ಲೇಖನಗಳು

ಪಂಚನಾಮ – ಏನು? ಯಾಕೆ ಮತ್ತು ಹೇಗೆ?

ಕಾನೂನು ಜಾರಿ ಮತ್ತು ತನಿಖಾ ಸಂಸ್ಥೆಗಳು ಬಳಸುವ ‘ಪಂಚನಾಮ’ ಎಂಬ ಪದವನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ. ಪಂಚನಾಮಾದ ಅರ್ಥ ಮತ್ತು ಬಳಕೆಯನ್ನು ಈ ಚಿಕ್ಕದಾದ ಬರಹದಲ್ಲಿ ಹೇಳಿದೆ.

‘ಪಂಚನಾಮ’ ಪದದ ಅರ್ಥ:

ವಾರ್ಟನ್ ಕಾನೂನು ಲೆಕ್ಸಿಕನ್ ಹೇಳುವಂತೆ ‘ಪಂಚ’ ಪದವಿ ಸರಪಂಚ್ ಅನ್ನು ಒಳಗೊಂಡಿರುತ್ತದೆ. ಮತ್ತು ಪಂಚನಾಮ ಎಂಬುದು ಸರಪಂಚ್ ನೋಡಿರುವ ನಿಜವಾದ ಸಂಗತಿಗಳ ದಾಖಲೆ. ಪಂಚನಾಮಕ್ಕೆ ಸಂಬಂಧಿಸಿದ ಕಾನೂನು, ಲಾಮನ್ಸ್ ಪಬ್ಲಿಕೇಷನ್ಸ್ ಪುಸ್ತಕದಂತೆ, ಸಂಸ್ಕೃತದಲ್ಲಿ ಪಂಚ್ ಎಂದರೆ ಗೌರವಾನ್ವಿತ ವ್ಯಕ್ತಿಗಳು ಮತ್ತು ‘ನಾಮ’ ಎಂದರೆ ಲಿಖಿತ ವಿಷಯ ಎಂಬ ಅರ್ಥ. ಹಿಂದೆ ಪಂಚಾಯ್ತಿ ಕಾನೂನು ಹಳ್ಳಿಗಳಲ್ಲಿ ಬಳಕೆಯಲ್ಲಿದ್ದಾಗ, ಹಳ್ಳಿಯ ಮುಖ್ಯ ಐದು ವ್ಯಕ್ತಿಗಳು ಇರುತ್ತಿದ್ದ ವ್ಯವಸ್ಥೆಯನ್ನು ಈ ಪದ ಪ್ರತಿನಿಧಿಸುತ್ತದೆ ಎನ್ನಬಹುದು. ಈ ಪದವನ್ನು ಪಂಚನಾಮೆ ಎಂದು ಬಳಸುವುದೂ ಇದೆ.

ಪಂಚನಾಮದ ವಿಧಗಳು:

ಕಾನೂನು ಜಾರಿ ಮತ್ತು ತನಿಖಾ ಸಂಸ್ಥೆಗಳು ಬಳಸುವ ಬೇರೆ ಬೇರೆ ರೀತಿಯ ಪಂಚನಾಮಾಗಳಿವೆ. ಉದಾಹರಣೆಗೆ ಬಂಧನ (ಅರೆಸ್ಟ್) ಪಂಚನಾಮ, ಸ್ಪಾಟ್ ಪಂಚನಾಮ, ಜ್ಞಾಪಕ ಪಂಚನಮ ( ಐ ಓ ಪಂಚನಾಮ) ಬಲೆ ಪೂರ್ವ ಅಥವಾ ನಂತರದ ಪಂಚನಾಮ ಇತ್ಯಾದಿ.

ಪಂಚನಾಮ: ಇನ್ನಷ್ಟು ವಿವರಗಳು:

ದಂಡ ಪ್ರಕ್ರಿಯಾ ಸಂಹಿತೆ,1973ರಲ್ಲಿ ಪಂಚನಾಮ ಪದವನ್ನು ಬಳಸಿಲ್ಲವಾದರೂ, ಸಂಹಿತೆಯ ಕಲಂ 100ರ ಭಾಷೆಯಲ್ಲಿ ಇದನ್ನು ಅರ್ಥೈಸಿಕೊ‌ಳ್ಳಬಹುದು. ಯಾವುದೇ ಅಪರಾಧದ ತನಿಖೆಗಾಗಿ ಪೊಲೀಸ್ ಅಧಿಕಾರಿಯು ಒಂದು ವಿಷಯಕ್ಕಾಗಿ ಹುಡುಕಾಟ ಮಾಡಬಹುದು ಮತ್ತು ತನಿಖೆಯ ಸಮಯದಲ್ಲಿ ಮಾಡಬೇಕಾದ ಕಾರ್ಯವಿಧಾನವನ್ನು ಹೇಳುವ ಕಲಂ 100ರಂತೆ ಸ್ಥಳವನ್ನು ಹುಡುಕುವ ಅಧಿಕಾರಿ ಶೋಧದ ಸಂದರ್ಭದಲ್ಲಿ ವಶಪಡಿಸಿಕೊಂಡ ವಸ್ತುಗಳು ಹಾಗೂ ಅವು ಪತ್ತೆಯಾದ ಸ್ಥಳಗಳ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ ಮತ್ತು ಶೋಧಿಸಬೇಕಾದ ಸ್ಥಳದಲ್ಲಿ ನೆಲೆಗೊಂಡಿರುವ ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ಸಹಿ ಮತ್ತು ರುಜುವಾತು ಮಾಡಲಾಗುವ ದಸ್ತಾವೇಜಿಗೆ ಪಂಚನಾಮವೆಂದು ಕರೆಯಲಾಗುತ್ತದೆ.

ತನಿಖೆಯನ್ನು ನಡೆಸುತ್ತಿರುವ ಅಧಿಕಾರಿಯ ಕೋರಿಕೆಯಂತೆ ಮತ್ತೊಂದು ಪೊಲೀಸ್ ಠಾಣಾಧಿಕಾರಿಯು ಹುಡುಕಾಟವನ್ನು ನಡೆಸಿದಾಗ 165ನೇ ಕಲಂನ ಅಡಿಯಲ್ಲಿ ಹೇಳಿದ ರೀತಿಯನ್ನು cಅನುಸರಿಸತಕ್ಕದ್ದು. ಪಂಚನಾಮಾದ ಬಳಕೆಯನ್ನು ದಂಡ ಪ್ರಕ್ರಿಯಾ ಸಂಹಿತೆಯ ಕಲಂ 174 (ಪೊಲೀಸರಿಂದ ಆತ್ಮಹತ್ಯೆ ನಡೆದಿರುವ ಸ್ಥಳದ ಪರಿಶೋಧನೆ ಮತ್ತು ವರದಿ) ಹಾಗೂ 176 (ಮ್ಯಾಜಿಸ್ಟ್ರೇಟರಿಂದ ಸಾವು ನಡೆದ ಸ್ಥಳದ ಪರಿಶೋಧನೆ ಮತ್ತು ವರದಿ) ರಡಿಯಲ್ಲು ಅರ್ಥೈಸಿಕೊಳ್ಳಬಹುದು. ಪಂಚ ಸಾಕ್ಷಿಗಳು ಸಿಗದಿರುವ ಸಂದರ್ಭದಲ್ಲಿ ಪೊಲೀಸರು ‘ವಿಶೇಷ ವರದಿ’ಯನ್ನೂ ಸಹ ಸಿದ್ಧಪಡಿಸಬಹುದು.

ಭಾರತೀಯ ಸಾಕ್ಷ್ಯ ಅಧಿನಿಯಮ, 1872ರ ಕಲಂ 195 ಮತ್ತು 160ರ ಅಡಿಯಲ್ಲಿ ಪಂಚನಾಮಾವನ್ನು ಹಾಜರುಪಡಿಸಬೇಕು ಹಾಗೂ ಆರೋಪಿಗೆ/ ಆರೋಪಿಯ ವಕೀಲರಿಗೆ ಪಂಚನಾಮಾವನ್ನು ತೋರಿಸಬೇಕು ಮತ್ತು ಅಂತಹ ಆರೋಪಿಗೆ/ ಆರೋಪಿಯ ವಕೀಲರು ಬಯಸಿದಲ್ಲಿ ‘ಪಂಚನಾಮ’ ಸಾಕ್ಷಿಯನ್ನು ಪಾಟೀ ಸವಾಲಿಗೆ ಗುರಿಪಡಿಸಲೂಬಹುದು. ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯ ಸಂದರ್ಭದಲ್ಲಿ ‘ಪಂಚನಾಮ’ ಸಾಕ್ಷಿಯು ಪಂಚನಾಮಾದಲ್ಲಿ ನೀಡಿದ ಹೇಳಿಕೆಗಳನ್ನು ಆ ಸಾಕ್ಷಿಯನ್ನು ವಿರೋಧಿಸಲೂ ಬಳಸಬಹುದು. ‘ಪಂಚನಾಮ’ ಸಾಕ್ಷಿಯನ್ನು (ಹಗೆತನದ ಸಾಕ್ಷಿ) ಕರೆಯುವ ವ್ಯಕ್ತಿಯೇ ‘ಪಂಚನಾಮ’ ಸಾಕ್ಷಿಯ ಪಾಟೀಸವಾಲಿನ ಸಮಯದಲ್ಲಿ ನೀಡಿದ ಹೇಳಿಕೆಗಳನ್ನು ಆ ಸಾಕ್ಷಿಯನ್ನು ವಿರೋಧಿಸಲು ಬಳಸಬಹುದು.

ಪಂಚನಾಮವು ಕಡೆಗಣಿಸಲೇಬಾರದ ಸಾಕ್ಷ್ಯವಲ್ಲ. ಕೇವಲ ಪಂಚನಾಮದ ಆಧಾರದ ಮೇಲೆ ಅಪರಾಧ ನಿರ್ಣಯ ಸಾಧ್ಯವಿಲ್ಲ. ಆದರೂ ಸಾಕ್ಷಿಯ ಸಾಕ್ಷ್ಯವನ್ನು ದೃಢೀಕರಿಸಲು ಪಂಚನಾಮವನ್ನು ಬಳಸಬಹುದು ಮತ್ತು ವಿಶೇಷವಾಗಿ ಸಾಕ್ಷ್ಯವು ಸಾಂಧರ್ಭಿಕವಾಗಿದ್ದರೆ (Circumstantial evidence) ಪಂಚನಾಮವು ತುಂಬಾ ಮುಖ್ಯವಾಗುತ್ತದೆ.

‘ಪಂಚನಾಮ’ ಸಾಕ್ಷಿಯು ಶೋಧನೆಯ ಸ್ಥಳದಲ್ಲಿ ನೆಲೆಗೊಂಡಿರುವ ಸ್ಥಳೀಯನಲ್ಲದಿದ್ದರೂ, ಪಂಚನಾಮವನ್ನು ಸಂಪೂರ್ಣವಾಗಿ ತಳ್ಳಿಹಾಕಬಾರದು, ಆದರೆ ಅಂತಹ ಪಂಚನಾಮದ ತೂಕವು ಕಡಿಮೆಯಾಗಬಹುದು.

ಕಾನೂನು ಜಾರಿ ಮತ್ತು ತನಿಖಾ ಸಂಸ್ಥೆಗಳು ನಡೆಸಿದ ತನಿಖೆಯ ನೈಜತೆ ಮತ್ತು ನಿಖರತೆಯನ್ನು ಸ್ಥಾಪಿಸಲು ಪಂಚನಾಮ ಸಹಾಯ ಮಾಡುತ್ತದೆ. ಆದ್ದರಿಂದ, ಪಂಚನಾಮವು ನಮ್ಮ ದೇಶದ ನ್ಯಾಯಾಲಯಗಳಲ್ಲಿ ವಾಸ್ತವಾಂಶಗಳನ್ನು ರುಜುವಾತುಮಾಡಲು ಕಾನೂನು ಜಾರಿ ಮತ್ತು ತನಿಖಾ ಸಂಸ್ಥೆಗಳು ಸಿದ್ಧಪಡಿಸುವ ಪ್ರಮುಖ ದಾಖಲೆಗಳಲ್ಲೊಂದಾಗಿರುತ್ತದೆ.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

ಶಶಾಂಕ್ ಎಸ್. ಅವರು ಬೆಂಗಳೂರಿನಲ್ಲಿ ವಕೀಲರಾಗಿದ್ದಾರೆ.

Spread the love