ಲೇಖನಗಳು

ಅಪರಾಧಿಕ ನ್ಯಾಯಾಲಯಗಳು: ಏನು ? ಎತ್ತ ? ಭಾಗ – 1

ಸರ್ವೇಸಾಮಾನ್ಯವಾಗಿ ವಾರ್ತೆಗಳಲ್ಲಿ, ವಾರ್ತಾ ಪತ್ರಿಕೆಗಳಲ್ಲಿ,  ಅಪರಾಧ ಸುದ್ದಿಗಳನ್ನು ನೋಡುವಾಗ ಸೆಷನ್ಸ್ ನ್ಯಾಯಾಲಯ, ಎ.ಸಿ.ಎಂ.ಎಂ ನ್ಯಾಯಾಲಯ, ನ್ಯಾಯಿಕ ದಂಡಾಧಿಕಾರಿಗಳು ಹೀಗೆ ಹಲವಾರು ಪದಾವಳಿಗಳನ್ನು ಕೇಳುತ್ತಿರುತ್ತೇವೆ. ಹಾಗಾದರೆ, ಇವುಗಳ ಅರ್ಥವೇನು? ಇವುಗಳ ಅಸ್ತಿತ್ವವೇನು? ಈ ಪ್ರಶ್ನೆಗಳನ್ನು ಚೊಕ್ಕವಾಗಿ, ಸರಳವಾಗಿ ಉತ್ತರಿಸುವ ಪ್ರಯತ್ನ ಈ ಲೇಖನದ್ದು. 

ಭಾರತದಲ್ಲಿ ಅಪರಾಧಿಕ ನ್ಯಾಯಾಲಯಗಳ ರಚನೆ, ಅವುಗಳ ಅಧಿಕಾರ ವ್ಯಾಪ್ತಿ, ಅಪರಾಧ ಪ್ರಕರಣಗಳ ತನಿಖೆ, ಪೊಲೀಸರ ಅಧಿಕಾರ, ಹಾಗೂ ಪ್ರಕರಣಗಳ ಇತ್ಯರ್ಥ ಇವೇ ಮೊದಲಾದ  ಪ್ರಕ್ರಿಯೆಗಳ ಕುರಿತು ದಂಡ ಪ್ರಕ್ರಿಯಾ ಸಂಹಿತೆ, 1973 ಎಂಬ ಕಾನೂನು ಜಾರಿಯಲ್ಲಿದೆ. ಈ ಕಾಯ್ದೆಯು ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಜಾರಿಗೆ ಬಂದಿದ್ದರೂ ಸಹ ಇದರ ಬೇರುಗಳು ಬ್ರಿಟೀಷ್ ಮೂಲವನ್ನು ಹೊಂದಿವೆ. ಈ ಕಾಯ್ದೆಯು ಇನ್ನಿತರೆ ಉಪಬಂಧಗಳೊಂದಿಗೆ ಭಾರತದಲ್ಲಿ ಸ್ಥಾಪಿಸಬೇಕಾದ ಅಪರಾಧಿಕ ನ್ಯಾಯಾಲಯಗಳು ಯಾವುವು ಮತ್ತು ಅವುಗಳ ಭೌಗೋಳಿಕ ಹಾಗೂ ಅಧಿಕಾರ ವ್ಯಾಪ್ತಿಯೇನು ಎಂಬ ಚೌಕಟ್ಟನ್ನು ಕಲ್ಪಿಸುತ್ತದೆ. 

ಅಪರಾಧಿಕ ನ್ಯಾಯಾಲಯಗಳು ಎಂಬ ನಿರ್ದಿಷ್ಟವಾದ ತಲೆಬರಹ, ಬೇರೆ ರೀತಿಯ ನ್ಯಾಯಾಲಯಗಳೂ ಇರಬಹುದೆನ್ನುವ ಕುತೂಹಲವನ್ನುಂಟು ಮಾಡುವುದು ಸಹಜ. ಜಗತ್ತಿನಾದ್ಯಂತ ವಿವಿಧ ದೇಶಗಳ ನ್ಯಾಯಾಂಗ ವ್ಯವಸ್ಥೆಯಲ್ಲಿ, ಉನ್ನತ  ನ್ಯಾಯಾಲಯಗಳ ರಿಟ್ ಅಧಿಕಾರದಂತಹ ವಿಶೇಷ ಅಧಿಕಾರ ವ್ಯಾಪ್ತಿಯನ್ನು ಹೊರತುಪಡಿಸಿ, ಪ್ರಮುಖವಾಗಿ ಎರಡು ರೀತಿಯ ಅಧಿಕಾರ ವ್ಯಾಪ್ತಿಗಳು ಇರುತ್ತವೆ. ಅವೇ1) ವ್ಯಾವಹಾರಿಕ (ಸಿವಿಲ್) ಕಾರ್ಯವ್ಯಾಪ್ತಿ  ಹಾಗೂ 2)  ಅಪರಾಧಿಕ (ಕ್ರಿಮಿನಲ್) ಕಾರ್ಯವ್ಯಾಪ್ತಿ. 

ವ್ಯಾವಹಾರಿಕ ನ್ಯಾಯಾಲಯಗಳಲ್ಲಿ ಆಸ್ತಿ, ಹಣ, ಕೌಟುಂಬಿಕ, ಗ್ರಾಹಕ, ಕಂಪೆನಿ, ಇವೇ ಮೊದಲಾದ ರೀತಿಯ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಹಾಗಾದರೆ ಅಪರಾಧಿಕ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯೇನು? ಮೊದಲಿಗೆ ಅಪರಾಧ ಎಂದರೇನು? ದಂಡ ಪ್ರಕ್ರಿಯಾ ಸಂಹಿತೆಯಲ್ಲಿನ ವ್ಯಾಖ್ಯಾನವನ್ನಾಧರಿಸಿ, ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಯೋಗ್ಯ ಎಂದು ಪರಿಗಣಿಸಲಾದ ಯಾವುದೇ ಕ್ರಿಯೆ ಅಥವಾ ಲೋಪ/ಚ್ಯುತಿಯನ್ನು ಅಪರಾಧ ಎಂದೆನ್ನಬಹುದು. ಅದೇ ನೆಲೆಯಲ್ಲಿ ಮುಂದುವರೆದು ಹೇಳುವುದಾದರೆ, ಅಪರಾಧಿಕ ನ್ಯಾಯಾಲಯಗಳೆಂದರೆ, ಈ ಅಪರಾಧಗಳ ವಿವರಗಳನ್ನು ಕೇಳಿ, ಸಾಕ್ಷ್ಯಗಳನ್ನಾಧರಿಸಿ, ಅಪರಾಧಿಗಳನ್ನು ಶಿಕ್ಷಿಸುವ ಹಾಗೂ ನಿರಪರಾಧಿಗಳನ್ನು ಬಿಡುಗಡೆಗೊಳಿಸುವ ಮೂಲಕ ಪ್ರಕರಣಗಳನ್ನು ನಿರ್ಧರಿಸಿ ಸಮಾಜಕ್ಕೆ ಹಾಗೂ ಸಂತ್ರಸ್ತರಿಗೆ ನ್ಯಾಯವನ್ನೊದಗಿಸುವ  ನ್ಯಾಯಾಲಯಗಳನ್ನು ಅಪರಾಧಿಕ ನ್ಯಾಯಾಲಯಗಳೆನ್ನಬಹುದು. 

ದಂಡಪ್ರಕ್ರಿಯಾ ಸಂಹಿತೆಯು ಉಚ್ಚ ನ್ಯಾಯಾಲಯಗಳು ಹಾಗೂ ಇನ್ನಿತರೆ ಕಾನೂನಿನ ಅಡಿಯಲ್ಲಿ ಸ್ಥಾಪಿಸಬಹುದಾದಂತಹ ವಿಶೇಷ ನ್ಯಾಯಾಲಯಗಳನ್ನು ಹೊರತುಪಡಿಸಿ ನಾಲ್ಕು ರೀತಿಯ ನ್ಯಾಯಾಲಯಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸುತ್ತದೆ. ಈ ನ್ಯಾಯಾಲಯಯಗಳೆಲ್ಲವೂ ಸಾಮಾನ್ಯವಾಗಿ ಜಿಲ್ಲಾ ಮಟ್ಟದ ನ್ಯಾಯಾಲಯಗಳಾಗಿರುತ್ತವೆ. ಅವುಗಳೆಂದರೆ: 

  • ಸೆಷನ್ಸ್ ಕೋರ್ಟ್ ಅಥವಾ ಸತ್ರ ನ್ಯಾಯಾಲಯ; 
  • ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಆಪ್ ಫರ್ಸ್ಟ್ ಕ್ಲಾಸ್ (ಜೆ.ಎಂ.ಎಫ್.ಸಿ) ಅಥವಾ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಹಾಗೂ ಮಹಾನಗರ/ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅಥವಾ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯ; 
  • ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಆಪ್ ಸೆಕಂಡ್ ಕ್ಲಾಸ್ ಅಥವಾ ದ್ವಿತೀಯ ದರ್ಜೆಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಹಾಗೂ 
  • ಎಕ್ಸೆಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅಥವಾ ಕಾರ್ಯಕಾರಿ ದಂಡಾಧಿಕಾರಿಗಳ ನ್ಯಾಯಾಲಯ. 

ಸತ್ರ ನ್ಯಾಯಾಲಯದ ಬಗ್ಗೆ ತಿಳಿದುಕೊಳ್ಳುವುದರ ಮೊದಲು ಸಂಹಿತೆಯಡಿಯಲ್ಲಿ ವಿವರಿಸಲಾದ ವಿವಿಧ ರೀತಿಯ ದಂಡಾಧಿಕಾರಿಗಳ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ. ಪ್ರಥಮ ಹಾಗೂ ದ್ವಿತೀಯ ಎಂಬ ಎರಡು ಬಗೆಯ ದರ್ಜೆಗಳನ್ನು ಹೊರತುಪಡಿಸಿದರೆ ನಮಗೆ ವಿಶಿಷ್ಟವೆನಿಸುವುದು, ನ್ಯಾಯಿಕ ಹಾಗೂ ಕಾರ್ಯಕಾರಿ ದಂಡಾಧಿಕಾರಿ ಎಂಬ ಎರಡು ವಿಭಿನ್ನ ಪದನಾಮಗಳು. ದಂಡ ಪ್ರಕ್ರಿಯಾ ಸಂಹಿತೆಯಡಿಯಲ್ಲಿ ನೀಡಲಾದ ನ್ಯಾಯಿಕ ಅಧಿಕಾರಗಳನ್ನು ಹೊರತುಪಡಿಸಿ ಇನ್ನಾವುದೇ ಕಾಯ್ದೆಯ ಅಡಿಯಲ್ಲಿ, ಸಾಕ್ಷ್ಯಗಳನ್ನು ತೂಗುವ ಹಾಗೂ ಯಾವುದೇ ಪ್ರಕರಣದಲ್ಲಿ ಯಾವನೇ ವ್ಯಕ್ತಿಗೆ ಶಿಕ್ಷೆ ವಿಧಿಸಬಹುದಾದಂತಹ ಅಥವಾ ಯಾವುದೇ ವ್ಯಕ್ತಿಯನ್ನು ಯಾವುದೇ ಪ್ರಕರಣ ಅಥವಾ ತನಿಖೆಯು ಬಾಕಿ ಇರುವಾಗ ಬಂಧನದಲ್ಲಿರಿಸುವ ಅಥವಾ ಯಾವನೇ ವ್ಯಕ್ತಿಯ ವಿರುದ್ಧ ಪ್ರಕರಣ ನಡೆಸಲು ಇನ್ಯಾವುದೇ ನ್ಯಾಯಾಲಯದ ಮುಂದೆ ಕಳುಹಿಸುವಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ವ್ಯಾಪ್ತಿಯನ್ನು ನ್ಯಾಯಿಕ ದಂಡಾಧಿಕಾರಿಗಳು ಹೊಂದಿರುತ್ತಾರೆ. ಇನ್ನು ಸಂಹಿತೆಯಡಿಯಲ್ಲಿ ನೀಡಲಾದ ಕಾರ್ಯಕಾರಿ ಅಧಿಕಾರಗಳನ್ನು ಹೊರತುಪಡಿಸಿ ಇನ್ನಾವುದೆ ಕಾಯ್ದೆಯಡಿಯಲ್ಲಿ ಲೈಸೆನ್ಸು (ರಹದಾರಿ)ಗಳನ್ನು ನೀಡುವ, ಅಮಾನತ್ತಿನಲ್ಲಿಡುವ ಅಥವಾ ರದ್ದುಪಡಿಸುವ ಅಥವಾ ಯಾವನೇ ವ್ಯಕ್ತಿಯ ವಿರುದ್ಧ ಅಭಿಯೋಜನೆ ನಡೆಸುವ ಅಥವಾ ಅಭಿಯೋಜನೆಯನ್ನು ವಾಪಾಸ್ ಪಡೆಯುವಂತಹ ಅಧಿಕಾರ ವ್ಯಾಪ್ತಿಯನ್ನು ಕಾರ್ಯಕಾರಿ ದಂಡಾಧಿಕಾರಿಗಳು ಹೊಂದಿರುತ್ತಾರೆ. 

ಕಾರ್ಯಕಾರಿ ದಂಡಾಧಿಕಾರಿಗಳು:  

ದಂಡ ಪ್ರಕ್ರಿಯಾ ಸಂಹಿತೆಯ ಕಲಂ 20 ರ ಅಡಿಯಲ್ಲಿ ಪ್ರತಿ ಜಿಲ್ಲೆ ಅಥವಾ ಮಹಾನಗರಗಳಿಗೆ ಅಗತ್ಯವೆನಿಸಿದಷ್ಟು ಕಾರ್ಯಕಾರಿ ದಂಡಾಧಿಕಾರಿಗಳನ್ನು ನೇಮಿಸುವ ಅಧಿಕಾರವನ್ನು ರಾಜ್ಯ ಸರಕಾರಗಳು ಹೊಂದಿರುತ್ತವೆ ಹಾಗೂ ಅವರಲ್ಲಿ ಒಬ್ಬರನ್ನು ಜಿಲ್ಲಾ ದಂಡಾಧಿಕಾರಿಯನ್ನಾಗಿಯೂ, ಒಬ್ಬರನ್ನು ಅಪರ ಜಿಲ್ಲಾ ದಂಡಾಧಿಕಾರಿಯನ್ನಾಗಿಯೂ ಹಾಗೂ ಜಿಲ್ಲೆಯೊಳಗಿನ ಉಪ-ವಿಭಾಗಗಳ ವ್ಯಾಪ್ತಿಯಲ್ಲಿ ಉಪ-ವಿಭಾಗ ದಂಡಾಧಿಕಾರಿಯನ್ನಾಗಿ ನೇಮಿಸಲಾಗುತ್ತದೆ. ಸಾಮಾನ್ಯವಾಗಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಉಪ ವಿಭಾಧಿಕಾರಿ ಹಾಗೂ ತಹಶೀಲ್ದಾರರುಗಳನ್ನು ಕಾರ್ಯಕಾರಿ ದಂಡಾಧಿಕಾರಿಗಳನ್ನಾಗಿ ನೇಮಿಸಲಾಗುತ್ತದೆ ಹಾಗೂ ಮಹಾನಗರಗಳಲ್ಲಿ/ ಕಮಿಷನರೇಟುಗಳಲ್ಲಿ ಪೊಲೀಸ್ ಕಮೀಷನರುಗಳು ಹಾಗೂ ಉಪ ಪೊಲೀಸ್ ಕಮೀಷನರುಗಳನ್ನು ಕಾರ್ಯಕಾರಿ ದಂಡಾಧಿಕಾರಿಗಳನ್ನಾಗಿ ನೇಮಿಸಲಾಗುತ್ತದೆ.ಅದರಂತೆ, ಸಾಮಾನ್ಯವಾಗಿ ಜಿಲ್ಲಾಧಿಕಾರಿಗಳನ್ನು ಜಿಲ್ಲಾ ದಂಡಾಧಿಕಾರಿಗಳನ್ನಾಗಿಯೂ, ಅಪರ ಜಿಲ್ಲಾಧಿಕಾರಿಗಳನ್ನು ಅಪರ ಜಿಲ್ಲಾ ದಂಡಾಧಿಕಾರಿಗಳನ್ನಾಗಿಯೂ, ಉಪ ವಿಭಾಗಾಧಿಕಾರಿಗಳನ್ನು ಉಪ ವಿಭಾಗ ದಂಡಾಧಿಕಾರಿಗಳನ್ನಾಗಿಯೂ ನೇಮಿಸಲಾಗುತ್ತದೆ.  

ದಂಡ ಸಂಹಿತೆಯ ಅಡಿಯಲ್ಲಿ ಅನಧಿಕೃತ ಸಮಾವೇಶಗಳನ್ನು ಚದುರಿಸುವ, ಸಾರ್ವಜನಿಕ ಉಪದ್ರವಗಳನ್ನು ತೆಗೆದುಹಾಕುವ ಹಾಗೂ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತಹ ಕಾರ್ಯಕಾರಿ ಅಧಿಕಾರಗಳನ್ನು ಕಾರ್ಯಕಾರಿ ದಂಡಾಧಿಕಾರಿಗಳು ಹೊಂದಿರುತ್ತಾರೆ. ಉದಾಹರಣೆಗೆ: ಯಾವುದಾದರೂ ಗಲಭೆಯಂತಹ ಪರಿಸ್ಥಿತಿಗಳಲ್ಲಿ ಕಲಂ 144 ಜಾರಿಯಲ್ಲಿದೆ ಎಂದು ನಾವು ಓದಿರುತ್ತೇವೆ ಇಂತಹ ಆದೇಶಗಳನ್ನು ಜಾರಿ ಮಾಡುವುದು, ಸಮಾಜದಲ್ಲಿ ಶಾಂತಿ ಕದಡಬಹುದಾದ ವ್ಯಕ್ತಿಗಳಿಂದ ಶಾಂತಿ ಕಾಪಾಡುವಂತೆ ಆದೇಶಿಸಿ ಭದ್ರತಾ ಬಾಂಡ್ ಪಡೆಯುವುದು ಹೀಗೆ ಇನ್ನೂ ಹಲವು ಕಾರ್ಯಕಾರಿ ಜವಾಬುದಾರಿಗಳು ಹಾಗೂ ಪ್ರಾಧಿಕಾರಗಳನ್ನು ಕಾರ್ಯಕಾರಿ ದಂಡಾಧಿಕಾರಿಗಳು ಹೊಂದಿರುತ್ತಾರೆ. 

ನ್ಯಾಯಿಕ ದಂಡಾಧಿಕಾರಿಗಳು (ಜ್ಯುಡೀಷಿಯಲ್ ಮ್ಯಾಜಿಸ್ಟ್ರೇಟ್ಸ್):

ಈ ಮೊದಲೇ ಓದಿದಂತೆ, ಯಾವುದೇ ಅಪರಾಧ ಪ್ರಕರಣಗಳನ್ನು ಇತ್ಯರ್ಥಪಡಿಸುವ ಹಾಗೂ ಅಪರಾಧಿಗಳಿಗೆ ಶಿಕ್ಷೆ ನೀಡುವಂತಹ ನ್ಯಾಯಿಕ ಅಧಿಕಾರಗಳನ್ನು ನ್ಯಾಯಿಕ ದಂಡಾಧಿಕಾರಿಗಳು ಹೊಂದಿರುತ್ತಾರೆ.

ನಾವು ಜೆ.ಎಂ.ಎಫ್.ಸಿ ನ್ಯಾಯಾಲಯಗಳ ಬಗ್ಗೆ ಕೇಳಿರುತ್ತೇವೆ ಅಥವಾ ಓದಿರುತ್ತೇವೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಎಂದೇ ಕರೆಯಲ್ಪಡುವ ಈ ನ್ಯಾಯಾಲಯಗಳು ಸಾಮಾನ್ಯವಾಗಿ ತಾಲ್ಲೂಕು ಮಟ್ಟದಲ್ಲಿರುತ್ತವೆ. ಪ್ರತಿ ತಾಲ್ಲೂಕಿನಲ್ಲಿ ಒಬ್ಬರು ಅಥವಾ ಹೆಚ್ಚು ಜ್ಯುಡೀಷಿಯಲ್ ಮ್ಯಾಜಿಸ್ಟ್ರೇಟರುಗಳಿರುತ್ತಾರೆ. ಮ್ಯಾಜಿಸ್ಟ್ರೇಟ್ ಎಂಬುದು ಯಾವುದೇ ನೇರ ನೇಮಕಾತಿಯಿಂದ ತುಂಬಲಾದ ನ್ಯಾಯಾಂಗದ ಹುದ್ದೆಯಾಗಿರುವುದಿಲ್ಲ. ಜಿಲ್ಲಾ/ ತಾಲೂಕು ಮಟ್ಟದಲ್ಲಿನ ವ್ಯವಹಾರಿಕ/ ದಿವಾನಿ ನ್ಯಾಯಾಧೀಶರು (ಸಿವಿಲ್ ಜಡ್ಜ್)ಗಳಿಗೆ ದಂಡ ಸಂಹಿತೆಯಡಿ ಮ್ಯಾಜಿಸ್ಟ್ರೇಟರುಗಳಿಗೆ ನೀಡಲಾದ ಅಧಿಕಾರಗಳನ್ನು ಪ್ರತ್ಯಾಯೋಜಿಸಲಾಗಿರುತ್ತದೆ. ಅಂದರೆ, ಈ ನ್ಯಾಯಾಧೀಶರುಗಳು ವ್ಯವಹಾರಿಕ ದಾವೆಗಳನ್ನು ಆಲಿಸುವಾಗ ದಿವಾನಿ ನ್ಯಾಯಾಧೀಶರೆಂದು ಹಾಗೂ ಅದೇ ಕುರ್ಚಿಯಲ್ಲಿ ಕುಳಿತು ಅಪರಾಧಿಕ ಪ್ರಕರಣಗಳನ್ನು ನಡೆಸುವಾಗ ಮ್ಯಾಜಿಸ್ಟ್ರೇಟರುಗಳೆಂದು ಕರೆಯಲ್ಪಡುತ್ತಾರೆ. ಅಷ್ಟೇ ಅಲ್ಲದೇ ತಮ್ಮ ಕರ್ತವ್ಯಗಳನ್ನು ಅನುಕ್ರಮವಾಗಿ ಸಂಬಂಧಿಸಿದ ಸಿವಿಲ್ ಅಥವಾ ಅಪರಾಧಿಕ ಕಾನೂನಿನ ಅನ್ವಯವೇ ನಡೆಸುತ್ತಾರೆ.  

ನ್ಯಾಯಿಕ ದಂಡಾಧಿಕಾರಿಗಳು ಹಾಗೂ ಅವರ ಅಧಿಕಾರಗಳ ಕುರಿತು ಸಂಹಿತೆಯ ಕಲಂ 11 ರಿಂದ  19 ಹಾಗೂ 29ರಲ್ಲಿ ಹೇಳಿದೆ. ಮಹಾನಗರವಲ್ಲದ ಪ್ರತೀ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರವು ಅಗತ್ಯವೆನಿಸಿದಷ್ಟು ಪ್ರಥಮ ದರ್ಜೆ ಅಥವಾ ದ್ವಿತೀಯ ದರ್ಜೆಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯಗಳನ್ನು ಸ್ಥಾಪಿಸಬಹುದು. ಆದರೆ, ಈ ಹುದ್ದೆಗಳು ನ್ಯಾಯದಾನ ವ್ಯವಸ್ಥೆಯ ಭಾಗವಾಗಿರುವುದರಿಂದ ಸಂಹಿತೆಯು ಇಂತಹ ಸ್ಥಾಪನೆಗಳನ್ನು ಸಂಬಂಧಿಸಿದ ಉಚ್ಚನ್ಯಾಯಾಲಯಗಳೊಂದಿಗೆ ಸಮಾಲೋಚಿಸಿದ ನಂತರವೇ ಮಾಡಬೇಕು. ಅದಲ್ಲದೇ, ಈ ನ್ಯಾಯಾಲಯಗಳ ಪೀಠಾಸೀನಾಧಿಕಾರಿಗಳನ್ನು ಉಚ್ಚ ನ್ಯಾಯಾಲಯಗಳೇ ನೇಮಿಸಬೇಕು ಎಂಬುದು ಸಂಹಿತೆಯ ನಿಯಮ. ಮುಂದುವರೆದು ಪ್ರಥಮ ಹಾಗೂ ದ್ವಿತೀಯ ದರ್ಜೆಯ ನ್ಯಾಯಿಕ ದಂಡಾಧಿಕಾರಿಗಳಲ್ಲಿನ ವ್ಯತ್ಯಾಸದ ಕುರಿತು ಹೇಳುವುದಾದರೆ, ಆ ನ್ಯಾಯಾಲಯಗಳು ವಿಧಿಸಬಹುದಾದ ಶಿಕ್ಷೆಯ ಪ್ರಮಾಣ ಹಾಗೂ ಹೊರಡಿಸಬಹುದಾದ ಆದೇಶಗಳ ಸ್ವಾಯತ್ತತೆಯಲ್ಲಿ ಆ ವ್ಯತ್ಯಾಸಗಳನ್ನು ಕಾಣಬಹುದು. ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ದ್ವಿತೀಯ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಿಗಿಂತಲೂ ಹೆಚ್ಚು ಅಧಿಕಾರಗಳನ್ನು ಹೊಂದಿರುತ್ತಾರೆ. 

ಮುಖ್ಯ ನ್ಯಾಯಿಕ ದಂಡಾಧಿಕಾರಿ ಅಥವಾ ಚೀಫ್ ಜ್ಯುಡೀಷಿಯಲ್ ಮ್ಯಾಜಿಸ್ಟ್ರೇಟ್:

ದಂಡ ಸಂಹಿತೆಯ ಕಲಂ 12ರ ಅಡಿಯಲ್ಲಿ ಉಚ್ಚ ನ್ಯಾಯಾಲಯವು ಪ್ರತಿ ಜಿಲ್ಲೆಯಲ್ಲಿನ ಒಬ್ಬರು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳನ್ನು ಆ ಜಿಲ್ಲೆಯ ಮುಖ್ಯ ನ್ಯಾಯಿಕ ದಂಡಾಧಿಕಾರಿಯನ್ನಾಗಿ (ಸಿ.ಜೆ.ಎಂ) ನೇಮಿಸುತ್ತದೆ ಹಾಗೂ ಒಬ್ಬರಿಗಿಂತಲೂ ಹೆಚ್ಚಿನ ಅಪರ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳನ್ನು ಸಹ ನೇಮಿಸುತ್ತದೆ (ಎ.ಸಿ.ಜೆ.ಎಂ). ಅಪರ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಿಕ ಅಧಿಕಾರಗಳು ಸಿ.ಜೆ.ಎಂ ರವರ ಅಧಿಕಾರಗಳಿಗೆ ಸಮಾನವಾಗಿರುತ್ತದೆ ಹಾಗೂ ಅವರು ಸಿ.ಜೆ.ಎಂ ರವರ ಅಧೀನರಾಗಿರುವುದಿಲ್ಲ. ಆದರೆ, ಜಿಲ್ಲೆಯಲ್ಲಿನ ಇತರೆ ಎಲ್ಲಾ ನ್ಯಾಯಿಕ ದಂಡಾಧಿಕಾರಿಗಳು ಉಚ್ಚ ನ್ಯಾಯಾಲಯದ ಸಾಮಾನ್ಯ ಅಧೀನತೆಗೆ ಒಳಪಟ್ಟು, ಸಿ.ಜೆ.ಎಂ ರವರ ಅಧೀನದಲ್ಲಿರುತ್ತಾರೆ. ಅದಲ್ಲದೇ ಇವರು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಿಗಿಂತಲೂ ಹೆಚ್ಚಿನ ಶಿಕ್ಷೆ ವಿಧಿಸುವ ಅಧಿಕಾರ, ಎ.ಸಿ.ಜೆ.ಎಂ ಗಳ ನಡುವೆ ಪ್ರಕರಣಗಳನ್ನು ಹಂಚಿಕೆ ಮಾಡುವ ಹಾಗೂ ಇತರೆ ನ್ಯಾಯಿಕ ದಂಡಾಧಿಕಾರಿಗಳ ಕಾರ್ಯಕ್ಷೇತ್ರವನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿರುತ್ತಾರೆ. 

ಮುಖ್ಯಮಹಾನಗರ ದಂಡಾಧಿಕಾರಿಗಳು, ಅಪರಮುಖ್ಯಮಹಾನಗರ ದಂಡಾಧಿಕಾರಿಗಳು ಹಾಗೂ ಮಹಾನಗರ ದಂಡಾಧಿಕಾರಿಗಳು (ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, ಡೆಪ್ಯುಟಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, ಹಾಗೂ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್):

ಹತ್ತು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಮಹಾನಗರ ಅಥವಾ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಉಚ್ಚ ನ್ಯಾಯಾಲಯದೊಂದಿಗೆ ಸಮಾಲೋಚಿಸಿ ರಾಜ್ಯ ಸರಕಾರವು ಅಗತ್ಯವೆನಿಸಿದಷ್ಟು ಮಹಾನಗರದಂಡಾಧಿಕಾರಿಗಳ ನ್ಯಾಯಾಲಯಗಳನ್ನು  ಸ್ಥಾಪಿಸಬಹುದಾಗಿರುತ್ತದೆ. ಈ ನ್ಯಾಯಾಲಯಗಳಿಗೆ ಪೀಠಾಸೀನಾಧಿಕಾರಿಗಳನ್ನು ಉಚ್ಚ ನ್ಯಾಯಾಲಯವು ನೇಮಿಸುತ್ತದೆ ಹಾಗೂ ಪ್ರತಿಯೊಬ್ಬ ಮಹಾನಗರ ದಂಡಾಧಿಕಾರಿಯ ಮಹಾನಗರದಾದ್ಯಂತ ಕಾರ್ಯವ್ಯಾಪ್ತಿ ಹೊಂದಿರುತ್ತಾರೆ. ಹಾಗೆಯೇ, ಉಚ್ಚ ನ್ಯಾಯಾಲಯವು ಪ್ರತಿ ಮಹಾನಗರ ಪ್ರದೇಶಕ್ಕೆ ಒಬ್ಬ ಮಹಾನಗರ ದಂಡಾಧಿಕಾರಿಯವರನನ್ನು ಮುಖ್ಯ ಮಹಾನಗರ ದಂಡಾಧಿಕಾರಿಯನ್ನಾಗಿ ಹಾಗೂ ಅಲ್ಲಿನ ಯಾರೇ ಮಹಾನಗರ ದಂಡಾಧಿಕಾರಿಗಳನ್ನು ಅಪರ ಮುಖ್ಯ ಮಹಾನಗರ ದಂಡಾಧಿಕಾರಿಯನ್ನಾಗಿ ನೇಮಿಸಬಹುದು. ಇವರ ಅಧಿಕಾರ ವ್ಯಾಪ್ತಿಯು ಅನುಕ್ರಮವಾಗಿ ಜಿಲ್ಲಾ ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗೂ ಅಪರ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ಅಧಿಕಾರಗಳಿಗೆ ಸಮಾನವಾಗಿರುತ್ತವೆ.

ಸೆಷನ್ಸ್ ನ್ಯಾಯಾಲಯ ಅಥವಾ ಸತ್ರ ನ್ಯಾಯಾಲಯ ಹಾಗೂ ಈ ಎಲ್ಲಾ ನ್ಯಾಯಾಲಯಗಳ ಕಾರ್ಯ ಹಾಗೂ ಅಧಿಕಾರಗಳ ಕುರಿತು ಲೇಖನ ಮುಂದುವರೆಯುವುದು….  

ಲೋಕೇಶ್ ಕೆಂಪಣ್ಣ ಅವರು ಕಾನೂನು ವಿದ್ಯಾರ್ಥಿಯಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Spread the love