ಲೇಖನಗಳು

ಮೈಮುಚ್ಚುವ ಬಟ್ಟೆಯ ವಿವಾದ ಮರ್ಯಾದೆ ತೆಗೆಯುವ ಹಂತಕ್ಕೆ ಹೋದಾಗ: ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮತ್ತು ಸಂವಿಧಾನ

ಮನುಷ್ಯ ಸಂಘ ಜೀವಿ, ಒಬ್ಬನೇ ಬದುಕಲಾರ, ಗುಂಪು ಗುಂಪಾಗಿ, ಸಮಾಜಗಳನ್ನು ಕಟ್ಟಿ ಅವುಗಳ ಜೊತೆ ಮಾತ್ರ ಬದುಕಬಲ್ಲ ಪ್ರಾಣಿ ಎಂದು ಶಾಲೆಯ ದಿನಗಳಲ್ಲಿ ಓದಿದ್ದೇವೆ. ಒಂಟಿಯಾಗಿ ಬದುಕಲಾರದ ಈ ಪ್ರಾಣಿ, ಗುಂಪು ಮಾಡಿಕೊಳ್ಳುವಾಗ ನಾನಾ ತರದ ಗುರುತುಗಳನ್ನು ಹುಡುಕಿ, ಯಾವೆಲ್ಲ ರೀತಿಯಲ್ಲಿ ಜನರನ್ನು ವರ್ಗೀಕರಿಸಲು ಸಾಧ್ಯವೋ, ಆ ಎಲ್ಲ ರೀತಿಯಲ್ಲಿ ಗುಂಪುಗಳನ್ನು ಕಟ್ಟುತ್ತದೆ. ದೇಶ, ಭಾಷೆ, ಜನಾಂಗ, ಜಾತಿ, ಒಳಜಾತಿ, ವೃತ್ತಿ, ಲಿಂಗ, ಅಂತಸ್ತು ಹೀಗೆ ಎಷ್ಟು ರೀತಿಯ ವಿವಿಧ ಗುರುತುಗಳನ್ನು ನಮಗೆ ಕೊಡುತ್ತದೆ ಈ ಸಮಾಜ? ಆದರೆ, ಅಮಾರ್ತ್ಯ ಸೆನ್ ಅವರ ಪುಸ್ತಕದಲ್ಲಿ[i] ಹೇಳುವಂತೆ ಅದರಲ್ಲಿ ಯಾವುದೋ ಒಂದು ಗುರುತಿಗೆ ಸಂಪೂರ್ಣವಾಗಿ ಜೋತು ಬಿದ್ದು, ಬಾಕಿ ಗುರುತುಗಳನ್ನು ಮರೆತುಬಿಡುವಾಗಲೇ, ಹಿಂಸೆ ಹುಟ್ಟಿಕೊಳ್ಳುವುದು. ಈಗ ಆಗುತ್ತಿರುವುದೂ ಹಾಗೆಯೇ ಅನಿಸುತ್ತದೆ.

ಹಿಜಾಬ್ ತೊಡುತ್ತಾರೆ ಎಂಬ ಕಾರಣಕ್ಕೆ ಕೆಲ ಹುಡುಗಿಯರನ್ನು ಉಡುಪಿಯ ಕಾಲೇಜೊಂದು ಕ್ಲಾಸಿನೊಳಕ್ಕೆ ಸೇರಿಸುವುದಿಲ್ಲ ಎಂಬ ನಿಲುವು ತೆಗೆದುಕೊಂಡಿತು. ಅದರ ಬೆನ್ನಲ್ಲೇ ಬೇರೆ ಕೆಲ ಕಾಲೇಜುಗಳೂ ಉಡುಪಿ ಮತ್ತು ಕುಂದಾಪುರದಲ್ಲಿ ಈ ನಿಲುವು ತೆಗೆದುಕೊಂಡಿವೆ. ಹಿಜಾಬ್ ತೊಡುವುದಕ್ಕೆ ಪ್ರತಿರೋಧವಾಗಿ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಹೊದ್ದು ಕಾಲೇಜಿಗೆ ಬರುತ್ತಿದ್ದಾರೆ. ಈ ಲೇಖನ ಬರೆಯುವ ಹೊತ್ತಿಗೆ ನೀಲಿ ಶಾಲೂ ಪಟ್ಟಿಗೆ ಸೇರಿದೆ; ಇನ್ಯಾವ ಬಣ್ಣಗಳು ರಂಗಕ್ಕೆ ಇಳಿಯಲಿವೆ ಎಂಬುದನ್ನು ದೇವರೇ ಬಲ್ಲ.  ಕೆಲ ಕಾಲೇಜುಗಳಲ್ಲಿ, ಕೇಸರಿ ಶಾಲು ಮತ್ತು ಹಿಜಾಬ್ ಎರಡನ್ನು ತೊಟ್ಟು ಬಂದವರಿಗೂ ಪ್ರವೇಶವಿಲ್ಲ. ರಾಜ್ಯದಲ್ಲಿ ಇರುವ ಇತರೆ ಹಲವು ಗಂಭೀರ ಸಮಸ್ಯೆಗಳನ್ನು ಮರೆಸುವಂತೆ ಈ ವಿವಾದ ಬಿಸಿ ಬಿಸಿ ಚರ್ಚೆಗಳನ್ನು ಹುಟ್ಟು ಹಾಕಿದೆ. ಇದನ್ನು ಕಾನೂನಿನ ಕಣ್ಣಲ್ಲಿ ನೋಡುವ ಪ್ರಯತ್ನ ಈ ಲೇಖನ.

ಹಿಜಾಬ್ ಎನ್ನುವ ಪದ ಮೂಲತಃ ಪರ್ಷಿಯನ್ ನುಡಿಯಿಂದ ಬಂದಿದ್ದು, ಮುಚ್ಚುವುದು ಎಂದರ್ಥ. ಸಾಧಾರಣವಾಗಿ ಮುಸ್ಲಿಂ ಹೆಣ್ಣುಮಕ್ಕಳು ಮತ್ತು ಹೆಂಗಸರು, ಕೂದಲು ಕಾಣದಂತೆ ತಲೆಯ ಸುತ್ತ ಈ ವಸ್ತ್ರವನ್ನು ತೊಡುತ್ತಾರೆ. ಬುರ್ಖಾ ಎಂದರೆ ಮುಖವನ್ನೂ ಒಳಗೊಂಡು ಮೈಯನ್ನು ಸಂಪೂರ್ಣವಾಗಿ ಮುಚ್ಚುವ ದಿರಿಸಾಗಿದ್ದು, ಹಿಜಾಬ್ ತಲೆ ಕೂದಲಿನ ಗವಸು. ಇದನ್ನು ತೊಡುವ ರೂಢಿ ಯಾವಾಗಿಂದ ಬಂತು, ಯಾಕೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಾನೂನಿನ ನೋಟದಲ್ಲಿ ಅಪ್ರಸ್ತುತ. ಹಾಗಾಗಿ ಹಿಜಾಬ್ ತೊಡುವ ಹಕ್ಕು ಮತ್ತು ಶಾಲೆ – ಕಾಲೇಜುಗಳಲ್ಲಿ ಸಮವಸ್ತ್ರದ ಮೇಲೆ ಅದರ ಪರಿಣಾಮವನ್ನು ನೋಡೋಣ.

ಹಿಜಾಬ್ ತೊಡುವ ಹಕ್ಕು ಭಾರತದ ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯದ (ಅನುಚ್ಛೇದ 25) ಹಕ್ಕು, ಜೀವಿಸುವ ಹಕ್ಕು (ಅನುಚ್ಛೇದ 21), ಅಭಿವ್ಯಕ್ತಿ ಸ್ವಾತಂತ್ರ್ಯ (ಅನುಚ್ಛೇದ 19 (1) (a), ಮತ್ತು ಸಮಾನತೆಯ ಹಕ್ಕು (ಅನುಚ್ಛೇದ 14)ಗಳಡಿಯಲ್ಲಿ ಇದೆ ಎಂದು ವಾದಿಸಬಹುದು. ಆದರೆ ಎಲ್ಲರಿಗೂ ಗೊತ್ತಿರುವಂತೆ ಈ ಯಾವುದೇ ಹಕ್ಕುಗಳು ಮಿತಿ ಇಲ್ಲದೆ ಇರುವುದಲ್ಲ. ಹಾಗಾಗಿ, ಹಿಜಾಬ್ ತೊಡುವ ಹಕ್ಕನ್ನು, ಸರಕಾರ ಸಂವಿಧಾನದಲ್ಲಿ ಹೇಳಿದ ಮಿತಿಯ ಅಡಿಯಲ್ಲಿ ಮೊಟಕುಗೊಳಿಸಬಹುದೇ ಎಂಬುದು ಮಾತ್ರ ಕಾನೂನಿನ ಕಣ್ಣಲ್ಲಿ ಸರಿಯಾದ ಪ್ರಶ್ನೆ. ಬಾಕಿ ವಿಚಾರಗಳೆಲ್ಲ ಒಂದೋ ಅರ್ಥವಿಲ್ಲದ ಹರಟೆ ಅಥವಾ ದುರುದ್ದೇಶಪೂರಿತವಾದ ಹೇಳಿಕೆಗಳು.

ಅನುಚ್ಛೇದ 25 ರ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ನಮ್ಮ ಸಂವಿಧಾನ ತನ್ನ ನಂಬಿಕೆಯನ್ನು ಅನುಸರಿಸುವ ಹಕ್ಕು ನೀಡುತ್ತದೆ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ಇರುವ ಪರಿಮಿತಿ ಎಂದರೆ, ಭಾಗ ಮೂರರ ಇತರ ಅನುಚ್ಛೇದಗಳು, ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಸ್ವಾಸ್ಥ್ಯ. ಇವುಗಳಲ್ಲಿ ಯಾವುದು ಹಿಜಾಬ್ ತೊಡುವುದರಿಂದ ಹಾಳಾಗುತ್ತದೆ ಎಂದು ನೋಡಬೇಕಾಗುತ್ತದೆ. ಮೈಮುಚ್ಚುವ ಹಿಜಾಬ್ ಸಾರ್ವಜನಿಕ ಸ್ವಾಸ್ಥ್ಯಕ್ಕೆ ಮತ್ತು ನೈತಿಕತೆಗೆ ಧಕ್ಕೆ ತರುತ್ತದೆ ಎನ್ನಲು ಸಾಧ್ಯವಿಲ್ಲ. ಇನ್ನು ಸಮವಸ್ತ್ರ ತೊಡದೆ ಇರುವುದು ‘ಸುವ್ಯವಸ್ಥೆ’ ಅಲ್ಲ ಎಂದು ವಾದಿಸುವರಾದರೆ, ಸಾರ್ವಜನಿಕ ಸುವ್ಯವಸ್ಥೆ ಎಂದು ಅನುಚ್ಛೇದದಲ್ಲಿ ಹೇಳುವುದಕ್ಕೆ ಸರಳವಾದ ವ್ಯವಸ್ಥೆ ಎಂಬ ಅರ್ಥ ಕೊಡಲು ಆಗುವುದಿಲ್ಲ. ಯಾಕೆಂದರೆ ಮೂಲಭೂತ ಹಕ್ಕುಗಳ ಪರಿಮಿತಿಯನ್ನಾಗಿ ಅವನ್ನು ಸೂಚಿಸಿದ್ದಾರೆ. ಎಲ್ಲ ಕಾನೂನುಗಳೂ, ನಿಯಮಗಳೂ ಒಂದು ವ್ಯವಸ್ಥೆಯ ಭಾಗವಾಗಿಯೇ ಇರುತ್ತವೆ. ಹಾಗಾಗಿ ಅನುಕೂಲಕ್ಕೆ ಮಾಡಿಕೊಳ್ಳುವ ವ್ಯವಸ್ಥೆಗೆ ತೊಂದರೆ ಆಗುವುದನ್ನು ಸಾರ್ವಜನಿಕ ಸುವ್ಯವಸ್ಥೆಗೆ ಚ್ಯುತಿಯಾಗಿದೆ ಎಂದು ಹೇಳಲಾಗುವುದಿಲ್ಲ. ದೊಂಬಿ, ಗಲಭೆಗಳು, ಅಥವಾ ದೊಡ್ಡ ಪ್ರಮಾಣದ ಹಿಂಸೆ ಮುಂತಾದವುಗಳ ಆಗದಿರುವಂತೆ ನೋಡಿಕೊಳ್ಳುವುದನ್ನು ಮಾತ್ರ ಸಾರ್ವಜನಿಕ ಸುವ್ಯವಸ್ಥೆ ಎನ್ನಬಹುದು. ಹಿಜಾಬ್ ತೊಡುವುದರಿಂದ ಯಾರಿಗೂ ಹಿಂಸೆಯೋ ಅಥವಾ ಸಮಾಜದ ಶಾಂತಿ ಭಂಗವೋ ಆಗದೆ ಇರುವುದರಿಂದ, ಧಾರ್ಮಿಕ ಸ್ವಾತಂತ್ರ್ಯದ ಅಡಿಯಲ್ಲಿ ಸಂವಿಧಾನ ಇದನ್ನು ಕಾಪಾಡುತ್ತದೆ ಎನ್ನಬಹುದು. ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ರೂಢಿಯು ಆ ಮತಕ್ಕೆ ಎಷ್ಟು ಬೇಕಾದದ್ದು ಎಂಬ ಪರೀಕ್ಷೆಯನ್ನೂ ಮಾಡಿದೆ. ಆದರೆ ಆ ಅಳತೆಗೋಲು ಪ್ರಶ್ನಾತೀತವಲ್ಲ.

ಪುಟ್ಟಸ್ವಾಮಿ ತೀರ್ಪಿನಲ್ಲಿ[ii] ಸರ್ವೋಚ್ಚ ನ್ಯಾಯಾಲಯ ಗೌಪ್ಯತೆಯ ಹಕ್ಕನ್ನು ಜೀವಿಸುವ ಹಕ್ಕಿನಡಿಯಲ್ಲಿ ಮೂಲಭೂತ ಹಕ್ಕಾಗಿ ಗುರುತಿಸಿದೆ. ಗೌಪ್ಯತೆಯ ಮತ್ತು ಸ್ವಾತಂತ್ರ್ಯದ ಹಕ್ಕಿನಲ್ಲಿ, ಯಾವುದು ಸರಿ ಯಾವುದು ತಪ್ಪು ಎಂದು ಯೋಚಿಸಿ ತೀರ್ಮಾನ ತೆಗೆದುಕೊಳ್ಳುವ ಹಕ್ಕೂ ಒಳಗೊಂಡಿದೆ ಎಂದು ಕೋರ್ಟ್ ಹೇಳುತ್ತದೆ. ಕೆಲವರು ಹಿಜಾಬ್ ತೊಡುವುದು ಅವರ ಮತ ಬೋಧಿಸುತ್ತದೆ ಎನ್ನುವುದಕ್ಕಿಂತ ಬೇರೆಯದೇ ಕಾರಣಕ್ಕಾಗಿ ಇರಬಹುದು. ಒಬ್ಬ ಮುಸ್ಲಿಂ ಮೂರನೇ ಲಿಂಗಿಗೆ ಹೆಣ್ಣು ಎಂದು ಗುರುತಿಸಿಕೊಳ್ಳುವುದಕ್ಕಾಗಿ, ರೂಢಿ, ಸುರಕ್ಷತೆ ಹೀಗೆ. ಹಾಗಾಗಿ ಇದು ಅನುಚ್ಛೇದ 25 ರ ಅಡಿಯಲ್ಲಿ ಮಾತ್ರವಲ್ಲದೆ, 21 ರ ಅಡಿಯಲ್ಲಿಯೂ ಬರುತ್ತದೆ. ಅನುಚ್ಛೇದ 21 ರ ಅಡಿಯಲ್ಲಿನ ಹಕ್ಕಿಗೆ ಪರಿಮಿತಿ ಎಂದರೆ ನ್ಯಾಯವಾದ ಕಾನೂನು. ಸುಲಭದಲ್ಲಿ ಹೇಳುವುದೆಂದರೆ, ಒಂದು ಕಾನೂನು ತಂದು, ಸರಿಯಾದ ಕಾರಣಗಳನ್ನು ಕೊಟ್ಟು, ಅದು ಸಂವಿಧಾನದ ಪರೀಕ್ಷೆಯಲ್ಲಿ ಪಾಸಾಗುವ ಹಾಗಿದ್ದರೆ, ಆ ಕಾನೂನಿನ ಮೂಲಕ ಅನುಚ್ಛೇದ 21 ರ ಅಡಿಯ ಹಕ್ಕುಗಳನ್ನು ಮೊಟಕುಗೊಳಿಸಲು ಸಾಧ್ಯ. ಅಂತಹ ಒಂದು ಕಾನೂನು ಹಿಜಾಬ್ ಪ್ರಕರಣದಲ್ಲಿ ಇನ್ನೂ ಇಲ್ಲ. ಹಾಗಾಗಿ, ಹುಡುಗಿಯರ ಜೀವಿಸುವ ಹಕ್ಕಿನಡಿಯಲ್ಲಿಯೂ ಹಿಜಾಬ್ ತೊಡುವ ಹಕ್ಕನ್ನು ಗುರುತಿಸಬಹುದಾಗಿದೆ.

ಇನ್ನು ಹಿಜಾಬ್ ತೊಡುವುದು ವ್ಯಕ್ತಿ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸುವ ಬಗೆ ಎಂದೂ ಹೇಳಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿರುವ ಮಿತಿಯನ್ನು ಅನುಚ್ಛೇದ 19 (2) ರಲ್ಲಿ ಹೇಳಲಾಗಿದೆ. ಅದರ ಪ್ರಕಾರ ಭಾರತ ಸಾರ್ವಭೌಮತೆ, ಸುರಕ್ಷತೆ, ವಿದೇಶಗಳ ಜೊತೆ ಒಳ್ಳೆಯ ಸಂಬಂಧಗಳು, ಕಾನೂನು ಸುವ್ಯವಸ್ಥೆ, ನೈತಿಕತೆ, ಸಭ್ಯತೆ ಮುಂತಾದವುಗಳ ಸಲುವಾಗಿ, ಅಥವಾ ನ್ಯಾಯಾಲಯದ ನಿಂದನೆ ಅಥವಾ ಯಾವುದೇ ಅಪರಾಧಕ್ಕೆ ನೀಡುವ ಕುಮ್ಮಕ್ಕು ಮುಂತಾದ ವಿಚಾರಗಳಿಗೆ ಸಂಬಂಧಿಸಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಮಂಜಸವಾದ ಕಟ್ಟಳೆಗಳನ್ನು ಹೇರಬಹುದು. ಹಿಜಾಬ್ ತೊಡುವುದರಿಂದ ಮೇಲೆ ಹೇಳುವ ಯಾವ ಅಂಶಗಳಿಗೂ ತೊಂದರೆಯಾಗದೆ ಇರುವುದರಿಂದ, ಸಂವಿಧಾನ ಅನುಚ್ಛೇದ 19 ರ ಅಡಿಯಲ್ಲಿಯೂ ಆ ಹಕ್ಕು ಕಾಪಾಡಲ್ಪಟ್ಟಿದೆ ಎನ್ನಬಹುದು.

ಇನ್ನು ಸಮಾನತೆಯ ಅಡಿಯಲ್ಲಿ ಹೇಗೆ ಈ ಹಕ್ಕು ಬರುತ್ತದೆ ಎಂಬುದು ಕೆಲವರ ಪ್ರಶ್ನೆ ಇರಬಹುದು. ಸಮಾನತೆ ಎಂದರೆ ಎಲ್ಲರನ್ನೂ ಸಮಾನವಾಗಿ ನೋಡುವುದು ಎನ್ನುವುದಕ್ಕಿಂತ, ಸಮಾನರನ್ನು ಸಮಾನವಾಗಿ ನೋಡುವುದು ಎಂಬುದಾಗಿದೆ. ಸಿಖ್ ಮತದವರಿಗೆ ಪಗಡಿ ತೊಡುವುದು ಕಡ್ಡಾಯ, ಅದು ಅವರಿಗೆ ಅವರ ಮತ ಭೋಧಿಸುವ ಒಂದು ವಿಚಾರ. ಅದೇ ರೀತಿ ಹಿಜಾಬ್ ಕೂಡಾ ಮತ ಭೋಧಿಸುವ ಒಂದು ರೂಢಿ, ಪಗಡಿಗೆ ಮಾನ್ಯತೆ, ಅವಕಾಶ ದೊರಕಬೇಕಾದರೆ ಹಿಜಾಬಿಗೂ ಸಿಗಬೇಕು ಎಂದು ವಾದಿಸಲು ಸಾಧ್ಯವಿದೆ.

ಆದರೆ ಇದೆಲ್ಲದರ ಜೊತೆಗೆ ನಾವು ಮರೆಯಬಾರದ ವಿಚಾರವೆಂದರೆ ಹಿಜಾಬನ್ನು ಎಷ್ಟು ಜನ ತಮ್ಮ ಇಚ್ಛೆಯಿಂದಲೇ ತೊಡುತ್ತಾರೆ ಎಂಬ ಪ್ರಶ್ನೆ. ಯಾವುದೇ ಒಂದು ರೂಢಿ ಅಥವಾ ವಸ್ತ್ರ ಅಥವಾ ಕಡ್ಡಾಯ ಮಾಡುವುದು ಅದರಲ್ಲಿಯೂ ಹೆಣ್ಣು ಮಕ್ಕಳ ಮೇಲೆ, ಹೆಂಗಸರ ಮೇಲೆ ಮಾತ್ರ ಕಡ್ಡಾಯ ಮಾಡುವುದು ಖಂಡಿತವಾಗಿಯೂ ಪುರುಷ ಪ್ರಧಾನ ಮತದ ಲಕ್ಷಣ. ಮೈ – ಮುಖವನ್ನು ಹೆಂಗಸರು ಮುಚ್ಚಿಕೊಳ್ಳಲೇಬೇಕು ಎನ್ನುವ ಹಿಜಾಬ್ – ಬುರ್ಖಾಗಳ ಹಿಂದಿನ ಮನಸ್ಥಿತಿಯೂ ಇದಕ್ಕೆ ಹೊರತಲ್ಲ. ಎಷ್ಟೋ ಮನೆಗಳಲ್ಲಿ, ಸಣ್ಣವರಿದ್ದಾಗಿಂದಲೇ ಈ ವಿಚಾರವನ್ನು ತಲೆಯಲ್ಲಿ ತುಂಬಿ, ಮಕ್ಕಳು ಸ್ವಇಚ್ಚೆ ಎಂದೆನ್ನುವಾಗಲೂ, ಅದು ಅವರ ಕುಟುಂಬ ಅಥವಾ ಸಮಾಜದ ಪ್ರಭಾವ ಮಾತ್ರವೇ ಆಗಿರುತ್ತದೆ. ಹಲ ಅರಬ್ ದೇಶಗಳಲ್ಲಿ ಎಲ್ಲ ಹೆಂಗಸರೂ ಹಿಜಾಬ್ ತೊಡುವುದು ಕಡ್ಡಾಯವಾಗಿದೆ, ಇಷ್ಟಾನಿಷ್ಟಗಳ ಪ್ರಶ್ನೆಯೇ ಅಲ್ಲಿಲ್ಲ. ಆ ರಾಷ್ಟ್ರಗಳಲ್ಲಿ, ಹಿಜಾಬಿನಿಂದ ಹೊರ ಬರಲು ಅಲ್ಲಿನ ಹೆಂಗಸರು ಹೋರಾಡುತ್ತಿದ್ದಾರೆ. ಆದರೆ, ನೆನಪಿನಲ್ಲಿಡಬೇಕು, ಈಗ ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸಿರುವುದು, ಮುಸ್ಲಿಂ ಹೆಣ್ಣು ಮಕ್ಕಳ ಸ್ವಾತಂತ್ರ್ಯ ಕಾಪಾಡುವ ದೃಷ್ಟಿಯಿಂದ ಯಾವುದೇ ಕಾನೂನು ಮಾಡಿ, ಅದರ ಬಲದ ಮೇಲಲ್ಲ. ಹಿಜಾಬ್ ದಾಸ್ಯದ ಸಂಕೇತ ಎಂದು ಹೇಳುವವರಿದ್ದರೂ, ಅದರಿಂದ ಹೊರಬರಲು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವುದು ಅತ್ಯಗತ್ಯವಾಗಿದೆ. ಕಾಲೇಜಿಗೆ ಪ್ರವೇಶ ನಿರ್ಬಂಧಿಸುವುದರಿಂದ, ಎಷ್ಟೋ ಹೆಣ್ಣು ಮಕ್ಕಳ ಶಿಕ್ಷಣಕ್ಕೇ ಕುತ್ತು ಬರಬಹುದು.

ಪ್ರಾಥಮಿಕ ಶಿಕ್ಷಣದ ಹಕ್ಕು ಅಂದರೆ ಹದಿನಾಲ್ಕು ವರ್ಷಗಳವರೆಗಿನ ಹಕ್ಕು ಮೂಲಭೂತವಾದದ್ದೆಂದು ಅನುಚ್ಛೇದ 21A ನಲ್ಲಿ ನಮ್ಮ ಸಂವಿಧಾನ ಹೇಳಿದೆ. ಫರ್ಜಾನಾ ಬತೂಲ್ ಎಂಬ ಕೇಸಿನಲ್ಲಿ[iii] ಸುಪ್ರೀಂ ಕೋರ್ಟ್, ಉನ್ನತ ಶಿಕ್ಷಣ ಮೂಲಭೂತ ಹಕ್ಕೆಂದು ಕರೆಯಲಾಗದಿದ್ದರೂ ಸರಕಾರದ ಮೇಲೆ ಎಲ್ಲ ಹಂತದ ಶಿಕ್ಷಣವೂ ಎಲ್ಲರಿಗೂ ಲಭ್ಯವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ, ಹಿಜಾಬಿನ ನೆಪದಲ್ಲಿ ಮಕ್ಕಳಿಗೆ ಶಿಕ್ಷಣ ನಿರಾಕರಿಸುವುದು ಯಾವ ತರದಲ್ಲೂ ಕಾನೂನಿನ ದೃಷ್ಟಿಯಿಂದ ಸರಿಯಲ್ಲ.

ಇನ್ನು ಸಮವಸ್ತ್ರದ ವಿಚಾರಕ್ಕೆ ಬಂದರೆ, ನಿಜ, ಶಾಲೆಗಳಲ್ಲಿ ಸಮವಸ್ತ್ರ ಮಕ್ಕಳಲ್ಲಿನ ಭೇದ ಭಾವವನ್ನು ಹೋಗಲಾಡಿಸಲಿಕ್ಕೆ ಜಾರಿಗೆ ತಂದ ನಿಯಮ. 2015 ರಲ್ಲಿ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಿಜಾಬ್ ಅಥವಾ ಯಾವುದೇ ರೀತಿಯ ಟೊಪ್ಪಿ, ಅಥವಾ ನಕಲು ಮಾಡಲು ಅವಕಾಶವಿರುವ ಜಾಕೆಟ್ ಮುಂತಾದವುಗಳನ್ನು ತೊಡುವಂತಿಲ್ಲ ಎಂಬ ನಿಯಮವನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿತ್ತು. ವಿದ್ಯಾರ್ಥಿ ಪೊಲೀಸ್ ಸಮವಸ್ತ್ರದಲ್ಲಿ ಹಿಜಾಬ್ ತೊಡುವ ಅಥವಾ ತುಂಬು ತೋಳಿನ ಅಂಗಿ ಧರಿಸುವ ಮಾರ್ಪಾಡನ್ನು ತರುವಂತಿಲ್ಲ ಎಂದು ಜನವರಿಯಲ್ಲಿ ಕೇರಳ ಸರ್ಕಾರ ಆದೇಶ ಹೊರಡಿಸಿದೆ. ಈ ವಿಚಾರಗಳು ಹಿಜಾಬಿಗೆ ಸಂಬಂಧಪಟ್ಟದ್ದಾದರೂ ಹಲ ವಿಚಾರಗಳಲ್ಲಿ ಬೇರೆಯಾಗಿವೆ. ನೀಟ್ ಪರೀಕ್ಷೆಯ ವಿಚಾರ ಬಂದರೆ, ಅದು ಒಂದು ದಿನದ ನಿಯಮ ಮತ್ತು ವಿದ್ಯಾರ್ಥಿಗಳು ನಕಲು ಮಾಡಬಾರದು ಎಂಬ ಸಮಂಜಸವಾದ ಕಾರಣವೂ ಆ ನಿಯಮದ ಹಿಂದೆ ಇದೆ. ಕೇರಳ ಸರಕಾರದ ಆದೇಶದ ವಿಚಾರಕ್ಕೆ ಬಂದರೆ ವಿದ್ಯಾರ್ಥಿ ಪೊಲೀಸ್ ಎನ್ನುವುದು ಪತ್ಯೇತರ ಚಟುವಟಿಕೆಯಾಗಿರುವುದರಿಂದ ಒಂದೇ ತಕ್ಕಡಿಯಲ್ಲಿ ಆ ವಿಚಾರವನ್ನು ಮತ್ತು ಕಾಲೇಜಿನಲ್ಲಿ ಹಿಜಾಬ್ ವಿಚಾರವನ್ನು ತೂಗಲಾಗುವುದಿಲ್ಲ.

ಭಾರತದ ಮಟ್ಟಿಗೆ ಸೆಕ್ಯುಲರಿಸಂ ಎನ್ನುವುದು ಎಲ್ಲ ಮತಗಳನ್ನೂ ತಿರಸ್ಕರಿಸುವುದಲ್ಲ, ಆದರೆ ಸಮನಾಗಿ ಒಪ್ಪಿಕೊಳ್ಳುವುದು ಎಂಬುದೇ ಆಗಿದೆ.[iv] ಎಲ್ಲ ಮತೀಯ ಗುರುತುಗಳನ್ನೂ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸುವ ಪ್ರೆಂಚ್ ಗಣರಾಜ್ಯ ಹಿಜಾಬನ್ನು ಶಾಲೆ ಕಾಲೇಜುಗಳಲ್ಲಿ ನಿಷೇಧಿಸಿ ಕಾನೂನನ್ನೇ ಹೊರಡಿಸಿದೆ. ಆಸ್ಟ್ರಿಯಾದಲ್ಲೂ ಇಂತದ್ದೊಂದು ಕಾನೂನಿದೆ. ಇಂಗ್ಲೆಂಡಿನಲ್ಲಿ ಸ್ಪಷ್ಟವಾದ ಕಾನೂನು ಇಲ್ಲದಿದ್ದರೂ, ಹಲವು ಪ್ರಕರಣಗಳಲ್ಲಿ ಶಾಲೆಗಳ ಇಂತಹ ನಿಯಮಗಳನ್ನು ಕೋರ್ಟ್ ಎತ್ತಿ ಹಿಡಿದ್ದಿದೆ. ಈಗ ಕರ್ನಾಟಕದ ಈ ಪರಿಸ್ಥಿತಿಯಲ್ಲೂ ಒಬ್ಬ ವಿದ್ಯಾರ್ಥಿನಿ, ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯ ಇನ್ನೂ ಈ ವಿಚಾರವನ್ನು ತೀರ್ಮಾನಿಸಬೇಕಿದೆ.

ಇದೆಲ್ಲ ವಿಚಾರಗಳು ಏನೇ ಇರಲಿ, ಮಕ್ಕಳ ಪರೀಕ್ಷೆ ಹತ್ತಿರ ಬರುತ್ತಿವೆ, ಇಂತಹ ಸಮಯದಲ್ಲಿ ಮಕ್ಕಳು ಹಿಜಾಬ್ – ಕೇಸರಿ, ಅಥವಾ ಬಣ್ಣ- ಬಣ್ಣದ ಶಾಲುಗಳ ಮಧ್ಯೆ ರಾಜಕಾರಣದ ದಾಳವಾಗಿ ಮಾರ್ಪಟ್ಟಿರುವುದು ಬೇಸರ ತರಿಸುವ ಸಂಗತಿ. ಉಚ್ಚ ನ್ಯಾಯಾಲಯ ಆದಷ್ಟು ಬೇಗನೆ ಈ ವಿವಾದಕ್ಕೊಂದು ಪೂರ್ಣ ವಿರಾಮವನ್ನಿಡುವುದು ಮಕ್ಕಳ ಹಾಗೂ ಸಮಾಜದ ಎಲ್ಲರ ಸ್ವಾಸ್ಥ್ಯದ ದೃಷ್ಟಿಯಿಂದ ಅಗತ್ಯವಾಗಿದೆ.


[i] Amartya Sen, Identity and Violence: The Illusion of Destiny (18th Edition), (2006), New York, W.W. Norton & Co.

[ii] (2017) 10 SCC 1

[iii] Judgement dated 09.04.2021 in W.P.(C) No. 364/2021

[iv] S.R. Bommai v. Union of India, (1994) 3 SCC 1.

ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.

Spread the love