ಲೇಖನಗಳು

ಪರರ ವಸ್ತು ಪಾಷಾಣವಾದರೆ ಪರರ ಹಾಡು ನಮ್ಮದಾಗಲು ಸಾಧ್ಯವೇ?!

ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್, ಡ್ಯಾನಿಶ್ ಲೇಖಕ ಒಮ್ಮೆ ಹೇಳಿದ್ದ “ಎಲ್ಲಿ ಪದಗಳು ವಿಫಲವಾಗುತ್ತವೆಯೋ, ಅಲ್ಲಿ ಸಂಗೀತವು ಮಾತನಾಡುತ್ತದೆ” ಎಂದು. ಅನಾದಿಕಾಲದಿಂದಲೂ ಸಂಗೀತವು ಮನುಷ್ಯನ ನೆಚ್ಚಿನ ಒಡನಾಡಿಯಾಗಿದೆ. ಸಂಗೀತವೇ ಹಾಗೆ, ಎಂಥವರನ್ನೂ ಆಕರ್ಷಿಸಬಲ್ಲ ಅದಮ್ಯ ಚೇತನವದು. ಇಂತಹ ಸಂಗೀತದ ರಚನೆ, ಸುಮ್ಮನೆ ಅದನ್ನು ಕುಳಿತು ಕೇಳಿ ಆನಂದಿಸುವಷ್ಟು ಸುಲಭದ ಕೆಲಸವಲ್ಲವಲ್ಲ? ಸ್ವರಗಳೊಟ್ಟಿಗೆ ಸ್ವರ ಜೋಡಿಸಿ ರಾಗ ಹೊಮ್ಮಿಸುವ ಕಷ್ಟ ಅದರ ನಿರ್ಮಾತ್ರನಿಗೆ ಮಾತ್ರ ಗೊತ್ತು. ಹೀಗಿರುವಾಗ ಒಬ್ಬ ಸಂಗೀತಗಾರನ ಶ್ರಮ, ಕಲೆ, ಪರಿಶ್ರಮದಿಂದ ರಚನೆಯಾದ ಸಂಗೀತ ಇನ್ನಾರದೋ ಹೆಸರಿನಲ್ಲಿ ಜನರನ್ನು ತಲುಪಿದರೆ ನೈಜ ಸಂಗೀತಗಾರನ ಕಲೆಗೆ ಬೆಲೆ ಎಲ್ಲಿದೆ? ಇದಕ್ಕಾಗಿಯೇ ಇಂದು ಹಕ್ಕುಸ್ವಾಮ್ಯ ಕಾನೂನುಗಳು ಇತರ ವ್ಯಕ್ತಿಗಳ ಹಕ್ಕುಗಳ ರಕ್ಷಣೆಯ ಜೊತೆಗೆ ಸಂಗೀತಗಾರನ ಹಕ್ಕುಗಳನ್ನೂ ಬೌದ್ಧಿಕ ಆಸ್ತಿಯ ರಕ್ಷಣೆಯ ಅಡಿಯಲ್ಲಿ ಮಾಡುತ್ತಿವೆ. ಭಾರತೀಯ ಸಂಗೀತ ಉದ್ಯಮದಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆ ಮತ್ತು ಅದಕ್ಕೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಹಕ್ಕುಸ್ವಾಮ್ಯ

ಬೌದ್ಧಿಕ ಆಸ್ತಿಯ ಹಕ್ಕುಗಳು ಒಬ್ಬ ವ್ಯಕ್ತಿಯ ಬೌದ್ಧಿಕ ಸೃಷ್ಟಿಗಳ ಮೇಲೆ ನೀಡಲಾದ ಹಕ್ಕುಗಳಾಗಿವೆ. ಅಂದರೆ ಒಬ್ಬ ವ್ಯಕ್ತಿ ತನ್ನ ಬುದ್ಧಿಶಕ್ತಿಯ ಸಹಾಯದಿಂದ ಸೃಷ್ಟಿ ಮಾಡಿದ ಬೆಲೆಬಾಳುವ ರಚನೆಗಳಿಗೆ ಬೌದ್ಧಿಕ ಆಸ್ತಿ ಎನ್ನುತ್ತೇವೆ. ಕವಿತೆ, ಕಥೆ, ಕಾದಂಬರಿ, ಸಂಗೀತದ ನಾದಗಳು, ನಾಟಕಗಳು ಹೀಗೆ ಹತ್ತು – ಹಲವು ಉದಾಹರಣೆಗಳಿವೆ ಬೌದ್ಧಿಕ ಆಸ್ತಿಗೆ. ಈ ಹಕ್ಕುಗಳು ಸಾಮಾನ್ಯವಾಗಿ ಸೃಷ್ಟಿಕರ್ತನಿಗೆ ಒಂದು ನಿರ್ದಿಷ್ಟ ಅವಧಿಗೆ ಅವನ/ಅವಳ ಸೃಷ್ಟಿಯ ಬಳಕೆಯ ಮೇಲೆ ವಿಶೇಷ ಹಕ್ಕನ್ನು ನೀಡುತ್ತದೆ. ಬೌದ್ಧಿಕ ಆಸ್ತಿ ಎನ್ನುವುದು ಮಾನವನ ಬುದ್ಧಿಶಕ್ತಿಯ ಅದ್ಭುತ ಸೃಷ್ಟಿಗಳನ್ನು ಒಳಗೊಂಡಿರುವ ಆಸ್ತಿಯ ವರ್ಗವಾಗಿದೆ. ಪೇಟೆಂಟ್‌ಗಳು, ಹಕ್ಕುಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು ಮತ್ತು ವ್ಯಾಪಾರ ರಹಸ್ಯಗಳು ಬೌದ್ಧಿಕ ಆಸ್ತಿಯ ಹೆಸರುವಾಸಿಯಾದ ವಿಧಗಳಾಗಿವೆ. ಭಾರತದಲ್ಲಿ ಹಕ್ಕುಸ್ವಾಮ್ಯ ಕಾನೂನು ಸಾಹಿತ್ಯ, ನಾಟಕೀಯ, ಸಂಗೀತ ಮತ್ತು ಕಲಾತ್ಮಕ ಕೃತಿಗಳ ರಚನೆಕಾರರಿಗೆ ಮತ್ತು ಸಿನಿಮಾಟೋಗ್ರಾಫ್ ಚಲನಚಿತ್ರಗಳು ಮತ್ತು ಧ್ವನಿ ರೆಕಾರ್ಡಿಂಗ್‌ಗಳ ನಿರ್ಮಾಪಕರಿಗೆ ನೀಡಲಾದ ಹಕ್ಕುಗಳನ್ನು ಒಳಗೊಂಡಿದೆ. ಅಲ್ಲದೆ, ಕೃತಿಯ ಪುನರ್ ಉಲ್ಲೇಖ, ಸಾರ್ವಜನಿಕರಿಗೆ ಕೃತಿಯ ಸಂವಹನ, ಕೃತಿಯನ್ನು ಅಳವಡಿಸಿಕೊಳ್ಳುವ ಅಥವಾ ಅನುವಾದಿಸುವ ಹಕ್ಕುಗಳ ಬಗ್ಗೆಯೂ ಹೇಳಲಾಗಿದೆ.

ಸಂಗೀತದ ಉದ್ಯಮದಲ್ಲಿ ಹಕ್ಕುಸ್ವಾಮ್ಯ

ಹಕ್ಕುಸ್ವಾಮ್ಯ ಕಾಯಿದೆ 1957, ಕಲಂ 2(p) ಪ್ರಕಾರ ಸಂಗೀತದ ಕೃತಿ ಎಂದರೆ ಸಂಗೀತವನ್ನು, ಸ್ವರ ಸಂಕೇತಗಳನ್ನೂ ಒಳಗೊಂಡ ಕೃತಿ. ಆದರೆ ಹಾಡುವ, ಮಾತಾಡುವ ಅಥವಾ ಪ್ರದರ್ಶನ ಮಾಡುವ ಕ್ರಿಯೆ ಇದರಲ್ಲಿ ಬರುವುದಿಲ್ಲ. ಯಾವುದೇ ಸಂಗೀತ ಕೃತಿಯನ್ನು ಹುಟ್ಟು ಹಾಕುವವನೇ ಸಂಯೋಜಕ. ಭಾಷಣ ಮತ್ತು ಯಾವುದೇ ಆಡಿಯೊ ಅಥವಾ ಯಾವುದೇ ಪಾಡ್‌ಕ್ಯಾಸ್ಟ್‌ನಂತಹ, ಸಂಗೀತದೊಂದಿಗೆ ಅಥವಾ ಸಂಗೀತವಿಲ್ಲದೆ ಹಾಡಿದ ಹಾಡುಗಳನ್ನು ಒಳಗೊಂಡಿರುವ ಧ್ವನಿ ರೆಕಾರ್ಡಿಂಗ್‌ಗಳು ಸಹ ಸಂಗೀತ ಕೃತಿಗಳಂತೆಯೇ ಹಕ್ಕುಸ್ವಾಮ್ಯಕ್ಕೆ ಅರ್ಹವಾಗಿರುತ್ತವೆ.

ಮೇಲ್ನೋಟಕ್ಕೆ, ಸಂಗೀತದ ಕೃತಿ ಕೇವಲ ಒಂದು ಹಕ್ಕುಸ್ವಾಮ್ಯವನ್ನು ಹೊಂದಿರುವಂತೆ ಅನಿಸಿದರೂ, ಒಂದು ಹಾಡಿನಲ್ಲಿ ಹಲವು ರೀತಿಯ ಹಕ್ಕುಗಳು ಮಿಳಿತವಾಗಿರತ್ತವೆ. ಅವುಗಳೆಂದರೆ:

 • ಸಂಯೋಜಿತ ಹಕ್ಕುಸ್ವಾಮ್ಯ – ಹಾಡು ಬರೆದವರು, ಸಂಯೋಜಕರು ಮತ್ತು ನಿರ್ಮಾಪಕರು ಇವರುಗಳಿಗಿರುವ ಹಕ್ಕುಗಳು. ಇದು ಯಾವುದೇ ಹಾಡಿನ ಮಧುರ ಅಥವಾ ಸ್ವರಮೇಳಗಳ ನಿರ್ದಿಷ್ಟ ವ್ಯವಸ್ಥೆಯನ್ನು ಕಾಪಾಡುವ ಹಕ್ಕುಗಳು.
 • ಮಾಸ್ಟರ್ ಹಕ್ಕುಸ್ವಾಮ್ಯ – ಈ ಹಕ್ಕುಗಳು ಕಲಾವಿದರು ತಮ್ಮ ಧ್ವನಿಯಲ್ಲಿ ಸಂಯೋಜಿಸಿ ಹಾಡಿದ ರೆಕಾರ್ಡಿಂಗಿಗೆ ಸಿಗುವ ಹಕ್ಕುಗಳು. ಒಬ್ಬನೇ ವ್ಯಕ್ತಿ ಹಾಡು ಬರೆದು ಹಾಡಿದರೂ, ಕಾನೂನಿನಲ್ಲಿ ಹಾಡು ಬರೆದವರ ಹಕ್ಕುಗಳು ಮತ್ತು ಹಾಡಿದವರ ಹಕ್ಕುಗಳನ್ನು ಬೇರೆ ಬೇರೆಯಾಗಿ ಗುರುತಿಸಲಾಗುತ್ತದೆ. ಸಾಮಾನ್ಯವಾಗಿ ಈ ಹಕ್ಕುಗಳನ್ನು ಕಲಾವಿದರ ಲೇಬಲ್ಲಿಗೆ ಕೊಡಲಾಗುತ್ತದೆ.

ಒಂದು ಹಾಡಿನ ರಚನೆಯಲ್ಲಿ ಒಳಗೊಂಡಿರುವ ವಿವಿಧ ಹಕ್ಕುಗಳನ್ನು ಉದಾಹರಣೆಯ ಮೂಲಕ ವಿವರಿಸಬಹುದು.
ಉದಾ: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಚಿತ್ರದ, ಪ್ರಮೋದ್ ಮರವಂತೆ ಬರೆದಿರುವ ಸಿಂಗಾರ ಸಿರಿಯೇ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದು, ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.
– ಹಾಡನ್ನು ಹಾಡಿದ ವಿಜಯ್ ಪ್ರಕಾಶ್ ರವರು ಭಾರತೀಯ ಹಕ್ಕುಸ್ವಾಮ್ಯ ಕಾಯಿದೆಯ ಕಲಂ 38 ರ ಅಡಿಯಲ್ಲಿ ಪ್ರದರ್ಶಕನಾಗಿ ರಕ್ಷಣೆ ಪಡೆಯುತ್ತಾರೆ.
– ಗೀತರಚನೆಕಾರರಾಗಿ ಪ್ರಮೋದ್ ಮರವಂತೆ ಅವರ ಕೆಲಸವು ಕಾಯಿದೆಯ ಕಲಂ 13 (1) (ಎ) ನಿಂದ ಕಾಪಾಡಲ್ಪಟ್ಟ ಮೂಲ ಸಾಹಿತ್ಯ ಕೃತಿಗಳ ಅಡಿಯಲ್ಲಿ ಬರುತ್ತದೆ.
– ಬಿ.ಅಜನೀಶ್ ಲೋಕನಾಥ್ ಸಂಗೀತ ಸಂಯೋಜಕರಾಗಿ ಕಲಂ 13 (1)(ಎ)ಯು ಅಡಿಯಲ್ಲಿ ಸಂಗೀತ ಕೃತಿಯ ಲೇಖಕರಾಗಿ ರಕ್ಷಣೆ ಪಡೆಯುತ್ತಾರೆ.
– ಒಂದು ವೇಳೆ ಸಂಪೂರ್ಣ ಹಾಡನ್ನು ಚಲನಚಿತ್ರಕ್ಕಾಗಿ ಸಂಯೋಜಿಸಿದ್ದರೆ ಮತ್ತು ಸಂಯೋಜಕರ ಸೇವೆಗಳನ್ನು ನಿರ್ಮಾಪಕರು ನಿಯೋಜಿಸಿದ್ದರೆ, ನಿರ್ಮಾಪಕರು ಭಾರತೀಯ ಹಕ್ಕುಸ್ವಾಮ್ಯ ಕಾಯಿದೆಯ ಕಲಂ 17 ರ ನಿಬಂಧನೆಗಳ ಪ್ರಕಾರ ಹಾಡಿನ ಮಾಲೀಕರಾಗುತ್ತಾರೆ. ಈ ಉದಾಹರಣೆಯಲ್ಲಿ ಹೊಂಬಾಳೆ ಫಿಲಂಸ್ ಈ ಹಾಡಿನ ನಿರ್ಮಾಪಕರಾಗಿದ್ದು ಹಾಗೂ ಈ ಹಾಡಿನ ಸಂಯೋಜಕರ ಸೇವೆಗಳನ್ನು ನಿಯೋಜಿದ್ದಾರೆ ಹಾಗಾಗಿ ಭಾರತೀಯ ಹಕ್ಕುಸ್ವಾಮ್ಯ ಕಾಯ್ದೆಯ ಕಲಂ 17ರ ನಿಬಂಧನೆಗಳ ಪ್ರಕಾರ ಈ ಹಾಡಿನ ಮಾಲೀಕರಾಗುತ್ತಾರೆ.

ಸಾಹಿತ್ಯಿಕ ಮತ್ತು ಸಂಗೀತ ಕೃತಿಗಳಲ್ಲಿ ಹಕ್ಕುಸ್ವಾಮ್ಯದ ಅವಧಿ ಮತ್ತು ನೋಂದಣಿ

ಪ್ರದರ್ಶಕರ ಅಥವಾ ಗಾಯಕನ ಹಕ್ಕುಗಳು ಪ್ರದರ್ಶನವನ್ನು ನೀಡಿದ ಮುಂದಿನ ವರ್ಷದಿಂದ ಐವತ್ತು ವರ್ಷಗಳವರೆಗೆ ಇರುತ್ತದೆ. ಹಕ್ಕುಸ್ವಾಮ್ಯದ ನೋಂದಣಿಗಾಗಿ, ಫಾರ್ಮ್ XIV ಎಂಬ ಅರ್ಜಿಯನ್ನು ತುಂಬಿ, ಅದರ ನಿಗದಿತ ಶುಲ್ಕದೊಂದಿಗೆ ಹಕ್ಕುಸ್ವಾಮ್ಯಗಳ ರಿಜಿಸ್ಟ್ರಾರ್‌ಗೆ (“ರಿಜಿಸ್ಟ್ರಾರ್”) ಸಲ್ಲಿಸಬೇಕು. ಮಾಲೀಕರು ಹಕ್ಕುಸ್ವಾಮ್ಯಕ್ಕಾಗಿ ಅರ್ಜಿ ಸಲ್ಲಿಸಿದರೆ, ಅವರು ಹಕ್ಕು ಹೊಂದಿರುವ ಇತರರಿಂದ (ಹಾಡಿನ ರಚನೆಯಲ್ಲಿ ತೊಡಗಿಸಿಕೊಂಡ ಗೀತರಚನೆಕಾರ/ ನಿರ್ಮಾಪಕರು/ ಸಂಯೋಜಕರು) ಆಕ್ಷೇಪವಿಲ್ಲ ಎಂಬ ಪ್ರಮಾಣಪತ್ರವನ್ನು (No objection certificate) ಸಲ್ಲಿಸಬೇಕು. ಅರ್ಜಿಯನ್ನು ರಿಜಿಸ್ಟ್ರಾರ್‌ಗೆ ಪೋಸ್ಟ್ ಮಾಡಬಹುದು ಅಥವಾ ಭಾರತ ಸರ್ಕಾರದ ಹಕ್ಕುಸ್ವಾಮ್ಯ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.

ಸಂಗೀತ ಉದ್ಯಮದಲ್ಲಿ ಹಕ್ಕುಸ್ವಾಮ್ಯದ ಉಲ್ಲಂಘನೆ

ಹಕ್ಕುಸ್ವಾಮ್ಯ ಕಾಯಿದೆ,1957ರ ಅಧ್ಯಾಯ XI, ಕಲಂ 51 ರಿಂದ 53Aವು ಹಕ್ಕುಸ್ವಾಮ್ಯದ ಉಲ್ಲಂಘನೆಯ ಬಗ್ಗೆ ಹೇಳುತ್ತದೆ. 1957 ರ ಹಕ್ಕುಸ್ವಾಮ್ಯ ಕಾಯಿದೆಯ ಕಲಂ 51 ರ ಪ್ರಕಾರ, ಯಾರಾದರೂ ಹಕ್ಕುಸ್ವಾಮ್ಯದ ಮಾಲೀಕರಿಂದ ಅಥವಾ ಹಕ್ಕುಸ್ವಾಮ್ಯಗಳ ರಿಜಿಸ್ಟ್ರಾರ್ ಅಡಿಯಲ್ಲಿ ಅನುಮತಿ ಪಡೆಯದೆ ಕೃತಿಯನ್ನು ಮಾರಾಟ ಅಥವಾ ಬಾಡಿಗೆಗೆ ಲಭ್ಯವಾಗುವಂತೆ ಮಾಡುವುದು ಹಕ್ಕುಸ್ವಾಮ್ಯದ ಉಲ್ಲಂಘನೆಯಾಗುತ್ತದೆ.

ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದಂತೆ R.G ಆನಂದ್ ವಿ. ಎಮ್/ಎಸ್ ಡಿಲಕ್ಸ್ ಫಿಲ್ಮ್ಸ್ ಪ್ರಕರಣವು ಮುಖ್ಯ ಪ್ರಕರಣವಾಗಿದೆ. ಈ ಪ್ರಕರಣದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು‌ ಹಕ್ಕುಸ್ವಾಮ್ಯದ ಉಲ್ಲಂಘನೆಗೆ ಸಂಬಂಧಿಸಿದ ಹಲವಾರು ಇಂಗ್ಲಿಷ್, ಭಾರತೀಯ ಮತ್ತು ಅಮೇರಿಕನ್ ಪ್ರಕರಣಗಳನ್ನು ಪರಿಗಣಿಸಿದ ನಂತರ ಹಕ್ಕುಸ್ವಾಮ್ಯದ ಉಲ್ಲಂಘನೆಗೆ ಸಂಬಂಧಿಸಿದಂತೆ ಈ ಕೆಳಗಿನ ವಿಚಾರಗಳನ್ನು ಸ್ಪಷ್ಟಪಡಿಸಿತು:

 • ಕಲ್ಪನೆ, ವಿಷಯಗಳು, ಕಥಾವಸ್ತುಗಳು, ಐತಿಹಾಸಿಕ ಅಥವಾ ಪೌರಾಣಿಕ ಸಂಗತಿಗಳಿಗೆ ಸಂಬಂಧಿಸಿದಂತೆ ಯಾವುದೇ ಹಕ್ಕುಸ್ವಾಮ್ಯ ಇರುವಂತಿಲ್ಲ ಮತ್ತು ಇಂತಹ ಪ್ರಕರಣಗಳಲ್ಲಿ ಹಕ್ಕುಸ್ವಾಮ್ಯದ ಉಲ್ಲಂಘನೆಯು ಕೇವಲ ಅವುಗಳ ರೂಪ ಮತ್ತು ವ್ಯವಸ್ಥೆ, ಹಕ್ಕುಸ್ವಾಮ್ಯದ ಲೇಖಕರಿಂದ ಅವುಗಳ ಕಲ್ಪನೆ ಹಾಗ ಅಭಿವ್ಯಕ್ತಿಯ ರೀತಿಗೆ ಮಾತ್ರ ಸೀಮಿತವಾಗಿದೆ.
 • ಸಾಮ್ಯತೆಗಳು ಅಭಿವ್ಯಕ್ತಿಯಲ್ಲಿ ಅಳವಡಿಸಿಕೊಂಡ ಮೂಲಭೂತ ಅಥವಾ ಗಣನೀಯ ಅಂಶಗಳಿಗಿದ್ದರೆ ಮತ್ತು ನಕಲು ಅಂಶವೇ ಸಾಕಷ್ಟು ಇದ್ದಲ್ಲಿ ಉಲ್ಲಂಘನೆಯ ಪ್ರಶ್ನೆ ಬರುತ್ತದೆ.
 • ಎರಡು ಕೃತಿಗಳನ್ನು ವೀಕ್ಷಿಸಿ ಅಥವಾ ನೋಡಿದ ನಂತರ ವೀಕ್ಷಕನು ನಂತರದ ಕೃತಿಯು ಮೂಲಕೃತಿಯ ನಕಲಾಗಿದೆ ಎಂದು ನಿಸ್ಸಂದಿಗ್ಧ ಅನಿಸಿಕೆ ವ್ಯಕ್ತಪಡಿಸಿದ್ದಾನೆಯೇ? ಎಂಬ ಪರೀಕ್ಷೆ ಮಾಡಬೇಕು.
 • ಪ್ರಸ್ತುತಪಡಿಸಿದ ವಿಷಯ ಒಂದೇ ಆಗಿದ್ದರೂ ವ್ಯಕ್ತಪಡಿಸಿದ ರೀತಿ ಭಿನ್ನವಾಗಿದ್ದರೆ ಹಕ್ಕುಸ್ವಾಮ್ಯದ ಉಲ್ಲಂಘನೆಯ ಪ್ರಶ್ನೆಯೇ ಹುಟ್ಟುವುದಿಲ್ಲ.
 • ಮೂಲಕೃತಿ ಮತ್ತು ನಂತರದ ಕೃತಿಯ ನಡುವೆ ಸಾಮ್ಯತೆಗಳ ಜೊತೆಗೆ ಹಲವಾರು ಅಸಮಾನತೆಗಳಿದ್ದರೆ ಅಲ್ಲಿ ಮೂಲ ಕೃತಿಯನ್ನು ನಕಲು ಮಾಡುವ ಉದ್ದೇಶ ಯಾವಾಗಲೂ‌ ಋಣಾತ್ಮಕವಾಗಿರುತ್ತದೆ. ಕೃತಿಗಳಲ್ಲಿ ಕಂಡುಬರುವ ಕಾಕತಾಳೀಯತೆಗಳು ಸ್ಪಷ್ಟವಾಗಿದ್ದರೆ ಅದು ಹಕ್ಕುಸ್ವಾಮ್ಯ ದ ಉಲ್ಲಂಘನೆ ಆಗುವುದಿಲ್ಲ.
 • ಚಲನಚಿತ್ರ ನಿರ್ದೇಶಕ ಒಂದು ನಾಟಕದ ಹಕ್ಕುಸ್ವಾಮ್ಯ ಉಲ್ಲಂಘಿಸಿದ ಪ್ರಕರಣಗಳಲ್ಲಿ ಪುರಾವೆಯ ಹೊರೆ ಫಿರ್ಯಾದಿಯ ಮೇಲೆ ಇರುತ್ತದೆ.

ಈ ಮೇಲಿನ ಅಳತೆಗೋಲುಗಳು ಹಕ್ಕುಸ್ವಾಮ್ಯಗಳ ಎಲ್ಲಾ ವಿಷಯಗಳಿಗೆ ಅನ್ವಯಿಸಬಹುದಾದ್ದರಿಂದ ಇವುಗಳನ್ನು ಸಂಗೀತ ಕೃತಿಗಳ ಹಕ್ಕುಸ್ವಾಮ್ಯಕ್ಕೂ ಅನ್ವಯಿಸಬಹುದು.

ವಿನಾಯಿತಿಗಳು
ಕಲಂ 52 ಹಕ್ಕುಸ್ವಾಮ್ಯ ಉಲ್ಲಂಘನೆಯ ವಿನಾಯಿತಿಗಳನ್ನು ಉಲ್ಲೇಖಿಸುತ್ತದೆ. ನಿರ್ದಿಷ್ಟವಾದ ಕೆಲಸವನ್ನು ಪುನರುತ್ಪಾದಿಸಲು ಸಾಧ್ಯವಾಗುವಂತೆ ಮಾಡುವುದು, ಪ್ರಚಾರ, ಖಾಸಗಿ ಅಧ್ಯಯನ, ಸಂಶೋಧನೆ ಮತ್ತು ಶಿಕ್ಷಣವನ್ನು ಉತ್ತೇಜಿಸುವುದು ಈ ಕಾನೂನು ವಿನಾಯಿತಿಗಳ ಉದ್ದೇಶಗಳಾಗಿವೆ. 1957ರ ಹಕ್ಕುಸ್ವಾಮ್ಯ ಕಾಯಿದೆಯ ಕಲಂ 52 ರ ಪ್ರಕಾರ ಉಲ್ಲೇಖಿಸಲಾದ ವಿನಾಯಿತಿಗಳು ಈ ಕೆಳಗಿನಂತಿವೆ:

 • ಅಧ್ಯಯನ ಸೇರಿದಂತೆ ವೈಯಕ್ತಿಕ ಅಥವಾ ಖಾಸಗಿ ಬಳಕೆಗಾಗಿ. ಉದಾ: ಒಬ್ಬ ವ್ಯಕ್ತಿ ಸಂಗೀತ ಕಲಿಯುವುದಕ್ಕಾಗಿ ಅಥವಾ ತನ್ನ ಖುಷಿಗೆ ತಾನು ಹಾಡಿಕೊಳ್ಳಲು ಒಂದು ಸಿನಿಮಾದ ಹಾಡನ್ನು ಹಾಡಿದಲ್ಲಿ ಅದು ಹಕ್ಕುಸ್ವಾಮ್ಯದ ಉಲ್ಲಂಘನೆ ಎಂದೆನಿಸಿಕೊಳ್ಳುವುದಿಲ್ಲ.
 • ಒಂದು ನಿರ್ದಿಷ್ಟ ಕೃತಿ ಅಥವಾ ಇತರ ಯಾವುದಾದರೂ ಅದಕ್ಕೆ ಸಂಪರ್ಕ ಹೊಂದಿದ ವಿಷಯದ ಟೀಕೆ ಅಥವಾ ವಿಮರ್ಶೆಗಳು. ಉದಾ: ಒಂದು ಬ್ಯಾಂಡ್ ನ ಹಾಡನ್ನು ಟೀಕೆ ಮಾಡುವ ಸಲುವಾಗಿ ವಿಮರ್ಶೆಯ ಭಾಗವಾಗಿ ಹಾಡನ್ನು ನಕಲು ಮಾಡಿದರೆ ಅದನ್ನು ಉಲ್ಲಂಘನೆ ಎಂದು ಲೆಕ್ಕಿಸುವುದಿಲ್ಲ.
 • ದೊಡ್ಡ ಜನಸಮೂಹದ ಮುಂದೆ ನೀಡಲಾಗುವ ಕಾರ್ಯಕ್ರಮಗಳ ಅಥವಾ ಪ್ರದರ್ಶನದ ವರದಿ.
 • ನ್ಯಾಯಾಂಗ ಪ್ರಕ್ರಿಯೆಯ ಉದ್ದೇಶಕ್ಕಾಗಿ ಅಥವಾ ನ್ಯಾಯಾಂಗ ಪ್ರಕ್ರಿಯೆಯ ವರದಿಯ ಉದ್ದೇಶಕ್ಕಾಗಿ ಮಾಡಿದ ಯಾವುದೇ ಕೆಲಸದ ನಕಲು.
 • ಶಾಸಕಾಂಗದ ಸದಸ್ಯರು ರಚಿಸಿದ ಯಾವುದೇ ಕೃತಿಯ ಪ್ರತಿಕೃತಿ ಅಥವಾ ಪ್ರಕಟಣೆ.
 • ಪ್ರಸ್ತುತ ಜಾರಿಯಲ್ಲಿರುವ ಅಥವಾ ಅಸ್ತಿತ್ವದಲ್ಲಿರುವ ಕಾನೂನನ್ನು ಅನುಸರಿಸಿ ಯಾವುದೇ ರೀತಿಯ ಕೆಲಸದ ಪ್ರಮಾಣೀಕೃತ ನಕಲನ್ನು ರಚಿಸುವುದು ಅಥವಾ ಒದಗಿಸುವುದು.
 • ಪಠ್ಯಕ್ರಮದಲ್ಲಿನ ಸೂಚನೆಯಂತೆ ಶಿಕ್ಷಕ ಅಥವಾ ವಿದ್ಯಾರ್ಥಿಯಿಂದ ಯಾವುದೇ ಕೆಲಸದ ನಕಲು.
 • ಪರೀಕ್ಷೆಯಲ್ಲಿ ಒಂದು ಪ್ರಶ್ನೆಗೆ ಉತ್ತರಿಸುವ ಸಲುವಾಗಿ ಯಾವುದೇ ಬರವಣಿಗೆಯ ತುಣುಕನ್ನು ಅಕ್ಷರಶಃ ನಕಲಿಸುವುದು.
 • ಸಂಸ್ಥೆಯ ಚಟುವಟಿಕೆಗಳ ಶೈಕ್ಷಣಿಕ ಭಾಗವಾಗಿ ಸಿಬ್ಬಂದಿ ಅಥವಾ ವಿದ್ಯಾರ್ಥಿಯು ಸಾಹಿತ್ಯಿಕ, ನಾಟಕೀಯ ಅಥವಾ ಸಂಗೀತದ ಕೆಲಸವನ್ನು ನಿರ್ವಹಿಸುವ ಉದ್ದೇಶಕ್ಕಾಗಿ ಯಾವುದೇ ಕೆಲಸವನ್ನು ನಕಲಿಸುವುದು.
 • ಯಾವುದೇ ವಸತಿ ಆವರಣದಲ್ಲಿ ನಿವಾಸಿಗಳ ಸಾಮಾನ್ಯ ಬಳಕೆಗಾಗಿ (ಹೋಟೆಲ್ ಅಥವಾ ಅಂತಹುದೇ ವಾಣಿಜ್ಯ ಸ್ಥಾಪನೆ ಹೊರತುಪಡಿಸಿ) ಸೌಕರ್ಯಗಳ ಭಾಗವಾಗಿ ಸುತ್ತುವರಿದ ಕೊಠಡಿ ಅಥವಾ ಸಭಾಂಗಣದಲ್ಲಿ ಪ್ರತ್ಯೇಕವಾಗಿ ಅಥವಾ ನಿರ್ದಿಷ್ಟವಾಗಿ ಅದರ ನಿವಾಸಿಗಳಿಗೆ ಮಾತ್ರ ಒದಗಿಸಲಾದ ಯಾವುದೇ ರೀತಿಯ ಕೆಲಸದ ನಕಲು.
 • ಕ್ಲಬ್ ಅಥವಾ ಸ್ಥಾಪಿಸದ ಅಥವಾ ಲಾಭಕ್ಕಾಗಿ ನಡೆಸಲ್ಪಡದ ಸಂಸ್ಥೆಗೆ ಹೋಲುವ ಇನ್ನೊಂದು ಸಂಸ್ಥೆಯ ಕಾರ್ಯಾಚರಣೆಗಳ ಒಂದು ಅಂಶವಾಗಿ ಯಾವುದೇ ಕೆಲಸದ ಪ್ರತಿಕೃತಿ.
 • ಧಾರ್ಮಿಕ ಸಂಸ್ಥೆಯ ಉದ್ದೇಶಕ್ಕಾಗಿ ಕೃತಿಯ ನಕಲು ಅಥವಾ ಒಂದು ಹವ್ಯಾಸಿ ಕ್ಲಬ್ ಅಥವಾ ಸೊಸೈಟಿಯಿಂದ ಪ್ರೇಕ್ಷಕರಿಗೆ ಉಚಿತವಾಗಿ ಸಾಹಿತ್ಯಿಕ, ನಾಟಕೀಯ ಅಥವಾ ಸಂಗೀತದ ತುಣುಕಿನ ಪ್ರದರ್ಶನ.
 • ವೃತ್ತಪತ್ರಿಕೆ, ನಿಯತಕಾಲಿಕೆ ಅಥವಾ ಇತರ ನಿಯತಕಾಲಿಕಗಳಲ್ಲಿ ರಾಜಕೀಯ, ಅಥವಾ ಧಾರ್ಮಿಕ ವಿಷಯಗಳು, ಪ್ರಸ್ತುತ ಸಾಮಾಜಿಕ ಲೇಖನಗಳ, ತುಣುಕಿನ ಲೇಖಕರು ಅಂತಹ ಹಕ್ಕನ್ನು ಸ್ಪಷ್ಟವಾಗಿ ಕಾಯ್ದಿರಿಸದಿದ್ದರೆ ಆ ಕೆಲಸದ ಅಥವಾ ಆ ಕೆಲಸದ ಯಾವುದೇ ರೀತಿಯ ವಿಷಯದ ನಕಲು.
 • ಗ್ರಂಥಾಲಯ, ವಸ್ತುಸಂಗ್ರಹಾಲಯ ಅಥವಾ ಸಾರ್ವಜನಿಕರಿಗೆ ಪ್ರವೇಶವಿರುವ ಇತರ ಸಂಸ್ಥೆಗಳಲ್ಲಿ ಖಾಸಗಿ‌‌
 • ಅಧ್ಯಯನ, ಸಂಶೋಧನೆ ಅಥವಾ ಪ್ರಕಟಣೆಯ ದೃಷ್ಟಿಯಿಂದ ಅಪ್ರಕಟಿತ ಸಾಹಿತ್ಯಿಕ, ನಾಟಕೀಯ ಅಥವಾ ಸಂಗೀತದ ಕೃತಿಯ ನಕಲು.

ಉಲ್ಲಂಘನೆ ಯಾವಾಗ ಆಗುತ್ತದೆ?
ಕೆಳಗಿನ ಸಂದರ್ಭಗಳಲ್ಲಿ ಹಕ್ಕುಸ್ವಾಮ್ಯದ ಉಲ್ಲಂಘನೆಯಾಗುತ್ತದೆ:

 1. ಯಾವುದೇ ರೀತಿಯ ಕೆಲಸವನ್ನು ಇದ್ದದ್ದು ಇದ್ದ ಹಾಗೇ ನಕಲುಗೊಳಿಸುವುದು.
 2. ಕೃತಿಯ ಪ್ರಕಟಣೆ.
 3. ಕೃತಿಯ ಸಾರ್ವಜನಿಕ ಪ್ರಸಾರ.
 4. ಕೆಲಸದ ಸಾರ್ವಜನಿಕ ಪ್ರದರ್ಶನ.
 5. ಕೃತಿಯ ರೂಪಾಂತರಗಳು ಮತ್ತು ಅನುವಾದಗಳನ್ನು ಮಾಡುವುದು.

ಮೇಲೆ ಹೇಳಿದ ಯಾವುದನ್ನೂ ಹಾಡಿನ ಅಥವಾ ಧ್ವನಿಮುದ್ರಿಕೆಯ ಮಾಲೀಕರ ಒಪ್ಪಿಗೆಯಿಲ್ಲದೆ ಮಾಡುವುದನ್ನು ಉಲ್ಲಂಘನೆ ಎಂದು ಲೆಕ್ಕಿಸಲಾಗುತ್ತದೆ.

ಪರಿಹಾರಗಳು
ಸೆಕ್ಷನ್ 55 ಈ ಕೆಳಗಿನ ಸಿವಿಲ್ ಪರಿಹಾರಗಳನ್ನು ಹಕ್ಕುಸ್ವಾಮ್ಯದ ಮಾಲೀಕರಿಗೆ ಒದಗಿಸುತ್ತದೆ:
– ತಡೆಯಾಜ್ಞೆ,
– ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುವವನು/ಪ್ರತಿವಾದಿಯು, ಮಾಲೀಕ/ಫಿರ್ಯಾದಿಯ ಹಕ್ಕುಸ್ವಾಮ್ಯವನ್ನು
– ತಪ್ಪಾಗಿ ಬಳಸುವುದರ ಮೂಲಕ ಮಾಡಿದ ಲಾಭದ ಮೊತ್ತ,
– ಪರಿಹಾರ

ಹಕ್ಕುಸ್ವಾಮ್ಯ ಹೊಂದಿರುವವರಿಗೆ ಕ್ರಿಮಿನಲ್ ಕಾನೂನಿನಡಿಯಲ್ಲಿಯೂ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ. ಹಕ್ಕುಸ್ವಾಮ್ಯ ಕಾಯಿದೆ, 1957 ರ ಸೆಕ್ಷನ್ 63 ರಿಂದ 70 ರವರೆಗೆ ಉಲ್ಲಂಘನೆಗೆ ಇರುವ ಬೇರೆ ಬೇರೆ ಶಿಕ್ಷೆಗಳನ್ನು ಹೇಳಲಾಗಿದೆ. ಸೆಕ್ಷನ್ 63ರ ಪ್ರಕಾರ ಹಕ್ಕುಸ್ವಾಮ್ಯ ಉಲ್ಲಂಘನೆಯಾದಾಗ ಅಪರಾಧಿಗೆ ಕನಿಷ್ಠ ಆರು ತಿಂಗಳಿಂದ ಮೂರು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಐವತ್ತು ಸಾವಿರ ರೂಪಾಯಿಗಳಿಂದ ಎರಡು ಲಕ್ಷಗಳವೆರೆಗೆ ದಂಡ ವಿಧಿಸಬಹುದಾಗಿದೆ. ವ್ಯಾಪಾರ ಮಾಡುವ ಉದ್ದೇಶದಿಂದ ಉಲ್ಲಂಘನೆ ಮಾಡದಿದ್ದರೆ ನ್ಯಾಯಾಲಯವು ತೀರ್ಪಿನಲ್ಲಿ ವಿಶೇಷ ಕಾರಣಗಳನ್ನು ನೀಡಿ 6 ತಿಂಗಳಿಗಿಂತ ಕಡಿಮೆ ಅವಧಿಗೆ ಜೈಲು ಶಿಕ್ಷೆ ವಿಧಿಸಬಹುದು ಅಥವಾ ಐವತ್ತು ಸಾವಿರ ರೂಪಾಯಿಗಳಿಗಿಂತ ಕಡಿಮೆ ದಂಡ ವಿಧಿಸಬಹುದು.

ಕಲಂ 63A ಯು ಹಕುಸ್ವಾಮ್ಯ ಉಲ್ಲಂಘನೆಯನ್ನು ಪದೇ ಪದೇ ಮಾಡುವುದರ ಬಗ್ಗೆ ಹೇಳುತ್ತದೆ. ಕಲಂ 63ರ ಅಡಿಯಲ್ಲಿ ಈಗಾಗಲೇ ಶಿಕ್ಷೆಗೆ ಒಳಗಾದವರನ್ನು ಮತ್ತೊಮ್ಮೆ ಅಪರಾಧಿ ಎಂದು ನಿರ್ಣಯಿಸಲಾಗುತ್ತದೆ ಹಾಗೂ ಒಂದು ವರ್ಷಕ್ಕಿಂತ ಕಡಿಮೆಯಿಲ್ಲದ ಹಾಗೂ ಮೂರು ವರ್ಷದವರೆಗೆ ವಿಸ್ತರಿಸಬೇಕಾದ ಜೈಲು ಶಿಕ್ಷೆಯೊಂದಿಗೆ ಎರಡನೇ ಬಾರಿಗೆ ಶಿಕ್ಷೆಗೆ ಒಳಗಪಡಿಸಲಾಗುತ್ತದೆ. ಮತ್ತು ಒಂದು ಲಕ್ಷ ರೂಪಾಯಿಕ್ಕಿಂತ ಕಡಿಮೆಯಿಲ್ಲದ ಹಾಗೂ ಎರಡು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡದೊಂದಿಗೆ ಶಿಕ್ಷಿಸಲಾಗುತ್ತದೆ. ವ್ಯಾಪಾರ ಮಾಡುವ ಉದ್ದೇಶದಿಂದ ಉಲ್ಲಂಘನೆ ಮಾಡದಿದ್ದರೆ ನ್ಯಾಯಾಲಯವು ವಿಶೇಷ ಕಾರಣಗಳೊಂದಿಗೆ ತೀರ್ಪಿನಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಜೈಲು ಶಿಕ್ಷೆಯನ್ನು ವಿಧಿಸಬಹುದು ಅಥವಾ ಒಂದು ಲಕ್ಷ ರೂಪಾಯಿಗಳಿಗಿಂತ ಕಡಿಮೆ ದಂಡ ವಿಧಿಸಬಹುದು.

ರಾಯಧನ
ಹಕ್ಕುಸ್ವಾಮ್ಯ (ತಿದ್ದುಪಡಿ) ಕಾಯಿದೆ, 2012 ರ ಪ್ರಕಾರ ಹಕ್ಕುಸ್ವಾಮ್ಯವನ್ನು ಹೊಂದಿರುವ ಲೇಖಕರು ಅವರು ಮಾಡಿದ ಕೆಲಸಗಳಿಗೆ ರಾಯಧನವನ್ನು ಪಡೆದುಕೊಳ್ಳಬಹುದು. ರಾಯಧನ ಎಂದರೆ ಕೃತಿಯನ್ನು ಒಂದು ಚೌಕಟ್ಟಿನಲ್ಲಿ ಬಳಸಿಕೊಳ್ಳಲು ಅನುಮತಿ ನೀಡಿ ಅದಕ್ಕೆ ಬದಲಾಗಿ ಪಡೆದುಕೊಳ್ಳುವ ಹಣ. ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜರವರು ವಾಣಿಜ್ಯ ಉದ್ದೇಶಗಳಿಗಾಗಿ ತನ್ನ ಹಾಡುಗಳನ್ನು ಹಾಡುವ ಮತ್ತು ಪ್ರದರ್ಶಿಸುವ ಕಲಾವಿದರ ಹತ್ತಿರ ರಾಯಧನವನ್ನು ಪತ್ರಿಕಾ ಹೇಳಿಕೆಯ ಮೂಲಕ 2018 ರಲ್ಲಿ ಕೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇತ್ತೀಚಿಗೆ ಕಾಂತಾರ ಚಿತ್ರದಲ್ಲಿ ಬಳಸಿದ ವರಾಹರೂಪಂ ಹಾಡು ಕೇರಳ ಮೂಲದ ರಾಕ್ ಮ್ಯೂಸಿಕ್ ಬ್ಯಾಂಡ್ “ತೈಕ್ಕುಡಮ್” ತನ್ನ ಕೃತಿ ‘ನವರಸಂ’ ನ ನಕಲು ಎಂದು ಕಾನೂನು ಯುದ್ಧದಲ್ಲಿ ತೊಡಗಿಕೊಂಡಿದೆ. ಒಂದಷ್ಟು ಕಾಲ ಹಾಡನ್ನು ಬಳಸದಂತೆ ಕೋಝಿಕ್ಕೋಡ್‌ನ ಜಿಲ್ಲಾ ನ್ಯಾಯಾಲಯದ ತಡೆಯಾಜ್ಞೆಯಿದ್ದರೂ, ವಾಣಿಜ್ಯ ಕೋರ್ಟಿನಲ್ಲಿ ಮಾತ್ರ ಕೇಸು ನಿಲ್ಲುತ್ತದೆಯೆಂದು ಕೋರ್ಟ್ ಹೇಳಿ, ಕೇಸನ್ನು ಹಿಂತಿರುಗಿಸಿದ್ದರಿಂದ ಸದ್ಯದಲ್ಲಿ ಯಾವುದೇ ತಡೆಯಾಜ್ಞೆ ಇಲ್ಲವಾಗಿದೆ. ಹಾಗಾಗಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಮೂಲ ಹಾಡನ್ನು ನಿರ್ಮಾಪಕ ಸಂಸ್ಥೆ ಪ್ರಸ್ತುತಪಡಿಸಿದೆ. ಈಗಷ್ಟೇ ಆರಂಭವಾಗಿರುವ ಈ ಕಾನೂನು ಯುದ್ಧದ ಕೊನೆಯಲ್ಲಿ ಏನಾಗಬಹುದೆಂಬ ಕುತೂಹಲವಂತೂ ಇದ್ದೇ ಇದೆ.

ಭಾರತವು ಸಂಗೀತ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ಹಲವಾರು ಸುಪ್ರಸಿದ್ಧ ಕಲಾವಿದರ ತವರು ನೆಲವಾಗಿದೆ. ಈ ಹಕ್ಕುಸ್ವಾಮ್ಯ ಉಲ್ಲಂಘನೆಯಂತಹ ಸಣ್ಣಪುಟ್ಟ ಸಮಸ್ಯೆಗಳಿಂದ ಇಂತಹ ಸಂಗೀತಗಾರರ ಧೈರ್ಯ ಕುಂದುತ್ತದೆ. ಚಲನಚಿತ್ರ ಮತ್ತು ಸಂಗೀತ ಪೈರಸಿಯ ಸಮಸ್ಯೆಯನ್ನು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರ ಮಾತ್ರವಲ್ಲದೆ, ಯು.ಎಸ್.ಎನಂತಹ ಅಭಿವೃದ್ಧಿ ಹೊಂದಿದ ದೇಶಗಳು ಸಹ ಎದುರಿಸುತ್ತಿವೆ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಹಕ್ಕುಸ್ವಾಮ್ಯ ಕಾನೂನುಗಳು ಇನ್ನಷ್ಟು ಕಠಿಣವಾಗಬೇಕಿದೆ ಹಾಗೂ ಈ ಬಗ್ಗೆ ಸಂಗೀತಗಾರರಲ್ಲಿ ಒಮ್ಮತ ಮೂಡಬೇಕಿದೆ. ಒಟ್ಟಿನಲ್ಲಿ, ಒಬ್ಬ ಸಂಗೀತಗಾರನ ಕಲೆಗೆ ಹಾಗೂ ಶ್ರಮಕ್ಕೆ ಬೆಲೆ ಕೊಡಲು ಹಕ್ಕುಸ್ವಾಮ್ಯ ಪ್ರಯೋಜನಕಾರಿಯಾಗಿದೆ.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

Spread the love