ಲೇಖನಗಳು

ಸಾಂವಿಧಾನಿಕ ಬಿಕ್ಕಟ್ಟನ್ನೇ ಸೃಷ್ಠಿ ಮಾಡಿದ್ದ ಒಂದು ಕರಪತ್ರ

ಹೀಗೊಂದು ಪ್ರಕರಣ ಕರಪತ್ರದ ಪ್ರಕಟಣೆಯಿಂದ ಶುರುವಾಗಿ ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧವೇ ಬಂಧನದ ವಾರಂಟಿನವರೆಗೆ ತಲುಪಿತ್ತು. ಅಲ್ಲಿಗೂ ನಿಲ್ಲದೆ, ರಾಷ್ಟ್ರಪತಿಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಈ ಪ್ರಕರಣದ ಕುರಿತು ನ್ಯಾಯಿಕ ಸಲಹೆಯನ್ನು ಕೋರಬೇಕಾಯ್ತು. ಈ ಘಟನಾವಳಿಗಳು ಜನಮಾನಸದಿಂದ ಮರೆಯಾಗಿದ್ದರೂ, ಇಂದಿಗೂ ಸಂವಿಧಾನದ ಮಟ್ಟಿಗೆ ಅದರ ಅಂತಃಸತ್ವದ ರಕ್ಷಣೆಯ ಪ್ರಬಲ ಗುರಾಣಿ ಎಂದು ಕರೆಯಬಹುದಾದ ಪ್ರಮುಖ ಕೇಸಾಗಿ ನಿಂತಿದೆ.

” It is when the colors do not match, when the references in the index fail, when there is no decisive precedent, that the serious business of the judge begins” ಎನ್ನುವ ಪ್ರಖ್ಯಾತ ಅಮೇರಿಕನ್ ನ್ಯಾಯಶಾಸ್ತ್ರಜ್ಞ ಬೆಂಜಮಿನ್ ಕಾರ್ಡೋಜೋರ ಮಾತು ನ್ಯಾಯಾಂಗದ ಘನತೆ ಮತ್ತು ನ್ಯಾಯಾಧೀಶರಿಗಿರುವ ಜವಾಬ್ದಾರಿಯನ್ನು ಪ್ರತಿಧ್ವನಿಸುತ್ತದೆ. ನ್ಯಾಯಾಲಯಗಳು ಸಾರ್ವಜನಿಕ ಹಿತವನ್ನು ಪರಿಗಣಿಸಬೇಕೇ ಅಥವಾ ಅವರ ಅಭಿಮತವನ್ನು ಲೆಕ್ಕಿಸಿದರೆ ಸಾಕೋ? ನ್ಯಾಯಾಂಗಕ್ಕೂ ಪ್ರಜಾತಾಂತ್ರಿಕ ಸಂಸ್ಥೆಗಳ ಅಂಕುಶವಿರಬೇಕೇ? ಅಥವಾ ನ್ಯಾಯಾಂಗ ಸಂಪೂರ್ಣ ಪ್ರಶ್ನಾತೀತವೇ? ಯಾವ ರೀತಿಯಲ್ಲೂ ಸಾರ್ವಜನಿಕರಿಂದ ಆಯ್ಕೆಯಾಗದ ನ್ಯಾಯಾಧೀಶರುಗಳು ಹೇಗೆ ಸಾರ್ವಜನಿಕ ಹಿತವನ್ನು ತೀರ್ಮಾನಿಸುತ್ತಾರೆ? ಒಂದು ವೇಳೆ, ಸಾರ್ವಜನಿಕರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು  ಸಾರ್ವಜನಿಕ ಹಿತವನ್ನು ಮರೆತರೆ ಉಳಿದ ಮಾರ್ಗ ಯಾವುದು? ನ್ಯಾಯಾಂಗ ಒಂದೇ ಅಲ್ಲವೇ? ಈ ಜಿಜ್ಞಾಸೆ ಕೋಳಿ ಮೊದಲೋ, ಮೊಟ್ಟೆ ಮೊದಲೋ ಎಂಬ ಪ್ರಶ್ನೆಯಂತೆ ದೇಶದ ಹಲವು ನ್ಯಾಯಾಲಯಗಳಲ್ಲಿ ದಿನನಿತ್ಯ ಎದುರಾಗುವ ಪ್ರಕರಣಗಳಿಗೆ ತಳಕು ಹಾಕಿಕೊಂಡಿದೆ. 1964 ರಲ್ಲಿನ ಕೇಶವ್ ಸಿಂಗ್ ವಿ. ಸ್ಪೀಕರ್, ಉತ್ತರ ಪ್ರದೇಶ ವಿಧಾನಸಭೆ ಪ್ರಕರಣ ಮೇಲೆ ಹೇಳಿದ ಪ್ರಶ್ನೆಗಳನ್ನು ದೊಡ್ಡ ಮಟ್ಟದಲ್ಲಿ ಹುಟ್ಟು ಹಾಕಿ ತಕ್ಕ ಮಟ್ಟಿಗೆ ಉತ್ತರಿಸಿದ, ಶಾಸಕಾಂಗಕ್ಕೂ ಮತ್ತು ನ್ಯಾಯಾಂಗಕ್ಕೂ ನಡೆದ ಸಂಘರ್ಷದ ಪ್ರತ್ಯಕ್ಷ ಉದಾಹರಣೆಯಾಗಿದೆ.

ಅಧಿಕಾರ ವಿಕೇಂದ್ರೀಕರಣ ( Separation of power) ಸಿದ್ಧಾಂತವು, ಶಾಸಕಾಂಗ – ಕಾರ್ಯಾಂಗ – ನ್ಯಾಯಾಂಗ ಮೂರು ಅಂಗಗಳ ಅಧಿಕಾರ, ವ್ಯಾಪ್ತಿ, ಅದರ ಮಿತಿಗಳನ್ನು ವಿವರಿಸುವ ಮಾನದಂಡವಾಗಿರುತ್ತದೆ. ಆದರೆ ಶಾಸಕಾಂಗ, ಕಾರ್ಯಾಂಗಗಳು ವಹಿಸಿದ ಕೆಲಸ ಮಾಡದಿದ್ದಾಗ ಮಧ್ಯ ಪ್ರವೇಶಿಸುವ ಮತ್ತು ಸಂವಿಧಾನ, ಕಾನೂನುಗಳನ್ನು ವ್ಯಾಖ್ಯಾನಿಸುವ ಹಿರಿದಾದ ಹೊಣೆ  ನ್ಯಾಯಾಂಗದ್ದಾಗಿದೆ. ಅಷ್ಟೇ ಅಲ್ಲದೆ, ನ್ಯಾಯಾಂಗ ಸ್ವತಂತ್ರವಾಗಿ ಕೆಲಸ ಮಾಡುವ ಅಂಗ. ಆದರೂ ಕೆಲ ವಿಚಿತ್ರವಾದ ಸನ್ನಿವೇಶಗಳಲ್ಲಿ ತೀರ್ಪುಗಳಿಗೆ ಸೆಡ್ಡು ಹೊಡೆಯಲು ಕಾನೂನುಗಳನ್ನು ಜಾರಿಗೆ ತಂದಿದ್ದೂ ಇದೆ. ಇಂತಹ ಗಹನವಾದ ಸಂವಿಧಾನದ ಪರಿಕಲ್ಪನೆಗಳ ಮೇಲೆ ಬೆಳಕು ಬೀರುವ ಕೇಶವ್ ಸಿಂಗ್ ವಿ. ಸ್ಪೀಕರ್, ಉತ್ತರ ಪ್ರದೇಶ ವಿಧಾನಸಭೆ (1964) ರ ಒಂದು ಅವಲೋಕನದ ಚಿಕ್ಕ ಪ್ರಯತ್ನ ಈ ಬರಹ.

ಪ್ರಕರಣದ ಹಿನ್ನೆಲೆ:

ಆಗಿನ್ನೂ ದೇಶಕ್ಕೆ ಸ್ವಾತಂತ್ರ್ಯ ಬಂದು 17 ವರ್ಷಗಳಾಗಿತ್ತು. ಕಾಂಗ್ರೆಸ್ ಪಕ್ಷದ ಅಧಿಕಾರದ ಉಚ್ಛ್ರಾಯ ಕಾಲ. ಪ್ರತಿರೋಧ ಒಡ್ಡುವ ವಿರೋಧ ಪಕ್ಷಗಳಲ್ಲಿ ಸಮಾಜವಾದಿ (Socialist) ಪಕ್ಷ ಪ್ರಮುಖವಾಗಿತ್ತು. ಉತ್ತರ ಪ್ರದೇಶದ ಗೋರಖ್ ಪುರದ ನಿವಾಸಿ, ಸಮಾಜವಾದಿ ಪಕ್ಷದ ಕಾರ್ಯಕರ್ತ ಕೇಶವ್ ಸಿಂಗ್ ಅಲ್ಲಿನ ಸ್ಥಳೀಯ ಶಾಸಕ ನರಸಿಂಗ್ ನಾರಾಯಣ್ ಪಾಂಡೆ ವಿರುದ್ಧ ಕರಪತ್ರವನ್ನು ಹಂಚಿದರು. ಕರಪತ್ರ ಶಾಸಕರ ಭ್ರಷ್ಟಾಚಾರ ಮತ್ತು ಲಂಚ ಆರೋಪಗಳ ವಿವರಣೆ ಹೊಂದಿತ್ತು. ಇದನ್ನು ಕಂಡು ಉತ್ತರ ಪ್ರದೇಶದ ಸದನ ಮಾರ್ಚ್ 14, 1964ರಂದು ವಿಧಾನಸಭೆ ಶಾಸಕಾಂಗದ ನಿಂದನೆ ( Contempt of the House)ಗಾಗಿ ಕೇಶವ್ ಸಿಂಗ್ ಅವರು ಸದನದ ಎದುರು ಹಾಜರಾಗುವಂತೆ ಆದೇಶ ( Reprimand) ಹೊರಡಿಸಿತು. ಕೇಶವ್ ಸಿಂಗ್ ತಾನು ಬಡವನಾದ ಕಾರಣ ದೂರದ ಲಖ್ನೋದವರೆಗೆ ಪ್ರಯಾಣಿಸಲು ಹಣದ ಕೊರತೆಯಿದೆ ಎಂದು ಹೇಳಿ ಸದನದ ಆದೇಶವನ್ನು ತಿರಸ್ಕರಿಸಿದ. ಜೊತೆಗೆ ಕೇಶವ್ ಸಿಂಗ್ ತನ್ನ ಸಹಿಯಿರುವ ಕರಪತ್ರದಲ್ಲಿನ ಉಲ್ಲೇಖಗಳನ್ನು ಸಮರ್ಥಿಸುತ್ತಾ, ಸದನದ ಆದೇಶ ಪ್ರಜಾಪ್ರಭುತ್ವದ ಮೇಲಿನ ಪ್ರಹಾರವಾಗಿದೆ, ಭ್ರಷ್ಟನನ್ನು ಭ್ರಷ್ಟ ಎನ್ನುವುದರಲ್ಲಿ ತಪ್ಪೇನಿದೆ? ಎಂದು ಪ್ರತಿಸವಾಲು ಮಾಡಿದ. ಸಂವಿಧಾನದ 194ನೇ ವಿಧಿಯಲ್ಲಿ ನೀಡಿರುವ ಶಾಸನ ಸಭೆಯ ಸದಸ್ಯರ ಅಧಿಕಾರ, ಸವಲತ್ತುಗಳ ಉಲ್ಲಂಘನೆಯಾಗಿದೆ ಎಂದೂ, ಸದನದ ಎದುರು ಹಾಜರಾಗಲಿಲ್ಲವೆಂದೂ, ಉತ್ತರ ಪ್ರದೇಶ ವಿಧಾನಸಭೆ ಕೇಶವ್ ಸಿಂಗ್ ರಿಗೆ ಏಳು ದಿನಗಳ ಬಂಧನದ ಆದೇಶ ನೀಡಿತು. ಆರು ದಿನಗಳ ಬಂಧನದ ಅವಧಿಯನ್ನು ಕಳೆದ ನಂತರ ಕೇಶವ್ ಸಿಂಗ್ ನ ಪರವಾಗಿ ಸೊಲೊಮನ್ ಎಂಬ ವಕೀಲರು  ಅಲಹಾಬಾದ್ ಹೈಕೋರ್ಟ್ ನಲ್ಲಿ ಹೆಬಿಯಸ್ ಕಾರ್ಪಸ್ ಮೊಕದ್ದಮೆಯನ್ನು ದಾಖಲಿಸಿದರು.

ವಿಚಾರಣೆಯನ್ನು ಕೈಗೆತ್ತಿಕೊಂಡ ಜಸ್ಟೀಸ್ ನಸಿರುಲ್ಲಾ ಬೆಗ್ ಮತ್ತು ಜಸ್ಟೀಸ್ ಜಿ.ಡಿ. ಸೆಹಗಲ್ ರವರ ಪೀಠ, ಪ್ರಕರಣದ ತೀವ್ರತೆ ಹಾಗೂ ನಡೆದಿರುವ ವ್ಯಕ್ತಿ ಸ್ವಾತಂತ್ರ್ಯದ ಹರಣವನ್ನು ಲೆಕ್ಕಿಸಿ, ಕೆಲವು ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದರು. ಸಿಟ್ಟಾದ ಉತ್ತರ ಪ್ರದೇಶ ವಿಧಾನಸಭೆ, ಸದನದ ಕಾರ್ಯಕಲಾಪದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಿದ್ದಕ್ಕಾಗಿ ಕೇಶವ್ ಸಿಂಗ್, ಆತನ ಪರ ನ್ಯಾಯವಾದಿ ಹಾಗೂ ತೀರ್ಪಿತ್ತ ಇಬ್ಬರೂ ನ್ಯಾಯಾಧೀಶರ ವಿರುದ್ಧ ಮಾರ್ಚ್ 21, 1964 ರಂದು ಬಂಧನದ ವಾರಂಟ್ ಹೊರಡಿಸಿ, ಸದನದ ಎದುರು ಹಾಜರಾಗುವಂತೆ ಆದೇಶಿಸಿತು. ಇಲ್ಲಿಯವರೆಗೆ ಮುಸುಕಿನ ಗುದ್ದಾಟವಾಗಿದ್ದ ನ್ಯಾಯಾಂಗ – ಶಾಸಕಾಂಗದ ಕದನ, ನೇರ ಸಂಘರ್ಷಕ್ಕೆ ಅಣಿಯಾಯಿತು. ವಿಧಾನಸಭೆಯ ನಡೆಯನ್ನು ಖಂಡಿಸಿ, ಅದು ನೀಡಿದ ಆದೇಶವನ್ನು ಅನೂರ್ಜಿತಗೊಳಿಸಿ ಎನ್ನುವ ಮನವಿಯೊಂದಿಗೆ ಆ ಇಬ್ಬರೂ ನ್ಯಾಯಾಧೀಶರು ಅದೇ ದಿನ ಹೈಕೋರ್ಟ್ ನಲ್ಲಿ ಸಂವಿಧಾನದ ಅನುಚ್ಛೇದದ 226  ರ  ಅಡಿಯಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ರಿಟ್ ಅರ್ಜಿಯನ್ನು ಕೈಗೆತ್ತಿಕೊಂಡ ಹೈಕೋರ್ಟ್, ಪ್ರಕರಣದಲ್ಲಿ ಪಕ್ಷಗಾರರಾಗಿದ್ದ ಆ ಇಬ್ಬರೂ ನ್ಯಾಯಾಧೀಶರ ಹೊರತು ಇತರ ಎಲ್ಲ ನ್ಯಾಯಾಧೀಶರನ್ನೊಳಗೊಂಡ ಪೂರ್ಣ ಪೀಠ ರಚಿಸಿ, ವಿಧಾನಸಭೆ ನೀಡಿದ ಆದೇಶಕ್ಕೆ ಬ್ರೇಕ್ ಹಾಕಿತು. ನ್ಯಾಯಾಧೀಶರುಗಳಿಗೆ ವಿಧಾನಸಭೆಯ ವಾರಂಟ್ ಗಳೇನೊ ತಲುಪಿಸಿದರೂ, ಆದರೆ ಅವು ಜಾರಿಯಾಗಲಿಲ್ಲ.

ಪ್ರಕರಣದಿಂದಾಗಿ ಉಂಟಾದ ಕಾನೂನಿನ ತಲ್ಲಣ ಮತ್ತು ಸಾಂವಿಧಾನಿಕ ಬಿಕ್ಕಟ್ಟನ್ನು ಮನಗಂಡು ಅಂದಿನ ರಾಷ್ಟ್ರಪತಿಗಳು ಸಂವಿಧಾನದ 143(1)ನೇ ವಿಧಿಯನ್ವಯ ಸರ್ವೋಚ್ಚ ನ್ಯಾಯಾಲಯಕ್ಕೆ ನ್ಯಾಯಿಕ ಸಲಹೆ ( Reference) ಯಾಚಿಸಿದರು. ಉಚ್ಛ ನ್ಯಾಯಾಧೀಶರ ಅಧಿಕಾರ ವ್ಯಾಪ್ತಿಯೇನು? ವಿಧಾನಸಭೆಯ ವ್ಯಾಪ್ತಿ – ಅಧಿಕಾರಿಗಳು, ಸದನ ನಿಂದನೆಯ ಕುರಿತು ನ್ಯಾಯಾಂಗದ ಪರಿಕಲ್ಪನೆಗಳೇನು? ಹೀಗೆ ಪಟ್ಟಿಯಾದ ಪ್ರಶ್ನೆಗಳಿಗೆ ಸೂಕ್ತ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಕುರಿತು ವಿವರವಾದ ತೀರ್ಪು ನೀಡಿತು. ಈ Reference ನ ಆಧಾರದ ಮೇಲೆ ಹೈಕೋರ್ಟ್ ನ ನ್ಯಾಯಾಧೀಶರ ವಿರುದ್ಧದ ಪ್ರಕರಣ ಕೊನೆಯಾಯಿತು. ನ್ಯಾಯಾಧೀಶರ ವಿರುದ್ಧದ ವಾರಂಟ್ ಅನೂರ್ಜಿತ ಹಾಗೂ ಅಸಾಂವಿಧಾನಿಕ ಎಂದೂ ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿತು. ಆದರೆ ಕೇಶವ್ ಸಿಂಗ್ ನ ಸದನ ನಿಂದನೆಯ ಪ್ರಕರಣ ವಿಚಾರಣೆಯ ಅಧಿಕಾರ ಸಂಪೂರ್ಣವಾಗಿ ಸದನದ ವ್ಯಾಪ್ತಿಗೆ ಸೇರಿದ್ದು ಎಂದು ಘೋಷಿಸಿತು. ಅಲ್ಲಿಗೆ ನ್ಯಾಯಾಂಗ ಮತ್ತು ಶಾಸಕಾಂಗದ ಸಂಘರ್ಷಕ್ಕೆ ತೆರೆಬಿತ್ತು.

ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಕೋರಲಾದ Reference ನ ಪ್ರಶ್ನಾವಳಿ ಹೀಗಿತ್ತು:

1. ಕೇಶವ್ ಸಿಂಗ್ ನ ವಿರುದ್ಧದ ಬಂಧನದ ಪ್ರಕರಣ ತೀರ್ಮಾನಿಸುವುದು ಉತ್ತರ ಪ್ರದೇಶ ಹೈಕೋರ್ಟ್, ಲಕ್ನೋ ಪೀಠದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತಿತ್ತೇ?

2. ಕೇಶವ್ ಸಿಂಗ್, ಆತನ ಪರ ವಕೀಲ ಮತ್ತು ತೀರ್ಪಿತ್ತ ಇರ್ವರೂ ನ್ಯಾಯಾಧೀಶರು ಸದನದ ನಿಂದನೆಯನ್ನು ಎಸಗಿದರೆ?

3. ವಕೀಲ ಮತ್ತು ನ್ಯಾಯಾಧೀಶರನ್ನು ಬಂಧಿಸಿ, ಹಾಜರಾಗುವಂತೆ ಮಾಡಲು ವಿಧಾನಸಭೆಯು ಅಧಿಕಾರವನ್ನು ಹೊಂದಿದೆಯೇ?

4. ಉತ್ತರ ಪ್ರದೇಶ ಹೈಕೋರ್ಟ್ ನ ಪೂರ್ಣ ಪೀಠ ನ್ಯಾಯಾಧೀಶರ ಮತ್ತು ವಕೀಲರ ಅರ್ಜಿಯನ್ನು ವಿಚಾರಿಸಿ, ತೀರ್ಪು ನೀಡುವ ಅಧಿಕಾರ ಹೊಂದಿದೆಯೇ?

5. ವಿಧಾನಸಭೆ ನೀಡಿದ ಆದೇಶಕ್ಕೆ ತದ್ವಿರುದ್ಧವಾಗಿ ತೀರ್ಪು ನೀಡುವ ಮೂಲಕ ನ್ಯಾಯಾಧೀಶರು ಸದನದ ನಿಂದನೆಯನ್ನು ಮಾಡಿರುತ್ತರೆಯೇ? ಹೌದಾದಲ್ಲಿ, ಅವರ ವಿರುದ್ಧ ವಿಧಾನಸಭೆ ವಿಚಾರಣೆ ನಡೆಸಬಹುದೇ?

ಈ ಪ್ರಶ್ನೆಗಳಿಗೆ ಸರ್ವೋಚ್ಚ ನ್ಯಾಯಾಲಯದ ಕೊಟ್ಟ ಉತ್ತರಗಳು:

1. ಹೈಕೋರ್ಟ್ ನ ಲಕ್ನೋ ಪೀಠ ಸಾಮಾನ್ಯವಾಗಿ ಹೇಬಿಯಸ್ ಕಾರ್ಪಸ್ ಪ್ರಕರಣಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಶಕ್ತವಾಗಿದೆ.

2. ಯಾವುದೇ ರೀತಿಯ ಸೂಕ್ತ ಆಧಾರಗಳಿಲ್ಲದೆ ಕೇವಲ ಪ್ರಕರಣದ ವಿಚಾರಣೆ ನಡೆಸಿದ್ದಕ್ಕಾಗಿ ನ್ಯಾಯಾಧೀಶರನ್ನು ಸದನದ ನಿಂದನೆ ಆರೋಪಕ್ಕೆ ಗುರಿಪಡಿಸುವುದು ಕಾನೂನುಬದ್ಧವಾಗಿಲ್ಲ.

3. ನ್ಯಾಯಾಧೀಶರ ವಿರುದ್ಧ ಬಂಧನದ ವಾರಂಟ್ ನೀಡುವ ಅಧಿಕಾರವನ್ನು ಸದನವು ಹೊಂದಿರುವುದಿಲ್ಲ. ಮತ್ತು ಯಾವುದೇ ರೀತಿಯ ಪ್ರತಿವಾದವನ್ನು ಆಲಿಸದ ಕಾರಣ ಸದನದ ಆದೇಶ ಅನೂರ್ಜಿತಗೊಳ್ಳುತ್ತದೆ.

4. ಉಚ್ಛ ನ್ಯಾಯಾಲಯದ ಪೂರ್ಣ ಪೀಠ ವಿಚಾರಣೆ ನಡೆಸಿ ಸೂಕ್ತ ಆದೇಶವನ್ನು ನೀಡುವ ಅಧಿಕಾರವನ್ನು ಹೊಂದಿರುತ್ತದೆ.

5. ಸದನ ನಿಂದನೆಯ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು ಯಾವುದೇ ರೀತಿಯ ಸದನದ ನಿಂದನೆಯ ಕ್ರಮಕ್ಕೆ ಪಾತ್ರರಲ್ಲ ಮತ್ತು ಸದನವು ನ್ಯಾಯಾಧೀಶರ ವಿರುದ್ಧ ಆದೇಶಿಸುವಂತಿಲ್ಲ.

ಸುಪ್ರೀಂ ಕೋರ್ಟಿನ ಈ ರೆಫರೆನ್ಸಿನ ನಂತರ ಅಲಹಾಬಾದ್ ಹೈಕೋರ್ಟ್ ಪ್ರಕರಣದ ವಿಚಾರಣೆ ಮುಂದುವರಿಸಿತು. ನ್ಯಾಯಾಧೀಶರ ವಿರುದ್ಧದ ಬಂಧನದ ಆದೇಶವನ್ನು ರದ್ದುಪಡಿಸಿತು. ಆದರೆ ಕೇಶವ್ ಸಿಂಗ್ ನ ಸದನದ ನಿಂದನೆಯ ಪ್ರಕರಣ ವಿಚಾರಣೆಯ ವಿವೇಚನೆಯನ್ನು ಸದನಕ್ಕೆ ಬಿಟ್ಟಿತು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ರಾಜಕಾರಣಿಯೂ ಪ್ರಶ್ನಾತೀತನಲ್ಲ. ಆದರೆ ಪಟ್ಟ ಕಟ್ಟಿಸಿಕೊಳ್ಳುವ ದೊಡ್ಡ ಕುಳಗಳ ವಿರುದ್ಧ ಪ್ರಶ್ನಿಸುವ ಶ್ರೀಸಾಮಾನ್ಯ ಹಲವಾರು ಬಾರಿ ನಾಯ(ಲಾಯ)ಕರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಸಂಸದೀಯ ರಚನೆಯಲ್ಲಿ ಜನರಿಂದಲೇ ಆಯ್ಕೆಯಾಗಿ ಹೋಗಿ, ಜನರಿಗೋಸ್ಕರವೇ ಮಾಡುವ ಕಾನೂನಿನ ಚರ್ಚೆಯಲ್ಲಿ ಜನರಿಗೆ ಆದ್ಯತೆ ಸಿಗದಿರುವುದು ಒಂದು ರೀತಿಯ ಅಪಹಾಸ್ಯವೇ ಸರಿ. ಜನಪ್ರತಿನಿಧಿಗಳು ಮಾಡುವ ಕಾನೂನಿಗೆ ಜನರೇ ವಿರೋಧಿಸಿದರೆ ಅವರು ದೇಶದ್ರೋಹಿಗಳಾಗಬಹುದು, ಅಪರಾಧಿಗಳಾಗಬಹುದು, ಇನ್ನೇನೆನೋ ಆಗಬಹುದು. ಈ ದೇಶದಲ್ಲಿ ಕಾನೂನುಗಳ ಯುಕ್ತಾಯುಕ್ತತೆಯನ್ನು ತೀರ್ಮಾನಿಸಲು ನ್ಯಾಯಾಂಗ ವಿಮರ್ಶೆ (Judicial Review) ಇರುವ ಹಾಗೆ, ಸಾರ್ವಜನಿಕ ವಿಮರ್ಶೆ ( Public Review) ಕೂಡ ಬೇಕಲ್ಲವೇ? ಕೇಶವ್ ಸಿಂಗ್ ಪ್ರಕರಣದಲ್ಲಿ ನ್ಯಾಯಾಂಗಕ್ಕೂ, ಸದನಕ್ಕೂ ಇದ್ದ ಹಗ್ಗ – ಜಗಾಟವೇನೋ ತೀರ್ಮಾನವಾಯ್ತು, ಆದರೆ ಇಡೀ ಪ್ರಕರಣಕ್ಕೆ ಕಾರಣವಾದ ಕೇಶವ್ ಸಿಂಗ್ ನ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡವು.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

Spread the love