ಲಂಬೋದರನ ಶಕ್ತಿಮದ್ದು ಆಟದಲ್ಲಿ ಸಲ್ಲ: ಉದ್ದೀಪನ ಮದ್ದು ತಡೆ ಕಾಯ್ದೆಯ ಸುತ್ತ
ಇತ್ತೀಚೆಗೆ ಶಾಲೆಯ ದಿನಗಳಿಂದಲೇ ಮಕ್ಕಳ ಓದಿನ ಜೊತೆಗೆ ಕ್ರೀಡೆಗಳಿಗೂ ಹುರುಪು ನೀಡುವ ಒಳ್ಳೆ ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ಈ ನಡೆ ಇಂದು ಭಾರತ ಕ್ರೀಡೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತಿದೆ ಎಂಬುದಕ್ಕೆ ಸಾಕ್ಷಿ. ಪರಿಣಾಮವಾಗಿ ಈ ಶತಮಾನದ ಆರಂಭದಿಂದ ಭಾರತ ಎಲ್ಲಾ ಬಗೆಯ ಕ್ರೀಡೆಗಳಲ್ಲಿ ಒಳ್ಳೆ ಪೈಪೋಟಿ ನೀಡುತ್ತಾ ಒಂದು ಸದೃಢ ಕ್ರೀಡಾ ದೇಶವಾಗಿ ಹೊರಹೊಮ್ಮುತ್ತಾ ದಾಪುಗಾಲಿಟ್ಟಿದೆ. ಅದರಂತೆಯೇ ಏಷಿಯನ್ ಗೇಮ್ಸ್, ಕಾಮನ್ ವೆಲ್ತ್ ಗೇಮ್ಸ್ ಹಾಗೂ ಒಲಂಪಿಕ್ಸ್ ನಲ್ಲಿ ಭಾರತದ ಪದಕಗಳ ಬೇಟೆ ಮುಂದಿನ ಪೀಳಿಗೆಗೆ ಬೇಕಾದ ಭರವಸೆ ನೀಡಿ ಕ್ರೀಡೆಯತ್ತ ಸೆಳೆಯುವಲ್ಲಿ ಸಹಕಾರಿಯಾಗಿದೆ. ಹಿಂದೆಂದೂ ಕಾಣದಂತ ಗೆಲುವುಗಳು ಭಾರತದ ಪಾಲಾಗಿರುವುದರಿಂದ ಬೇರೆ ದೇಶಗಳು ಇಂದು ಭಾರತದತ್ತ ತಿರುಗಿ ನೋಡುತ್ತಿವೆ. ಹೀಗೆ ಇಂತಹ ಅಭೂತಪೂರ್ವ ಏಳಿಗೆ ಕಂಡು ಭಾರತ ಕ್ರೀಡೆಯಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ಸಮಯದಲ್ಲೇ ಕ್ರೀಡೆಯ ಕ್ಷೇತ್ರಕ್ಕೇ ಕಳಂಕ ತರುವಂತಹ ಹಲವಾರು ಘಟನೆಗಳು ಜರುಗುತ್ತಲ್ಲೇ ಇರುವುದು ದುರಂತವೇ ಸರಿ. ಆಟಕ್ಕೆ ಮತ್ತದರ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ನೀಡುವಂತಹ ಕೇಡಿನ ಸಂಗತಿಯೇ, ಆಟಗಾರರು ಉದ್ದೀಪನ ಮದ್ದು ಸೇವಿಸಿ ಕಣಕ್ಕಿಳಿಯುವ ರೂಢಿ. ಹೀಗೆ ಮಾಡಿ ಸಿಕ್ಕಿಬಿದ್ದಾಗ ಆಟಗಾರರ ಜೊತೆ ಅವರ ದೇಶಕ್ಕೂ ಜಾಗತಿಕ ಮಟ್ಟದಲ್ಲಿ ತೀವ್ರ ಮುಜುಗುರ ಹಾಗೂ ಅವಮಾನ. ಈ ಹಿಂದೆ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದು ಭಾರತದ ಅನೇಕ ಆಟಗಾರರು ಪೋಟಿಗಳಲ್ಲಿ ಗೆದ್ದ ತಮ್ಮ ಪದಕಗಳನ್ನೂ ಹಿಂದಿರುಗಿಸಿದ್ದಿದೆ. ದಶಕಗಳಿಂದ ಆಟಕ್ಕೆ ಕಂಟಕಪ್ರಾಯ ಆಗಿರುವ ಉದ್ದೀಪನ ಮದ್ದಿನ ಪ್ರಕರಣಗಳನ್ನು ಹತ್ತಿಕ್ಕಲು ಭಾರತ ಸರ್ಕಾರ ತಡವಾಗಿ ಆದರೂ ಕಡೆಗೂ ಕಾನೂನು ರೂಪಿಸಿ ತ್ವರಿತವಾಗಿ ಅದನ್ನು ಜಾರಿಗೆ ತಂದಿರುವುದು ಮೆಚ್ಚತಕ್ಕದ್ದು. 2022 ದ ಆಗಸ್ಟ್ ನಲ್ಲಿ ಜಾರಿಗೆ ಬಂದ ಆ ಕಾಯ್ದೆಯೇ ‘The National Anti-Doping Bill, 2021′(ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಕಾಯ್ದೆ).
ಕಾಯ್ದೆಯ ಸ್ಥೂಲ ಪರಿಚಯ:
ಲೋಕಸಭೆಯಲ್ಲಿ ಈ ಕಾಯ್ದೆಯನ್ನು ಮೊದಲ ಬಾರಿಗೆ ಡಿಸೆಂಬರ್ 2021 ರಲ್ಲಿ ಮಂಡಿಸಲಾಯಿತು. ಆ ಬಳಿಕ ಕೆಲವು ತಜ್ಞರ ಅನಿಸಿಕೆ ಹಾಗೂ ಅಭಿಪ್ರಾಯಗಳ ಮೇರೆಗೆ ಕೊಂಚ ತಿದ್ದುಪಡಿಗಳೊಂದಿಗೆ ಕಾಯ್ದೆಯನ್ನು ಅಧಿಕೃತವಾಗಿ ಜುಲೈ 27, 2022 ರಂದು ಅಂಗೀಕರಿಸಲಾಯಿತು. ಇದರ ಬೆನ್ನಲ್ಲೇ ರಾಜ್ಯಸಭೆಯಲ್ಲೂ ಈ ಕಾಯ್ದೆಗೆ ಹಸಿರು ನಿಶಾನೆ ದೊರೆತು, ಈ ಬಗೆಯ ಪ್ರತ್ಯೇಕವಾದ ಉದ್ದೀಪನ ಮದ್ದು ತಡೆ ಕಾಯ್ದೆ ಹೊಂದಿರುವ ಪ್ರಪಂಚದ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರಿತು. ಹಾಗಾಗಿ ಈ ಕಾಯ್ದೆ ಒಂದು ಮೈಲುಗಲ್ಲು ಎಂದೇ ಹೇಳಬೇಕು! National Anti-Doping Agency (NADA) ವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಆಜ್ಞೆ ಮಾಡಿರುವ ಈ ಕಾಯ್ದೆ ಆಟಗಾರರಿಗೆ ವರವೇ ಆಗಿದೆ, ಏಕೆಂದರೆ NADA ಸಮಿತಿಯು ಆರೋಪ ಹೊತ್ತಿರುವ ಆಟಗಾರರ ವಿಚಾರಣೆಯು ಪಾರದರ್ಶಕವಾಗಿ ನಡೆಯುವಂತೆ ಕ್ರಮ ಕೈಗೊಂಡು ಆ ವೇಳೆ ಅವರಿಗೆ ಸೂಕ್ತ ಕಾನೂನು ಸಲಹೆ ಹಾಗೂ ಬೆಂಬಲ ನೀಡುವಂತಹ ಏರ್ಪಾಡು ಕೂಡ ಮಾಡಲಿದೆ.
ಕಾಯ್ದೆಯ ಪ್ರಮುಖ ಅಂಶಗಳು:
ಉದೀಪನ ಮದ್ದು ಸೇವೆನೆ ತಡೆ: ಕಾಯ್ದೆಯು ಆಟಗಾರರು ಮತ್ತವರ ತಂಡದ ಸಹಾಯಕರು ಉದ್ದೀಪನ ಮದ್ದನ್ನು ಸೇವಿಸದಂತೆ ತಡೆಹಿಡಿದು, ಇದರ ಉಲ್ಲಂಘನೆಯನ್ನು ಕಾನೂನಾತ್ಮಕವಾಗಿ ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿದೆ. ಇದರೊಟ್ಟಿಗೆ ಆಟಗಾರರಿಗೆ ನಿಷೇಧಿತ ಪದಾರ್ಥಗಳ ಬಗ್ಗೆ ಮಾಹಿತಿ ನೀಡಿ ಅವುಗಳಿಂದ ದೂರವಿರುವಂತೆ ನಿಯಮಗಳನ್ನು ರೂಪಿಸಿದೆ.
ಉಲ್ಲಂಘನೆಯ ಪರಿಣಾಮಗಳು: ಇಲ್ಲಿ ಕಾಯ್ದೆಯನ್ನು ಉಲ್ಲಂಘಿಸಿ ಉದ್ದೀಪನ ಮದ್ದಿನ ಸೇವನೆಯಲ್ಲಿ ತೊಡಗಿದ ಆಟಗಾರರು ಗೆದ್ದ ಪದಕ, ಪ್ರಶಸ್ತಿಗಳನ್ನು ಹಿಂಪಡೆದು, ಅವರಿಗೆ ಕೆಲವು ವರ್ಷಗಳ ಬಹಿಷ್ಕಾರದ ಜೊತೆಗೆ ದಂಡ ಕೂಡ ವಿಧಿಸಬಹುದಾಗಿದೆ. ಇನ್ನೂ ಗಂಭೀರ ಪ್ರಕರಣಗಳಲ್ಲಿ ಸಿಲುಕುವ ಆಟಗಾರರು ಮತ್ತೆಂದೂ ಕಣಕ್ಕಳಿಯದಂತೆ ನಿರ್ಬಂಧಿಸುವ ಅಧಿಕಾರ ಕೂಡ ಕಾಯ್ದೆ ‘NADA’ ಸಮಿತಿಗೆ ನೀಡಿದೆ.
‘NADA’ ದ ಕಾರ್ಯವೈಖರಿ: ಭಾರತ ಸರ್ಕಾರ ನೇಮಿಸುವ ಡೈರೆಕ್ಟರ್ ಜೆನೆರಲ್ ರ ಮುಂದಾಳ್ತನದಲ್ಲಿ ಕೆಲಸ ಮಾಡುವ ‘NADA’ ಆಟಗಾರರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸುವುದರೊಟ್ಟಿಗೆ ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ಅವುಗಳ ಸಂಪೂರ್ಣ ತನಿಖೆಯ ಜವಾಬ್ದಾರಿ ಕೂಡ ಹೊತ್ತಿದೆ. ಅದಲ್ಲದೆ ಆಟಗಾರರಿಗೆ ಕಾಯ್ದೆಯ ಕುರಿತು ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಹೊಣೆಯೂ ಇದೇ ಸಮಿತಿಯ ಹೆಗಲೇರಿದೆ.
ಆಟಗಾರರ ವಿವರಗಳು: ‘NADA’ ಗೆ ಆಟಗಾರರ ಪರಿಪೂರ್ಣ ಮಾಹಿತಿಯನ್ನು (ಅವರ ಆರೋಗ್ಯದ ಒಟ್ಟಾರೆ ಸಾರಾಂಶವಿರುವ ವರದಿ, ಅವರ ಇತ್ತೀಚಿಗಿನ ಪ್ರಯಾಣದ ಮಾಹಿತಿ ಹಾಗೂ ಸೇವಿಸುತ್ತಿರುವ ಔಷಧಿ ಅಥವಾ ಪ್ರದರ್ಶನವರ್ಧಕಗಳು) ಬೇಕಾದಲ್ಲಿ ಕೇಳಿ ಪಡೆದುಕೊಳ್ಳುವ ಸಂಪೂರ್ಣ ಹಕ್ಕು ಇರಲಿದೆ. ಕಲೆ ಹಾಕಿರುವ ಆಟಗಾರರ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದರೂ ಉದ್ದೀಪನ ಮದ್ದಿನ ಪರೀಕ್ಷೆಯಲ್ಲಿ ಸಿಕ್ಕಿಬೀಳುವವರ ಹೆಸರಿನೊಂದಿಗೆ ಉಲ್ಲಂಘನೆಯ ವಿವರ ಕೂಡ ಬಳಿಕ ಸಾರ್ವಜನಿಕಗೊಳಿಸುವ ಅಧಿಕಾರ ಸಮಿತಿಗೆ ಇರಲಿದೆ.
ಡೋಪ್ ಪರೀಕ್ಷೆ ಲ್ಯಾಬ್ ಗಳು: ಪ್ರಸ್ತುತ ಕಾರ್ಯ ವಹಿಸುತ್ತಿರುವ ರಾಷ್ಟ್ರೀಯ ಡೋಪ್ ಪ್ರರೀಕ್ಷೆ ಲ್ಯಾಬ್ ನೊಟ್ಟಿಗೆ ಇನ್ನೂ ಹೆಚ್ಚು ಲ್ಯಾಬ್ ಗಳನ್ನು ದೇಶದ ನಾನಾ ಕಡೆ ಹುಟ್ಟುಹಾಕುವ ಯೋಜನೆ ಸಮಿತಿ ಹೊಂದಿದೆ. ಭಾರತದ ಸಾವಿರಾರು ಮಂದಿ ಆಟಗಾರರು ಈ ಕಡ್ಡಾಯ ಉದ್ದೀಪನ ಮದ್ದು ಪರೀಕ್ಷೆಗೆ ಒಳಗಾಗುವುದರಿಂದ ಹೆಚ್ಚುವರಿ ಲ್ಯಾಬ್ ಗಳ ಅಗತ್ಯತೆಯನ್ನು ಕಾಯ್ದೆ ಒತ್ತಿ ಹೇಳಿದೆ.
ಕಾಯ್ದೆಯ ಪ್ರಾಮುಖ್ಯತೆ:
1.ಜಾಗತಿಕ ಮಟ್ಟದ ಪಂದ್ಯಾವಳಿಗಳಿಗೆ ಕಂಟಕಪ್ರಾಯವಾಗಿರುವ ಉದ್ದೀಪನ ಮದ್ದಿನ ಪ್ರಕರಣಗಳನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಈ ಕಾಯ್ದೆ ಮಹತ್ವ ಪಡೆದುಕೊಂಡಿದೆ. ಅದಲ್ಲದೆ ಅಚಾತುರ್ಯದಿಂದ ಇಂತಹ ಆರೋಪಕ್ಕೆ ಗುರಿಯಾಗಿರುವ ಹಲವಾರು ಆಟಗಾರರಿಗೆ ನಿರ್ದಿಷ್ಟ ಸಮಯದ ಒಳಗೆ ಕಾನೂನಿನಡಿ ನ್ಯಾಯ ಒದಗಿಸುವಲ್ಲಿ ಕೂಡ ಹೊಸ ಕಾಯ್ದೆ ಸಹಕಾರಿಯಾಲಿದೆ. ಆಟಗಾರರ ಹಕ್ಕುಗಳನ್ನು ಎತ್ತಿಹಿಡಿದು ಅವರನ್ನು ಕಾಪಾಡುವಲ್ಲಿಯೂ ಕಾಯ್ದೆ ನೆರವಾಗಲಿದೆ.
- ದೇಶದಲ್ಲಿ ಕ್ರೀಡೆಗೆ ಚ್ಯುತಿ ಬಾರದಂತೆ ಕ್ರಮ ಕೈಗೊಳ್ಳುವಲ್ಲಿ ಕಾಯ್ದೆ ದಿಟ್ಟ ಹೆಜ್ಜೆ ಆಗಿದೆ. ಹಾಗೂ ಅಂತರಾಷ್ಟ್ರೀಯ ಕ್ರೀಡಾ ಸಮಿತಿಗಳ ಮುಂದೆ ಹೊಸ ಕಾಯ್ದೆಯು ಭಾರತದ ವರ್ಚಸ್ಸನ್ನು ಹೆಚ್ಚಿಸಿದೆ. ಭಾರತದ ನೇರ್ಮೆ ಹಾಗೂ ಕ್ರೀಡಾ ಕಳಕಳಿ ಇತರೆ ಸದಸ್ಯ ದೇಶಗಳಿಗೂ ಮಾದರಿಯಾಗಿದೆ.
- ಕಾಯ್ದೆಯು ಒಂದು ವೃತ್ತಿಪರ ಮಾದರಿಯ ಕಾರ್ಯಪ್ರವೃತ್ತ ವ್ಯವಸ್ಥೆಯನ್ನು ಜಾರಿಗೆ ತಂದು ಕ್ರೀಡಾ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದೆ. ಪಾರದರ್ಶಕತೆ ಹೊಂದಿರುವ ಈ ವ್ಯವಸ್ಥೆಯಲ್ಲಿ ವೃತ್ತಿಪರತೆಯನ್ನು ಮೈಗೂಡಿಸಿಕೊಂಡಿರುವ ಅಧಿಕಾರಿಗಳು ಚುಕ್ಕಾಣಿ ಹಿಡಿಯುವಂತೆ ನೋಡಿಕೊಳ್ಳುವುದು ಕೂಡ ಈ ಕಾಯ್ದೆಯ ಪ್ರಮುಖ ಅಂಶ ಆಗಿದೆ.
- ‘NADA’ ಮತ್ತು National Dope Testing Laboratory (NDTL) ಗೆ ಭಾರತದ ಹೊಸ ಕಾಯ್ದೆಯು ಅಧಿಕೃತತೆಯನ್ನು ನೀಡಿ ಅವುಗಳ ಕಾರ್ಯಾಚರಣೆಗೆ ಪುಷ್ಟಿ ನೀಡಲಿದೆ. ಹಾಗೂ ಇವುಗಳ ಕ್ರೀಡಾ ಸಂಬಂಧಿತ ಚಟುವಟಿಕೆಗಳಿಗೆ ಬೇಕಾದ ಹೆಚ್ಚಿನ ಆರ್ಥಿಕ ನೆರವು ನೀಡುವಲ್ಲಿ ಕೂಡ ಹೊಸ ಕಾಯ್ದೆ ಸಹಕಾರ ನೀಡಲಿದೆ.
- ನೇರ ಹಾಗೂ ಪರೋಕ್ಷವಾಗಿ ಈ ಕ್ಷೇತ್ರದಲ್ಲಿ ಆಟಗಾರರಿಗೆ ಮತ್ತವರ ಸಹಾಯಕರಿಗೆ ಭವಿಷ್ಯದಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವಲ್ಲಿ ಕೂಡ ಕಾಯ್ದೆ ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ.
- ಉದ್ದೀಪಿನ ಮದ್ದಿನ ಕುರಿತು ಆಗಲೇಬೇಕಾದ ವೈಜ್ಞಾನಿಕ ಪ್ರಯೋಗಗಳು ಹಾಗೂ ಸಂಶೋಧನೆಗಳಿಗೆ ಇಂಬು ನೀಡುವಂತಹ ಅಂಶಗಳು ಕಾಯ್ದೆಯಲ್ಲಿ ಪ್ರಸ್ತಾಪಿಸಲಾಗಿದ್ದು ಒಟ್ಟಾರೆ ಈ ಕ್ಷೇತ್ರದ ಬೆಳವಣಿಗೆಗೆ ಹೊಸ ಆಯಾಮ ದೊರೆತಂದಾಗಿದೆ.
- ಆಟಗಾರರು ಸೇವಿಸಬೇಕಾದ ಪ್ರತ್ಯೇಕ ಆಹಾರದ ಬಗೆಗೆ ಅಧಿಕೃತವಾಗಿ ಒಂದು ಸ್ಪಷ್ಟ ಮಾನದಂಡ ಸಿದ್ಧಪಡಿಸಿ, ತಜ್ಞರ ಅನಿಸಿಕೆಯ ಮೇರೆಗೆ ಬೇಕು-ಬೇಡಗಳನ್ನು ವಿವರಿಸಿ, ಆಟಗಾರರಿಗಾಗಿ ಗುಣಮಟ್ಟದ ಆಹಾರಕ್ರಮವನ್ನು ರೂಪಿಸುವಲ್ಲಿ ಕಾಯ್ದೆ ಒಪ್ಪುವಂತಹ ಹೊಸ ಬದಲಾವಣೆಗಳನ್ನು ತಂದಿದೆ.
ಕಾಯ್ದೆಯ ಕುಂದುಗಳು :
- ‘NADA’ ದ ಕಾರ್ಯಾಚರಣೆಗಳ ಹೊಣೆ ಹೊತ್ತಿರುವ ಡೈರೆಕ್ಟರ್ ಜೆನೆರಲ್ ರಿಗೆ ಇರಬೇಕಾದ ಕನಿಷ್ಠ ಅರ್ಹತೆಯ ಬಗ್ಗೆ ಕಾಯ್ದೆಯು ಪ್ರಸ್ತಾಪಿಸದೇ ಇರುವುದು ಗೊಂದಲಗಳಿಗೆ ಕಾರಣವಾಗಿದೆ. ಹಾಗೂ ಕೇಂದ್ರ ಸರ್ಕಾರವೇ ಸಂಪೂರ್ಣ ಅಧಿಕಾರ ಹೊಂದಿರುವುದರಿಂದ ತಮಗೆ ಬೇಕಾದವರನ್ನು ಹುದ್ದೆಗೆ ನೇಮಿಸುವ ಅಪಾಯ ಕೂಡ ಇದೆ. ಹಾಗೂ ಅವರನ್ನು ಉಚ್ಚಾಟಿಸುವ ಅಧಿಕಾರ ಕೂಡ ಕೇಂದ್ರ ಸರ್ಕಾರದ ಬಳಿಯೇ ಇದೆ.
- ಒಂದೇ ಎಡೆಯಲ್ಲಿ ಕೇಂದ್ರ ಸರ್ಕಾರದ ಬಳಿ ಅಧಿಕಾರದ ಕ್ರೋಢಿಕರಣವಾಗುವುದರಿಂದ ಡೈರೆಕ್ಟರ್ ಜೆನೆರಲ್ ಎಂದೂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಾಗದಂತಹ ವಾತಾವರಣ ಸೃಷ್ಟಿಯಾಗುತ್ತದೆ. ಇದು World Anti-Doping Agency (WADA)ದ ಅಂತರಾಷ್ಟ್ರೀಯ ಕಾಯ್ದೆಯ ಉಲ್ಲಂಘನೆ ಕೂಡ ಆಗಲಿದೆ.
- ಕಾರ್ಯ ವಿಧಾನಗಳಲ್ಲಿ ವ್ಯತ್ಯಾಸ ಕಂಡುಬಂದಾಗ ವಿಚಾರಣೆಗೆ ಕೂಡ ಅವಕಾಶ ನೀಡದೆ ಡೈರೆಕ್ಟರ್ ಜೆನೆರಲ್ ರನ್ನು ಏಕಾಏಕಿ ಸೇವೆಯಿಂದ ವಜಾಗೊಳಿಸುವ ಸಂಪೂರ್ಣ ಹಕ್ಕು ಕೇಂದ್ರ ಸರ್ಕಾರಕ್ಕೆ ಇರುವುದು ಈ ಕಾಯ್ದೆಯ ದೊಡ್ಡ ಕುಂದು.
- ‘NADA’ ಆಟಗಾರರ ವಿಚಾರಣೆಗಾಗಿ ಹುಟ್ಟುಹಾಕಿರುವ ಒಳಸಮಿತಿಯ ವಿವರ ಹಾಗೂ ಕಾರ್ಯವೈಖರಿ ಮೇಲ್ನೋಟಕ್ಕೆ ಬಹಳ ಗೋಜಲಾಗಿ ಕಂಡುಬರುತ್ತದೆ. ಕಾಯ್ದೆಯು ಈ ಸಮಿತಿಗೆ ಒಬ್ಬ ಅಧ್ಯಕ್ಷ, ನಾಲ್ಕು ಉಪಾಧ್ಯಕ್ಷರು ಹಾಗೂ ಹತ್ತು ಸದಸ್ಯರು ಇರತಕ್ಕದ್ದು ಎಂದು ನಿಯಮ ರೂಪಿಸಿದೆ. ಆದರೆ ಒಂದು ಪ್ರಕರಣ ಸಂಬಂಧಿತ ವಿಚಾರಣೆ ವೇಳೆ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ನಾಲ್ಕು ಉಪಾಧ್ಯಕ್ಷರ ಪೈಕಿ ಯಾರು ಸಮಿತಿಯ ಹೊಣೆ ಹೊರಬೇಕು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಈ ಕುಂದು ಸಮಿತಿಯಲ್ಲಿ ಆಂತರಿಕ ಕಲಹ ಹಾಗೂ ಪರಸ್ಪರ ಅಪನಂಬಿಕೆಗಳಿಗೆ ಎಡೆ ಮಾಡಿಕೊಡಲಿದೆ.
ಈ ಕುಂದುಗಳ ಹೊರತಾಗಿಯೂ 2021 ರ ಉದ್ದೀಪನ ಮದ್ದು ತಡೆ ಕಾಯ್ದೆ ಭಾರತದ ಕ್ರೀಡಾ ಭವಿಷ್ಯಕ್ಕೆ ಪೂರಕವಾಗಲಿದೆ ಎಂದು ಖಂಡಿತ ಹೇಳಬಹುದಾಗಿದೆ. ರಾಜ್ಯಸಭೆ ಸದಸ್ಯೆಯಾಗಿರುವ ಕೇರಳದ ದಿಗ್ಗಜೆ ಓಟಗಾರ್ತಿ ಪಿ.ಟಿ ಉಷಾ ಅವರೂ ಈ ಕಾಯ್ದೆಯನ್ನು ಮುಕ್ತಕಂಠದಿಂದ ಹೊಗಳಿ ಸ್ವಾಗತಿಸಿದ್ದು ಭುಗಿಲೆದ್ದಿದ್ದ ಹಲವಾರು ಅನುಮಾನಗಳನ್ನು ದೂರ ಮಾಡಿರುವುದು ಸುಳ್ಳಲ್ಲ. ಕಾಯ್ದೆಯ ಅಷ್ಟೂ ಅಂಶಗಳು ಕೂಡಲೇ ಜಾರಿಗೆ ಬಂದು ಮುಂದಿನ 2024 ರ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತದ ಆಟಗಾರರು ಯಾವುದೇ ಕಳಂಕಕ್ಕೆ ಗುರಿಯಾಗದೆ ಹೆಚ್ಚೆಚ್ಚು ಪದಕಗಳನ್ನು ಗೆದ್ದು ಬರಲಿ ಎಂದು ಹರಸೋಣ! ಇಂದು ಒಲಂಪಿಕ್ಸ್ ನಲ್ಲಿ ಒಂದಕಿಯಲ್ಲಿ ಗೆಲ್ಲುತ್ತಿರುವ ಪದಕಗಳು ಎರಡಂಕಿ, ಮೂರಂಕಿ ತಲುಪುವ ದಿನ ಆದಷ್ಟು ಬೇಗ ಬರಲಿ ಎಂಬುದೇ ಆಟವನ್ನು ಪ್ರೀತಿಸುವ ಭಾರತೀಯರೆಲ್ಲರ ಹೆಬ್ಬಯಕೆ. ಏಕೆಂದರೆ ಭಾರತದಲ್ಲಿ ಪ್ರತಿಭೆಗೇನು ಕೊರತೆಯಿಲ್ಲ. ಅದನ್ನು ಪೋಷಿಸಿ, ಪುರಸ್ಕರಿಸುವ ಸರ್ಕಾರ ಹಾಗೂ ವ್ಯವಸ್ಥೆ ಬೇಕಿದೆ ಅಷ್ಟೇ. ಈ ನಿಟ್ಟಿನಲ್ಲಿ ಉದ್ದೀಪನ ಮದ್ದು ತಡೆ ಕಾಯ್ದೆ ಹಲವಾರು ಮೊದಲುಗಳಿಗೆ ಸಾಕ್ಷಿಯಾಗಲಿ, ಹಾಗೂ ಭಾರತ ಜಾಗತಿಕ ಮಟ್ಟದ ಪಂದ್ಯಾವಳಿಗಳಲ್ಲಿ ತಲೆ ಎತ್ತಿ ನಿಲ್ಲುವಂತಾಗಲಿ.
(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)