ಲೇಖನಗಳು

ದೇವದಾಸಿ ಪದ್ಧತಿ : ಇನ್ನೂ ಅಳಿಯದ ಶಾಪ

ದೇವದಾಸಿ ಪದ್ಧತಿ ಶುರುವಾಗಿದ್ದು ಸುಮಾರು 6ನೇ ಶತಮಾನದಿಂದ. ಯುವತಿಯರು ದೇವರಿಗೆ ಸೇರಿದವರು ಎಂಬ ಪರಿಕಲ್ಪನೆ ಅಲ್ಲಿತ್ತು. ದೇವರ ಹೆಸರಲ್ಲಿ ನೃತ್ಯ ಮತ್ತು ಸಂಗೀತವನ್ನು ಸಹ ಯುವತಿಯರು ಕಲಿಯುತ್ತಿದ್ದರು. ಹುಡುಗಿಯರು ಶಾಸ್ತ್ರೀಯ ನೃತ್ಯಗಳನ್ನು ಕಲಿಯುತ್ತಿದ್ದರು ಹಾಗೂ ಪೂಜೆ ಪುನಸ್ಕಾರಗಳನ್ನು ಮಾಡುತ್ತಾ ದೇವಾಲಯವನ್ನು ನೋಡಿಕೊಳ್ಳುತ್ತಿದ್ದರು. ಸಾಂಪ್ರದಾಯಿಕವಾಗಿ ನೃತ್ಯ ಹಾಗೂ ಸಂಗೀತ ದೇವಾಲಯಗಳ ಪೂಜೆಯ ಅವಿಭಾಜ್ಯ ಭಾಗಗಳಾಗಿರುವುದರಿಂದ ಸಮಾಜದಲ್ಲಿ ಆ ಹೆಣ್ಣು ಮಕ್ಕಳಿಗೆ ಉನ್ನತ ಸ್ಥಾನಮಾನವನ್ನು ಕಲ್ಪಿಸಿಕೊಡಲಾಗಿತ್ತು. ಆದರೆ ಕಾಲಕ್ರಮೇಣ ಈ ಹೆಣ್ಣುಮಕ್ಕಳನ್ನು ಅನಧಿಕೃತ ವೇಶ್ಯೆಯರನ್ನಾಗಿ ಮಾಡಲಾಯಿತು. ಮುಘಲರ ಮತ್ತು ಬ್ರಿಟಿಷ್ ಆಡಳಿತದಲ್ಲಿ ದೇವಾಲಯಗಳಿಗಿರುವ ಪ್ರಾಶಸ್ತ್ಯವೂ ಕಡಿಮೆಯಾಗಿ, ದೇವದಾಸಿಯರ ಸ್ಥಾನಮಾನವೂ ಸಹ ಸಮಾಜದಲ್ಲಿ ಕಡಿಮೆಯಾಗುತ್ತಾ ಹೋಗಿದ್ದು ಹಾಗೂ ಅವರು ಶೋಷಣೆಗೆ ಒಳಗಾದರು. ಪ್ರಸ್ತುತ ಆ ಪದ್ಧತಿ ಕಾನೂನು ಬಾಹಿರ. ಅದರ ಮೇಲೆ ಹಲವಾರು ತೀರ್ಪುಗಳಲ್ಲಿ ಪದ್ಧತಿಯ ರದ್ದತಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶಗಳಿದ್ದರೂ ಸಹ ಇನ್ನೂ ಈ ಸಾಮಾಜಿಕ ಪಿಡುಗು ಜೀವಂತವಾಗಿರುವುದು ಬೇಸರದ ಸಂಗತಿ.

ದೇವದಾಸಿ ಪದ್ಧತಿಯನ್ನು ತಡೆಗಟ್ಟಲು ಹಲವಾರು ರಾಜ್ಯಗಳು ಕಾನೂನುಗಳನ್ನು ಪಾಸು ಮಾಡಿವೆ.
ಬಾಂಬೆ ದೇವದಾಸಿ ರಕ್ಷಣಾ ಕಾಯ್ದೆ 1934, ಮದ್ರಾಸ್ ದೇವದಾಸಿ ಸಮರ್ಪಣಾ ತಡೆಗಟ್ಟುವಿಕೆ ಕಾಯ್ದೆ 1947, ಕರ್ನಾಟಕ ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ 1982, ಆಂಧ್ರ ಪ್ರದೇಶ ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ 1988, ಮಹಾರಾಷ್ಟ್ರ ದೇವದಾಸಿ ಸಮರ್ಪಣಾ ರದ್ದು ಕಾಯ್ದೆ 2006, ಬಾಲ ನ್ಯಾಯ ಕಾಯ್ದೆ 2015, ಹಾಗೆಯೇ ಯುವ ಹೆಣ್ಣು ಮಕ್ಕಳನ್ನು ಲೈಂಗಿಕ ಶೋಷಣೆಗೆ ಹಾಗೂ ವೇಶ್ಯಾವಾಟಿಕೆಗೆ ಸಾಗಾಣಿಕೆ ಮಾಡುವುದನ್ನು ತಡೆಗಟ್ಟಲು ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ ಕಾಯ್ದೆ 1956 ಮುಂತಾದ ಕಾಯಿದೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ದೇವದಾಸಿ ಪದ್ಧತಿಯನ್ನು ರದ್ದುಗೊಳಿಸಲು ಜಾರಿಯಲ್ಲಿ ತಂದಿವೆ.

ಹಿಂದುಳಿದ ಬಡ ಸಮುದಾಯ-ಜಾತಿಗಳ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಶೋಷಿಸಲು ಅವಕಾಶ ಮಾಡಿಕೊಟ್ಟು ಅದಕ್ಕೆ ಸಾಮಾಜಿಕ ಮನ್ನಣೆಯನ್ನು ಕೊಟ್ಟಿರುವುದು ದೇವದಾಸಿ ಪದ್ಧತಿ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲವಾಗಿರುವವರು ತಮ್ಮ ಸ್ವಾರ್ಥಕ್ಕಾಗಿ ಈ ಪದ್ಧತಿಯನ್ನು ಪೋಷಿಸಿಕೊಂಡೇ ಬಂದಿದ್ದಾರೆ. ಇಂತಹ ಪದ್ಧತಿಯು ಅವಮಾನವೀಯ ಹಾಗೂ ಕಾನೂನಿನಡಿಯಲ್ಲಿ ಅಪರಾಧ ಎಂದು ತಿಳಿದಿದ್ದರೂ, ಅರಿವಿದ್ದರೂ, ಇನ್ನೂ ನಮ್ಮ ಕಣ್ಣೆದುರಲ್ಲಿ ನಡೆಯುತ್ತಿದೆ. 2008ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನಡೆಸಿದ ಅಧ್ಯಯನದ ಪ್ರಕಾರ 40,400 ದೇವದಾಸಿಯರು ರಾಜ್ಯದಲ್ಲಿದ್ದರು. ಆದರೆ 2018 ರಲ್ಲಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ 80,000ಕ್ಕೂ ಹೆಚ್ಚು ದೇವದಾಸಿಯರಿದ್ದಾರೆ.

ದೇವರ ಹೆಸರಿನಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುವ ಲೈಂಗಿಕ ಶೋಷಣೆ, ದೌರ್ಜನ್ಯಗಳು ಕೇವಲ ಒಂದು ಕುಟುಂಬದ ಮೇಲಾಗುವ ಪರಿಣಾಮವಲ್ಲ. ದೇವದಾಸಿಯಾದ ಹೆಣ್ಣು ಮಕ್ಕಳು ಅವರ ಮಕ್ಕಳು ಮತ್ತು ಹತ್ತಿರದವರೆಲ್ಲರ ಮೇಲು ಇದರ ನೆರಳು ಸದಾ ಕಾಲಕ್ಕೂ ಇರುತ್ತದೆ. ಬಹಳ ಮುಖ್ಯವಾಗಿ ದೇವದಾಸಿ ಹೆಸರಿನಲ್ಲಿ ವ್ಯಾಪಾರಿ ಲೈಂಗಿಕ ಶೋಷಣೆ ಅಲ್ಲಿಂದ ಹೆಣ್ಣು ಮಕ್ಕಳ ಮಾರಾಟ ಸಾಗಣೆ, ವೈಶ್ಯವಾಟಿಕೆಗಳಲ್ಲಿ ನಿರಂತರವಾಗಿ ದೌರ್ಜನ್ಯಕ್ಕೆ ಈಡಾಗುವುದು ‘ದೇವದಾಸಿ’ ಹೆಸರಿನ ಹಿಂದೆಯೇ ಬರುತ್ತದೆ. ಜೊತೆಗೆ ದೇವದಾಸಿ ಹೆಣ್ಣು ಮಕ್ಕಳ ಆದಾಯವನ್ನು ಎದುರಿಟ್ಟುಕೊಂಡು ಆಯಾಮನೆಗಳ ಯುವಕರು ಯಾವುದೇ ಕೌಶಲ್ಯ ವಿದ್ಯೆ ಪಡೆಯದೆ ತಾವು ಶೋಷಕರಾಗುವುದು ವಾಸ್ತವವೇ ಆಗಿದೆ. ಶೋಷಣೆಗೆ ಒಳಗಾದ ಹೆಣ್ಣುಮಕ್ಕಳು ಸಮಾನತೆ, ತಾರತಮ್ಯರ ವಿರುದ್ಧದ ಹಕ್ಕು, ಜೀವಿಸುವ ಹಕ್ಕು ಧಾರ್ಮಿಕ ಹಕ್ಕು ಸ್ವಾತಂತ್ರ್ಯಗಳು ದುಡಿಯುವ ಹಕ್ಕು ಘನತೆ ಗೌರವದಿಂದ ಬಾಳುವ ಹಕ್ಕು. ಆರೋಗ್ಯದ ಹಕ್ಕು ಇಂತಹ ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಾರೆ.

ಈ ಹೆಣ್ಣು ಮಕ್ಕಳ ಬದುಕಿನಲ್ಲಿ ಬೆಳಕು ಮೂಡಿಸಲು ಅನೇಕ ಸಂಘಟನೆಗಳು ನಿರಂತರವಾಗಿ ನಡೆಸಿದ ಹೋರಾಟದ ಪ್ರತಿಫಲವಾಗಿ, 1982ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು, ಕರ್ನಾಟಕ ದೇವದಾಸಿಯರ (ಸಮರ್ಪಣಾ ನಿಷೇಧ) ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆಗೆ 2009ರಲ್ಲಿ ತಿದ್ದುಪಡಿಯಾಗಿದ್ದು, ದೇವದಾಸಿ ಪದ್ಧತಿಯನ್ನು ತಡೆಯಲು ಬಲವಾದ ಅಸ್ತ್ರವಾಗಿ ರೂಪುಗೊಂಡಿದೆ. ಸಮರ್ಪಣೆ ಎಂದರೆ ಯಾವುದೇ ಹೆಸರಿನಿಂದ ಕರೆಯಲಾದ ಯಾವುದೊಂದು ಕೃತ್ಯ ಅಥವಾ ಆಚಾರದಿಂದ ಯಾವುದೇ ವಯಸ್ಸಿನ ಒಬ್ಬಳು ಸ್ತ್ರೀಯನ್ನು ಯಾವುದೇ ದೇವತೆಯ, ವಿಗ್ರಹದ, ಪೂಜಾ ವಸ್ತುವಿನ, ದೇವಸ್ಥಾನದ ಇತರ ಧಾರ್ಮಿಕ ಸಂಸ್ಥೆಗಳ ಅಥವಾ ಪೂಜಾ ಸ್ಥಳಗಳ ಸೇವೆಗೆ ಅರ್ಪಣೆ ಮಾಡುವುದು.

ಈ ಕಾಯ್ದೆಯ ಕಲಂ 3ರ ಪ್ರಕಾರ ಯಾವುದೇ ರೂಢಿ ಅಥವಾ ಕಾನೂನು ವಿರುದ್ಧವಿದ್ದರೂ, ಈ ಕಾಯ್ದೆ ಜಾರಿಗೆ ಬರುವ ಮೊದಲಿರಲಿ ಅಥವಾ ನಂತರವಿರಲಿ ಮತ್ತು ಅವಳು ಅಂತಹ ಸಮರ್ಪಣೆಗೆ ಒಪ್ಪಿರಲಿ, ಒಪ್ಪದಿರಲಿ, ದೇವದಾಸಿಯರಾಗಿ ಸಮರ್ಪಣೆಯಾಗುವುದು ಕಾನೂನುಬಾಹಿರ ಹಾಗೂ ಪರಿಣಾಮ ಇಲ್ಲತಕ್ಕದ್ದಾಗಿದೆ. ಹಾಗೆ ಸಮರ್ಪಿತಳಾದ ಯಾವುದೇ ಸ್ತ್ರೀ ಊರ್ಜಿತವಾದ ಮದುವೆ ಮಾಡಿಕೊಳ್ಳಲು ಅನರ್ಹಳು ಎಂದು ಭಾವಿಸಲಾಗದು.

ಜಾತ್ರೆಗಳಲ್ಲಿ, ಹುಣ್ಣಿಮೆಯಂತ ದಿನಗಳಲ್ಲಿ ಮಹಿಳೆಯರನ್ನು ದೇವದಾಸಿಯಾಗಿ ಸಾಮೂಹಿಕವಾಗಿ ಸಮರ್ಪಣೆ ಮಾಡುವುದನ್ನು ತಡೆಗಟ್ಟುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ. ಪ್ರಸ್ತುತ ಕಾಯ್ದೆಗೆ 2009ರಲ್ಲಿ ತಿದ್ದುಪಡಿ ತರಲಾಗಿ ಕಲಂ 3ಎ ಅನ್ವಯ ಸಮರ್ಪಣಾ ನಿಷೇಧಕ ನಿರ್ಬಂಧಕಾಜ್ಞೆಯನ್ನು ಹೊರಡಿಸಲು ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಅಥವಾ ಕಾರ್ಯಕಾರಿ ಮ್ಯಾಜಿಸ್ಟ್ರೇಟರಿಗೆ ಅಧಿಕಾರವಿರುತ್ತದೆ. ದೇವದಾಸಿ ಸಮರ್ಪಣಾ ನಿಷೇಧಕ ಅಧಿಕಾರಿಯು ಅರ್ಜಿಯ ಮೂಲಕ ಅಥವಾ ಯಾವುದೇ ವ್ಯಕ್ತಿಯ ದೂರಿನ ಮೂಲಕ ಅಥವಾ ಅನ್ಯಥಾ ಮಾಹಿತಿಯನ್ನು ಪಡೆದ ಮೇಲೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಕಾರ್ಯಕಾರಿ ಮ್ಯಾಜಿಸ್ಟ್ರೇಟರು, ಅಧಿನಿಯಮವನ್ನು ಉಲ್ಲಂಘಿಸಿ ಸಮರ್ಪಣೆಯನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಮನಗಂಡರೆ ಆ ಸಂಸ್ಥೆಯ ಅಥವಾ ವ್ಯಕ್ತಿಗಳ ವಿರುದ್ಧ ಅಂತಹ ಸಮರ್ಪಣೆಯನ್ನು ನಿಷೇಧಿಸಿ ಅಥವಾ ನಿಗ್ರಹಿಸಿ ಒಂದು ನಿಷೇಧಕ ನಿರ್ಬಂಧಕಾಜ್ಞೆಯನ್ನು ಹೊರಡಿಸುವ ಅಧಿಕಾರ ಹೊಂದಿರುತ್ತಾರೆ.‌

ತನ್ನ ವಿರುದ್ಧ ನಿರ್ಬಂಧಕಾಜ್ಞೆ ಹೊರಡಿಸಲಾಗಿದೆ ಎಂದು ಗೊತ್ತಿರುವ ಯಾವುದೇ ವ್ಯಕ್ತಿಯು ಅಂತಹ ಆದೇಶವನ್ನು ಉಲ್ಲಂಘಿಸಿದರೆ ಆತನಿಗೆ ಎರಡು ವರ್ಷಗಳಿಗಿಂತ ಕಡಿಮೆ ಇಲ್ಲದ ಮತ್ತು ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಸೆರೆವಾಸ ಅಥವಾ 2000 ಗಳಿಗೆ ಕಡಿಮೆ ಇಲ್ಲದ ಮತ್ತು 10,000ಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯನ್ನು ಅಥವಾ ಎರಡನ್ನೂ ಸಹ ವಿಧಿಸಬಹುದು.

ರಾಜ್ಯ ಸರ್ಕಾರವು ದೇವದಾಸಿ ಪುನರ್ವಸತಿ ಯೋಜನೆಯ ಅಡಿಯಲ್ಲಿ ಸಲಹೆ ನೀಡುವುದು ಮತ್ತು ಜಾಗೃತಿ ಮೂಡಿಸುವುದರ ಮೂಲಕ ಸಮರ್ಪಣೆಯಾಗುವುದರಿಂದ ಕಾಪಾಡಿದಂತಹ ಮಹಿಳೆಯ ಪುನರ್ವಸತಿಗೆ ಅವಶ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲಂ 3ಬಿ ತಿಳಿಸುತ್ತದೆ‌.

ಕಲಂ 3ಸಿ ಪ್ರಕಾರ ಈ ಅಧಿನಿಯಮದ ಅಡಿಯಲ್ಲಿ ದಂಡನೀಯವಾದ ಅಪರಾಧಗಳು ಸಂಜ್ಞೇಯ ಮತ್ತು ಜಾಮೀನೀಯವಲ್ಲದಾಗಿರುತ್ತವೆ.

ಕಲಂ 3ಡಿ ಪ್ರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಬಂಧಪಟ್ಟ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು ಅಥವಾ ಯೋಜನಾಧಿಕಾರಿಯು ತಮ್ಮ ತಮ್ಮ ಅಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ ದೇವದಾಸಿ ಸಮರ್ಪಣಾ ನಿಷೇಧಕ ಅಧಿಕಾರಿಗಳಾಗಿರುತ್ತಾರೆ. ದೇವದಾಸಿ ಸಮರ್ಪಣಾ ನಿಷೇಧಕ ಅಧಿಕಾರಿಗಳನ್ನು ಭಾರತೀಯ ದಂಡ ಸಂಹಿತೆಯ ಕಲಂ 21 ರ ಪ್ರಕಾರ ಸಾರ್ವಜನಿಕ ನೌಕರರು ಎಂದು ಭಾವಿಸತಕ್ಕದ್ದು.

ದೇವದಾಸಿ ಸಮರ್ಪಣ ನಿಷೇಧಕ ಅಧಿಕಾರಿಯ ಕರ್ತವ್ಯಗಳು ಹೀಗಿವೆ.
1) ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಅಥವಾ ಕಾರ್ಯಕಾರಿ ಮ್ಯಾಜಿಸ್ಟ್ರೇಟರಿಗೆ ಅರ್ಜಿಯನ್ನು ಸಲ್ಲಿಸಿ ಮತ್ತು ತಾನು ಸೂಕ್ತವೆಂದು ಭಾವಿಸುವಂತಹ ಕ್ರಮಗಳನ್ನು ಕೈಗೊಂಡು ದೇವದಾಸಿ ಸಮರ್ಪಣೆಯನ್ನು ನಿಷೇಧಿಸುವುದು.
2) ಈ ಅಧಿನಿಯಮದ ಉಪಬಂಧಗಳನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಪರಿಣಾಮಕಾರಿಯಾಗಿ ಕ್ರಮಕೈಗೊಳ್ಳಲು ಸಾಕ್ಷಗಳನ್ನು ಸಂಗ್ರಹಿಸುವುದು.
3) ದೇವದಾಸಿ ಸಮರ್ಪಣೆಗೆ ಪ್ರೋತ್ಸಾಹಿಸಬೇಡಿ, ಸಹಾಯ ನೀಡಿಬೇಡಿ, ನೆರವು ನೀಡಬೇಡಿ ಅಥವಾ ಅವಕಾಶ ನೀಡಬೇಡಿ ಎಂದು ವೈಯಕ್ತಿಕ ಪ್ರಕರಣಗಳಲ್ಲಿ ಬುದ್ಧಿವಾದ ಹೇಳುವುದು ಮತ್ತು ಆ ಪ್ರದೇಶದ ನಿವಾಸಿಗಳಿಗೆ ಸಲಹೆಗಳನ್ನು ನೀಡುವುದು. ಸಮರ್ಪಣೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಮಾಜದಲ್ಲಿರುವ ಜನರಿಗೆ ಜಾಗೃತಿಯನ್ನು ಉಂಟುಮಾಡುವುದು.
4) ಘಟನೆ ನಡೆದ ಸ್ಥಳದಲ್ಲಿಯೇ ಪಂಚನಾಮಿ ವರದಿಯನ್ನು ಬರೆಯಲು ಮತ್ತು ಸಾಕ್ಷಿಗಳ ಸಹಿಯನ್ನು ಪಡೆಯಲು ಕ್ರಮ ಕೈಗೊಳ್ಳುವುದು.
5) ರಾಜ್ಯ ಸರ್ಕಾರಕ್ಕೆ ನಿಯತಕಾಲಿಕ ವರದಿಯನ್ನು ಮತ್ತು ಅಂಕಿ ಅಂಶಗಳನ್ನು ಸಲ್ಲಿಸುವುದು.
6) ದೇವದಾಸಿ ಸಮರ್ಪಣಾ ನಿಷೇಧಕ ಅಧಿಕಾರಿಗಳು ಕಾಪಾಡಲ್ಪಟ್ಟ ಮಹಿಳೆಯ ಪುನರ್ವಸತಿಗಾಗಿ ಕಲಂ 3ಬಿ ಅಡಿಯಲ್ಲಿ ನ್ಯಾಯಾಲಯದ ಆದೇಶವನ್ನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಅಧಿಕಾರವನ್ನು ಸಹ ಹೊಂದಿರುತ್ತಾರೆ.

ಒಟ್ಟಿನಲ್ಲಿ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ದೇವದಾಸಿ ಪದ್ಧತಿ ವ್ಯವಸ್ಥೆ ನಡೆಯುತ್ತಿದ್ದರೆ ಅಥವಾ ನಡೆಯಬಹುದು ಎಂದು ಗೊತ್ತಾದರೆ ಅದನ್ನು ತಡೆಗಟ್ಟಬೇಕು. ಈ ಪದ್ಧತಿಯಿಂದಾಗಿ ಬಲಿಪಶುಗಳಾದಂತಹ ಮಹಿಳೆಯರ ಮತ್ತು ಅವರ ಕುಟುಂಬದವರ ಸಾಮಾಜಿಕ ಹಾಗೂ ಆರ್ಥಿಕ ಅನ್ಯಾಯ ಹಾಗೂ ಭದ್ರತೆಯ ಕೊರತೆಯಿಂದ ಆಗುವ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವನ್ನು ಮೂಡಿಸಬೇಕು. ಹಾಗೆಯೇ ಮಹಿಳೆಯರ ಮತ್ತು ಮಕ್ಕಳ, ಮೂಲಭೂತ ಹಕ್ಕು ಮಾನವ ಹಕ್ಕುಗಳ ಕುರಿತು ಅವರಿಗೆ ಕಾನೂನು ಅರಿವು ನೆರವನ್ನು ಸಹ ನೀಡಬೇಕು. ಹಾಗೆಯೇ ಈಗಾಗಲೇ ಈ ಪದ್ಧತಿಗೆ ಬಲಿಯಾದಂತಹ ಮಹಿಳೆಯರಿಗೆ ಶೈಕ್ಷಣಿಕ, ಆರ್ಥಿಕ ಹಾಗೂ ಉದ್ಯೋಗದ ಸೌಲಭ್ಯಗಳನ್ನು ಸರ್ಕಾರ ನೀಡಬೇಕು.

ಕಲಂ 5ರ ಪ್ರಕಾರ ಈ ಕಾಯ್ದೆ ಜಾರಿಯಲ್ಲಿ ಬಂದ ನಂತರ ಯಾವುದೇ ಸ್ತ್ರೀಯನ್ನು ದೇವದಾಸಿಯಾಗಿ ಸಮರ್ಪಣೆ ಮಾಡುವಂತಹ ಯಾವುದೇ ಆಚಾರವನ್ನು ಅಥವಾ ಕೃತ್ಯವನ್ನು ನೆರವೇರಿಸಿದ, ಅನುಮೋದಿಸಿದ, ಅವುಗಳಲ್ಲಿ ಭಾಗವಹಿಸಿದ ಅಥವಾ ನೆರವೇರಿಸುವುದಕ್ಕೆ ದುಷ್ಪ್ರೇರಣೆಯನ್ನು ಇತ್ತ ವ್ಯಕ್ತಿಯ ದೋಷ ಸಾಬೀತಾದಲ್ಲಿ ಅಂತಹ ವ್ಯಕ್ತಿಗೆ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲುವಾಸ ಮತ್ತು ಸಾವಿರ ರೂಪಾಯಿಗಳ ದಂಡವನ್ನು ವಿಧಿಸಬಹುದಾಗಿದೆ. ಅಂತಹ ವ್ಯಕ್ತಿ ಸಂತ್ರಸ್ತೆಯ ತಂದೆಯ ತಾಯಿ ಅಥವಾ ಸಂಬಂಧಿಕನಾಗಿದ್ದಲ್ಲಿ ಅವರಿಗೆ ಎರಡು ವರ್ಷಗಳಿಗೆ ಕಡಿಮೆಯಾಗದ ಮತ್ತು ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲುವಾಸವನ್ನು ಹಾಗೂ 2000 ರೂಪಾಯಿಗಳಿಗೆ ಕಡಿಮೆಯಾಗದ ಮತ್ತು 5000ಗಳವರೆಗೆ ವಿಸ್ತರಿಸಬಹುದಾದ ದಂಡವನ್ನು ವಿಧಿಸಬಹುದಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ದೇವದಾಸಿ ಮಹಿಳೆಯರ ಮಕ್ಕಳ ವಿವಾಹದ ನಂತರ ಸಹಾಯಧನವನ್ನು ನೀಡುತ್ತದೆ. ಪರಿಶಿಷ್ಟ ಜಾತಿಗೆ ಸೇರಿದ ಕರ್ನಾಟಕದಲ್ಲಿ ವಾಸವಾಗಿರುವ ಹಾಗೂ ಕುಟುಂಬದ ಆದಾಯ 5 ಲಕ್ಷಕ್ಕಿಂತ ಕಡಿಮೆ ಇರುವ ದೇವದಾಸಿ ಮಹಿಳೆಯರ ಮಕ್ಕಳು ಮದುವೆಯಾದಲ್ಲಿ, ವಿವಾಹವಾಗಿ 18 ತಿಂಗಳ ಒಳಗಾಗಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ನೀಡಿದ ಅಂಕಿ ಅಂಶಗಳ ಪ್ರಕಾರ ಕರ್ನಾಟಕ ರಾಜ್ಯದ ಬೆಳಗಾವಿ, ಬಿಜಾಪುರ, ಬಾಗಲಕೋಟೆ,ಬಳ್ಳಾರಿ, ಕೊಪ್ಪಳ,ರಾಯಚೂರು, ಗುಲ್ಬರ್ಗ, ಯಾದಗಿರಿ, ಧಾರವಾಡ, ಹಾವೇರಿ, ಗದಗ,ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಈ ಜಿಲ್ಲೆಗಳಲ್ಲಿ ದೇವದಾಸಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 1993- 94 ಮತ್ತು 2007-08ನೇ ಸಾಲಿನ ಸಮೀಕ್ಷೆಯಲ್ಲಿ ಗುರುತಿಸಿರುವ ಒಟ್ಟು ಮಾಜಿ ದೇವದಾಸಿಯರ ಸಂಖ್ಯೆ 46,660. ಸಮೀಕ್ಷಾ ಪಟ್ಟಿಯಲ್ಲಿ ಗುರುತಿಸಿದ್ದು ನಿವೇಶನವಿಲ್ಲದ ಮಾಜಿ ದೇವದಾಸಿಯರ ಸಂಖ್ಯೆ 21,886. ನಿವೇಶನವುಳ್ಳ ಹೊಸತಿರಹಿತ ಒಟ್ಟು ಮಾಜಿ ದೇವದಾಸಿಯರ ಸಂಖ್ಯೆ 24,804. ಬೇರೆ ಇಲಾಖೆ ಅಡಿ ವಸತಿ ಸೌಲಭ್ಯ ಪಡೆದಿರುವವರ ಸಂಖ್ಯೆ 6202. ನಿಗಮದ ಮುಖಾಂತರ ವಸತಿ ಪಡೆದು ವಾಸ ಮಾಡುತ್ತಿರುವವರ ಸಂಖ್ಯೆ 5310. ನಿಗಮದ ಮುಖಾಂತರ ವಸತಿ ಪಡೆದು ನಿರ್ಮಾಣ ಹಂತದಲ್ಲಿರುವ ವಸತಿಗಳ ಸಂಖ್ಯೆ 1,474. 2015- 16ನೇ ಸಾಲಿನಲ್ಲಿ ವಸತಿ ಪಡೆಯಲು ಅರ್ಹರೆದ್ದು ವಸತಿ ನಿರ್ಮಿಸಲು ಬಾಕಿ ಇರುವವರ ಸಂಖ್ಯೆ 11,818.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ನಿಯಮಿತವಾಗಿ ಕಾಲಕಾಲಕ್ಕೆ ಸಮೀಕ್ಷೆಗಳನ್ನ ಮಾಡುತ್ತಾ ಈ ಪದ್ದತಿಯನ್ನು ತಡೆಗಟ್ಟಲು ನಿಯಂತ್ರಿಸಲು ಹಾಗೂ ದೇವದಾಸಿ ಅವರಿಗೆ ಪುನರ್ವಸತಿಯನ್ನು ಕಲ್ಪಿಸಿಕೊಡಬೇಕು. ದೇವದಾಸಿ ಮಹಿಳೆಯರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅವರಿಗೆ ಉದ್ಯೋಗದ ಅವಕಾಶಗಳನ್ನು ಸಹ ಕಲ್ಪಿಸಿ ಕೊಡಬೇಕು. ದೇವದಾಸಿ ಪ್ರಕರಣಗಳನ್ನು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ತರಬೇಕು ಹಾಗೂ ಈ ಪದ್ಧತಿಯ ನಿರ್ಮೂಲನೆ ಕುರಿತು ಅರಿವನ್ನು ಜನರಲ್ಲಿ ಮೂಡಿಸಬೇಕು.
ದೇವದಾಸಿ ಮಹಿಳೆಯರ ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ಹಲವಾರು ದೇವದಾಸಿಯರು ಎಚ್ಐವಿ ಅಂತಹ ಲೈಂಗಿಕ ಹಾಗೂ ಮಾರಣಾಂತಿಕ ರೋಗಗಳಿಗೆ ತುತ್ತಾಗುವುದು ಕಳವಳಕಾರಿ ಸಂಗತಿಯಾಗಿದೆ. ಹಾಗಾಗಿ ಆ ವರ್ಗದವರಿಗೆ ಘನತೆಯಿಂದ ಬಾಳುವ ಹಕ್ಕು, ಆರೋಗ್ಯದ ಹಕ್ಕು, ಶಿಕ್ಷಣದ ಹಕ್ಕು, ಉದ್ಯೋಗದ ಹಕ್ಕು, ವಿವಾಹದ ಹಕ್ಕು, ಹಾಗೂ ಸಮಾನತೆ ಹಕ್ಕನ್ನು ಒದಗಿಸಿಕೊಡುವುದು ಸರ್ಕಾರದ ಹಾಗೂ ಸಮಾಜದ ಆದ್ಯ ಕರ್ತವ್ಯವಾಗಿದೆ.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

Spread the love