ಲೇಖನಗಳು

ಭಾರತದಲ್ಲಿ ಕ್ರೀಡಾ ಕಾನೂನು

ಕ್ರೀಡೆ ಎಂಬುದು ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗವೇ ಆಗಿರುತ್ತದೆ ಎಂದರೆ ತಪ್ಪಾಗಲಾರದು. ಬೆಳೆಯುತ್ತಾ ನಾವೆಲ್ಲರೂ ಶಾಲಾ-ಕಾಲೇಜು ಮಟ್ಟದಲ್ಲಿ ಯಾವುದಾದರೊಂದು ಆಟದಲ್ಲಿ ತೊಡಗಿಸಿಕೊಂಡೇ ಇರುತ್ತೇವೆ. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರೊಟ್ಟಿಗೆ ನಮ್ಮಲ್ಲಿ ಮಾನಸಿಕ ಸ್ಥೈರ್ಯ ತುಂಬುವಲ್ಲೂ ಕ್ರೀಡೆ ಉಪಯುಕ್ತಎಂಬುದು ಎಲ್ಲರಿಗೂ ತಿಳಿದೇ ಇದೆ. ಹಲವರು ಕ್ರೀಡೆಯನ್ನು ಕೇವಲ ಮನೋರಂಜನೆಯ ದೃಷ್ಟಿಕೋನದಿಂದ ನೋಡಿದರೆ, ಕೆಲವರು ಮಾತ್ರ ಕ್ರೀಡೆಯನ್ನೇ ಗಂಭೀರವಾಗಿ ಪರಿಗಣಿಸಿ ವೃತ್ತಿಪರರಾಗುವತ್ತ ಗಮನಹರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಬಗೆಯ ಒಲವು ಎಳೆಯರಲ್ಲಿ ಹೆಚ್ಚುತ್ತಿರುವುದು ಗಮನಿಸಬೇಕಾದ ಒಂದು ಪ್ರಮುಖ ಅಂಶ.  ಹಾಗಾಗಿ ಈಗ ಕ್ರೀಡಾ ವಲಯ ಹೆಚ್ಚು ಪೈಪೋಟಿಯಿಂದ ಕೂಡಿದ್ದು, ತನ್ನ ವೃತ್ತಿಪರತೆಯಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡು ವಿಶ್ವವಹಿವಾಟುಗಳಲ್ಲಿ 3% ಆದಾಯ ತನ್ನದಾಗಿಸಿಕೊಂಡಿದೆ. ಭಾರತದಲ್ಲೂ ಈ ಬೆಳವಣಿಗೆಯ ಪ್ರಭಾವ ಬೀರದೆ ಏನಿಲ್ಲ. ಕ್ರೀಡೆಯ ಬಗೆಗೆ ಸಾಮಾನ್ಯವಾಗಿ ತಾತ್ಸಾರ ಹೊಂದಿದ್ದ ಭಾರತೀಯರಲ್ಲಿ ಈಗ ವೃತ್ತಿಪರತೆ ಮೂಡುತ್ತಿದೆ. ಹಾಗಾಗಿ ಪ್ರಾಯೋಜಕರನ್ನು ಸೆಳೆದು ದೊಡ್ಡ ಮಟ್ಟದಲ್ಲಿ ಪಂದ್ಯಾವಳಿಗಳನ್ನು ಆಯೋಜಿಸುವುದು, ಆಟಗಾರರಿಗೆ ಬೇಕಾದ ಮೂಲ ಸೌಕರ್ಯಗಳನ್ನು ನೀಡುವಲ್ಲಿ ಕ್ರೀಡಾ ಸಂಸ್ಥೆಗಳು ವೃತ್ತಿಪರರ  ಮಾದರಿಯಲ್ಲಿ ತೊಡಗಿಕೊಂಡಿವೆ. ಈ ಪ್ರಕ್ರಿಯೆಯ ವೇಳೆ ದುರಾಡಳಿತ ಹಾಗೂ ಭ್ರಷ್ಟಾಚಾರದ ಕರಿನೆರಳು ಕ್ರೀಡಾವಲಯದ ಮೇಲೆ ಬಿದ್ದಿರುವ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ ಇವುಗಳಿಗೆ ಕಡಿವಾಣ ಹಾಕಲು ಮತ್ತು ಕ್ರೀಡೆಯ ವಾಲಯದಲ್ಲಿ ಒಂದಿಷ್ಟು ಶಿಸ್ತು ತರಲು ಕೆಲವು ಸಂಸ್ಥೆಗಳನ್ನು ಹುಟ್ಟುಹಾಕಲಾಯಿತು. ಈ ಬರಹದಲ್ಲಿ ಒಟ್ಟಾರೆ ಆಟೋಟಗಳನ್ನು ನಿಯಂತ್ರಿಸುವ ನಮ್ಮ ವ್ಯವಸ್ಥೆಯ ಕುರಿತು ಒಂದಿಷ್ಟು ತಿಳಿದುಕೊಳ್ಳೋಣ.

ರಾಷ್ಟ್ರೀಯ ಕ್ರೀಡಾ ನೀತಿ (National Sports Policy)
ಸ್ವಾತಂತ್ರ್ಯಾ ನಂತರದಲ್ಲಿ ವಿಶ್ವಮಟ್ಟದ ನಾನಾ ಪೋಟಿಗಳಲ್ಲಿ ದೇಶದ ಆಟಗಾರರು ಪಾಲ್ಗೊಳ್ಳುವುದರ ಜೊತೆಗೆ ಕ್ರೀಡೆಯ ಬಗೆಗೆ ಪ್ರತ್ಯೇಕ ನೀತಿ-ನಿಯಮಗಳನ್ನು ರೂಪಿಸಿ ಅವನ್ನು ವೃತ್ತಿಪರವಾಗಿ ಅನುಷ್ಠಾನ ಗೊಳಿಸಿದರಷ್ಟೇ ಕ್ರೀಡೆಗೆ ಇನ್ನಷ್ಟು ಪುಷ್ಟಿ ದೊರೆತು, ಅದರ ಸ್ತರ ಮೇಲ್ಮಟ್ಟಕ್ಕೆ ಏರುತ್ತದೆ ಎಂಬುದನ್ನು ಮನಗಂಡ ಭಾರತ ಸರಕಾರ ರಾಷ್ಟ್ರೀಯ ಕ್ರೀಡಾ ನೀತಿಯನ್ನು 1984 ರಲ್ಲಿ ತಂದಿತು. ರಾಷ್ಟ್ರೀಯ ಕ್ರೀಡಾ ನೀತಿ ಮಸೂದೆಯನ್ನು ಸಂಸತ್ ನ ಎರಡೂ ಮನೆಗಳಲ್ಲಿ ಆಗಸ್ಟ್ 1984 ರಲ್ಲಿ ಮಂಡಿಸಲಾಯಿತು. ಈ ಮಸೂದೆ ಅನುಷ್ಠಾನಗೊಂಡ ಮೇಲೆ ಪ್ರತೀ ಐದು ವರ್ಷಗಳಿಗೊಮ್ಮೆ ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಮುಂದಿನ ಕಾರ್ಯಸೂಚಿಗಳನ್ನು ರೂಪಿಸಲಾಗುವುದು ಎಂದು ತೀರ್ಮಾನಿಸಲಾಯಿತು. ಮಸೂದೆಯಲ್ಲಿ ಹಲವಾರು ಉತ್ತಮ ವಿಷಯಗಳಿದ್ದರೂ ಅದು ಜಾರಿಗೆ ಬಂದಿರಲಿಲ್ಲ. ಕೊನೆಗೂ, ಹದಿನೇಳು ವರ್ಷಗಳ ಬಳಿಕ ಹಳೇ ಮಸೂದೆಯನ್ನು ಕೊಂಚ ತಿದ್ದುಪಡಿ ಮಾಡಿ ರಾಷ್ಟ್ರೀಯ ಕ್ರೀಡಾನೀತಿ-2001 ಅನ್ನು ಮೂರು ಪ್ರಮುಖ ಉದ್ದೇಶಗಳೊಂದಿಗೆ ರೂಪಿಸಲಾಯಿತು. ಅವುಗಳು ಹೀಗಿವೆ:

(i) ಕ್ರೀಡೆಯ ಪ್ರಚಾರ ಹಾಗೂ ಬೆಳವಣಿಗೆಯ ಹೊಣೆಹೊತ್ತಿರುವ ಸಂಸ್ಥೆಗಳಿಗೆ ತಮ್ಮ ಕಾರ್ಯಗಳ ಚೌಕಟ್ಟಿನ ಬಗೆಗೆ ಅರಿವು ಮೂಡಿಸುವುದು.
(ii) ವೃತ್ತಿಪರ ಕ್ರೀಡಾ ಸಂಸ್ಥೆಗಳನ್ನು ಗುರುತಿಸಿ, ನಿಯಮಗಳ ಅರಿವು ಮೂಡಿಸಿ ಆ ಚೌಕಟ್ಟಿನಲ್ಲೇ ಸರ್ಕಾರಿ ಅನುದಾನ ಹಾಗೂ ಪ್ರಾಯೋಜಕತ್ವವನ್ನು ದೊರಕಿಸಿಕೊಡುವುದು.
(iii) ಕ್ರೀಡಾ ಸಂಸ್ಥೆಗಳ ಅರ್ಹತೆಯನ್ನು ಪರಿಶೀಲಿಸಲು ಮಾನದಂಡ ರೂಪಿಸಿ ಆ ಬಳಿಕ ಸರ್ಕಾರದ ಅನುದಾನ ಪೋಲಾಗದಂತೆ ಎಚ್ಚರಿಕೆ ವಹಿಸಿ ಅಗತ್ಯಕ್ಕೆ ತಕ್ಕಂತೆ ಹಣ ಬಿಡುಗಡೆ ಮಾಡುವುದು.

ಬಳಿಕ ಕೇಂದ್ರ ಸರ್ಕಾರ ಕೂಡ ರಾಷ್ಟ್ರೀಯ ಕ್ರೀಡಾ ನೀತಿ-2001ರ ಅಡಿಯಲ್ಲಿ ಶಾಲೆಗಳಲ್ಲಿ ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರಗಳು, ಒಲಂಪಿಕ್ ಸಂಸ್ಥೆ ಹಾಗೂ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳೊಟ್ಟಿಗೆ ಕೈಜೋಡಿಸಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡೆಗಳನ್ನು ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಿತು. ನಂತರ ಈ ವಿಚಾರಗಳಲ್ಲಿ ಪಾರದರ್ಶಕತೆಯ ಅಗತ್ಯತೆಯನ್ನರಿತು ಕ್ರೀಡೆ ವಿಷಯವನ್ನುಸಂವಿಧಾನದ ರಾಜ್ಯ ಪಟ್ಟಿಗೆ ಸೇರಿಸಿತು.

ಕ್ರೀಡಾ ನಿಯಮದ ಅಡಿಯಲ್ಲಿ ದುಡಿಯುವ ಕೆಲವು ಸಂಸ್ಥೆಗಳು:
ಆಡಳಿತ ಹಾಗೂ ಕ್ರೀಡಾ ಸಂಬಂಧಿತ ಅನೇಕ ವಿಷಯಗಳೊಟ್ಟಿಗೆ ಅದರ ಬೆಳವಣಿಗೆಯ ಹೊಣೆ ಹೊತ್ತು ದುಡಿಯುತ್ತಿರುವ ಕೆಲವು ಸಂಸ್ಥೆಗಳು ಇವು:
ಕ್ರೀಡಾ ಕಾಯ್ದೆ ಹಾಗೂ ಭಾರತದ ಕಲ್ಯಾಣ ಸಂಘ
(Sports law and welfare association of India)
ಈ ಸಂಘವು ಒಂದು ವೃತ್ತಿಪರ ಲಾಭರಹಿತ ಸಂಸ್ಥೆಯಾಗಿದ್ದು ರಾಷ್ಟ್ರ ಮಟ್ಟದಲ್ಲಿ ಕ್ರೀಡಾ ಕಾಯ್ದೆಯನ್ನು ಮುನ್ನೆಲೆಗೆ  ತರುವತ್ತ ದುಡಿಯುತ್ತಿದೆ. ಕಾನೂನು ತಜ್ಞರು ಹಾಗೂ ಆಟಗಾರರನ್ನು ಒಂದೇ ಸೂರಿನಡಿ ತಂದು ಈಗಿರುವ ಕಾಯ್ದೆಯನ್ನು ಇನ್ನೂ ಉತ್ತಮಗೊಳಿಸಿ, ದೇಶದಲ್ಲಿ ಕ್ರೀಡಾ ಚಟುವಟಿಕೆಗಳು ಸರಾಗವಾಗಿ ಜರುಗುವಂತೆ ನೋಡಿಕೊಳ್ಳುವುದು ಈ ಸಂಸ್ಥೆಯ ಮೂಲ ಧ್ಯೇಯ. ಇದರ ಹೊರತಾಗಿ ಈ ಸಂಘವು ದೇಶದಾದ್ಯಂತ ಇರುವ ಹಲವಾರು ಕ್ರೀಡಾ ಸಂಸ್ಥೆಗಳ ಬೇಕು-ಬೇಡಗಳನ್ನು ಅರಿತು, ಕಾನೂನಾತ್ಮಕ ಮತ್ತು ಆಟಕ್ಕೆ ಸಂಬಂಧಿತ ತಕರಾರು ಹಾಗೂ ವಿವಾದಗಳನ್ನು ಬಗೆಹರಿಸುವತ್ತ ಕಾರ್ಯೋನ್ಮುಖವಾಗಿದೆ.

ಭಾರತೀಯ ಕ್ರೀಡಾ ಪ್ರಾಧಿಕಾರ (Sports Authority of India)
ಭಾರತೀಯ ಕ್ರೀಡಾ ಪ್ರಾಧಿಕಾರ ಒಂದು ಅಪೆಕ್ಸ್ ಅಂಗ ಆಗಿದ್ದು 1984ರಲ್ಲಿ ಕ್ರೀಡಾ ಸಚಿವಾಲಯ (Ministry ಆ youth affairs and sports) ದಿಂದ ಅಸ್ತಿತ್ವಕ್ಕೆ ಬಂದಿತು. ದೇಶದ ಉದ್ದಗಲಕ್ಕೂ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಅದರ ಬೆಳವಣಿಗೆಗೆ ಶ್ರಮಿಸುವ ಸಂಸ್ಥೆ ಇದಾಗಿದ್ದು ಕಳೆದ ಮೂರು ದಶಕಗಳಲ್ಲಿ ಅನೇಕ ಪ್ರತಿಭೆಗಳನ್ನು ಗುರುತಿಸಿ ಮುನ್ನೆಲೆಗೆ ತಂದು ಸಾಕಷ್ಟು ಯಶಸ್ಸು ಕಂಡಿದೆ. ಈ ಸಂಸ್ಥೆ ಮಕ್ಕಳಿಗೆ ಶಾಲಾ ಕಲಿಕೆಯೊಟ್ಟಿಗೆ ಆಟೋಟಗಳಿಗೂ ಸಮನಾದ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ರೂಪಿಸಿ ಅಳವುಳ್ಳ ಆಟಗಾರರಿಗೆ ಕ್ರೀಡಾ ವೇತನ ಕೂಡ ನೀಡಿ ಅವರನ್ನು ವೃತ್ತಿಪರ ಕ್ರೀಡೆಗಳಿಗೆ ಸಜ್ಜಾಗುವಂತಹ ಮೇರು ಕಾರ್ಯದಲ್ಲಿ ತೊಡಗಿಕೊಂಡಿದೆ.  

ಸರಿಯಾದ ಕ್ರೀಡಾ ಕಾನೂನಿನ ಅವಶ್ಯಕತೆ:
ಭಾರತ ಸರ್ಕಾರದ ಸತತ ಬೆಂಬಲ ಹಾಗೂ ಮಾರ್ಗದರ್ಶನದ ಹೊರತಾಗಿಯೂ ಕ್ರೀಡೆಯಲ್ಲಿ ಹಲವಾರು ಅಹಿತಕರ ಘಟನೆಗಳು ಇಂದಿಗೂ ಜರುಗುತ್ತಲೇ ಇವೆ. ಭ್ರಷ್ಟಾಚಾರ, ಮೋಸದಾಟ, ಸ್ಪಾಟ್ ಫಿಕ್ಸಿಂಗ್, ಜೂಜು, ಉದ್ದೀಪನ ಮದ್ದಿನ ಸೇವನೆ ಹಾಗೂ ಮಹಿಳಾ ಆಟಗಾರರ ಮೇಲಿನ ದೌರ್ಜನ್ಯಕ್ಕೆ ಇನ್ನೂ ಕಡಿವಾಣ ಹಾಕುವಲ್ಲಿ ನಮ್ಮ ವ್ಯವಸ್ಥೆ ಸೋತಿದೆ. ಇದಕ್ಕೆಲ್ಲಾ ಕೊನೆ ಹಾಡಲು ಕ್ರೀಡಾ ವಲಯದಲ್ಲೂ ತಪ್ಪಿತಸ್ತರು ಸೆರೆಮನೆ ಶಿಕ್ಷೆಗೆ ಗುರಿಯಾಗುವಂತಹ ಕಟ್ಟುನಿಟ್ಟಾದ ಕಾನೂನಿನ ಅಗತ್ಯತೆ ಖಂಡಿತ ಇದೆ. ಇದರ ಸಲುವಾಗಿ ಕ್ರೀಡೆಗೆ ಸಂಬಂಧಿತ ಅನೇಕ ಚಟುವಟಿಕೆಗಳನ್ನು ಕೈಗೊಂಡಿದ್ದರೂ ಎಲ್ಲಾ ಸಮಸ್ಯೆಗಳ ನಿವಾರಣೆ ಅವುಗಳಿಂದ ಆಗಿಲ್ಲ ಎಂಬುದು ದುಃಖಕರ ಸಂಗತಿ. ಮೊದಲನೆಯದಾಗಿ ಆಟಗಾರರ ಹಕ್ಕುಗಳನ್ನು ಕಾಯುವ ಕಾಯ್ದೆ ಜಾರಿಯಾಗಬೇಕಿದೆ. ಕಾನೂನಿನ ಚೌಕಟ್ಟಿನಲ್ಲಿಆಟಗಾರರ ಕರಾರುಗಳು ಹಾಗೂ ಕ್ರೀಡಾ ಸಂಸ್ಥೆಗಳೊಂದಿಗಿನ ಹಣಕಾಸು ಒಪ್ಪಂದಗಳ ಮೇರೆಗೆ ಎಲ್ಲಾ ವ್ಯವಹಾರಗಳು ನಡೆಯುವಂತೆ ಆದಲ್ಲಿ ಮಾತ್ರ ಭಾರತದಲ್ಲೂ ಉತೃಷ್ಟ ಮಟ್ಟದ ವೃತ್ತಿಪರತೆಯನ್ನು ನಾವು ಕಾಣಬಹುದು. ಕಾನೂನಿನಡಿ ಇಂತಹ ಪಾರದರ್ಶಕ ಹಾಗೂ ವೃತ್ತಿಪರ ವ್ಯವಸ್ತೆ ಈಗಾಗಲೇ ಅಮೇರಿಕಾ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಜಾರಿಯಲ್ಲಿದ್ದು ಪ್ರಪಂಚವೇ ಅಚ್ಚರಿ ಪಡುವಂತಹ ಯಶಸ್ಸು ಕಂಡಿದೆ. ಒಲಂಪಿಕ್ಸ್ ಸೇರಿದಂತೆ ಅನೇಕ ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಈ ದೇಶಗಳು ಪದಕಗಳ ಪಟ್ಟಿಯಲ್ಲಿ ಸದಾ ಅಗ್ರಸ್ಥಾನ ಕಾಯ್ದುಕೊಂಡಿರುವುದೇ ಇದಕ್ಕೆ ಸಾಕ್ಷಿ. ಹಾಗೂ ಎಲ್ಲಾ ಬಗೆಯ ಕ್ರೀಡೆಗಳನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡುವಂತಹ ಕಾಯ್ದೆಯೂ ದೊಡ್ಡಮಟ್ಟದಲ್ಲಿ ಕ್ರೀಡೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ. ಈ ಕಾಯ್ದೆ ಕೂಡ ಭಾರತದಲ್ಲಿ ತುರ್ತಾಗಿ ಜಾರಿಯಾಗಬೇಕಾದ ಅಗತ್ಯತೆ ಇದೆ.
ಇಂದು ಕ್ರೀಡಾವಲಯ ಆಟಗಾರರ ಪ್ರತಿಭೆ ಹಾಗೂ ಶ್ರಮದಿಂದ ಭಾರತದಲ್ಲಿ ಒಂದು ಶಕ್ತಿಶಾಲಿ ರಂಗವಾಗಿ ಹೊರಹೊಮ್ಮಿದೆ. ಕ್ರೀಡಾಪಟುಗಳು ದೇಶದ ಯುವಕರಿಗೆ ಒಂದು ಬಗೆಯಲ್ಲಿ ಆದರ್ಶವಾಗಿರುವುದು ತುಂಬಾ ಒಳ್ಳೆಯ ಬೆಳವಣಿಗೆ ಎಂದೇ ಹೇಳಬೇಕು. 2021 ರ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಗೆದ್ದ ಪದಕಗಳು ಮುಂದಿನ ಪೀಳಿಗೆಗೆ ಇನ್ನಷ್ಟು ಇಂಬು ನೀಡಿದೆ. ಕ್ರೀಡೆಗೆ ಸಂಬಂಧಿಸಿದಂತೆ ಭಾರತದಲ್ಲಿರುವ ಅವ್ಯವಸ್ತೆಯ ಹೊರತಾಗಿಯೂ ಎಲ್ಲಾ ಪೋಟಿಗಳಲ್ಲಿ ನಾವು ಮುಂದೆ ಸಾಗುತ್ತಿರುವುದು ಪವಾಡವೇ ಸರಿ. ಇನ್ನು ಶಿಸ್ತುಬದ್ಧವಾದ ಕ್ರೀಡಾ ಕಾಯ್ದೆ-ಕಾನೂನು ಅಧಿಕೃತವಾಗಿ ಜಾರಿಯಾದರೆ ಭಾರತ ಒಂದು ಕ್ರೀಡಾ ದೇಶವಾಗಿ ಉತ್ತುಂಗ ತಲುಪುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಮುಂದಿನ ದಿನಗಳಲ್ಲಾದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರೀಡಾವಲಯದ ಎಲ್ಲಾ ತೊಂದರೆಗಳನ್ನು ನಿವಾರಿಸುವಂತಹ ಒಂದು ವೃತ್ತಿಪರ ಕಟ್ಟಳೆಯನ್ನು ಅನುಷ್ಠಾನಗೊಳಿಸಲಿ ಎಂದು ಬಯಸೋಣ. ಅಂತಹ ಒಂದು ಕಟ್ಟಳೆಯ ಅಡಿಪಾಯದ ಮೇಲೆ ಭಾರತ ಎಲ್ಲಾ ಬಗೆಯ ಕ್ರೀಡೆಗಳಲ್ಲಿ ಪ್ರಾಬಲ್ಯ ಮೆರೆದು ಬಲಿಷ್ಠ ದೇಶಗಳಿಗೆ ಪೋಟಿ ನೀಡುವಂತಾಗಲಿ.

Spread the love