ಉಪನ್ಯಾಸಗಳು

ಉಪನ್ಯಾಸ ಮಾಲಿಕೆ – 10: “ವರ್ತಮಾನ ಕೃಷಿ ಕಾನೂನುಗಳು: ಸಾಧಕ ಭಾದಕಗಳು” – ಶ್ರೀ ಶ್ರೀಧರ ಪ್ರಭು

ಉಪನ್ಯಾಸಕರು : ಶ್ರೀ ಶ್ರೀಧರ ಪ್ರಭು, ಹಿರಿಯ ವಕೀಲರು, ಸದಸ್ಯರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ

ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯು ದೇಶದ 75ನೇ ಸ್ವಾತಂತ್ರ ಅಂಗವಾಗಿ ಆಯೋಜಿಸಲಾದ ವಿಚಾರ ಕಲರವದಲ್ಲಿ ಜೂನ್ 9 ರಂದು ಉಪನ್ಯಾಸ ನೀಡಿದ್ದು ಶ್ರೀ ಶ್ರೀಧರ್ ಪ್ರಭು ಅವರು. “ವರ್ತಮಾನ ಕೃಷಿ ಕಾನೂನುಗಳು ಸಾಧಕ ಮತ್ತು ಬಾಧಕಗಳು” ಎಂಬ ವಿಷಯವಾಗಿ ಉಪನ್ಯಾಸ ನೀಡಿದ ಶ್ರೀಧರ್ ಪ್ರಭುರವರು ಇಪ್ಪತ್ತು ವರ್ಷಗಳ ಕಾಲ ಸೇವೆಸಲ್ಲಿಸಿದ ಕಾರ್ಯಪ್ರವೃತ್ತ ವಕೀಲರು ಮತ್ತು ಸಾಮಾಜಿಕ ಹೋರಾಟಗಾರರು.

ಭಾರತ ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ರೈತರು ದೊಡ್ಡ ಮಟ್ಟದಲ್ಲಿ ಪಾಲ್ಗೊಂಡಿದರ ಬಗ್ಗೆ ನೆನೆಸಿಕೊಳ್ಳುತ್ತಾ ರೈತ ಚಳುವಳಿ ಮತ್ತು ಸ್ವಾತಂತ್ರ್ಯ ಚಳುವಳಿ ಒಂದಕ್ಕೊಂದು ಬೆಸೆದುಕೊಂಡು ಬಂದಿವೆ ಎಂದು ಹೇಳಿ ಸ್ವಾತಂತ್ರ್ಯ ಸಿಗುವಲ್ಲಿ ರೈತರ ಪಾಲು ದೊಡ್ಡದೆಂದು ಹೇಳಿದರು. ಶ್ರೀಮಂತ ವರ್ಗದವರು , ಕಾರ್ಖಾನೆಗಳ ಮಾಲೀಕರು ಹಾಗೂ ಇತರರು ಅವುಗಳಿಗೆ ಮಾನಸಿಕ ಮತ್ತು ವೈಚಾರಿಕತೆಯ ಬೆಂಬಲ ನೀಡಿದರೆ ವಿನಹ ಕಷ್ಟ ಅನುಭವಿಸಿ ಸ್ವಾತಂತ್ರ್ಯ ತಂದುಕೊಟ್ಟದ್ದು ಸಾಮಾನ್ಯ ಜನರು ಮತ್ತು ಅವರಲ್ಲಿ ಹೆಚ್ಚಿನ ಜನರು ರೈತರೇ ಆಗಿದ್ದರು ಎಂದು ಜ್ಞಾಪಿಸಿದರು. ಇಷ್ಟೇ ಅಲ್ಲದೆ, ಇಡೀ ಮಾರುಕಟ್ಟೆಯ ಭಾರ ಹೊರುವ ರೈತರ ಮೇಲೆ ಏನಾದರೂ ದುಷ್ಪರಿಣಾಮ ಆದರೆ ಇಡೀ ಮಾರುಕಟ್ಟೆಗೆ ಮತ್ತು ದೇಶಕ್ಕೇ ಅದರ ಪರಿಣಾಮ ಆಗುವುದರಿಂದ ಯಾವುದೇ ಸರಕಾರವಿದ್ದರೂ ರೈತರ ಹಿತ ಕಾಯುವಂತದ್ದೇ ಕಾನೂನನ್ನು ಮಾಡಬೇಕು ಎಂದು ಆಗ್ರಹಿಸಿದರು. ಇಷ್ಟು ಹೇಳಿ ಪ್ರಸ್ತುತ ಕೇಂದ್ರ ಸರಕಾರ ತಂದಿರುವ ಕೃಷಿ ಕಾನೂನುಗಳ ಸಾಧಕ ಭಾದಕಗಳ ಚರ್ಚೆಯ, ಕಾನೂನುಗಳ ಪರ ಮತ್ತು ವಿರೋಧವಾದ ಎರಡೂ ಕಡೆಯ ವಾದಗಳನ್ನು ಅವರು ಬಿಡಿಸಿಟ್ಟರು. ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, ಕೃಷಿ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಒಪ್ಪಂದ ಕಾಯ್ದೆ, ಕೃಷಿ ಉತ್ಪಾದನೆ, ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ ಜೊತೆಯಲ್ಲಿ ಸರಕಾರ ತರಬೇಕೆಂದಿರುವ ವಿದ್ಯುಚ್ಛಕ್ತಿ ಕಾನೂನುಗಳ ಬಗ್ಗೆಯೂ ಮಾತನಾಡುವುದಾಗಿ ಪ್ರಭುರವರು ಹೇಳಿದರು.

ಕೃಷಿ ಕಾನೂನುಗಳ ವಿರುದ್ಧ ಇರುವ ಬಹು ದೊಡ್ಡ ಟೀಕೆಯೆಂದರೆ ಕೃಷಿ, ವಾಣಿಜ್ಯ ಮತ್ತು ವ್ಯಾಪಾರ ಈ ಮೂರೂ ವಿಷಯಗಳು ರಾಜ್ಯ ಪಟ್ಟಿಯಲ್ಲಿರಬೇಕಾದರೆ ಹೇಗೆ ಕೇಂದ್ರ ಸರಕಾರ ಆ ವಿಷಯಗಳ ಮೇಲೆ ಕಾನೂನು ರೂಪಿಸಲು ಸಾಧ್ಯ ಎಂಬ ಪ್ರಶ್ನೆ. ಈ ಕುರಿತು ಸರಕಾರದ ಪ್ರತಿವಾದವು ಸಂವಿಧಾದ ಮೂರನೇ ತಿದ್ದುಪಡಿಯನ್ನು ಆಧರಿಸಿದೆ ಎಂದರು ಶ್ರೀಯುತರು. ಆ ತಿದ್ದುಪಡಿಯ ಪ್ರಕಾರ ಸಹವರ್ತಿ ಪಟ್ಟಿಯಲ್ಲಿ 33 ನೇ ಕ್ರಮಸಂಖ್ಯೆಯಲ್ಲಿ ಹೇಳಿದಂತೆ ಆಹಾರ ಪದಾರ್ಥಗಳು, ಖಾದ್ಯ ತೈಲ ಮತ್ತು ಬೀಜಗಳ ಉದ್ದಿಮೆಯ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಎರಡೂ ಸರಕಾರಗಳಿಗೆ ಕಾನೂನು ಮಾಡುವ ಅಧಿಕಾರವಿದೆ ಎಂದು ತಿಳಿಸಿದರು. ಈ ಅಧಿಕಾರವನ್ನೇ ಬಳಸಿ ಅಗತ್ಯ ಸರಕುಗಳ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂಬುದು ಸರಕಾರದ ವಾದ ಎಂದರು.

ಮುಂದುವರೆದು ಈ ಕಾನೂನುಗಳನ್ನು ತರಲು ಸರಕಾರ ಮಂಡಿಸುವ ಕಾರಣವೆಂದರೆ ಎಪಿಎಂಸಿಗಳನ್ನು ಗಣನೆಗೆ ತೆಗೆದುಕೊಂಡರೆ, ಮುಖ್ಯವಾಗಿ ಹಳ್ಳಿಗಳಲ್ಲಿ ನೋಡುವುದಾದರೆ ಉತ್ಪನ್ನಗಳನ್ನು ಮಾರಾಟ ಮಾಡಬೇಕೆಂದರೆ ಎಪಿಎಂಸಿಗಳಿಗೆ ಹೋಗಿ ತಲುಪಲು ಹಳ್ಳಿಗಳಲ್ಲಿ ಸರಿಯಾದ ಸಾರಿಗೆ ವ್ಯವಸ್ಥೆಗಳಿಲ್ಲ, ಮತ್ತು ಅದರಿಂದ ಬರುವ ಖರ್ಚುವೆಚ್ಚಗಳನ್ನು ಭರಿಸುವ ಶಕ್ತಿ ಇಲ್ಲ, ಹಾಗಾಗಿ ಅವರು ಬೆಳೆದ ಸ್ಥಳಗಳಿಗೆ ಉದ್ದಿಮೆಗಾರರು ಹೋಗಿ ಉತ್ಪನ್ನಗಳನ್ನು ಕೊಳ್ಳಲು ಈ ಕಾನೂನುಗಳಲ್ಲಿ ಅನುವು ಮಾಡಿಕೊಡಲಾಗಿದೆ ಎಂದರು. ಒಂದು ಮಾದರಿ ಒಪ್ಪಂದವನ್ನು ಕೊಟ್ಟು, ಒಪ್ಪಂದ ಕೃಷಿಗೆ ಅನುವು ಮಾಡಿಕೊಡುವ ಈ ಕಾನೂನುಗಳ ಪ್ರಕಾರ, ಒಪ್ಪಂದಗಳಲ್ಲಿ ರೈತ ಪರ ಆದಂತಹ ಕಡ್ಡಾಯವಾದ ಷರತ್ತುಗಳನ್ನು ಹಾಕಬೇಕಾಗುತ್ತದೆ ಎಂಬುದು ಕೇಂದ್ರದ ವಾದವೆಂದರು. 2019 ರಲ್ಲಿ ಸಂಸತ್ತಿನ ಕೃಷಿ ಕುರಿತ ಸ್ಥಾಯಿ ಸಮಿತಿ ನೀಡಿದ ವರದಿ ಪ್ರಕಾರ ಎಪಿಎಂಸಿಗಳಲ್ಲಿ ರೈತರಿಗೆ ಸರಿಯಾದ ದರ ಸಿಗದ ಕಾರಣ ರೈತರಿಗೆ ರಾಷ್ಟ್ರವಿಡೀ ಮಾರುಕಟ್ಟೆಯಾಗಬೇಕು ಎಂಬ ಶಿಪಾರಸ್ಸಿನ ಮೇರೆಗೆ ಈ ಕಾನೂನುಗಳನ್ನು ತರಲಾಯಿತು ಎಂದರು. ಆ ಸಮಿತಿಯಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದ ಸಂಸತ್ತಿನ ಸದಸ್ಯರಾದ ಸುಖದೇವ್ ಸಿಂಗ್ ಧಿಂದ್ಸಾ ಅವರೂ ಇದ್ದಿದ್ದು ತದನಂತರದಲ್ಲಿ ಅವರು ಪ್ರಶಸಿಯನ್ನು ಕಾನೂನುಗಳ ತಂದದ್ದಕ್ಕೆ ಪ್ರತಿಭಟನೆಯಾಗಿ ವಾಪಸ್ ನೀಡಿದ್ದು ಕುತೂಹಲಕಾರಿಯಾದ ಸಂಗತಿ ಎಂದರು ಶ್ರೀಯುತರು.

ಏಕಸ್ವಾಮ್ಯತದ ತರವೇ, ಮಾರುವವರು ತುಂಬಾ ಜನರಿದ್ದು, ಕೊಳ್ಳುವವರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದರೆ, ಅದೂ ಮಾರುವವರ ಹಿತಕ್ಕೆ ಒಳ್ಳೆಯದಲ್ಲ ಎಂದು ವಾದಿಸುವ ಸರಕಾರ ಮಾರುವವರ ಸಂಖ್ಯೆಗೆ ಅನುಗುಣವಾಗಿ ಕೃಷಿ ಉತ್ಪನ್ನಗಳನ್ನು ಹಲವಾರು ಜನ ಕೊಂಡುಕೊಳ್ಳುವಂತೆ ಅನುವು ಮಾಡಿಕೊಡುವುದಕ್ಕಾಗಿ ಈ ಕಾನೂನುಗಳನ್ನು ತಂದಿರುವುದಾಗಿ ಹೇಳುತ್ತದೆ ಎಂದರು. ಕನಿಷ್ಠ ಭರವಸೆ ಬೆಲೆಯ ಬಗ್ಗೆ ಮಾತನಾಡುತ್ತಾ, ಈ ಬೆಲೆ ಯಾವುದೇ ಕಾನೂನಿನ ಆಧಾರದ ಮೇಲೆ ನಿಗದಿ ಮಾಡುವಂತದ್ದಲ್ಲ, ಅದನ್ನು ನಿಗದಿ ಮಾಡಲು ಬೇರೆಯದೇ ಆದ ಒಂದು ಸಮಿತಿ ಇದೆ, ಅದು ಬೆಂಬಲ ಬೆಲೆಯನ್ನು ಶಿಪಾರಸ್ಸು ಮಾಡುತ್ತದೆ, ಮತ್ತು ಇದಕ್ಕೂ ಈ ಕಾನೂನುಗಳಿಗೂ ಯಾವ ಸಂಬಂಧವೂ ಇಲ್ಲ ಎಂಬುದು ಸರ್ಕಾರದ ವಾದ ಎಂದರು. ಕಬ್ಬು, ತಂಬಾಕು, ಚಹಾ, ಕಾಫಿ, ರಬ್ಬರ್ ಮುಂತಾದ ವಾಣಿಜ್ಯ ಬೆಳೆಗಳನ್ನು ಸರಕಾರ ಈಗಾಗಲೇ ಎಪಿಎಂಸಿಯ ವ್ಯಾಪ್ತಿಯಿಂದ ಹೊರಗೆ ತೆಗೆದುಕೊಂಡು ಹೋಗಿದೆ, ಇವುಗಳಿಗೆ ಬೆಂಬಲ ಬೆಲೆಯೂ ಅಗತ್ಯ ಬಿದ್ದಾಗ ಘೋಷಿಸಲಾಗುತ್ತದೆ, ಇವುಗಳ ಮಾರಾಟಕ್ಕೆ ಎಪಿಎಂಸಿಯ ಕಟ್ಟಳೆಗಳಿಲ್ಲ, ಮತ್ತು ಹಲವಾರು ಅನುಕೂಲಗಳಿವೆ, ಅಂತಹ ಸೌಲಭ್ಯಗಳು ಸಾಮಾನ್ಯ ರೈತರಿಗೂ ಸಿಗುವಂತಾಗಬೇಕು ಎಂಬುದು ಸರಕಾರದ ವಾದ ಎಂದು ಹೇಳಿದರು.

ಇದರ ಜೊತೆಗೆ ಎಪಿಎಂಸಿಗಳಲ್ಲಿ ವ್ಯಾಪಾರ ಕಡಿಮೆಯಾದರೆ ಸರಕಾರಕ್ಕೆ ನಷ್ಟವಾಗುತ್ತದೆ, ಆದರೆ ಸರಕಾರಕ್ಕೆ ನಷ್ಟವಾಗುತ್ತದೆ ಎಂದು ರೈತರನ್ನು ಕಷ್ಟಗಳಿಗೊಳಪಡಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಮೂಡುತ್ತದೆ ಎಂದರು. ಅಷ್ಟೇ ಅಲ್ಲದೆ ಎಪಿಎಂಸಿಗಳು ಅನೌಪಚಾರಿಕವಾಗಿ ರೈತರಿಗೆ ಕೈಸಾಲ ಕೊಡುವುದು ರೂಢಿಯಾಗಿದ್ದು, ಈ ಸೌಲಭ್ಯಗಳು ಖಾಸಗಿ ಉದ್ದಿಮೆದಾರರಿಂದ ನಿರೀಕ್ಷಿಸಲಾಗುವುದಿಲ್ಲ ಎಂಬ ವಾದವೂ ಇದೆ ಎಂದು ಹೇಳಿದರು. ಈ ಕಾನೂನುಗಳಲ್ಲಿ ವಿವಾದ ಬಗೆಹರಿಸಲು ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಆಫೀಸುಗಳನ್ನು ವೇದಿಕೆಗಳಾಗಿ ಕಲ್ಪಿಸಿದ್ದು, ಇದು ತೀವ್ರ ವಿರೋಧಕ್ಕೆ ಕಾರಣವಾಗಿದೆ ಎಂದು ಉಲ್ಲೇಖಿಸಿದ ಶ್ರೀಧರ ಪ್ರಭುರವರು ಪಂಜಾಬ್ ನಲ್ಲಿ ಈ ಕಾರಣಕ್ಕಾಗಿ ಈ ವಿವಾದಗಳನ್ನು ಸಾಮಾನ್ಯ ನ್ಯಾಯಾಲಯಗಳಲ್ಲಿ ನಡೆಸಬೇಕೆಂಬ ತಿದ್ದುಪಡಿ ತರಲಾಗಿದೆ ಎಂದರು. ಮೊದಲ ಬಾರಿಗೆ ಈ ಕಾನೂನುಗಳ ವಿಚಾರದಲ್ಲಿ ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ ಅವರು ಈ ಟೀಕೆಯಲ್ಲಿ ಹುರುಳಿದೆ ಎನ್ನುತ್ತಾ, ಈ ಕಾನೂನುಗಳಲ್ಲಿ ಒದಗಿಸಿರುವಂತಹ ವಿವಾದಗಳ ಪರಿಹಾರದ ವೇದಿಕೆಗಳು ಅಮೂಲಾಗ್ರವಾಗಿ ಬದಲಾವಣೆ ಹೊಂದಲೇಬೇಕು ಎಂದರು. ನ್ಯಾಯದ ಪರಿಕಲ್ಪನೆ ಇಲ್ಲದ ಅಧಿಕಾರಿಗಳಿಗೆ ಈ ಅಧಿಕಾರವನ್ನು ಕೊಡುವುದರಿಂದ ಭ್ರಷ್ಟಾಚಾರಕ್ಕೆ ಎಡೆಯಾಗುವ ಸಂಭವವೂ ಇದೆ ಎಂದರು. ಈ ವಿಚಾರದಲ್ಲಿ ಜನವರಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶಿಸಿ, ಈ ಕೃಷಿ ಕಾನೂನುಗಳಿಗೆ ತಡೆಯಾಜ್ಞೆ ನೀಡಿರುವುದನ್ನು ಉಲ್ಲೇಖಿಸುತ್ತಾ, ಕಾನೂನು ಪ್ರಕಾರ ಚುನಾಯಿತ ಸರಕಾರ ಒಂದು ಕಾನೂನು ತಂದಾಗ ಅದು ಸಂವಿಧಾನ ಬದ್ಧವಾಗಿದೆ ಎಂದೇ ನ್ಯಾಯಾಲಯಗಳು ವಿಚಾರಣೆಗೆ ಮೊದಲು ಗ್ರಹಿಸಬೇಕಾಗುತ್ತದೆ, ಹಾಗಾಗಿ ತಡೆಯಾಜ್ಞೆ ನೀಡಿರುವದು ಸರಿಯೋ ತಪ್ಪೋ ಎಂಬ ವಿಚಾರ ಚರ್ಚಾರ್ಹವಾಗಿದೆ ಎಂದರು.

ಹೊಸ ವಿದ್ಯುಚ್ಛಕ್ತಿ ಕಾನೂನು ಬಂದರೆ ರೈತರು ಹೊಸದಾಗಿ ಅದಕ್ಕೆ ಹೆಚ್ಚಿನ ಬೆಲೆ ಕೊಡಬೇಕಾದ ಅಗತ್ಯ ಇಲ್ಲ, ಇದು ಕೇವಲ ಸರಕಾರಕ್ಕೆ ಆಗುವ ಭ್ರಷ್ಟಾಚಾರದ ನಷ್ಟವನ್ನು ತಡೆಯಲು ತರುತ್ತಿರುವ ಕಾನೂನು ಎಂದರು. ಈ ಕಾನೂನನ್ನು ಸರಕಾರವೇ ಸದ್ಯಕ್ಕೆ ತಡೆಹಿಡಿದೆ ಎಂದರು.

ಈ ಕಾನೂನುಗಳ ಬಗ್ಗೆ ತಮ್ಮ ಅಭಿಪ್ರಾಯ ಹೇಳುತ್ತಾ ಶ್ರೀಧರ ಪ್ರಭುರವರು ಈ ಮೂರೂ ಕಾನೂನುಗಳು ತಾತ್ವಿಕವಾಗಿ ರೈತರ ಹಿತಾಸಕ್ತಿ ಕಾಯುವಂತವೇ ಆಗಿದೆ ಎಂದರು. ಎಪಿಎಂಸಿ ಕಾಯ್ದೆಗಳಿದ್ದೂ ಬಹುರಾಷ್ಟ್ರೀಯ ಕಂಪನಿಗಳು ರಂಗೋಲಿ ಕೆಳಗೆ ನುಸುಳುವ ಕೆಲಸಗಳನ್ನು ಮಾಡುತ್ತಲೇ ಬಂದಿವೆ, ಆದರೆ ಸಾಮಾನ್ಯ ರೈತನೊಬ್ಬನಿಗೆ ಇಡೀ ದೇಶ ಮಾರುಕಟ್ಟೆಯಾಗುವ ಸದವಕಾಶವನ್ನು ಕಳೆಯಬಾರದು ಎಂದು ಸೂಚಿಸಿದರು. ಆದರೆ ವಿವಾದ ಬಗೆಹರಿಸಿಕೊಳ್ಳುವ ವೇದಿಕೆಯನ್ನು ಖಂಡಿತವಾಗಿ ಇನ್ನೂ ಶಕ್ತಿಯುತವಾಗಿ, ಸಮರ್ಪಕವಾಗಿ ಇರುವಂತೆ ಸರಕಾರ ನೋಡಿಕೊಳ್ಳಲೇಬೇಕು ಎಂದರು. ಅಷ್ಟೇ ಅಲ್ಲದೆ ಎಪಿಎಂಸಿಗಳನ್ನು ಬಲಗೊಳಿಸಬೇಕು ಎಂದರು. ಅಲ್ಲದೆ, ಅವುಗಳನ್ನು ಬಲವಂತವಾಗಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರು. ಜಾಗತೀಕರಣದ ನಂತರ ಸಹಜವಾಗಿ ಕೃಷಿಯೂ ವಾಣಿಜ್ಯದ ಆಯಾಮವನ್ನು ಹೊಂದುತ್ತಲೇ ಇದೆ, ಅದರಿಂದ ಹಲವು ಅಪಾಯಗಳು ಬರುವ ಸಾಧ್ಯತೆಯೂ ಇಲ್ಲದಿಲ್ಲ, ಆದರೆ ರೈತರು ಈ ಹೋರಾಟಕ್ಕೆ ಅಣಿಯಾಗಲೇಬೇಕು ಎಂದು ಹೇಳಿದರು.

ಭೂಸುಧಾರಣೆಯ ಬಗ್ಗೆ ಬಂದ ಪ್ರಶ್ನೆಗೆ ಉತ್ತರಿಸುತ್ತಾ, ವಿಷಯ ಕೋರ್ಟ್ ನಲ್ಲಿರುವುದರಿಂದ ಅದರ ಬಗ್ಗೆ ಹೆಚ್ಚು ಹೇಳಲಾಗದಿದ್ದರೂ ಆ ಕಾನೂನು ರೈತರ ಹಿತಕ್ಕೆ ಮಾರಕ ಎಂಬುದಾಗಿ ಚುಟುಕಾಗಿ ಉತ್ತರಿಸಿದರು. ಒಪ್ಪಂದ ಕೃಷಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಶ್ರೀಯುತರು ಉತ್ತರಿಸುತ್ತಾ, ಒಪ್ಪಂದ ಕೃಷಿಗಳ ಜೊತೆಗೆ ಹಲವು ಅಪಾಯಗಳು ಬರುವ ಸಾಧ್ಯತೆಯಿದ್ದರೂ ಈ ಸುಧಾರಣೆ ಇಲ್ಲದೆ ರೈತರ ಪರಿಸ್ಥಿತಿ ಆಶಾದಾಯಕವಾಗಿಯೇನೂ ಇಲ್ಲ, ಆದ್ದರಿಂದ ವಾಣಿಜ್ಯ ಬೆಳೆಗಾರರಿಗೆ ಸಿಗುವ ಹಲವು ಲಾಭಗಳು ಆಹಾರ ಬೆಳೆಗಾರರಿಗೂ ಸಿಗುವಂತಾಗಬೇಕು ಎಂದರು. ಹಾಗೆಯೇ, ಬರುವ ಅಪಾಯಗಳನ್ನು ಮೊದಲೇ ಊಹಿಸಿ, ಅವುಗಳನ್ನು ಎದುರಿಸಾಲು ವೈಚಾರಿಕವಾಗಿ ಚರ್ಚೆ ಮಾಡಿ, ಹೋರಾಟ ಮಾಡಿ ಉತ್ತರ ಕಂಡುಕೊಳ್ಳಬೇಕು ಎಂದರು.

ಅಗತ್ಯ ಸರಕುಗಳನ್ನು ದೊಡ್ಡ ಕಂಪನಿಗಳು ಅಗತ್ಯಕ್ಕಿಂತ ಹೆಚ್ಚಿನ ಉತ್ಪನ್ನಗಳನ್ನು ಶೇಖರಣೆ ಮಾಡಿ ಮಾರುಕಟ್ಟೆಯ ಬೆಲೆಗಳನ್ನು ನಿಯಂತ್ರಣ ಮಾಡಿ, ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂಬ ಪ್ರಶ್ನೆಗೆ, ಅದು ಮಾರುಕಟ್ಟೆಯ ಒಂದು ತಂತ್ರವೆಂದೂ ಹಲವರು ವಾದಿಸುತ್ತಾರೆ ಎಂದರು. ಆದರೆ ಯಾವುದೇ ಒಂದು ಬೆಲೆಯು ಮಿತಿಮೀರಿ ಹೋದರೆ ಆವಾಗ ಸರಕಾರಕ್ಕೆ ಮಧ್ಯಪ್ರವೇಶಿಸುವುದು ತಿದ್ದುಪಡಿಯ ನಂತರವೂ ಸಾಧ್ಯವಿದೆ ಎಂದರು.

ಒಪ್ಪಂದ ಕೃಷಿ ವ್ಯವಸ್ಥೆ ಬಂದು, ಒಪ್ಪಂದದಲ್ಲಿ ಸಹಿ ಹಾಕಿದ ಕಂಪನಿಗಳು ತಮಗೆ ಬೇಕಾದ ರೀತಿಯಲ್ಲಿ ಹೆಚ್ಚಿನ ಲಾಭ ಸಿಗಲು ರಸಗೊಬ್ಬರ, ತಳೀಯವಾಗಿ ಮಾರ್ಪಡಿಸಲಾದ ಬೀಜಗಳ ಬಳಕೆ ಮುಂತಾದವುಗಳಿಂದ ಮಣ್ಣುಗಳ ಫಲವತ್ತತೆಯ ಮೇಲೆ, ಅದರಿಂದ ದೀರ್ಘಾವಧಿಯಲ್ಲಿ ರೈತರ ಜೀವನೋಪಾಯದ ಮೇಲೂ ವ್ಯತಿರಿಕ್ತವಾದ ಪರಿಣಾಮ ಬೀರುವುದಿಲ್ಲವೇ ಎಂಬ ಪ್ರಶ್ನೆಗೆ, ಶ್ರೀಧರ ಪ್ರಭುರವರು, ಈ ಕಾನೂನುಗಳ ಅನುಪಸ್ಥಿತಿಯಲ್ಲೂ ಈ ಬದಲಾವಣೆಗಳು ಕೃಷಿಕ್ಷೇತ್ರದಲ್ಲಿ ಆಗುತ್ತಲೇ ಇವೆ, ಅದಕ್ಕೆ ಉತ್ತರ ಕಂಡುಕೊಳ್ಳಬೇಕು, ಈ ಕಾನೂನುಗಳನ್ನು ವಿರೋಧಿಸುವುದರಿಂದ ಅದು ಆಗುವುದಿಲ್ಲವೆಂದರು.

ಈ ಕಾಯ್ದೆಗಳಿಗೆ ಅವರ ಅನಿಸಿಕೆಯ ಪ್ರಕಾರ ಆಗಬೇಕಾಗಿರುವ ಬದಲಾವಣೆಗಳನ್ನು ವ್ಯಕ್ತಪಡಿಸುತ್ತಾ, ವಿವಾದ ಬಗೆಹರಿಸಲು ವಿಶೇಷ ನ್ಯಾಯಾಲಯಗಳು ಇಲ್ಲವೇ, ನ್ಯಾಯಮಂಡಳಿಗಳನ್ನು ಸ್ಥಾಪಿಸಬಹುದು ಎಂದರು. ರೈತರಿಗೆ ಅಂತಹ ನ್ಯಾಯಮಂಡಳಿಗಳ ಮುಂದೆ ಸೂಕ್ತವಾದ ಕಾನೂನು ನೆರವು ಸಿಗುವಂತಾಗಿರಬೇಕು ಎಂದರು. ಅಷ್ಟೇ ಅಲ್ಲದೆ, ರೈತರಿಗೆ ಸುಲಭವಾಗಿ ಮುಂಗಡ ಸಿಗುವಂತಹ, ಸರಿಯಾದ ರೀತಿಯಲ್ಲಿ ಹಣ ಪಾವತಿ ಮಾಡುವಂತಿರುವ, ಅದು ಸರಿಯಾದ ಸಮಯದಲ್ಲಿ ವಾಪಸ್ ಸಿಗುವಂತಹ ತಂತ್ರಜ್ಞಾನದ ಸಹಾಯದಿಂದ ಒಂದು ವೇದಿಕೆಯನ್ನು ರೈತರು ಮತ್ತು ಉದ್ದಿಮೆದಾರರ ನಡುವೆ ಏರ್ಪಡಿಸಬೇಕು ಎಂದರು. ಅದರ ಜೊತೆಗೇ, ಗೋ ಆಧಾರಿತ ಜೈವಿಕ ಕೃಷಿಯನ್ನು ವೈಜ್ಞಾನಿಕವಾಗಿ ಮಾಡಿ, ಅದಕ್ಕೆ ಉತ್ತೇಜನ ಮಾಡಬೇಕು ಎಂದರು. ಕೃಷಿ ಕೂಲಿ ಕಾರ್ಮಿಕರಿಗೂ ತಾತ್ವಿಕವಾಗಿ ಈ ಕಾನೂನು ಸಹಾಯ ಮಾಡುತ್ತದೆ ಎಂದರು, ಶ್ರೀಯುತರು.

ಕೊನೆಯಲ್ಲಿ ಇಂದಿನ ಸ್ಪರ್ಧಾಯುಗದಲ್ಲಿ ನಾವು ಕೃಷಿಯನ್ನೂ ಉತ್ತಮಗೊಳಿಸಿ, ಗಟ್ಟಿಗೊಳಿಸುತ್ತಾ, ಸ್ಪರ್ಧೆಗೆ ಒಡ್ಡಿ ಜಯಿಸಲೇಬೇಕಾದ ಪರಿಸ್ಥಿತಿ ಇದೆ ಎಂದು, ತಮ್ಮ ಉಪನ್ಯಾಸವನ್ನು ಮುಕ್ತಾಯಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕೆ .ಆರ್. ವೇಣುಗೋಪಾಲ್ ಸರ್ ಹಾಗೂ ಕಾನೂನು ಸಹ ಪ್ರಾಧ್ಯಪಕರು ಮತ್ತು ಎನ್.ಎಸ್.ಎಸ್. ಸಂಯೋಜನಾಧಿಕಾರಿಯಾದ ಡಾ. ಸತೀಶ ಗೌಡ್ ಎನ್. ರವರು  ಉಪಸ್ಥಿತರಿದ್ದರು.

ವರದಿ : ಅಶ್ವಿನಿ ಪಿ. ಎಸ್. (ಬೆಂಗಳೂರು ಎನ್. ಎಸ್. ಎಸ್. ಘಟಕದ ಅನುಮತಿಯೊಂದಿಗೆ)

ವಿ. ಸೂ. ನ್ಯಾಯನಿಷ್ಠ ಹಲವು ವಿಚಾರಧಾರೆಗಳನ್ನು ಮತ್ತು ಕಾನೂನಿನ ಮಜಲುಗಳನ್ನು ಓದುಗರ ಮುಂದಿಡಬೇಕೆಂಬ ಉದ್ದೇಶದಿಂದ ಈ ಉಪನ್ಯಾಸ ಮಾಲಿಕೆಯನ್ನು ವರದಿಯ ರೂಪದಲ್ಲಿ ಪ್ರಕಟಿಸುತ್ತಿದೆ. ಉಪನ್ಯಾಸಕರ ಅಭಿಪ್ರಾಯಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು ನ್ಯಾಯನಿಷ್ಠ ಯಾವುದೇ ರೀತಿಯಲ್ಲಿ ಅವನ್ನು ಅನುಮೋದಿಸಿಯೋ ಅಥವಾ ತಿರಸ್ಕರಿಸಿಯೋ ಇರುವುದಿಲ್ಲ.

ಅಶ್ವಿನಿ ಪಿ. ಎಸ್. ರವರು ಕೊಪ್ಪಳದ ನಂದಿನಿ ನಗರದ ನಿವಾಸಿಗಳಾಗಿದ್ದು ಪ್ರಸ್ತುತ ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾರೆ.

ಇವನ್ನೂ ಓದಿ:

Spread the love