ಲೇಖನಗಳು

ಕನ್ನಡ ಸಮಗ್ರ ಅಭಿವೃದ್ಧಿ ವಿಧೇಯಕ: ನಿಮಗೆಷ್ಟು ಗೊತ್ತು ?

ಆಡುವ ನುಡಿ, ಹುಟ್ಟಿದ ನೆಲವನ್ನು ತಾಯಿಗೆ ಹೋಲಿಸುವ ನಮ್ಮ ಪರಂಪರೆ, ಮನಸ್ಥಿತಿ ಎಷ್ಟರ ಮಟ್ಟಿಗೆ ಈ ಭಾವಗಳಿಗೆ ಗಟ್ಟಿಯಾಗಿ ಅಂಟಿಕೊಂಡಿದೆ ಎಂದು ತೋರಿಸುತ್ತದೆ. ನಾವು ಹುಟ್ಟಿದ ಮಣ್ಣು, ಆಡುವ ಭಾಷೆ ನಮ್ಮ ವ್ಯಕ್ತಿತ್ವದ ಭಾಗವೇ ಆಗಿ ಹೋಗುತ್ತದೆ, ಅಷ್ಟೇ ಅಲ್ಲ, ನಮ್ಮ ಗುರುತಿನ ಭಾಗವೂ ಆಗುತ್ತದೆ. ನಾವು ನಾವಾಗುವ ಶಿಕ್ಷಣ, ಅವಕಾಶಗಳು, ಇತರ ಕೌಶಲ್ಯಗಳು ಇವೆಲ್ಲವುಗಳಲ್ಲೂ ಈ ಎರಡು ಅಂಶಗಳು ಮಹತ್ತರವಾದ ಪರಿಣಾಮವನ್ನು ಬೀರುವುದರಿಂದಲೇ ಏನೋ ನುಡಿ- ನೆಲವನ್ನು ತಾಯಿಗೆ ಹೋಲಿಸುವುದು. ಅಷ್ಟೇ ಅಲ್ಲದೆ, ತರ್ಕಕ್ಕೆ ಸಿಗಲಾರದ ಸೆಳೆತ ನಾಡು – ನುಡಿಗಿರುವುದರಿಂದಲೂ ಹೆತ್ತಮ್ಮ – ಕಂದನ ಪ್ರೀತಿಗೆ ಇದನ್ನು ಹೋಲಿಸುವುದು ಅತಿಶಯೋಕ್ತಿ ಆಗಲಾರದು. ಆದರೆ ಇದೊಂದು ಭಾವನಾತ್ಮಕ ಬೆಸುಗೆ ಮಾತ್ರವಲ್ಲದೆ, ನಮ್ಮ ವ್ಯವಸ್ಥೆಯ ಬುನಾದಿಯೂ ಆಗಿದೆ. ಭಾರತ ಹುಟ್ಟಿದಾಗ, ಭಾಷೆಗಳು ದೇಶದ ಒಗ್ಗಟ್ಟನ್ನು ಒಡೆಯುವುದೆಂಬ ಹೆದರಿಕೆ ದಟ್ಟವಾಗಿತ್ತಾದರೂ, ಕಾಲಕ್ರಮೇಣ ಆಡಳಿತದ ಅನುಕೂಲತೆ ಮತ್ತು ಅಗತ್ಯತೆ, ಜನರ ಆಗ್ರಹದ ಒತ್ತಡದ ಮೇರೆಗೆ ಭಾಷಾವಾರು ರಾಜ್ಯಗಳ ರಚನೆಯಾದವು. ಒಂದು ದೇಶವಾಗಿ ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿದ್ದ ಹಲವಾರು ಕನಸಿನ ಪರಿಕಲ್ಪನೆಗಳೊಟ್ಟಿಗೆ ಬದುಕುತ್ತಾ, ಸಿದ್ಧಾಂತಗಳನ್ನು ನಿತ್ಯಜೀವನದ ನಿಷ್ಠುರತೆಗೆ ಒಡ್ಡಿ, ಹರಳಾಗಿಸುತ್ತಾ ನಡೆದಿರುವ ನಾವು ಒಂದು ಭಾಷೆ – ಒಗ್ಗಟ್ಟು ಎಂಬ ಆಶಯದಿಂದ ತುಂಬ ದೂರ ನಡೆದಿದ್ದೇವೆ. ಇಂಗ್ಲೀಷಿನ ಅಗತ್ಯತೆಯನ್ನು ಮನಗಂಡು ಅಧಿಕೃತ ಭಾಷೆಗಳ ಕಾಯ್ದೆ, 1963 ರ ಪ್ರಕಾರ ಇಂಗ್ಲೀಷನ್ನು ಅಧಿಕೃತ ಭಾಷೆಯಾಗಿ ಮುಂದುವರಿಸಿಕೊಂಡು ಹೋಗಿದ್ದೇವೆ, ಸಂವಿಧಾನದಲ್ಲಿ ಕಡ್ಡಾಯ ಮಾಡಿದ್ದರಿಂದ ತಮಿಳುನಾಡನ್ನು ಹೊರತು ಪಡಿಸಿ ದಕ್ಷಿಣದ ರಾಜ್ಯಗಳು ಒಕ್ಕೂಟ ರಾಜ್ಯದೊಟ್ಟಿಗಿನ ಸಂವಹನವನ್ನು, ಮೂರು ಭಾಷೆಯ ನೀತಿಯಡಿ ಶಾಲೆಯಲ್ಲಿ ಕಲಿತ ಹರುಕು – ಮುರುಕು ಹಿಂದಿಯಲ್ಲಿ ತೂಗಿಸಿಕೊಳ್ಳುತ್ತಾ ಬಂದಿವೆ, ಇವೆಲ್ಲದರ ಮತ್ತು ಜಾಗತೀಕರಣದ ನಡುವೆ, ತಮ್ಮ ತಮ್ಮ ತಾಯ್ನುಡಿಯನ್ನು ಕಾಪಾಡಿಕೊಂಡು ಹೋಗಲು ಹಲವು ಸಮುದಾಯಗಳು ಹೆಣಗುತ್ತಿವೆ. ಕಾಸ್ಮೋಪಾಲಿಟನ್ ಹಣೆಪಟ್ಟಿ ಹೊತ್ತ ಬೆಂಗಳೂರು, ಹಲವು ರಾಜ್ಯಗಳೊಂದಿಗೆ ಗಡಿ ಹಂಚಿಕೊಳ್ಳುವ ರಾಜ್ಯ, ಬೇರೆ ರಾಜ್ಯದವರೊಟ್ಟಿಗೆ ಅವರ ಭಾಷೆಯಲ್ಲೂ, ಕನ್ನಡಿಗರೊಂದಿಗೆ ಇಂಗ್ಲೀಶಲ್ಲಿಯೂ ಮಾತಾಡುವ ಕನ್ನಡಿಗರು, ಜೊತೆಗೆ ಒಕ್ಕೂಟ ಸರಕಾರದ ಅಂಕುಶವಿಲ್ಲದ, ಭಂಡ ಹಿಂದಿ ಹೇರಿಕೆಯ ಪ್ರಯತ್ನಗಳು ಇವೆಲ್ಲದರ ನಡುವೆ ಕನ್ನಡ – ಕನ್ನಡಿಗರು ಬಡವಾಗುತ್ತಿದ್ದಾರೆ ಎಂಬ ಕೂಗಿಗೆ ಹೆದರಿ, ಕರ್ನಾಟಕ ಸರಕಾರ ಕಳೆದ ತಿಂಗಳು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, 2022 ವನ್ನು ವಿಧಾನಸಭೆಯಲ್ಲಿ ಮಂಡಿಸಿತು. ವಿಧೇಯಕದ್ದಲ್ಲಿ ಏನೇನಿದೆ ಎಂಬುದರ ಬಗ್ಗೆ ಬೆಳಕು ಚೆಲ್ಲಲು ಈ ಬರಹ. 

ಕನ್ನಡಿಗರ ಒಳಿತಿಗಾಗಿ ಮತ್ತು ಕನ್ನಡ ಸಮಗ್ರ ಅಭಿವೃದ್ಧಿಗಾಗಿ ತಂದಿರುವ ಕಾನೂನು ಎಂದು ಪೀಠಿಕೆಯಲ್ಲಿ ಹೇಳಿಕೊಂಡ ಕಾನೂನು ಉದ್ದೇಶ ಮತ್ತು ಕಾರಣಗಳ ಹೇಳಿಕೆಯಲ್ಲಿ ಹಲವು ಸರಕಾರೀ ಕಚೇರಿಗಳಲ್ಲಿ, ಸಾರ್ವಜನಿಕ ಸಂಸ್ಥೆಗಳಲ್ಲಿ ಇನ್ನೂ ಕನ್ನಡ ಎಲ್ಲ ಹಂತದಲ್ಲಿ ಬಳಸದೆ ಇರುವುದನ್ನು ಗಮನಿಸುತ್ತದೆ. ಅಷ್ಟೇ ಅಲ್ಲದೆ, ಉನ್ನತ ಶಿಕ್ಷಣದಲ್ಲೂ ಕನ್ನಡದ ಬಳಕೆ ಆಗಬೇಕಾಗಿರುವುದನ್ನು ಮನಗಂಡಿದೆ. ಈ ಕಾನೂನಿನಲ್ಲಿ 31 ಸೆಕ್ಷನ್ನುಗಳಿದ್ದು ಮೊದಲ ನೋಟಕ್ಕೆ ಒಂದು ಒಳ್ಳೆಯ ಪ್ರಯತ್ನ ಎಂದು ಹೇಳಬಹುದಾದ ಕಾನೂನಾಗಿದೆ. ಆದರೆ ಕರ್ನಾಟಕ ಸಾಹಿತ್ಯ ಪರಿಷತ್ತೂ ಒಳಗೊಂಡಂತೆ ಹಲವಾರು ಸಾಹಿತಿಗಳು, ತಜ್ಞರು ಕಾನೂನಿಗೆ ಶಕ್ತಿ ಸಾಲದು ಎಂದಿದ್ದಾರೆ. ವಿಧೇಯಕವನ್ನು ಕಸಾಪದ ಸಲಹೆ – ಸೂಚನೆಗಳನ್ನನುಸರಿಸಿ ಮರುಮಂಡಿಸಬೇಕೆಂದು ಇತ್ತೀಚೆಗಷ್ಟೇ ಕಸಾಪ ಆಗ್ರಹಿಸಿದೆ. ಅದೇನೇ ಇರಲಿ, ಈಗಿರುವ ಹಾಗೆ ವಿಧೇಯಕದಲ್ಲಿ ಏನಿದೆ ಎಂಬುದನ್ನು ನೋಡೋಣ. 

ಕಲಂ 2 (ಇ) ಕನ್ನಡಿಗ ಎಂಬ ಪದಕ್ಕೆ ಅರ್ಥ ಕೊಡುತ್ತದೆ. ಇದರ ಪ್ರಕಾರ ಹದಿನೈದು ವರ್ಷ ಅಥವಾ ಹೆಚ್ಚಿನ ಕಾಲಾವಧಿಯಲ್ಲಿ ಕರ್ನಾಟಕದಲ್ಲಿ ವಾಸವಿರುವ, ಅಥವಾ ತಂದೆ- ತಾಯಿ ಅಥವಾ ಕಾನೂನುಸಮ್ಮತ ಪಾಲಕರು  ವಾಸವಿರುವ, ಕನ್ನಡ ಓದಲು ಮತ್ತು ಬರೆಯಲು ಬರುವ ವ್ಯಕ್ತಿಯನ್ನು ಕನ್ನಡಿಗ ಎಂದು ಲೆಕ್ಕಿಸಲಾಗುತ್ತದೆ. ಅಂದರೆ ಇದರರ್ಥ ಕರ್ನಾಟಕದಲ್ಲಿ ಹುಟ್ಟಿಯೇ ಇರಬೇಕೆಂದೇನಿಲ್ಲ. 

ಕಲಂ 4 ರ ಪ್ರಕಾರ ರಾಜ್ಯದ ಎಲ್ಲಾ ವಿಧೇಯಕಗಳಲ್ಲಿ ಮತ್ತು ಅಂಗೀಕರಿಸಲ್ಪಟ್ಟ ಕಾನೂನುಗಳಲ್ಲಿ, ಸರಕಾರದ, ಸ್ಥಳೀಯ ಸಂಸ್ಥೆಗಳ, ನಿಗಮಗಳ, ಸರಕಾರೀ ಉದ್ಯಮಗಳ, ಸಹಕಾರೀ ಸಂಸ್ಥೆಗಳ ಎಲ್ಲ ಆದೇಶ, ನಿಯಮ ಮತ್ತು ವಿನಿಮಯಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಇಲ್ಲಿಯವರೆಗೆ ಜಾರಿಗೆ ತಂದ, ಕನ್ನಡದಲ್ಲಿ ಲಭ್ಯವಿಲ್ಲದ ರಾಜ್ಯದ ಎಲ್ಲಾ ಕಾನೂನುಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರಿಸತಕ್ಕದ್ದು. ಒಕ್ಕೂಟ ಸರಕಾರದ ಅಧಿನಿಯಮಗಳನ್ನೂ ಕನ್ನಡಕ್ಕೆ ಭಾಷಾಂತರಿಸಬೇಕಾಗಿದೆ. ಇದಕ್ಕಿರುವ ವಿನಾಯ್ತಿ ಎಂದರೆ ವಿದೇಶಗಳೊಟ್ಟಿಗೆ, ಒಕ್ಕೂಟ ಸರ್ಕಾರದೊಟ್ಟಿಗೆ, ಇತರ ರಾಜ್ಯಗಳ ಮತ್ತು ಉಚ್ಚ ನ್ಯಾಯಾಲಯ – ಸರ್ವೋಚ್ಚ ನ್ಯಾಯಾಲಯಗಳೊಟ್ಟಿಗೆ ಮತ್ತು ಭಾಷಾ ಅಲ್ಪಸಂಖ್ಯಾತರೊಟ್ಟಿಗೆ ವ್ಯವಹರಿಸಬೇಕಾದರೆ ಇಂಗ್ಲೀಷನ್ನು ಬಳಸಬಹುದು. ಅಷ್ಟೇ ಅಲ್ಲದೆ, ಆಡಳಿತಾತ್ಮಕ ಕಾರಣಗಳಿಗಾಗಿ ಅಥವಾ ಯಾವುದೇ ವೈಜ್ಞಾನಿಕ ಅಥವಾ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಆಂಗ್ಲ ಭಾಷೆಯನ್ನು ಬಳಸಬಹುದು. 

ಕಲಂ 5 ರ ಪ್ರಕಾರ ರಾಜಭಾಷಾ ಆಯೋಗವನ್ನು ರಚಿಸಬೇಕು ಮತ್ತು ಅದರ ಅಧ್ಯಕ್ಷರರು ಯಾವುದೇ ನಿವೃತ್ತ ಸರಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯವರಾಗಿರುತ್ತಾರೆ. ಮತ್ತು ಒಬ್ಬ ಸದಸ್ಯರು ಉಪನಿರ್ದೇಶಕರ ಹುದ್ದೆಗಿಂತ ಕಡಿಮೆಯಿರದ ಭಾಷಾಂತರ ಇಲಾಖೆಯ ನಿವೃತ್ತ ಅಧಿಕಾರಿ ಮತ್ತು ಇನ್ನೊಬ್ಬರು ಭಾಷಾಂತರ ಜ್ಞಾನವುಳ್ಳ, ಕಾನೂನು ಪದವೀಧರರಾಗಿರುವ ನಿವೃತ್ತ ಅಧಿಕಾರಿ ಅಥವಾ ಪ್ರಾಧ್ಯಾಪಕರಾಗಿರುತ್ತಾರೆ. ಇದರ ಸದಸ್ಯ ಕಾರ್ಯದರ್ಶಿಯು ಭಾಷಾಂತರ ಇಲಾಖೆಯ ಅಪರ ನಿರ್ದೇಶಕರಾಗಿರುತ್ತಾರೆ. ಇವರುಗಳ ಅವಧಿ ಐದು ವರ್ಷ ಮತ್ತು ಸರಕಾರ ಇವರನ್ನು ನಾಮನಿರ್ದೇಶನದ ಮೂಲಕ ನೇಮಿಸುತ್ತದೆ. 

ಕಲಂ 6 ರ ಪ್ರಕಾರ ರಾಜ್ಯಪತ್ರದಲ್ಲಿ ಸಮವರ್ತಿ ಪಟ್ಟಿಯಲ್ಲಿರುವ ವಿಷಯಗಳ ಕುರಿತಾಗಿ ಪ್ರಕಟಿಸಿದ ಒಕ್ಕೂಟದ ಕಾನೂನುಗಳ, ನಿಯಮಗಳ ಕನ್ನಡ ಭಾಷಾಂತರ ಅಧಿಕೃತ ಪಠ್ಯವಾಗಿರುತ್ತದೆ. ಅಷ್ಟೇ ಅಲ್ಲದೆ, ಕನ್ನಡವನ್ನು ಅಧಿಕೃತ ಭಾಷೆಯಲ್ಲಿ ಜಾರಿಗೆ ತರಲು ಸೆಕ್ಷನ್ 7 ರ ಪ್ರಕಾರ ಜಾರಿ ಪ್ರಾಧಿಕಾರಗಳಾಗಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿಗಳನ್ನು ನೇಮಿಸತಕ್ಕದ್ದು. ರಾಜ್ಯ ಮಟ್ಟದ ಸಮಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಅಧ್ಯಕ್ಷರಾದರೆ, ಸರಕಾರದ ಮುಖ್ಯ ಕಾರ್ಯದರ್ಶಿ ಉಪಾಧ್ಯಕ್ಷರಾಗಿರುತ್ತಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ  ಇವರುಗಳು ಸಮಿತಿಯ ಸದಸ್ಯರೂ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರು ಸಂಚಾಲಕರೂ ಆಗಿರುತ್ತಾರೆ. ಚಿಕ್ಕದಾಗಿ ಹೇಳಬೇಕೆಂದರೆ ರಾಜ್ಯ ಮಟ್ಟದ ಸಮಿತಿಯಲ್ಲಿ ಸರಕಾರದ ಹಲವು ಅಧಿಕಾರಿಗಳು ಮತ್ತು ಸಚಿವರು ಚುಕ್ಕಾಣಿ ಹಿಡಿದಿರುತ್ತಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿಗಳಲ್ಲಿಯೂ ಪಾಲಿಕೆಯ ಆಯುಕ್ತರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ನಗರಾಭಿವೃದ್ಧಿಯ ಅಧಿಕಾರಿಗಳು ಮುಂತಾದವರನ್ನು ನೇಮಿಸತಕ್ಕದ್ದು. ಈ ಜಾರಿ ಪ್ರಾಧಿಕಾರದ ಕೆಲಸವೆಂದರೆ ತಾಲೂಕು ಸಮಿತಿ ಮತ್ತು ಜಿಲ್ಲಾ ಸಮಿತಿಗಳು ತಾವು ಕನ್ನಡ ಭಾಷೆಯ ಅನುಷ್ಠಾನದ ಸಲುವಾಗಿ ಕೈಗೊಂಡಿರುವ ಕಾರ್ಯಗಳನ್ನು ಮೇಲಿನ ಸಮಿತಿಗೆ ಪ್ರತಿ ಮೂರು ತಿಂಗಳಿಗೆ ಕೊಡತಕ್ಕದ್ದು. ಅಷ್ಟೇ ಅಲ್ಲದೆ, ಕಲಂ 9 ಮತ್ತು 10 ರ ಅಡಿಯಲ್ಲಿ ಸರ್ಕಾರೀ ಇಲಾಖೆಗಳಲ್ಲಿ, ಪ್ರಾಧಿಕಾರಗಳಲ್ಲಿ ಈ ಕಾನೂನಿನ ಪಾಲನೆ ಸರಿಯಾಗಿ ನಡೆಯುತ್ತಿದೆಯೇ ಎಂದು ಪರಿಶೀಲಿಸಲು ಒಬ್ಬ ಜಾರಿ ಅಧಿಕಾರಿಯನ್ನು ನೇಮಿಸತಕ್ಕದ್ದು.

ಈಗಾಗಲೇ ಜಾರಿಯಲ್ಲಿರುವ ಕನ್ನಡ ಭಾಷಾ ಕಲಿಕಾ ಅಧಿನಿಯಮ, 2015 ಮುಂದುವರಿಯುತ್ತದೆ ಮತ್ತು ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಬೋಧಿಸಬೇಕು ಎಂದು ಸೆಕ್ಷನ್ 13 ರಲ್ಲಿ ಮತ್ತು ಸೆಕ್ಷನ್ 14 ರಲ್ಲಿ ಉನ್ನತ ಮತ್ತು ವೃತ್ತಿಪರ ಶಿಕ್ಷಣದಲ್ಲಿ ಒಂದನೇ ತರಗತಿಯಿಂದ ಹತ್ತರವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಮೀಸಲಾತಿಯನ್ನು ಕೊಡತಕ್ಕದ್ದು. ಮೀಸಲಾತಿಯ ಶೇಕಡಾವಾರನ್ನು ನಿಯಮಗಳಲ್ಲಿ ನಿಗದಿಪಡಿಸಲಾಗುತ್ತದೆ. ಕಲಂ 15 ರ ಪ್ರಕಾರ ರಾಜ್ಯ ಸರಕಾರದ, ನಿಗಮಗಳ, ಸ್ಥಳೀಯ ಸಂಸ್ಥೆಗಳ, ಸಹಕಾರಿ ಸಂಘಗಳ ಉದ್ಯೋಗವನ್ನು ಪಡೆಯಲು ಕಡ್ಡಾಯವಾಗಿ ಕನ್ನಡದ ಜ್ಞಾನ ಅಗತ್ಯವಿದೆ. ಅಭ್ಯರ್ಥಿ ಒಂದೋ ಪ್ರಾಧಿಕಾರವು ನಡೆಸುವ ಪರೀಕ್ಷೆಯಲ್ಲಿ ಪಾಸಾಗಬೇಕು ಇಲ್ಲವಾದರೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನ್ನಡವನ್ನು ಮೊದಲ ಅಥವಾ ಎರಡನೇ ಭಾಷೆಯಾಗಿ ತೆಗೆದುಕೊಂಡು ಪಾಸಾಗಿರಬೇಕು. 

ಸೆಕ್ಷನ್ 16 ರಲ್ಲಿ ಜಿಲ್ಲಾ ಮತ್ತು ಇತರ ಕೆಳಗಿನ ನ್ಯಾಯಾಲಯಗಳು ಕನ್ನಡದಲ್ಲಿ ವಿಚಾರಣೆಯನ್ನು ಮತ್ತು ಕಲಾಪಗಳನ್ನು ಕನ್ನಡದಲ್ಲಿ ಕಡ್ಡಾಯವಾಗಿ ನಡೆಸಬೇಕೆಂದು ಹೇಳಿದ್ದರೂ, ಅಗತ್ಯವಿರುವ ಕಡೆ ಇಂಗ್ಲೀಷು ಪದಗಳನ್ನು ಉಪಯೋಗಿಸಲು ನ್ಯಾಯಾಧೀಶರಿಗೆ ಅಧಿಕಾರವಿದೆ ಎಂದೂ, ಅಗತ್ಯವಿದ್ದಲ್ಲಿ ಸಂಪೂರ್ಣ ಸಾಕ್ಷ್ಯವನ್ನು ಇಂಗ್ಲೀಷಿನಲ್ಲಿ ದಾಖಲಿಸಲು ವಿಶೇಷ ಆದೇಶದ ಮೂಲಕ ಅಧಿಕಾರವಿದೆ ಎಂದೂ ಹೇಳಿದೆ. 

ಕಲಂ 17 ಕನ್ನಡವನ್ನು ವ್ಯಾಪಕವಾಗಿ ಬಳಸಲು ಮತ್ತು ಪ್ರಸಾರಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಪಟ್ಟಿ ಮಾಡುತ್ತದೆ. ಇವುಗಳಲ್ಲಿ ಉಪ ಕಲಂ (1), (2), (3),(4),(5),(6),(7),(8) ಗಳು ರಾಜ್ಯದಲ್ಲಿರುವ ಸರಕಾರೀ ಸಂಸ್ಥೆಗಳ, ನಿಗಮ – ಮಂಡಳಿಗಳ, ಸಹಕಾರೀ ಸಂಸ್ಥೆಗಳ, ಬ್ಯಾಂಕುಗಳ, ಕೈಗಾರಿಕೆಗಳ, ಶೈಕ್ಷಣಿಕ ಸಂಸ್ಥೆಗಳ, ವಿಶ್ವವಿದ್ಯಾಲಯಗಳ, ರಸ್ತೆಗಳ, ಬಡಾವಣೆಗಳ ಹೆಸರುಗಳು, ಫಲಕಗಳು, ಅವುಗಳು ಹೊರಡಿಸುವ ಜಾಹೀರಾತುಗಳು, ಪ್ರಕಟ ಮಾಡುವ ಬ್ಯಾನರು, ಫ್ಲೆಕ್ಸು, ಮಾಹಿತಿ ನೋಟೀಸುಗಳು, ಟೆಂಡರ್ ಸೂಚನೆಗಳು, ರಸೀದಿ, ಬಿಲ್ಲುಗಳು, ಮುಂತಾದವುಗಳೆಲ್ಲ ಪ್ರಮುಖವಾಗಿ ಕನ್ನಡದಲ್ಲಿಯೇ ಇರತಕ್ಕದ್ದು ಎಂದು ಹೇಳುತ್ತದೆ. ಫಲಕಗಲ್ಲಿ ಅರ್ಧ ಭಾಗವು ಕನ್ನಡದ್ದಿರಬೇಕಿದ್ದು ಇನ್ನರ್ಧ ಭಾಗ ಯಾವ ಭಾಷೆಯಲ್ಲಿ ಬೇಕಾದರೂ ಇರಬಹುದಾಗಿದೆ. ಜಾಹೀರಾತು ಮತ್ತು ಸೂಚನೆಗಳ ನೋಟೀಸು ಮುಂತಾದವುಗಳಲ್ಲಿ ಶೇಕಡಾ ಎಷ್ಟು ಭಾಗ ಕನ್ನಡದ್ದಿರಬೇಕೆಂದು ಇನ್ನೂ ನಿಗದಿಪಡಿಸಬೇಕಿದೆ. ಇನ್ನು ಉಪ ಕಲಂ (9) ಮಹತ್ವದ್ದಾಗಿದ್ದು, ನೂರಕ್ಕೂ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳು ಕಡ್ಡಾಯವಾಗಿ ತಮ್ಮ ದಿನನಿತ್ಯದ ಬಳಕೆಗಾಗಿ ಕನ್ನಡ ಕೋಶವನ್ನು ಸ್ಥಾಪಿಸಬೇಕೆಂದಿದೆ ಮತ್ತು ಅದಕ್ಕೆ ಅಗತ್ಯವಿರುವ ಬೋಧಕ ಮತ್ತು ಕಲಿಕಾ ಸಾಮಾಗ್ರಿ, ಸಂಸ್ಥೆಗಳ ಖರ್ಚಿನಲ್ಲಿ ಒದಗಿಸಬೇಕೆಂದಿದೆ. ಅಷ್ಟೇ ಅಲ್ಲದೆ, ಉಪ ಕಲಂ (10) ಬ್ಯಾಂಕುಗಳಲ್ಲಿ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಎಲ್ಲ ಉದ್ಯೋಗಿಗಳೂ, ಸಾರ್ವಜನಿಕರೊಂದಿಗೆ ಎಲ್ಲ ಪತ್ರ ವ್ಯವಹಾರಗಳೂ ಕನ್ನಡದಲ್ಲಿಯೇ ಆಗಬೇಕೆಂದು ಹೇಳಿದೆ. ಇಲ್ಲಿ ರಾಷ್ಟ್ರೀಯ ಬ್ಯಾಂಕುಗಳು ಮತ್ತು ಸ್ಥಳೀಯ ಬ್ಯಾಂಕುಗಳು ಎಂಬ ವ್ಯತ್ಯಾಸವಿಲ್ಲದಿರುವುದರಿಂದ ರಾಜ್ಯದ ಒಳಗಿರುವ ಎಲ್ಲಾ ಬ್ಯಾಂಕುಗಳಿಗೂ ಇದು ಅನ್ವಯಿಸಲಿದ್ದು, ದೊಡ್ಡ ಮಟ್ಟದಲ್ಲಿ ಜನಸಾಮಾನ್ಯರಿಗೆ ಸಹಾಯ ಒದಗಿಸುವಂತದ್ದಾಗಿದೆ. 

ಸೆಕ್ಷನ್ 18 ರಲ್ಲಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಕನ್ನಡದ ಬಳಕೆಗಾಗಿ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಸರಕಾರದ ಮೇಲೆ ವಿಧಿಸಲಾಗಿದೆ. ಇದರ ಪ್ರಕಾರ ಎಲ್ಲ ಸರಕಾರದ ಇಲಾಖೆಗಳ, ಸಂಸ್ಥೆಗಳ, ಸಹಕಾರೀ ಸಂಸ್ಥೆಗಳ ಜಾಲತಾಣಗಳು, ಮಾಹಿತಿಗಳು ಕನ್ನಡದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಅರ್ಜಿಗಳು, ನಮೂನೆಗಳು ಮತ್ತು ಸಂದೇಶಗಳೂ ಕನ್ನಡದಲ್ಲಿ ಇರತಕ್ಕದ್ದು. 

ಸೆಕ್ಷನ್ 20 ಕೂಡಾ ಮಹತ್ವದ್ದಾಗಿದ್ದು ಇದರ ಪ್ರಕಾರ ಸರಕಾರ ನಿಗದಿಪಡಿಸುವ ಮೀಸಲಾತಿಯನ್ನು ಕನ್ನಡಿಗರಿಗೆ ಉದ್ಯೋಗದಲ್ಲಿ ನೀಡದ ಹೊರತು ಭೂ ರಿಯಾಯತಿ ಮತ್ತು ಇತರೆ ತೆರಿಗೆ ವಿನಾಯ್ತಿ ಮತ್ತು ತೆರಿಗೆ ಮುಂದೂಡಿಕೆಗಳು ಖಾಸಗಿ ಸಂಸ್ಥೆಗಳಿಗೆ ಸಿಗಲಾರವು. ಮತ್ತು ಹೀಗೆ ನೀಡಿದ ಉದ್ಯೋಗದ ವಿವರಗಳನ್ನು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಬೇಕು ಮತ್ತು ಜಾಲತಾಣಗಳಲ್ಲಿ ಹಂಚಿಕೊಳ್ಳತಕ್ಕದ್ದು. ಸೆಕ್ಷನ್ 21 ರ ಪ್ರಕಾರ ರಾಜ್ಯ ಸರಕಾರ ನೇಮಕಾತಿ ಏಜೆನ್ಸಿಗಳಿಗಾಗಿ ಒಂದು ಉದ್ಯೋಗ ಪೋರ್ಟಲ್ ನ್ನು ಸ್ಥಾಪಿಸತಕ್ಕದ್ದು. 

ಕಲಂ 22 ಮತ್ತು 23 ಗಳಲ್ಲಿ ಈ ಕಾನೂನನ್ನು ಉಲ್ಲಂಘಿಸಿದರೆ ಆಗುವ ದಂಡನೆಯ ಬಗ್ಗೆ ಹೇಳಲಾಗಿದೆ. ಒಂದು ವೇಳೆ ಸರಕಾರೀ ನೌಕರನು ಉಲ್ಲಂಘನೆ ಮಾಡಿದರೆ ಅದನ್ನು ಕರ್ತವ್ಯ ಲೋಪವೆಂದು ಲೆಕ್ಕಿಸಿ, ಶಿಸ್ತುಕ್ರಮ ಜರುಗಿಸಲಾಗುತ್ತದೆ. ಸೆಕ್ಷನ್ 25 ರ ಪ್ರಕಾರ ಇದನ್ನು ಜಾರಿಗೊಳಿಸುವ ಹೊಣೆ ರಾಜ್ಯ ಸಮಿತಿಯದ್ದಾಗಿರುತ್ತದೆ.  ಖಾಸಗೀ ಸಂಸ್ಥೆ ಅಥವಾ ವ್ಯಕ್ತಿ ಕಾನೂನನ್ನು ಉಲ್ಲಂಘಿಸಿದರೆ ಮೊದಲನೆಯ ಸಲ ರೂ. 5,000/-, ಎರಡನೆಯ ಸಲ ರೂ. 10,000/- ಮತ್ತು ಮೂರನೆಯ ಸಲ ರೂ. 20,000/- ರವರೆಗೆ ದಂಡ ವಿಧಿಸಬಹುದಾಗಿದೆ. ಆದರೆ ಯಾವುದೇ ಕ್ರಮ ಕೈಗೊಳ್ಳುವ ಮುಂಚೆ ನೋಟೀಸು ನೀಡತಕ್ಕದ್ದು ಮತ್ತು ನಿಯಮಗಳ ಪಾಲನೆಗಾಗಿ ಹದಿನೈದು ದಿನಗಳ ಅವಕಾಶ ಕೊಡತಕ್ಕದ್ದು. ಹಾಗಿದ್ದೂ ಉಲ್ಲಂಘನೆ ಮುಂದುವರೆದಲ್ಲಿ ದಂಡ ವಿಧಿಸಬಹುದಾಗಿದೆ. ಕಲಂ 24 ರಲ್ಲಿ ಕಾನೂನಿನಲ್ಲಿ ಹೇಳಲಾದ ಅಪರಾಧದ ಪ್ರಕ್ರಿಯೆ ಶುರು ಮಾಡುವ ಮೊದಲು ರಾಜ್ಯ ಸರಕಾರ ನಿಯಮಿಸಿದ ಅಧಿಕಾರಿಗಳು ಪ್ರಕರಣವನ್ನು ರಾಜಿ ಇತ್ಯರ್ಥ ಮಾಡಬಹುದಾಗಿದೆ. 

ಕಾನೂನು ಒಂದು ಪ್ರಯತ್ನ ಎಂಬ ದೃಷ್ಟಿಯಿಂದ ಒಳ್ಳೆಯ ಹೆಜ್ಜೆ ಎನ್ನಬಹುದಾದರೂ ಇದರಲ್ಲಿ ಹಲವಾರು ತೊಂದರೆಗಳಿವೆ. ಹೆಚ್ಚಿನ ಅಧಿಕಾರವನ್ನು ಸರಕಾರದ ಅಧಿಕಾರಿಗಳಿಗೆ ನೀಡಲಾಗಿದ್ದು ಇಲ್ಲಿ ನಿಷ್ಪಕ್ಷವಾದ ತೀರ್ಮಾನಗಳು ಆಗುತ್ತವೆಯೇ ಎಂಬ ಪ್ರಶ್ನೆ ಸಹಜವಾಗಿದ್ದಾಗಿದೆ. ಉದಾಹರಣೆಗೆ, ದಂಡ ನೀಡುವ ಅಧಿಕಾರವನ್ನು ಜಾರಿ ಅಧಿಕಾರಿಗೆ ನೀಡಲಾಗಿದ್ದು, ಜಾರಿ ಅಧಿಕಾರಿ ರಾಜ್ಯ ಸರಕಾರದ ಯಾವುದಾದರೂ ಗ್ರೂಪ್ ಎ ದರ್ಜೆಗಿಂತ ಕಡಿಮೆ ಇರದ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗ್ರೂಪ್ ಬಿ ದರ್ಜೆಯ ಅಧಿಕಾರಿ ಆಗಿರುತ್ತಾರೆ. ಮತ್ತು ಇವರ ನೇಮಕ ಮಾಡುವುದು ಜಿಲ್ಲಾಧಿಕಾರಿ ಅಥವಾ ಮಹಾನಗರ ಪಾಲಿಕೆಯ ಆಯುಕ್ತರು ಅಥವಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರು. ಸರಕಾರೀ ಅಧಿಕಾರಿಗಳ ಹಿಡಿತದಲ್ಲಿರುವ ಸಂಸ್ಥೆಗಳು ಎದುರಿಸುವ ತೊಂದರೆಗಳು ಎಂದರೆ ಅಧಿಕಾರದ ದುರುಪಯೋಗ, ಪಕ್ಷಪಾತ ಇತ್ಯಾದಿಗಳು ಇಲ್ಲೂ ಕಾಣುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೆ, ಸೆಕ್ಷನ್ 22 ರಲ್ಲಿ ಸರಕಾರೀ ಅಧಿಕಾರಿಗಳ ಉಲ್ಲಂಘನೆಯನ್ನು ಕರ್ತವ್ಯಲೋಪ ಎಂದು ಲೆಕ್ಕಿಸಲಾಗುತ್ತದೆ ಎಂದು ಹೇಳಿದರೂ ಅದು ಯಾವ ರೀತಿಯ ಲೋಪವೆಂದಾಗಲೀ ಇಂತಹ ಶಿಸ್ತುಕ್ರಮ ಜರುಗಿಸಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಅಷ್ಟೇ ಅಲ್ಲದೆ, ಸೆಕ್ಷನ್ 28 ರ ಪ್ರಕಾರ ಸದ್ಭಾವನೆಯಿಂದ ಮಾಡಿದ ಯಾವುದೇ ಕ್ರಮಕ್ಕೆ ಶಿಕ್ಷೆಯಿಲ್ಲ. ಈ ವಿಚಾರವೂ ಸಹ ಸಂಪೂರ್ಣವಾಗಿ ವಿಚಾರಣೆ ಮಾಡುವ ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. 

ಉನ್ನತ ಶಿಕ್ಷಣ, ತಂತ್ರಜ್ಞಾನ ಮುಂತಾದ ಕ್ಷೇತ್ರದಲ್ಲಿ ಕನ್ನಡದ ಬಳಕೆಯ ಹೆಬ್ಬಯಕೆಯನ್ನು ಕಾನೂನು ವ್ಯಕ್ತಪಡಿಸಿದೆಯಾದರೂ ಅದಕ್ಕೊಂದು ಸ್ಪಷ್ಟ ರೂಪ ಇಲ್ಲಿ ಕಾಣದು. ಆ ರೂಪು ರೇಷೆ ಈ ಕಾನೂನಿನಡಿಯಲ್ಲಿ ಹೊರಡಿಸಬೇಕಿರುವ ನಿಯಮಗಳಲ್ಲಾದರೂ ಪ್ರತಿಫಲಿಸಿದರೆ ಒಳ್ಳೆಯದು.

ಹುಟ್ಟಿದ ಸ್ಥಳ ಅಥವಾ ವಾಸಸ್ಥಳದ ಆಧಾರದ ಮೇಲೆ ಉದ್ಯೋಗ ನೀಡುವುದು ಸಂವಿಧಾನದ ದೃಷ್ಟಿಯಿಂದ ಒಂದು ಆಸಕ್ತಿಕರವಾದ ವಿಷಯವಾಗಿದೆ. ಇತ್ತೀಚಿಗೆ ಪಂಜಾಬ್ ಮತ್ತು ಹರಿಯಾಣ ರಾಜ್ಯದ ಹೊರಡಿಸಿದ ಸ್ಥಳೀಯರಿಗೆ ಮೀಸಲಾತಿ ಕೊಡುವ ಕಾನೂನನ್ನು ಅಲ್ಲಿನ ಉಚ್ಚ ನ್ಯಾಯಾಲಯ ತಡೆ ಹಿಡಿದಿದೆ. ಆದರೆ 1955 ರಲ್ಲೇ ತೀರ್ಮಾನವಾದ ಡಿ.ಪಿ. ಜೋಶಿ ಕೇಸಿನಲ್ಲಿ ವಾಸಸ್ಥಳವನ್ನು ಆಧರಿಸಿದ ಮೀಸಲಾತಿ ಸಂವಿಧಾನಬಾಹಿರವಲ್ಲ ಎಂದು ಹೇಳಿದೆ. ಯಾಕೆಂದರೆ, ಅನುಚ್ಛೇದ 15 ರಲ್ಲಿ ನಿಷೇಧಿಸಿದ್ದು ‘ಹುಟ್ಟಿದ ಸ್ಥಳದ ಆಧಾರದ’ ಮೇಲೆ ಮಾಡುವ ಬೇಧಭಾವವನ್ನು, ಹುಟ್ಟಿದ ಸ್ಥಳಕ್ಕೂ, ವಾಸಸ್ಥಳಕ್ಕೂ ವ್ಯತ್ಯಾಸವಿದೆ ಎಂದು ಹೇಳಿದೆ ಆ ತೀರ್ಪಿನಲ್ಲಿ. ಅಷ್ಟೇ ಅಲ್ಲದೆ, ಅನುಚ್ಛೇದ 19 (1)(g) ರ ಅಡಿಯಲ್ಲಿ ನೀಡಲಾದ ವ್ಯಾಪಾರದ ಹಕ್ಕು ಅಂಕುಶವಿಲ್ಲದಿರುವುದಲ್ಲ ಎಂದು ಗಮನಿಸಬೇಕು. ಸಾರ್ವಜನಿಕ ಹಿತಾಸಕ್ತಿಯನ್ನು ದೃಷಿಯಲ್ಲಿಟ್ಟುಕೊಂಡು ಈ ಹಕ್ಕಿನ ಮೇಲೆ ನಿರ್ಬಂಧಗಳನ್ನು ಹೇರಬಹುದಾಗಿದೆ. ಗಮನಿಸಬೇಕಾದ ಇನ್ನೊಂದು ವಿಚಾರವೆಂದರೆ, ಸಂವಿಧಾನವನ್ನು ಮಾಡುವ ಸಮಯದಲ್ಲಿ ಅಂದಿನ ನಾಯಕರಿಗೆ ಭಾಷೆ ಅಥವಾ ಪ್ರಾಂತ್ಯಾವಾರು ಒಗ್ಗಟ್ಟು ದೇಶದ ಒಗ್ಗಟ್ಟಿಗೆ ಮಾರಕ ಎಂಬ ಕಲ್ಪನೆ ಆಳವಾಗಿ ಬೇರೂರಿತ್ತು. ಆದರೆ ಬದಲಾದ ಇಂದಿನ ದಿನಮಾನದಲ್ಲಿ, ಒಕ್ಕೂಟ ವ್ಯವಸ್ಥೆ  ಕೂಡ ಸಂವಿಧಾನದ ಬೆನ್ನೆಲುಬು ಎಂದು ಸುಪ್ರೀಂ ಕೋರ್ಟ್ ಹೇಳಿದ ಹಿನ್ನೆಲೆಯಲ್ಲಿ, ಭಾಷೆ ಮತ್ತು ರಾಜ್ಯಗಳ ಆಧಾರದ ಒಗ್ಗಟ್ಟು ಒಕ್ಕೂಟವನ್ನು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಬಲಗೊಳಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಅಷ್ಟೇ ಅಲ್ಲದೆ, ಜನರಿಗೆ ಒಳ್ಳೆಯ ಆಡಳಿತವನ್ನು ಕೊಡಲೂ ಇದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಾಸಸ್ಥಳದ ಆಧಾರದ ಮೇಲಿನ ಮೀಸಲಾತಿ ಸಂವಿಧಾನಕ್ಕೆ ವಿರುದ್ಧವಾದದ್ದು ಎಂಬ ಭಾವನೆ ಹಳತೆನ್ನಬಹುದು. ಒಟ್ಟಿನಲ್ಲಿ, ಕಾನೂನು ಇನ್ನೂ ವಿಧೇಯಕದ ಹಂತದಲ್ಲಿರುವುದರಿಂದ ಆಗಬೇಕಾಗಿರುವ ಬದಲಾವಣೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆದರೆ ಅವುಗಳು ಕಾನೂನಿನಡಿಯಲ್ಲಿ ಬರುವ ಸಾಧ್ಯತೆ ಇರುವುದರಿಂದ ಮೇಲೆ ಹೇಳಿದ ವಿಷಯಗಳ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ ಅಗತ್ಯವಿದೆ. 

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

Spread the love