ಲೇಖನಗಳು

ಭಾರತದಲ್ಲಿ ಬೆಟ್ಟಿಂಗ್, ಮ್ಯಾಚ್, ಸ್ಪಾಟ್ ಫಿಕ್ಸಿಂಗ್ : ಸ್ಪಷ್ಟ ಕಾನೂನಿನ ಕೊರತೆ

ನಮ್ಮ ದೇಶದ ಸರ್ಕಾರೀಯಾಗಲಿ, ಖಾಸಗಿಯಾಗಲಿ ಭ್ರಷ್ಟಾಚಾರದ ವಿಚಾರ ಬಂದರೆ ಎಲ್ಲರಿಗೂ ಸಮನಾದ ಪಾಲಿದೆ. ದೊಡ್ಡ ಪದವಿಯಲ್ಲಿರುವ ಅನೇಕ ರಾಜಕಾರಣಿಗಳು, ಸರ್ಕಾರಿ ಉದ್ಯೋಗಿಗಳು ಸೆರೆವಾಸ ಅನುಭವಿಸಿರುವ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ. ಈ ಭ್ರಷ್ಟಾಚಾರದ ಕರಿನೆರಳು ಕ್ರೀಡಾ ವಲಯಕ್ಕೂ – ಅದರಲ್ಲೂ ದೇಶವನ್ನೇ ಒಗ್ಗೂಡಿಸುವ ಒಂದು ಧರ್ಮ ಎಂದು ಹೇಳಿಸಿಕೊಳ್ಳುವ ಕ್ರಿಕೆಟ್ ಮೇಲೂ ಇದೆ ಎಂಬುದು ಹೊಸ ವಿಚಾರವಲ್ಲ. ಹಣದ ದುರಾಸೆಗೆ ಒಳಗಾಗಿ ಮ್ಯಾಚ್ ಫಿಕ್ಸಿಂಗ್ ಬಲೆಗೆ ಬಿದ್ದು ಆಟಗಾರರು, ಕೋಟ್ಯಂತರ ಮಂದಿ ಭರವಸೆಯ ಕಣ್ಣುಗಳಿಂದ ಭಾರತ ಗೆಲ್ಲಲಿದೆ ಎಂದು ಎದುರು ನೋಡಿರುವ ಎಷ್ಟೋ ಪಂದ್ಯಗಳ ಫಲಿತಾಂಶ ಮೊದಲೇ ತೀರ್ಮಾನ ಮಾಡಿರುವ ಪ್ರಸಂಗಗಳು ದುರಂತವೇ ಸರಿ. ಆಟಗಳ ಹೆಸರಲ್ಲಿ ನಡೆಯುವ ಕಳ್ಳಾಟಗಳ ಬಗೆಗಿನ ಬರಹ ಇದು.

ಈ ಕಳ್ಳಾಟಗಳಿಗೆ ಹಲವು ಮುಖಗಳಿವೆ, ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಹೀಗೆ. ಮ್ಯಾಚ್ ಫಿಕ್ಸಿಂಗ್ ಎಂದರೆ ಆತ ನಡೆಯುವ ಮೊದಲೇ ಯಾರು ಗೆಲ್ಲಬೇಕೆಂಬ ಒಪ್ಪಂದ ತಂಡಗಳ ಮಧ್ಯೆ ಆಗಿ, ಆಟ ಬಾರಿಯ ಹೆಸರಿಗೆ ನಡೆಯುತ್ತದೆ. ಇನ್ನು ಪಂದ್ಯದ ಕೆಲ ಘಟ್ಟವನ್ನು ಮಾತ್ರ ತಮ್ಮ ಅನುಕೂಲಕ್ಕೆ ಬೇಕಾದಂತೆ ನಡೆಯುವ ಹಾಗೆ ಸಂಚು ಮಾಡುವುದನ್ನು ಸ್ಪಾಟ್ ಫಿಕ್ಸಿಂಗ್ ಎನ್ನುತ್ತಾರೆ. ಇಲ್ಲಿ ಪಂದ್ಯದ ಇಷ್ಟನೇ ಓವರ್ ಗೆ ಇಷ್ಟೇ ರನ್ ಕೊಡಬೇಕು, ಅಥವಾ ಓವರ್ ನ ಇಷ್ಟನೇ ಎಸೆತದಲ್ಲಿ ವಿಕೆಟ್ ಒಪ್ಪಿಸಬೇಕು ಎಂದು ಮೊದಲೇ ಒಪ್ಪಂದ ಮಾಡಿಕೊಂಡು ಆಟಗಾರರು ಕಣಕ್ಕಿಳಿಯುತ್ತಾರೆ. ಪಂದ್ಯದ ಇಂತಹ ಘಟ್ಟದಲ್ಲಿ ಹೀಗೇ ನಡೆಯಲಿದೆ ಎಂದು ಮೊದಲೇ ಬುಕ್ ಮೇಕರ್ ಗಳಿಗೆ ತಿಳಿದಿರುವುದರಿಂದ ಧೈರ್ಯವಾಗಿ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ನಲ್ಲಿ ಹೂಡಿ ನಿರಾಯಾಸವಾಗಿ ಹಣ ಗಳಿಸುತ್ತಾರೆ. ತಾಂತ್ರಿಕವಾಗಿ ಮ್ಯಾಚ್ ಫಿಕ್ಸಿಂಗ್ ಗಿಂತ ಸ್ಪಾಟ್ ಫಿಕ್ಸಿಂಗ್ ನಲ್ಲಿ ಹೆಚ್ಚು ಹಣ ಗಳಿಸುವ ಅವಕಾಶಗಳು ಇರುವುದರಿಂದ ಬುಕ್ ಮೇಕರ್ ಗಳು ಹೆಚ್ಚಾಗಿ ಇದರ ಮೊರೆ ಹೋಗುತ್ತಾರೆ. ಹಣದ ಆಮಿಷ ಹಾಗೂ ಬೇರೆ ಬಗೆಯ ಒತ್ತಡ, ಜೀವ ಬೆದರಿಕೆಗಳು ಆಟಗಾರರನ್ನು ಹೆಚ್ಚಾಗಿ ಈ ಮೋಸದ ಕೂಪಕ್ಕೆ ತಳ್ಳಿವೆ. ಇನ್ನು ಯಾವ ತಂಡ ಗೆಲ್ಲಲಿದೆ ಎಂದು ಹಣ ಹೂಡಿ ಬೆಟ್ಟಿಂಗ್ ಮಾಡುವುದು ಕೂಡ ಭಾರತದ ಕಾನೂನಿನಲ್ಲಿ ಅಪರಾಧ ಎಂದೇ ಪರಿಗಣಿಸಲಾಗುತ್ತದೆ. ಜೂಜಿನಲ್ಲಿ ತೊಡಗುವ ಬುಕ್ ಮೇಕರ್ ಗಳು ಹೆಚ್ಚು ಕಪ್ಪುಹಣ ಹರಿದಾಡುವಂತೆ ಮಾಡುವುದರಿಂದ ಇದು ಐತಿಹಾಸಿಕವಾಗಿ ದೇಶದ ಆರ್ಥಿಕತೆಗೂ ಪೆಟ್ಟು ನೀಡುತ್ತಾ ಬಂದಿದೆ. ಆದರೂ ಇವ್ಯಾವುಗಳು ಕುರಿತು ಕೂಡ ಭಾರತ ಇನ್ನೂ ಒಂದು ಧೃಢ ಕಾನೂನು ರೂಪಿಸಿ ಅನುಷ್ಠಾನಕ್ಕೆ ತರದೆ ಇರುವುದು ಅಚ್ಚರಿಯ ಸಂಗತಿ.

ಕಾನೂನುಗಳ ಕುಂದು – ಕೊರತೆಗಳು:

ಬೆಟ್ಟಿಂಗ್ ಎಂಬ ದೊಡ್ಡ ಜಾಲದ ಅಡಿಯಲ್ಲೇ ಈ ಕ್ರಿಕೆಟ್ ನ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಗಳೂ ಬರುವುದು. ಆದರೆ ಭಾರತದಲ್ಲಿ ಬೆಟ್ಟಿಂಗ್ ಬಗ್ಗೆಯೇ ಕಾನೂನು ಇನ್ನೂ ಸಮರ್ಪಕವಾಗಿ ರೂಪುಗೊಂಡಿಲ್ಲ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ. ಕುದುರೆ ರೇಸ್, ರಮ್ಮಿ, ಲಾಟರಿಗಳಂತಹ ಜೂಜಿಗೆ ಕಾನೂನಿನಡಿ ಅವಕಾಶ ಇದ್ದರೂ ಇದು ಸಾರ್ವತ್ರಿಕವಲ್ಲ. ಇದು ಒಂದೊಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಬದಲಾಗುತ್ತದೆ. ಬೆಟ್ಟಿಂಗ್ ನಿಯಮ ಏಳನೇ ಆಯೋಗದ ಜಂಟಿ ಪಟ್ಟಿಯಲ್ಲಿ ಇರುವುದರಿಂದ ಆಯಾ ರಾಜ್ಯಗಳು ತಮಗೆ ಬೇಕಾದಂತೆ ಬೆಟ್ಟಿಂಗ್ ಅನ್ನು ತಡೆ ಹಿಡಿಯುವ ಅಥವಾ ಅಧಿಕೃತಗೊಳಿಸುವ ಹಕ್ಕನ್ನು ಹೊಂದಿವೆ.

ದಿ ಪಬ್ಲಿಕ್ ಗ್ಯಾಂಬ್ಲಿಂಗ್ ಆಕ್ಟ್, 1867, ಸಾರಾಸಗಟಾಗಿ ಬೆಟ್ಟಿಂಗ್ ಅನ್ನು ಕಾನೂನುಬಾಹಿರ ಎಂದು ಘೋಷಿಸದೆ, ಮುಂದುವರೆಯುವಂತೆ ಸಣ್ಣ ಅವಕಾಶ ಮಾಡಿಕೊಟ್ಟಿದೆ. ಕಪ್ಪುಹಣದಲ್ಲೇ ವ್ಯವಹರಿಸುವ ಬುಕ್ ಮೇಕರ್ ಗಳ ಮೇಲೆ ನಿಷೇಧ ಹೇರಲಾಗಿದ್ದರೂ ಅಂತರಾಷ್ಟ್ರೀಯ ಬುಕ್ ಮೇಕರ್ ಗಳೊಂದಿಗೆ ಆನ್ ಲೈನ್ ಬೆಟ್ಟಿಂಗ್ ಮಾಡದಂತೆ ತಡೆಯುವುದಕ್ಕೆ ಯಾವುದೇ ನಿಯಮ ಜಾರಿಯಾಗಿಲ್ಲ. ಹಾಗಾಗಿ ಆನ್ ಲೈನ್ ಬೆಟ್ಟಿಂಗ್ ಗಾಗಿಯೇ ಒಂದು ಪ್ರತ್ಯೇಕವಾದ ಕಾನೂನಿನ ಅಗತ್ಯತೆ ಖಂಡಿತ ಇದೆ.

ಕೆಲ ನುರಿತ ಕಾನೂನು ತಜ್ಞರು ಬೆಟ್ಟಿಂಗ್ ಅನ್ನು ಕಾನೂನಿನ ಚೌಕಟ್ಟಿನಲ್ಲಿ ಅಧಿಕೃತಗೊಳಿಸುವುದರಿಂದ ಮ್ಯಾಚ್ ಫಿಕ್ಸಿಂಗ್ ನಂತಹ ಪಿಡುಗನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ಅಭಿಪ್ರಾಯ ಕೂಡ ವ್ಯಕ್ತಪಡಿಸಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಕಾನೂನಿನಡಿ ಅಕ್ರಮ ಎಂದು ಪರಿಗಣಿಸಲಾಗಿದ್ದರೂ ಅದರಲ್ಲಿ ತೊಡಗುವವರನ್ನು ಶಿಕ್ಷಿಸುವುದಕ್ಕೆ ಯಾವುದೇ ನಿಯಮವನ್ನು ಹುಟ್ಟುಹಾಕಲಾಗಿಲ್ಲ.

ಭ್ರಷ್ಟಾಚಾರ ತಡೆ ಕಾಯ್ದೆಯ (Prevention of corruption Act, 1988) 7ನೇ ವಿಭಾಗದ ಪ್ರಕಾರ ಕೇಂದ್ರ, ರಾಜ್ಯ ಸರ್ಕಾರದ ಯಾವುದೇ ಉದ್ಯೋಗಿ ಅಥವಾ ಸಂಸತ್ ಹಾಗೂ ವಿಧಾನ ಸಭೆಯ ಚುನಾಯಿತ ಸದಸ್ಯರು ಹಣ ಪಡೆದು ತಮ್ಮ ಕರ್ತವ್ಯಕ್ಕೆ ದ್ರೋಹ ಬಗೆದರೆ ಮೂರರಿಂದ ಏಳು ವರ್ಷದ ವರೆಗಿನ ಸೆರೆವಾಸಕ್ಕೆ ಒಳಗಾಗಬಹುದು. ಆದರೆ ಭಾರತದಲ್ಲಿ ಕ್ರಿಕೆಟ್ ಆಡಳಿತದ ಹೊಣೆ ಹೊತ್ತಿರುವ ಬಿಸಿಸಿಐ ಒಂದು ಖಾಸಗಿ ಸಂಸ್ಥೆಯಾಗಿದ್ದರಿಂದ ಫಿಕ್ಸಿಂಗ್ ನಲ್ಲಿ ಪಾಲ್ಗೊಂಡ ಕ್ರಿಕೆಟ್ ಆಟಗಾರರಿಗೆ ಈ ಕಾಯ್ದೆಯ ಅಡಿ ಶಿಕ್ಷೆ ನೀಡಲಾಗುವುದಿಲ್ಲ. ಭಾರತೀಯ ದಂಡ ಸಂಹಿತೆ (ಐಪಿಸಿ) 415ನೇ ಕಲಂ, ತಮ್ಮ ಲಾಭಕ್ಕಾಗಿ ಹಣದ ಆಮಿಷ ಒಡ್ಡಿ ಅಥವಾ ಹಣ ಪಡೆದು ವ್ಯಕ್ತಿ / ವ್ಯಕ್ತಿಗಳಿಗೆ ನಷ್ಟವುಂಟು ಮಾಡುವುದನ್ನು ಮೋಸಗಾರಿಕೆ ಎಂದು ವ್ಯಾಖ್ಯಾನಿಸಿ, ಅದಕ್ಕೆ ಶಿಕ್ಷೆಯೂ ಇದೆ. ಆದರೆ ಮ್ಯಾಚ್ ಫಿಕ್ಸಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ನಲ್ಲಿ ತೊಡಗುವ ಆಟಗಾರರು ತಾಂತ್ರಿಕವಾಗಿ ನೇರ್ಮೆಯನ್ನು ಮಾರಿಕೊಂಡು ಆಟವನ್ನು ಪ್ರೀತಿಸುವ ದೇಶವಾಸಿಗಳಿಗೆ ಮೋಸ ಮಾಡುವಾಗ ಯಾವುದೇ ನಿರ್ದಿಷ್ಟ ವ್ಯಕ್ತಿಗೆ ಅಥವಾ ವ್ಯಕ್ತಿಗಳಿಗೆ ನಷ್ಟವೋ ಹಾನಿಯೊ ಆಗುತ್ತದೆ ಎಂಬುದನ್ನು ಸಾಬೀತು ಪಡಿಸಲು ಆಗುವುದಿಲ್ಲವಾದ್ದರಿಂದ ಈ ಕಾನೂನಿನಡಿಯಲ್ಲಿ ಇದನ್ನು ತರಲು ಆಗುವುದಿಲ್ಲ. ಹಾಗಾಗಿ ಇಂತಹ ಆಟಗಾರರ ಮೇಲೆ ಕ್ರಿಮಿನಲ್ ದಾವೆ ಹೂಡಲು ಸದ್ಯಕ್ಕೆ ಭಾರತದಲ್ಲಿ ಯಾವುದೇ ಕಾನೂನಿಲ್ಲ. ಆದ್ದರಿಂದ ಇಂತಹ ಎಷ್ಟೇ ಪ್ರಕರಣಗಳು ಬೆಳಕಿಗೆ ಬಂದರೂ ಕಟ್ಟುನಿಟ್ಟಿನ ಕ್ರಮ ಜಾರಿಯಾಗದ ಕಾರಣ ಪದೇ ಪದೇ ಹೊಸ ವಿವಾದಗಳು ಭುಗಿಲೇಳುತ್ತಲೇ ಇರುತ್ತವೆ.

ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳು:

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ಅಜಯ್ ಶರ್ಮಾ, ಮನೋಜ್ ಪ್ರಭಾಕರ್ ಮತ್ತು ಅಜಯ್ ಜಡೇಜಾ 2000 ರಲ್ಲಿ ಮ್ಯಾಚ್ ಫಿಕ್ಸಿಂಗ್ ಹಾಗೂ ಬುಕ್ ಮೇಕೆರ್ ಗಳೊಂದಿಗಿನ ನಂಟಿನ ಆರೋಪದ ಮೇಲೆ ನಿಷೇಧಕ್ಕೆ ಒಳಗಾಗಿದ್ದರು. ಅಜರುದ್ದೀನ್ ಮತ್ತು ಅಜಯ್ ಶರ್ಮಾರ ಮೇಲೆ ಹೇರಲಾಗಿದ್ದ ಆಜೀವ ನಿಷೇಧ ಒಂದು ದಶಕದ ಬಳಿಕ ತೆರವುಗೊಂಡರೆ ಪ್ರಭಾಕರ್ ಐದು ವರ್ಷದ ನಿಷೇಧವನ್ನು ಪೂರೈಸಿದರು. ತೆಹೆಲ್ಕಾ ಪತ್ರಿಕೆ ನಡೆಸಿದ ಸ್ಟಿಂಗ್ ಕಾರ್ಯಾಚರಣೆಯಲ್ಲಿ ಈ ಆಟಗಾರರ ಮೋಸದಾಟಕ್ಕೆ ಸಾಕ್ಷಿ ದೊರೆತು ಆ ಬಳಿಕ ಸಿಬಿಐ ಸಂಪೂರ್ಣ ಮಾಹಿತಿ ಕಲೆ ಹಾಕಿ ವರದಿ ಸಲ್ಲಿಸಿತ್ತು. ನಂತರ 2013 ರ ಐಪಿಎಲ್ ನಲ್ಲಿ ರಾಜಸ್ಥಾನ ತಂಡದ ಶ್ರೀಶಾಂತ್, ಅಜಿತ್ ಚಂಡೀಲಾ ಮತ್ತು ಅಂಕಿತ್ ಚವಾಣ್ ರಿಗೆ ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಆಜೀವ ನಿಷೇಧ ಹೇರಲಾಗಿದ್ದರೂ ಕೆಲ ವರುಷಗಳ ಬಳಿಕ ಅವರ ನಿಷೇಧವನ್ನು ತೆರವುಗೊಳಿಸಲಾಯಿತು. ಇನ್ನೂ ಹಲವಾರು ಕ್ರಿಕೆಟ್ ಆಟಗಾರರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೂ ಅವರನ್ನು ಬಂಧಿಸಲು ಕಾನೂನಿನಲ್ಲಿ ಅವಕಾಶ ಇಲ್ಲದ ಕಾರಣ ಪ್ರಕರಣವನ್ನು ಕೈಬಿಡಲಾಗಿತ್ತು. 2015 ರಲ್ಲಿ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದ 36 ಮಂದಿಯನ್ನು ಪಟಿಯಾಲಾ ಹೌಸ್ ಕೋರ್ಟ್ ಬೆಟ್ಟಿಂಗ್ ಶಿಕ್ಷಾರ್ಹ ಅಪರಾಧವೆಲ್ಲವೆಂದು ಪರಿಗಣಿಸಿ ಬಿಡುಗಡೆ ಮಾಡಿತ್ತು.

ಕೊನೆ ಹನಿ

2010 ರ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶಾಮೀಲಾಗಿದ್ದ ಪಾಕಿಸ್ತಾನದ ಮೂವರು ಕ್ರಿಕೆಟಿಗರು ಇಂಗ್ಲೆಂಡ್ ನಲ್ಲಿ ಕೆಲ ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿದ್ದು ಕ್ರಿಕೆಟ್ ಜಗತ್ತನ್ನು ತಲ್ಲಣಗೊಳಿಸಿತ್ತು. ಅಲ್ಲಿನ ಕಾನೂನು ಕ್ರೀಡೆಯಲ್ಲಿ ನಡೆಯುವ ಮೋಸವನ್ನು ಹಗುರವಾಗಿ ಪರಿಗಣಿಸದೆ, ತಪ್ಪೆಸಗಿದ ಆಟಗಾರರನ್ನು ನಿರ್ದಾಕ್ಷಿಣ್ಯವಾಗಿ ಸೆದೆಬಡಿಯಲು ಕಠಿಣವಾದ ಕಾನೂನು ರೂಪಿಸಿದೆ. ಇಂಗ್ಲೆಂಡ್ ನ ಕ್ರೀಡಾ ಕಾನೂನು ಪ್ರಪಂಚದ ಎಲ್ಲಾ ದೇಶಗಳಿಗೂ ಮಾದರಿಯೆಂದೇ ಕ್ರೀಡೆ ಹಾಗೂ ಕಾನೂನು ತಜ್ಞರ ಅಂಬೋಣವಾಗಿದೆ. 2013 ರ ಐಪಿಎಲ್ ವೇಳೆ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದ ಚೆನ್ನೈ ಹಾಗೂ ರಾಜಸ್ಥಾನ ತಂಡದ ಒಡೆಯರ ಮೇಲೆ ಕೆಲವು ವರ್ಷಗಳ ನಿಷೇಧ ಹೇರಿದ್ದ ಒಂದು ಪ್ರಕರಣವನ್ನು ಬಿಟ್ಟರೆ ಭಾರತದಲ್ಲಿ ಕ್ರೀಡಾ ರಂಗದವರು ಕಾನೂನಿನಡಿ ದೊಡ್ಡಮಟ್ಟದ ಶಿಕ್ಷೆಗೆ ಗುರಿಯಾಗಿರುವ ಉದಾಹರಣೆಗಳಿಲ್ಲ.

ಕಾನೂನು, ಕಾಯ್ದೆ ಹಾಗೂ ನಿಯಮಗಳು ಒಂದು ದೇಶ ಹಾಗೂ ಅಲ್ಲಿನ ಜನರ ಒಳಿತಿಗಾಗಿಯೇ ರೂಪಿಸಲಾಗುತ್ತದೆ. ಕ್ರಿಕೆಟ್ ಭಾರತದಲ್ಲಿ ದೊಡ್ಡ ಆಟವಾಗಿ ಬೆಳೆದು ಇಂದು ಕ್ರಿಕೆಟ್ ಆಟಗಾರರನ್ನು ಜನರು ಆದರ್ಶವೆಂದು ಪರಿಗಣಿಸುತ್ತಾರೆ. ಇಂತಹ ನಂಬಿಕೆಗೆ ದ್ರೋಹ ಮಾಡದಂತೆ ತಡೆಯುವ ಕಾನೂನಿನ ಅವಶ್ಯಕತೆ ಈಗ ಖಂಡಿತ ಇದೆ. ಇದನ್ನು ಜಾರಿಗೊಳಿಸುವುದಕ್ಕೆ ಬಿಸಿಸಿಐ ಕೂಡ ಬೆಂಬಲವಾಗಿ ನಿಲ್ಲಬೇಕಿದೆ. ಹಾಗಾದಲ್ಲಿ ಮಾತ್ರ ಆಟದ ಕುರಿತು ಜನರಲ್ಲಿ ವಿಶ್ವಾಸ ಮೂಡಿಸಲು ಮತ್ತು ಕ್ರಿಕೆಟ್ ಆಟಕ್ಕೆ ಅಂಟಿರುವ ಕೊಳೆಯನ್ನು ಹೋಗಲಾಡಿಸಲು ಸಾಧ್ಯ. ಮುಂದಿನ ದಿನಗಳಲ್ಲಿ ಕ್ರಿಕೆಟ್ ಆಟದಲ್ಲಿ ಮುಂದೆಂದೂ ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್ ಹೆಸರುಗಳು ಕೇಳದಂತಾಗಲಿ ಎಂಬುದೇ ಕ್ರಿಕೆಟ್ ಅಭಿಮಾನಿಗಳ ಹೆಬ್ಬಯಕೆ.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

Spread the love