ಉಪನ್ಯಾಸಗಳು

ಉಪನ್ಯಾಸ ಮಾಲಿಕೆ – 12: “ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ಮಧ್ಯಸ್ಥಿಕೆ” – ಶ್ರೀಮತಿ ಎಸ್. ಸುಶೀಲ

ಉಪನ್ಯಾಸಕರು: ಶ್ರೀಮತಿ  ಎಸ್. ಸುಶೀಲ, ಹಿರಿಯ ವಕೀಲರು ಮತ್ತು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಹಿರಿಯ ಮಧ್ಯಸ್ಥಿಕೆಗಾರರು.

ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯು ದೇಶದ 75ನೇ ಸ್ವಾತಂತ್ರ ಅಂಗವಾಗಿ ಆಯೋಜಿಸಲಾದ ವಿಚಾರ ಕಲರವದಲ್ಲಿ ಜೂನ್ 22 ರಂದು ಉಪನ್ಯಾಸ ನೀಡಿದ್ದು ಶ್ರೀಮತಿ ಎಸ್. ಸುಶೀಲ ಅವರು. “ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ಮಧ್ದ್ಯಸ್ಥಿಕೆ” ಎಂಬ ವಿಷಯವಾಗಿ ಉಪನ್ಯಾಸ ನೀಡಿದ ಶ್ರೀಮತಿ ಎಸ್. ಸುಶೀಲ ಅವರು ಹಿರಿಯ ವಕೀಲರು ಮತ್ತು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಹಿರಿಯ ಮಧ್ಯಸ್ಥಿಕೆಗಾರರು.

ಶ್ರೀಮತಿಯವರು ಮೂರು ತರಹದ ಋಣ ತೀರಿಸಿಕೊಳ್ಳುವುದಕ್ಕೆ ಕಷ್ಟ ಎಂಬ  ಹಿರಿಯರ  ಮಾತನ್ನು  ನೆನಪಿಸಿಕೊಳ್ಳುತ್ತಾ, ಮೊದಲನೆಯದು ತಾಯಿಯ ಋಣ ಎರಡನೆಯದು, ಭೂಮಿಯ ಋಣ, ಮತ್ತು ಮೂರನೆಯದು ಸಮಾಜದ ಋಣ. ಈ ಸಮಾಜದ ಋಣ ತೀರಿಸಿಕೊಳ್ಳಲು ಮಧ್ಯಸ್ಥಿಕೆ ಅಥವಾ ವಕೀಲ ವೃತ್ತಿಯನ್ನು ಕಾಣುವದಾಗಿ ಹೇಳಿದ ಅವರು, ವಿಷಯದ ಕುರಿತು ಮಾತಿಗಾರಂಭಿಸಿದರು.

ಮಧ್ಯಸ್ಥಿಕೆಯಲ್ಲಿ ಸಂವಹನಕ್ಕೆ ಪ್ರಾಮುಖ್ಯತೆಯಿದೆ ಎಂದ ಅವರು, ಅಲ್ಲಿ ಅನುಸರಿಸುವ ಮೂರು ತತ್ವಗಳನ್ನು ಹೇಳುತ್ತಾರೆ:

1. ಏನು ಹೇಳುತ್ತೇವೆ ಎನ್ನುವ ವಿಷಯವನ್ನು ಸ್ಪಷ್ಟಪಡಿಸುವುದು.

2. ವಿಷಯವನ್ನು ಹೇಳುವುದು ಅಥವಾ ವಿವರಿಸುವುದು.

3.ಹೇಳಿರುವ ವಿಷಯವನ್ನು ಮತ್ತೊಮ್ಮೆ ಸಂಕ್ಷಿಪ್ತವಾಗಿ ಹೇಳುವುದು .

ಈ ತಂತ್ರವು ಬಹಳ ಪರಿಣಾಮಕಾರಿಯಾಗಿದೆ ಎನ್ನುತ್ತಾ, ಅದೇ ಸೂತ್ರವನ್ನು ತಮ್ಮ ಉಪನ್ಯಾಸದಲ್ಲೂ ಅಳವಡಿಸಿಕೊಳ್ಳುವುದಾಗಿ ಶ್ರೀಮತಿ ಅವರು ಹೇಳಿದರು. ಮೊದಲು ಮಧ್ಯಸ್ಥಿಕೆ ಎಂದರೇನು, ಅನಂತರ ಉದಾಹರಣೆಯೊಂದಿಗೆ ವಿಚಾರವಿನಿಮಯ ಮಾಡುವುದು, ನಂತರ ಮಧ್ಯಸ್ಥಿಕೆಯಲ್ಲಿಯ ಪ್ರಕ್ರಿಯೆಗಳು, ಅದರ ಲಾಭಗಳು, ಹಾಗೂ ಕೊನೆಯದಾಗಿ ಮಧ್ಯಸ್ಥಿಕೆಯನ್ನು ಕೌಟುಂಬಿಕ ಕಲಹದಲ್ಲಿ ಹೇಗೆ ಬಳಸಬಹುದು  ಎಂಬುದನ್ನು ತಿಳಿಸಿ ಕೊಡುವುದಾಗಿ ಹೇಳಿದರು.

ಮಧ್ಯಸ್ಥಿಕೆಯು ಇಬ್ಬರ ನಡುವೆ, ಎರಡು ಪಕ್ಷದ ನಡುವೆ, ಒಬ್ಬ ಮಧ್ಯಸ್ಥಿಕೆಗಾರರ ನೆರವಿನಿಂದ, ಸಮಸ್ಯೆಗೆ ತಾವೇ ಪರಿಹಾರವನ್ನು ಕಂಡುಕೊಳ್ಳುವ  ಒಂದು ಸುಂದರವಾದ ಪ್ರಕ್ರಿಯೆ ಎಂದು ಸುಶೀಲ ಅವರು ಬಣ್ಣಿಸಿದರು. ಮಧ್ಯಸ್ಥಿಕೆಗಾರರು ಒಬ್ಬ ತಟಸ್ಥ ವ್ಯಕ್ತಿಯಾಗಿರಬೇಕು, ನಿಷ್ಪಕ್ಷಪಾತಿಯಾಗಿರಬೇಕು. ಹಾಗೆ ಮುಖ್ಯವಾಗಿ ಅವರಿಗೆ ಯಾವುದೇ ರೀತಿಯ ಹಿತಾಸಕ್ತಿ ಇರಬಾರದು ಎಂದರು. ಈ ಗುಣಗಳನ್ನು ಹೊಂದಿರುವ ವ್ಯಕ್ತಿಯನ್ನು ಮಧ್ಯಸ್ಥಿಕೆಗಾರರು ಎಂದು ಪರಿಗಣಿಸುತ್ತಾರೆ. ಹಾಗೂ ಅವರಿಗೆ ತರಬೇತಿ ನೀಡಿರುತ್ತಾರೆ ಎಂಬ ವಿಷಯವನ್ನು ಮಾನ್ಯರು ನಮಗೆ ತಿಳಿಸಿಕೊಟ್ಟರು.

ನಂತರದಲ್ಲಿ ಕಥೆಯೊಂದರ ಮೂಲಕ ಹೆಚ್ಚಿನ ಮಾಹಿತಿಯನ್ನು ಕೊಡಲಾರಂಭಿಸಿದರು. ಕಥೆ ಹೀಗಿದೆ: ಇಬ್ಬರು ಸಹೋದರರು, ಒಬ್ಬ ಸಹೋದರಿ, ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು ಮಕ್ಕಳು ತಂದೆಯೊಂದಿಗೆ ಜೀವನ ಸಾಗಿಸುತ್ತಿರುತ್ತಾರೆ. ನಂತರ ತಂಗಿ ತಂದೆ ಮತ್ತು ಸಹೋದರರ ಇಚ್ಛೆಯ ವಿರುದ್ಧವಾಗಿ, ಪರ ಧರ್ಮೀಯನನ್ನು ಪ್ರೀತಿಸಿ ಮದುವೆಯಾಗಿ ವಿದೇಶಕ್ಕೆ ಹೋಗುತ್ತಾಳೆ.  ಕೆಲವು ವರ್ಷದ ನಂತರ ಮಗಳು  ಸ್ವದೇಶಕ್ಕೆ  ಹಿಂತಿರುಗುತ್ತಾಳೆ, ಮತ್ತು ತಂದೆಯ ಆಸ್ತಿಯಲ್ಲಿ ತನ್ನ ಹಕ್ಕನ್ನು ಕೇಳಿ ಕೇಸು ಹಾಕುತ್ತಾಳೆ. ಈ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲಾಯಿತು. ತಂಗಿ ಹೇಳುವುದಿತ್ತೇನೆಂದರೆ, ಮದುವೆಯೇ ಆಗದ ಸಂದರ್ಭದಲ್ಲಿ ಸಿಕ್ಕ ಬೇರೆ ಮತದ ಹುಡುಗನನ್ನು ಮದುವೆಯಾದೆ ಎಂದೂ, ಈಗ ಕುಟುಂಬದ ಜೀವನದಲ್ಲಿ ಯಾವುದೇ ಸಮಸ್ಯೆ ಇಲ್ಲವೆಂದೂ, ತಂದೆಯ ಆಸ್ತಿಯಲ್ಲಿ ತನಗೆ ಪಾಲಿದೆಯೆಂದೂ ಅದನ್ನು ಅಣ್ಣಂದಿರು ಕೊಡುತ್ತಿಲ್ಲವೆಂದೂ ಹೇಳಿದರು. ಅಣ್ಣಂದಿರು ಹೇಳಿದ್ದೇನೆಂದರೆ, ಇಷ್ಟವಿಲ್ಲದ ಮಾಡುವೆ ಮಗಳು ಮಾಡಿಕೊಂಡಿದ್ದಕ್ಕೇ ತಮ್ಮ ತಂದೆ ತೀರಿಹೋದರೆಂದೂ ಹೇಳಿಕೊಂಡರು. ಮದುವೆಯಾದ ತಂಗಿಯು ಆರ್ಥಿಕವಾಗಿ ಒಳ್ಳೆಯ ಸ್ಥಿತಿಯಲ್ಲಿಯೂ ಮತ್ತು ಅಣ್ಣಂದಿರು ಕೆಳಮಧ್ಯಮ ವರ್ಗದ ಸ್ಥಿತಿಯಲ್ಲಿಯೂ ಇದ್ದುದಾಗಿ ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಾಲಯಕ್ಕೆ ಹೋದರೆ, ಮೂರನೇ ಒಂದು ಭಾಗ ತಂಗಿಗೆ ಸಿಗುತ್ತಿತ್ತು ಎಂದ ಅವರು,  ಮಧ್ಯಸ್ಥಿಕೆಯಲ್ಲಿ ಕಾನೂನು ಏನಿದೆ ಎಂಬುದಕ್ಕಿಂತಲೂ ಮಧ್ಯಸ್ಥಿಕೆಯಲ್ಲಿ ನಮಗೆ ಏನು ಆಗಬೇಕು ಮತ್ತು ಏನೂ ಆಗಬೇಕಿಲ್ಲ ಎಂಬುದಕ್ಕೆ ಮಾತ್ರ ಒತ್ತನ್ನು ನೀಡಲಾಗುವುದು ಎಂಬ ತಿಳಿಸಿಕೊಟ್ಟರು. ಅಷ್ಟೇ ಅಲ್ಲದೆ, ಕೆಲವು ಸಲ ಎರಡೂ ಪಕ್ಷದವರಿಗೆ ಕಾನೂನಿನ ಅರಿವನ್ನು ಮಧ್ಯಸ್ಥಿಕೆಗಾರರು ವಕೀಲರ ಮೂಲಕ ತಿಳಿಸಿಕೊಡುತ್ತಾರೆ ಎಂದರು. ಮೇಲೆ ಹೇಳಿದ ಪ್ರಕರಣದಲ್ಲಿ ಕಾನೂನಿನ ಪ್ರಕಾರ ತಂಗಿಗೆ ಆಸ್ತಿ ದೊರಕಬೇಕಾದರೂ, ದಾವೆಯನ್ನು ಮಾಡಿ ಹಕ್ಕನ್ನು ಪಡೆಯುವುದಕ್ಕೆ ತುಂಬಾ ಸಮಯ ಆಗುತ್ತದೆ. ಅದರ ಬದಲು ನ್ಯಾಯಾಲಯವು ಒಪ್ಪಿಕೊಂಡ ಪರ್ಯಾಯ ನ್ಯಾಯ ವಿತರಣೆಯ ವ್ಯವಸ್ಥೆಯ ಮೊರೆ ಹೋದರೆ ಸುಲಭವಾಗಿ ಪರಿಹರಿಸಿಕೊಳ್ಳಬಹುದು ಎಂದರು.  ನಂತರ ಮತ್ತೆ ಮೇಲಿನ ಪ್ರಕರಣವು ಮಧ್ಯಸ್ಥಿಕೆಗೆ ಬಂದಾಗ, ಮಗಳಿಗೆ ಎರಡೇ ಪ್ರಶ್ನೆ ಕೇಳಿದರು. ತಾವು ಹೇಗಿದ್ದೀರಾ? ಮತ್ತು ತಮ್ಮ ಸಹೋದರರೊಂದಿಗೆ ಸಂಬಂಧ ಹೇಗಿದೆ? ಎಂದು. ಮೊದಲನೇ ಪ್ರಶೆಗೆ ತುಂಬಾ ಚೆನ್ನಾಗಿದ್ದೇನೆ ಎಂದ ಅವರು, ಎರಡನೇ ಪ್ರಶ್ನೆಗೆ ಬಾಲ್ಯದಲ್ಲಿ ಸಹೋದರರು ಪ್ರೀತಿ ವಾತ್ಸಲ್ಯದಿಂದ ನೋಡಿಕೊಂಡರು ಎಂದೂ  ಹೇಳಿದರು. ಹಾಗೂ ಈ ದಾವೆಯನ್ನು ಕೇವಲ ಅಣ್ಣಂದಿರ ಒಪ್ಪಿಗೆ ಮತ್ತು ಪ್ರೀತಿಯನ್ನು ಪಡೆಯುವುದಕ್ಕಾಗಿ ಹಾಕಿರುವುದಾಗಿ ಬಿಚ್ಚಿಟ್ಟರು. ಮುಂದುವರೆದು ತಮಗೆ ತಂದೆ ಆಸ್ತಿಯ ಮೇಲೆ ವ್ಯಾಮೋಹವಿಲ್ಲವೆಂದೂ ಸ್ಪಷ್ಟಪಡಿಸಿದರು. ಇದನ್ನು ವಿವರಿಸಿದ ಸುಶೀಲ ಅವರು, ಇದನ್ನು Projected Relief  ಅಂದರೆ, ನ್ಯಾಯಾಲಯದಲ್ಲಿ ಆಸ್ತಿ ಬೇಕೆಂದು ಕೇಳಿದರೂ, ನಿಜಕ್ಕೂ ಆ ಹೆಣ್ಣುಮಗಳು ಬೇರೆಯದೇ ಪರಿಹಾರಕ್ಕಾಗಿ ಕೇಸು ಹಾಕಿರುವುದು ಎಂದರು.

ಅದೇ ರೀತಿ,  ಸಹೋದರರನ್ನು ಮಧ್ಯಸ್ಥಿಕೆಗೆ ಎರಡನೇ ಸಾರಿ ಕರೆತಂದಾಗ, ಅವರು ಕೂಡ ಸಹೋದರಿಯ ಮೇಲೆ ಯಾವುದೇ ಮುನಿಸಿ ಇಲ್ಲವೆಂದೂ ಹಾಗೂ ತಮಗಿಬ್ಬರಿಗೂ ಆರೋಗ್ಯದ ಸಮಸ್ಯೆ ಇದೆ, ಅವರ ನಂತರ ಆಸ್ತಿ ತಂಗಿಗೆ ಹೋಗುವುದಾದರೂ ಅವರಿಗೆ ತೊಂದರೆ ಇಲ್ಲವೆಂದೂ ಹೇಳಿದರು. ಇದನ್ನು ಏಕೆ ತಂಗಿಯ ಹತ್ತಿರ ಹೇಳಿಲ್ಲವೆಂದು ಪ್ರಶ್ನಿಸಿದಾಗ, ಅವರು ತಂಗಿ ಇದನ್ನು ತಿಳಿದರೆ ನೊಂದುಕೊಳ್ಳುವರು ಎಂದು ಉತ್ತರಿಸಿದರು. ಹೀಗೆ ಕೇಸಿನ ಬೇರೆ ಆಯಾಮವನ್ನು ವಿವರಿಸಿದ ಶ್ರೀಮತಿಯವರು, ನ್ಯಾಯಾಲಯದ ಮುಂದೆ ಹೇಳಲಾದ ಕಥೆಯೇ ಬೇರೆ ಮತ್ತು ಅವರು ನಿಜವಾದ ಸಮಸ್ಯೆಯೇ ಬೇರೆ ಎಂದರು. ಮಧ್ಯಸ್ಥಿಕೆಗಾರರು ಕೇಸಿನ ಹಿಂದಿರುವ ಹಿಂದಿನ ಉದ್ದೇಶಗಳನ್ನು ತಿಳಿದುಕೊಳ್ಳಬೇಕು ಎಂದರು. ಆನಂತರ ಪರಸ್ಪರ ಅಣ್ಣ-ತಂಗಿಯರನ್ನು ಮುಖಾಮುಖಿ ಮಾಡಿ ಕೂರಿಸಿದಾಗ, ಮುಕ್ತಮನಸ್ಸಿನಿಂದ ಪರಸ್ಪರ ಕುಶಲೋಪರಿ ವಿಚಾರಿಸಿದಾಗ  ತಮ್ಮ ಅನಾರೋಗ್ಯದ ಸಮಸ್ಯೆಯನ್ನು ಅಣ್ಣಂದಿರು ತಂಗಿಯ ಜೊತೆಗೆ ಹಂಚಿಕೊಂಡರು. ಅದರ ನಂತರ, ಅಣ್ಣಂದಿರಿಗೆ ಕಡಿಮೆ ಆಯುಷ್ಯ ಇರುವುದನ್ನು ತಿಳಿದ ತಂಗಿಯೂ, ವಿದೇಶದಲ್ಲಿ ತಮ್ಮ ಕೆಲಸಕ್ಕೆ ವಿಶ್ರಾಂತಿ ಕೊಟ್ಟು ಅಣ್ಣಂದಿರ ಸೇವೆಗೆ ಬಂದರು, ಮತ್ತು ಕೋರ್ಟ್ ನಲ್ಲಿ ಇರುವ ದಾವೆಯನ್ನು ಹಿಂಪಡೆದರು. ಇದೇ ಪ್ರಕರಣ ನ್ಯಾಯಾಲಯದಲ್ಲಾಗಿದ್ದರೆ ಬೇರೆಯದೇ ರೀತಿಯ ಚರ್ಚೆಗಳಾಗುತ್ತಿದ್ದವು, ಆದರೆ ಮಧ್ಯಸ್ಥಿಕೆಯಲ್ಲಿ ಸಮಸ್ಯೆಯ ಒಳ ಹೊಕ್ಕಿ ಎರಡೂ ಪಕ್ಷದವರಿಗೆ ಏನು ಬೇಕೆಂಬುದನ್ನು ತಿಳಿದುಕೊಂಡು ಪರಿಹಾರ ಕೊಡಲು ಸಾಧ್ಯ ಎಂದರು. 

ಪ್ರಶ್ನೆಯನ್ನು ಯಾವ ರೀತಿ ಕೇಳಬೇಕು ಹೇಗೆ ಕೇಳಬೇಕು ಯಾವ ಧ್ವನಿಯ ಏರಿಳಿತದಲ್ಲಿ ಕೇಳಬೇಕು ಮುಂತಾದವುಗಳಲ್ಲಿ ಪರಿಣಿತಿ ಹೊಂದಿದ ಮಧ್ಯಸ್ಥಿಕೆಗಾರರು ಮಧ್ಯಸ್ಥಿಕೆಯಲ್ಲಿ  ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುತ್ತಾರೆ ಎಂದರು. ಹೆಚ್ಚಾಗಿ ಎರಡೂ  ಪಕ್ಷದವರು ಪರಸ್ಪರ ಮಾತನಾಡುವುದಕ್ಕೆ ಅನುಕೂಲ ಮಾಡಿಕೊಡುತ್ತಾರೆ, ಏಕೆಂದರೆ ವ್ಯಾಜ್ಯದಲ್ಲಿ ಎರಡು ಪಕ್ಷದವರು ಮಾತನಾಡುವುದನ್ನೇ ನಿಲ್ಲಿಸಿರುತ್ತಾರೆ. ಅದಕ್ಕಾಗಿ ಅನುಕೂಲದ ವಾತಾವರಣ ಸೃಷ್ಟಿಸಲಾಗುತ್ತದೆ.

ಹಾಗೂ ಮಧ್ಯಸ್ಥಿಕೆಯು ಸ್ವಯಂಪ್ರೇರಿತವಾಗಿರಬೇಕು. ಇದರಿಂದ ಯಾವುದೇ ಘಟ್ಟದಲ್ಲಿ ಯಾವುದೇ ಪಕ್ಷದವರು ಹಿಂದಕ್ಕೆ ಹೋಗಬಹುದು. ಅಷ್ಟೇ ಅಲ್ಲದೆ, ಇಲ್ಲಿ ಎರಡೂ ಪಕ್ಷದವರಿಗೆ ಮತ್ತೊಂದು ಪಕ್ಷದ ಮಾತುಕತೆ ಕೇಳಿ ಯಾವ ರೀತಿಯ ನಿರ್ಧಾರ ಮಾಡಲಿಕ್ಕೂ ಸ್ವಾತಂತ್ರ್ಯ ಇರುತ್ತದೆ ಎಂದರು. ಪ್ರಕ್ರಿಯೆ ಹೇಗೆ ಎಂದರೆ ಮೊದಲು ಜಂಟಿ ಅಧಿವೇಶನವನ್ನು ಏರ್ಪಾಡು ಮಾಡಲಾಗುತ್ತದೆ. ಅಲ್ಲಿ ಎರಡೂ ಪಕ್ಷದವರು ತಾವು ಹೇಳಲಡ್ಡಿಯಿಲ್ಲದ ವಸ್ತುಸ್ಥಿತಿಯನ್ನು ಹೇಳುತ್ತಾರೆ ಮತ್ತು ಮಧ್ಯಸ್ಥಿಕೆಗಾರರು ಅದನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾರೆ. ಅದರಂತೆ, ನಿಯಮದ ಪ್ರಕಾರ ಒಬ್ಬ ಪಕ್ಷದವರು ಮಾತನಾಡಬೇಕಾದರೆ ಮತ್ತೊಬ್ಬರು ಮಾತನಾಡುವಂತಿಲ್ಲ, ಯಾವುದನ್ನು ರೆಕಾರ್ಡ್ ಅಥವಾ ದಾಖಲಿಸಬಾರದು, ಅವ್ಯಾಚ ಶಬ್ದವನ್ನು ಬಳಸಬಾರದು, ಕಿರುಚಾಟಬಾರದು  ಮತ್ತು ಕೂಗಾಡಬಾರದು. ಹಾಗೇ, ಯಾವುದೇ ಸಂದರ್ಭದಲ್ಲೂ ಕೂಡ ಪರಿಸ್ಥಿತಿಯು ಮಧ್ಯಸ್ಥಿಕೆಗಾರರ ನಿಯಂತ್ರಣದಲ್ಲಿ ಇರುತ್ತದೆ, ಇರಬೇಕು  ಕೂಡ. ಜಂಟಿ ಅಧಿವೇಶನದಲ್ಲಿ ಸಾಮಾನ್ಯವಾಗಿ ಮೂರನೇ ವ್ಯಕ್ತಿಗೆ ಮಾತನಾಡುವುದಕ್ಕೆ ಅವಕಾಶವಿರುವುದಿಲ್ಲ.

ನಂತರ ಖಾಸಗಿಯಾಗಿ ಎರಡೂ ಪಕ್ಷದವರ ಹತ್ತಿರ ಪ್ರತ್ಯೇಕವಾಗಿ ಮಾತನಾಡಲಾಗುತ್ತದೆ.ಅದರಲ್ಲಿ, ಯಾರು ಬೇಕಾದರೂ ತಮ್ಮಲ್ಲಿರುವ ವಿಷಯವನ್ನು ಹಂಚಿಕೊಳ್ಳಬಹುದು. ಹಾಗೂ ಈ ವಿಷಯವನ್ನು ಗೌಪ್ಯವಾಗಿಡಲಾಗುತ್ತದೆ. ಹೀಗೆ ಮಧ್ಯಸ್ಥಿಕೆಯ ಮುಂದುವರೆಯುತ್ತಾ, ಮಾತುಕತೆ ಮುಂದುವರಿಯುತ್ತಿದ್ದಂತೆ ಸಮಸ್ಯೆಗೆ ಹಲವಾರು ಪರಿಹಾರವೂ, ಆಯ್ಕೆಗಳೂ ಗೋಚರಿಸುತ್ತದೆ.  ಪರಿಹಾರವು ಇಬ್ಬರಿಗೂ ಒಪ್ಪಿಗೆಯಾ್ದರೆ, ಅದನ್ನು ಒಪ್ಪಂದದ ಮೂಲಕ ಒಪ್ಪಿಕೊಂಡು ನ್ಯಾಯಾಲಯಕ್ಕೆ ಕಳಿಸಲಾಗುತ್ತದೆ, ನ್ಯಾಯಾಲಯವು ತೀರ್ಪು ಹೊರಡಿಸುತ್ತದೆ. ಹಾಗಾಗದಿದ್ದಲ್ಲಿ, ಮಧ್ಯಸ್ಥಿಕೆಯಿಂದ ಸಮಸ್ಯೆ ಪರಿಹಾರವಾಗಿಲ್ಲ ಎಂದಷ್ಟೇ  ಕೋರ್ಟಿಗೆ ಬರೆಯುತ್ತಾರೆ. ಮಧ್ಯಸ್ಥಿಕೆಯಲ್ಲಿ ನಡೆದ ವಿಷಯ ಅಥವಾ ಹಂಚಿಕೊಂಡ ವಿಷಯವು ಅಲ್ಲಿಯೇ ಉಳಿದುಕೊಳ್ಳುತ್ತದೆ ಎಂದು ಮಾನ್ಯರು ತಿಳಿಸಿಕೊಟ್ಟರು. ಇದು ಅದ್ಭುತ ಪ್ರಕ್ರಿಯೆ ಎಂದು ಮಾನ್ಯರು ಅಭಿಪ್ರಾಯಪಟ್ಟರು.

ಮಾನ್ಯರು ದಾವೆಯ ಮುನ್ನವೇ ಮಧ್ಯಸ್ಥಿಕೆಯ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಪ್ರಯತ್ನಪಡಬೇಕು ಎಂದರು. ವಿವಾದ ಪೊಲೀಸ್ ಠಾಣೆಯನ್ನು ತಲುಪಿದರೆ ರಾಜಿಯಾಗುವ ಸಾಧ್ಯತೆ ವಿರಳವೆಂದು ಹೇಳಿದ ಅವರು, ದಾಂಪತ್ಯ ಜೀವನ ಅಥವಾ  ಕುಟುಂಬ ಆಧಾರಿತ ಸಮಸ್ಯೆ ಬಂದಾಗ ಮಧ್ಯಸ್ಥಿಕೆಯಿಂದ ಪರಿಹಾರವನ್ನು ಸುಲಭವಾಗಿ, ಖರ್ಚಿಲ್ಲದೆ, ಮನಸ್ತಾಪವಿಲ್ಲದೆ, ಎರಡು ಪಕ್ಷದವರಿಗೂ ಒಪ್ಪಿಗೆಯಾಗುವಂತೆ ಬಗೆಹರಿಸಬಹುದು ಎಂದು ತಿಳಿಸಿಕೊಟ್ಟರು. ಹಾಗೂ ಮಧ್ಯಸ್ಥಿಕೆಯನ್ನು ಕೋರ್ಟಿನಲ್ಲಿ ಯಾವ ಹಂತದಲ್ಲಿ ಇದ್ದರೂ ಸಹ ಉಪಯೋಗಿಸಬಹುದು ಎಂದು ಹೇಳಿದರು. ದೇಶದ ಸರ್ವೋಚ್ಛ ನ್ಯಾಯಾಲಯವೂ ಮಧ್ಯಸ್ಥಿಕೆಗೆ ಪ್ರಾಶಸ್ತ್ಯ ನೀಡಬೇಕು ಎಂದಿದೆ ಎಂದರು.

ಒಪ್ಪಂದ ಮಾಡಿಕೊಳ್ಳಬಹುದಾದ ಯಾವುದೇ ಸಣ್ಣ ಸಾಧ್ಯತೆ ಅಥವಾ  ಅಂಶವಿದ್ದರೂ, ನ್ಯಾಯಾಲಯವು ಮಧ್ಯಸ್ಥಿಕೆಯನ್ನು ಸೂಚಿಸುತ್ತದೆ. ಹಾಗಂತ ಎಲ್ಲ ಸಮಸ್ಯೆ ಮಧ್ಯಸ್ಥಿಕೆಯಿಂದ ಬಗೆಹರಿಸಿಕೊಳ್ಳಬೇಕು, ಅದರಿಂದಲೇ ತೀರ್ಮಾನವಾಗಬೇಕು ಎಂಬ ನಿಯಮವೇನಿಲ್ಲ ಎಂದರು. ಏಕೆಂದರೆ, ಹಲವಾರು ಸಲ  ಮನುಷ್ಯನ ಮನಸ್ಥಿತಿ ತಾನು ಗೆಲ್ಲುವುದಕ್ಕಿಂತ,  ಎದುರಾಳಿಯನ್ನು ಸೋಲಿಸಬೇಕು ಎಂಬುದಾಗಿರುತ್ತದೆ ಇದಕ್ಕೆ ಉದಾಹರಣೆಯಾಗಿ, ನ್ಯೂಯಾರ್ಕ್ ಟೈಮ್ಸ್ ಹಾಕಿದ್ದ ಒಂದು ವ್ಯಂಗ್ಯಚಿತ್ರವನ್ನು ವಿವರಿಸಿದರು. ಆ ವ್ಯಂಗ್ಯ ಚಿತ್ರದಲ್ಲಿ, ಸೂಟು-ಬೂಟು ಹಾಕಿರುವ ಮನುಷ್ಯನಂತೆ ಎರಡು ನಾಯಿಗಳು, ಮಾತನಾಡುತ್ತಾ, ” ನಾಯಿಗಳು ಗೆದ್ದರೆ ಸಾಕಾಗಲ್ಲಪ್ಪ, ಬೆಕ್ಕುಗಳು ಸೋಲಲೂಬೇಕು ” ಎಂದಿತ್ತು ಎಂದರು. ಇದನ್ನು ಹೇಳಿ, ಕೆಲವು ವಿಚ್ಛೇದನದ ವಿಚಾರಗಳಲ್ಲಿ ಗಂಡ-ಹೆಂಡತಿಯರ  ಮನಸ್ಥಿತಿಯನ್ನು ವಿವರಿಸಿದರು.  ಅದರಲ್ಲಿ ಒಬ್ಬರನ್ನೊಬ್ಬರು ತಪ್ಪು ಎಂದು ಸಾಬೀತು ಮಾಡುವ ಪ್ರಯತ್ನವಿರುತ್ತದೆ, ಇಂತಹ ಸಮಸ್ಯೆಯಲ್ಲಿ ಮಧ್ಯಸ್ಥಿಕೆಯು ವಿಫಲವಾಗುತ್ತದೆ ಅಥವಾ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಹೇಳಿದರು.

ಇದರ ನಂತರ ಮಧ್ಯಸ್ಥಿಕೆಯ ಪ್ರಕ್ರಿಯೆಯ ಕೆಲವು ಲಕ್ಷಣಗಳನ್ನು ಶ್ರೀಮತಿಯವರು ವಿವರಿಸಿದರು. ಮಧ್ಯಸ್ಥಿಕೆಯು ಸಮಸ್ಯೆಯನ್ನು ನೋಡುವ ದೃಷ್ಟಿಕೋನವನ್ನು ಬದಲಿಸುತ್ತದೆ  ಎಂದು ಹೇಳಿದರು. ಯಾವ ಪರಿಹಾರ ಯಾವ ಸಮಸ್ಯೆಯಿಂದ ಬೇಕು, ಅಥವಾ ಆ ಸಮಸ್ಯೆಯು ನಿಜವಾದ ಸಮಸ್ಯೆಯೇ  ಎಂಬುವ ಪ್ರಶ್ನೆಯೂ ಹುಟ್ಟತ್ತೆ. ಏಕೆಂದರೆ ಮೇಲೆ ಹೇಳಿರುವ ಕಥೆಯಲ್ಲಿ, ಸಹೋದರಿಗೆ ಅಣ್ಣಂದಿರ ಪ್ರೀತಿ ಬೇಕಾಗಿರುತ್ತದೆ ಹೊರತು ಆಸ್ತಿಯಲ್ಲ. ಹಾಗೆ ಒಂದು ಕೇಸನ್ನು ಹಾಕಿರುವ ಉದ್ದೇಶ ಮತ್ತೊಂದು ಇಷ್ಟಾರ್ಥ ಅಥವಾ ಸಮಸ್ಯೆಯ ಪರಿಹಾರಕ್ಕಾಗಿ ಹಾಕಲಾಗಿರುತ್ತದೆ. ಒಂದು ಚೆಕ್ ಬೌನ್ಸ್ ಕೇಸಿನಲ್ಲಿ ನಿಜವಾದ ಸಮಸ್ಯೆ ಬೇರೆ ಯಾವುದೋ ಕೌಟುಂಬಿಕ ವಿಚಾರ ಇರಬಹುದು, ಇನ್ನೊಂದೊಂದು ಸಾರಿ ಕೇಸು ಹಾಕಿದ್ದು ಗಂಡನ ಮೇಲಾದರೂ, ದೂರುಗಳಿರುವುದು ಅತ್ತೆಯ ಮೇಲೆ ಆಗಿರಬಹುದು. ಇಂತಹ ವಿಚಾರಗಳಲ್ಲಿ, ಮಧ್ಯಸ್ಥಿಕೆ ವಹಿಸುವ ಪಾತ್ರ ದೊಡ್ಡದು. ಇಂತಹ ವಿಚಾರದಲ್ಲಿ ಕೇಳುವ ಪ್ರಶ್ನೆಗಳನ್ನು circular questions ಎನ್ನುತ್ತಾರೆ, ಎಂದರೆ, ಸಮಸ್ಯೆ ಪರಿಣಾಮ ಬೀರುವ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡೇ ಪರಿಹಾರವನ್ನು ಹುಡುಕಬೇಕಾದ ಪ್ರಶ್ನೆಗಳು. ಹಾಗೂ ಮಧ್ಯಸ್ಥಿಕೆಯು, ದೃಷ್ಟಿಕೋನವನ್ನು ಗತಕಾಲದಿಂದ, ಭವಿಷ್ಯತ್ಕಾಲಕ್ಕೆ ವರ್ಗಾಯಿಸುತ್ತದೆ. ನಂತರ ಅವರೇ ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ.

ಮಧ್ಯಸ್ತಿಕೆಗೆ ಬಂದಿರುವ ಎರಡು ಪಕ್ಷದವರ ಮನಸ್ಥಿತಿಯನ್ನು ಬರಿ ಮಧ್ಯಸ್ಥಿಕೆಗಾರರು ಮಾತ್ರ ಅರ್ಥಮಾಡಿಕೊಂಡರೆ ಸಾಕಾಗುವುದಿಲ್ಲ. ಬದಲಾಗಿ, ಎರಡು ಪಕ್ಷದವರ ಮನಸ್ಥಿತಿಯನ್ನು, ಪರಸ್ಪರವಾಗಿ ಅರ್ಥಮಾಡಿಕೊಳ್ಳಬೇಕು, ಅದಕ್ಕೇ ಮಧ್ಯಸ್ಥಿಕೆಗಾರರು ನಿರ್ಣಾಯಕ ಪಾತ್ರ ಹೊಂದಿರುತ್ತಾರೆ ಎಂಬ ವಿಷಯವನ್ನು ತಿಳಿಸಿದರು. ಇದಕ್ಕೆ ಉದಾಹರಣೆಯಾಗಿ ಒಂದು ಘಟನೆಯನ್ನು ವಿವರಿಸಿದರು. ಪ್ರೀತಿಸಿ ಮದುವೆಯಾದ ಗಂಡ-ಹೆಂಡತಿಯರು, ಮದುವೆಯಾಗಿ 40  ವರ್ಷ ಆದಮೇಲೆ, ಗಂಡನಿಗೆ ತನ್ನ  ಹೆಂಡತಿ, ಆತನನ್ನು ಅನುಮಾನದ ದೃಷ್ಟಿಯಲ್ಲಿ ನೋಡುತ್ತಿದ್ದಾಳೆ ಎಂದೆನಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಗಂಡ ಹೇಳುವ ಪ್ರಕಾರ, ಹೆಂಡತಿ ತಾನು ಎಲ್ಲಿ ಕೆಲಸಕ್ಕೆ ಹೋದರೂ ಎಲ್ಲ ವಿಚಾರದಲ್ಲಿ ಹೆಂಡತಿ ತನ್ನನ್ನು ಹಿಂಬಾಲಿಸುತ್ತಾಳೆ ಎಂಬುದು ಹಿಂಸೆಯಾಗುತ್ತದೆ. ಹೆಂಡತಿಯನ್ನು ಕೇಳಿದಾಗ, ಗಂಡನು ರಕ್ತದೊತ್ತಡ, ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವುದರಿಂದ, ಅವರು ಅತಿಯಾದ  ಕಾಳಜಿ ವಹಿಸುತ್ತಿದ್ದರು ಎಂದರು. ಇದನ್ನು ಮಧ್ಯಸ್ಥಿಕೆಯ ಮೂಲಕ ಆತನಿಗೆ ಸೂಕ್ಷ್ಮವಾಗಿ ತಿಳಿಸಲಾಯಿತು. ನಂತರದಲ್ಲಿ ವಿಚ್ಛೇದನ ದಾವೆಯನ್ನು  ಹಿಂಪಡೆದು, ಜೀವನವನ್ನು ಪುನರಾರಂಭಿಸಿದರು.

ಕೌಟುಂಬಿಕ ಸಮಸ್ಯೆಯಿಂದ ಮಕ್ಕಳ ಮೇಲೆ ಬೀರುವ ಪರಿಣಾಮ ದೊಡ್ಡದು ಎಂದ ಅವರು, ಮಕ್ಕಳು ವಿವಾದದಲ್ಲಿದ್ದಾಗ ತಂದೆ ಮತ್ತು ತಾಯಿಯ ನಡುವೆ ಹೊಂದಾಣಿಕೆ ಆಗುವಂತಹ ಒಂದು ವ್ಯವ್ಯಸ್ಥೆಯನ್ನು ಮಧ್ಯಸ್ಥಿಕೆಯಲ್ಲಿ ಕಂಡುಕೊಳ್ಳಬಹುದು ಎನ್ನುತ್ತಾರೆ. ಮಧ್ಯಸ್ಥಿಕೆಯಲ್ಲಿ ಎಲ್ಲರೂ ತರಬೇತಿ ಪಡೆಯುವುದು ಅಗತ್ಯ ಎಂದ ಅವರು, ಇಷ್ಟ-ಕಷ್ಟ ಮತ್ತು ಸರಿ-ತಪ್ಪು ನಡುವೆ ವ್ಯತ್ಯಾಸ ಇದೆ ಎಂದರು. ಹಲವು ಸಲ ಸಮಸ್ಯೆ ಇರುವುದು ಇಷ್ಟ-ಕಷ್ಟ ನಡುವೆ ಹೊರತು,  ತಪ್ಪು-ಸರೀ  ನಡುವೆ ಅಲ್ಲ  ಎಂಬ ವಾಸ್ತವಾಂಶವನ್ನು ಬಿಚ್ಚಿಟ್ಟರು.

ಹೀಗೆ ಮುಂದುವರಿಸುತ್ತಾ, ಶ್ರೀಮತಿ ಸುಶೀಲ ಅವರು ಇಬ್ಬರ ನಡುವೆ ಸಂಧಾನ ನಡೆಸಲು ಅಗತ್ಯವಾದ ಅಂಶವೆಂದರೆ, ಎರಡು ಪಕ್ಷದವರ ಭಾವನೆಗಳು ಉದ್ವೇಗದಿಂದ ಶಾಂತ ಮನಸ್ಥಿತಿಗೆ ಪರಿವರ್ತನೆಯಾಗಬೇಕು. ಆವಾಗಲೇ ಎರಡೂ ಪಕ್ಷದವರು ಸರಿಯಾಗಿ ಆಲೋಚನೆ ಮಾಡಲು ಶುರು ಮಾಡುತ್ತಾರೆ, ಅದಕ್ಕಾಗಿಯೇ, ಮಧ್ಯಸ್ಥಿಕೆಗಾರರು ಎರಡು ಪಕ್ಷದವರ ಮಾತನ್ನು ಸಮಾಧಾನವಾಗಿ,  ಸಮಚಿತ್ತದಿಂದ ಕೇಳಿಸಿಕೊಳ್ಳಬೇಕು ಹಾಗೂ ಅರ್ಥಮಾಡಿಕೊಳ್ಳಬೇಕು ಎಂದರು. ಹಾಗಾದರೆ ಮಾತ್ರ ಎರಡು ಪಕ್ಷದವರು ಸಮಸ್ಯೆಯನ್ನು ಪರಸ್ಪರವಾಗಿ ತಾರ್ಕಿಕ ಅಂತ್ಯ ಮಾಡಬಹುದು ಎಂದರು ಸುಶೀಲ ಅವರು. ಭಾವೋದ್ವೇಗವನ್ನು ಸಮಾಧಾನಪಡಿಸಿದಿದ್ದಲ್ಲಿ ಅಥವಾ ತಿಳಿಗೊಳಿಸಿದಿದ್ದಲ್ಲಿ  ಸಂಧಾನ ಅಥವಾ ಮಧ್ಯಸ್ಥಿಕೆ ವ್ಯರ್ಥ ಮತ್ತು ನಿಷ್ಪ್ರಯೋಜಕವೆಂದು ಅವರ ಅನುಭವದಿಂದ ಹೇಳಿದರು. ಹೀಗೆ ಮಧ್ಯಸ್ತಿಕೆಯಲ್ಲಿ ಮೊದಲ ಹಂತದಲ್ಲೇ ಸಮಸ್ಯೆ ಬಗೆಹರಿಯಬೇಕು ಎಂಬುವ ನಿಯಮವೇನಿಲ್ಲ, ನಾಲ್ಕು-ಐದು ಸಲ ಮಧ್ಯಸ್ಥಿಕೆಗೆ ಬಂದ ಮೇಲೂ ಸಮಸ್ಯೆಗಳು ಮಧ್ಯಸ್ಥಿಕೆಯಿಂದ ಬಗೆಹರಿದಿವೆ ಎಂದು ಮಾನ್ಯರು ತಿಳಿಸಿಕೊಟ್ಟರು.

ಹೀಗೆ ಶ್ರೀಮತಿ ಎಸ್ ಸುಶೀಲಾರವರು, ಸ್ವಾರಸ್ಯಕರವಾಗಿ, ತಮ್ಮ ಹಲವಾರು ವರ್ಷದ ಅನುಭವದ ಜ್ಞಾನವನ್ನು, ನೈಜ ಘಟನೆಗಳ ಉದಾಹರಣೆಯೊಂದಿಗೆ ಮಧ್ಯಸ್ಥಿಕೆಯ ಪ್ರಕ್ರಿಯೆಗಳನ್ನು, ಮಧ್ಯಸ್ಥಿಕೆಗಾರರಿಗೆ ಬೇಕಿರುವ ತರಬೇತಿ ಮತ್ತು ಮನಸ್ಥಿತಿಯನ್ನು,  ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಉಪನ್ಯಾಸವನ್ನು ಮಾಡಿ ಮುಗಿಸಿದರು.

ಕೊನೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಮಾತನ್ನು ಮುಗಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಕೆ.ಆರ್. ವೇಣುಗೋಪಾಲ್ ಹಾಗೂ ಕಾನೂನು ಸಹ ಪ್ರಾಧ್ಯಪಕರು ಮತ್ತು ಎನ್.ಎಸ್.ಎಸ್. ಸಂಯೋಜನಾಧಿಕಾರಿಯಾದ ಡಾ. ಸತೀಶ ಗೌಡ್ ಎನ್.ರವರು  ಉಪಸ್ಥಿತರಿದ್ದರು.

ವರದಿ :  ಸಂಗೀತಾ ವಜ್ರಬಂಡಿ (ಬೆಂಗಳೂರು ಎನ್. ಎಸ್. ಎಸ್. ಘಟಕದ ಅನುಮತಿಯೊಂದಿಗೆ)

ವಿ. ಸೂ. ನ್ಯಾಯನಿಷ್ಠ ಹಲವು ವಿಚಾರಧಾರೆಗಳನ್ನು ಮತ್ತು ಕಾನೂನಿನ ಮಜಲುಗಳನ್ನು ಓದುಗರ ಮುಂದಿಡಬೇಕೆಂಬ ಉದ್ದೇಶದಿಂದ ಈ ಉಪನ್ಯಾಸ ಮಾಲಿಕೆಯನ್ನು ವರದಿಯ ರೂಪದಲ್ಲಿ ಪ್ರಕಟಿಸುತ್ತಿದೆ. ಉಪನ್ಯಾಸಕರ ಅಭಿಪ್ರಾಯಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು ನ್ಯಾಯನಿಷ್ಠ ಯಾವುದೇ ರೀತಿಯಲ್ಲಿ ಅವನ್ನು ಅನುಮೋದಿಸಿಯೋ ಅಥವಾ ತಿರಸ್ಕರಿಸಿಯೋ ಇರುವುದಿಲ್ಲ.

ಸಂಗೀತಾ ವಜ್ರಬಂಡಿ ಕೊಪ್ಪಳದ ಹತ್ತಿರ ಭಾಣಾಪುರದವರಾಗಿದ್ದು ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾರೆ.

Spread the love