ಲೇಖನಗಳು

ಬೆಕ್ಕಿಗೆ ಗಂಟೆ ಕಟ್ಟಲು ಲೋಧಾ ಸಮಿತಿ ಗೆದ್ದಿತೇ? :ವರದಿಯ ನಂತರದ ಪರಿಣಾಮಗಳು

ಸುಪ್ರೀಮ್ ಕೋರ್ಟ್ ಕೊಟ್ಟ ಗಡುವಿನ ಒಳಗೇ ಜಸ್ಟಿಸ್ ಲೋಧಾ ಅವರ ನೇತೃತ್ವದಲ್ಲಿ ಅವರ ತಂಡ ಕೂಲಂಕುಷವಾಗಿ ಬಿಸಿಸಿಐನ ಎಲ್ಲಾ ವ್ಯವಹಾರಗಳನ್ನು ಪರಿಶೀಲಿಸಿ ಭಾರತದ ಕ್ರಿಕೆಟ್ ಆಡಳಿತದ ಪಾರದರ್ಶಕತೆಗಾಗಿ, ಹಲವಾರು ವಿಷಯಗಳಲ್ಲಿ ಆಗಲೇಬೇಕಾದ ಮಾರ್ಪಾಡುಗಳ ಬಗ್ಗೆ ವರದಿ ಸಲ್ಲಿಸಿತು. ಆಡಳಿತ ಸುಧಾರಣೆಯ ದೃಷ್ಟಿಕೋನದಿಂದ ಇವು ತ್ವರಿತವಾಗಿ ಜಾರಿಯಾಗಬೇಕು ಎಂಬುದನ್ನೂ ಲೋಧಾ ವರದಿ ಮನಗಂಡಿತ್ತು. ಆದರೆ ಸುಪ್ರೀಮ್ ಕೋರ್ಟ್ ಆ ವರದಿಯಲ್ಲಿದ್ದ ಎಲ್ಲಾ ಪ್ರಸ್ತಾವನೆಗಳ ಸಾಧಕ-ಭಾದಕಗಳನ್ನು ಒರೆ ಹಚ್ಚಿ ನೋಡಿ, ಅದರಲ್ಲಿ ಪ್ರಸ್ತಾಪಿಸಲಾಗಿದ್ದ ಕೆಲ ವಿಷಯಗಳನ್ನು ಮಾತ್ರ ಜಾರಿಗೆ ತಂದರೆ ಇನ್ನೂ ಕೆಲ ವಿಷಯಗಳನ್ನು ಎತ್ತಿಹಿಡಿಯಲಿಲ್ಲ. ಈ ವರದಿಯ ಕಾರಣದಿಂದ ಬಿಸಿಸಿಐನ ಹಲವಾರು ಮಜಲುಗಳಲ್ಲಿ ಜಾರಿಗೊಂಡ ಕೆಲ ಬದಲಾವಣೆಗಳು ಕ್ರಿಕೆಟ್ ಗೆ ಪೂರಕವಾಗಿಯೇ ಇರುವುದರ ಉದಾಹರಣೆ ಈಗ ನಮ್ಮ ಕಣ್ಣ ಮುಂದಿದೆ. ಇದು ಒಳ್ಳೆಯ ಬೆಳವಣಿಗೆ ಎಂದೇ ಕ್ರಿಕೆಟ್ ಜಗತ್ತು ಒಮ್ಮತದಿಂದ ಒಪ್ಪಿಕೊಂಡಿದೆ. ಇನ್ನು ಈ ವರದಿಯಲ್ಲಿ ಸುಪ್ರೀಮ್ ಕೋರ್ಟ್ ಎತ್ತಿಹಿಡಿಯದ ಮೂರು ಪ್ರಮುಖ ವಿಷಯಗಳ ಬಗ್ಗೆ ಹೆಚ್ಚು ತಿಳಿಯೋಣ:

ಒಂದು ರಾಜ್ಯ – ಒಂದು ವೋಟ್ ಕಟ್ಟಳೆ:
ಎರಡು-ಮೂರು ಕ್ರಿಕೆಟ್ ಸಂಸ್ಥೆಗಳನ್ನು ಹೊಂದಿರುವ ಬಲಿಷ್ಠ ರಾಜ್ಯಗಳ ಆಡಳಿತ ಪ್ರಾಬಲ್ಯವನ್ನು ತಗ್ಗಿಸುವ ಉದ್ದೇಶದಿಂದ ಲೋಧಾ ಸಮಿತಿ ಬಿಸಿಸಿಐನ ಚುನಾವಣೆ ಹಾಗೂ ಕೆಲವು ಕಾರ್ಯವಿಧಾನಗಳಲ್ಲಿ ಒಂದು ರಾಜ್ಯಕ್ಕೆ ಒಂದೇ ವೋಟ್ ಇರತಕ್ಕದ್ದು ಎಂಬ ಕಟ್ಟಳೆಯನ್ನು ಸೂಚಿಸಿತ್ತು. ಆದರೆ ಸುಪ್ರೀಮ್ ಕೋರ್ಟ್ ಮಾತ್ರ ಈಗಿರುವ ಒಂದೇ ರಾಜ್ಯದ ಮಹಾರಾಷ್ಟ್ರ, ವಿದರ್ಭ ಹಾಗೂ ಮುಂಬೈ ಒಟ್ಟಿಗೆ ಗುಜರಾತ್, ಬರೋಡ ಹಾಗೂ ಸೌರಾಷ್ಟ್ರ ಸಂಸ್ಥೆಗಳಿಗೂ ವೋಟ್ ಮಾಡುವ ಹಕ್ಕು ನೀಡಿ ಗೌರವಿಸಿತು. ಇದರೊಟ್ಟಿಗೆ ಸರ್ಕಾರಿ ಸಂಸ್ಥೆಗಳಾದ ರೈಲ್ವೇಸ್, ಸರ್ವಿಸಸ್ ಹಾಗೂ ಭಾರತೀಯ ವಿಶ್ವವಿದ್ಯಾಲಯಗಳ ಸಂಸ್ಥೆಗಳಿಗೂ ವೋಟ್ ಮಾಡುವ ಅವಕಾಶ ಮಾಡಿಕೊಟ್ಟಿತು. “ಭಾರತದಲ್ಲಿ ಕ್ರಿಕೆಟ್ ನ ಇತಿಹಾಸ ಹಾಗೂ ಆಟ ಜನಪ್ರಿಯಗೊಂಡು ಉತ್ತುಂಗ ತಲುಪಿರುವ ಹಿನ್ನಲೆಯನ್ನು ಪರಿಗಣಿಸಿದರೆ, ಸ್ವಾತಂತ್ರ ಪೂರ್ವದಿಂದಲೂ ದಶಕಗಳ ಕಾಲ ಎಲ್ಲಾ ಸಂಸ್ಥೆಗಳೂ ತಮ್ಮ ಅಮೂಲ್ಯ ಕೊಡುಗೆ ನೀಡಿರುವುದು ಢಾಳಾಗಿ ಕಾಣುತ್ತದೆ. ಹಾಗಾಗಿ ಒಂದು ರಾಜ್ಯ-ಒಂದು ವೋಟ್ ಕಟ್ಟಳೆ ಅಡಿಯಲ್ಲಿ ಕ್ರಿಕೆಟ್ ಬೆಳವಣಿಗೆಗೆ ಶ್ರಮಿಸಿದ ಹಳೇ ಸಂಸ್ಥೆಗಳ ಹಕ್ಕನ್ನು ಮೊಟಕುಗೊಳಿಸುವುದು ತರವಲ್ಲ” ಎಂದು ನ್ಯಾ. ಡಿ.ವೈ ಚಂದ್ರಚೂಡ್ ವಿವರಣೆ ನೀಡಿದರು. ಈ ತೀರ್ಪು ಹಾಗೂ ಅದರ ಹಿನ್ನಲೆ ಬಗ್ಗೆ ಅವರು ಕೊಟ್ಟ ವಿವರಣೆಗಳಲ್ಲಿ ಹುರುಳಿಲ್ಲದೇ ಇರಲಿಲ್ಲ. ಹಾಗಾಗಿ ಈ ವಿಷಯದಲ್ಲಿ ಯಾವುದೇ ಮಾರ್ಪಾಡಿಲ್ಲದೆ ಮೊದಲಿನಂತೆ ಬಿಸಿಸಿಐ ಅಧೀನದಲ್ಲಿರುವ ಎಲ್ಲಾ ಕ್ರಿಕೆಟ್ ಸಂಸ್ಥೆಗಳಿಗೂ ವೋಟ್ ಮಾಡುವ ಹಕ್ಕನ್ನು ನೀಡಿ ಪುರಸ್ಕರಿಸಲಾಗಿದೆ.

ಕೂಲಿಂಗ್ ಆಫ್ (ವಿರಾಮದ) ಅವಧಿ:
ಬಿಸಿಸಿಐ ಮತ್ತು ಅದರಡಿಯ ಎಲ್ಲಾ ರಾಜ್ಯ ಸಂಸ್ಥೆಗಳ ಅಧಿಕಾರಿಗಳು ಮೂರು ವರ್ಷಗಳ ಒಂದು ಆಡಳಿತ ಅವಧಿಯನ್ನು ಪೂರೈಸಿದ ಮೇಲೆ ಅವರಿಗೆ ಮುಂದಿನ ಅವಧಿಯ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕೂಲಿಂಗ್ ಆಫ್(ವಿರಾಮದ) ಅವಧಿಯನ್ನು ಕಡ್ಡಾಯವಾಗಿ ಹೇರುವಂತೆ ಲೋಧಾ ಸಮಿತಿ ಪ್ರಸ್ತಾಪಿಸಿತ್ತು. ಪ್ರಾಬಲ್ಯ ಹೊಂದಿರುವ ಅಧಿಕಾರಿಗಳು ಮತ್ತವರ ಕುಟುಂಬ ಸದಸ್ಯರ ಬಳಿಯೇ ಅಧಿಕಾರದ ಕ್ರೋಢಿಕರಣವಾಗುವುದನ್ನು ತಪ್ಪಿಸುವ ಉದ್ದೇಶ ಈ ಕಟ್ಟಳೆಯದಾಗಿತ್ತು. ಆದರೆ ಸುಪ್ರೀಮ್ ಕೋರ್ಟ್ ಈ ಪ್ರಸ್ತಾವನೆಯನ್ನು ಪುರಸ್ಕರಿಸದೆ ವಿರಾಮದ ಕಟ್ಟಳೆಯಲ್ಲೇ ಕೊಂಚ ಮಾರ್ಪಾಡು ಮಾಡಿತು. ಸತತ ಎರಡು ಆಡಳಿತ ಅವಧಿಯಲ್ಲಿ ಬಿಸಿಸಿಐ ಅಥವಾ ಇತರೆ ರಾಜ್ಯ ಸಂಸ್ಥೆಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಅಧಿಕಾರಿಗಳು ಹಾಗೂ ಪದಾಧಿಕಾರಿಗಳಿಗೆ ಮಾತ್ರ ಈ ಮೂರು ವರ್ಷಗಳ ವಿರಾಮದ ಅವಧಿ ಅನ್ವಯಿಸುವಂತೆ ಕಟ್ಟಳೆ ಹೊರಡಿಸಿತು. “ಹಲವಾರು ಹೊಸ ಕ್ರಿಕೆಟ್ ಯೋಜನೆಗಳು ಮತ್ತು ಆವಿಷ್ಕಾರಗಳು ಕಾರ್ಯ ರೂಪಕ್ಕೆ ಬರಲು ದಶಕಗಳೇ ಆಗುತ್ತವೆ. ಹಾಗಾಗಿ ಕನಿಷ್ಟ ಎರಡು ಅವಧಿಯ(ಆರು ವರ್ಷಗಳು) ಕಾಲ ಅಧಿಕಾರಿಗಳಿಗೆ ಆಡಳಿತ ನೀಡದೆ ಅವರನ್ನು ಹೊರಗಿಟ್ಟರೆ, ನಿರಂತರತೆ ಇಲ್ಲದೆ ಎಷ್ಟೋ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬೀಳುವ ಸಂಭವ ಇದೆ” ಎನ್ನುವುದು ನ್ಯಾ. ಚಂದ್ರಚೂಡ್ ರ ಅಂಬೋಣವಾಗಿತ್ತು. ಬಿಸಿಸಿಐನ ಪ್ರಭಾವಿಗಳಿಗೆ ಪೂರಕವಾಗಿದ್ದ ಚಂದ್ರಚೂಡ್ ರ ಕಟ್ಟಳೆಯ ಮಾರ್ಪಾಡನ್ನು ಸಂತಸದಿಂದ ಎಲ್ಲರೂ ಸ್ವಾಗತಿಸಿದರು.

ಆಯ್ಕೆಗಾರರ ಸಂಖ್ಯೆ ಮೂರರಿಂದ ಐದಕ್ಕೆ!
ಲೋಧಾ ಸಮಿತಿಯು ಮೂರು ಮಂದಿ ಆಯ್ಕೆಗಾರರ ತಂಡವನ್ನು ಪ್ರಸ್ತಾಪಿಸಿತ್ತು. ಅವರಲ್ಲಿ ಒಬ್ಬರು ಅಧ್ಯಕ್ಷರಾಗಿ ಆಯ್ಕೆ ಪ್ರಕ್ರಿಯೆ ಹಾಗೂ ಸಭೆಗಳ ಹೊಣೆ ಹೊತ್ತು ಇನ್ನುಳಿದ ಆಯ್ಕೆಗಾರರಿಗೆ ಮತ್ತು ರಾಜ್ಯ ಸಂಸ್ಥೆಗಳಿಗೆ ಕಾರ್ಯಸೂಚಿ ರೂಪಿಸುವಂತಹ ವ್ಯವಸ್ಥೆ ಸೂಚಿಸಿತ್ತು. ಆದರೆ ಸುಪ್ರೀಮ್ ಕೋರ್ಟ್ ಆಯ್ಕೆಗಾರರ ಸಂಖ್ಯೆಯನ್ನು ಮೂರರಿಂದ ಐದಕ್ಕೆ ಏರಿಸಿತು. “ಬೃಹತ್ ಭಾರತದ ಉದ್ದಗಲಕ್ಕೂ ಸಂಚರಿಸಿ ಅಗಾಧ ಪ್ರಮಾಣದಲ್ಲಿರುವ ಪ್ರತಿಭಾನ್ವಿತ ಆಟಗಾರರನ್ನು, ಅವರ ಪ್ರದರ್ಶನವನ್ನು ಹತ್ತಿರದಿಂದ ಕಂಡು ತಂಡಕ್ಕೆ ಅವರನ್ನು ಆಯ್ಕೆ ಮಾಡುವುದು ಕೇವಲ ಮೂರು ಮಂದಿಯ ತಂಡದ ಮೇಲೆ ಹೆಚ್ಚು ಹೊರೆ ಬೀಳಲಿದೆ. ದೇಸೀ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಎರಡರ ಹೊಣೆಯೂ ಇವರ ಮೇಲಿರುವುದರಿಂದ ಒತ್ತಡದ ನಡುವೆ ಎಷ್ಟೋ ಅಳವುಳ್ಳ ಆಟಗಾರರ ಮೇಲೆ ಆಯ್ಕೆಗಾರರು ಗಮನ ಹರಿಸದೆ ಇರುವ ಅಪಾಯ ಕೂಡ ಇದೆ. ಹಾಗಾಗಿ ಐದು ಮಂದಿ ಆಯ್ಕೆಗಾರರು ಕಾರ್ಯಪ್ರವೃತ್ತರಾಗುವುದು ಸೂಕ್ತ” ಎಂದು ನ್ಯಾ. ಚಂದ್ರಚೂಡ್ ಅವರ ಮಾರ್ಪಡಿಸಿದ ತೀರ್ಪಿನ ಬಗೆಗೆ ವಿವರಣೆ ನೀಡಿದರು. ಈಗ ಬಿಸಿಸಿಐ, ಅಧ್ಯಕ್ಷರೊಬ್ಬರನ್ನೊಳಗೊಂಡ ಐದು ಮಂದಿ ಆಯ್ಕೆಗಾರರ ತಂಡವನ್ನು ಹುಟ್ಟುಹಾಕಿ ಕಾರ್ಯ ನಿರ್ವಹಿಸುತ್ತಿದೆ.

ಬೆಟ್ಟಿಂಗ್ ಅನ್ನು ಅಧಿಕೃತವಾಗಿ ಕಾನೂನುಬದ್ಧಗೊಳಿಸಲು ಶಿಫಾರಸ್ಸು:
ಕ್ರಿಕೆಟ್ ಆಟದಲ್ಲಿ ಸ್ಪಾಟ್ ಫಿಕ್ಸಿಂಗ್, ಅನೈತಿಕ ಬೆಟ್ಟಿಂಗ್ ಹಾಗೂ ಕಪ್ಪು ಹಣ ಹರಿದಾಡುವ ಇನ್ನಿತರ ಭೂಗತ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಲೋಧಾ ಸಮಿತಿಯು ಕಾನೂನಿನ ಚೌಕಟ್ಟಿನಲ್ಲೇ ನಿಯಮ ರೂಪಿಸಿ ಬೆಟ್ಟಿಂಗ್ ಅನ್ನು ಅಧಿಕೃತಗೊಳಿಸುವಂತೆ ಸೂಚನೆ ನೀಡಿತು. ಹಾಗೂ ಆಟಗಾರರು, ಅಧಿಕಾರಿಗಳು ಮತ್ತು ಕ್ರಿಕೆಟ್ ಗೆ ಸಂಭಂದಪಟ್ಟವರು ಬೆಟ್ಟಿಂಗ್ ನಲ್ಲಿ ತೊಡಗದಂತೆ ಕಟ್ಟಳೆ ಇರತಕ್ಕದು ಎಂಬ ಅನಿಸಿಕೆ ಕೂಡ ವ್ಯಕ್ತ ಪಡಿಸಿತು. ಆದರೆ ಮ್ಯಾಚ್ ಫಿಕ್ಸಿಂಗ್ ನ್ನು ಕ್ರಿಮಿನಲ್ ಅಪರಾಧವಾಗಿಸಬೇಕೆಂದು ಶಿಫಾರಸ್ಸು ಮಾಡಿತು. ಬೆಟ್ಟಿಂಗ್ ರಾಜ್ಯಪಟ್ಟಿಯ ವಿಷಯವಾಗಿರುವುದರಿಂದ ಸಾರ್ವತ್ರಿಕವಾಗಿ ಬೆಟ್ಟಿಂಗ್ ನಿಯಮ ಜಾರಿಗೊಳಿಸಲು ಕಾನೂನಿನಲ್ಲಿ ಕೆಲವು ತಿದ್ದುಪಡಿಗಳ ಅಗತ್ಯತೆಯನ್ನೂ ಜೊತೆಗೆ ಶಿಫಾರಸ್ಸು ಮಾಡಿತು. ಬೆಟ್ಟಿಂಗ್ ಬಗೆಗೆ ಲೋಧಾ ವರದಿಯ ಶಿಫಾರಸನ್ನು ಮನಗಂಡ ಸುಪ್ರೀಮ್ ಕೋರ್ಟ್ ಕಾನೂನು ಆಯೋಗದ (Law Commission ) ಬಳಿ ಹೆಚ್ಚಿನ ವಿವರಣೆ ಕೇಳಿ ಅದರ ಅಭಿಪ್ರಾಯವನ್ನೂ ಮಂಡಿಸುವಂತೆ ಕೋರಿತು. ಆಯೋಗವೂ ಬೆಟ್ಟಿಂಗ್ ಅನ್ನು ಸಮರ್ಥಿಸುತ್ತಾ ಕಾನೂನಿನ ಚೌಕಟ್ಟಿನಲ್ಲಿ ಅಧಿಕೃತಗೊಳಿಸುವುದರಿಂದ ಕಪ್ಪು ಹಣದ ವ್ಯವಹಾರಕ್ಕೆ ಕಡಿವಾಣ ಬಿದ್ದು ಸರ್ಕಾರಕ್ಕೆ ಹೆಚ್ಚು ಆದಾಯ ಬರಲಿದೆ ಎಂದು ಸುಪ್ರೀಮ್ ಕೋರ್ಟ್ ಗೆ ತಿಳಿಸಿತು. ಹಾಗೂ ಕಾನೂನಿನ ಅಡಿಯಲ್ಲಿ ಗೊಂದಲಗಳಿಗೆ ಎಡೆ ಇರದ ಬೆಟ್ಟಿಂಗ್ ಕಟ್ಟಳೆಗಳನ್ನು ರೂಪಿಸಿ ಜಾರಿಗೊಳಿಸುವ ಬಗೆಗೆ ಅಂತಿಮ ತೀರ್ಮಾನ ಸಂಸತ್ ಮತ್ತು ರಾಜ್ಯಗಳ ವಿಧಾನ ಸಭೆಗಳು ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿತು. ಹೀಗೆ ಲೋಧಾ ವರದಿ ಮತ್ತು ಕಾನೂನು ಆಯೋಗ ಎರಡರಿಂದಲೂ ಭಾರತದಲ್ಲಿ ಬೆಟ್ಟಿಂಗ್ ಅನ್ನು ಕಾನೂನುಬದ್ಧಗೊಳಿಸುವ ಬಗ್ಗೆ ಹಸಿರು ನಿಶಾನೆ ದೊರೆತು ವರ್ಷಗಳೇ ಕಳೆದರೂ ಈ ವಿಚಾರದಲ್ಲಿ ಯಾವುದೇ ಬೆಳವಣಿಗೆ ಇನ್ನೂ ಕಂಡು ಬಂದಿಲ್ಲ. ಮುಂದಿನ ದಿನಗಳಲ್ಲಾದರೂ ಈ ನಿಟ್ಟಿನಲ್ಲಿ ಬದಲಾವಣೆಯಾಗುವುದೇನೋ ಕಾದು ನೋಡಬೇಕು.

ಕೋರ್ಟ್ ನ ಸಮಗ್ರ ವಿವರಣೆ ಹಾಗೂ ಸೂಚನೆ:
ಕ್ರಿಕೆಟ್ ಆಟವನ್ನು ಇನ್ನು ಸಭ್ಯರ ಆಟ ಎಂದು ಪರಿಗಣಿಸಲಾಗದು. ಐಪಿಎಲ್ ನ ಹುಟ್ಟು ಭಾರತದ ಕ್ರಿಕೆಟ್ ಗೆ ಹೊಸ ಆಯಾಮ ನೀಡಿ ಹಲವಾರು ಯುವ ಆಟಗಾರರಿಗೆ ತಮ್ಮ ಪ್ರತಿಭೆ ಸಾಬೀತು ಮಾಡುವ ಅವಕಾಶದೊಂದಿಗೆ ಹಣ, ಕೀರ್ತಿ ಹಾಗೂ ಯಶಸ್ಸನ್ನೇನೋ ತಂದು ಕೊಟ್ಟಿತು. ಆದರೆ ಅದರ ಜೊತೆಗೆ ಈ ಅದ್ಭುತ ಆಟವನ್ನು ಸ್ಪಾಟ್ ಫಿಕ್ಸಿಂಗ್, ಜೂಜು, ಮೋಸದಾಟ ಹಾಗೂ ಭೂಗತ ಜಗತ್ತಿನ ಸಂಪರ್ಕಕ್ಕೆ ತೆರೆದುಕೊಳ್ಳುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಆದ್ದರಿಂದ ಆಟದ ಜೊತೆಗೆ ದೇಶಕ್ಕೂ ಕಳಂಕ ತರುವ ಇಂತಹ ದೊಡ್ಡ ಸಮಸ್ಯೆಗಳನ್ನು ಬಗೆಹರಿಸಲು ಭಾರತದ ಕಾನೂನು ವ್ಯವಸ್ಥೆ ಪಣತೊಟ್ಟು ಲೋಧಾ ಸಮಿತಿಯನ್ನು ನೇಮಿಸಿ ಕಾರ್ಯಪ್ರವೃತ್ತವಾಯಿತು. ಇದರೊಟ್ಟಿಗೆ ಸುಪ್ರೀಂ ಕೋರ್ಟ್ ಲೋಧಾ ಸಮಿತಿಯ ವರದಿಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿ ಬಿಸಿಸಿಐ ಮುಂದಿಟ್ಟು ಇದನ್ನು ತಿರಸ್ಕರಿಸುವುದು ಸೂಕ್ತವಲ್ಲ ಎಂದು ಹೇಳಿ, ಕ್ರಿಕೆಟ್ ಉದ್ಧಾರಕ್ಕಾಗಿ ಒಡನೆ ಈ ವರದಿಯ ಅಂಶಗಳು ಜಾರಿಯಾಗಬೇಕು ಎಂದು ತಾಕೀತುಮಾಡಿತು. ಹಾಗೂ ಲೋಧಾ ಸಮಿತಿ ಮತ್ತು ಬಿಸಿಸಿಐ ನಡುವಿನ ತಕರಾರುಗಳನ್ನು ಆಡಳಿತದಲ್ಲಿ ರಾಜಿಯಾಗದೆ ಕ್ರಿಕೆಟ್ ಒಳಿತಿನ ಹಿತದೃಷ್ಟಿಯಿಂದ ಬಗೆಹರಿಸಿಕೊಳ್ಳಬೇಕು ಎಂದೂ ಸುಪ್ರೀಮ್ ಕೋರ್ಟ್ ಒತ್ತಿ ಹೇಳಿತು.

ಭಾರತದ ಕ್ರೀಡಾ ಇತಿಹಾಸದಲ್ಲಿ ಲೋಧಾ ಸಮಿತಿ ಒಂದು ಮೈಲಿಗಲ್ಲು ಎಂದೇ ಹೇಳಬೇಕು. ಕ್ರಿಕೆಟ್ ಮಾತ್ರವಲ್ಲದೆ ಬೇರೆ ಆಟಗಳ ವಿಷಯದಲ್ಲೂ ಮುಂದೆ ಬರಬಹುದಾದ ತೊಡಕುಗಳು ಹಾಗೂ ಹಗರಣಗಳನ್ನು ಹಿಮ್ಮೆಟ್ಟಲು ಲೋಧಾ ವರದಿ ಒಂದು ಮಾನದಂಡವಾಗಬಹುದು. ಹಾಗಾಗಿ ಲೋಧಾ ಸಮಿತಿಯ ವರದಿ ನಮ್ಮ ದೇಶದಲ್ಲಿ ಕ್ರೀಡೆಗಳ ಏಳಿಗೆಯೆಡೆಗೆ ಕಾನೂನು ವ್ಯವಸ್ಥೆಯ ಮೊದಲ ದಿಟ್ಟ ಹೆಜ್ಜೆ ಎಂದು ಇತಿಹಾಸ ಇನ್ನು ಮುಂದೆ ನೆನೆಯಲಿದೆ.

ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.

ಇದನ್ನೂ ಓದಿ:

Spread the love