ತೊಟ್ಟಿಲು ತೂಗುವ ಕೈಗಳು ಬಯಲಿಗಿಳಿದಾಗ ಭೇದ – ಭಾವವೇಕೆ: ಕ್ರೀಡಾ ವೇತನದಲ್ಲಿ ಭಾರತದ ಲಿಂಗ-ಭೇದದ ನೀತಿ
ಭಾರತವೂ ಸೇರಿ ಪ್ರಪಂಚದ ಎಲ್ಲಾ ಮುಂಚೂಣಿ ರಾಷ್ಟ್ರಗಳು ಕೂಡ ಸಾಂಪ್ರದಾಯಿಕವಾಗಿ ಪುರುಷ ಪ್ರಧಾನ ಸಮಾಜಗಳೇ ಆಗಿವೆ ಎಂಬುದು ಢಾಳಾಗಿ ಕಾಣುತ್ತದೆ. ಶತಮಾನಗಳ ಈ ತಾರತಮ್ಯದ ಕೆಡಕು ನೀತಿ ಕಾಲಕ್ರಮೇಣ ನಿಧಾನವಾಗಿ ತಕ್ಕ ಮಟ್ಟಿಗೆ ಸುಧಾರಣೆ ಕಂಡು ಈಗ ಹಲವು ರಂಗಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ದೊರಕುತ್ತಿರುವುದು ಒಂದು ಸಮಾಧಾನಕರ ವಿಷಯ. ಶಿಕ್ಷಣ ಪಡೆದ ಹೆಣ್ಣು ಮಕ್ಕಳು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಉದ್ಯೋಗಗಳಿಗಾಗಿ ಪುರುಷರಿಗೆ ಸರಿಯಾದ ಪೈಪೋಟಿ ನೀಡುವುದುರ ಜೊತೆಗೆ ಕಲೆ, ಸಾಹಿತ್ಯ, ಸಂಗೀತ ಹಾಗೂ ಕ್ರೀಡಾ ವಲಯದಲ್ಲೂ ಪುರುಷರಿಗಿಂತ ತಾವೇನು ಕಡಿಮೆಯಿಲ್ಲವೆಂಬಂತೆ ಬೆಳೆದು ತಮ್ಮದೇ ವಿಶಿಷ್ಟ ಬಗೆಯ ಛಾಪು ಮೂಡಿಸಿದ್ದಾರೆ. ಹೀಗಿದ್ದರೂ ಕೂಲಿ ಮಾಡುವ ಗಂಡಾಳಿಗೂ, ಹೆಣ್ಣಾಳಿಗೂ ಇರುವ ಕೂಲಿಯ ವ್ಯತ್ಯಾಸದಂತೆ ಕ್ರೀಡೆಯಲ್ಲೂ ಹೆಣ್ಣು ಕ್ರೀಡಾಪಟುಗಳಿಗೆ ಗಂಡಸರಿಗಿಂತ ಕಡಿಮೆ ಸಂಭಾವನೆ ನೀಡುವುದು ಇಪ್ಪತ್ತೊಂದನೆಯ ಶತಮಾನದಲ್ಲೂ ಬಹುತೇಕ ಕಡೆ ಜಾರಿಯಲ್ಲಿರುವುದು ಖೇದಕರ! ಈ ವಿಚಾರವಾಗಿ ಕೆಲವು ಕ್ರೀಡಾ ಪತ್ರಕರ್ತರು ಹಾಗೂ ಪ್ರತಿಷ್ಠಿತ ಆಟಗಾರರು ದನಿಯನ್ನೂ ಎತ್ತಿದ್ದಾರೆ. ಕೆಲವು ದೇಶಗಳಲ್ಲಿ ಆಗಲೇ ಈ ಭೇದಭಾವದ ಕುರಿತು ಸಂಭಂದಪಟ್ಟ ಕ್ರೀಡಾ ಆಡಳಿತಗಾರರಿಗೆ ಚುರುಕು ಮುಟ್ಟಿಸಿ ಸಂಭಾವನೆಯಲ್ಲಿ ಒಂದು ಹಂತಕ್ಕೆ ಸಮಾನತೆಯನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಇದು ಪರಿಪೂರ್ಣ ಸಮಾನತೆ ಸಾಧಿಸುವೆಡೆಗೆ ಸಾಗಬೇಕಾದ ನೂರಾರು ಮೈಲಿಗಳ ಹಾದಿಯಲ್ಲಿ ಮೊದಲ ಸರಿಯಾದ ಪುಟ್ಟ-ಹೆಜ್ಜೆ ಎಂಬುದನ್ನು ನಾವು ಮನಗಾಣಬೇಕಿದೆ.
ಕ್ರೀಡೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ:
‘ನಾಜೂಕು ನಾರಿ’ ಎಂಬ ಪರಿಕಲ್ಪನೆಯಿಂದಾಗಿ ಮೈ ಅಳವು ಪರೀಕ್ಷಿಸುವ ಆಟಗಳಲ್ಲಿ ಮಹಿಳೆಯರು ತೊಡಗಿಕೊಳ್ಳಲು ಸಾಧ್ಯವಿಲ್ಲ ಎಂಬ ನಂಬಿಕೆಯೇ ಜಗಜ್ಜಾಹೀರಾಗಿತ್ತು. ಆದರೆ ಕಾಲ ಕಳೆದಂತೆ ಹಂತಹಂತವಾಗಿ ಮಹಿಳೆಯರು ಎಲ್ಲಾ ತೊಡಕುಗಳನ್ನು ಹಿಮ್ಮೆಟ್ಟಿ ಒಂದೊಂದೇ ಆಟಗಳಲ್ಲಿ ಕಣಕ್ಕಿಳಿಯತೊಡಗಿದರು. ಇಂದು ಪುರುಷರು ಆಡುವ ಎಲ್ಲಾ ಕ್ರೀಡೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕೂಡ ವೃತ್ತಿಪರರಂತೆ ಇರುವುದು ಶತಮಾನಗಳ ಹೋರಾಟದ ಫಲ ಎಂಬುದು ಗಮನಿಸಬೇಕಾದ ಅಂಶ. ಒಲಂಪಿಕ್ಸ್ ಸೇರಿ ಹಲವಾರು ಅಂತಾರಾಷ್ಟ್ರೀಯ ಪೋಟಿಗಳಲ್ಲಿ ಹೆಣ್ಣು ಮಕ್ಕಳು ಪದಕಗಳನ್ನು ಗೆದ್ದು ತಮ್ಮತಮ್ಮ ದೇಶಗಳಿಗೆ ಗೌರವ, ಕೀರ್ತಿ ತರುತ್ತಿದ್ದರೂ ತಾರತಮ್ಯದ ನೀತಿ ಇನ್ನೂ ಜಾರಿಯಲ್ಲಿರುವುದು ದುರಂತವೇ ಸರಿ. ಓಟಗಾರ್ತಿ ಪಿ.ಟಿ ಉಷಾ, ಬಾಕ್ಸರ್ ಮೇರಿ ಕಾಮ್, ಬ್ಯಾಡ್ಮಿಂಟನ್ ತಾರೆಗಳಾದ ಪಿ.ವಿ ಸಿಂಧು ಮತ್ತು ಸೈನಾ ನೆಹ್ವಾಲ್, ಟೆನ್ನಿಸ್ ದಿಗ್ಗಜೆ ಸಾನಿಯಾ ಮಿರ್ಜಾ ಹಾಗೂ ಕ್ರಿಕೆಟರ್ ಮಿಥಾಲಿ ರಾಜ್ ರಂತಹ ಸಾಧಕರು ಇಂದು ಭಾರತದ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯ ಸೆಲೆಯಾಗಿ ಕ್ರೀಡೆಯತ್ತ ಹೆಚ್ಚೆಚ್ಚು ಎಳೆಯರನ್ನು ಸೆಳೆಯುತ್ತಿದ್ದಾರೆ. ದಶಕಗಳ ಹಿಂದೆ ಬೆಳವಣಿಗೆಗಳನ್ನು ಊಹಿಸಲು ಕೂಡ ಸಾಧ್ಯವಿರಲಿಲ್ಲ. ಹಾಗೂ ದೇಶದ ಮಹಿಳೆಯರ ಕ್ರೀಡಾ ಭವಿಷ್ಯಕ್ಕೆ ಇಂಬು ನೀಡುವಂತಹ ಅನೇಕ ಯೋಜನೆಗಳು ಕೂಡ ಈ ಮೇಲ್ಕಂಡ ದಿಗ್ಗಜರ ಮುಂದಾಳ್ತನದಲ್ಲಿ ಕಾರ್ಯರೂಪಕ್ಕೆ ಬಂದಿರುವುದು ನಮ್ಮ ಗಟ್ಟಿಮುಟ್ಟಾದ ಕ್ರೀಡಾ ಅಡಿಪಾಯಕ್ಕೆ ಸಾಕ್ಷಿ ಆಗಿದೆ.
ಸಮಸ್ಯೆಯ ವಿಶ್ಲೇಷಣೆ ಹಾಗೂ ಕಾನೂನು:
ಸಾಂವಿಧಾನಿಕವಾಗಿ ಭಾರತದಲ್ಲಿ ಲಿಂಗಾಧಾರಿತ ಸಮಾನ ಹಕ್ಕುಗಳು ಕೊಡಲಾಗಿದೆಯಾದರೂ ಲಿಂಗಾಧಾರಿತ ಶೋಷಣೆ ಹಾಗೂ ತಾರತಮ್ಯದಿಂದ ಇನ್ನೂ ನಮ್ಮ ಸಮಾಜಕ್ಕೆ ಪೂರ್ಣ ಮುಕ್ತಿ ಸಿಕ್ಕಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಟ್ಟಿಕೊಂಡಿರುವ ಭಾರತ, ತನ್ನ ಸಂವಿಧಾನದ ಮೂಲ ಆಶಯಗಳನ್ನು ಎಲ್ಲಾ ಮಟ್ಟದಲ್ಲೂ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಅದಕ್ಕೆ ಅತ್ಯತ್ತಮ ಉದಾಹರಣೆಯೆಂದರೆ ಕ್ರೀಡಾ ವಲಯದಲ್ಲಿ ಮಹಿಳೆಯರಿಗೆ ಪುರುಷರ ತುಲನೆಯಲ್ಲಿ ನೀಡಲಾಗುತ್ತಿರುವ ಕಡಿಮೆ ವೇತನ. ಈ ಹಣಕಾಸಿನ ತಾರತಮ್ಯ ಸಂವಿಧಾನದ ಅನುಚ್ಚೇದ 14, 15, 16 ಗಳ ನೇರ ಉಲ್ಲಂಘನೆ ಆಗಿದ್ದು, ಅನುಚ್ಛೇದ 39(A) ರ ಆಶಯಕ್ಕೂ ವಿರುದ್ಧವಾಗಿದೆ. ಸಮಾನ ವೇತನ ಕಾಯ್ದೆಯಂತಹ ಹಲವು ಕಾಯ್ದೆಗಳು ಜಾರಿಯಲ್ಲಿದ್ದರೂ, ಒಬ್ಬ ಕ್ರೀಡಾಪಟುವನ್ನು ‘ಉದ್ಯೋಗಿ’ ಎಂದು ಪರಿಗಣಿಸಿದರೆ ಮಾತ್ರ ಆ ಕಾನೂನುಗಳ ಅಡಿಯಲ್ಲಿ ಹಕ್ಕುಗಳನ್ನು ಪಡೆಯಲು ಸಾಧ್ಯ. ಏಕೆಂದರೆ ಈಗಾಗಲೇ ಬಂದಿರುವ ಸುಪ್ರೀಂ ಕೋರ್ಟ್ ತೀರ್ಪುಗಳಿಂದಾಗಿ ರಾಷ್ಟ್ರೀಯ ಮಟ್ಟದ, ರಾಜ್ಯ ಮಟ್ಟದ, ಸರಕಾರದಿಂದ ಅನುದಾನ ಪಡೆದುಕೊಂಡು ನಡೆಯುತ್ತಿರುವ ಕ್ರೀಡಾ ಸಂಸ್ಥೆಗಳನ್ನು ಅನುಚ್ಛೇದ 12 ರ ಅಡಿಯಲ್ಲಿ ಸರಕಾರ ಎಂದು ಪರಿಗಣಿಸಲು ಸಾಧ್ಯವಿದೆ. ಹಾಗಿದ್ದಾಗ, ಒಂದು ಸಾರಿ ಉದ್ಯೋಗಿ ಎಂದು ಕ್ರೀಡಾಪಟುಗಳನ್ನು ಲೆಕ್ಕಿಸಲು ಸಾಧ್ಯವಾದರೆ ಸಮಾನ ವೇತನ ಹಕ್ಕುಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಕೇಳುವುದು ಸುಲಭವಾಗುತ್ತದೆ. ಉದಾಹರಣೆಗೆ, ಅಮೆರಿಕಾದ ರಾಷ್ಟ್ರೀಯ ಮಹಿಳಾ ಸೊಕ್ಕೋರ್ ತಂಡ, ಜಿಲ್ಲಾ ಕೋರ್ಟ್ ಒಂದರಲ್ಲಿ ಪುರುಷ ಆಟಗಾರರಿಗೆ ನೀಡುವ ಸಮಾನ ವೇತನವನ್ನು ಆಗ್ರಹಿಸಿ ಕೇಸು ದಾಖಲಿಸಿತ್ತು, ವೇತನದ ತಾರತಮ್ಯ ಕಾರ್ಮಿಕ ಕಾನೂನುಗಳ ಉಲ್ಲಂಘನೆ ಎಂದು ವಾದಿಸಲಾಗಿತ್ತು, ಮೊದಲ ಹಂತದಲ್ಲಿ ಕೇಸು ಅಮಾನತಾಗಿದ್ದರೂ, ಮೇಲ್ಮನವಿ ಹಂತದಲ್ಲಿ 24 ಮಿಲಿಯನ್ ಡಾಲರ್ಸ್ ಮೊತ್ತಕ್ಕೆ ರಾಜಿಯಾಗಿದೆ. ನಮ್ಮಲ್ಲಿ ಈ ನಿಟ್ಟಿನಲ್ಲಿ ಕಾನೂನು ತಜ್ಞರು, ಆಟಗಾರರು ಆಲೋಚಿಸುವುದು ಇನ್ನೂ ಆಗಬೇಕಿದೆ.
ಸಮಾನತೆಯ ಅಡಿಪಾಯದ ಮೇಲೆ ಕಟ್ಟಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತದಲ್ಲಿ ‘ಸಮಾನ ಕೆಲಸ- ಸಮಾನ ಹಣ’ ಎನ್ನುವುದು ಸುಮ್ಮನೆ ಕಾಟಾಚಾರಕ್ಕೆ ಜನರ ದಾರಿತಪ್ಪಿಸಲು ಹುಟ್ಟುಹಾಕಿರುವ ಘೋಷಣೆಯಲ್ಲ, ಇದು ಆಚರಣೆಗೆ ಬರಬೇಕು ಎಂಬುದು ರಣಧೀರ್ ಸಿಂಗ್ vs ಯೂನಿಯನ್ ಆಫ್ ಇಂಡಿಯಾ ಮತ್ತು ಓ.ಆರ್.ಎಸ್ (1982 ) ನ ತೀರ್ಪಿನಲ್ಲಿ ನ್ಯಾ. ಚಿನ್ನಪ್ಪ ರೆಡ್ಡಿಯವರ ಅಂಬೋಣ. ಸಂವಿಧಾನದ ಅನುಚ್ಚೇದ 39(D) ಸರಕಾರದ ಮೇಲೆ ಆ ಹೊಣೆಯನ್ನು ಹೊರಿಸಿದೆ ಎಂದು ಆ ತೀರ್ಪಿನಲ್ಲಿ ಹೇಳಲಾಗಿತ್ತು. ಅಲ್ಲದೆ, 2016 ರಲ್ಲಿ ಬಂದ ಪಂಜಾಬ್ ರಾಜ್ಯ ವಿ. ಜಗಜೀತ್ ಸಿಂಗ್ ತೀರ್ಪಿನಲ್ಲೂ ಸುಪ್ರೀಂ ಕೋರ್ಟ್ ಉದ್ಯೋಗಿಯು ಹಂಗಾಮಿಯಾಗಿದ್ದರೂ ಸಹ ಒಂದೇ ರೀತಿಯ ಕೆಲಸ ಮಾಡುವವರಿಗೆ ಒಂದೇ ರೀತಿಯ ವೇತನ ಸಿಗಲೇಬೇಕು ಎಂದು ಹೇಳಿದೆ.
ಜಗತ್ತಿನ ಹಲವು ದೇಶಗಳು ಈ ದಿಶೆಯಲ್ಲಿ ಹೆಜ್ಜೆ ಹಾಕುತ್ತಿವೆ ಎನ್ನುವುದನ್ನೂ ನಾವು ಪರಿಗಣಿಸಬೇಕು. ಅಷ್ಟೇ ಅಲ್ಲದೆ, ಭಾರತ CEDAW Convention on the Elimination Of All Forms Of Discrimination Against Women ಅಂದರೆ ಮಹಿಳೆಯರ ವಿರುದ್ಧ ಎಲ್ಲಾ ರೀತಿಯ ಶೋಷಣೆಗಳನ್ನು ತಡೆಗಟ್ಟಲು ಹಲವು ದೇಶಗಳು ಮಾಡಿಕೊಂಡ ಅಂತಾರಾಷ್ಟ್ರೀಯ ಸಮಾವೇಶದ ತೀರ್ಮಾನಕ್ಕೆ ಸಹಿ ಹಾಕಿದ್ದರಿಂದಲೂ ಸಹ, ತನ್ನ ಪ್ರಾದೇಶಿಕ ಕಾನೂನುಗಳಲ್ಲಿ ‘ಸಮಾನ ಕೆಲಸ- ಸಮಾನ ಹಣ’ ನೀತಿಯನ್ನು ಕಾಪಾಡಿಕೊಳ್ಳುವ ಹೊಣೆ ಹೊಂದಿದೆ.
2018 ರಲ್ಲಿ ಐಸ್ಲ್ಯಾಂಡ್ ‘ಸಮಾನ ಕೆಲಸ- ಸಮಾನ ಹಣ’ ಕಟ್ಟಳೆಯನ್ನು ಜಾರಿಗೆ ತಂದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆದರೆ, ಇದರ ಬೆನ್ನಲ್ಲೇ ನ್ಯೂಜಿಲ್ಯಾಂಡ್ ಕೂಡ ತನ್ನ ಮಹಿಳಾ ಫುಟ್ಬಾಲ್ ತಂಡಕ್ಕೆ ಸಮಾನ ವೇತನ ಘೋಷಿಸಿತು. ತದನಂತರ ಬ್ರೆಜಿಲ್, ನಾರ್ವೆ ಮತ್ತು ಆಸ್ಟ್ರೇಲಿಯಾ ಫುಟ್ಬಾಲ್ ಸಂಸ್ಥೆಗಳೂ ಸಹ ಇದೇ ಮಾರ್ಗದಲ್ಲಿ ದಾಪುಗಾಲಿಟ್ಟವು. ಈ ಸಕಾರಾತ್ಮಕ ಬೆಳವಣಿಗೆಯಿಂದ ಇಂದು ಪ್ರಪಂಚದ ಹಲವಾರು ದೇಶಗಳು ಕೂಡ ಇದೇ ಹಾದಿಯಲ್ಲಿ ಸಾಗಲು ಹೊಸ್ತಿಲ ಬಳಿ ಬಂದು ನಿಂತಿರುವುದು ಮುಂದೆ ಆಗಬಹುದಾದ ಮಾರ್ಪಾಡುಗಳ ಸಕಾರಾತ್ಮಕ ಮುನ್ಸೂಚನೆ ಎಂದೇ ಹೇಳಬಹುದು.
ಭಾರತದಲ್ಲೂ ಬದಲಾವಣೆಯ ಗಾಳಿ:
ತಡವಾದರೂ ಬದಲಾವಣೆ ಜಗದ ನಿಯಮ ಎಂಬಂತೆ ದೊಡ್ಡ ಪ್ರಜಾಪ್ರಭುತ್ವವಾದ ಭಾರತ ಕೂಡ ‘ಸಮಾನ ಕೆಲಸ- ಸಮಾನ ಹಣ’ ನಿಯಮವನ್ನು ಕಾರ್ಯರೂಪಕ್ಕೆ ತರಲು ಅಣಿಯಾಗಿದೆ. ಭಾರತದ ಕ್ರಿಕೆಟ್ ಮಂಡಳಿ ಬಿ.ಸಿ.ಸಿ.ಐ ತನ್ನ ಎರಡು ಪ್ರಮುಖ ಆದೇಶಗಳಿಂದ ಸಮಾನತೆಯ ಕಿಡಿ ಹಚ್ಚಿದೆ. ಮೊದಲಿಗೆ, ತನ್ನ ಸುಪರ್ದಿನಲ್ಲಿರುವ ಪುರುಷರ ಐಪಿಎಲ್ ಮಾದರಿಯಲ್ಲಿ ಮಹಿಳೆಯರಿಗೂ ಮುಂದಿನ ವರ್ಷದಿಂದ ಪ್ರತ್ಯೇಕ ಐಪಿಎಲ್ ಪಂದ್ಯಾವಳಿ ನಡೆಸುವುದಾಗಿ ಘೋಷಿಸಿದೆ. ಈ ನಿಟ್ಟಿನಲ್ಲಿ ಆಗಲೇ ತಂಡಗಳ ಹರಾಜು ಪ್ರಕ್ರಿಯೆ ಕಾರ್ಯಗಳು ಭರದಿಂದ ಸಾಗಿದ್ದು ತಂಡಗಳನ್ನು ಕೊಂಡುಕೊಳ್ಳುವ ಫ್ರ್ಯಾಂಚೈಸ್ ಗಳಿಗೆ ಕನಿಷ್ಠ 400 ಕೋಟಿಯ ಮೂಲಬೆಲೆಯನ್ನು ನಿಗದಿ ಮಾಡಿದೆ. ಎರಡನೆಯದಾಗಿ, ಬಿಸಿಸಿಐ ತನ್ನ ಒಪ್ಪಂದದಲ್ಲೇ ಇರುವ ಮಹಿಳಾ ಹಾಗೂ ಪುರುಷ ಕ್ರಿಕೆಟ್ ಆಟಗಾರರಿಗೆ ನೀಡುತ್ತಿದ್ದ ಪಂದ್ಯದ ಶುಲ್ಕದಲ್ಲಿದ್ದ ಆಕಾಶ-ಭೂಮಿಯ ಅಂತರವನ್ನು ಮನಗಂಡು ಇಬ್ಬರಿಗೂ ಸಮಾನ ಶುಲ್ಕವನ್ನು ತುರ್ತಾಗಿ ಜಾರಿಗೆ ತಂದಿದೆ. ಇದರ ಪರಿಣಾಮವಾಗಿ ಇನ್ನು ಮುಂದೆ ಮಹಿಳಾ ಕ್ರಿಕೆಟರ್ ಗಳೂ ಸಹ ಪುರುಷರಂತೆ ಟೆಸ್ಟ್ ಪಂದ್ಯವೊಂದಕ್ಕೆ 15 ಲಕ್ಷ, ಒಂದು-ದಿನದ ಪಂದ್ಯಗಳಿಗೆ 6 ಲಕ್ಷ ಹಾಗೂ ಟಿ-20 ಮಾದರಿಯ ಪಂದ್ಯಗಳಿಗೆ ತಲಾ 3 ಲಕ್ಷ ರೂಪಾಯಿಗಳನ್ನು ವೇತನವಾಗಿ ಪಡೆಯಲಿದ್ದಾರೆ. ಆದರೆ ಈಗಲೂ ಆಟಗಾರರಿಗೆ ಕೊಡುವ ರಿಟೇನರ್ ಶುಲ್ಕದಲ್ಲಿ ಕಂದರದಂತಹ ಅಂತರ ಬಾಕಿ ಇದೆ. ಪುರುಷ ಕ್ರಿಕೆಟ್ ಆಟಗಾರರಿಗೆ ಈ ಮೊತ್ತ ಒಂದರಿಂದ ಏಳು ಕೋಟಿಯವರೆಗೂ ಇದ್ದರೆ, ಮಹಿಳಾ ಆಟಗಾರರಿಗೆ ಈ ಮೊತ್ತ ಹತ್ತರಿಂದ ಐವತ್ತು ಲಕ್ಷವಿದೆ. ಆದರೂ ಪಂದ್ಯಗಳಲ್ಲಿ ಸಮಾನ ವೇತನ ನೀಡುವ ನಡೆಯನ್ನು ಪ್ರಶಂಸಿಲೇಬೇಕು. ಸದಾ ಭ್ರಷ್ಟಾಚಾರ ಹಾಗೂ ಇನ್ನಿತಿರ ಆಡಳಿತ ಸಂಬಂಧಿತ ದೋಷಾರೋಪಗಳಿಂದ ಕಾನೂನಿನ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ಬಿಸಿಸಿಐ ತನ್ನ ಈ ಸಮಾನತೆಯ ನಡೆಯಿಂದ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಕ್ರಿಕೆಟ್ ಆಡುವ ದೇಶಗಳಿಂದಲೂ ಮೆಚ್ಚುಗೆ ಗಳಿಸಿದೆ. ಈ ಸಮಾನತೆಯ ಗಾಳಿ ಎಲ್ಲೆಡೆ ಬೀಸಿ ಭಾರತದ ಎಲ್ಲಾ ಕ್ರೀಡಾ ಸಂಸ್ಥೆಗಳೂ ಆದಷ್ಟು ಬೇಗ ವೇತನದ ತಾರತಮ್ಯಕ್ಕೆ ಕೊನೆ ಹಾಡಿ ತಮ್ಮ ಕ್ರೀಡಾಪಟುಗಳಿಗೆ ನ್ಯಾಯ ಒದಗಿಸಲಿ ಎಂಬುದೇ ಕ್ರೀಡಾಭಿಮಾನಿಗಳ ಹೆಬ್ಬಯಕೆ!
ಈ ಗಮನಾರ್ಹ ಹಾಗೂ ಭರವಸೆಯ ಬೆಳವಣಿಗೆಗಳ ಹೊರತಾಗಿ ಪೂರ್ಣಪ್ರಮಾಣದಲ್ಲಿ ಕ್ರೀಡಾ ವೇತನದ ಭೇದಭಾವವನ್ನು ಹತ್ತಿಕ್ಕಿ ಸಮಾನತೆಯನ್ನು ಸಾಧಿಸಲು ಕಟ್ಟುನಿಟ್ಟನ ಕಾನೂನು-ಕಟ್ಟಳೆಗಳ ಅವಶ್ಯಕತೆ ಖಂಡಿತ ಭಾರತಕ್ಕಿದೆ. ಇಂದು ಕ್ರೀಡಾ ಆಡಳಿತ ಹಾಗೂ ಕಾನೂನು ವಲಯದಲ್ಲಿ ಮಹಿಳೆಯರು ಕೂಡ ಮುಂಚೂಣಿಯಲ್ಲಿರುವುದು ಈ ನಿಟ್ಟಿನಲ್ಲಿ ವರವೇ ಆಗಿದೆ. ಮಹಿಳೆಯಾಗಲಿ, ಪುರುಷನಾಗಲಿ ಕ್ರೀಡಾಪುಟವಾಗಿ ಅಂತರಾಷ್ಟ್ರೀಯ ಮಟ್ಟ ತಲುಪಿ ಯಶಸ್ಸು ಕಾಣಲು ಇಬ್ಬರೂ ಸಮಯ ಮೀಸಲಿಟ್ಟು ಪಡುವ ಶ್ರಮ ಸಮನಾದುದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕ್ರಿಕೆಟ್ ದಿಗ್ಗಜೆ ಮಿಥಾಲಿ ರಾಜ್ ತಮ್ಮ ವೃತ್ತಿಬದುಕಿನಾದ್ಯಂತ ಪುರುಷರ ತಂಡದ ಹೊಸ ಆಟಗಾರನಿಗಿಂತ ಅರ್ಧಕ್ಕಿಂತಲೂ ಕಡಿಮೆ ವೇತನವನ್ನು ಪಡೆದರು ಎಂದು ನೆನೆದರೆ ಇಂದಿಗೂ ಹತಾಶೆ, ಬೇಸರ ಹಾಗೂ ನೋವು ಉಂಟಾಗುತ್ತದೆ. ಇಂತಹ ಅನ್ಯಾಯವನ್ನು ದಶಕಗಟ್ಟಲೆ ನಾವು ಅರಿವಿಲ್ಲದವರಂತೆ ಸಹಿಸಿಕೊಂಡೆವೇ? ಎಂದು ನಮ್ಮ ಮೇಲೆ ನಮಗೆ ರೇಜಿಗೆ ಕೂಡ ಹುಟ್ಟುತ್ತದೆ. 2000 ದ ಸಿಡ್ನಿ ಒಲಂಪಿಕ್ಸ್ ಮತ್ತು 2016 ರ ರಿಯೋ ಒಲಂಪಿಕ್ಸ್ ನಲ್ಲಿ ಭಾರತದ ಪರ ಪದಕಗಳನ್ನು ಗೆದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಉಳಿಸಿದವರು ಮಹಿಳೆಯರಾದ ಕರ್ಣಮ್ ಮಲ್ಲೇಶ್ವರಿ, ಪಿ.ವಿ ಸಿಂಧು ಹಾಗೂ ಸಾಕ್ಷಿ ಮಲ್ಲಿಕ್ ಎಂಬುದನ್ನು ನಾವೆಲ್ಲರೂ ನೆನಪಲ್ಲಿಟ್ಟುಕೊಳ್ಳಬೇಕು. ಭಾರತಕ್ಕೆ ಹೆಮ್ಮೆ ತಂದ, ಗೆದ್ದ ಪದಕಗಳಿಗಿಲ್ಲದ ತಾರತಮ್ಯ ಆ ಕ್ರೀಡಾಪಟುಗಳ ವೇತನದ ವಿಷಯದಲ್ಲಿ ಇರುವುದು ತರವೇ? ಎಂಬುದನ್ನು ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯ ಪ್ರಶ್ನಿಸಬೇಕಿದೆ. ಆಗಲೇ ಈ ತಾರತಮ್ಯದ ನೀತಿಯನ್ನು ಕಾನೂನಿನ ಸಹಾಯದಿಂದ ಸಂಪೂರ್ಣವಾಗಿ ಬುಡಸಮೇತ ಅಳಸಿಹಾಕಬಹುದು. ಈ ದಿಸೆಯಲ್ಲಿ ‘ಸಮಾನ ಕೆಲಸ- ಸಮಾನ ಹಣ’ ನುಡಿ ಎಲ್ಲೆಡೆ ಪ್ರತಿಧ್ವನಿಸಿ ಬದಲಾವಣೆಗೆ ನಾಂದಿ ಹಾಡಲಿ.