ರಾಷ್ಟ್ರಪತಿ ಹುದ್ದೆ – ಚುನಾವಣೆ – ಏನು – ಹೇಗೆ?
ದ್ರೌಪದಿ ಮುರ್ಮು ಅವರು ಮೊದಲ ಬುಡಕಟ್ಟು ಜನಾಂಗದಿಂದ ಆರಿಸಲ್ಪಟ್ಟ ಮಹಿಳಾ ರಾಷ್ಟ್ರಾಧ್ಯಕ್ಷೆಯಾಗಿ ಆಯ್ಕೆಯಾಗಿ ಚರಿತ್ರೆ ಬರೆದಿದ್ದಾರೆ. ಭಾರತೀಯ ಚುನಾವಣಾ ಆಯೋಗವು ರಾಷ್ಟ್ರಪತಿಗಳ ಆಯ್ಕೆಗಾಗಿ 18ನೇ ಜುಲೈಗೆ ಚುನಾವಣೆ ನಡೆಸಿತ್ತು. ಈಗಿನ ರಾಷ್ಟ್ರಪತಿಗಳಾದ ಶ್ರೀ ರಾಮ್ ನಾಥ್ ಕೊವಿಂದ ಅವರ ಅವಧಿಯು ಇಂದು ಮುಗಿಯಲಿದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿಯ ಪದವಿ, ಅವರನ್ನು ಆಯ್ಕೆ ಮಾಡುವ ವಿಧಾನ, ಅವರ ಅಧಿಕಾರಾವಧಿ ಮತ್ತು ಇನ್ನಿತರ ವಿಷಯಗಳ ಕುರಿತು ಈ ಒಂದು ಲೇಖನ.
ಭಾರತ ಸಂವಿಧಾನದ ಅನುಚ್ಛೇದ 52ರ ಪ್ರಕಾರ ಭಾರತಕ್ಕೆ ಒಬ್ಬ ರಾಷ್ಟ್ರಪತಿ ಇರತಕ್ಕದ್ದು. ರಾಷ್ಟ್ರಪತಿಯು ಪಟ್ಟಕ್ಕೇರಿದ ದಿನದಿಂದ 5 ವರ್ಷಗಳವರೆಗೆ ಪದವಿಯಲ್ಲಿ ಇರಬಹುದಾಗಿದೆ[i]. ಒಬ್ಬ ವ್ಯಕ್ತಿಯು ಭಾರತೀಯ ನಾಗರಿಕನಾಗಿದ್ದು, 35 ವರ್ಷ ವಯಸ್ಸು ಪೂರ್ತಿಯಾಗಿ, ಲೋಕಸಭೆಯ ಸದಸ್ಯನಾಗಿ ಚುನಾಯಿತನಾಗಲು ಅರ್ಹತೆ ಇದ್ದಲ್ಲಿ ಆತ/ಆಕೆ ರಾಷ್ಟ್ರಪತಿಯಾಗಿ ಚುನಾಯಿತನಾಗಲು ಅರ್ಹನಾಗಿರುತ್ತಾನೆ/ಳೆ. ಹಾಗೆಯೇ, ಭಾರತ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರದ ಅಡಿಯಲ್ಲಿ ಅಥವಾ ಯಾವುದೇ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿರುವ ಸ್ಥಳೀಯ ಪ್ರಾಧಿಕಾರದ ಅಥವಾ ಇತರ ಪ್ರಾಧಿಕಾರದ ಅಧೀನದಲ್ಲಿ ಯಾವುದೇ ಲಾಭದಾಯಕ ಹುದ್ದೆಯಲ್ಲಿದ್ದರೆ, ಅಂತಹ ವ್ಯಕ್ತಿಯು ರಾಷ್ಟ್ರಪತಿಯಾಗಲು ಅರ್ಹನಲ್ಲ. ಆದರೆ, ಈಗಾಗಲೇ ರಾಷ್ಟ್ರಪತಿಯಾಗಿ ಅಥವಾ ಉಪರಾಷ್ಟ್ರಪತಿಯಾಗಿ ಅಥವಾ ಯಾವುದೇ ರಾಜ್ಯದ ರಾಜ್ಯಪಾಲನಾಗಿ ಅಥವಾ ಒಕ್ಕೂಟದ ಅಥವಾ ಯಾವುದೇ ರಾಜ್ಯದ ಮಂತ್ರಿಯಾಗಿದ್ದರೆ ಅದನ್ನು ಲಾಭದಾಯಕ ಹುದ್ದೆ ಎಂದು ಲೆಕ್ಕಿಸಲಾಗುವುದಿಲ್ಲ.[ii] ಒಂದು ವೇಳೆ ಈ ತರಹದ ಹುದ್ದೆಯಲ್ಲಿ ವ್ಯಕ್ತಿ ಇದ್ದರೆ, ರಾಷ್ಟ್ರಪತಿಯ ಹುದ್ದೆಯನ್ನು ವಹಿಸಿಕೊಂಡ ದಿನದಿಂದ ಹಳೆಯ ಹುದ್ದೆಯನ್ನು ಖಾಲಿ ಮಾಡಿರುವುದಾಗಿ ಸಂವಿಧಾನ ಲೆಕ್ಕಿಸಲಾಗುತ್ತದೆ.
ಭಾರತದ ರಾಷ್ಟ್ರಪತಿಗಳು ನೇರವಾಗಿ ಜನರಿಂದ ಆಯ್ಕೆಯಾಗುವುದಿಲ್ಲ. ಆದರೆ, ಜನರು ನೇರವಾಗಿ ಅಥವಾ ಪರೋಕ್ಷವಾಗಿ ಮತ ಚಲಾಯಿಸಿ ಆರಿಸಿ ಕಳಿಸಿದಂತಹ ಜನಪ್ರತಿನಿಧಿಗಳಿಂದ ಆಯ್ಕೆಯಾಗುತ್ತಾರೆ. ಭಾರತದ ರಾಷ್ಟ್ರಪತಿಗಳು ಚುನಾಯಕ ಗಣ (Electoral College)ದ ಸದಸ್ಯರಿಂದ ಚುನಾಯಿತರಾಗುತ್ತಾರೆ[iii]. ಚುನಾಯಕ ಗಣ ಅಥವಾ Electoral College ಅಂದರೆ, ಸಂಸತ್ತಿನ ಉಭಯ ಸಭೆ(ಲೋಕಸಭೆ ಮತ್ತು ರಾಜ್ಯಸಭೆ)ಗಳ ಚುನಾಯಿತ ಸದಸ್ಯರು ಮತ್ತು ರಾಜ್ಯ[iv]ಗಳ ವಿಧಾನಸಭೆ(Legislative Assembly)ಗಳ ಚುನಾಯಿತ ಸದಸ್ಯರನ್ನೊಳಗೊಂಡ ಗಣ/college. ಅಂದರೆ, ಚುನಾಯಕ ಗಣದಲ್ಲಿ ಜನರಿಂದ/ನಾಗರಿಕರಿಂದ ನೇರವಾಗಿ(ವಿಧಾನಾ ಸಭೆ ಮತ್ತು ಲೋಕಸಭೆ ಸದಸ್ಯರು) ಅಥವಾ ಪರೋಕ್ಷವಾಗಿ(ರಾಜ್ಯಸಭೆ ಸದಸ್ಯರು[v]) ಚುನಾವಣೆಯಲ್ಲಿ ಆಯ್ಕೆಯಾದಂತಹ ಸಂಸತ್ತಿನ ಹಾಗೂ ರಾಜ್ಯಗಳ ವಿಧಾನಸಭೆಯ ಸದಸ್ಯರು ಮಾತ್ರ ಇರುತ್ತಾರೆ. ರಾಜ್ಯಾಪಾಲರಿಂದಲೋ ಅಥವಾ ರಾಷ್ಟ್ರಪತಿಗಳಿಂದಲೋ ನಾಮನಿರ್ದೇಶನಗೊಂಡು ವಿಧಾನಸಭೆಯಾಗಲಿ ಅಥವಾ ಸಂಸತ್ತಿನ ಸದಸ್ಯರಾದಂತಹವರು ಈ ಚುನಾವಣೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುವುದಿಲ್ಲ. ಹಾಗೆಯೇ, ವಿಧಾನ ಪರಿಷತ್ತಿನ ಸದಸ್ಯರಿಗೂ ಈ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕಿರುವುದಿಲ್ಲ.
ಈ ಚುನಾವಣೆಯಲ್ಲಿ ಮತದಾನವು ರಹಸ್ಯ ಮತದಾನದ ಮೂಲಕ ನಡೆಯುತ್ತದೆ. ಸಂವಿಧಾನದ ಅನುಚ್ಛೇದ 55(3)ರ ಪ್ರಕಾರ ರಾಷ್ಟ್ರಪತಿಯ ಚುನಾವಣೆಯನ್ನು ಏಕವರ್ಗಾವಣೀಯ ಮತ(single transferable vote)ದ ವಿಧಾನದ ಮೂಲಕ ಪ್ರಮಾಣಾನುಸಾರ ಪ್ರಾತಿನಿಧ್ಯ ಪದ್ದತಿ(system of proportional representation)ಗನುಸಾರ ನಡೆಸತಕ್ಕದ್ದು.
ಏಕವರ್ಗಾವಣೀಯ ಮತ(single transferable vote)ದ ವಿಧಾನ ಅಂದರೆ, ಮತದಾರನು ಆದ್ಯತೆಯ ಮೆರೆಗೆ ಚುನಾವಣಾ ಸ್ಪರ್ಧಿಗಳಿಗೆ ತನ್ನ ಮತ ಚಲಾಯಿಸುತ್ತಾನೆ. ಉದಾಹರಣೆಗೆ, ರಾಷ್ಟ್ರಪತಿ ಚುನಾವಣೆಯಲ್ಲಿ A, B ಮತ್ತು C ಎಂಬ ಮೂರು ಸ್ಪರ್ಧಿಗಳಿದ್ದಲ್ಲಿ, ಮತದಾರನು ಮೊದಲನೇ ಆದ್ಯತೆಯಾಗಿ Bಯನ್ನು, ಎರಡನೇ ಆದ್ಯತೆಯಾಗಿ Cಯನ್ನು ಹಾಗೂ ಮೂರನೇ ಆದ್ಯತೆಯಾಗಿ Aಗೆ ಮತ ಚಲಾಯಿಸಬಹುದು. ಒಂದು ವೇಳೆ ಯಾವುದಾದರೂ ಕಾರಣಗಳಿಂದ Bಯು ಚುನಾವಣೆಯಿಂದ ಹೊರನಡೆದರೆ ಅಥವಾ ಅನರ್ಹಗೊಂಡರೆ ಆಗ ಅವನ ಮತ ವ್ಯರ್ಥವಾಗದೆ Cಗೆ ಹೋಗುತ್ತದೆ.
ಇನ್ನು ಪ್ರಮಾಣಾನುಸಾರ ಪ್ರಾತಿನಿಧ್ಯ ಪದ್ದತಿ(system of proportional representation) ಅಂದರೆ, ಚುನಾವಣೆಯಲ್ಲಿ ಎಲ್ಲ ಪ್ರಾದೇಶಿಕ ವಿಭಾಗಗಳೂ ತನ್ನ ಜನಸಂಖ್ಯೆಗಣುಗುನವಾಗಿ ಪ್ರಮಾಣಾನುಸಾರ ಪ್ರತಿನಿಧ್ಯವನ್ನು ಹೊಂದಿರುವುದು. ಮತಗಳು ಹೇಗೆ, ಮಿಶ್ರ ಮತ್ತು ಸಮತೋಲಿತ ಪ್ರಾತಿನಿಧ್ಯದಲ್ಲಿ ಚಲಾಯಿಸಲ್ಪಡಬೇಕು ಎಂಬುದು ಈ ಪದ್ಧತಿಯ ಸಾರ. ವಿವಿಧ ರಾಜ್ಯಗಳ ಪ್ರಾತಿನಿಧ್ಯದ ಪ್ರಮಾಣದಲ್ಲಿ ಸಾಧ್ಯವಾಗುವ ಮಟ್ಟಿಗೆ ಏಕರೂಪತೆ ತರಲು ಅನುಚ್ಛೇದ 55ರಡಿಯಲ್ಲಿ ಸಂಸತ್ತಿನ ಹಾಗೂ ಪ್ರತಿ ರಾಜ್ಯದ ವಿಧಾನಸಭೆಯ ಪ್ರತಿ ಚುನಾಯಿತ ಸದಸ್ಯನು ಎಷ್ಟು ಮತಗಳನ್ನು ಕೊಡಲು ಅಥವಾ ಸದಸ್ಯನು ಚಲಾಯಿಸುವ ಮತ ಒಂದೇ ಆದರೂ ಆ ಒಂದು ಮತದ ಬೆಲೆ ಎಷ್ಟಿರುತ್ತದೆ ಎಂಬುದನ್ನು ನಿರ್ಧರಿಸಲು ಹಲವು ನಿಯಮ/ಮಾರ್ಗದರ್ಶಿಗಳನ್ನು ನೀಡಿದೆ. ಅದರಂತೆ ಒಂದು ರಾಜ್ಯದ ಚುನಾಯಿತ ವಿಧಾನಸಭೆ ಸದಸ್ಯನ ಮತದ ಬೆಲೆ, ಆ ರಾಜ್ಯದ ಒಟ್ಟು ಜನಸಂಖ್ಯೆಯನ್ನ ಆ ರಾಜ್ಯದ ಒಟ್ಟು ಚುನಾಯಿತ ವಿಧಾನಸಭೆ ಸದಸ್ಯರ ಸಂಖ್ಯೆಯ ಸಾವಿರ ಗುಣಕದಿಂದ ಭಾಗಿಸಿದಾಗ ಬರುವ ಮೊತ್ತವಾಗಿರುತ್ತದೆ. ಉದಾಹರಣೆಗೆ 1971ರ ಜನಗಣತಿಯ ಪ್ರಕಾರ ಕರ್ನಾಟಕದ ಜನಸಂಖ್ಯೆ 2,92,99,014 ಇದ್ದು, ವಿಧಾನಸಭೆಯ ಚುನಾಯಿತ ಸದಸ್ಯರ ಸಂಖ್ಯೆ 224 ಇದೆ ಎಂದಾದರೆ, ಆಗ ಕರ್ನಾಟಕದ ಒಬ್ಬ ಚುನಾಯಿತ ಸದಸ್ಯನ ಮತದ ಬೆಲೆ 130.799 i.e. 131 ಆಗುತ್ತದೆ.
ಕರ್ನಾಟಕದ ಒಬ್ಬ ವಿಧಾನಸಭೆ ಚುನಾಯಿತ ಸದಸ್ಯನ ಮತದ ಬೆಲೆ = ರಾಜ್ಯದ ಒಟ್ಟು ಜನಸಂಖ್ಯೆ ——————————————— ವಿಧಾನಸಭೆಯ ಒಟ್ಟು ಚುನಾಯಿತ ಸದಸ್ಯರ ಸಂಖ್ಯೆ*1000 2,92,99,014 = ————————————- =130.799=131(round off) 224*1000 |
ಹಾಗೆಯೇ, ಸಂಸತ್ತಿನ ಎರಡೂ ಸಭೆಗಳ ಪ್ರತಿಯೊಬ್ಬ ಚುನಾಯಿತ ಸದಸ್ಯನ ಮತಗಳ ಸಂಖ್ಯೆಯು, ಎಲ್ಲ ರಾಜ್ಯಗಳ ವಿಧಾನಸಭೆಗಳ ಸದಸ್ಯರಿಗೆ ನಿಗದಿಪಡಿಸಿರುವ ಮತಗಳ ಒಟ್ಟು ಸಂಖ್ಯೆಯನ್ನು, ಸಂಸತ್ತಿನ ಎರಡೂ ಸಭೆಗಳ ಚುನಾಯಿತ ಸದಸ್ಯರ ಸಂಖ್ಯೆಯಿಂದ ಭಾಗಿಸಿದಾಗ ಬರುವ ಸಂಖ್ಯೆಯಾಗಿರುತ್ತದೆ. ಉದಾಹರಣೆಗೆ, 1971ರ ಜನಗಣತಿಯ ಪ್ರಕಾರ ಎಲ್ಲ ವಿಧಾನಸಭೆಗಳ ಚುನಾಯಿತ ಸದಸ್ಯರ ಉಟ್ಟು ಮತಗಳ ಬೆಲೆ 549495 ಆಗಿದ್ದಲ್ಲಿ, ಮತ್ತು ಸಂಸತ್ತಿನ ಎರಡೂ ಸಭೆಗಳ ಒಟ್ಟು ಚುನಾಯಿತ ಸದಸ್ಯರ ಸಂಖ್ಯೆ 776 ಆಗಿದ್ದಲ್ಲಿ, ಸಂಸತ್ತಿನ ಪ್ರತಿ ಚುನಾಯಿತ ಸದಸ್ಯನ ಮತದ ಬೆಲೆ 708[vi] ಅಗುವುದು.
ಸಂಸತ್ತಿನ ಪ್ರತಿ ಚುನಾಯಿತ ಸದಸ್ಯನ ಮತದ ಬೆಲೆ = ಎಲ್ಲ ರಾಜ್ಯಗಳ ವಿಧಾನಸಭೆಗಳ ಚುನಾಯಿತ ಸದಸ್ಯರ ಒಟ್ಟು ಮತಗಳ ಬೆಲೆ ——————————————————————- ಸಂಸತ್ತಿನ ಉಭಯ ಸಭೆಗಳ ಚುನಾಯಿತ ಸದಸ್ಯರ ಸಂಖ್ಯೆ 549495 = ———————————– =708 233(ರಾಜ್ಯಸಭೆ)+543(ಲೋಕಸಭೆ) |
ಈ ಮೇಲೆ ಉದಾಹರಣೆಗೆಂದು 1971ರ ಜನಗಣತಿಯ ಪ್ರಕಾರ ಜನಸಂಖ್ಯೆಯನ್ನು ಪರಿಗಣಿಸಲಾಗಿದೆ. ಅನುಚ್ಛೇದ 55ರ ಪ್ರಕಾರ ಜನಸಂಖ್ಯೆ ಎಂದರೆ, ಹಿಂದಿನ ಕೊನೆಯ ಸಲದ ಜನಗಣತಿಯಲ್ಲಿ ಖಚಿತಪಡಿಸಿಕೊಂಡ ಜನಸಂಖ್ಯೆ. ಆದರೆ ಈಗ ರಾಷ್ಟ್ರಪತಿ ಚುನಾವಣೆಗೆ ಮತಗಳ ಬೆಲೆ ಲೆಕ್ಕ ಮಾಡಲು 1971ರ ಜನಗಣತಿಯ ಪ್ರಕಾರವಿರುವ ಜನಸಂಖ್ಯೆಯನ್ನೇ ಪರಿಗಣಿಸುತ್ತಾರೆ. ಯಾಕೆಂದರೆ 2002ರಲ್ಲಿ, ಶ್ರೀ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು, ಸಂವಿಧಾನದ ಅನುಚ್ಛೇದ 55ಕ್ಕೆ ತಿದ್ದುಪಡಿ[vii] ತರುವುದರ ಮೂಲಕ 2026 ರ ನಂತರ ನಡೆಸುವ ಮೊದಲ ಜನಗಣತಿಯ ಸಂಬಂಧಪಟ್ಟ ಅಂಕಿಗಳು ಪ್ರಕಟವಾಗುವವರೆಗೆ 1971ರ ಜನಗಣತಿಯ ಅಂಕಿಗಳನ್ನೆ ಪರಿಗಣಿಸಬೇಕೆಂಬ ಬದಲಾವಣೆ ತಂದಿತು. ಆದ್ದರಿಂದ 2026ರ ನಂತರ ನಡೆಯುವ ಜನಗಣತಿ ಎಂದರೆ 2030/31ರಲ್ಲಿ ನಡೆಯುವ ಗಣತಿಯವರೆಗೂ 1971ರ ಜನಗಣತಿ ಆಧಾರದ ಮೇಲೆ ಚುನಾಯಕ ಗಣದ ಮತಗಳ ಬೆಲೆ ನಿರ್ಧರಿಸಲಾಗುವುದು. ಅದರ ಮೊದಲೇ ಇನ್ನು ಬೇರೆ ಸಾಂವಿಧಾನಿಕ ತಿದ್ದುಪಡಿ ಆಗಲಿದೆಯೋ ಎಂದು ಕಾದುನೋಡಬೇಕಷ್ಟೆ.
ಭಾರತೀಯ ಚುನಾವಣಾ ಆಯೋಗವು ರಾಷ್ಟ್ರಪತಿ ಚುನಾವಣೆ ಘೊಷೀಸಿ “ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ಅಧಿನಿಯಮ, 1952”[viii] ರಡಿಯಲ್ಲಿ ಚುನಾವಣಾ ಪ್ರಕ್ರಿಯೆಗೆ ಪ್ರಮುಖ ದಿನಾಂಕ[ix]ಗಳನ್ನು ಹೊರಡಿಸಿತ್ತು. ಅಷ್ಟೆ ಅಲ್ಲದೆ, ಭಾರತೀಯ ಚುನಾವಣಾ ಆಯೋಗವು ಮತದಾನದ ಸ್ಥಳಗಳನ್ನು ನಿಗದಿಪಡಿಸಿ ಅಧಿಸೂಚನೆಯನ್ನೂ ಹೊರಡಿಸಿತ್ತು.[x] ಅದರಂತೆ, 18 ನೇ ತಾರೀಖಿನಂದು ಸಂಸತ್ತಿನ ಸದಸ್ಯರೆಲ್ಲರು, ದೆಹಲಿಯ ಸಂಸತ್ತ ಭವನದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 63ರಲ್ಲಿ ಮತ್ತು ಇತರ ರಾಜ್ಯಗಳ ವಿಧಾನಸಭೆ ಸದಸ್ಯರು ಅಧಿಸೂಚನೆಯಲ್ಲಿ ನಿಗದಿಪಡಿಸಿದ ಆಯಾ ರಾಜ್ಯದ ಮತದಾನದ ಸ್ಥಳಗಳಲ್ಲಿ ಮತ ಚಲಾಯಿಸಿದರು. ಒಂದು ವೇಳೆ, ಹೀಗೆ ಯಾವುದೇ ಸದಸ್ಯರು ತಮ್ಮ ಸೂಚಿತ ಮತದಾನದ ಸ್ಥಳದ ಹೊರತಾಗಿ ಬೇರೆ ಮತದಾನದ ಸ್ಥಳದಲ್ಲಿ ಮತ ಚಲಾಯಿಸಲು ಇಚ್ಛಿಸಿದಲ್ಲಿ, ಚುನಾವಣಾ ಆಯೋಗಕ್ಕೆ ಚುನಾವಣೆಗೆ 10 ದಿನ ಮುಂಚಿತವಾಗಿ ತಲುಪುವಂತೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.
ಚುನಾವಣೆಯ ಸ್ಪರ್ಧಿಯು ʼರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ನಿಯಮಗಳು, 1974ʼರಡಿಯಲ್ಲಿ[xi] ನೀಡಿರುವ Form-2 ರಂತೆ ನಾಮಪತ್ರ ಸಲ್ಲಿಸತಕ್ಕದ್ದು. ಸದರಿ ನಾಮಪತ್ರವು ಚುನಾಯಕ ಗಣದ 50 ಸದಸ್ಯರಿಂದ ಪ್ರಸ್ತಾಪಿತರೆಂದು ಮತ್ತು ಇನ್ನಿತರ 50 ಸದಸ್ಯರಿಂದ ಬೆಂಬಲಿಗರೆಂದು ಸಹಿ ಮಾಡಲ್ಪಟ್ಟಿರಬೇಕು. ಚುನಾಯಕ ಗಣದ ಯಾವುದೇ ಸದಸ್ಯನು ಒಂದಕ್ಕಿಂತ ಹೆಚ್ಚು ಸ್ಪರ್ಧಿಗಳಿಗೆ ಪ್ರಸ್ತಾಪಿತ(proposer) ಅಥವಾ ಬೆಂಬಲಿಗ(seconder)ನಾಗುವಂತಿಲ್ಲ. ಮತ್ತು ಯಾವುದೇ ಸದಸ್ಯನು ಪ್ರಸ್ತಾಪಿತ ಮತ್ತು ಬೆಂಬಲಿಗ ಎರಡು ಆಗಲು ಸಾಧ್ಯವಿಲ್ಲ. ಅವಶ್ಯ ದಾಖಲೆಗಳೊಂದಿಗೆ ಮತ್ತು ಹದಿನೈದು ಸಾವಿರ ರೂಪಾಯಿಗಳ ಭದ್ರತಾ ಠೇವಣಿ(security deposit)ನೊಂದಿಗೆ ಚುನಾವಣಾ ಆಯೋಗ ಸೂಚಿಸಿರುವ ರಿಟರ್ನಿಂಗ್ ಆಫಿಸರ್‌ಗೆ ನಾಮಪತ್ರ ಸಲ್ಲಿಸಬೇಕು.
ಹೀಗೆ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷ ಬೆಂಬಲಿತ ಅಭ್ಯರ್ಥಿ ಈಗ ರಾಷ್ಟ್ರಾಧ್ಯಕ್ಷರಾಗಿ ಹೊಮ್ಮಿದ್ದಾರೆ. ನಾಳೆ ಅವರು ಪದಗ್ರಹಣ ಮಾಡಲಿದ್ದಾರೆ. ದೇಶ ಕಂಡ ಮೊದಲ ಬುಡಕಟ್ಟು ಜನಾಂಗದ ಮಹಿಳಾ ರಾಷ್ಟ್ರಾಧ್ಯಕ್ಷೆ ಅವರು. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಮತ್ತು ಬುಡಕಟ್ಟು ಜನಾಂಗದ ಜನರ ಕಲ್ಯಾಣದಲ್ಲಿ ದ್ರೌಪದಿ ಅವರ ಕೊಡುಗೆಯನ್ನು ದೇಶ ನಿರೀಕ್ಷಿಸುತ್ತದೆ.
[i] Article 56, ಭಾರತ ಸಂವಿಧಾನ
[ii] Article 58, ಭಾರತ ಸಂವಿಧಾನ
[iii] Article 56, ಭಾರತ ಸಂವಿಧಾನ
[iv] ಸಂವಿಧಾನ (ಎಪ್ಪತ್ತನೇ ತಿದ್ದುಪಡಿ) ಅಧಿನಿಯಮ, 1992ರ ಮೂಲಕ ಅನುಚ್ಛೇದ 54 ಮತ್ತು 55ರ ಕೆಳಗೆ ʼರಾಜ್ಯʼ ಎಂಬ ಪದವನ್ನು ದೆಹಲಿಯ ರಾಷ್ಟ್ರೀಯ ರಾಜಧಾನಿ ರಾಜ್ಯಕ್ಷೇತ್ರ ಮತ್ತು ಪಾಂಡಿಚೇರಿ ಒಕ್ಕೂಟ ರಾಜ್ಯಕ್ಷೇತ್ರವನ್ನು ಒಳಗೊಳ್ಳುವಂತೆ ವಿವರಿಸಲಾಗಿದೆ. ಹಾಗಾಗಿ ದೆಹಲಿಯ ರಾಷ್ಟ್ರೀಯ ರಾಜಧಾನಿ ರಾಜ್ಯಕ್ಷೇತ್ರ ಮತ್ತು ಪಾಂಡಿಚೇರಿ ಒಕ್ಕೂಟ ರಾಜ್ಯಕ್ಷೇತ್ರಗಳ ಚುನಾಯಿತ ಸಂಸತ್ತಿನ ಸದಸ್ಯರು ಮತ್ತು ವಿಧಾನಸಭೆ ಸದಸ್ಯರು ಚುನಾಯಕ ಗಣದ ಭಾಗವಾಗಿದ್ದಾರೆ.
[v] ರಾಜ್ಯಸಭೆಯ ಸದಸ್ಯರು ಆಯಾ ರಾಜ್ಯದ ವಿಧಾನಸಭೆಯ ಸದಸ್ಯರಿಂದ ಆಯ್ಕೆಯಾಗುತ್ತಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ, ಮೂವರು BJP ಪಕ್ಷ ಹಗೂ ಒಬ್ಬರು INC ಪಕ್ಷಕ್ಕೆ ಸೇರಿದ ಸದಸ್ಯರು ಆಯ್ಕೆಯಾಗಿದ್ದಾರೆ.
[vi] ಕೇವಲ ಉದಾಹರಣೆ ಅಷ್ಟೆ. ಪ್ರಸ್ತುತ, ಪ್ರತಿ ಸದಸ್ಯನ ಮತದ ಬೆಲೆಯು ಈಗಿರುವ ಎಲ್ಲ ರಾಜ್ಯಗಳ ವಿಧಾನಸಭೆ ಸದಸ್ಯರ ಸಂಖ್ಯೆ ಮತ್ತು ಈಗಿರುವ ಸಂಸತ್ ಸದಸ್ಯರ ಮೇಲೆ ಅವಲಂಬಿಸಿದೆ.
[vii] https://www.india.gov.in/my-government/constitution-india/amendments/constitution-india-eighty-fourth-amendment-act-2001,
[viii] https://legislative.gov.in/sites/default/files/A1952-31_1.pdf
[ix] 1437140575_PE-PRGM-Notifications-RO.pdf
[x] 1437140575_PE-PRGM-Notifications-RO.pdf
[xi] https://legislative.gov.in/node/89089/
ತುಂಬಾ ಸರಳವಾಗಿ ಸೊಗಸಾಗಿ ಹೇಳಿದ್ದೀರಿ.
ಉತ್ತಮವಾದ ಭಾಷಾ ಕೌಶಲ್ಯ ಹಾಗೂ ಮಾಹಿತಿ ಸಂಪೂರ್ಣವಾಗಿ ಸರಳವಾಗಿದೆ ಆಗು ಉತ್ತಮವಾಗಿದೆ
ಅಭಿನಂದನೆಗಳು
ಕಾನೂನು ವಿದ್ಯಾರ್ಥಿ ಕೊಪ್ಪಳ
It’s fabulous madam really great writer madam
ಉತ್ತಮವಾದ ಶಬ್ದಗಳು ಹಾಗೂ ಮಾಹಿತಿ ಸಂಪೂರ್ಣವಾಗಿ ಸರಳವಾಗಿದೆ ಓದುಗರ ಮನವನ್ನು ಸೆಳೆಯುವಂತಿದೆ.
ಉತ್ತಮವಾದ ಭಾಷಾ ಕೌಶಲ್ಯ ಹಾಗೂ ಮಾಹಿತಿ ಸಂಪೂರ್ಣವಾಗಿ ಸರಳವಾಗಿದೆ ಆಗು ಉತ್ತಮವಾಗಿದೆ
ಅಭಿನಂದನೆಗಳು
ಕಾನೂನು ವಿದ್ಯಾರ್ಥಿ ಕೊಪ್ಪಳ SIDDEDH S INGALDAL (Student)
ನಿಮ್ಮ ಲೇಖನ ತುಂಬಾ ಉಪಯುಕ್ತ ಮಾಹಿತಿ ಹೊಂದಿದೆ ಇದೆ ರೀತಿ ಮುಂದುವರೆಯಿರಿ.
– ಎಂ. ಶಿವಶಂಕರ
Very useful information…