ಉಪನ್ಯಾಸಗಳು

ಉಪನ್ಯಾಸ ಮಾಲಿಕೆ – 9: “ಚುನಾವಣಾ ಸುಧಾರಣೆಗಳು” – ಪ್ರೊ. ಎಂ. ವಿ. ರಾಜೀವ ಗೌಡ

ಉಪನ್ಯಾಸಕರು : ಪ್ರೊ. ಎಂ. ವಿ. ರಾಜೀವ ಗೌಡ, ಮಾಜಿ ರಾಜ್ಯಸಭಾ ಸದಸ್ಯರು ಮತ್ತು ಮಾಜಿ ಅಧ್ಯಕ್ಷರು, ಸಾರ್ವಜನಿಕ ನೀತಿ ಕೇಂದ್ರ, ಐಐಎಮ್, ಬೆಂಗಳೂರು.

ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಘಟಕವು ಆಯೋಜನೆ ಮಾಡಿದ 75 ನೇ ಸ್ವತಂತ್ರದ ಅಮೃತ ಮಹೋತ್ಸವ ಪ್ರಯುಕ್ತ ವಿಚಾರ ಕಲರವದಲ್ಲಿ 9ನೇ ದಿನದ ವಿಷಯ “ಚುನಾವಣಾ ಸುಧಾರಣೆಗಳು” ಉಪನ್ಯಾಸ ನೀಡಿದ್ದು ಪ್ರೊ. ಎಂ. ವಿ. ರಾಜೀವ ಗೌಡ, ಮಾಜಿ ರಾಜ್ಯಸಭಾ ಸದಸ್ಯರು ಮತ್ತು ಮಾಜಿ ಅಧ್ಯಕ್ಷರು, ಸಾರ್ವಜನಿಕ ನೀತಿ ಕೇಂದ್ರ, ಐಐಎಮ್, ಬೆಂಗಳೂರು.

ಪ್ರೊ. ಎಂ. ವಿ. ರಾಜೀವ ಗೌಡ ಅವರು ರಾಜಕೀಯ ಹಿನ್ನೆಲೆಯ ಜೊತೆಗೆ ಹಲವು ಸಾಮಾಜಿಕ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದು, ಬರಹಗಾರರು ಆಗಿದ್ದಾರೆ. ಶ್ರೀಯುತರು ಕಾರ್ಯಕ್ರಮವನ್ನು ಆಯೋಜಿಸಿದ ವಿಶ್ವವಿದ್ಯಾಲಯ ಹಾಗೂ ಸಂಬಂಧಿತ ಎಲ್ಲರಿಗೂ ಅಭಿನಂದಿಸುತ್ತಾ ಹೇಳಿದ್ದು ‘ನಮ್ಮ ದೇಶದಲ್ಲಿ ಅತೀ ದೊಡ್ಡ ಸಮಸ್ಯೆಯೆಂದರೆ ಭ್ರಷ್ಟಾಚಾರ’. ಭ್ರಷ್ಟಾಚಾರದ ಕುರಿತು ಆರ್.‌ಬಿ.ಐ.ನ ಮಾಜಿ ಗವರ್ನರ್‌ ಶ್ರೀ ರಘುರಾಮರಾಜನ್ ರವರ ಹೇಳಿಕೆ ʼಭ್ರಷ್ಟಾಚಾರ ಎನ್ನುವುದು ರಾಜಕಾರಣಿಗಳು, ವ್ಯಾಪಾರಿಗಳು ಮತ್ತು ಮತದಾರ ನಡುವಿನ ಸಂಬಂಧವಾಗಿದೆʼ ನೆನಸಿಕಳ್ಳುತ್ತಾ ಇದು ಅವಲಂಬನೆಯ ಚಕ್ರವಾಗಿದೆ ಎಂದರು. ಪ್ರಸ್ತುತ ರಾಜಕೀಯದಲ್ಲಿ ಸಮಾಜ ಸುಧಾರಕರಿಗಿಂತ ಕೈಗಾರಿಕೆ, ಉದ್ಯಮಗಳಿಗೆ ಬೆಂಬಲಿಸುವವರನ್ನು ಕಾಣಬಹುದು ಮತ್ತು ರಾಜಕೀಯದಲ್ಲಿ ವ್ಯಾಪಾರ ಬೆಂಬಲಿಸುವವರ ಪ್ರಾಬಲ್ಯ ಕಾಣಬಹುದು ಎಂದರು. ಉದ್ಯಮಿಗಳು, ರಾಜಕೀಯಕ್ಕೆ ಬಂಡವಾಳ ಹಾಕುವುದರ ಹಿಂದೆ ಇರುವ ಉದ್ದೇಶವೆಂದರೆ ತಮ್ಮ ಇತರ ಖರ್ಚುಗಳನ್ನು ಕಡಿಮೆ ಮಾಡುವುದೇ ಹೊರತು ಕಾನೂನು ಪಾಲನೆ ಮಾಡುವುದಕ್ಕಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಶ್ರೀಯುತರು ರಾಜಕೀಯದಲ್ಲಿ ಲಾಬಿಗಳ ಅಥವಾ ವಶಿಲಿಗಾರರ ಉದಾಹರಣೆ ಕೊಡುತ್ತಾ, ಈಗ್ಗೆ 15 ವರ್ಷಗಳ ಹಿಂದೆ ಲಾಬಿ ನೀರಾ ರಾಡಿಯಾರವರ ಟೆಲಿಫೋನ್‌ನ್ನು ಟ್ಯಾಪ್ ಮಾಡಿದಾಗ, ಅನೇಕ ಜನರ ಸಂಭಾಷಣೆ ಆಚೆಗೆ ಬಂತು, ಇದರಿಂದ ನಾವು ಚುನಾಯಿಸುವುದು ಒಂದು ಸರ್ಕಾರ, ಆದರೆ ತೀರ್ಮಾನ ತೆಗೆದುಕೊಳ್ಳುವುದು ಇನ್ನೊಂದು ಲಾಬಿ ಎಂದು ಮನವರಿಕೆಯಾಯಿತು ಎಂದರು. ಮುಂದುವರೆದು, ನಾವು ಬೇರೆ ಬೇರೆ ಲಾಬಿಗಳನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಕರ್ನಾಟಕದಲ್ಲಿ ಲಿಕ್ಕರ್ ಲಾಬಿಯು ಹೇಗೆ ವರ್ಕ್ ಆಗುತ್ತಿತ್ತು ಎಂದರೆ, ಸರ್ಕಾರಕ್ಕೆ ಕೊಡಬೇಕಾದ ಎಕ್ಸೈಸ್ ಡ್ಯೂಟಿಯನ್ನು ಸುಳ್ಳು ಸ್ಟ್ಯಾಂಪ್ ಹಾಕಿ, ಸರ್ಕಾರಕ್ಕೆ ದುಡ್ಡು ಕೊಡುವ ಬದಲಾಗಿ ಹಾಗೆ ಉಳಿಸಿದ ಹಣವನ್ನು ರಾಜಕೀಯ‌ ವ್ಯಕ್ತಿಗಳಿಗೆ ಅಥವಾ ಚುನಾವಣೆಗಳಿಗೆ ಬಹುಶಃ ಕೊಡಲಾಗುತ್ತಿತ್ತು ಎಂದರು. ಅದೇ ರೀತಿ ಇನ್‌ಪ್ರಾಸ್ಟ್ರಕ್ಟರ್ ಲಾಬಿ, ವಾಟರ್ ಲಾಬಿ ಮತ್ತು ವೇಸ್ಟ್ ಮ್ಯಾನೇಜ್‌ಮೆಂಟ್ ಲಾಬಿ ಹೀಗೆ ಹಲವು ಲಾಬಿಗಳು ಕುಖ್ಯಾತಿಯಾಗಿದ್ದನ್ನು ನೆನೆಸಿಕೊಂಡರು. ಸ್ವಾತಂತ್ರ್ಯ ಹೋರಾಟಗಾರರು ಆಡಳಿತವನ್ನು ಸೇವೆಯ ನಿಟ್ಟಿನಲ್ಲಿ ಮಾಡಿದರೆ, ಇಂದು ಪರಿಸ್ಥಿತಿ ಹದಗೆಟ್ಟಿದೆ ಮತ್ತು ಅದನ್ನು ಸರಿಪಡಿಸುವುದು ಅಗತ್ಯ ಎಂದರು. ಜನಗಳು ರಾಜಕರಣಿಗಳು ಭ್ರಷ್ಟರು ಎಂದು ಹೇಳುತ್ತಾರೆ ಆದರೆ ಇದು ಕೇವಲ ರಾಜಕಾರಣಕ್ಕೆ ಮಾತ್ರವಲ್ಲದೆ, ಸಂಪೂರ್ಣ ವ್ಯವಸ್ಥೆಯ ಮಾತಾಗಿದೆ. ಹಾಗಾಗಿ ನಾವು ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಬೇಕು ಎಂದರು.

ಶ್ರೀಯುತರು ಮುಂದುವರೆದು ನಾವು ಜಗತ್ತಿನ ಅತಿ ದೊಡ್ಡ ಬೂಟಾಟಿಕೆ ಆಗಿದ್ದೆವಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾ ನೈಜತೆಯ ಸವಾಲುಗಳನ್ನು ಬಿಚ್ಚಿಟ್ಟರು. ಒಬ್ಬ ರಾಜಕೀಯ ವ್ಯಕ್ತಿಯಾಗಿರಲು, ಒಂದು ಚುನಾವಣೆ ನಡೆಸಲು, ಒಂದು ರಾಜಕೀಯ ಪಕ್ಷ ನಡೆಸುವುದು ದುಬಾರಿಯಾಗಿದೆ. ಕೆಲವು ವರ್ಷಗಳ ಹಿಂದೆ ಯುಪಿಎ ಸರ್ಕಾರ ಇದ್ದಾಗ, ಎಂ.ಪಿ. ಗಳ ವೇತನವನ್ನು ರೂ.೫೦,೦೦೦/-ಮಾಡಲಾಯಿತು. ಅಲ್ಲಿಯವರೆಗೆ ಎಂ.ಪಿ.ಗಳಿಗೆ ರೂ.೧೬,೦೦೦/- ಗಳಿತ್ತು. ಅಂದಿನ ಸಂದರ್ಭದಲ್ಲಿ, ಟಿ.ವಿ. ಮಾದ್ಯಮಗಳಲ್ಲಿ ೩೦೦% ವೇತನ ಹೆಚ್ಚಿಸಲಾಗಿದೆ ಎಂಬ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದವು ಎಂದು ನೆನಸಿಕೋಂಡ ಶ್ರೀಯುತರು, ಯಾರು ರೂ.೧೬,೦೦೦/- ಗಳ ವೇತನಕ್ಕೆ ದೇಶ ಸೇವೆ ಮಾಡಲು ಬರುತ್ತಾರೆ ಎಂದು ಪ್ರಶ್ನಿಸಿದರು. ಅಲ್ಲದೇ ನಾವು ಒಳ್ಳೆಯ ಜನರಿಗೆ ಅವಕಾಶ ಮಾಡಿಕೊಡಲು ಯೋಚನೆ ಮಾಡಬೇಕಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪಕ್ಷಗಳನ್ನು ನಡೆಸಲು, ಚುನಾವಣೆ ಮಾಡಲು ಸಾಕಷ್ಟು ಹಣ ಬೇಕಾಗುತ್ತದೆ, ಆ ವಾಸ್ತವದ ನಿರಾಕರಣೆಯೂ ಒಂದು ಸಮಸ್ಯೆಯಗಿದೆ ಎಂದರು.

ಈಗಿನ ಚುನಾವಣಾ ಕಾನೂನುಗಳು ಕೇವಲ ಭ್ರಷ್ಟರು ಮಾತ್ರ ಜೀವಿಸುವಂತಹ ಸಂದರ್ಭ ಉಂಟು ಮಾಡಿವೆ. ಏಕೆಂದರೆ ಚುನಾವಣಾ ವೆಚ್ಚಕ್ಕೆ ಕಾನೂನಿನ ಒಂದು ಮಿತಿ ಇದೆ, ಉದಾಹರಣೆಗೆ ಒಂದು ಲೋಕಸಭಾ ಚುನಾವಣೆಗೆ ರೂ.70/- ಲಕ್ಷಕ್ಕಿಂತ ಹೆಚ್ಚು ಹಣ ಖರ್ಚು ಮಾಡುವಂಗಿಲ್ಲ. ಒಂದುವೇಳೆ ಖರ್ಚು ಮಾಡಿದರೆ ಚುನಾವಣೆಯನ್ನು ರದ್ದು ಮಾಡಲಾಗುತ್ತೆ. ಉದಾಹರಣೆಗೆ ಒಂದು ಲೋಕಸಭೆಯಲ್ಲಿ 21 ಲಕ್ಷ ಮತದಾರರಿದ್ದರೆ, ಎಪ್ಪತ್ತು ಲಕ್ಷ ವೆಚ್ಚದಲ್ಲಿ ಅವರನ್ನ ತಲುಪಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಅಸಾಧ್ಯ ಎಂದರು. ಹೀಗಾಗಿ ಯಾರಲ್ಲಿ ಕಪ್ಪು ಹಣ ಇದೆಯೊ, ಯಾರು ಭೂಗತ ಜಗತ್ತಿನ ಸಂಪರ್ಕ ಹೊಂದಿ, ಖರ್ಚು ಮಾಡುವ ಸಾಮರ್ಥ್ಯ ಹೊಂದಿರುವರೊ ಅವರಿಗೆ ಮಾತ್ರ ಅವಕಾಶ ಮತ್ತು ಅನಕೂಲಗಳಿದ್ದು, ಆದರೆ ಪ್ರಾಮಾಣಿಕವಾಗಿ ಕಾನೂನು ಅಡಿಯಲ್ಲಿ ಖುರ್ಚು ಮಾಡಿ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂಬಂತಾಗಿದೆ ಎಂದರು. ಈ ಕುರಿತು ವಾಜಪೇಯಿಯವರ ಮಾತು ʼಪ್ರತಿಯೊಬ್ಬ ಲೋಕಸಭೆಯ ಸದಸ್ಯ ತನ್ನ ವೃತ್ತಿಯನ್ನು ಒಂದು ಸುಳ್ಳಿನಿಂದ ಪ್ರಾರಂಭಿಸುತ್ತಾನೆʼ ಎಂಬುದನ್ನು ಶ್ರೀಯುತರು ಉಲ್ಲೇಖಿಸಿದರು. ಖರ್ಚಿನ ಮಿತಿಯ ಕಾನೂನುಗಳು ನಿಜಸ್ಥಿತಿಗೆ ಹತ್ತಿರವಾಗಿರಬೇಕು ಮತ್ತು ಅದರಿಂದ ಒಂದಿಷ್ಟು ಸುಧಾರಣೆಯಾಗುತ್ತವೆ ಎಂದು ಸೂಚಿಸಿದರು ಶ್ರೀ ರಾಜೀವ್ ಗೌಡರವರು. ಶ್ರೀಯುತರು ದಿವಂಗತ ಗೋಪಿನಾಥ ಮುಂಡೆಯವರು ಒಂದು ಕಾಲದಲ್ಲಿ 1990 ರಲ್ಲಿ ಮಹಾರಾಷ್ಟದಲ್ಲಿ ಚುನಾವಣೆಗೆ ನಿಂತಾಗ ಒಂಬತ್ತು ಸಾವಿರ ರೂಪಾಯಿಗಳನ್ನು ಖರ್ಚುಮಾಡಿದ್ದು, ಅದರಲ್ಲಿ ಏಳು ಸಾವಿರ ಗಳನ್ನು ಪಾರ್ಟಿ ಖರ್ಚು ಮಾಡಿದ್ದು, 2009 ರ ಲೋಕಸಭಾ ಚುನಾವಣೆಯಲ್ಲಿ ಎಂಟು ಕೋಟಿ ಖರ್ಚು ಮಾಡಲಾಯಿತು ಎಂದು ಹೇಳಿದ್ದನ್ನು ನೆನಸಿಕೊಂಡರು.

ಶ್ರೀಯುತರು ತಮ್ಮ ರಾಜಕೀಯ ಜೀವನದ ಪ್ರಾರಂಭವನ್ನು ಮೆಲುಕು ಹಾಕುತ್ತಾ ‘ನಾನು ಮೊದಲಿನಿಂದಲೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದೆ, ಆದರೆ ಟಿಕೆಟ್ ಸಿಗಲಿಲ್ಲ. ಅದೃಷ್ಟವೇನೆಂದರೆ ೬-೭ ವರ್ಷಗಳ ಹಿಂದೆ ರಾಜ್ಯಸಭೆಗೆ ಹೋಗಲು ಪಕ್ಷ ಆಯ್ಕೆ ಮಾಡಿತು. ಆ ಸಂದರ್ಭದಲ್ಲಿ ಜೀರೊ ಖರ್ಚಿನಲ್ಲಿ ಎಂ.ಪಿ. ಆದೆನು ಎಂದು ತಮ್ಮ ಆಯ್ಕೆಯ ಬಗ್ಗೆ ವಿಷಯ ಹಂಚಿಕೊಂಡರು.

ಮುಂದುವರೆದು ಶ್ರೀಯುತರು, ಭ್ರಷ್ಟಾಚಾರ ಒಂದು ಸಮಸ್ಯೆಯಾದರೆ ಮತ್ತು ಕ್ರಿಮಿನಾಲಿಟಿ/ಅಪರಾಧ ಇನ್ನೊಂದು ಸಮಸ್ಯೆಯಾಗಿದೆ ಎಂದರು. 1/3 ಎಂ.ಪಿ.ಗಳ ಮೇಲೆ ಕ್ರಿಮಿನಲ್ ಕೇಸ್‌ಗಳಿದ್ದು, ಅದರಲ್ಲಿ 20% ಸೀರಿಯಸ್ ಕ್ರಿಮಿನಲ್ ಕೇಸ್ ಅಂದರೆ ಕೊಲೆ, ಕೊಲೆ ಪ್ರಯತ್ನ, ಅತ್ಯಾಚಾರ, ಅಪಹರಣ ಆಪಾದನೆ ಹೊಂದಿದ ಜನಪ್ರತಿನಿಧಿಗಳಿದ್ದಾರೆ, ಇಂತಹ ಪ್ರತಿನಿಧಿಗಳು ನಮಗೆ ಬೇಕೇ ಎಂದು ಪ್ರಶ್ನಿಸಿದರು. 8-10 ವರ್ಷಗಳ ಹಿಂದೆ ಸುಪ್ರಿಂ ಕೋರ್ಟ್ ‘ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆ ಹೊಂದಿದ ಆಪಾದನೆ ಇರುವವರು ತಕ್ಷಣ ಡಿಸ್‌ಕ್ವಾಲಿಫೈ ಆಗಬೇಕುʼ ಎಂದು ತೀರ್ಪು ನೀಡಿತು, ನಂತರ ಅದು ಕಾನೂನಾಗಿದೆ ಎಂದರು. ಅದರಂತೆ ಅಪರಾಧ ಸಾಬೀತಾದ ಕೂಡಲೇ ಅವರು ಅನರ್ಹ ಆದಂತೆ, ಇದೊಂದು ರಾಜಕೀಯ ಸುಧಾರಣೆ ಎಂದು ನಾವು ಹೇಳಬಹುದು ಎಂದರು. ಆದರೂ ಪ್ರಜಾಪ್ರಭುತ್ವ ಸಾಹುಕಾರರ ಡೆಮಾಕ್ರಸಿಯಾಗಿದೆ, ಇದರಲ್ಲಿ ಹೇಗೆ ಬದಲಾವಣೆ ತರಬಹುದು ಎಂದು ನಾವು ಯೋಚಿಸಬೇಕಾಗಿದೆ ಎಂದರು. ಬಡವರಿಗಿಂತ ಸಾಹುಕಾರರು ಶೆಕಡಾ 20% ಗೆಲ್ಲುವ ಸಂಭವವಿರುವ ಅಂಕಿ-ಅಂಶವನ್ನು ತಿಳಿಸಿದರು. ಪಕ್ಷಗಳಗೆ ಎಲ್ಲಾ ಕಡೆಗೆ ಅಭ್ಯರ್ಥಿಗಳು ಸಿಗುವುದಿಲ್ಲ ಆಗ ಕ್ರಿಮಿನಲ್ಸ್ಗಳು ಬಂದು ನಮಗೆ ನೀವು ದುಡ್ಡು ಕೊಡುವುದು ಬೇಡ ನಾವು ಗೆದ್ದು ಬರುತ್ತೇವೆಂದು ಹೇಳಿ ಟಿಕೇಟ್ ಪಡೆದು ಸ್ಪರ್ಧಿಸುತ್ತಾರೆ. ಅದೇ ರೀತಿಯಾಗಿ ಜನರು ಸಹ ನಮ್ಮವನು, ನಮ್ಮ ಧರ್ಮ, ಜಾತಿಯವರು, ನಮಗೆ ಸಹಾಯ ಮಾಡುತ್ತಾನೆಂದು ಕ್ರಿಮಿನಲ್‌ಗೆ ಸರ್ಫೋಟ್ ಮಾಡುತ್ತಾರೆ. ಇಂತಹ ಸನ್ನಿವೇಶದಲ್ಲಿ ಸಮಾಜ ಸೇವೆ ಮಾಡುವವರಿಗೆ ಸಮಾಜ ಸೇವೆ ಮಾಡುವ ಅವಕಾಶ ಸಿಗುವುದಿಲ್ಲ. ಯಾರಲ್ಲಿ ಅಕ್ರಮ ಹಣ ಇದೆಯೋ ಅಂತವರು ಒಳ್ಳೆಯ ಕೆಲಸ ಮಾಡಿದ್ದೆನೆಂದು ಹೇಳಲು ಯಾವುದೇ ವಿಷಯ ಇಲ್ಲದಿರುವಾಗ ಮತದಾರರನ್ನು-ಮತಗಳನ್ನು ಕೊಂಡುಕೊಳ್ಳಲು ನೋಡುತ್ತಾರೆ. ಇದು ಕಳೆದ 15-20 ವರ್ಷಗಳಲ್ಲಿ ಬಹಳ ದೊಡ್ಡ ಸಮಸ್ಯೆಯಾಗಿದೆ. ಈಗಿನ ಕಾಲದಲ್ಲಿ ಜಾತಿ ಮುಖ್ಯ ವಿಷಯವಾಗಿದ್ದು, ನಾನು ನೋಡಿದಂತೆ ಜನರು ಬಂದು ನಮ್ಮ ಇಷ್ಟು ಮತಗಳಿಗೆ ಎಂದು ಬೆಳಿಗ್ಗೆ ಒಂದು ಪಕ್ಷದವರಲ್ಲಿ, ಸಂಜೆ ಒಂದು ಪಕ್ಷದರಲ್ಲಿ ಹಣ ಪಡೆದು, ಚುನಾವಣೆ ದಿನ ಯಾವುದೋ ಒಂದು ಪಕ್ಷಕ್ಕೆ ವೋಟ್ ಹಾಕುವುದನ್ನು ನಾನು ನೋಡಿದ್ದೇನೆಂದು ತಮ್ಮ ಅನುಭವ ಹೇಳಿದರು.

ಅಷ್ಟೇ ಅಲ್ಲದೇ ಶ್ರೀಯುತರು ಉಪನ್ಯಾಸವನ್ನು ಮುಂದುವರೆಸುತ್ತಾ ಸುದ್ದಿ ಮಾಧ್ಯಮದವರ ಪಾತ್ರದ ಕುರಿತು ತಿಳಿಸುತ್ತಾ, ಚುನಾವಣೆ ಟಿಕೆಟ್ ಘೋಷಣೆಯಾದ ದಿನ ಬಂದು ‘ಸರ್ ನಿಮಗೆ ಒಂದು ಮೀಡಿಯಾ ಪ್ಯಾಕೇಜ್ ತಯಾರು ಮಾಡಿದ್ದೇವೆಂದು, ಈ ರೀತಿ ಲೇಖನ ಬರುತ್ತದೆಂದು, ಇಷ್ಟು ಖರ್ಚು ಮಾಡಬೇಕೆಂದು ಪಟ್ಟಿ ನೀಡುತ್ತಾರೆ’ ಎಂದರು. ಇಂತಹ ಹಲವಾರು ಕಾರಣಗಳಿಗಾಗಿ ನಿಜವಾದ ಖರ್ಚು ಮತ್ತು ಅಧಿಕೃತ ಖರ್ಚಿಗೆ ವ್ಯತ್ಯಾಸ ಇರಬಹುದು ಎಂಬುದು ತಮ್ಮ ಅನಿಸಿಕೆ ತಿಳಿಸಿದರು.

ಶ್ರೀಯುತರು ಪಕ್ಷಗಳಿಗೆ ಬರುವ ಬಂಡವಾಳದ ಬಗ್ಗೆ ಮಾತನಾಡುತ್ತಾ, 90% ಬಂಡವಾಳ ಚಿಕ್ಕ-ಚಿಕ್ಕ ದೇಣಿಗೆಗಳಿಂದ ಬರುತ್ತದೆ ಮತ್ತು ಅದನ್ನು ಲೆಕ್ಕಪತ್ರದಲ್ಲಿ ತೋರಿಸಬೇಕಿಲ್ಲ ಮತ್ತು ರಸಿದಿ ಕೊಡಬೇಕಾಗಿಲ್ಲ. ಹಾಗೆಯೇ ಮೊದಲು ರೂ.20,000/- ವರೆಗೆ ಹಣ ದೇಣಿಗೆ ಬಂದರೆ  ಅದನ್ನು ಲೆಕ್ಕದಲ್ಲಿ ತೋರಿಸುವ ಅವಶ್ಯಕತೆ ಇರಲಿಲ್ಲ. ಆದರೆ ಈಗ ರೂ.2000/- ಕ್ಕಿಂತ ಹೆಚ್ಚಿಗೆ ಬಂದರೆ ಅದನ್ನು ಲೆಕ್ಕಪತ್ರದಲ್ಲಿ ತೋರಿಸಲೆಲೇಬೇಕಾಗುತ್ತದೆ ಎಂದರು. ಅರುಣ ಜೆಟ್ಲಿಯವರು ಹಣಕಾಸು ಸಚಿವರಾಗಿದ್ದ ಸಮಯದಲ್ಲಿ ಎಲೆಕ್ಟೊರಲ್ ಬಾಂಡ್ ಎಂಬ ವ್ಯವಸ್ಥೆಯನ್ನು ಜಾರಿಗೆ ತಂದರು. ಅಂದರೆ ಯಾವುದಾದರೊಂದು ಕಂಪನಿ ಎಸ್.ಬಿ.ಐ.ನಲ್ಲಿ ಎಲೆಕ್ಟೊರಲ್ ಬಾಂಡ್ಸ್ ಕೊಂಡುಕೊಂಡು ರಾಜಕೀಯ ಪಕ್ಷಕ್ಕೆ ಕೊಡಬಹುದು, ಇದೊಂದು ಡ್ರಾಫ್ಟ್ ತರಹವಿದ್ದು, ಇದನ್ನು ಯಾರು ಕೊಂಡುಕೊಂಡರು ಯಾರಿಗೆ ಕೊಟ್ಟರು ಎಂಬುದು ಯಾರಿಗೂ ಗೊತ್ತಾಗುವುದಿಲ್ಲ ಎಂದರು. ಈ ರೀತಿಯ ಒಂದು ಪರಿಸ್ಥಿತಿ ಇದ್ದು, ಇದರ ವಿರುದ್ಧ ನಾನು ಸಂಸತ್ತಿನಲ್ಲಿ ಹೋರಾಡಿದ್ದೇನೆಂದು ತಮ್ಮ ಹೋರಾಟದ ಬಗ್ಗೆ ವಿವರಿಸಿದರು.

ಸುಧಾರಣೆಗಳ ಕುರಿತು ಮಾತನಾಡುತ್ತಾ ಚುನಾವಣೆ ನಡೆಸಲು ನಿಗದಿಯಾದ ಕಾನೂನುಬದ್ಧ ವೆಚ್ಚಗಳನ್ನು ಹೆಚ್ಚಿಸಬೇಕು ಅಥವಾ ನಿಗದಿತ ಮಿತಿಯನ್ನು ತೆಗೆದುಹಾಕಬೇಕು ತಮ್ಮ ಅಭಿಪ್ರಾಯಪಟ್ಟರು. ಸುಧಾರಣೆಗಳ ಕುರಿತ ತಮ್ಮ ಶಿಫಾರಸ್ಸಗಳನ್ನು ತಿಳಿಸುತ್ತಾ ಶ್ರೀಯುತರು, ಪ್ರಪಂಚದಲ್ಲಿ ಸಾರ್ವಜನಿಕರಿಂದ ಆಯೋಜಿತವಾದ ಚುನಾವಣೆಗಳು ಶುರುವಾಗಿದೆ, ಎಂದರೆ ರಾಷ್ಟ್ರೀಯ ಬಜೆಟ್‌ನಲ್ಲಿ ಒಂದು ರಾಷ್ಟ್ರೀಯ ಚುನಾವಣಾ ಫಂಡ್‌ನ್ನು ನಿಯಮಗಳಿಗನುಸಾರವಾಗಿ ಸಂಗ್ರಹಿಸಿ, ಅದರಲ್ಲಿ ಸ್ವಲ್ಪ ಪಕ್ಷಗಳಿಗೆ ಮತ್ತು ಅಭ್ಯರ್ಥಿಗಳಿಗೆ ಕೊಡಬೇಕು ಎಂದು ಹೇಳಿದರು. ಎಲ್ಲರೂ ಸ್ವಚ್ಛ ರಾಜಕಾರಣ ಬೇಕು ಅಂತಾರೆ. ಆದರೆ ಚುನಾವಣಾ ಪ್ರಚಾರಕ್ಕೆ ಯಾರೂ ಹಣ ಕೊಡುವುದಿಲ್ಲ ಮತ್ತು ಕೊಡಲು ಆಗುವುದಿಲ್ಲ, ಇಂತಹ ಪರಿಸ್ಥಿತಿ ಇದೆ. ಸಾರ್ವಜನಿಕರಿಂದ ಆಯೋಜಿತವಾದ ಚುನಾವಣೆಗಳು ಶುರುವಾದರೆ, ಸ್ವಚ್ಛ ರಾಜಕೀಯಕ್ಕೆ ಒಂದು ವೇದಿಕೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೇ ಯಾರು ಯಾರು ಚಿಕ್ಕ ದೇಣಿಗೆ ಕೊಡಲು ಇಚ್ಚಿಸುತ್ತಾರೊ, ಅವರಿಗೆ ಸರಿದೂಗುವಂತಹ ಬಂಡವಾಳ ಸಂಗ್ರಹಿಸುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಒಂದು ಸಲ ದೇಶದಲ್ಲಿ ಸ್ವಚ್ಛ ರಾಜಕಾರಣ ಪ್ರಾರಂಭವಾದರೆ ಭ್ರಷ್ಟಾಚಾರ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದಾಗಿ ಒಳ್ಳೆಯ ಜನರಿಗೆ ಅವಕಾಶ ಸಿಗುತ್ತದೆ ಎಂದರು.ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಆಗಲೇ ತಾವು ಹೇಳಿದ ವಿಷಯಗಳಿಗೆ ಹೆಚ್ಚಿನ ಸ್ಪಷ್ಟತೆ ಮತ್ತು ವಿವರನೆಗಳನ್ನು ನೀಡಿ ತಮ್ಮ ಉಪನ್ಯಾಸವನ್ನು ಮುಕ್ತಾಯಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಕೆ.ಆರ್. ವೇಣುಗೋಪಾಲ್ ಅವರು ವಹಿಸಿದ್ದರು. ಕಾನೂನು ಸಹ ಪ್ರಾಧ್ಯಪಕರು ಮತ್ತು ಎನ್.ಎಸ್.ಎಸ್. ಸಂಯೋಜನಾಧಿಕಾರಿಯಾದ ಡಾ. ಸತೀಶ ಗೌಡ್ ಎನ್. ರವರು ಉಪಸ್ಥಿತರಿದ್ದರು.

ವರದಿ : ಶರಣಮ್ಮ ಕೆ. ಗಂಗಾವತಿ, (ಬೆಂಗಳೂರು ಎನ್. ಎಸ್. ಎಸ್. ಘಟಕದ ಅನುಮತಿಯೊಂದಿಗೆ)

ವಿ. ಸೂ. ನ್ಯಾಯನಿಷ್ಠ ಹಲವು ವಿಚಾರಧಾರೆಗಳನ್ನು ಮತ್ತು ಕಾನೂನಿನ ಮಜಲುಗಳನ್ನು ಓದುಗರ ಮುಂದಿಡಬೇಕೆಂಬ ಉದ್ದೇಶದಿಂದ ಈ ಉಪನ್ಯಾಸ ಮಾಲಿಕೆಯನ್ನು ವರದಿಯ ರೂಪದಲ್ಲಿ ಪ್ರಕಟಿಸುತ್ತಿದೆ. ಉಪನ್ಯಾಸಕರ ಅಭಿಪ್ರಾಯಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು ನ್ಯಾಯನಿಷ್ಠ ಯಾವುದೇ ರೀತಿಯಲ್ಲಿ ಅವನ್ನು ಅನುಮೋದಿಸಿಯೋ ಅಥವಾ ತಿರಸ್ಕರಿಸಿಯೋ ಇರುವುದಿಲ್ಲ.

ಶರಣಮ್ಮ ಕೆ. ಗಂಗಾವತಿ ಅವರು ಮೂಲತಃ ಗಂಗಾವತಿಯವರಾಗಿದ್ದು ಪ್ರಸ್ತುತ ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾರೆ.

Spread the love