ಮತ್ತೆ ಸದ್ದು ಮಾಡುತ್ತಿದೆ ಏಕರೂಪದ ನಾಗರಿಕ ಸಂಹಿತೆ
ಪರಿಚಯ
ಇತ್ತೀಚಿಗೆ ಉತ್ತರಖಂಡ ರಾಜ್ಯದ ಮುಖ್ಯಮಂತ್ರಿ ಪುಷ್ಕರ ಸಿಂಗ ಧಾಮಿ ಸಮಿತಿಯೊಂದನ್ನು ರಚಿಸಿ ತಮ್ಮ ರಾಜ್ಯಕ್ಕೆ ಮಾತ್ರ ಅನ್ವಯವಾಗುವಂತೆ ಏಕರೂಪದ ನಾಗರಿಕ ಸಂಹಿತೆ ಯನ್ನು ಜಾರಿಗೊಳಿಸಲು ಸಾಧ್ಯವೇ ಎಂದು ಪರಿಶೀಲಿಸಲು ನಿರ್ದೇಶಿಸಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿತು. ಇನ್ನೂ ಹಲವು ರಾಜ್ಯಗಳಿಂದ ನಮ್ಮಲ್ಲಿಯೂ ಹೀಗೆ ಮಾಡಬೇಕು ಎಂಬ ಒತ್ತಾಯ, ಈ ನಿರ್ಣಯಕ್ಕೆ ವಿರೋಧ, ಇದರ ಬಗ್ಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುವವರು ಧ್ವನಿ, ಕೇಳಿ ಬಂದವು
ಬೇರೆ ಎಲ್ಲ ಪ್ರಮುಖ ರಾಷ್ಟ್ರೀಯ ವಿಷಯಗಳಂತೆ ಏಕರೂಪದ ನಾಗರೀಕ ಸಂಹಿತೆಯೂ ದೇಶದ ಎಡ ಬಲ ಪಂಥೀಯರ ಮಧ್ಯೆ ಗೆರೆ ಎಳೆದಿದೆ. ಷರಿಯತ್ ದೇವರು ಕೊಟ್ಟ ಕಾನೂನು, ಇದೆ ನಮಗಿರಲಿ ಎನ್ನುವ ಕರ್ಮಠ ಮುಸಲ್ಮಾನರೂ ಮತ್ತು ಇನ್ನುಳಿದವರ ಮಧ್ಯೆಯೂ ಗೆರೆ ಎಳೆಯಲ್ಪಟ್ಟಿದೆ. ಓದುಗರೆ, ನೀವು ಯಾವುದಾದರೂ ಪಂಥಕ್ಕೆ ಸೇರಿದವರಾಗಿರಿ, ಗೆರೆಯ ಯಾವ ಕಡೆಗಾದರೂ ನಿಂತರರಾಗಿರಿ, ಒಂದು ಕ್ಷಣ ನಿಮ್ಮ ಪಂಥ, ಈಗಾಗಲೆ ತಳೆದಿರುವ ನಿಲುವನ್ನು ಪಕ್ಕಕ್ಕಿಟ್ಟು ಈ ಲೇಖಕನಂತೆ ಶುದ್ಧ ನಡು ಪಂಥೀಯರಾಗಿ, ಕೇವಲ ವಸ್ತುನಿಷ್ಠರಾಗಿ ಈ ವಿಷಯವನ್ನು ಪರಿಶೀಲಿಸುವ ಆಸಕ್ತಿ ಇದ್ದವರಾದರೆ, ಬನ್ನಿ, ನಿಮ್ಮೊಂದಿಗೆ ಚರ್ಚಿಸಲಿಕ್ಕೆ ಇಲ್ಲಿ ಕೆಲವು ವಿಷಯಗಳಿವೆ.
ನಾಗರೀಕ ಸಂಹಿತೆ ಎಂದರೆ ಮದುವೆ, ವಿವಾಹ ವಿಚ್ಛೇದನ, ಮಕ್ಕಳನ್ನು ದತ್ತು ಪಡೆಯುವುದು, ಮಕ್ಕಳ ಪಾಲನೆ-ಪೋಷಣೆಯ ಹೊಣೆ, ಮರಣಾ ನಂತರ ವಾರಸುದಾರರಿಗೆ ಆಸ್ತಿ ಹಂಚಿಕೆ ಹೀಗೆ ವ್ಯಕ್ತಿಗಳ ಖಾಸಗಿ ಜೀವನಕ್ಕೆ ಸಂಬಂಧಿಸಿದ ಹಲವಾರು ಕಾನೂನುಗಳು. ಈ ಕಾನೂನುಗಳನ್ನೆಲ್ಲ ಸೇರಿಸಿ ಸಿವಿಲ್ ಕೋಡ್ ಅಥವಾ ವೈಯಕ್ತಿಕ ಕಾನೂನು ಎನ್ನುತ್ತಾರೆ. ಈವರೆಗು ಭಾರತದಲ್ಲಿ ಹಿಂದೂ, ಮುಸಲ್ಮಾನ, ಕ್ರೈಸ್ತರಿಗೆ ಈ ಬಗ್ಗೆ ಬೇರೆ ಬೇರೆ ಕಾಯ್ದೆಗಳಿವೆ. ಹೀಗೆ ಬೇರೆ ಬೇರೆ ಧರ್ಮಿಯರಿಗೆ ಬೇರೆ ಬೇರೆ ಕಾಯ್ದೆಗಳಿರುವುದು ಕೆಲವೆ ಕೆಲವು ಸಿವಿಲ್ ವಿಷಯಗಳಿಗೆ ಸಂಬಂಧಿಸಿದಂತೆ ಮಾತ್ರ. ಕ್ರಿಮಿನಲ್ ಕಾನೂನಿನ ಕ್ಷೇತ್ರದಲ್ಲಿ ಈಗಾಗಲೆ ಏಕರೂಪತೆಯನ್ನು ಸಾಧಿಸಲಾಗಿದೆ. ಇದಾಗಿದ್ದು ಬ್ರಿಟಿಷರ ಕಾಲದಲ್ಲಿಯೆ.
ಬೇರೆ ಬೇರೆ ಧರ್ಮೀಯರಿಗೆ ಬೇರೆ ಬೇರೆ ವೈಯಕ್ತಿಕ ಕಾನೂನು ಅನಾದಿ ಕಾಲದಿಂದ ಬಳಕೆಯಲ್ಲಿವೆ. ಇಡಿ ದೇಶಕ್ಕೆಲ್ಲ ಕಾನೂನು ಮಾಡುವ ಸಂಸತ್ತು ಇರದಿದ್ದ ಕಾಲದಲ್ಲಿ, ಇಡಿ ರಾಷ್ಟ್ರಕ್ಕೆಲ್ಲ ಆಜ್ಞಾಪಿಸುವ ಒಬ್ಬನೆ ದೊರೆ ಇಲ್ಲದಿದ್ದ ಕಾಲದಿಂದಲೂ ಹೀಗೆ ಬೇರೆ ಬೇರೆ ಕಾನೂನು ಇವೆ. ಈ ಕಾನೂನು ರೂಪಗೊಂಡಿದ್ದು ಹಲವು ಕಾರಣಗಳಿಂದ, ಪ್ರವಾದಿಯೊಬ್ಬರು ಹೇಳಿದರು ಎನ್ನುವ ಕಾರಣದಿಂದಾಗಿ, ಧರ್ಮಗ್ರಂಥಗಳಲ್ಲಿ ಬರೆಯಲಾಗಿದೆ ಎನ್ನುವ ಕಾರಣದಿಂದಾಗಿ, ಅಥವಾ ಜನಸಮೂಹವೊಂದು ಆಚರಣೆಯೊಂದನ್ನು ಅನುಸರಿಸಿ ಕಾಲಾಂತರದಲ್ಲಿ ಅದಕ್ಕೆ ಕಾನೂನು ಅಥವಾ ನಿಯಮದ ರೂಪ ಸಿಕ್ಕಿರುವ ಕಾರಣಕ್ಕಾಗಿ, ಈ ಪರಿಸ್ಥಿತಿ ಹೀಗಿದೆ. ಜನ ಸಮೂಹಗಳು ಹೀಗೆ ಬೇರೆ ಬೇರೆ ವೈಯಕ್ತಿಕ ಕಾನೂನನ್ನು ಎಷ್ಟು ವರ್ಷಗಳಿಂದ ಆಚರಿಸಿಕೊಂಡು ಬಂದಿರುವಾಗ ಈಗ ಅದರಲ್ಲಿ ಏಕರೂಪ ಏಕೆ ತರಬೇಕು ಎಂಬ ಪ್ರಶ್ನೆ ಸಹಜವಾಗಿಯೆ ಉದ್ಭವಿಸುತ್ತದೆ. ಭಾಷೆ, ಆಚಾರ, ವಿಚಾರ, ಉಡುಗೆ-ತೊಡುಗೆ, ಮುಖದ ಚಹರೆ, ಧರಿಸುವ ಆಭರಣ, ಮೈಗೆ ಪೂಸಿಕೊಳ್ಳುವ ಸುಗಂಧ ದ್ರವ್ಯ, ಸಾಹಿತ್ಯ, ಸಂಗೀತ, ಪುರಾಣ, ದೇವರ ಬಗ್ಗೆ ಕಲ್ಪನೆ, ಪುನರ್‌ಜನ್ಮದ ಬಗೆಗಿನ ವಿಚಾರ, ಹೀಗೆ ಎಲ್ಲದರಲ್ಲೂ ಬಹುತ್ವ ಇರುವಾಗ ಮತ್ತು ಇಂತಹ ಬಹುತ್ವದೊಂದಿಗೆ ನಾವು ಒಂದು ರಾಷ್ಟ್ರವಾಗಿ ಎಷ್ಟೊ ವರ್ಷ ಬದುಕಿರುವಾಗ ಈಗೇಕೆ ಭಾರತದಂತಹ ಬಹುತ್ವದ ಸಂಸ್ಕೃತಿಯ ದೇಶದಲ್ಲಿ ಏಕರೂಪತೆ ಸಿವಿಲ್ ಕೋಡ್‌ನಲ್ಲಿ ತರಬೇಕು? ಹೀಗೆ ಏಕರೂಪತೆಯನ್ನು ತಂದರೆ ಆಗಬಹುದಾದ ಲಾಭವೇನು ಅಥವಾ ಭರಿಸಬೇಕಾಗಿ ಬರುವ ನಷ್ಟ ಏನು?
ಏಕರೂಪ ಸಾಧ್ಯವೆ?
ಮೊದಲನೆಯದಾಗಿ, ವಿವಾಹದ ಬಗೆಗಿನ ಪ್ರಶ್ನೆಗಳನ್ನು ಹಿಂದೂ ಮತ್ತು ಮುಸಲ್ಮಾನರ ದೃಷ್ಟಿಯಿಂದ ಪರಿಶೀಲಿಸೋಣ. ವಿವಾಹ ಹಿಂದೂಗಳಲ್ಲಿ ಧಾರ್ಮಿಕ ಸಂಸ್ಕಾರ ಮತ್ತು ಆಚರಣೆ ಆಗಿದೆ. ಮದುವೆ ಹಿಂದೂಗಳಿಗೆ ದೇವರೆ ಕೂಡಿಸಿದ ಅನುಬಂಧ. ಸಾವಿಲ್ಲದೆ ಸತಿ-ಪತಿಯರು ಬೇರೆ ಆಗುವಂತೆ ಇಲ್ಲವೆ ಇಲ್ಲ. ವಿವಾಹ ವಿಚ್ಛೇದನದ ಕಲ್ಪನೆಯೆ ಹಿಂದೂಗಳಲ್ಲಿ ಇರಲಿಲ್ಲ. ೧೯೫೫ರಲ್ಲಿ ಹಿಂದೂ ವಿವಾಹ ಕಾಯ್ದೆ ಜಾರಿಗೆ ತಂದಾಗ ಮೊದಲ ಬಾರಿಗೆ ವಿವಾಹ ವಿಚ್ಛೇದನಕ್ಕೆ – ಕೆಲ ಷರತ್ತುಗಳಿಗೆ ಒಳಪಟ್ಟು – ಅವಕಾಶ ಕಲ್ಪಿಸಲಾಯಿತು. ಈ ಕಾಯ್ದೆಗೆ ೧೯೭೬ರಲ್ಲಿ ತಿದ್ದುಪಡಿ ತಂದು ಕಲಂ ೧೩-ಬಿ ಅನ್ನು ಪರಿಚಯಿಸಿದಾಗ ಸತಿ-ಪತಿಯರೆ ಒಮ್ಮತದಿಂದ ಬೇರ್ಪಡಲು, ಅವಕಾಶ ಕಲ್ಪಿಸಲಾಯಿತು. ೧೯೫೬ ಮತ್ತು ೧೯೭೬ರಲ್ಲಿ ಅಗ್ನಿಸಾಕ್ಷಿಯಾಗಿ ಕೈಹಿಡಿದು ಜನ್ಮಾಂತರಗಳಲ್ಲಿಯೂ ಜೊತೆ ಜೊತೆಗಿರಬೇಕಾದವರು ಬೇರೆಯಾಗಲು ಅವಕಾಶ ಮಾಡಿಕೊಟ್ಟಾಗ ವಿವಾಹದ ಬಗೆಗಿನ ಸನಾತನ ಧರ್ಮದ ನಿಯಮದಿಂದ ಚೂರೆ ಚುರು ಬದಿಗೆ ಸರಿದರು ಹಿಂದೂಗಳು. ಇಷ್ಟಾದರೂ ಯಾವಾಗ ಬೇಕಾದಾವಾಗ ಹಿಂದೂ ದಂಪತಿಗಳು ಮನಸೊ ಇಚ್ಛೆ ಬೇರ್ಪಡುವಂತಿಲ್ಲ. ಆ ದೃಷ್ಟಿಯಿಂದ ಹಿಂದೂ ವಿವಾಹ ಧರ್ಮದ ದಟ್ಟ ಛಾಯೆಯಿಂದ ಇನ್ನೂ ಹೊರ ಬಂದಿಲ್ಲ. ಮುಸಲ್ಮಾನರಲ್ಲಿ ವಿವಾಹ ಧಾರ್ಮಿಕ ಸಂಸ್ಕಾರ ಅಲ್ಲ. ಅದು ಕೇವಲ ಕರಾರು. ಸದಾಯುದ್ಧದ ಕಾರಣದಿಂದಾಗಿ ಗಂಡಸರು ಅಕಾಲ ಮರಣಕ್ಕೆ ತುತ್ತಾಗುತ್ತಿದ್ದುದರಿಂದ, ಮಹಿಳೆ ಕಿರಿ ವಯಸ್ಸಿನಲ್ಲೆ ವಿಧವೆ ಆಗುತ್ತಿದ್ದುದರಿಂದ ಇಸ್ಲಾಂ ಉದಿಸಿದಾಗಿನಿಂದ ಅಲ್ಲಿ ವಿವಾಹವು ಗಂಡು ಹೆಣ್ಣು ಜೊತೆಯಾಗಿರಲು ಮಾಡಿಕೊಂಡ ಕರಾರಿನ ವ್ಯವಸ್ಥೆ ಆಗಿದೆ. ಹೀಗಾಗಿದ್ದು ಐತಿಹಾಸಿಕ ಅವಶ್ಯಕತೆಯಿಂದಾಗಿ. ಹೀಗಿರುವಾಗ ವಿವಾಹದ ವಿಷಯದಲ್ಲಿ ಹಿಂದೂ ಮತ್ತು ಮುಸಲ್ಮಾನರ ಮಧ್ಯೆ ಏಕರೂಪತೆ ತರುವುದು ಹೇಗೆ? ಮುಸಲ್ಮಾನರ ಧರ್ಮದಲ್ಲೆ ಇಲ್ಲದ ವಿವಾಹ ಧಾರ್ಮಿಕ ಸಂಸ್ಕಾರ ಎಂಬ ಕಲ್ಪನೆಯನ್ನು ಇಸ್ಲಾಂನಲ್ಲಿ ತುಂಬುವುದು ಹೇಗೆ? ಅಥವಾ ಸಂಪ್ರದಾಯವಾದಿ ಹಿಂದೂಗಳು ತಮ್ಮಲ್ಲಿ ವಿವಾಹವನ್ನು ಕರಾರು ಎಂದು ಒಪ್ಪಲು ತಯಾರಿದ್ದಾರೆಯೆ? ಧಾರ್ಮಿಕ ನೆಲೆಗಟ್ಟಿನಿಂದ ಮದುವೆಯನ್ನು ಹೊರಗಿಟ್ಟು ನೋಡಲು ಕರ್ಮಠರನ್ನು ಬಿಡಿ ಉದಾರವಾದಿ ಹಿಂದೂಗಳಾದರೂ ಒಪ್ಪುತ್ತಾರೆಯೆ? ಇವೆರಡೂ ಸಾಧ್ಯವಾಗದ ಮಾತುಗಳು ಎಂದು ನಿಮಗನ್ನಿಸದೆ?
ಎರಡನೆಯದಾಗಿ, ವ್ಯಕ್ತಿಯೊಬ್ಬನ ಮರಣಾನಂತರ ಅವನ ಆಸ್ತಿಯ ಹಂಚಿಕೆಯ ಪ್ರಶ್ನೆಯನ್ನು ಹಿಂದೂ ಮತ್ತು ಮುಸಲ್ಮಾನರ ದೃಷ್ಟಿಯಿಂದ ಪರಿಶೀಲಿಸೋಣ.
ಹಿಂದೂಗಳಲ್ಲೆ ಆಗಲಿ ಮುಸಲ್ಮಾನರಲ್ಲೆ ಆಗಲಿ ಆಸ್ತಿ ಹಂಚಿಕೆ ನೇರವಾಗಿ ಧರ್ಮಕ್ಕೆ ಸಂಬಂಧಿಸಿದ ಪ್ರಶ್ನೆ ಅಲ್ಲ, ಅದೊಂದು ಧಾರ್ಮಿಕ ವಿಧಿ ವಿಧಾನವೂ ಅಲ್ಲ. ಆದರೂ ಈ ಎರಡು ಜನ ಸಮೂಹಗಳ ಮಧ್ಯೆ ಈ ವಿಷಯದಲ್ಲಿ ಏಕರೂಪ ಇಲ್ಲ.
ಹಿಂದೂಗಳಲ್ಲಿ ಒಟ್ಟು ಕುಟುಂಬ ಅಥವಾ ಅವಿಭಜಿತ ಕುಟುಂಬ ಎಂಬ ಪರಿಕಲ್ಪನೆ ಇದೆ. ಪರಿಕಲ್ಪನೆ ಅಷ್ಟೆ ಅಲ್ಲ ಹಿಂದೂಗಳೆಲ್ಲ ಅವರವರ ಒಟ್ಟು ಕುಟುಂಬದ ಸದಸ್ಯರೆ ಎಂಬ ಪೂರ್ವ ಭಾವನೆ (presumption) ಸಹಿತ ಇದೆ. ಈ ಒಟ್ಟು ಕುಟುಂಬ ಕಾನೂನಿನಲ್ಲಿ ತನ್ನಷ್ಟಕ್ಕೆ ತಾನೆ ಒಂದು ವ್ಯಕ್ತಿ (a person by itself). ಈ ವ್ಯಕ್ತಿ ತನ್ನ ಹೆಸರಿನಲ್ಲಿ ಆಸ್ತಿ ಖರೀದಿಸಬಹುದು. ವ್ಯಾಪಾರ ವ್ಯವಹಾರ ಮಾಡಬಹುದು, ತೆರಿಗೆ ತುಂಬಬಹುದು. ಈ ಒಟ್ಟು ಕುಟುಂಬದ ಸದಸ್ಯರೆಲ್ಲ ಬೇಕೆನಿಸಿದಾಗ ಅದನ್ನು ಪರಿಸಮಾಪ್ತಿ (dissolve) ಮಾಡಬಹುದು. ಹಿಂದೂಗಳಲ್ಲಿ ಇಂತಹ ಪದ್ಧತಿ ಇರುವುದಕ್ಕೆ ಕಾರಣವೊಂದಿದೆ. ಅಖಂಡ ಭರತ ವರ್ಷದಲ್ಲಿ ವರ್ಷಾಂತರಗಳಿಂದ ಹಿಂದೂ ಕುಟುಂಬಗಳು ಒಟ್ಟಾಗಿ ಇರುತ್ತಿದ್ದವು. ಒಟ್ಟಾಗಿ, ಪಶುಪಾಲನೆ, ಕೃಷಿ ಮಾಡುತ್ತಿದ್ದವು. ಈ ಕುಟುಂಬಸ್ಥರು ಅದರಿಂದ ಬರುವ ಲಾಭ ನಷ್ಟಕ್ಕೆ ಒಟ್ಟಾಗಿ ಹೊಣೆಗಾರರಾಗುತ್ತಿದ್ದರು. ಹೆಚ್ಚು ಸಂಖ್ಯೆಯ ದುಡಿಯುವ ಕೈಗಳನ್ನು ಬೇಡುವ ಪಶುಪಾಲನೆ, ಕೃಷಿಯ ಕಾರಣದಿಂದಾಗಿ ಹಿಂದೂ ಕುಟುಂಬಸ್ಥರೆಲ್ಲ ಒಟ್ಟಾಗಿರುವುದು ಅವಶ್ಯವೂ ಆಗಿತ್ತು. ಈ ಪದ್ಧತಿ ಮುಂದುವರಿದು ೧೯೫೬ರ ಹಿಂದೂ ವಾರಸಾ ಕಾಯ್ದೆಗೆ ದಾರಿ ಮಾಡಿಕೊಟ್ಟಿತು – ಕೆಲ ಬದಲಾವಣೆಗಳೊಂದಿಗೆ. ಕೆಲ ಬದಲಾವಣೆ ಎಂದರೂ ಸ್ತ್ರೀಗೆ ಈ ಒಟ್ಟು ಕುಟುಂಬದ ಆಸ್ತಿಯಲ್ಲಿ ಹಕ್ಕು ದೊರೆಯಲಿಲ್ಲ. ಈ ಹಕ್ಕಿಗೆ ಆಕೆ ೨೦೦೫ರವರೆಗೆ ಕಾಯಬೇಕಾಯಿತು, ಅದಂತಿರಲಿ.
ಇಸ್ಲಾಂ ಹುಟ್ಟಿದ ನಾಡಿನಲ್ಲಿ ಆಗಲಿ ಮೊದಮೊದಲು ಪಸರಿಸಿದ ನಾಡಿನಲ್ಲೆ ಆಗಲಿ ಭಾರತ ವರ್ಷದಂತೆ ಕೃಷಿ ಮಾಡುವ ಪಶುಪಾಲನೆ ಮಾಡುವ ಭೌಗೋಳಿಕ ಅನುಕೂಲ ಇರಲಿಲ್ಲ. ಧರ್ಮಕ್ಕಾಗಿಯೆ ಬದುಕುವ, ಸಾಯುವ ಮುಸಲ್ಮಾನರಿಗೆ ಇತಿಹಾಸದಲ್ಲಿ ಇತ್ತೀಚಿನವರೆಗೆ ಆಸ್ತಿ ಮಹತ್ವದ ಪ್ರಶ್ನೆಯೆ ಆಗಿರಲಿಲ್ಲ. ಹೀಗಾಗಿ ಮುಸಲ್ಮಾನರಲ್ಲಿ ಒಟ್ಟು ಕುಟುಂಬ ಎಂಬ ಪರಿಕಲ್ಪನೆ, ಈ ಕುಟುಂಬಸ್ಥರೆಲ್ಲ ಒಟ್ಟಾಗಿರಬೇಕಾದ ಅವಶ್ಯಕತೆ ಕಂಡು ಬರಲಿಲ್ಲ. ಹೀಗೆ ಹಲವು ಕಾರಣಗಳಿಂದ ಮುಸಲ್ಮಾನರಲ್ಲಿ ಆಸ್ತಿ ಹಂಚಿಕೆಯ ಕ್ರಮ ಹಿಂದೂಗಳಿಗಿಂತ ಬೇರೆ ಆಯಿತು. ಐತಿಹಾಸಿಕ ಕಾರಣಗಳಿಂದ ಬೇರೆ ಬೇರೆ ನಿಯಮ ಹೊಂದಿರುವ ಈ ಇಬ್ಬರ ಮಧ್ಯೆ ಆಸ್ತಿ ಹಂಚಿಕೆಯ ವಿಷಯದಲ್ಲಿ ಏಕರೂಪ ತರುವುದು ಹೇಗೆ? ಇಸ್ಲಾಂನಲ್ಲಿ ಇಲ್ಲದ ಒಟ್ಟು ಕುಟುಂಬದ ಪರಿಕಲ್ಪನೆಯನ್ನು ಅಲ್ಲಿ ತುಂಬುವುದು ಹೇಗೆ? ಎಣಿಕೆಗೂ ಸಿಗದಷ್ಟು ಕಾಲದಿಂದ ಒಟ್ಟು ಕುಟುಂಬದಲ್ಲಿರುವ ಹಿಂದೂಗಳನ್ನು ಆ ಪರಿಕಲ್ಪನೆಯಿಂದಲೆ ಬೇರ್ಪಡಿಸಲು ಸಾಧ್ಯವೆ? ಕೇವಲ ಏಕರೂಪವನ್ನು ತರುವ ಉದ್ದೇಶದಿಂದ ಹೀಗೆ ಮಾಡಬಹುದಾದರೂ ಅದರಿಂದ ದೊರಕುವ ಲಾಭ, ಅನುಕೂಲ ಏನು? ಈ ಲೇಖಕನಿಗಂತೂ ಏನೂ ಕಾಣದು, ನಿಮಗೇನಾದರೂ ಕಾಣುತ್ತದೆಯೆ ಓದುಗರೆ?
ಇದೆ ರೀತಿ ಹಿಂದುಗಳಿಗೂ ಕ್ರಿಶ್ಚಿಯನ್ನರಿಗೂ, ಕ್ರಿಶ್ಚಿಯನ್ನರಿಗೂ ಮುಸಲ್ಮಾನರಿಗೂ ಈ ವಿಷಯಗಳಲ್ಲಿ ಭಿನ್ನತೆ ಇರುವುದನ್ನು ಕಾಣಬಹುದು. ಮತ್ತು ಈ ಭಿನ್ನತೆ ಐತಿಹಾಸಿಕ ಕಾರಣದಿಂದಾಗಿ ಬಂದಿರುವುದನ್ನೂ ನೀವು ಗುರುತಿಸಬಹುದು. ಕಾರಣ ಏನೆ ಇರಲಿ ತಲತಲಾಂತರದಿಂದ ಪದ್ಧತಿಯೊಂದನ್ನು ಈ ಬೇರೆ ಬೇರೆ ಜನಸಮುದಾಯಗಳು ಅನುಸರಿಸಿಕೊಂಡು ಬಂದಿರುವುದನ್ನು ನೀವು – ಸ್ವಲ್ಪವಾದರೂ ಇತಿಹಾಸ ಓದಿದವರಾಗಿದ್ದರೆ – ಗುರುತಿಸಬಹುದು. ಮತ್ತು ಹೀಗೆ ಅನುಸರಿಸಿಕೊಂಡು ಬಂದ ಪದ್ಧತಿಯೆ ಅವರವರ ಧರ್ಮದ, ಜೀವನ ಕ್ರಮದ, ಕಾನೂನಿನ ಭಾಗವಾಗಿರುವುದನ್ನು ನೀವು ನೋಡಬಹುದು.
ಉದಾರವಾದಿ ಹಿಂದೂಗಳಿಗಿದು ಒಪ್ಪಿಗೆಯೆ?
ಹಿಂದೂಗಳಿಗೆ ನಾಗರೀಕ ಸಂಹಿತೆ ಎಂದರೆ ೧೯೫೫ರ ವಿವಾಹ ಕಾಯ್ದೆ, ೧೯೫೬ ಅಪ್ರಾಪ್ತರ ಪಾಲನೆ ಪೋಷಣೆಯ ಕಾಯ್ದೆ, ೧೯೫೬ ಹಿಂದೂ ದತ್ತಕ ಕಾಯ್ದೆ ಮತ್ತು ೧೯೫೬ರ ಹಿಂದೂ ವಾರಸಾ ಕಾಯ್ದೆ. ಸ್ವಾತಂತ್ರ ಬಂದ ಹೊಸದರಲ್ಲಿ ಕಾನೂನು ಮಂತ್ರಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅಪಾರ ಆಸಕ್ತಿವಹಿಸಿ ಮಾಡಿದ ಕಾಯ್ದೆಗಳಿವು. ಈ ಯಾವ ಕಾಯ್ದೆಗಳೂ ಶುದ್ಧ ಧರ್ಮ ನಿರಪೇಕ್ಷ ಕಾಯ್ದೆ (secular piece of legislation) ಅಲ್ಲ. ಶಾಸ್ತ್ರಗಳಲ್ಲಿ (ಎಂದರೆ ಶೃತಿ ಮತ್ತು ಸ್ಮೃತಿ) ಹೇಳಲಾದ ನಿಯಮಗಳನ್ನು ಕ್ರೋಢಿಕರಿಸಿ ಕಾಲಕ್ಕೆ ತಕ್ಕಂತೆ ಸ್ವಲ್ಪವೆ ಸ್ವಲ್ಪ ಮಾರ್ಪಡಿಸಿ ಮಾಡಿದ ಕಾಯ್ದೆಗಳಿವು. ಹಾಗಾಗಿ ಈ ಕಾಯ್ದೆಗಳು ಧರ್ಮದ ದಟ್ಟ ಛಾಯೆಯಿಂದ ಹೊರ ಬಂದಿಲ್ಲ.
ಹಿಂದೂ ದಂಪತಿಗಳಿಗೆ ಬೇಕೆನಿಸಿದಾಗ ಬೇರ್ಪಡಲು ಅವಕಾಶ ನೀಡದೆ ಇರುವುದು, ಹಿಂದೂ ದತ್ತಕ ಮತ್ತು ಪೋಷಣಾ ಕಾಯ್ದೆಯ ಕಲಂ ೨ರಲ್ಲಿ ಹಿಂದೂಗಳಲ್ಲಿ ಇರುವ ಸಂಪ್ರದಾಯ ಮತ್ತು ಪದ್ಧತಿ (custom and usage) ಗಳಿಗೆ ಮಾನ್ಯತೆ ಕೊಟ್ಟಿರುವುದು, ವಾರಸಾ ಕಾಯ್ದೆಯಲ್ಲಿ ಒಟ್ಟು ಕುಟುಂಬಕ್ಕೆ ಮಾನ್ಯತೆ ನೀಡಿರುವುದು, ಪಿತ್ರಾರ್ಜಿತ ಆಸ್ತಿಯನ್ನು ಬೇರೆಯಾಗಿ ಗುರುತಿಸಿರುವುದು, ಮಿತಾಕ್ಷರ, ದಾಯ ಭಾಗದ ಮಧ್ಯೆ ವ್ಯತ್ಯಾಸವನ್ನು ಗುರುತಿಸಿರುವುದು, ಅಳಿಯ ಸಂತಾನದ ಪದ್ಧತಿಗೆ ಮಾನ್ಯತೆ ನೀಡಿರುವುದು, ಇದನ್ನೆಲ್ಲ ಗಮನಿಸಿದರೆ ನಿಮಗೊಂದು ವಿಷಯ ಸ್ಪಷ್ಟವಾಗುತ್ತದೆ. ಹಿಂದೂಗಳಲ್ಲಿ ವೈಯಕ್ತಿಕ ಕಾನೂನು ಸಂಪೂರ್ಣ ಧರ್ಮ ನಿರಪೇಕ್ಷ ಕಾನೂನು ಅಲ್ಲ. ಅಂಬೇಡ್ಕರ್ ಬೇರೆ ಬೇರೆ ಶಾಸ್ತ್ರಗಳಲ್ಲಿ ಹರಿದು ಹಂಚಿ ಹೋಗಿದ್ದನ್ನು ಕ್ರೋಢಿಕರಿಸಿದರು. ಎರಡನೆಯದಾಗಿ, ಇವುಗಳಿಗೆಲ್ಲ ಧರ್ಮ ನಿರಪೇಕ್ಷತೆಯ ಬಣ್ಣ ಕೊಡುವುದರಲ್ಲಿ ಮೊದಲ ಹೆಜ್ಜೆ ಇಟ್ಟರು. ಏಕರೂಪದ ನಾಗರೀಕ ಸಂಹಿತೆ ಜಾರಿಗೆ ಬರುವುದಾದರೆ ಹಿಂದೂಗಳು ಈ ಮೇಲೆ ಹೇಳಿದ ಎಲ್ಲ ಧಾರ್ಮಿಕ ಅಂಶಗಳನ್ನು ತಮ್ಮ ವೈಯಕ್ತಿಕ ಕಾನೂನಿನಿಂದ ಕೈಬಿಡಲು ಒಪ್ಪಬೇಕು. ಹಿಂದೂಗಳಲ್ಲಿ ಬಹುಸಂಖ್ಯಾತರು ಈ ಬದಲಾವಣೆಯನ್ನು ಒಪ್ಪುತ್ತಾರೆಯೆ? ನೀವು ಒಬ್ಬ ಹಿಂದೂವಾಗಿದ್ದರೆ-ನೀವು ಈ ಬದಲಾವಣೆಗೆ ಒಪ್ಪುತ್ತೀರಾ?
ಈ ವಿಷಯಕ್ಕೆ ಇತ್ತೀಚೆಗೆ ಗಂಭೀರ ಚರ್ಚೆ ದೇಶದಲ್ಲಿ ಶುರುವಾದಾಗಿನಿಂದ ಅದನ್ನು ಕೇವಲ ಮುಸಲ್ಮಾನರನ್ನು ಇಕ್ಕಟ್ಟಿಗೆ ಸಿಲುಕಿಸುವ ಕುತರ್ಕ, ವಿತಂಡವಾದದ ಮೂಲಕ ಮಾತ್ರ ಮುನ್ನಡೆಸಲಾಗುತ್ತಿದೆ. ಅಂತೆಯೆ ಮುಸಲ್ಮಾನರೂ ಕೇವಲ ಧಾರ್ಮಿಕ ತಳಹದಿಯ ಮೇಲೆ ತಮ್ಮ ವೈಯಕ್ತಿಕ ಕಾನೂನನ್ನು ಸಮರ್ಥಿಸಿಕೊಳ್ಳುವುದನ್ನು ಹೊರತುಪಡಿಸಿ ಆ ಬಗ್ಗೆ ಮತ್ತೇನೂ ಹೇಳುತ್ತಿಲ್ಲ. ಒಟ್ಟಿನಲ್ಲಿ ಎರಡೂ ಪಕ್ಷಗಳು ಗಂಭೀರ ಚರ್ಚೆಯಲ್ಲಿ ತೊಡಗಿಲ್ಲ. ತಲಾಖ್ ಬೇಕೆಂದರೆ, ಕಳ್ಳನಿಗೆ ಕೈಕತ್ತರಿಸುವ ಶಿಕ್ಷೆಯನ್ನು ಒಪ್ಪಿಕೊಳ್ಳಿ, ಸುಳ್ಳು ಹೇಳಿದವನ ನಾಲಿಗೆ ಸೀಳುವುದನ್ನು ಒಪ್ಪಿಕೊಳ್ಳಿ, ಬ್ಯಾಂಕಿನಲ್ಲಿರುವ ನಿಮ್ಮ ಹಣಕ್ಕೆ ಬಡ್ಡಿ ಪಡೆಯಬೇಡಿ. ಹೀಗೆಲ್ಲ ವಾದಿಸಿ ಏಕರೂಪದ ವೈಯಕ್ತಿಕ ಕಾನೂನಿನ ಪರ ವಾದವನ್ನು ಗೆಲ್ಲಲು ಸಾಧ್ಯವೆ? ಈಗ ಕಾಮನ್ ಸಿವಿಲ್ ಕೋಡ್ ವಿರೋಧಿಸುತ್ತಿರುವವರು ಮುಸಲ್ಮಾನರಷ್ಟೆ ಇರಬಹುದು. ಆದರೆ ಬದಲಾವಣೆ ಖಚಿತ ಎಂದಾದರೆ ಈ ಬಗ್ಗೆ ಉದಾರವಾದಿ ಹಿಂದೂ (ಹಿಂದೂಗಳ ಪೈಕಿ ಅವರೆ ಬಹು ಸಂಖ್ಯಾತರು)ಗಳ ನಿಲುವು ಏನಿರುತ್ತದೆ?
ಈ ಹಂತದಲ್ಲಿ ನೀವು ಏಕರೂಪದ ನಾಗರೀಕ ಸಂಹಿತೆ ಬೇಡ ಎಂದರೆ ತಲಾಖ್‌ನಂತಹ ಪದ್ಧತಿ ಮುಂದುವರೆಯಬೇಕೆ? ಎಂದು ಕೇಳುತ್ತೀರಿ. ಈ ಪ್ರಶ್ನೆಗೆ ಲೇಖಕರ ಉತ್ತರ ಇಷ್ಟೆ. ವಿವಾಹ ವಿಚ್ಛೇದನ ವೈಯಕ್ತಕ ಕಾನೂನಿನಲ್ಲಿ ಒಂದಂಶ ಅಷ್ಟೆ. ಅದೆ ಎಲ್ಲ ಅಲ್ಲ. ವೈಯಕ್ತಿಕ ಕಾನೂನಿನಲ್ಲಿ ಆಸ್ತಿ ಹಂಚಿಕೆಯಲ್ಲಿ ಸಮಾನ ಹಕ್ಕು, ಮಕ್ಕಳ ಪಾಲನೆ-ಪೋಷಣೆಯಲ್ಲಿ ಸಮಾನ ಹೊಣೆಗಾರಿಕೆಯಂತಹ ಇನ್ನುಳಿದ ಮಹತ್ವದ ವಿಷಯಗಳಿವೆ. ತಲಾಖ್ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪು ಬಂದಾಗಿದೆ. ಅದನ್ನು ಚರ್ಚೆಯಿಂದ ಹೊರಗಿಡೋಣ.
ಈ ವಿಷಯವನ್ನು ಹಿಂದೂಗಳ ದೃಷ್ಟಿಯಿಂದ ನೋಡಿದ್ದಾಯಿತು. ಈಗ ಮುಸಲ್ಮಾನರ ದೃಷ್ಟಿಯಿಂದ ನೋಡುವುದಾದರೆ ಮುಸಲ್ಮಾನರಿಗೆ ಏಕರೂಪದ ನಾಗರೀಕ ಸಂಹಿತೆಯೆ ಬೇಕೆಂದಿಲ್ಲ. ಅವರಿಗೆ ತುರ್ತಾಗಿ ಬೇಕಾಗಿರುವುದು ಅವರ ವೈಯಕ್ತಿಕ ಕಾನೂನಿನ ಕ್ರೋಢಿಕರಣ ಮತ್ತು ಸುಧಾರಣೆ. ಈ ಸುಧಾರಣೆ-ಎಂದರೆ ಗಂಡು ಹೆಣ್ಣಿನ ಹಕ್ಕು ಬಾಧ್ಯತೆಗಳು ಸಮಾನ ಎನ್ನುವಂತಹ ಸುಧಾರಣೆ-ಕುರಾನಿನ ಚೌಕಟ್ಟಿನಲ್ಲೆ ಸಾಧ್ಯ ಆಗುವುದಾದರೆ ಏಕರೂಪದ ನಾಗರೀಕ ಸಂಹಿತೆ ಏಕೆ ಬೇಕು?
ಕ್ರೋಢಿಕರಣ ಎಂದರೆ ಕುರಾನಿನ ಹಲವು ಪುಟಗಳಲ್ಲಿ ಹಂಚಿ ಹೋಗಿರುವ ವೈಯಕ್ತಿಕ ಕಾನೂನಿಗೆ ಕಾಯ್ದೆಯ ರೂಪ ಕೊಡುವುದು. ಅದಕ್ಕಿಂತ ಹೆಚ್ಚಾಗಿ ಯಾವ ಕುರಾನ್ ಉದಾರವಾದಿ ನಿಲುವನ್ನು ತಳೆದಿದೆಯೋ ಅದಕ್ಕೆ ಮಾನ್ಯತೆ ಕೊಡುವುದು. ಮೊನ್ನೆ ಹಿಜಾಬ್ ವಿವಾದದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ಮಾಡಿತಲ್ಲ, ಹಾಗೆ. ಹೀಗೆ ಕಾಯ್ದೆಯ ರೂಪ ಕೊಡುವಾಗ ಅಂಥ ಎಲ್ಲ ನಿಯಮಗಳನ್ನೂ ಭಾರತೀಯ ಸಂವಿಧಾನ ಪ್ರತಿಪಾದಿಸುವ ಸಮಾನತೆಯ ತತ್ವದಂತೆ ಮಿಮಾಂಸಿಸಿ ಈ ನಿಯಮಗಳಿಗೆಲ್ಲ ಇಂದು ಅನ್ವಯಿಸಬೇಕಾದ ಅರ್ಥ ಕೊಡುವುದೆ ಸುಧಾರಣೆ. ಇವೆರಡೂ ಆದರೆ ಸಾಲದೆ?
(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

ಅರವಿಂದ ಎಂ. ನೆಗಳೂರ್ ಅವರು ವಾಣಿಜ್ಯ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದು ಸುಮಾರು ಮೂರು ದಶಕಗಳಿಂದ ಬೆಂಗಳೂರಿನಲ್ಲಿ ವಕೀಲಿಕೆ ಮಾಡುತ್ತಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ದ್ವಿ-ಭಾಷಾ ಕಾನೂನು ನಿಯತಕಾಲಿಕೆಯನ್ನು ನಡೆಸಿದ ಅನುಭವ ಹೊಂದಿದ ಇವರು ‘Legally Speaking’ ಎಂಬ ಬ್ಲಾಗ್ ಕೂಡ ಹೊಂದಿದ್ದಾರೆ. ಮಾಧ್ಯಮಗಳಲ್ಲಿ ಕಾನೂನು ಚರ್ಚೆಗಳಲ್ಲಿ ಪಾಲ್ಗೊಳ್ಳುವ ಇವರು ಕ್ರೀಡೆ, ವನ್ಯಜೀವಿ ಮತ್ತು ಪಕ್ಷಿ ಛಾಯಾಗ್ರಹಣದಲ್ಲೂ ವಿಶೇಷ ಆಸಕ್ತಿ ಹೊಂದಿದ್ದಾರೆ.