂಹಿತೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಾಗಾದರೆ ಸರ್ಕಾರ ಎಂದರೇನು? ಸರ್ಕಾರದ ವಿರುದ್ಧ ದಾವೆ ಸಲ್ಲಿಸುವುದಕ್ಕೆ ಇರುವ ಕಾನೂನು- ಪ್ರಕ್ರಿಯೆ, ನೋಟಿಸಿನ ಪರಿಕಲ್ಪನೆ, ದಿವಾನಿ ಪ್ರಕ್ರಿಯಾ ಸಂಹಿತೆಯ ಕಾರ್ಯಾದೇಶ 27ರ ಅಗತ್ಯತೆ ಹಾಗೂ ನಿರ್ಧಾರಿತ ಪ್ರಕರಣಗಳ ಕುರಿತಾಗಿ ಈ ಲೇಖನ.

ಸರ್ಕಾರದ ಅರ್ಥ :

ಭಾರತ ಸಂವಿಧಾನದ ಅನುಚ್ಛೇದ 12 ಹೇಳುವಂತೆ ರಾಜ್ಯ (State) ಎಂದರೆ ಈ ಕೆಳಗಿನವುಗಳನ್ನು ಒಳಗೊಂಡಂತೆ:

  1. ಭಾರತೀಯ ಸಂಸತ್ತು ಮತ್ತು ಭಾರತ ಸರ್ಕಾರ, ಅಂದರೆ ಒಕ್ಕೂಟದ ಕಾರ್ಯಾಂಗ ಮತ್ತು ಶಾಸಕಾಂಗ
  2. ಆಯಾ ರಾಜ್ಯಾಗಳ ಸರ್ಕಾರ ಮತ್ತು ಶಾಸಕಾಂಗ, ಅಂದರೆ ರಾಜ್ಯದ ಶಾಸಕಾಂಗ ಮತ್ತು ಕಾರ್ಯಾಂಗ
  3. ಭಾರತದ ನ್ಯಾಯವ್ಯಾಪ್ತಿಯೊಳಗೆ ಬರುವಂತಹ ಸ್ಥಳೀಯ ಮತ್ತು ಇತರ ಪ್ರಾಧಿಕಾರಗಳು
  4. ಭಾರತ ಸರ್ಕಾರದ ಅಧಿನದಲ್ಲಿ ಇರುವ ಎಲ್ಲ ಸ್ಥಳೀಯ ಮತ್ತು ಇತರ ಪ್ರಾಧಿಕಾರಗಳು

ಸರ್ಕಾರದ ಜವಾಬ್ದಾರಿ ಎಂದರೆ ಪ್ರಜೆಗಳ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯೊಂದಿಗೆ ಅವರು ಎದುರಿಸುವ ಕುಂದು ಕೊರತೆಗಳಿಗೆ ಪರಿಹಾರ, ಮೂಲಸೌಕರ್ಯ ಒದಗಿಸುವುದಾಗಿರುತ್ತದೆ.

ಸರ್ಕಾರದ ವಿರುದ್ಧ ದಾವೆ ಸಲ್ಲಿಸುವುದಕ್ಕೆ ಇರುವ ಕಾನೂನು:

ಸರ್ಕಾರದ ವಿರುದ್ಧ ಪ್ರಕರಣವನ್ನು ದಾವೆ ಅಥವಾ ರಿಟ್ ಅರ್ಜಿಯ ಮೂಲಕ ದಾಖಲಿಸಬಹುದಾಗಿದೆ. ರಿಟ್ ಅರ್ಜಿಯು ಯಾವುದೇ ವ್ಯಕ್ತಿಯ ಮೂಲಭೂತ ಹಕ್ಕುಗಳು ಉಲ್ಲಂಘನೆಯಾದ ಸಂದರ್ಭದಲ್ಲಿ ಮಾನ್ಯ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸುವ ಅರ್ಜಿಯಾಗಿದ್ದು ಅದರ ಪ್ರಕ್ರಿಯೆ ಬೇರೆಯೇ ಇದೆ. ಈ ಲೇಖನವು ಕೇವಲ ದಿವಾನಿ ಪ್ರಕ್ರಿಯಾ ಸಂಹಿತೆಯಡಿಯಲ್ಲಿ ಸರ್ಕಾರದ ವಿರುದ್ಧ ದಾವೆ ಸಲ್ಲಿಸುವ ಕುರಿತಾಗಿದೆ.

ದಿವಾನಿ ಪ್ರಕ್ರಿಯಾ ಸಂಹಿತೆ, 1908 ರ ಅಡಿಯಲ್ಲಿ ಸರ್ಕಾರದ ವಿರುದ್ಧ ದಾವೆ ಸಲ್ಲಿಸುವುದಕ್ಕೆ ಕಲಂ 79, ಕಲಂ 80 ಮತ್ತು ಕಾರ್ಯಾದೇಶ 27ರ ಅಡಿಯಲ್ಲಿ ಅವಕಾಶ ಕಲ್ಪಿಸಿ, ದಾವೆ ಹೇಗೆ ಸಲ್ಲಿಸಬೇಕು ಮತ್ತು ಅದರ ಪ್ರಕ್ರಿಯೆಗಳ ಕುರಿತು ನಿರ್ದೇಶನ ನೀಡಲಾಗಿದೆ.

ಮೊದಲನೆಯದಾಗಿ ದಿವಾನಿ ಪ್ರಕ್ರಿಯೆ ಸಂಹಿತೆಯ ಕಲಂ 79  ಮತ್ತು 80 ಪ್ರಕ್ರಿಯೆಯ ನಿಬಂಧನೆಯಾಗಿದೆ. ಆದ್ದರಿಂದ ಇದರಲ್ಲಿ ಸರ್ಕಾರದ ವಿರುದ್ಧವಾಗಿ ಜಾರಿಗೊಳಿಸಬಹುದಾದ ಹಕ್ಕುಗಳು ಮತ್ತು ಹೊಣೆಗಾರಿಕೆಗಳ ಕುರಿತಾಗಿ ಹೇಳಿಲ್ಲ, ಆದರೆ ಸರ್ಕಾರದ ವಿರುದ್ಧ ದಾವೆ ಸಲ್ಲಿಸುವ ಸಂದರ್ಭ ಉದ್ಭವಿಸಿದಾಗ ಅದರ ಕಾರ್ಯ ವಿಧಾನವನ್ನು ಮಾತ್ರ ಹೇಳುತ್ತದೆ.

ಎಂತಹ ಸಂದರ್ಭದಲ್ಲಿ ನೀವು ಸರಕಾರದ ವಿರುದ್ಧ ದಾವೆ ಹೂಡಬಹುದು ?

ಸರ್ಕಾರದೊಟ್ಟಿಗೆ ಅಥವಾ ಸರಕಾರದ ಅಂಗಸಂಸ್ಥೆಗಳೊಂದಿಗೆ ಕರಾರು ಒಪ್ಪಂದಗಳ ವಿಚಾರದಲ್ಲಿ, ಸರಕಾರದಿಂದ ಏನಾದರೂ ನಷ್ಟ ಸಂಭವಿಸಿದಲ್ಲಿ ಪರಿಹಾರಧನಕ್ಕಾಗಿ, ಸರಕಾರ ಜಾಗವನ್ನು ಒತ್ತುವರಿ ಮಾಡಿಕೊಳ್ಳುವ ಸಂದರ್ಭದಲ್ಲಿ ಅಥವಾ ಸರಕಾರದೊಂದಿಂಗಿನ ಆಸ್ತಿ ವಿವಾದಗಳ ಸಂದರ್ಭದಲ್ಲಿ ಸರಕಾರದ ವಿರುದ್ಧ ದಾವೆ ಹೂಡುವುದು ಸಾಧ್ಯವಾಗುತ್ತದೆ.

ಸರ್ಕಾರದ ವಿರುದ್ಧ ದಾವೆ ಸಲ್ಲಿಸುವಿಕೆ:

ದಿವಾನಿ ಪ್ರಕ್ರಿಯಾ ಸಂಹಿತೆಯ ಕಲಂ 79 ಸರ್ಕಾರದ ವಿರುದ್ಧದ ದಾವೆಯನ್ನು ಹೂಡುವ ಸಂದರ್ಭದಲ್ಲಿ ದಾವೆಗೆ ಯಾರನ್ನು ಎದುರುದಾರರನ್ನಾಗಿ ಹೆಸರಿಸಬೇಕು ಎಂದು ಹೇಳುತ್ತದೆ.

 ಕೇಂದ್ರ ಸರ್ಕಾರದ ವಿರುದ್ಧವಾಗಿ ದಾವೆಯನ್ನು ಹೂಡಿದಾಗ ಭಾರತ ಒಕ್ಕೂಟವನ್ನು (Union of India), ರಾಜ್ಯ ಸರ್ಕಾರದ ವಿರುದ್ಧವಾಗಿ ದಾವೆ ಹೂಡಿದಾಗ ರಾಜ್ಯ ಸರ್ಕಾರವನ್ನು ಪ್ರತಿವಾದಿಗಳಾಗಿ ದಾವೆಯಲ್ಲಿ ಹೆಸರಿಸಬೇಕು.

ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಂದರೆ ಅವುಗಳ ಕೆಳಗೆ ಅಥವಾ ನಿಯಂತ್ರಣದಲ್ಲಿ ಬರುವಂತಹ ಆಯೋಗ, ನಿಗಮ, ಪ್ರಾಧಿಕಾರ, ಸಂಘ-ಸಂಸ್ಥೆಗಳನ್ನು ಸಹ ಒಳಗೊಂಡಿರುತ್ತದೆ.

ನೋಟಿಸಿನ ಪರಿಕಲ್ಪನೆ : ಕಲಂ 80, ಸರ್ಕಾರದ ವಿರುದ್ಧ ದಾವೆ ಹೂಡುವ ಪೂರ್ವ-ಷರತ್ತಾದ ನೋಟಿಸಿನ ಕುರಿತಾಗಿ ಹೇಳುತ್ತದೆ. ಯಾವುದೇ ಸರ್ಕಾರದ ವಿರುದ್ಧ ದಾವೆಯನ್ನು ಸಲ್ಲಿಸುವ ಎರಡು ತಿಂಗಳು ಪೂರ್ವದಲ್ಲಿ ನೋಟಿಸನ್ನು ನೀಡುವುದು ಅಗತ್ಯವಾಗಿರುತ್ತದೆ. ರೈಲ್ವೆ ಇಲಾಖೆಯನ್ನು ಹೊರತುಪಡಿಸಿ ಕೇಂದ್ರ ಸರ್ಕಾರದ ವಿರುದ್ಧದ ದಾವೆಯಾದಲ್ಲಿ ಕೇಂದ್ರ ಸರ್ಕಾರದ ಕಾರ್ಯದರ್ಶಿಗೆ; ರೈಲ್ವೆಗೆ ಸಂಬಂಧಿಸಿದ ದಾವೆ ಆಗಿದ್ದಲ್ಲಿ ಅಂತಹ ನಿರ್ದಿಷ್ಟ ರೈಲ್ವೆಯ ಜನರಲ್ ಮ್ಯಾನೇಜರ್ ಗೆ; ಯಾವುದೇ ರಾಜ್ಯ ಸರ್ಕಾರಗಳ ವಿರುದ್ಧವಾದ ದಾವೆ ಆಗಿದ್ದಲ್ಲಿ ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ಅಥವಾ ಜಿಲ್ಲಾಧಿಕಾರಿಗೆ ನೋಟಿಸನ್ನು ನೀಡಬೇಕು.

 ನೋಟಿಸಿನಲ್ಲಿರಬೇಕಾದ ವಿವರಗಳು:

•ಫಿರ್ಯಾದಿಯ ಹೆಸರು, ವಾಸಸ್ಥಳದ ವಿವರಣೆ,

• ಪ್ರಕ್ರಿಯೆಗೆ ಕಾರಣ( cause of action),

• ದಾವೆಯಡಿಯಲ್ಲಿ ಕೋರಿದ ಪರಿಹಾರ ( relief sought)

 ಈ ಮೇಲ್ಕಂಡ ಅಂಶಗಳನ್ನು ಸೂಕ್ತವಾಗಿ ಅನುಸರಿಸದಿದ್ದರೆ ಕಾರ್ಯಾದೇಶ 7ರ ನಿಯಮ 11ರ ಅಡಿಯಲ್ಲಿ ದಾವೆಯು ತಿರಸ್ಕೃತಗೊಳ್ಳಬಹುದು.

ಸರ್ಕಾರದ ವಿರುದ್ಧ ದಾವೆ ಹೂಡಿದಾಗ, ದಿವಾನಿ ಪ್ರಕ್ರಿಯ ಸಂಹಿತೆಯ ಕಾರ್ಯಾದೇಶ 27ರ ನಿಯಮ 4 ರ  ಪ್ರಕಾರ ನ್ಯಾಯಲಯ ಜಾರಿ ಮಾಡಿದ ನೋಟಿಸನ್ನು ಸರ್ಕಾರದ ವಕೀಲರು  ಸ್ವೀಕರಿಸಬೇಕು.

ನೋಟಿಸ್ ನೀಡುವುದಕ್ಕೆ ವಿನಾಯಿತಿ :

 ಕಲಂ 80(2), ಕಲಂ 80(3) ನ್ನು 1976 ರ ತಿದ್ದುಪಡಿಯ ಮೂಲಕ ಸೇರಿಸಲಾಗಿದೆ. ತಕ್ಷಣಕ್ಕೆ ಪರಿಹಾರ ಕೋರಿ ಸರ್ಕಾರದ ವಿರುದ್ಧ ದಾವೆ ಹೂಡುವ ಸಂದರ್ಭದಲ್ಲಿ ನ್ಯಾಯಾಲಯದ ಅನುಮತಿಯೊಂದಿಗೆ ಕಲಂ 80(1)ರಡಿಯಲ್ಲಿ ನೋಟಿಸಿನ ಪೂರ್ವ-ಷರತ್ತನ್ನು ಪೂರ್ಣಗೊಳಿಸದೆ ದಾವೆ ಹೂಡಲು ಕಲಂ 80(2)ರಡಿಯಲ್ಲಿ ಅವಕಾಶ ನೀಡಲಾಗಿದೆ. ಇದರ ಮುಖ್ಯ ಉದ್ದೇಶ ಪಿರ್ಯಾದಿಗೆ ತಕ್ಷಣಕ್ಕೆ ಪರಿಹಾರ ದೊರಕಬೇಕಾದ ಸಂದರ್ಭದಲ್ಲಿ ಮತ್ತು ಆ ಸಮಯಕ್ಕೆ ಪರಿಹಾರ ದೊರಕದ ಹೊರತು ಪಿರ್ಯಾದಿಗೆ ಭರಿಸಲಾಗದಂತಹ ನಷ್ಟ ಉಂಟಾಗುವ ಸಂದರ್ಭಗಳಲ್ಲಿ, ಕಲಂ 80(1)ರಡಿಯಲ್ಲಿ ಹೇಳಲಾದ ಪೂರ್ವ-ಷರತ್ತಿನಿಂದ ಫಿರ್ಯಾದಿಗೆ ಅನ್ಯಾಯವಾಗಬಾರದೆಂದು.

ಇಲ್ಲಿ ತುರ್ತು ಸಂದರ್ಭವೆಂದರೆ ಉದಾಹರಣೆಗೆ :

• ಸ್ಥಳೀಯ ಪ್ರಾಧಿಕಾರ ಅಥವಾ ಸರ್ಕಾರವು ರಸ್ತೆಯ ಅಗಲೀಕರಣ ಮಾಡುವಾಗ ಖಾಸಗಿ ವ್ಯಕ್ತಿಗೆ ಸೇರಿದ ಜಾಗದಲ್ಲಿ ಹೇಳಿದ್ದಕ್ಕಿಂತ ಹೆಚ್ಚಿನ ಜಾಗೆಯನ್ನು ಒತ್ತುವರಿ ಮಾಡಲು ಹೊರಟಾಗ ಅಥವಾ ಅಂತಹ ವ್ಯಕ್ತಿಗೆ  ಒತ್ತುವರಿಯ ಕುರಿತು ಯಾವುದೇ ತಿಳುವಳಿಕೆ ನೀಡದೆ ಕಾರ್ಯಾರಂಭ ಮಾಡಿದ ಸಂದರ್ಭಗಳಲ್ಲಿ.

 ಹೀಗೆ ಇಂತಹ ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯಕ್ಕೆ ಮನವರಿಕೆಗೊಂಡರೆ ನೋಟಿಸ್ ಇಲ್ಲದೆ ದಾವೆ ದಾಖಲಾಗುತ್ತದೆ. ಆದರೆ  ಪರಿಹಾರಕ್ಕೆ ಕೋರಿದ (claim) ವಿಚಾರಕ್ಕೆ ಸಂಬಂಧಿಸಿದಂತೆ ಕಾರಣವನ್ನು ತೋರಿಸುವ ಒಂದು ಸಮಂಜಸ ಅವಕಾಶ ನೀಡಿದ ನಂತರವೇ ಅದನ್ನು ಒಪ್ಪಿಕೊಳ್ಳಬೇಕು. ಕಲಂ  80(3) ನೋಟಿಸ್ ನೀಡಲಾಗಿ, ಕೆಲವು ನೂನ್ಯತೆಗಳಿಂದ ಬಳಲುತ್ತಿರುವ ದಾವೆಯನ್ನು ವಜಾ ಗೊಳಿಸುವಂತಿಲ್ಲ.

ಸರ್ಕಾರದ ವಿರುದ್ಧ  ಅಥವಾ ಯಾವುದೇ ಸಾರ್ವಜನಿಕ ಅಧಿಕಾರಿಯ ವಿರುದ್ಧ ತುರ್ತು ಅಥವಾ ತಕ್ಷಣದ ಪರಿಹಾರವನ್ನು ಪಡೆಯಲು ದಾವೆಯನ್ನು  ಅಗತ್ಯವಿರುವ ಯಾವುದೇ ಸೂಚನೆಯನ್ನು ನೀಡದೆಯೇ, ನ್ಯಾಯಾಲಯದ ಅನುಮತಿಯೊಂದಿಗೆ ದಾಖಲಿಸಬಹುದು;  ಆದರೆ ನ್ಯಾಯಾಲಯವು ಅಂತಹ ಸಂದರ್ಭದಲ್ಲಿ ಸರ್ಕಾರ ಅಥವಾ ಸಾರ್ವಜನಿಕ ಅಧಿಕಾರಿಗೆ ನ್ಯಾಯಲಯದಲ್ಲಿ ಹಾಜರಾಗಿ ತಮ್ಮ ಕಾರಣಗಳನ್ನು ಹೇಳಲು ಸಮಂಜಸ ಅವಕಾಶ ನೀಡದೆ, ಮಧ್ಯಂತರ  ಪರಿಹಾರ ನೀಡುವಂತಿಲ್ಲ.

 ಎರಡು ಪಕ್ಷಗಾರರನ್ನು ಆಲಿಸಿದ ನಂತರ, ದಾವೆಯಲ್ಲಿ ಯಾವುದೇ ತುರ್ತು ಅಥವಾ ತಕ್ಷಣದ ಪರಿಹಾರವನ್ನು ನೀಡುವ ಅವಶ್ಯಕತೆ ಇಲ್ಲ ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟರೆ, ಅಂತಹ ದಾವೆಯನ್ನು ಪಿರ್ಯಾದಿಗೆ ಹಿಂತುರುಗಿಸಿ ಕಲಂ 80(1) ರಲ್ಲಿ ಹೇಳಲಾದ ನೋಟಿಸಿನ ಪೂರ್ವ-ಷರತ್ತನ್ನು ಪೂರ್ಣ ಮಾಡಿ ನಂತರ ದಾವೆ ಹೂಡಲು ನಿರ್ದೇಶಿಸಬಹುದು.

 ದಾವೆ ಮತ್ತು ರಿಟ್ ಅರ್ಜಿಯ ಮಧ್ಯದ ವ್ಯತ್ಯಾಸವನ್ನು ಗಮನಿಸುವುದಾದರೆ ದಾವೆಯು ಕಾನೂನಾತ್ಮಕ ಹಕ್ಕುಗಳ ಉಲ್ಲಂಘಣೆ ರಕ್ಷಿಸುವುದಕ್ಕೆ ಇರುವಂತದ್ದು, ಮೂಲಭೂತ ಹಕ್ಕುಗಳು ಮತ್ತು ಸಾಂವಿದಾನಿಕ ಹಕ್ಕುಗಳ ಉಲ್ಲಂಘಣೆ ಆದಾಗ ರಿಟ್ ಅರ್ಜಿಯಲನ್ನು ಸಲ್ಲಿಸಬಹುದು. ರಿಟ್‌ ಅರ್ಜಿಯನ್ನು ಆಯಾ ರಾಜ್ದದ ಉಚ್ಛ ನ್ಯಾಯಲಯ ಅಥವಾ ಸರ್ವೋಚ್ಛ ನ್ಯಾಯಲಯದಲ್ಲಿ ಮಾತ್ರ ಸಲ್ಲಿಸಬಹುದು. ದಾವೆಯನ್ನು ಸಂಬಂಧಪಟ್ಟ ವ್ಯಕ್ತಿಗಳು ಕೆಳ ನ್ಯಾಯಾಲಯಗಳ ಹಂತದಲ್ಲೇ ಸಲ್ಲಿಸಬಹುದು.

ಸರ್ಕಾರದ ಪ್ರತಿನಿಧಿಸುವಿಕೆ ಹಾಗೂ ದಾವೆಗಳ ಇತ್ಯರ್ಥಪಡಿಸುವಿಕೆ :

ಕಾರ್ಯಾದೇಶ 27 ಹೇಳುವಂತೆ

• ಸರ್ಕಾರದಿಂದ ಅಥವಾ ಸರ್ಕಾರದ ವಿರುದ್ಧದ ಯಾವುದೇ ದಾವೆಯಲ್ಲಿ ಸರ್ಕಾರವು ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ  ನೇಮಿಸಬಹುದಾದಂತಹ ವ್ಯಕ್ತಿಯು ದೂರು ಅಥವಾ ಲಿಖಿತ ಹೇಳಿಕೆಗೆ ಸಹಿ ಹಾಕುತ್ತಾರೆ.

•ಸರ್ಕಾರಕ್ಕಾಗಿ ಕಾರ್ಯನಿರ್ವಹಿಸಲು ಅಧಿಕಾರ ಹೊಂದಿರುವ ವ್ಯಕ್ತಿಗಳು:

ಯಾವುದೇ ನ್ಯಾಯಾಂಗ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರಕ್ಕಾಗಿ ಕಾರ್ಯನಿರ್ವಹಿಸಲು ಪದನಿಮಿತ್ತ ಅಥವಾ ಸರಕಾರವು ನೇಮಿಸಿದ ವ್ಯಕ್ತಿಗಳನ್ನು ಮಾನ್ಯತೆ ಪಡೆದ ಏಜೆಂಟ್ ಎಂದು ಪರಿಗಣಿಸಲಾಗುತ್ತದೆ, ಅವರು ಈ ದಿವಾನಿ ಪ್ರಕ್ರಿಯಾ ಸಂಹಿತೆಯಡಿಯಲ್ಲಿ ಸರ್ಕಾರವನ್ನು ಪ್ರತಿನಿಧಿಸಬಹುದು ಮತ್ತು ಸರ್ಕಾರದ ಪರವಾಗಿ ಅರ್ಜಿಗಳಿಗೆ ಸಹಿ ಹಾಕಬಹುದು.

• ಯಾವುದೇ ದಾವೆ ಅಥವಾ ಪ್ರಕ್ರಿಯೆಯ ಯಾವುದೇ ಹಂತದಲ್ಲಿ, ಪಕ್ಷಗಳ ನಡುವೆ ರಾಜಿಯಾಗುವ ಸಾಧ್ಯತೆಯಿದೆ ಎಂದು ನ್ಯಾಯಾಲಯಕ್ಕೆ ತೋರಿದರೆ, ನ್ಯಾಯಾಲಯವು ಸೂಕ್ತವೆಂದು ಭಾವಿಸುವ ಅಂತಹ ಅವಧಿಗೆ ವಿಚಾರಣೆಯನ್ನು ಮುಂದೂಡಬಹುದು, ಅಥವಾ ಪಕ್ಷಗಾರರ ನಡುವಿನ ರಾಜಿಗೆ ಕೋರ್ಟ್ ಪ್ರಯತ್ನಿಸುತ್ತದೆ.

ನಿರ್ಧಾರಿತ ಪ್ರಕರಣಗಳು:

> ‘ಡೊಮಿನಿಯನ್ ಆಫ್ ಇಂಡಿಯಾ ವಿ. ಆರ್ ಸಿ ಕೆ ಸಿ ನಾಥ್ ಕಂಪನಿ’[i] ಪ್ರಕರಣದಲ್ಲಿ ದಿವಾನಿ ಪ್ರಕ್ರಿಯಾ ಸಂಹಿತೆಯ ಕಲಂ 18, 19 ಮತ್ತು 20 ರಲ್ಲಿ ಉಲ್ಲೇಖಿಸಲಾದ ವಾಸ ಅಥವಾ ನಿವಾಸಿ ಅಥವಾ ವ್ಯವಹಾರ ನಡೆಸುವುದು ಎಂಬ ಪದಗಳು ಸರ್ಕಾರಕ್ಕೆ ಅನ್ವಯಿಸುವುದಿಲ್ಲ ಎಂಬ ಆದೇಶವನ್ನು ನೀಡಲಾಯಿತು. ಆ ಕೇಸಿನಲ್ಲಿ ಪಿರ್ಯಾದಿಯು ಸರಕುಗಳ ಕಡಿಮೆ ವಿಲೇವಾರಿಯಿಂದ ಆದ ಹಾನಿಗಾಗಿ ಗವರ್ನರ್ ಜನರಲ್ ಆಫ್ ಇಂಡಿಯಾ (ಇನ್ ಕೌನ್ಸಿಲ್ ) ಮೇಲೆ ದಾವೆ ಸಲ್ಲಿಸಿದ್ದರು.

>’ ಯೂನಿಯನ್ ಆಫ್ ಇಂಡಿಯಾ   ವಿ.  ಶಂಕರ್ ಸ್ಟೋರ್ಸ್ ‘[ii] ದಲ್ಲಿ ಯಾವ ಪ್ರಕರಣದಲ್ಲಿ ಕ್ಲೇಮಿನ ವಿವರಣೆಗಳು ಬಹಳಷ್ಟು ಸಂಕೀರ್ಣವಾಗಿರುತ್ತವೆಯೋ ಅಂತಹ ಕೇಸುಗಳಲ್ಲಿ ನೋಟೀಸಿನ ಅಗತ್ಯವಿದೆ. ಈ ಕೇಸಿನಲ್ಲಿ ನೋಟೀಸ್ ಇಲ್ಲದೆ ಕೇಸು ತೀರ್ಮಾನ ಮಾಡಿದ್ದರ ಎದುರು ಸರಕಾರ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು. 

>’ ಸ್ಟೇಟ್ ಬ್ಯಾಂಕ್ ಆಫ್ ರಾಜಸ್ಥಾನ   ವಿ.  ಜೈಪುರ್ ಹೊಸೈರಿ ಮಿಲ್ಸ್’[iii] ಪ್ರಕರಣದಲ್ಲಿ ಕೇಸು ನಡೆಸಲು ನೀಡುವ ಪರವಾನಗಿಗೆ ಮುಂಚಿತವಾಗಿಯೇ ಸಹಿ ಹಾಕಿರಬೇಕು ಮತ್ತು ಹಾಗೆ ಸಹಿ ಹಾಕದಿದ್ದರೆ ನಂತರದಲ್ಲಿ ಅದನ್ನು ಸರಿಪಡಿಸಲು ಆಗುವುದಿಲ್ಲ ಎಂದು ಹೇಳಿದೆ.

ಆಳುವ ವರ್ಗವು ಸಾಮಾಜಿಕ ಶೈಕ್ಷಣಿಕ, ಆರ್ಥಿಕ, ರಾಜಕೀಯ, ಆಡಳಿತಾತ್ಮಕ ಸಮಾನತೆಯನ್ನು ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಅದರೊಂದಿಗೆ ಸರ್ಕಾರದ ವಿರುದ್ಧ ಸಲ್ಲಿಸುವ ದಾವೆಯು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಕಾರಣವನ್ನು ಒಳಗೊಂಡಿದ್ದೇ ಆದಲ್ಲಿ ಭಾರತದ ಸಂವಿಧಾನದಲ್ಲಿನ ಆಶಯಕ್ಕೆ ಮಹತ್ವ ಹೆಚ್ಚುವುದರಲ್ಲಿ ಯಾವುದೇ ಸಂದೇಹವಿಲ್ಲ. ನಮ್ಮನ್ನಾಳುವವರ ವಿರುದ್ಧ ದಾವೆಯನ್ನು ಸಲ್ಲಿಸುವುದಕ್ಕಿಂತ ಮೊದಲು ನೀಡುವ ನೋಟಿಸು, ಸಮಸ್ಯೆಗೆ ಸಂಬಂಧಿಸಿದಂತೆ ವಾಸ್ತವ ಸಂಗತಿಗೆ ಹಾಗೂ ಅದಕ್ಕೆ ಸಮರ್ಪಕವಾಗಿ ಪರಿಹಾರ ನೀಡುವ ಸಂಬಂಧ ಇರುವ ಸಾಧ್ಯತೆಯ ಬಗ್ಗೆ ಆಳುವ ವರ್ಗದ ಪರವಾಗಿ ಅಧಿಕಾರಿಗಳು ತಿಳಿಸಿ ಕೊಡುವ ಸಲುವಾಗಿ ಇರುವಂತದ್ದು. ಅಂತಹ ಸಂದರ್ಭದಲ್ಲಿಯೇ, ವಿಚಾರಣೆ ನಡೆಸುವ ಮೊದಲೇ ಆಳುವ ವರ್ಗದ ಅಧಿಕಾರಿಗಳು ದಾವೆಎಂಬ ದೃಷ್ಟಿಯಲ್ಲಿ ನೋಡದೆ, ಪರಿಹಾರ ಕೊಡುವ ನ್ಯಾಯಯುತ ಕೇಸಾಗಿದ್ದಲ್ಲಿ ಪರಿಹಾರವನ್ನು ದೊರಕಿಸಿಕೊಡುವ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡಿದರೆ ಈ ನಿಬಂಧನೆ ಇಟ್ಟಿದ್ದಕ್ಕೂ ಒಂದು ಅರ್ಥ ಬರುತ್ತದೆ.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)


[i] AIR 1950 Cal 207

[ii] AIR 1974  Ori 85

[iii] AIR 1997 Raj 10

ಉಲ್ಲೇಖ

* UNIVERSAL’S The Code of Civil Procedure, 1908 Bare Act with short notes, LexisNexis, 2021,page no. 38-39

* https://blog.ipleaders.in/suits-government-public-officers-official-capacity/

* https://youtu.be/i3nyGwc0v4s

Spread the love