ಉಪನ್ಯಾಸಗಳು

ಉಪನ್ಯಾಸ ಮಾಲಿಕೆ- 5 : “ಜನಪರ ಪರಿಸರ” – ಶ್ರೀ ನಾಗೇಶ ಹೆಗಡೆ

ಉಪನ್ಯಾಸಕರು:  ಶ್ರೀ ನಾಗೇಶ ಹೆಗಡೆ, ಸಂದರ್ಶನ ಪ್ರಾಧ್ಯಾಪಕರು, ಐಐಜೆಎನ್ಎಂ ಮತ್ತು ಸಹಾಯಕ ಸಂಪಾದಕರು, ಪ್ರಜಾವಾಣಿ ದಿನಪತ್ರಿಕೆ.

ಎನ್. ಎಸ್. ಎಸ್ ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ 75ನೇ ಭಾರತ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾದ, “ವಿಚಾರ ಕಲರವ” ಉಪನ್ಯಾಸ ಮಾಲಿಕೆ -5ರಲ್ಲಿ ಉಪನ್ಯಾಸ ನೀಡಿದ್ದು, ಶ್ರೀ ನಾಗೇಶ ಹೆಗಡೆ, ಸಂದರ್ಶನ ಪ್ರಾಧ್ಯಾಪಕರು, ಐಐಜೆಎನ್ಎಂ ಮತ್ತು ಸಹಾಯಕ ಸಂಪಾದಕರು, ಪ್ರಜಾವಾಣಿ ದಿನಪತ್ರಿಕೆ, “ಜನಪರ ಪರಿಸರ” ಎಂಬ ವಿಷಯದ ಮೇಲೆ.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಎಲ್ಲರೂ ಸ್ವಾತಂತ್ರ್ಯ ಕಳೆದುಕೊಂಡು ಮನೆಯಲ್ಲಿರುವ ಸಂದರ್ಭ ಬಂದಿರುವುದು, ಅಮೃತ ಹೋಗಲಿ ಆಮ್ಲಜನಕಕ್ಕೂ ಪರದಾಡುವ ಪರಿಸ್ಥಿತಿ ಬಂದಿರುವುದು ವಿಷಾದದ ಸಂಗತಿ ಎಂದು ಮಾತಿಗಾರಂಭಿಸಿದ ಹೆಗಡೆಯವರು, ಇಂದು ವಾಣಿಜ್ಯ ಉದ್ದೇಶಗಳಿಗಲ್ಲದ ಹಸಿರು ಮರೆಯಾಗುತ್ತಿದೆ, ಸಂರಕ್ಷಿತ ಅರಣ್ಯವು 4%ಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದರು. ಮಾಲಿನ್ಯವು ಭೂಮಿಯನ್ನು ಆಕ್ರಮಿಸಿ ಪರಿಸರ ಮಾಲಿನ್ಯ ಉಂಟಾಗಿ ಇಡೀ ಜೀವಮಂಡಲಕ್ಕೆ ಅಪಾಯ ಬಂದೊದಗಿದ ಸಂದರ್ಭದಲ್ಲಿ ವಿಶ್ವಸಂಸ್ಥೆ “ಪರಿಸರ ಪುನಶ್ಚೇತನ ದಶಕ” ಎಂದು ಘೋಷಣೆ ಮಾಡಿದೆ ಎಂದು ವಿವರಿಸಿದರು. ಹಾಗಂದರೇನು ಎಂಬುದನ್ನು ವಿವರಿಸಿದ ಅವರು, ಅಂದರೆ ಇವತ್ತಿನಿಂದ ಮುಂದೆ ಹತ್ತು ವರ್ಷಗಳ ತನಕ ಈ ನಿಸರ್ಗದ ಮರುಸಂವರ್ಧನೆಯ ಕಾರ್ಯ ನಡೆಸಬೇಕು ಎಂದರು.

ಮುಂದಿನ ತಮ್ಮ ಮಾತುಗಳಲ್ಲಿ “ಜೀವಮಂಡಲಗಳ ಪುನಶ್ಚೇತನ” ದಲ್ಲಿ ಯುವಜನ ಹೇಗೆ ಪಾಲ್ಗೊಳ್ಳಬಹುದು ಎಂಬ ವಿಷಯವನ್ನು ಕಟ್ಟಿಕೊಟ್ಟರು ಶ್ರೀ ನಾಗೇಶ ಹೆಗಡೆಯವರು. ಪ್ರಸ್ತುತ ದಿನದಲ್ಲಿ ಕೋವಿಡ್-19 ಎನ್ನುವ ಮಹಾಮಾರಿಯ ಕಾಯಿಲೆಯಿಂದಾಗಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದಾಗಿ ಜನರ ವಾಹನ ಸಂಚಾರ, ಕೈಗಾರಿಕೆಗಳು, ಕಾರ್ಖಾನೆಗಳು, ಗಣಿಗಾರಿಕೆಗಳು, ಉದ್ಯಮಗಳು, ಇವೆಲ್ಲವನ್ನೂ ನಿಲ್ಲಿಸಿದ್ದರಿಂದ ಇವುಗಳಿಂದ ಬರುವ ವಿಷಾನಿಲವು ಪರಿಸರಕ್ಕೆ ತಾಕದೇ ಇದ್ದದ್ದರಿಂದ ಪರಿಸರವು ತಾನಾಗಿಯೇ ಪುನಶ್ಚೇತನಗೊಂಡ ಸಾಕಷ್ಟು ಉದಾಹರಣೆಗಳು ನಾವು ಕಂಡಿದ್ದೇವೆ ಎಂದು ನೆನಪಿಸಿದ ಅವರು, ಕೋವಿಡ್ ಮತ್ತು ಪರಿಸರಕ್ಕಿರುವ ಸಂಬಂಧವನ್ನು ವಿಶದವಾಗಿ ಹೇಳಿದರು. ಹಲವು ಕಾಡು ಪ್ರಾಣಿ – ಪಕ್ಷಿಗಳ ದೇಹಗಳಿಂದ ಬರುವ ರೋಗಾಣುಗಳಿಂದ ಹಲವು ಸಾಂಕ್ರಾಮಿಕ ರೋಗಗಳನ್ನು ಪಟ್ಟಿ ಮಾಡಿದರು. ಕಳೆದ 100-150 ವರ್ಷಗಳಿಂದ ವಾಯು ಮಾಲಿನ್ಯದಿಂದಾಗಿ- ಉಸಿರಾಡುವ ಗಾಳಿ ಕಲುಷಿತಗೊಳ್ಳುತ್ತಿದೆ, ಜಲಮಾಲಿನ್ಯದಿಂದಾಗಿ – ಕುಡಿಯುವ ನೀರಿನ ಮಾಲಿನ್ಯವಾಗುತ್ತಿದೆ, ನೆಲ ಮಾಲಿನ್ಯದಿಂದಾಗಿ ಬೆಳೆಯುವ ಬೆಳೆ ನಾಶ ಹೊಂದುತ್ತಿದೆ, ಆಹಾರ ಮಾಲಿನ್ಯದಿಂದಾಗಿ ತಿನ್ನುವ ಆಹಾರ ಕೊಳಕಾಗುತ್ತಿದೆ- ಇದರಿಂದಾಗಿ ಜನರಲ್ಲಿರುವ ರೋಗ ಪ್ರತಿರೋಧಕ ಶಕ್ತಿ ಕ್ರಮೇಣ ಕಡಿಮೆಯಾಗುತ್ತಿದೆ ಎಂದರು. ಆದ್ದರಿಂದ ಅಸ್ತಮಾ‍, ಹೃದ್ರೋಗ, ಮಧುಮೇಹ, ಡೆಂಗ್ಯೂ, ಚಿಕನ್ ಗುನ್ಯಾ, ಮೆದುಳು ಜ್ವರ, ಕಾಲರಾ, ಇಲಿ ಜ್ವರ, ವಿವಿಧ ರೀತಿಯಾದ ಫಂಗಸ್ಗಳು, ಬ್ಯಾಕ್ಟೀರಿಯಾಗಳು ಮತ್ತು ವೈರಸ್ ಗಳು ಇನ್ನೂ ಮುಂತಾದ ರೋಗಗಳು ನಮ್ಮನ್ನು ಆಕ್ರಮಿಸಿಕೊಳ್ಳುತ್ತಿವೆ. ಇದಕ್ಕೆ ಕಾರಣ ನಿಸರ್ಗವಲ್ಲ, ಆದರೆ ನಾವು ಪರಿಸರವನ್ನು ಕಡೆಗಣಿಸಿದ್ದೇ ಎಂದು ಹೇಳಬಹುದು ಎಂದರು.

ಮುಂದುವರಿದು ಭೂಮಿಯ ಉಗಮವನ್ನು ಸ್ವಾರಸ್ಯವಾಗಿ ವಿವರಿಸಿದರು ಹೆಗಡೆಯವರು. ಭೂಮಿಯು ಸುಮಾರು 460 ಕೋಟಿ ವರ್ಷಗಳ ಹಿಂದೆ ಸೃಷ್ಟಿಯಾಗಿದ್ದರೂ, ಸುಮಾರು 250 ಕೋಟಿ ವರ್ಷಗಳ ಹಿಂದೆ ಏಕಕೋಶ ಜೀವಿಗಳು ಸೃಷ್ಟಿಯಾದವು ಹಾಗೂ ಸುಮಾರು ಹನ್ನೊಂದು ಲಕ್ಷ ವರ್ಷಗಳ ಹಿಂದೆ ಮನುಷ್ಯ ಬಂದನು. ಕೇವಲ 7 ರಿಂದ 8 ಸಾವಿರ ವರ್ಷಗಳ ಈಚೆಗೆ ಅವನು ಕೃಷಿಕನಾಗಿ ಕೃಷಿಯನ್ನು ಮಾಡಲು ಪ್ರಾರಂಭಿಸಿದನು. ನಂತರ ಸುಮಾರು 300 ವರ್ಷಗಳ ಹಿಂದೆ ಭೂಮಿಯ ಒಳಗೆ ಅಡಗಿದ್ದ ನಿಸರ್ಗಗಳಾದ ಪೆಟ್ರೋಲಿಯಂ, ಕಲ್ಲಿದ್ದಲು, ನಾನಾ ರೀತಿಯ ಖನಿಜಗಳನ್ನು ಹೊರಗೆ ತೆಗೆಯಲು ಪ್ರಾರಂಭಿಸಿದನು. ಹಾಗಾಗಿ ಸುಮಾರು ಕಳೆದ 120 ವರ್ಷಗಳ ಈಚೆಗೆ ಕಲ್ಲಿದ್ದಲು, ಪೆಟ್ರೋಲ್, ಆ್ಯಂಟಿಬಯೋಟಿಕ್ಸ್, ವಿಮಾನ, ಅಣು ಬಾಂಬ್, ರಾಕೆಟ್, ಬಾಹ್ಯಾಕಾಶ, ಕಂಪ್ಯೂಟರ್ ಇವೆಲ್ಲವೂ ಬಂದವು, ಇದರ ಜೊತೆಜೊತೆಗೆ ಕೊರೋನಾ ಕೂಡ ಬಂತು. ಕಳೆದ ಕೇವಲ 120 ವರ್ಷಗಳ ಹಿಂದೆ ಭೂಮಿಯು ಶಾಂತವಾಗಿತ್ತು.

ಇದರೊಟ್ಟಿಗೆ ನಮ್ಮ ಕಾಲಮಾನವನ್ನು ಭೂಮಿಯ ಜಾಗತಿಕ ತಾಪಮಾನ ಏರಿಕೆಯೊಂದಿಗೆ ಗುರುತಿಸುತ್ತಿದ್ದ ಕಾಲ ಹೋಗಿ ಈಗ ಜಾಗತಿಕ ತಾಪನ ಅಂತ ಕರೆಯಲು ಆರಂಭಿಸಿದ್ದಾರೆ, ವಾತಾವರಣ ಬದಲಾವಣೆಯ ಬದಲು ವಾತಾವರಣ ಬಿಕ್ಕಟ್ಟಿನ ಬಗ್ಗೆ ವಿಜ್ಞಾನಿಗಳು ಮಾತನಾಡುತ್ತಿದ್ದಾರೆ ಎಂದರು ಹೆಗಡೆಯವರು.

ಸುಮಾರು ನೂರೈವತ್ತು ವರ್ಷಗಳಲ್ಲಿ ಜಗತ್ತಿನಲ್ಲಿ ಏರಿದ ಜನಸಂಖ್ಯೆ:
1800 -100 ಕೋಟಿ
1930 -200 ಕೋಟಿ
1960 -300 ಕೋಟಿ
1987 -500 ಕೋಟಿ
1999 -600 ಕೋಟಿ
2010 -700 ಕೋಟಿ
2020 -740 ಕೋಟಿ
ಹೀಗೆ ಜನಸಂಖ್ಯೆ ಹೆಚ್ಚಾದಂತೆಲ್ಲಾ ವಿವಿಧ ಬಗೆಯ ಗಣಿಗಾರಿಕೆ, ಉತ್ಪಾದನೆ, ನಿರ್ಮಾಣಗಳು, ಬಳಕೆ, ಸಾರಿಗೆ, ನೀರಿನ ಬಳಕೆಗಳು ಹೆಚ್ಚಾಗುತ್ತಾ ಹೋಗಿ, ವಾತಾವರಣದ ಶಾಖ ಹೆಚ್ಚಾಗುತ್ತಾ ಹೋಗಿದ್ದನ್ನು ನೆನಪಿಸಿಕೊಟ್ಟರು ಹೆಗಡೆಯವರು.

ವಾತಾವರಣದ ಶಾಖ ಹೆಚ್ಚಾಗುವುದಕ್ಕೆ ಈ ಕೆಳಗಿನ 3 ಮುಖ್ಯ ಕಾರಣಗಳನ್ನು ಶ್ರೀಯುತರು ಪಟ್ಟಿ ಮಾಡಿದರು:
1)ಕೃಷಿ
2)ಸಂಚಾರ
3)ಉದ್ಯಮ
ಇವು ಅತ್ಯಂತ ಹೆಚ್ಚಿನ ಕಾರ್ಬನ್ ಡೈ ಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತವೆ.

ಸಮುದ್ರಕ್ಕೆ ಸಮುದ್ರವೇ ಬತ್ತಿ ಹೋಗುವಂತೆ, ನದಿ – ಸರೋವರಗಳು ಬತ್ತಿ ಹೋಗುವಂತೆ, ಗಣಿಗಾರಿಕೆ, ಕೃಷಿ ಚಟುವಟಿಕೆಗಳ್ನ್ನು ನಡೆಸುವ ಮನುಷ್ಯರು ನಿಸರ್ಗದ ಕಡೆ ಗಮನವೇ ಕೊಡದೆ ಮಹಾಮಾನವ ಯುಗದತ್ತ ನುಗ್ಗುವುದು ಖೇದಕರ ಎಂದು ಹೆಗಡೆಯವರು ವಿಷಾದ ವ್ಯಕ್ತಪಡಿಸಿದರು.

ಇಷ್ಟೆಲ್ಲಾ ಪರಿಸರ ಧ್ವಂಸ ಮಾಡಿ ಸವಲತ್ತುಗಳು ಸಿಗುವುದು ಮಾತ್ರ ಕೆಲವೇ ಜನರಿಗೆ ಎಂದ ಹೆಗಡೆಯವರು, ಎಲ್ಲರಿಗೂ ಸಮಾನ ಅವಕಾಶ ಇರಬೇಕು, ಸಮಾನ ಸವಲತ್ತುಗಳನ್ನು ಒದಗಿಸಿಕೊಡಬೇಕು ಎಂಬ ನ್ಯಾ. ನಾಗಮೋಹನ್ ದಾಸ್ ರವರು ಹೇಳಿದ್ದನ್ನು ನೆನಪಿಸಿಕೊಂಡರು. ಆದರೆ ಈ ಜಗತ್ತಿನ 40% ರಷ್ಟು ಸಂಪತ್ತನ್ನು ಕೇವಲ 2% ರಷ್ಟು ಜನ ಬಳಸುತ್ತಿದ್ದಾರೆ. ಈ ಎಲ್ಲಾ ಸೌಕರ್ಯಗಳನ್ನು ಶತಕೋಟಿಯಷ್ಟು ಆಸ್ತಿಯನ್ನು ಹೊಂದಿದವರು ಮಾತ್ರ ಅನುಭವಿಸುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಜನರು ಕುಡಿಯುವ ನೀರಿಗೂ ಸಹ ಪರದಾಡುತ್ತಿದ್ದಾರೆ ಎಂದರು ಶ್ರೀಯುತರು.

ಹಳ್ಳಿಗಳು- ನಗರಕ್ಕೆ ಸ್ವಚ್ಛವಾದ ವಾತಾವರಣ, ವಿದ್ಯುಚ್ಛಕ್ತಿ , ಗ್ರಾನೆಟ್, ಮಣ್ಣು, ಮುಂತಾದ ನೈಸರ್ಗಿಕ ಸಂಪನ್ಮೂಲಗಳನ್ನು ಒದಗಿಸುತ್ತವೆ. ಆದರೆ, ನಗರಗಳಿಂದ – ಹಳ್ಳಿಗಳಿಗೆ ಪ್ಲ್ಯಾಸ್ಟಿಕ್‌, ಗುಟ್ಕಾ, ಕೆಮಿಕಲ್ ವಿಷಗಳು, ಗಾಜಿನ ಬಾಟಲಿಗಳು, ಪಿಸ್ತೂಲುಗಳು, ಬುಲೆಟ್ ಹೀಗೆ ಮುಂತಾದ ಹಾನಿಕಾರಕ ವಸ್ತುಗಳನ್ನು ವಾಪಸ್ ಕೊಡುತ್ತವೆ.

ಹೇಗೆ ಜಾಹೀರಾತುಗಳು, ದಿನಪತ್ರಿಕೆ, ಮೊಬೈಲು, ಸಾಮಾಜಿಕ ಜಾಲತಾಣಗಳು, ದೂರದರ್ಶನ ಇತ್ಯಾದಿ ನಮ್ಮ ನಿತ್ಯ ಜೀವನದ ದೊಡ್ಡ ಭಾಗವಾಗಿ ನಮ್ಮನ್ನು ಹೆಚ್ಚು ಹೆಚ್ಚು ಕೊಳ್ಳುಬಾಕರನ್ನಾಗಿ ಮಾಡುತ್ತದೆಯೋ, ಅದೇ ರೀತಿ ಪರಿಸರದೊಂದಿಗಿನ ಸಹಬಾಳ್ವೆಯನ್ನೂ ಯಥೇಚ್ಛವಾಗಿ ಪಸರಿಸಬೇಕು. ಅದಕ್ಕೆಂದೇ ವಿಶ್ವಸಂಸ್ಥೆ ಪರಿಸರದ ಪುನಃಶ್ಚೇತನದ ದಶಕವಾಗಿ ಆಚರಿಸಲು ಕರೆಕೊಟ್ಟಿದೆ ಎಂದರು ಶ್ರೀ. ನಾಗೇಶ ಹೆಗಡೆಯವರು.

ಅಭಿವೃದ್ಧಿಯನ್ನು ಹೊಸತಾಗಿ ವ್ಯಾಖ್ಯಾನಿಸುವ ಅಗತ್ಯವಿದೆ ಎಂದ ಹೆಗಡೆಯವರು, ಕಂದಕದ ಅಂಚಿಗೆ ಬಂದಾಗ ಒಂದ್ಹೆಜ್ಜೆ ಹಿಂದಿಡುವುದೇ ನಿಜವಾದ ಅಭಿವೃದ್ಧಿ ಎಂದರು. ಹಾಗಾಗಿ ನಾವೆಲ್ಲರೂ ಈ ಸುಂದರ ನಿಸರ್ಗವನ್ನು ಉಳಿಸುವುದು ಮತ್ತು ಅಭಿವೃದ್ಧಿಗೊಳಿಸುವುದು ಅಗತ್ಯವಾಗಿದೆ, ನಾವೆಲ್ಲರೂ ಅಂದರೆ ಕೇವಲ ಪರಿಸರವಾದಿಗಳಷ್ಟೇ ಅಲ್ಲದೆ, ವಿಜ್ಞಾನಿಗಳು, ವಕೀಲರು, ಡಾಕ್ಟರುಗಳು, ಟೀಚರ್ಸ್ಗಳು, ಇಂಜಿನಿಯರ್ಸ್ಗಳು, ಅಕೌಂಟೆಂಟ್ಸ್ ಗಳು, ಹೀಗೆ ಎಲ್ಲರೂ ಯಾವುದೇ ವೃತ್ತಿಗೆ ಹೋದರೂ ಸಹ ಪರಿಸರ ಸಂರಕ್ಷಣೆ ಮಾಡುವುದನ್ನು ಮರೆಯದೆ ಎಲ್ಲರೂ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಬೇಕು ಎಂದರು. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾಗೂ ಜನರಿಗೆ ಸಾಧ್ಯವಾದಷ್ಟು ನಾನಾ ರೀತಿಯ ಅಭಿವ್ಯಕ್ತಿಗಳ ಮೂಲಕ ಅಂದರೆ ಲೇಖನಗಳ ಮೂಲಕ, ಚಿತ್ರಗಳ ಮೂಲಕ, ಬೀದಿ ನಾಟಕಗಳ ಮೂಲಕ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಎಲ್ಲಾ ಜನರಲ್ಲಿಯೂ ಜಾಗೃತಿ ಮೂಡಿಸಬೇಕು. ಹೆಚ್ಚು ಹೆಚ್ಚು ಮಾಹಿತಿ ಸಂವಹನೆಯಾಗಬೇಕು ಎಂದು ಒತ್ತಿ ಹೇಳಿದರು ಶ್ರೀಯುತ ಹೆಗಡೆಯವರು.

ಸಾಮಾನು ಕೊಳ್ಳುವಾಗ ಅದರೊಟ್ಟಿಗೆ ತರುವ ಪ್ಯಾಕಿಂಗ್ ವಸ್ತುಗಳನ್ನು ವಾಪಸ್ ಪಡೆಯಲು ಆಗ್ರಹಿಸಬೇಕು, ಪರಿಸರ ಸ್ನೇಹಿ ವಸ್ತುಗಳನ್ನು ತಯಾರಿಸಲು ನಿರ್ಬಂಧಿಸಬೇಕು, ವಕೀಲರು – ನ್ಯಾಯಾಧೀಶರು ಅವಶ್ಯಕವಾದ ಕಾನೂನು ಸಹಾಯ ಮಾಡಬೇಕು ಎಂದರು. ಮಹಾರಾಷ್ಟ್ರದಲ್ಲಿ ಯುವಕರ ಗುಂಪೊಂದು ಮಳೆ ನೀರು ಇಂಗಿಸಿ ಅವರ ಪರಿಸರವನ್ನು ಮರುಚೇತನಗೊಳಿಸುವಲ್ಲಿ ಯಶಸ್ವಿಯಾದ, ಕೆರೆಗಳಿಗೆ ಮರುಜೀವ ಕೊಟ್ಟ, ಅರ್ಚಕರೊಬ್ಬರು ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಉಪಯೋಗಕ್ಕೆ ಇತಿಶ್ರೀ ಹಾಡಿದ ಉದಾಹರಣೆಗಳನ್ನು ಕೊಟ್ಟ ಹೆಗಡೆಯವರು ಹೇಗೆ ನಾವು ಬೇರೆ ಬೇರೆ ವೃತ್ತಿಯಲ್ಲಿದ್ದರೂ ಪರಿಸರ ಸ್ನೇಹಿ ನಡುವಳಿಕೆಗಳನ್ನು ಅಳವಡಿಸಿಕೊಳ್ಳಬೇಕೆಂದು ವಿವರಿಸಿದರು. ಪರಿಸರ ಸಂರಕ್ಷಣೆ ಎನ್ನುವುದು ಕೇವಲ ಜೂನ್ 5 ರಂದು ಅಷ್ಟೆ ಅಲ್ಲದೆ ವರ್ಷದುದ್ದಕ್ಕೂ ಆಚರಣೆ ಮಾಡಬೇಕು, ಆಗ ಮಾತ್ರ ನಮ್ಮ ಮುಂದಿನ ಪೀಳಿಗೆಯವರಿಗೂ ಈ ಉತ್ತಮ ಪರಿಸರವನ್ನು ಅನುಭವಿಸಲು ಅವಕಾಶ ಸಿಗುತ್ತದೆ ಎಂದು ಆಶಿಸಿದರು ಶ್ರೀ ನಾಗೇಶ ಹೆಗಡೆಯವರು. ನಾವು ಪರಿಸರವನ್ನು ರಕ್ಷಣೆ ಮಾಡಿದರೆ ಪರಿಸರ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ನನ್ನ ಅಭಿಪ್ರಾಯವಾಗಿದೆ ಎಂದು ಶ್ರೀಯುತರು ಕೊನೆಯಲ್ಲಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಕೆ. ಆರ್. ವೇಣುಗೋಪಾಲ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಅಧಿಕಾರಿಗಳಾದ ಪ್ರತಾಪ್ ಲಿಂಗಯ್ಯರವರು ಮತ್ತು ಕಾರ್ಯಕ್ರಮದ ಸಂಯೋಜಕರಾದ ಸತೀಶ್ ಗೌಡರವರು ಉಪಸ್ಥಿತರಿದ್ದರು.

ವರದಿ: ಕಾವೇರಿ ಪಿ. ಅಂಟಾಳಮರದ

ವಿ. ಸೂ. ನ್ಯಾಯನಿಷ್ಠ ಹಲವು ವಿಚಾರಧಾರೆಗಳನ್ನು, ಮಾಹಿತಿಗಳನ್ನು ಮತ್ತು ಕಾನೂನಿನ ಮಜಲುಗಳನ್ನು ಓದುಗರ ಮುಂದಿಡಬೇಕೆಂಬ ಉದ್ದೇಶದಿಂದ ಈ ಉಪನ್ಯಾಸ ಮಾಲಿಕೆಯನ್ನು ವರದಿಯ ರೂಪದಲ್ಲಿ ಪ್ರಕಟಿಸಲು ಹೊರಟಿದೆ. ಉಪನ್ಯಾಸಕರ ಅಭಿಪ್ರಾಯಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು ನ್ಯಾಯನಿಷ್ಠ ಯಾವುದೇ ರೀತಿಯಲ್ಲಿ ಅವನ್ನು ಅನುಮೋದಿಸಿಯೋ ಅಥವಾ ತಿರಸ್ಕರಿಸಿಯೋ ಇರುವುದಿಲ್ಲ.

ಕಾವೇರಿ ಪಿ. ಅಂಟಾಳಮರದ ಅವರು ಕೊಪ್ಪಳ ಜಿಲ್ಲೆಯ ಭಾಗ್ಯ ನಗರದ ನಿವಾಸಿಯಾಗಿದ್ದು ಪ್ರಸ್ತುತ ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ.

Spread the love