ಲೇಖನಗಳು

ನ್ಯಾಯಾಧೀಶರನ್ನು ನೇಮಿಸುವ ನ್ಯಾಯಾಧೀಶರು: ಸತ್ಯವೇ? ಕಲ್ಪನೆಯೇ?

ಕೇಂದ್ರ ಕಾನೂನು ಸಚಿವರಾದ ಕಿರಣ್ ರಿಜಿಜು ಇತ್ತೀಚಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಉನ್ನತ ನ್ಯಾಯಾಂಗ ನೇಮಕಾತಿಗಳಲ್ಲಿ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಪಟ್ಟಿ ಮಾಡಿದ ಕೆಲವು ಸಮಸ್ಯೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನ್ಯಾಯಾಧೀಶರನ್ನು ಆಯ್ಕೆ ಮಾಡುವ ಅಥವಾ ವರ್ಗಾವಣೆ ಮಾಡುವ ಕಾರಣಗಳನ್ನು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಹಾಕಲಾಗುವುದು ಎಂಬ 2017 ರ ಸುಪ್ರೀಂ ಕೋರ್ಟ್ ಪ್ರಕಟಣೆಯ ಹೊರತಾಗಿಯೂ ಕೊಲಿಜಿಯಂ ನಿರ್ಧಾರಗಳ ಪಾರದರ್ಶಕತೆಯ ಬಗ್ಗೆ ಕಳವಳಗಳು ಉಳಿದಿವೆ. ಕಾರಣ, ಕೊಲಿಜಿಯಂ ವ್ಯವಸ್ಥೆಯಲ್ಲಿಯೇ ಗೌಪ್ಯತೆಯ ನೆರಳು ಎಲ್ಲಾ ಪ್ರಕ್ರಿಯೆಗಳ ಮೇಲಿದೆ. ಅಂತೆಯೇ, ಪಾರದರ್ಶಕವಲ್ಲದ ಸರಿಯಾದ ಲಿಖಿತ ನೇಮಕಾತಿ ನಿಯಮಗಳಿಲ್ಲದ, ಮಾನದಂಡ ರಹಿತವಾದ ಕೋಲಿಜಿಯಂ ವ್ಯವಸ್ಥೆಯಿಂದ ಪ್ರಾಮಾಣಿಕ ಅರ್ಹ ಅಭ್ಯರ್ಥಿಗಳ ಆಯ್ಕೆ ಆಗದಿರಬಹುದು ಎನ್ನುವುದು ಸರ್ಕಾರದ ಕಳವಳಕ್ಕೆ ಕಾರಣವಾಗಿದೆ.

ಉನ್ನತ ನ್ಯಾಯಾಂಗ ನೇಮಕಾತಿ ಬಗ್ಗೆ ಸಂವಿಧಾನ ಏನು ಹೇಳುತ್ತೆ?

ಸಂವಿಧಾನದ ಅನುಚ್ಛೇದಗಳಾದ 124-147 ಸುಪ್ರೀಂ ಕೋರ್ಟ್‌ನ ರಚನೆ, ಕಾರ್ಯಗಳು ಮತ್ತು ಅಧಿಕಾರಗಳ ಬಗ್ಗೆ ಮತ್ತು ಅನುಚ್ಛೇದ 214 ರಿಂದ 232 ಹೈಕೋರ್ಟ್‌ಗಳ ರಚನೆ, ಕಾರ್ಯಗಳು ಮತ್ತು ಅಧಿಕಾರಗಳ ಬಗ್ಗೆ ಹೇಳುತ್ತದೆ. ಅನುಚ್ಛೇದ 124 ರ ಪ್ರಕಾರ, ರಾಷ್ಟ್ರಪತಿಗಳು ಸಿಜೆಐ ಜೊತೆ ಸಮಾಲೋಚಿಸಿ (ಎ) ಕನಿಷ್ಠ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಯಾವುದೇ ಹೈಕೋರ್ಟಿನ ನ್ಯಾಯಾಧೀಶರನ್ನು, ಅಥವಾ (ಬಿ) 10 ವರ್ಷಗಳಿಂದ ಸುಪ್ರೀಂ ಕೋರ್ಟ್ನಲ್ಲಿ ವಕೀಲಿಕೆ ಮಾಡುತ್ತಿರುವ ವಕೀಲರನ್ನು, ಅಥವಾ (ಸಿ) ವಿಶೇಷ ನ್ಯಾಯಶಾಸ್ತ್ರಜ್ಞರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕ ಮಾಡಬಹುದು .

ಆರ್ಟಿಕಲ್ 127 ರ ಪ್ರಕಾರ ತಾತ್ಕಾಲಿಕ ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್‌ನಲ್ಲಿ ನೇಮಿಸಬಹುದು, ಹಾಗೆಯೇ ಆರ್ಟಿಕಲ್ 128 ಹೇಳುವಂತೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಮತ್ತು ಹೈಕೋರ್ಟ್‌ನ ಕನಿಷ್ಠ ಐದು ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುವವರನ್ನು ತಾತ್ಕಾಲಿಕ ನ್ಯಾಯಾಧೀಶರಾಗಿ ನೇಮಿಸಬಹುದು.

ಅಂತೆಯೇ, 217 ನೇ ಅನುಚ್ಛೇದದ ಪ್ರಕಾರ, ಹೈಕೋರ್ಟ್‌ಗಳಿಗೆ ರಾಷ್ಟ್ರಪತಿಗಳು ಸಿಜೆಐ, ಆ ರಾಜ್ಯದ ರಾಜ್ಯಪಾಲರು ಮತ್ತು ಆ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರೊಂದಿಗೆ ಸಮಾಲೋಚಿಸಿ  (ಎ) ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಜಿಲ್ಲಾ ನ್ಯಾಯಾಧೀಶರನ್ನು, ಅಥವಾ (ಬಿ) ಕನಿಷ್ಠ 10 ವರ್ಷಗಳ ಕಾಲ ಉಚ್ಛ ನ್ಯಾಯಾಲಯದಲ್ಲಿ ವಕೀಲಿಕೆ ಮಾಡುತ್ತಿರುವ ವಕೀಲರಲ್ಲಿ ಆಯ್ಕೆ ಮಾಡಬಹುದು. ಆರ್ಟಿಕಲ್ 223 ರ ಅಡಿಯಲ್ಲಿ, ಹಂಗಾಮಿ ಮತ್ತು ಹೆಚ್ಚುವರಿ ನ್ಯಾಯಾಧೀಶರನ್ನೂ ನೇಮಿಸಬಹುದು ಮತ್ತು ಆರ್ಟಿಕಲ್ 224-ಎ ಅಡಿಯಲ್ಲಿ, ಹೈಕೋರ್ಟ್‌ಗಳಲ್ಲಿ ನಿವೃತ್ತ ನ್ಯಾಯಾಧೀಶರನ್ನು ಅಗತ್ಯವಿದ್ದರೆ ನೇಮಿಸಬಹುದು. ಆರ್ಟಿಕಲ್ 227 ರ ಅಡಿಯಲ್ಲಿ, ಉಚ್ಚ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲಾ ಇತರ ನ್ಯಾಯಾಲಯಗಳು ಮತ್ತು ನ್ಯಾಯಾಧಿಕರಣಗಳ ಮೇಲೆ ಮೇಲ್ವಿಚಾರಣಾ ಅಧಿಕಾರವನ್ನು ಹೊಂದಿವೆ, ಆದರೆ ಅಂತಹ ಅಧಿಕಾರವು ಹೈಕೋರ್ಟ್‌ಗಳ ಮೇಲೆ ಸುಪ್ರೀಂ ಕೋರ್ಟ್‌ಗೆ ಇಲ್ಲ.

ಏನಿದು ಕೊಲಿಜಿಯಂ ಸಿಸ್ಟಮ್?

ಸಂವಿಧಾನದಲ್ಲಿ, ನ್ಯಾಯಾಂಗ ನೇಮಕಾತಿಯಲ್ಲಿ “ಸಮಾಲೋಚನೆ” ಎಂಬ ಪದವನ್ನು ಬಳಸಿದೆ. ಆದರೆ 1993 ರಲ್ಲಿ, ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ ​​ ವಿ. ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠವು “ಸಮಾಲೋಚನೆ” ಪದವನ್ನು “ಸಮ್ಮತಿ” ಎಂದು ಲೆಕ್ಕಿಸಬೇಕು ಎಂದು ಅಭಿಪ್ರಾಯಪಟ್ಟಿತು ಮತ್ತು ಉನ್ನತ ನ್ಯಾಯಾಂಗದಲ್ಲಿ ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಗಾಗಿ “ಕೊಲಿಜಿಯಂ ಸಿಸ್ಟಮ್” ಎಂಬ ನಿರ್ದಿಷ್ಟ ಕಾರ್ಯವಿಧಾನವನ್ನು ರೂಪಿಸಿತು.  ಸುಪ್ರೀಂ ಕೋರ್ಟ್‌ನಲ್ಲಿರುವ ಕೊಲಿಜಿಯಂ ಸಿಜೆಐ ಮತ್ತು ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ ಮತ್ತು ಹೈಕೋರ್ಟ್‌ನಲ್ಲಿ, ಆ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಮತ್ತು ಇಬ್ಬರು ಹಿರಿಯ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ. ಈ ಕೊಲಿಜಿಯಂ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಾತಿ ಅಥವಾ ಪದೋನ್ನತಿಗೆ ಸೂಕ್ತ ಹೆಸರುಗಳನ್ನು ಪರಿಗಣಿಸುತ್ತದೆ. ಪರಿಗಣಿಸಬೇಕಾದ ಪಟ್ಟಿಯಲ್ಲಿ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ಸುಪ್ರೀಂ ಕೋರ್ಟ್ ಬಾರ್‌ನ  ಹಿರಿಯ ವಕೀಲರ ಹೆಸರುಗಳು ಇರುತ್ತವೆ. ಉಚ್ಚ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗೆ ಪರಿಗಣಿಸುವಾಗ, ಸೇವೆ ಸಲ್ಲಿಸುತ್ತಿರುವ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಹಿರಿತನವು ಮುಖ್ಯ ಪಾತ್ರ ವಹಿಸುತ್ತದೆ.

ಸರ್ಕಾರದ ವಾದ ಏನು?

ಉನ್ನತ ನ್ಯಾಯಾಂಗದ ನೇಮಕಾತಿಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು,  ನ್ಯಾಯಾಧೀಶರ ಆಯ್ಕೆಯು ಪಾರದರ್ಶಕ ಮತ್ತು ಸಾರ್ವಜನಿಕ ಕಾರ್ಯವಿಧಾನದ ಮೂಲಕ ಆಗಬೇಕು ಮತ್ತು ಇದರಿಂದ ಸಾಂವಿಧಾನಿಕ ನ್ಯಾಯಾಲಯಗಳಲ್ಲಿ ಕುಳಿತುಕೊಳ್ಳಲು ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು, ಸ್ವಜನಪಕ್ಷಪಾತವನ್ನು ತಡೆಯಬಹುದು ಎಂಬುದು ಸರ್ಕಾರದ ವಾದ.

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ:

2014 ರಲ್ಲಿ ಕೇಂದ್ರ ಸರ್ಕಾರವು 99 ನೇ ಸಾಂವಿಧಾನಿಕ ತಿದ್ದುಪಡಿಯ ಮುಖಾಂತರ ಉನ್ನತ ನ್ಯಾಯಾಂಗದ ನೇಮಕಾತಿ ಪ್ರಕ್ರಿಯೆಯನ್ನು ಬದಲಿಸಲು ಪ್ರಯತ್ನಿಸಿತು. ಕೊಲಿಜಿಯಂ ಸಿಸ್ಟಮ್ ನಲ್ಲಿ ಪಾರದರ್ಶಕತೆಯ ಕೊರತೆಯಿದೆ ಎಂಬ ಕಾರಣ ಕೊಟ್ಟು, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ತಿದ್ದುಪಡಿ ರಚಿಸಿತು. ಆದರೆ ಆ ಆಯೋಗವು ತನ್ನದೇ ಆದ ರಚನಾತ್ಮಕ ನ್ಯೂನತೆಯಿಂದಾಗಿ “ನ್ಯಾಯಾಂಗದ ಸ್ವಾತಂತ್ರ್ಯ” ಪರೀಕ್ಷೆಯಲ್ಲಿ ವಿಫಲವಾಯಿತು. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ನ್ಯಾಯಮೂರ್ತಿಗಳ ನೇಮಕಾತಿಯ ಕೊಲಿಜಿಯಂ ವ್ಯವಸ್ಥೆಯನ್ನು  ಬದಲಿಸಬೇಕಿತ್ತು. ಆದರೆ ಈ ಆಯೋಗವನ್ನು 2015 ರಲ್ಲಿ 4-1 ಬಹುಮತದೊಂದಿಗೆ ಐವರು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠವು ಬರ್ಖಾಸ್ತುಗೊಳಿಸಿತು.

ಏನು  ಕೊಲಿಜಿಯಂ ಪರವಾದ ವಾದ?

ಕೊಲಿಜಿಯಂ ಬೆಂಬಲಿಗರು 1970 – 1980 ರ ದಶಕಗಳಲ್ಲಿ ನ್ಯಾಯಾಂಗ ನೇಮಕಾತಿಗಳಲ್ಲಿ  ಸರ್ಕಾರಿ ಹಸ್ತಕ್ಷೇಪ ಮತ್ತು ಅನುಮಾನಾಸ್ಪದ ಸರ್ಕಾರಿ ಆಸಕ್ತಿಯ ‘Committed Judges’ ನಿದರ್ಶನಗಳನ್ನು ಉಲ್ಲೇಖಿಸುತ್ತಾರೆ. ಆ ಅನುಮಾನಗಳು ಕೊಲಿಜಿಯಂ ವ್ಯವಸ್ಥೆಗೆ ಮೂಲ ಬುನಾದಿಯಾಯಿತು. ಕೊಲೀಜಿಯಂ ಮೊದಲಿನ ನಿಯಮಗಳು  1990 ರ ದಶಕದಲ್ಲಿ First and Second Judges Transfer ಪ್ರಕರಣಗಳಲ್ಲಿ ವಿಮರ್ಶೆಗೂ ಒಳಪಟ್ಟಿತ್ತು.

ಹಾಗಾದರೆ ಕೊಲಿಜಿಯಂ ವ್ಯವಸ್ಥೆ ಪರಿಣಾಮಕಾರಿಯೇ?

ಕೊಲಿಜಿಯಂನ ಶಿಫಾರಸುಗಳು ಸರ್ಕಾರಗಳ ಕೃಪೆಯಲ್ಲಿರುವಾಗ ನ್ಯಾಯಾಧೀಶರ ನೇಮಕಾತಿಯ ಈ ಅಪಾರದರ್ಶಕ ವಿಧಾನವು ಹೆಚ್ಚು ದುರ್ಬಲವಾಗುತ್ತದೆ. ಕೊಲಿಜಿಯಂ ಶಿಫಾರಸುಗಳನ್ನು ಖಾತ್ರಿ ಮಾಡಿದರೆ ಶಿಫಾರಸನ್ನು ಜಾರಿಗೊಳಿಸುವುದು ಕೇಂದ್ರ ಸರ್ಕಾರದ ಸಾಂವಿಧಾನಿಕ ಬಾಧ್ಯತೆಯಾಗಿದ್ದರೂ, ಸರಕಾರವು ಈ ನೇಮಕಗಳನ್ನು ಮಾಡುವ ಅಧಿಕಾರ ಇರುವುದರಿಂದ, ನೇಮಕಾತಿಗಳು ಸರಕಾರದ ಮರ್ಜಿಯಲ್ಲಿವೆ ಎಂದರೂ ತಪ್ಪಿಲ್ಲ.

ಅಷ್ಟೇ ಅಲ್ಲದೆ, ಸರ್ಕಾರವು ಉನ್ನತ ನ್ಯಾಯಾಂಗಕ್ಕೆ ನ್ಯಾಯಾಧೀಶರಾಗಿ ನೇಮಕ ಮಾಡಲು ಕೊಲಿಜಿಯಂ ಅನುಮೋದಿಸಿದ ಹೆಸರುಗಳನ್ನು ನೇಮಕಗೊಳಿಸಲು ತಡ ಮಾಡುತ್ತಿರುವ ಇತ್ತೀಚಿನ ಬೆಳವಣಿಗೆ ಕೊಲಿಜಿಯಂ ವ್ಯವಸ್ಥೆಯ ವಿಫಲತೆಗೆ ಕಾರಣವಾಗಿದೆ.

ಈ ವಿಷಯದ ಕುರಿತು ಇತ್ತೀಚಿಗೆ ಬಂದ  ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸರ್ಕಾರದ ಕಾರ್ಯದರ್ಶಿ (ನ್ಯಾಯ), ಭಾರತ ಸರ್ಕಾರ ಮತ್ತು ಹೆಚ್ಚುವರಿ ಕಾರ್ಯದರ್ಶಿ (ಆಡಳಿತ ಮತ್ತು ನೇಮಕಾತಿ) ಅವರಿಗೆ ನೋಟಿಸ್ ಜಾರಿ ಮಾಡಿದೆ. ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಶ್ರೀನಿವಾಸ್ ಓಕಾ ಅವರನ್ನೊಳಗೊಂಡ ಪೀಠವು ಕೊಲಿಜಿಯಂ ಅನುಮೋದಿಸಿದ ಹೆಸರುಗಳನ್ನು ತಡೆಹಿಡಿಯುವ ಕೇಂದ್ರದ ವಿರುದ್ಧ ತೀವ್ರ ಟೀಕೆಗಳನ್ನು ಮಾಡಿದೆ. “ಕೊಲಿಜಿಯಂ ಶಿಫಾರಸ್ಸು ಮಾಡಿದ ಹೆಸರುಗಳನ್ನು ಬಾಕಿ ಇಡುವುದು ಸರಿಯಲ್ಲ. ಸೂಕ್ತವಾಗಿ ಶಿಫಾರಸು ಮಾಡಿದ್ದರೂ ಅಥವಾ ಪುನರುಚ್ಚರಿಸಿದ್ದರೂ ಹೆಸರುಗಳನ್ನು ತಡೆಹಿಡಿಯುವ ವಿಧಾನವು ಈ ವ್ಯಕ್ತಿಗಳು ತಮ್ಮ ಹೆಸರನ್ನು  ಹಿಂತೆಗೆದುಕೊಳ್ಳುವಂತೆ ಒತ್ತಡ ತರುವ ರೂಢಿಯಾಗಿ ಮಾರ್ಪಡುತ್ತಿದೆ ಎಂದು ನಾವು ಕಂಡುಕೊಂಡಿದ್ದೇವೆ,” ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.

ಕರ್ನಾಟಕಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಉದಾಹರಣೆ ಎಂದರೆ ಹಿರಿಯ ವಕೀಲ ಆದಿತ್ಯ ಸೋಂಧಿ ಅವರನ್ನು ಉಚ್ಚ ನ್ಯಾಯಾಲಯದ ನ್ಯಾಯಾಧಿಶರಾಗಿ ಸೆಪ್ಟೆಂಬರ್ 2021 ರಲ್ಲಿ ಕೊಲಿಜಿಯಂ ಪುನರುಚ್ಚರಿಸಿತು. ಫೆಬ್ರವರಿ 2022ರವರೆಗೂ, ಸೋಂಧಿ ಅವರ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಅನುಮೋದನೆಯು ಬರದ ಕಾರಣ ನ್ಯಾಯಾಧೀಶರಾಗಲು ಅವರು ತಮ್ಮ ಸಮ್ಮತಿಯನ್ನು ಹಿಂತೆಗೆದುಕೊಂಡರು. ದೆಹಲಿ ಹೈಕೋರ್ಟ್ ನ ಹಿರಿಯ ವಕೀಲ ಸೌರಭ್ ಕೃಪಾಲ್ ಅವರ ಉಚ್ಛ  ನ್ಯಾಯಧೀಶ ನೇಮಕಾತಿ ಶಿಫಾರಸ್ಸನ್ನು ಅವರ ‘ಲೈಂಗಿಕ ಆಯ್ಕೆ’ಯ ಕಾರಣಕ್ಕೆ ಸರ್ಕಾರ ತಡೆಹಿಡಿದಿದೆ ಎಂಬ ಗುಮಾನಿಯಿದೆ. ಹೀಗೆ ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ಕೊಲಿಜಿಯಂ ವ್ಯವಸ್ಥೆಯ ವಿಫಲತೆಯಲ್ಲಿ ಸರ್ಕಾರದ ಪಾತ್ರವು ಸಾಕಷ್ಟು ಇದೆ.

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಠಾಕೂರ್ ಅವರು, ಪರ್ಯಾಯವನ್ನು ರೂಪಿಸದೆ ಉನ್ನತ ನ್ಯಾಯಾಂಗಕ್ಕೆ ನ್ಯಾಯಾಧೀಶರ ನೇಮಕಕ್ಕಾಗಿ ಕೊಲಿಜಿಯಂ ವ್ಯವಸ್ಥೆಯನ್ನು ಟೀಕಿಸುವುದು “ನಮ್ಮನ್ನು ಎಲ್ಲಿಯೂ ಕರೆದೊಯ್ಯುವುದಿಲ್ಲ” ಎಂದು ಹೇಳಿದ್ದಾರೆ.

ಹೀಗಾಗಿ ಟೀಕೆಯ ಬದಲಾಗಿ ಇರುವ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಿವುದು, ಎಲ್ಲಾ ಭೇಧಗಳನ್ನು ತೊರೆದು ನೇಮಕಾತಿಯನ್ನು ಸುಗಮಗೊಳಿಸುವಿಕೆ, ನ್ಯಾಯಾಂಗದ ಸ್ವತಂತ್ರತೆಯನ್ನು ಗಮನದಲ್ಲಿ ಇಟ್ಟು ಪ್ರಕ್ರಿಯೆಯಲ್ಲಿ ಸರ್ಕಾರದ ಭಾಗವಹಿಸುವಿಕೆ ಹೀಗೆ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಲ್ಲಿ ಸಾರ್ವಜನಿಕರಲ್ಲಿ ನ್ಯಾಯಾಂಗಕ್ಕೆ ಇರುವ ಗೌರವ ಇನ್ನಷ್ಟು ಹೆಚ್ಚುವುದರಲ್ಲಿ ಯಾವುದೇ ಸಂದೇಹವಿಲ್ಲ.Spread the love