ಲೇಖನಗಳು

ಮನಸುಗಳ ಮುರಿದಾಗ ಮುಲಾಮು ಹಚ್ಚಲಿರುವ ಸಮಯ: ನ್ಯಾಯಿಕ ಪ್ರತ್ಯೇಕೀಕರಣ

ದಂಪತಿಗಳ ನಡುವೆ ನೂರಾರು ಕಾರಣಗಳಿಗೆ ಮನಸ್ತಾಪಗಳು ಬರೋದು ಸಹಜ. ಹಾಗೆ ವೈಮನಸ್ಸು-ವಿವಾದಗಳು ಬಂದ ಕೂಡಲೇ ಮದುವೆಯ ಬಂಧ ಕೊನೆಯಾಗುತ್ತದೆ ಎಂದೇನಲ್ಲ. ಹಾಗೆ ಮುಗಿಯದ ಸಂಬಂಧಗಳಲ್ಲೂ ಪರಿಸ್ಥಿತಿಯ ಕೈಗೊಂಬೆಗಳಾಗಿ ಜೋಡಿಗಳು ಕೋರ್ಟ್‌ ಮೆಟ್ಟಿಲೇರುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಕಾನೂನಿನಡಿಯಲ್ಲಿ ವಿಚ್ಛೇದನ ಒಂದೇ ಪರಿಹಾರವಲ್ಲ. ನ್ಯಾಯಿಕ ಪ್ರತ್ಯೇಕೀಕರಣ (Judicial Separation) ಎಂದರೆ ವಿಚ್ಛೇದನ ಪಡೆಯದೇ ಗಂಡಹೆಂಡಿರು ದೂರವಾಗಿ ಬಾಳಲು ಇರುವ ಒಂದು ವಿಶೇಷ ಪರಿಹಾರವೂ ಉಂಟು.

ಹಿಂದೂ ವಿವಾಹ ಕಾಯ್ದೆ, 1955ರ ಸೆಕ್ಷನ್‌ 10(1)ರ ಅಡಿಯಲ್ಲಿ ಕಾಯ್ದೆಯ ಮೊದಲು ಅಥವಾ ಅನಂತರ ಸಿಂಧುವಾದ ಮದುವೆಯ ಪಕ್ಷಕಾರರು, ಸೆಕ್ಷನ್‌ 13(1) ರಲ್ಲಿ ನಿಗದಿಪಡಿಸಿದ ಕಾರಣಗಳ ಆಧಾರದ ಮೇಲೆ ಮತ್ತು ಹೆಂಡತಿಯೂ ಸೆಕ್ಷನ್‌ 13(2)ರಲ್ಲಿ ನಿಗದಿ ಮಾಡಿದ ಯಾವುದೇ ಕಾರಣಗಳ ಆಧಾರದ ಮೇಲೆ, ವಿವಾಹ ವಿಚ್ಛೇದನಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾದ ಅದೇ ಕಾರಣಗಳಿಂದಾಗಿ ನ್ಯಾಯಿಕ ಪ್ರತ್ಯೇಕೀಕರಣಕ್ಕೆ ಡಿಕ್ರಿ ಕೊಡಬೇಕೆಂದು ಪ್ರಾರ್ಥಿಸಿ ಅರ್ಜಿಯನ್ನ ಸಲ್ಲಿಸಬಹುದು. ಅಂದರೆ ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ವಿಚ್ಛೇದನಕ್ಕೆ ಇರುವ ಅದೇ ಕಾರಣಗಳ ಆಧಾರದ ಮೇಲೆ ನ್ಯಾಯಿಕ ಪ್ರತ್ಯೇಕೀಕರಣ ಕೋರಿ ದಂಪತಿಗಳಲ್ಲಿ ಒಬ್ಬರೂ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಬಹುದು. ಅರೇ! ಇದೇನಿದು? ವಿಚ್ಛೇದನವಾದರು ಸಹ ಬೇರೆ-ಬೇರೆಯಾಗಿ ಇರೋದಲ್ವೆ. ಇದರಲ್ಲಿ ಇನ್ನೇನು ವ್ಯತ್ಯಾಸ ಎನಿಸಿದರೆ, ಅವುಗಳನ್ನ ಕೆಳಗೆ ಪಟ್ಟಿ ಮಾಡಿದೆ, ನೋಡಿ:

ವಿಚ್ಛೇದನ-ನ್ಯಾಯಿಕ ಪ್ರತ್ಯಕೀಕರಣಗಳಿಗಿರುವ ವ್ಯತ್ಯಾಸ:

ವಿಚ್ಛೇದನ  ನ್ಯಾಯಿಕ ಪ್ರತ್ಯೇಕೀಕರಣ
ವಿಚ್ಛೇದನದ ನಂತರ ಮದುವೆಯ ಪಕ್ಷಕಾರರು ಕಾನೂನಿಡಿಯಲ್ಲಿ ಗಂಡ-ಹೆಂಡತಿಯಾಗಿರುವುದಿಲ್ಲನ್ಯಾಯಿಕ ಪ್ರತ್ಯೇಕೀಕರಣ ದೊರೆತಾಗ ವಿವಾಹದ ಪಕ್ಷಕಾರರು ಒಟ್ಟಿಗೆ ವಾಸಿಸದಿದ್ದರೂ ಕಾನೂನಿನಡಿಯಲ್ಲಿ ಗಂಡ-ಹೆಂಡತಿಯಾಗಿ ಮುಂದುವರೆಯುತ್ತಾರೆ.  
ವಿಚ್ಛೇದನದ ನಂತರ ಪಕ್ಷಕಾರರು ಇನ್ನೊಂದು ಮದುವೆಯಾಗಲು ಅವಕಾಶವಿರುತ್ತದೆನ್ಯಾಯಿಕ ಪ್ರತ್ಯೇಕೀಕರಣದಲ್ಲಿ ಪಕ್ಷಕಾರರಿಗೆ ಇನ್ನೊಂದು ಮದುವೆಯಾಗಲು ಅವಕಾಶವಿರುವುದಿಲ್ಲ  
ವಿಚ್ಛೇದನದ ನಂತರ ಪಕ್ಷಕಾರರು ಮತ್ತೆ ದಂಪತಿಗಳಾಗಲು ಇಚ್ಛಿಸಿದಲ್ಲಿ ಅವರು ಮರು-ಮದುವೆಯಾಗಬೇಕು.ನ್ಯಾಯಿಕ ಪ್ರತ್ಯೇಕೀಕರಣದಲ್ಲಿ ದಂಪತಿಗಳ ನಡುವೆ ಉಂಟಾದ ಮನಸ್ತಾಪಗಳು ದೂರಾಗಿ ಮತ್ತೆ ಒಂದಾಗಿ ಬದುಕಲು ಇಚ್ಛಿಸಿದಲ್ಲಿ ನ್ಯಾಯಿಕ ಪ್ರತ್ಯೇಕೀಕರಣದ ಡಿಕ್ರಿಯನ್ನು ರದ್ದುಗಳಿಸಲು ಅರ್ಜಿ ಸಲ್ಲಿಸಬಹುದು.  
ವಿವಾಹದ ಪಕ್ಷಕಾರರಿಗೆ ಇದು ಕೊನೆಯ ಪರಿಹಾರವಾಗಿದೆ.ವಿವಾಹವನ್ನು ಮುಂದುವರೆಸುವ ಅಥವಾ ಮನಸ್ತಾಪಗಳನ್ನ ಮೀರಿ ಸಂಬಂಧವನ್ನ ಉಳಿಸುವ ನಿಟ್ಟಿನಲ್ಲಿ ಇದು ಪರಿಹಾರವಾಗಿದೆ.  

ನ್ಯಾಯಿಕ ಪ್ರತ್ಯೇಕೀಕರಣ ಕೋರಲು ಇರುವ ಕಾರಣಗಳು:

ಸೆಕ್ಷನ್‌ 13(1)[i]ರಡಿಯಲ್ಲಿ ಲಭ್ಯವಿರುವ ಕಾರಣಗಳು:

  1. ದಂಪತಿಗಳಲ್ಲಿ ಒಬ್ಬರು ಸ್ವಯಿಚ್ಛೆಯಿಂದ ಬೇರೆ ವ್ಯಕ್ತಿಯೊಂದಿಗೆ ಲೈಂಗಿಕ ಸಂಭೋಗ ಮಾಡಿದಾಗ
  2. ವಿವಾಹದ ಪಕ್ಷಕಾರರಲ್ಲಿ ಒಬ್ಬರು ಇನ್ನೊಬ್ಬರ ಜೊತೆ ಕ್ರೂರವಾಗಿ ವರ್ತಿಸಿದಾಗ
  3. ಅರ್ಜಿ ಹಾಕುವ ಮುನ್ನ ಕನಿಷ್ಠ ಎರಡು ವರ್ಷಗಳವರೆಗೆ ಅವರನ್ನು ಬಿಟ್ಟು ಹೋದಾಗ
  4. ಬೇರೆ ಧರ್ಮಕ್ಕೆ ಮತಾಂತರ ಹೊಂದಿದಾಗ
  5. ನಿರಂತರ/ಗುಣಪಡಿಸಲಾಗದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರೆ
  6. ತೀವ್ರವಾದ ಅಥವಾ ಗುಣಪಡಿಸಲಾಗದ ಕುಷ್ಠರೋಗದಿಂದ ಬಳಲುತ್ತಿದ್ದರೆ
  7. ಹರಡಬಹುದಾಂತಹ ಗುಹ್ಯ ರೋಗದಿಂದ ಬಳಲುತ್ತಿದ್ದರೆ
  8. ಸನ್ಯಾಸ ದೀಕ್ಷೆ ಪಡೆದಾಗ
  9. ಒಬ್ಬ ಪಕ್ಷಕಾರರ ಬಗ್ಗೆ ಇನ್ನೊಬ್ಬ ಪಕ್ಷಕಾರರು ಏಳು ವರ್ಷಗಳವರೆಗೆ ಜೀವಂತವಾಗಿದ್ದಾರೆಂದು ಕೇಳದೆ ಇದ್ದಾಗ

ಸೆಕ್ಷನ್‌ 13(2)ರಡಿಯಲ್ಲಿ ಹೆಂಡತಿಗೆ ಲಭ್ಯವಿರುವ ಕಾರಣಗಳು:

  1. ಗಂಡನು ಇನ್ನೊಂದು ಮದುವೆಯಾದಾಗ ಅಥವಾ ಅರ್ಜಿದಾರಳನ್ನು ಮದುವೆಯಾಗುವ ಮೊದಲೇ ಗಂಡನಿಗೆ ಜೀವಂತವಿರುವ ಹೆಂಡತಿ ಇದ್ದಾಗ
  2. ಗಂಡನು ಲೈಂಗಿಕ ಅಪರಾಧಗಳಲ್ಲಿ ಆರೋಪಿಯಾದಾಗ
  3. ಜೀವನಾಂಶ ಡಿಕ್ರಿ ಹೊರಡಿಸಿದ ಒಂದು ವರ್ಷದ ನಂತರವೂ ದಂಪತಿಗಳ ಮಧ್ಯೆ ಸಹಬಾಳ್ವೆ ಸಾಧ್ಯವಿಲ್ಲದಿದ್ದಾಗ, ಮತ್ತು
  4. ಬಾಲವಿವಾಹದಂತಹ ಸಂದರ್ಭಗಳಲ್ಲಿ, ಹುಡುಗಿಯು 15 ವರ್ಷ ವಯಸ್ಸಿನ ನಂತರ ಮತ್ತು 18 ವರ್ಷ ತುಂಬುವುದರೊಳಗೆ, ಅಂತಹ ವಿವಾಹವನ್ನು ನಿರಾಕಾರಿಸಿದಾಗ

ಇಂತಹ ಸಂದರ್ಭ ಮತ್ತು ಕಾರಣಗಳ ಆಧಾರದ ಮೇಲೆ ನ್ಯಾಯಿಕ ಪ್ರತ್ಯೇಕೀಕರಣ ಕೋರಿ ನ್ಯಾಯಲದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅದಷ್ಟೇ ಅಲ್ಲದೆ, ಸದರಿ ಅಧಿನಿಯನಮದ ಅಡಿಯಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದಾಗ, ಬೇರೆ ಧರ್ಮಕ್ಕೆ ಮತಾಂತರ ಹೊಂದಿದ, ಸನ್ಯಾಸ ದೀಕ್ಷೆ ಪಡೆದ ಮತ್ತು ಒಬ್ಬ ಪಕ್ಷಕಾರರ ಬಗ್ಗೆ ಇನ್ನೊಬ್ಬ ಪಕ್ಷಕಾರರು ಏಳು ವರ್ಷಗಳವರೆಗೆ ಜೀವಂತವಾಗಿದ್ದಾರೆಂದು ಕೇಳದೆ ಇರುವಂತಹ ಕಾರಣಗಳ ಹೊರತು ಪಡಿಸಿ, ನ್ಯಾಯಾಲಯಕ್ಕೆ ಕೆಲ ಪ್ರಕರಣಗಳಲ್ಲಿ ಸಂದರ್ಭಾನುಸಾರ ಸರಿಯೆನಿಸಿದರೆ, ವಿಚ್ಛೇದನದ ಹೊರತು ನ್ಯಾಯಿಕ ಪ್ರತೇಕೀಕರಣದ ಡಿಕ್ರಿ ಹೊರಡಿಸಬಹುದಾಗಿದೆ.[ii] ಇತ್ತೀಚೆಗೆ, ತ್ರಿಪುರಾ ಹೈಕೋರ್ಟ್‌ ಮಾನವೀಯ ನೆಲೆಗಳ ನಿಟ್ಟಿನಲ್ಲಿ ಮತ್ತು ವಿಶೇಷ ಕಾರಣಗಳ ಮೇಲೆ ವಿಚ್ಛೇದನದ ಪ್ರಕರಣವೊಂದರಲ್ಲಿ ನ್ಯಾಯಿಕ ಪ್ರತ್ಯೇಕೀಕರಣದ ಆದೇಶ ಹೊರಡಿಸಿದೆ.[iii]

ಈ ಮೇಲೆ ವಿವರಿಸಿದ ಕಾರಣಗಳ ಮೇಲೆ ಮತ್ತು “ದಾಂಪತ್ಯಾಧಿಕಾರಗಳ ಪೂರ್ವ ಸ್ಥಿತಿ ಪ್ರಾಪ್ತಿ(Restitution of Conjugal rights)[iv]”ಯ ಡಿಕ್ರಿಯ ಜಾರಿ ವಿಫಲಗೊಂಡಾಗ  ʼವಿಶೇಷ ವಿವಾಹ ಕಾಯ್ದೆ, 1954ʼರಡಿಯಲ್ಲಿ ನ್ಯಾಯಿಕ ಪ್ರತ್ಯೇಕೀಕರಣ ಕೋರಿ ಅರ್ಜಿಸಲ್ಲಿಬಹುದು. ದಾಂಪತ್ಯಾಧಿಕಾರಗಳ ಪೂರ್ವ ಸ್ಥಿತಿ ಪ್ರಾಪ್ತಿ ಎಂದರೆ ಯಾವುದೇ ಕಾರಣಗಳಿಲ್ಲದೆ, ಮದುವೆಯ ಒಬ್ಬ ಪಕ್ಷಗಾರರು ಮದುವೆಯ ಹೊಣೆಯಿಂದ ತಪ್ಪಿಸಿಕೊಂಡು ಬೇರೆಯಾಗಿ ಹೋಗುವ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಜೊತೆಯಾಗಿ ಬಾಳಲು ಆದೇಶವೀಯಲು ಕೋರಿ ಸಲ್ಲಿಸುವ ಅರ್ಜಿ.

ನ್ಯಾಯಿಕ ಪ್ರತ್ಯೇಕೀಕರಣದ ಪರಿಣಾಮಗಳು:

  1. ನ್ಯಾಯಿಕ ಪ್ರತ್ಯೇಕೀಕರಣ ಪಡೆದ ಗಂಡಹೆಂಡಿರು ರಾಜಿ ಮಾಡಿಕೊಂಡು ಮತ್ತೆ ಬಾಳು ನಡೆಸಲು ಅವಕಾಶವಿರುತ್ತದೆ.
  2. ನ್ಯಾಯಿಕ ಪ್ರತ್ಯೇಕೀಕರಣದ ಕಾಲಾವಧಿಯಲ್ಲೂ ಗಂಡನು ಹೆಂಡತಿಗೆ ಜೀವನ ನಿರ್ವಹಣೆಗೆ ಹಣ ಕೊಡಲು ಬಾಧ್ಯನಾಗಿರುತ್ತಾನೆ.[v]
  3. ನ್ಯಾಯಿಕ ಪ್ರತ್ಯೇಕೀಕರಣದ ಕಾಲಾವಧಿಯಲ್ಲಿ ಯಾವುದೇ ಪಕ್ಷಕಾರರು ಇನ್ನೊಬ್ಬ ಪಕ್ಷಕಾರರ ಒಪ್ಪಿಗೆ ಪಡೆಯದೆ ದತ್ತು ಪಡೆಯುವಂತಿಲ್ಲ.[vi]
  4. ನ್ಯಾಯಿಕ ಪ್ರತ್ಯೇಕೀಕರಣವು ಮದುವೆಯನ್ನು ಕೊನೆಗೊಳಿಸುವುದಿಲ್ಲವಾದ್ದರಿಂದ, ಯಾವುದೇ ಪಕ್ಷಕಾರರು ಇನ್ನೊಂದು ಮದುವೆಯಾಗುವಂತಿಲ್ಲ.
  5. ಒಂದು ವರ್ಷಕ್ಕೂ ಮೇಲ್ಪಟ್ಟು ವಿವಾಹದ ಪಕ್ಷಕಾರರೂ ನ್ಯಾಯಿಕ ಪ್ರತ್ಯೇಕೀಕರಣ ಮುಂದುವರೆಸಿದ್ದೆ ಆದಲ್ಲಿ ಹಾಗೂ ಮರು ಸಹಬಾಳ್ವೆ ನಡೆಸದೆ ಇದ್ದಾಗ, ಇದನ್ನು ತ್ಯಜಿಸುವಿಕೆ ಎಂದು ಲೆಕ್ಕಿಸಲಾಗುತ್ತದೆ ಮತ್ತು ಮುಂದುವರೆದು ವಿಚ್ಛೇದನ ಪಡೆಯಲು ಸಹ ಕಾರಣವಾಗುತ್ತದೆ.

ಹಿಂದೂ ವಿವಾಹ ಕಾಯ್ದೆ, 1955, ಸೆಕ್ಷನ್‌ 10(2)ರ ಪ್ರಕಾರ ನ್ಯಾಯಾಲಯವು ನ್ಯಾಯಿಕ ಪ್ರತ್ಯಕೀಕರಣಕ್ಕೆ ಡಿಕ್ರಿ/ಆದೇಶ ಹೊರಡಿಸಿದಾಗ ಅರ್ಜಿದಾರಳು/ನು, ಪ್ರತಿ-ಅರ್ಜಿದಾರಳೊಂದಿಗೆ/ನೊಂದಿಗೆ ಆ ತರುವಾಯ ಸಹ ವಾಸಿಸಲು ಬದ್ಧನಾಗಿರುವುದಿಲ್ಲ/ಳಾಗಿರುವುದಿಲ್ಲ, ಆದರೆ, ನ್ಯಾಯಲಯವು, ಪಕ್ಷಕಾರರಲ್ಲಿ ಯಾರಾದರೂ ಒಬ್ಬರ ಅರ್ಜಿಯ ಮೂಲಕದ ಕೋರಿಕೆಯ ಮೇಲೆ ಮತ್ತು ಆ ಅರ್ಜಿಯಲ್ಲಿರುವ ಹೇಳಿಕೆಗಳ ಸತ್ಯಾಂಶದ ಬಗ್ಗೆ ತನಗೆ ಮನದಟ್ಟಾದಲ್ಲಿ ಹಾಗೆ ಮಾಡುವುದು ನ್ಯಾಯಸಮ್ಮತವೆಂದು ಮತ್ತು ಯುಕ್ತವೆಂದು ತಾನು ಪರ್ಯಾಯಲೋಚಿಸಿದರೆ, ಆ ಡಿಕ್ರಿ/ಆದೇಶವನ್ನ ರದ್ದುಗೊಳಿಸಬಹುದು.

ಎಷ್ಟೋ ವರ್ಷಗಳ ಕಾಲ ಜೊತೆಗೆ ಬಾಳು ನಡೆಸಿ ಇಳಿ ವಯಸ್ಸಿನಲ್ಲಿ ಯಾವುದೋ ಮನಸ್ತಾಪದಿಂದಾಗಿಯೋ ಅಥವಾ ತಪ್ಪು ತಿಳುವಳಿಕೆಯಿಂದಾಗಿಯೋ ಒಲ್ಲದ ಮನಸ್ಸಿಂದ ವಿಚ್ಛೇದನದ ಮೊರೆ ಹೋಗುವವರಿದ್ದಾರೆ. ಸಾಕಷ್ಟು ಹೊಂದಾಣೆಕೆ ಇದ್ದರೂ, ಯಾವುದೋ ಸಣ್ಣ-ಪುಟ್ಟ ಕಾರಣಗಳಿಗೆ, ಬಗೆಹರಿಯದ ಮನಸ್ತಾಪದಿಂದಾಗಿ ವಿಚ್ಛೆದನದ ಪರಿಣಾಮಗಳ ಕುರಿತು ಅರಿಯದೆ ಅದರ ಮೊರೆ ಹೋಗಿ ನಂತರ ಪರಿತಪಿಸುವ ವಯಸ್ಕರೂ ಕಡಿಮೆ ಇಲ್ಲ. ಅಂತಹವರಿಗೆಲ್ಲ, ನ್ಯಾಯಿಕ ಪ್ರತೇಕೀಕರಣ ಅನ್ನೋದು ಒಂದು ಸೂಕ್ತ ಹಾಗೂ ಅನುಕೂಲಕರ ಪರಿಹಾರವಷ್ಟೇ ಅಲ್ಲದೆ, ಎಷ್ಟೋ ಕುಟುಂಬಗಳ ಅಸ್ತಿತ್ವ ಉಳಿಸುವಲ್ಲಿ ಇದು ಸಹಾಯಕಾರಿಯಾಗುವುದು ಹೌದು.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)


[i] ಹಿಂದೂ ವಿವಾಹ ಕಾಯ್ದೆ, 1955

[ii] ಸೆಕ್ಷನ್‌ 13A, ಹಿಂದೂ ವಿವಾಹ ಕಾಯ್ದೆ, 1955

[iii] https://indiankanoon.org/doc/116679555/

[iv] ಹಿಂದೂ ವಿವಾಹ ಕಾಯ್ದೆ, 1955ರ ಸೆಕ್ಷನ್‌ 9 ಮತ್ತು ವಿಶೇಷ ವಿವಾಹ ಕಾಯ್ದೆ, 1954ರ ಸೆಕ್ಷನ್‌ 22

[v] https://indiankanoon.org/doc/21665366/ ಸಂಜುದೇವಿ ವಿ. ಸ್ಟೇಟ್‌ ಆಫ್‌ ಬಿಹಾರ ಮತ್ತು ಇತರೆ,

[vi]https://hcservices.ecourts.gov.in/ecourtindiaHC/cases/display_pdf.php?filename=T2Oj5Y97nX2tmju2FyqIU6BW4Prt0Q8hzUUNE6C6kIqphbACq0t0mA6pGJWxellW&caseno=FA/134/2013&cCode=1&appFlag=

Spread the love