ವಕೀಲಿಕೆಯನ್ನು ತೊರೆಯುವ ಮಹಿಳೆಯರು: ಕಾರಣ ಮತ್ತು ಮುಂದಿರುವ ದಾರಿ
ವಕೀಲಳಾಗಲು ಹೆಂಗಸರು ಸಕ್ಷಮರಲ್ಲ ಎಂದೆಂಬ ಕಾಲವಿತ್ತು. ಮಹಿಳೆಯರಿಗೆ ವಕೀಲಳಾಗಲು ಅಭ್ಯಾಸ ಮಾಡುವ ಹಕ್ಕನ್ನು ಗುರುತಿಸುವಂತೆ ಕೋರಿ ಆಗ ಮೊದಲ ಬಾರಿಗೆ ನ್ಯಾಯಾಲಯದ ಮೊರೆ ಹೋದರು- ರೆಜಿನಾ ಗುಹಾ, ಸುಬಾಂಶು ಬಾಲ ಹಜರಾ ಹಾಗೂ ಕಾರ್ನೆಲಿಯಾ ಸೊರಾಬ್ಜಿ ಎಂಬ ಮೂವರು ಧೈರ್ಯಶಾಲಿ ಹೆಂಗಸರು.
1916 ರಲ್ಲಿ ರೆಜಿನಾ ಗುಹಾ 24-ಪರಗಣಾ ಜಿಲ್ಲೆಯಲ್ಲಿ ಪ್ಲೀಡರ್ ಆಗಿ ಅಭ್ಯಾಸ ಮಾಡಲು ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಜಿಲ್ಲಾ ನ್ಯಾಯಾಧೀಶರ ಮುಖಾಂತರ ಕಲ್ಕತ್ತಾ ಉಚ್ಚ ನ್ಯಾಯಾಲಯಕ್ಕೆ ಕಳುಹಿಸಲಾಯಿತು. ಅವರೂ ತಾವು ಅಗತ್ಯ ಅರ್ಹತೆಗಳನ್ನು ಹೊಂದಿರುವ ಕಾರಣ ತಮ್ಮನ್ನು ಪ್ಲೀಡರ್ ಆಗಿ ಅಭ್ಯಾಸ ಮಾಡಲು ಅನುವು ಮಾಡಿಕೊಡುವಂತೆ ಕೋರಿದರು. ಈ ವಿಷಯವನ್ನು ಪರಿಗಣಿಸಲು ಕಲ್ಕತ್ತಾ ಉಚ್ಚ ನ್ಯಾಯಾಲಯವು 5 ನ್ಯಾಯಾಧೀಶರ ಪೀಠವೊಂದನ್ನು ರಚಿಸಿತು ಹಾಗೂ ಈ ಪೀಠ, ಗುಹಾರವರವರ ಕೋರಿಕೆಯನ್ನು ತಿರಸ್ಕರಿಸಿತು.[i] 1921 ರಲ್ಲಿ ಸುಬಾಂಶು ಬಾಲಾ ಹಜರಾರವರು ಪಟ್ನಾ ಜಿಲ್ಲಾ ನ್ಯಾಯಾಲಯದಲ್ಲಿ ಪ್ಲೀಡರ್ ಆಗಿ ದಾಖಲಾಗುವ ವಿಚಾರವನ್ನು ಪಟ್ನಾ ಉಚ್ಚ ನ್ಯಾಯಾಲಯ ಪರಿಗಣಿಸಿತು. ಆ ಸಮಯಕ್ಕೆ ಸರಿಯಾಗಿ ಸಂಯುಕ್ತ ಸಂಸ್ಥಾನಗಳ(United Kingdom)ನ ಸಂಸತ್ತು Sex Disqualification Removal Act ,1919 ಜಾರಿಗೆ ತರಲಾಗಿ ಮಹಿಳೆಯರು ಸಾಲಿಸಿಟರ್ ಆಗಿ ದಾಖಲಾಗುವ ಹಕ್ಕು ದೊರೆಯಿತು. ಅದೇ ಸಂದರ್ಭದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದ ಇಂಗ್ಲಿಷ್ ಸಮಿತಿಯು ಅಲಹಾಬಾದ್ ಉಚ್ಚ ನ್ಯಾಯಾಲಯದ ನಿಯಮಗಳ XV ಅಧ್ಯಾಯದ ನಿಯಮ 15ರ ಅಡಿಯಲ್ಲಿ ಕಾರ್ನೆಲಿಯಾ ಸೊರಬ್ಜಿಯವರನ್ನು ದಾಖಲಾಗಲು ಅನುಮತಿಸಿತು ಹಾಗೂ ಹಾಗೆ ಕಾರ್ನೆಲಿಯಾ ಸೊರಬ್ಜಿರವರು ಭಾರತದ ಮೊದಲ ಮಹಿಳಾ ವಕೀಲೆಯಾಗಿ ಹೊರಹೊಮ್ಮಿದರು. ಪಟ್ನಾ ಉಚ್ಚ ನ್ಯಾಯಾಲಯ ಮಹಿಳೆಯರಿಗೆ ವಕೀಲರಾಗಿ ದಾಖಲಾಗುವ ಅವಕಾಶವಿಲ್ಲದಿರುವ ನಿಯಮವನ್ನು ಬದಲಾಯಿಸಲು ಆಧಾರಗಳು ಇರುವುದನ್ನು ಮನಗಂಡಾಗ್ಯೂ, ಸಭಾಂಶು ಬಾಲ ಹಜರಾರವರ ಮನವಿಯನ್ನು ತಿರಸ್ಕರಿಸಿತು.[ii] ಆದರೆ, ಈ ಎಲ್ಲ ಘಟನೆಗಳು ಹಾಗೂ ಈ ಮಹಿಳೆಯರ ವೈಯಕ್ತಿಕ ಶ್ರಮ ಸಾಮಾಜಿಕ ಆಂದೋಲನವೊಂದನ್ನು ಸೃಷ್ಟಿಸಿ (Legal Practitioners (Women) Act 1923) ಕಾನೂನು ವೃತ್ತಿಪರರ(ಮಹಿಳೆಯರು) ಕಾಯ್ದೆ, 1923ರ ಜಾರಿಗೆ ಕಾರಣವಾಯಿತು. ಈ ಕಾಯ್ದೆಯ 3ನೇ ಕಲಂ ಯಾವುದೇ ಮಹಿಳೆಯನ್ನು ಕೇವಲ ಅವಳ ಲಿಂಗದ ಕಾರಣ ಅವಳು ವಕೀಲಳಾಗಲು ಅಥವಾ ವಕೀಲಿಕೆ ಅಭ್ಯಾಸ ಮಾಡಲು ಅನರ್ಹ ಮಾಡತಕ್ಕದ್ದಲ್ಲ. ಹಾಗೂ ಇದಕ್ಕೆ ವಿರುದ್ಧವಾದಂತೆ ಇರುವ ಯಾವುದೇ ನಿಯಮ ಅಥವಾ ಆದೇಶಗಳು ನಿರರ್ಥಕ ಎಂದು ಘೋಷಿಸಿತು.
ಹಾಗೆ ಕಾನೂನು ರಂಗ ಕೇವಲ ಸಂಭಾವಿತ ಪುರುಷರಿಗೆ ಸೀಮಿತ ಎಂಬ ಕಾಲವೊಂದಿತ್ತು ಮಹಿಳೆಯರನ್ನು ಪುರುಷರಿಗಿಂತ ಕೀಳು ಎಂಬ ಭಾವನೆ ಹೊಂದಿರುವ ಪುರುಷರು ಎಷ್ಟು ಸಂಭಾವಿತರು ಎಂದು ಪ್ರಶ್ನೆ ಕೇಳುವ ಕಾಲವಿದು. ಆಗ ಮಹಿಳೆಯರು ತಮ್ಮ ವೃತ್ತಿಪರ ಅಭ್ಯಾಸದ ಹಕ್ಕನ್ನು ಪಡೆಯಲು ಅಥವಾ ಗುರುತಿಸಿಕೊಳ್ಳಲು ಸೆಣಸಬೇಕಿತ್ತು. ಆದರೆ, 1923ರ ಕಾಯ್ದೆ ಜಾರಿಯಾದ ಸುಮಾರು ಒಂದು ಶತಮಾನದ ನಂತರ ಭಾರತದ ಕಾನೂನಿನ ವ್ಯವಸ್ಥೆಯಲ್ಲಿ ಮಹಿಳೆಯರ ಸ್ಥಾನವೇನು?
ಅಂಕಿ ಅಂಶಗಳು ನಿಜವಾಗಲೂ ನಿರಾಶಾದಾಯಕ ಹಾಗೂ ಬೇಸರ ತರಿಸುವಂತದ್ದು. ವರದಿಗಳ ಪ್ರಕಾರ ವಕೀಲರ ಪರಿಷತ್ತಿನಲ್ಲಿ ದಾಖಲಾದ ಓಟ್ಟು ವಕೀಲರ ಸಂಖ್ಯೆ 17ಲಕ್ಷ. ಅದರಲ್ಲಿ ಕೇವಲ 15 ಪ್ರತಿಶತ ಮಾತ್ರ ಮಹಿಳೆಯರು (ಅಂದರೆ, ಸುಮಾರು 2.5 ಲಕ್ಷ).[iii] ವರದಿಗಳ ಪ್ರಕಾರ ಕಾನೂನು ಶಿಕ್ಷಣಕ್ಕೆ ದಾಖಲಾಗುವ ಗಂಡು ಹಾಗೂ ಹೆಣ್ಣು ವಿದ್ಯಾರ್ಥಿಗಳ ಸಂಖ್ಯೆ ಈಗ ಬಹುಪಾಲು ಸಮಾನವಾಗಿದೆ. ಆದರೂ ಕಾನೂನಿನ ಉದ್ಯೋಗ ವಲಯದಲ್ಲಿ ಮಹಿಳೆಯರ ಸಂಖ್ಯೆ ಸವೆಯುತ್ತಲೇ ಇದೆ. ಉನ್ನತ ನ್ಯಾಯಾಂಗದ ದತ್ತಾಂಶಗಳನ್ನು ಪರಿಗಣಿಸಿದಾಗ ಕಾನೂನು ಕ್ಷೇತ್ರದಲ್ಲಿನ ಮಹಿಳೆಯರ ಪ್ರಾತಿನಿಧ್ಯತೆಯ ದಯನೀಯತೆ ಎದ್ದು ಕಾಣುತ್ತದೆ.
ಉನ್ನತ ನ್ಯಾಯಾಂಗದಲ್ಲಿ ಮಹಿಳೆಯರ ಪರ್ಯಾಪ್ತ ಪ್ರಾತಿನಿಧ್ಯ ಏಕಿಲ್ಲ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೂ ಮಹಿಳೆಯರು ವಕೀಲಿಕೆಯ ಕ್ಷೇತ್ರವನ್ನೇಕೆ ತೊರೆಯುತ್ತಿದ್ದಾರೆ ಎಂಬ ವಿಷಯವನ್ನು ಬಹಳ ವಿರಳವಾಗಿ ಚರ್ಚಿಸುತ್ತೇವೆ. ದತ್ತಾಂಶಗಳ ಪ್ರಕಾರ ವಕೀಲಿಕೆಯ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಬಹಳ ಕಡಿಮೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೂ ಸಹ ಈ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯತೆ ಚಿಂತಾಜನಕವಾಗಿದೆ. ಆಸ್ಟ್ರೇಲಿಯಾದ ಕಾನೂನು ಪರಿಷತ್ತು ಮೂರು ಧೈಯೋದ್ದೇಶಗಳನಿಟ್ಟುಕೊಂಡು National Attrition Re-Engagement Study- NARS ಕುರಿತಾದ ಅಧ್ಯಯನವನ್ನು ನಡೆಸಿತು. ಅದರ ಧ್ಯೇಯೋದ್ದೇಶಗಳೆಂದರೆ:
1.ಕಾನೂನು ಕ್ಷೇತ್ರದಲ್ಲಿ ಮಹಿಳೆಯರ ಕೊರತೆಗೆ ಕಾರಣವಾದ ಅಂಶಗಳಾವುವು ಹಾಗೂ ಇವು ಪುರುಷ ವಕೀಲರಿಗೆ ಹೋಲಿಸಿದಾಗ ಹೇಗೆ ಭಿನ್ನವಾಗುತ್ತವೆ.
2. ಬೇರೆ ಬೇರೆ ಮಹಿಳೆಯರ ಗುಂಪುಗಳ ಅಭ್ಯಾಸದ ಸ್ತರ, ಔದ್ಯೋಗಿಕ ವಿಧ, ವೃತ್ತಿ ಬದುಕಿನ ಸ್ಥಾನ ಹಾಗೂ ಇತರೆ ಅಂಶಗಳನ್ನು ಪರಿಗಣಿಸಿ ಅವರ ಅನುಭವ ಹಾಗೂ ಪ್ರೇರಣೆಗಳನ್ನು ಅನ್ವೇಷಿಸುವುದು.
3.ಮಹಿಳೆಯರನ್ನು ಖಾಸಗಿ ಕಾನೂನಿನ ಅಭ್ಯಾಸದಲ್ಲಿ ಹಾಗೂ ಒಟ್ಟಾರೆಯಾಗಿ ಕಾನೂನು ರೀತಿಯಲ್ಲಿ ಉಳಿಸಿಕೊಳ್ಳುವ ಹಾಗೂ ತೊಡಗಿಸುವಿಕೆಯಲ್ಲಿ ಸಹಾಯಕವಾಗುವ ಅಂಶಗಳನ್ನು ಗುರುತಿಸುವುದು.[iv]
ಆ ಅಧ್ಯಯನ ವೃತ್ತಿ ಮಾರ್ಗದ ಪರಿವರ್ತನೆ, ನಾಯಕತ್ವ ಹಾಗೂ ಅನುಕರಣೀಯ ವ್ಯಕ್ತಿತ್ವ, ಸಂಬಂಧಗಳು ಹಾಗೂ ಬೆಂಬಲ, ಕೆಲಸ ಮಾಡುವ ಜಾಗದಲ್ಲಿ ಸುರಕ್ಷತೆ ಮತ್ತು ಪಾರದರ್ಶಕತೆ ಹಾಗೂ ಯಶಸ್ಸಿನ ಅಳತೆ ಈ ಐದು ಮುಖ್ಯ ವಿಚಾರಗಳತ್ತ ಬೆಳಕು ಚೆಲ್ಲುತ್ತದೆ ಎನ್ನಬಹುದು. ವಕೀಲಿಕೆಯ ಕ್ಷೇತ್ರದಲ್ಲಿ ಸಮಾನತೆಯನ್ನು ಬಿಂಬಿಸುವಂತಹ ವಾತಾವರಣವನ್ನು ತರಲು ರಾಷ್ಟ್ರ ಮಟ್ಟದಲ್ಲಿ ನೀತಿಯನ್ನೂ ಆಸ್ಟ್ರೇಲಿಯಾದಲ್ಲಿ ರೂಪಿಸಲಾಯಿತು.[v] ಆದರೆ, ಭಾರತದಲ್ಲಿ ಮಹಿಳೆಯರು ಏಕೆ ವಕೀಲಿಕೆಯನ್ನು ತೊರೆಯುತ್ತಿದ್ದಾರೆ ಎಂಬುದರ ಮೇಲೆ ಗಂಭೀರವಾದ ಅಧ್ಯಯನಗಳು ನಡೆದಿಲ್ಲ.
ಅಮೆರಿಕ ವಕೀಲರ ಸಂಘ (ABA) ಮಹಿಳೆಯರೇಕೆ ಕಾನೂನು ರಂಗವನ್ನು ತೊರೆಯುತ್ತಿದ್ದಾರೆ ಎಂಬ ವಿವಾದಾಂಶದ ಕುರಿತು ಅಧ್ಯಯನವೊಂದನ್ನು ನಡೆಸಿ ಮೂರು ಮುಖ್ಯ ಕಾರಣಗಳನ್ನು ಕಂಡುಕೊಳ್ಳಲಾಯಿತು.[vi]
(1)ವೃತ್ತಿ- ಖಾಸಗಿ ಬದುಕಿನ ಸಮತೋಲನ
(2)ಪರಿವೇ ಇಲ್ಲದ ಪಕ್ಷಪಾತ
(3)ವೇತನದ ಅಂತರ
ನಮ್ಮ ಅನುಭವದಲ್ಲಿ ಈ ಮೂರು ಅಂಶಗಳು ಭಾರತದಲ್ಲೂ ಅತಿ ದೊಡ್ಡ ಪಾತ್ರ ವಹಿಸುತ್ತವೆ.
ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಗೆ ಕೌಟುಂಬಿಕ ಸದಸ್ಯರ ಪಾಲನೆ ಹಾಗೂ ಮನೆಗೆಲಸಗಳ ಜವಾಬ್ದಾರಿಯನ್ನು ನೀಡಲಾಗಿದೆ. ಇದು ಮಹಿಳೆಗೆ ವೃತ್ತಿ-ಖಾಸಗಿ ಬದುಕಿನ ಸಮತೋಲನ ಕಾಪಾಡಿಕೊಳ್ಳುವಲ್ಲಿ ಒತ್ತಡ ಹೇರುತ್ತದೆ. ಲಿಂಗ ಸಂಬಂಧಿ ಪಾತ್ರಗಳನ್ನು ಒಪ್ಪಿಕೊಳ್ಳದ ಮಹಿಳೆಯರು ಸಹ ಸಮಾಜ ಹೇರುವ ಒತ್ತಡಗಳ ವಿರುದ್ಧ ಸತತ ಹೋರಾಟ ಮಾಡಬೇಕಾಗುತ್ತದೆ. ಮಹಿಳೆಯರ ಮೇಲೆ ಹೇರಲಾಗಿರುವ ಮಾನಸಿಕ ಹಾಗೂ ದೈಹಿಕ ಒತ್ತಡಗಳು ಅನೇಕ ಮಹಿಳೆಯರನ್ನು ವೃತ್ತಿಯನ್ನು ತೊರೆಯುವಂತೆ ಮಾಡಿ ಕಡಿಮೆ ಬದ್ಧತೆಯನ್ನು ಕೋರುವ ಕೆಲಸಗಳನ್ನು ಹುಡುಕುವ ಅಥವಾ ಪರಿಪೂರ್ಣ ವೇತನ ರಹಿತವಾದ ಮನೆಕೆಲಸದವರನ್ನಾಗಿ ಮಾಡುತ್ತವೆ. ವೃತ್ತಿಪರ ಮಹಿಳೆಯರು ಎದುರಿಸುತ್ತಿರುವ ಈ ಸಮಸ್ಯೆಗಳನ್ನು ಪರಿಹರಿಸುವ ಯಾವುದೇ ಪರಿಣಾಮ ಕಾರ್ಯಕ್ರಮಗಳು ನಮ್ಮಲ್ಲಿ ಜಾರಿಯಲ್ಲಿಲ್ಲ.
ಪರಿವೆಯಿಲ್ಲದ ಪಕ್ಷಪಾತಗಳು ಹಾಗೂ ಸಾಮಾಜಿಕ/ ವ್ಯವಹಾರಿಕ ವಾಡಿಕೆಗಳು ಕಾನೂನು ವೃತ್ತಿರಂಗದಲ್ಲಿ ವ್ಯಾಪಕವಾಗಿವೆ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಹುಟ್ಟಿ – ಬೆಳೆದ ಮನೋಭಾವಗಳು ಇಲ್ಲಿ ತಪ್ಪುಗಾರರಾಗಿವೆ. ಯಾವುದೇ ಕುಟುಂಬದ ಹಿನ್ನೆಲೆಯಿಲ್ಲದ ಪ್ರಭಾವಂತ ಕಿರಿಯ ವಕೀಲರನ್ನು ಹುರಿದುಂಬಿಸುವ ನ್ಯಾಯಾಧೀಶರೂ, ವಕೀಲರೂ ಇಲ್ಲವೆಂದಲ್ಲ. ಆದರೆ, ಈ ವೃತ್ತಿ ಹೆಂಗಸರಿಗಲ್ಲ, ಹೆಂಗಸರು ಬೇರೆ ವೃತ್ತಿ ಮಾಡಿದರೆ ಸುಲಭ ಎಂಬ ಸಲಹೆಯನ್ನು ಪಡೆಯದ ಮಹಿಳೆಯರು ಅತಿ ವಿರಳ. ನೇರಾನೇರವಾಗಿರುವ ಮಹಿಳಾ ವಕೀಲೆಯರನ್ನು ‘ಆಕ್ರಮಣಕಾರಿ’ ಅಥವಾ ‘ಒರಟು’ ಎಂದೂ ಹಾಗೂ ಅಲ್ಲದವರನ್ನು ‘ಬಲಹೀನ’ ಎಂದು ವರ್ಗೀಕರಿಸುವುದು ಸರ್ವೇಸಾಮಾನ್ಯವಾಗಿದೆ. ಮಹಿಳೆಯರು ಕೇವಲ ಕೌಟುಂಬಿಕ ಕೇಸುಗಳನ್ನು ನಡೆಸಲು ಶಕ್ತರು, ಕ್ರಿಮಿನಲ್ ಕೇಸುಗಳನ್ನು ನಡೆಸಲಲ್ಲ ಎನ್ನುವುದು ಮತ್ತೊಂದು ರೀತಿಯ ಪಕ್ಷಪಾತದ ಅರಿವು. ಮಹಿಳಾ ವಕೀಲೆಯರ ವೈಯಕ್ತಿಕತೆಯನ್ನು ಗೌರವಿಸದ ಪ್ರವೃತ್ತಿಯೂ ಸಹ ಇದೆ. ಪುರುಷ ವಕೀಲರು ಮಹಿಳಾ ವಕೀಲರಿಗಿಂತಲೂ ಬಹಳ ಸಕ್ಷಮರು ಎಂದು ಬಿಂಬಿಸುವುದು ಮತ್ತೊಂದು ವಾಡಿಕೆ. ಈ ಮನಸ್ಥಿತಿಗಳು ಮಹಿಳೆಯರು ಕಾನೂನು ಕ್ಷೇತ್ರವನ್ನು ಆರಿಸಿಕೊಳ್ಳದಹಾಗೆ ಅಥವಾ ತೊರೆಯುವಂತೆ ಮಾಡುತ್ತವೆ.
ಮಹಿಳಾ ಹಾಗೂ ಪುರುಷ ಕಿರಿಯ ವಕೀಲರಲ್ಲಿ ಒಂದೇ ಕೆಲಸಕ್ಕೆ ನೀಡಲಾಗುವ ಸಂಬಳದ ಅಂತರವೂ ಸಹ ಗಂಭೀರ ವಿಷಯವಾಗಿದೆ. ವಕೀಲರಿಗೆ ಸಂಬಳವನ್ನು ನೀಡುವಾಗ, ಯಾರು ಕುಟುಂಬ ನೋಡಿಕೊಳ್ಳಬೇಕು, ಅವರ ಜೀವನ ಶೈಲಿ ಹಾಗೂ ಅಗತ್ಯವಿರುವ ಹಣದ ಪ್ರಮಾಣ ಇನ್ನಿತರೆ ಅಂಶಗಳನ್ನು ಮಾತ್ರ ಲೆಕ್ಕಿಸುವುದನ್ನು ವಿರೋಧಿಸಬೇಕು. ಸಂಬಳವು ಪಡೆಯುವವನ ಕೌಶಲ್ಯ, ಕೆಲಸದ ಒಟ್ಟು ಸಮಯ ಹಾಗೂ ಅವರ ಕಾರ್ಯಕ್ಷಮತೆಗಳನ್ನಾಧರಿಸಬೇಕು. ಕಿರಿಯ ವಕೀಲರು ಹೆಚ್ಚುವರಿ ಕೆಲಸ ಮಾಡಿದಾಗ, ಅದು ಅವರ ಕಲಿಕೆಗೆ ಸಿಕ್ಕ ಅವಕಾಶ ಎಂದು ನೋಡುವುದಕ್ಕಿಂತಲೂ ಹಿರಿಯ ವಕೀಲರು ಕಿರಿಯ ವಕೀಲರನ್ನು ಪುರಸ್ಕರಿಸಲು ದೊರಕಿದ ಅವಕಾಶ ಎಂದು ನೋಡಬೇಕು. ವೇತನದ ಅಂತರ ಹಾಗೂ ಕಡಿಮೆ ವೇತನದ ಕಾರಣದಿದಂದ ಬಹಳಷ್ಟು ಮಹಿಳೆಯರು ಕಾನೂನು ವೃತ್ತಿಯನ್ನು ಹಾಗೂ ಅದರ ಮೇಲಿನ ಪ್ರೀತಿಯನ್ನು ತೊರೆದು ಇನ್ನಿತರೆ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲರಿಗೂ ವೃತ್ತಿಯ ಮೇಲಿನ ಒಲವಿನಿಂದ ಮಾತ್ರ ಬದುಕಲು ಸಾಧ್ಯವಿಲ್ಲ, ಬದುಕಲು ಸಾಧ್ಯವಾಗುವಂತ ಆದಾಯವೂ ಅಗತ್ಯ; ಅದರಲ್ಲೂ ಮಹಿಳೆಯರಿಗೆ. ಆರ್ಥಿಕ ಅವಲಂಬನೆಯ ಕಾರಣ ಒಬ್ಬ ಮಹಿಳೆಯು ಕುಟುಂಬದಲ್ಲಿ, ಅವಳನ್ನು ಆರ್ಥಿಕವಾಗಿ ಬೆಂಬಲಿಸುವವರ ಮಾತುಗಳನ್ನು ಕೇಳಬೇಕಾಗುತ್ತದೆ. ಆರ್ಥಿಕ ಸ್ವಾತಂತ್ರ್ಯವು ಒಬ್ಬ ಹೆಣ್ಣಿಗೆ ವೈಯಕ್ತಿಕ ಸ್ವಾಯತ್ತತೆಯೇ ಆಗಿದೆ. ಆದ್ದರಿಂದ, ಮಹಿಳೆಯರು ಕಾನೂನು ರಂಗವನ್ನು ತೊರೆದು ಬೇರೆ ವೃತ್ತಿಗಳನ್ನು ಅರಸಿ ಹೋಗುತ್ತಿರುವುದು ಆಶ್ಚರ್ಯವೇನಲ್ಲ.
ಬೇಸರದ ಸಂಗತಿಯೆಂದರೆ ಮಹಿಳಾ ವಕೀಲರು ನ್ಯಾಯಾಲಯಗಳಿಂದೇಕೆ ಹೆಚ್ಚಾಗಿ ಕಣ್ಮರೆಯಾಗುತ್ತದ್ದಾರೆ ಎಂಬ ಕುರಿತು ಭಾರತದಲ್ಲಿ ಯಾವುದೇ ಸಮಂಜಸ ಅಧ್ಯಯನ ಇಲ್ಲ. ಮಹಿಳಾ ವಕೀಲರು ಕಡಿಮೆಯಿದ್ದಾಗ ಅದು ತನ್ನಿಂದ ತಾನೆ ನ್ಯಾಯಾಂಗ, ವಕೀಲರ ಪರಿಷತ್ತು ಹಾಗೂ ಇತರೆ ರಂಗಗಳಲ್ಲಿನ ಪ್ರಾತಿನಿಧ್ಯತೆ ಕೊರತೆಯನ್ನು ಪ್ರತಿಬಿಂಬಿಸುತ್ತದೆ. ನ್ಯಾಯಾಂಗದಲ್ಲಿ, ಅದರಲ್ಲೂ ಉನ್ನತ ನ್ಯಾಯಾಂಗದಲ್ಲಿ ಮಹಿಳೆಯರ ಪ್ರಾತಿನಿದ್ಯತೆಯನ್ನು ಖಚಿತ ಪಡಿಸಿಕೊಳ್ಳುವ ಪ್ರಯತ್ನವು ಜಾರಿಯಲ್ಲಿರುವಾಗಲೇ, ವೃತ್ತಿರಂಗದ ಕೆಳಮಟ್ಟದಲ್ಲಿ ಮಹಿಳೆಯರ ಪ್ರಾತಿನಿಧ್ಯತೆಯನ್ನು ಭದ್ರಗೊಳಿಸಬೇಕು. ಈ ಗುರಿಯನ್ನು ಸಾಧಿಸಲು ಮೊದಲು ಮಹಿಳೆಯರು ಕಾನೂನು ರಂಗವನ್ನೇಕೆ ಆರಿಸಿಕೊಳ್ಳುತ್ತಿಲ್ಲ ಅಥವಾ ಮಹಿಳಾ ವಕೀಲರು ವೃತ್ತಿ ರಂಗವನ್ನೇಕೆ ತೊರೆಯುತ್ತಿದ್ದಾರೆ ಎಂಬ ಅಂಶಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸುವುದು ಅತ್ಯಗತ್ಯ.
ಕಾನೂನು ರಂಗದಲ್ಲಿ ಹೊಸಬರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಅವರು ವೃತ್ತಿಜೀವನದಲ್ಲಿ ಎದುರಿಸಬಲ್ಲ ಗೊಂದಲಗಳನ್ನು ನಿವಾರಿಸಲು; ಪಿತೃಪ್ರಧಾನ ಹಾಗೂ ಸ್ತ್ರೀದ್ವೇಷಿ ಸಮಾಜದಲ್ಲಿ ಮಹಿಳಾ ವಕೀಲರು ಎದುರಿಸಬಹುದಾದ ಒತ್ತಡದ ಸಂದರ್ಭಗಳಲ್ಲಿ ಅವರ ಮಾನಸಿಕ ಆರೋಗ್ಯದ ಕುರಿತಂತೆ ಅಗತ್ಯ ಬೆಂಬಲಗಳನ್ನು ನೀಡಲು; ಪರಿವೆಯಿಲ್ಲದ ಪಕ್ಷಪಾತ, ಅಸಮಾನಾಂತರ ಸಂಬಳಗಳ ವಿರುದ್ಧ ಅಗತ್ಯ ಬೆಂಬಲ ನೀಡಲು ಹಾಗೂ ಇನ್ನಿತರೆ ಅಂಶಗಳ ಕುರಿತು ಚಿಂತಿಸಲು ಹಾಗೂ ಕಿರಿಯ ವಕೀಲರಲ್ಲಿ ಅಗತ್ಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಯೋಚಿಸಬೇಕಿದೆ. ಮಹಿಳೆಯರು ಎದುರಿಸುವ ಈ ಎಲ್ಲಾ ಸಮಸ್ಯೆಗಳ ವಿರುದ್ಧ ಸಮರ್ಥ ಬೆಂಬಲ ವ್ಯವಸ್ಥೆ ಇಲ್ಲದಿದ್ದರೆ, ಕಾನೂನು ರಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯತೆ ಸಮಸ್ಯೆಯನ್ನು ನಿವಾರಿಸುವುದು ಅಸಾಧ್ಯ.
ಕಾನೂನು ವೃತ್ತಿ ರಂಗದಲ್ಲಿ ಒಲವಿರುವ ಮಹಿಳೆಯರಿಗೆ, ವೃತ್ತಿಯಲ್ಲಿ ಮುಂದುವರೆಯುವ ಮಹಿಳೆಯರಿಗೆ ಹಾಗೂ ಕಿರಿಯ ವೃತ್ತಿಪರರಿಗೆ ವೃತ್ತಿ ಪರಿಸರವನ್ನು ಆಕರ್ಷಕವನ್ನಾಗಿಸಲು ಇದು ಅತ್ಯಂತ ಸುಸಮಯ.
(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)
(ಮೂಲಬರಹ ಲೈವ್ ಲಾ ಪತ್ರಿಕೆಯಲ್ಲಿ 22.05.2022 ರಂದು ಪ್ರಕಟವಾಗಿದ್ದು, ಲೋಕೇಶ್ ಕೆಂಪಣ್ಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ).
[i] Regina Guha, In re, 1916 SCC OnLine Cal 192.
[ii] Sudhansu Bala Hazra, In Re, 1921 SCC OnLine Pat 20
[iii] Lalitha Panicker ‘The legal profession must ensure balance: Analysis’, The Hindustan Times,
https://www.hindustantimes.com/analysis/the-legal-profession-must-ensure-gender-balance-analysis/story-zXAKhye28e9ihWXV4GetRK.html accessed on 15 May 2022 at 2.30 PM.
[iv] National Attrition and Re-engagement Study (NARS)- Discussion Paper, March 2014, Law Council of Australia https://www.lawcouncil.asn.au/publicassets/cf493ac8-9830-e711-80d2-005056be66b1/NARS%20Discussions%20papers.pdf accessed on 15 May 2022 at 2.45 PM.
[v] Equitable Briefing Policy, June 2016, https://www.lawcouncil.asn.au/files/pdf/policy-guideline/National_Model_Gender_Equitable_Briefing_Policy_updatedversion.pdf
accessed on 15 May 2022 at 2.58 PM.
[vi] https://www.americanbar.org/news/abanews/publications/youraba/2017/december-2017/aba-summit-searches-for-solutions-to-ensure-career-longevity-for/ accessed on 15 May 2022 at 3.10 PM.
True facts about women advocates.