ರಿಟೇಲ್ ಕ್ಷೇತ್ರದ ಬಿಗ್ ಬಾಸ್ ‘ಬಿಗ್ ಬಜಾರ್’ ಪತನ: ಒಂದು ಕಾನೂನಾತ್ಮಕ ವಿಶ್ಲೇಷಣೆ
ಸಾಲ ಹೊನ್ನ ಶೂಲವಯ್ಯ ಎಂಬ ಮಾತಿದೆ. ಸಾಲದ ಸುಳಿಯಲ್ಲಿ ಸಿಲುಕಿರುವಂತಹ ವ್ಯಕ್ತಿಯು ಯಾವಾಗಲೂ ಜೀವನದಲ್ಲಿ ಸುಖಿಯಾಗಿರಲು ಸಾಧ್ಯವಿಲ್ಲ. ಯಾವಾಗಲೂ ಅವನನ್ನು ಸಾಲಗಾರರು ಕಾಡುವರು. ಆದ್ದರಿಂದಲೇ ಸಾಲವಿಲ್ಲದಿರುವನೇ ನಿಜವಾದ ಶ್ರೀಮಂತ ಎಂದು ಹೇಳಲಾಗುತ್ತದೆ. ಹಾಸಿಗೆಯಿದ್ದಷ್ಟು ಕಾಲು ಚಾಚು ಎಂದು ಹಿರಿಯರು ಹೇಳಿದ ಕಿವಿಮಾತೂ ಸಾಲದಿಂದ ದೂರವಿರು ಎಂಬ ಅನುಭವವೇದ್ಯ ಸೂಚನೆ. ಈಗ ನಾನು ಹೇಳಲು ಹೊರಟಿರುವ ಕತೆ ಸಾಲದ ಸುಳಿಯಲ್ಲಿ ಸಿಲುಕಿ ಪತನದ ಅಂಚಿಗೆ ನಿಂತಿರುವ ಒಂದು ಕಾಲದ ರಿಟೇಲ್ ಕ್ಷೇತ್ರದ ಮುಂಚೂಣಿ ನಾಯಕ ಕಿಶೋರ್ ಬಿಯಾನಿ ನೇತೃತ್ವದ ಬಿಗ್ ಬಜಾರ್ ಖ್ಯಾತಿಯ ‘ಫ್ಯೂಚರ್ ಗ್ರೂಪ್’ ಕುರಿತಾಗಿ.
ಅಮೆಜಾನ್ vs. ಫ್ಯೂಚರ್ ರಿಟೇಲ್ ಪ್ರಕರಣದ ಪೂರ್ವಾಪರಗಳು:
ಫ್ಯೂಚರ್ ಗ್ರೂಪ್ ಇಂಡಿಯಾವನ್ನು 1994 ರಲ್ಲಿ ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ವೈವಿಧ್ಯಮಯ ಸೇವೆಗಳನ್ನು ಒದಗಿಸುವ ದೃಷ್ಟಿಯೊಂದಿಗೆ ಸ್ಥಾಪಿಸಲಾಯಿತು. ಇದರ ಕೆಲವು ಶಾಖೆಗಳು ಪಾಂತಾಲೂನ್ಸ್ ಹಾಗೂ ಬಿಗ್ ಬಜಾರ್, ಬ್ರಾಂಡ್ ಫ್ಯಾಕ್ಟರಿ, ಲಿಬರ್ಟಿ ಶೂಸ್ ಹೀಗೆ ವಿವಿಧ ಹೆಸರುಗಳಲ್ಲಿ ವ್ಯಾಪಾರ ನಡೆಸುತಿದ್ದವು. ಒಂದು ಹಂತದವರೆಗೆ ಯಶಸ್ಸುಗಳಿಸಿ ಭಾರತದಲ್ಲಿ ಮನೆಮಾತಾಗಿದ್ದವು. ಆದರೆ ಹೀಗೆ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಮಾಡಿದ ಕೆಲವೊಂದು ವ್ಯವಹಾರಿಕ ಎಡವಟ್ಟುಗಳು ‘ಫ್ಯೂಚರ್ ಗ್ರೂಪ್’ ನ ಇಂದಿನ ಸ್ಥಿತಿಗೆ ಕಾರಣ.
ಒಂದು ಕಾಲದ ಭಾರತದ ರಿಟೇಲ್ ಮಾರುಕಟ್ಟೆಯ ಕಿಂಗ್ ಆಗಿದ್ದ ‘ಫ್ಯೂಚರ್ ಗ್ರೂಪ್’ ನ ದುಸ್ಥಿತಿಗೆ ಕಾರಣಗಳು ಹಲವು. ಅವುಗಳಲ್ಲಿ ಮುಖ್ಯ ಕಾರಣ ಸರಿಯಾದ ಮುನ್ನೆಚ್ಚರಿಕೆ ಹಾಗೂ ಮುಂದಾಲೋಚನೆ ಇಲ್ಲದೆ ವ್ಯವಹಾರ ವಿಸ್ತರಣೆಗಾಗಿ ಮಾಡಿದ ಸಾಲದ ಹೊರೆ. ‘ಫ್ಯೂಚರ್ ಗ್ರೂಪ್’ ಗೆ ಮೊದಲ ದೊಡ್ಡ ಹೊಡೆತ 2008ರಲ್ಲಿ ಆದ ಜಾಗತಿಕ ಆರ್ಥಿಕ ಮಹಾಕುಸಿತ. ಇದು ಫ್ಯೂಚರ್ ಗ್ರೂಪ್ ನ ಕುಸಿತಕ್ಕೂ ನಾಂದಿ ಹಾಡಿತು. 2012 ರ ಹೊತ್ತಿಗೆ ಅದರ ಸಾಲದ ಹೊರೆ 8000 ಕೋಟಿಯಷ್ಟಾಗಿತ್ತು. 2018 ರ ವೇಳೆಗೆ ಫ್ಯೂಚರ್ ಗ್ರೂಪ್ನ ಸಾಲ ಸರಿಸುಮಾರು 13,000 ಕೋಟಿ ರೂಪಾಯಿಗಳಷ್ಟಾಗಿತ್ತು.
ಇವೆಲ್ಲದರ ನಡುವೆ ಆಗಸ್ಟ್, 2019 ರಲ್ಲಿ, ಫ್ಯೂಚರ್ ಕೂಪನ್ ಪ್ರೈವೇಟ್ ಲಿಮಿಟೆಡ್ (ಎಫ್‌ಸಿಪಿಎಲ್), ಫ್ಯೂಚರ್ ರಿಟೇಲ್ ಲಿಮಿಟೆಡ್ (ಎಫ್‌ಆರ್‌ಎಲ್) ನೊಂದಿಗೆ ಷೇರುದಾರರ ಒಪ್ಪಂದವನ್ನು ಮಾಡಿಕೊಂಡಿತು. FCPL ಕಾರ್ಪೊರೇಟ್ ಸರಕುಗಳನ್ನು ಮಾರಾಟ ಮಾಡುವ FRL ನ ಅಂಗಸಂಸ್ಥೆ ಕಂಪನಿಯಾಗಿದೆ (Subsidiary company). ಕಂಪನಿಯ ಸ್ವತ್ತುಗಳನ್ನು ಇತರರಿಗೆ ವರ್ಗಾಯಿಸುವ ಮೊದಲು FRL ಗೆ FCPLನ ಅನುಮೋದನೆ ಬೇಕು ಎಂಬುದೇ ಈ ಒಪ್ಪಂದ.
ಅದೇ ಆಗಸ್ಟ್ ತಿಂಗಳಲ್ಲಿ, Amazon NV ಇನ್ವೆಸ್ಟ್‌ಮೆಂಟ್ ಹೋಲ್ಡಿಂಗ್ಸ್ LLC (Amazon) ಮತ್ತು FCPL ಷೇರು ಚಂದಾದಾರಿಕೆ ಒಪ್ಪಂದ ಮತ್ತು ಷೇರುದಾರರ ಒಪ್ಪಂದ ಮಾಡಿಕೊಂಡವು, ಇದು FCPL ನಲ್ಲಿ ಅಮೆಜಾನ್‌ಗೆ 49% ಪಾಲನ್ನು ನೀಡಿತು. ಒಪ್ಪಂದಗಳ ಭಾಗವಾಗಿ, ಫ್ಯೂಚರ್ ಕೂಪನ್‌ಗಳು ಮಾಡಿದ ಯಾವುದೇ ಮಾರಾಟಕ್ಕೆ ಮೊದಲ ನಿರಾಕರಣೆ ಹಕ್ಕನ್ನು Amazon ಹೊಂದಿತ್ತು. ಅಂದರೆ ಒಂದರ್ಥದಲ್ಲಿ, ಈ ಒಪ್ಪಂದಗಳ ಪ್ರಕಾರ ಎಫ್‌ಆರ್‌ಎಲ್‌ನ ಯಾವುದೇ ಷೇರು ನಿರ್ಧಾರವನ್ನು ಕಾರ್ಯಗತಗೊಳಿಸುವ ಮೊದಲು ಅಮೆಜಾನ್‌ನ ಒಪ್ಪಿಗೆಯನ್ನು ಪಡೆಯಲು FCPL ಬಾಧ್ಯಸ್ಥವಾಗಿತ್ತು.
COVID-19 ರ ಮೊದಲ ಲಾಕ್‌ಡೌನ್‌ಗಳಿಂದ FRL ದಿವಾಳಿತನದ ಅಂಚಿನಲ್ಲಿತ್ತು. 22,000 ಕೋಟಿ ರೂಪಾಯಿಗಳಷ್ಟು ಸಾಲದಲ್ಲಿ, FRL ತನ್ನ ಚಿಲ್ಲರೆ ವ್ಯಾಪಾರಗಳು ಮತ್ತು ಆಸ್ತಿಗಳನ್ನು ಆಗಸ್ಟ್, 2020 ರಲ್ಲಿ 25,000 ಕೋಟಿ ರೂಪಾಯಿಗಳಿಗೆ ರಿಲಯನ್ಸ್‌ಗೆ ಮಾರಾಟ ಮಾಡಲು ನಿರ್ಧರಿಸಿತು. ಈ ಮಾರಾಟವು 1,800 ರೀಟೇಲ್ ಔಟ್‌ಲೆಟ್‌ಗಳೊಂದಿಗೆ ಭಾರತೀಯ ರಿಟೇಲ್ ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಲು ರಿಲಯನ್ಸ್‌ಗೆ ಅವಕಾಶ ನೀಡಿತು. ಇದರಿಂದಾಗಿ ಭಾರತದಲ್ಲಿ ಸ್ಪರ್ಧಾತ್ಮಕ ಇ-ಕಾಮರ್ಸ್ ವ್ಯವಹಾರವನ್ನು ಸ್ಥಾಪಿಸಲು Amazon ಗೆ ವಾಸ್ತವಿಕವಾಗಿ ಅಸಾಧ್ಯವಾಗುತ್ತದೆ.
ಈ ಮಾರಾಟವು FCPL ಜೊತೆಗಿನ ಷೇರುದಾರರ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು Amazon ಆರೋಪಿಸಿತು. ಎಫ್‌ಆರ್‌ಎಲ್-ರಿಲಯನ್ಸ್ ಒಪ್ಪಂದವು ಅಮೆಜಾನ್-ಎಫ್‌ಸಿಪಿಎಲ್ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು 2020 ರ ಅಕ್ಟೋಬರ್‌ನಲ್ಲಿ ಸಿಂಗಾಪುರ್ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್ (ಎಸ್‌ಐಎಸಿ) ಅನ್ನು ಸಂಪರ್ಕಿಸಿತು.
ಈ ಮಧ್ಯೆ, ಅಮೆಜಾನ್ ತನ್ನ ಆಸ್ತಿಯನ್ನು ರಿಲಯನ್ಸ್‌ಗೆ ಮಾರಾಟ ಮಾಡುವಲ್ಲಿ ಕಾನೂನುಬಾಹಿರವಾಗಿ ಮಧ್ಯಪ್ರವೇಶಿಸಿದೆ ಎಂದು ವಾದಿಸಿ ಎಫ್‌ಆರ್‌ಎಲ್ ದೆಹಲಿ ಹೈಕೋರ್ಟ್ ಮುಂದೆ ಮೊಕದ್ದಮೆ ಹೂಡಿತು. ಈ ಮಧ್ಯೆ ಅಕ್ಟೋಬರ್ 25, 2020 ರಂದು, Singapore International Arbitration Centre FRL-ರಿಲಯನ್ಸ್ ಒಪ್ಪಂದವನ್ನು ನಿಲ್ಲಿಸುವ ತುರ್ತು ಆರ್ಬಿಟ್ರಲ್ ನಿರ್ಧಾರವನ್ನು ಅಂಗೀಕರಿಸಿತು. FRL ನಂತರ SIAC ಆರ್ಬಿಟ್ರಲ್ ಟ್ರಿಬ್ಯೂನಲ್‌ಗೆ ತುರ್ತು ಮೇಲ್ಮನವಿ ಮಾಡಿತು.
Amazon.com vs. Future Retail Ltd. ಪ್ರಕರಣದ ಪಕ್ಷಿನೋಟ:
FRL ಅನ್ನು ರಿಲಯನ್ಸ್‌ಗೆ ಮಾರಾಟ ಮಾಡಲು ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾ, ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI), ಮತ್ತು ರಾಷ್ಟ್ರೀಯ ಕಂಪನಿ ಕಾನೂನುಗಳ ಟ್ರಿಬ್ಯೂನಲ್ ಅನುಮತಿಯ ಅಗತ್ಯವಿದೆ. CCI ಮತ್ತು SEBI ಡಿಸೆಂಬರ್, 2020 ರಲ್ಲಿ FRL-ರಿಲಯನ್ಸ್ ಒಪ್ಪಂದವನ್ನು ಅನುಮೋದಿಸಿತು. ಜನವರಿ 2021 ರಲ್ಲಿ, SIAC ಮತ್ತು ದೆಹಲಿ ಹೈ ಕೋರ್ಟ್ನಲ್ಲಿ ನಡೆಯುತ್ತಿರುವ ವಿವಾದಗಳ ಹೊರತಾಗಿಯೂ, FRL ಮಾರಾಟವನ್ನು ಅನುಮೋದಿಸಲು NCLT ಅನ್ನು ಸಂಪರ್ಕಿಸಿತು.
2021 ರಲ್ಲಿ, ಪ್ರಕರಣವು ವಿವಿಧ ಹಂತಗಳಲ್ಲಿ ಇರುವಾಗ ಅಮೆಜಾನ್ SIAC ಎಮರ್ಜೆನ್ಸಿ ಅವಾರ್ಡ್ ಅನ್ನು ಜಾರಿಗೆ ತರಲು ಪ್ರಯತ್ನಿಸಿತು, ಇದನ್ನು ದೆಹಲಿ ಹೈ ಕೋರ್ಟ್ ಮಂಜೂರು ಮಾಡಿತು. ವಿವಿಧ ವಿಷಯಗಳ ಕುರಿತು ಸುಪ್ರೀಂ ಕೋರ್ಟ್‌ಗೆ ವಿವಿಧ ಮೇಲ್ಮನವಿಗಳನ್ನು ಎರಡೂ ಪಕ್ಷಗಳು ಸಲ್ಲಿಸಿದವು. ನಂತರ SIAC ಆರ್ಬಿಟ್ರಲ್ ಟ್ರಿಬ್ಯೂನಲ್ ತುರ್ತು ಅವಾರ್ಡ್ ನ ಸಿಂಧುತ್ವದ ಬಗ್ಗೆ ತನ್ನ ನಿರ್ಧಾರವನ್ನು ತೆಗೆದುಕೊಳ್ಳುವವರೆಗೆ ಸರ್ವೋಚ್ಚ ನ್ಯಾಯಾಲಯವು ವಿಚಾರಣೆಗಳನ್ನು ಸ್ಥಗಿತಗೊಳಿಸಿತು.
ವಿವಿಧ ದೂರುಗಳು, ವಿಚಾರಣೆಗಳು ಮತ್ತು ವೇದಿಕೆಗಳ ಗೊಂದಲಗಳ ನಡುವೆ, ಡಿಸೆಂಬರ್ 17, 2021 ರಂದು, ಸ್ಪರ್ಧಾ ಆಯೋಗ Competition Commission of India), Amazon ಮತ್ತು FCPL ನಡುವಿನ ಮೂಲ ಷೇರುದಾರರ ಒಪ್ಪಂದಕ್ಕೆ ನೀಡಿದ ಅನುಮತಿಯನ್ನು ಹಿಂತೆಗೆದುಕೊಂಡಿತು. FRL ಮೇಲೆ ಪರಿಣಾಮಕಾರಿಯಾಗಿ ನಿಯಂತ್ರಣವನ್ನು ನೀಡಿದ ಎಲ್ಲಾ ಒಪ್ಪಂದಗಳನ್ನು ಬಹಿರಂಗಪಡಿಸಲು Amazon ವಿಫಲವಾಗಿತ್ತು ಎಂದು CCI ಹೇಳಿತು. ಮುಂಚೆ 2019ರ ಅರ್ಜಿಯಲ್ಲಿ Amazon ತನ್ನ ನಿಜವಾದ ಉದ್ದೇಶವನ್ನು ಮತ್ತು ಒಪ್ಪಂದದ ಸಂಪೂರ್ಣವಾದ ವ್ಯಾಪ್ತಿಯನ್ನು ಹೊರಗೆಡವಿರಲಿಲ್ಲ ಎಂಬುದು CCI ಅಂಬೋಣ. ಸಿಂಗಾಪುರಿನ ಆರ್ಬಿಟ್ರೇಷನ್ ಪ್ರಕ್ರಿಯೆಯಲ್ಲಿ Amazon ವಾದಗಳನ್ನು ಕಂಡು ಈ ಬಗ್ಗೆ ಮನಗಂಡ FRL, CCI ಮುಂದೆ ಅರ್ಜಿ ಸಲ್ಲಿಸಿತ್ತು. ಆ ಆಧಾರದ ಮೇಲೆ ಒಪ್ಪಂದಕ್ಕೆ ಮೊದಲು ಕೊಟ್ಟಿದ್ದ ಅನುಮೋದನೆಯನ್ನು CCI ಹಿಂತೆಗೆದುಕೊಂಡಿದೆ. ಜೊತೆಗೇ, Amazon ಗೆ 202 ಕೋಟಿ ರೂಪಾಯಿಗಳ ದಂಡವನ್ನು Competition Commission of India ವಿಧಿಸಿತು. ಈ ಹಿಂತೆಗೆದುಕೊಳ್ಳುವಿಕೆಯು ವಿವಾದದ ಆಧಾರವನ್ನು ಬದಲಾಯಿಸಿತು-ಈಗ ಅದು ಅಮೆಜಾನ್ FRL ಮೇಲೆ ಯಾವುದೇ ಹಕ್ಕುಗಳನ್ನು ಹೊಂದಿದೆಯೇ ಎಂಬದು ಕಾನೂನಿನ ಮೂಲ ಪ್ರಶ್ನೆಯಾಗಿದೆ.
ಅಮೆಜಾನ್ ನಂತರ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (NCLAT) ಮುಂದೆ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿತು. 2021 ರ ಡಿಸೆಂಬರ್‌ನಲ್ಲಿ, ಸಿಂಗಾಪುರದಲ್ಲಿ ನಡೆಯುತ್ತಿರುವ ಮಧ್ಯಸ್ಥಿಕೆ ಪ್ರಕ್ರಿಯೆಗಳನ್ನು ತಡೆಯಲು FRL ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಜನವರಿ 5, 2022 ರಂದು, ದೆಹಲಿ ಹೈಕೋರ್ಟ್‌ನ ದ್ವಿಸದಸ್ಯ ಪೀಠವು ಮಧ್ಯಸ್ಥಿಕೆ ಪ್ರಕ್ರಿಯೆಗಳಿಗೆ ತಡೆ ನೀಡಿತು.
ಏತನ್ಮಧ್ಯೆ, ದೆಹಲಿ ಹೈಕೋರ್ಟ್‌ನ ವಿವಿಧ ಆದೇಶಗಳ ಮೇಲಿನ ಮೇಲ್ಮನವಿಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದವು. ದೆಹಲಿ ಹೈಕೋರ್ಟ್‌ನ ಅದೇ ಪೀಠದ ಮುಂದೆ ಪ್ರಕರಣದಲ್ಲಿ ಸಲ್ಲಿಸಲಾದ ಹಲವಾರು ಅರ್ಜಿಗಳನ್ನು ಪೋಸ್ಟ್ ಮಾಡುವ ಮೂಲಕ ದೆಹಲಿ ಹೈಕೋರ್ಟ್‌ಗೆ ಹೊಸದಾಗಿ ಪ್ರಕರಣವನ್ನು ವಿಚಾರಣೆ ಮಾಡಲು ಸರ್ವೋಚ್ಛ ನ್ಯಾಯಾಲಯವು ನಿರ್ದೇಶಿಸಿದೆ.
Amazon ಮತ್ತು ಫ್ಯೂಚರ್ ಗ್ರೂಪ್ ಸಲ್ಲಿಸಿದ ಜಂಟಿ ಮೆಮೊವನ್ನು ಆಧರಿಸಿ, 6ನೇ ಏಪ್ರಿಲ್ 2022 ರಂದು, ಸರ್ವೋಚ್ಛ ನ್ಯಾಯಾಲಯವು SIAC ನಲ್ಲಿ ಮಧ್ಯಸ್ಥಿಕೆಯನ್ನು ಮುಂದುವರಿಸಲು ಅನುಮತಿಸುವ ಆದೇಶವನ್ನು ಅಂಗೀಕರಿಸಿತು. ಫ್ಯೂಚರ್ ಕೂಪನ್‌ನಲ್ಲಿ ಹೂಡಿಕೆ ಮಾಡಲು ಅಮೆಜಾನ್‌ನ ಅನುಮತಿಯನ್ನು ಭಾರತದ ಸ್ಪರ್ಧಾ ಆಯೋಗವು (CCI) ರದ್ದುಗೊಳಿಸಿದೆ ಎಂಬ ಆಧಾರದ ಮೇಲೆ ಮಧ್ಯಸ್ಥಿಕೆಯನ್ನು ಅಂತ್ಯಗೊಳಿಸಲು ಫ್ಯೂಚರ್ ರೀಟೇಲ್‌ನ ಮನವಿಯನ್ನು ಮೊದಲು ಕೇಳಲು ಭಾರತದ ಸರ್ವೋಚ್ಛ ನ್ಯಾಯಾಲಯವು SIAC ಗೆ ನಿರ್ದೇಶಿಸಿದೆ.
ಕಟ್ಟ ಕಡೆಯಲ್ಲಿ ಈ ಎಲ್ಲಾ ಪ್ರಹಸನಗಳಿಂದ ನಾವು ಗಮನಿಸಬೇಕಾದ ಎರಡು ಅಂಶಗಳೆಂದರೆ ವಿಪರೀತ ಸಾಲದ ಸುಳಿಯಲ್ಲಿ ಸಿಕ್ಕಿದ ಫ್ಯೂಚರ್ ಗ್ರೂಪ್ ಅತ್ತ ದರಿ ಇತ್ತ ಪುಲಿ ಎಂಬಂತೆ ಎರಡು ಕಡೆಯಿಂದ ಶೋಷಣೆಗೆ ಒಳಗಾಗಿ ತನ್ನ ಅಸ್ತಿತ್ವಕ್ಕೆ ತಾನೇ ಧಕ್ಕೆ ತಂದುಕೊಂಡಿದೆ. ಮತ್ತು ಒಂದು ವಿದೇಶಿ ಸಂಸ್ಥೆ ಈ ಅವಕಾಶವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಬಯಸುತ್ತಿದೆ. ಹೇಗೆ ಈಸ್ಟ್ ಇಂಡಿಯಾ ಕಂಪನಿ ವ್ಯಾಪಾರದ ಸೋಗಿನಲ್ಲಿ ಇಡೀ ಭಾರತವನ್ನು ನಿಧಾನವಾಗಿ ದಾಸ್ಯಕ್ಕೆ ತಳ್ಳಿತೋ ಹಾಗೆ ಈಗಿನ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಲಾಭದ ದುರಾಸೆಗೆ ಬೇಳೆಯನ್ನು ಬೇಯಿಸಲು ಆಧುನಿಕ ವ್ಯವಹಾರ ವಿಧಾನಗಳ ಮೂಲಕ ನಿಧಾನವಾಗಿ ಭಾರತೀಯ ಚಿಲ್ಲರೆ ಮಾರುಕಟ್ಟೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿವೆ. ಈ ಸಮಯದಲ್ಲಿ ಸರ್ಕಾರಗಳು ಸರಿಯಾದ ಕಾನೂನುಗಳಿಂದ ಈ ವಿದೇಶಿ ಕಂಪನಿಗಳನ್ನು ನಿಯಂತ್ರಿಸಿ ಸ್ವದೇಶೀ ವ್ಯವಹಾರಗಳಿಗೆ ಹೆಚ್ಚಿನ ಉತ್ತೇಜನ ಕೊಟ್ಟು ಬೆಳೆಸದಿದ್ದಲ್ಲಿ ಬಹುರಾಷ್ಟ್ರೀಯ ಹಿತಾಸಕ್ತಿಗಳು ಮೊದಲು ಮಾರುಕಟ್ಟೆಯನ್ನು ಆಪೋಷನ ತೆಗೆದುಕೊಳ್ಳುತ್ತವೆ. ಆಮೇಲೆ ಆರ್ಥಿಕ ನೀತಿಗಳಿಗೆ ಸರ್ಕಾರವು ವಿದೇಶಿ ಮುಲಾಜಿಗೆ ಒಳಗಾಗಿ ನಾವು ಆರ್ಥಿಕ ದಾಸ್ಯಕ್ಕೆ ಒಳಗಾಗಬೇಕಾಗುತ್ತದೆ. ಆತ್ಮನಿರ್ಭರ ವ್ಯಾಪಾರ ನೀತಿಯೊಂದೆ ಇವುಗಳಿಗೆ ಪರಿಹಾರವಾಗಿದೆ ಎಂಬುದು ನನ್ನ ಪ್ರಾಮಾಣಿಕ ಅಭಿಪ್ರಾಯ.
(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)