ಉಪನ್ಯಾಸಗಳು

ಉಪನ್ಯಾಸ ಮಾಲಿಕೆ- 4 : “ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಮತ್ತು ಪ್ರಜಾಪ್ರಭುತ್ವ” – ಪ್ರೊ. ಡಾ. ಸಿ . ಬಸವರಾಜು

ಉಪನ್ಯಾಸಕರು:  ಪ್ರೊ. ಡಾ. ಸಿ . ಬಸವರಾಜು, ಮಾಜಿ ಕುಲಪತಿಗಳು, ಕುಲಸಚಿವರು ಹಾಗೂ ಡೀನರು (ಕಾನೂನು), ಮೈಸೂರು ವಿಶ್ವವಿದ್ಯಾಲಯ

ಬೆಂಗಳೂರು ವಿಶ್ವವಿದ್ಯಾಲಯದ ಎನ್. ಎಸ್. ಎಸ್. ಘಟಕದ ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ವಿಚಾರ ಕಲರವದಲ್ಲಿ, ನಾಲ್ಕನೇ ದಿವಸದ ವಿಷಯ ‘ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಮತ್ತು ಪ್ರಜಾಪ್ರಭುತ್ವ’. ವಿಷಯದ ಕುರಿತು ಮಾತನಾಡಿದ್ದು ಪ್ರೊ. ಡಾ. ಸಿ . ಬಸವರಾಜು, ಮಾಜಿ ಕುಲಪತಿಗಳು, ಕುಲಸಚಿವರು ಹಾಗೂ ಡೀನರು (ಕಾನೂನು), ಮೈಸೂರು ವಿಶ್ವವಿದ್ಯಾಲಯ.

ವಿಷಯ ಬಹಳ ಗಾಂಭೀರವಾಗಿದ್ದು ಎಂದು ಉಪನ್ಯಾಸ ಆರಂಭಿಸಿದ ಪ್ರೊಫೆಸರರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ಆರಂಭವಾದ ರೀತಿಯನ್ನು ವಿವರಿಸಿದರು. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯು 1976 ರ ನಂತರ ಪಿ. ಎನ್. ಭಗವತಿ, ಚಂದ್ರಚೂಡ, ವಿ ಆರ್ ಕೃಷ್ಣ ಅಯ್ಯರ್, ಇವರ ಅವರ ನ್ಯಾಯಿಕ ಕಲ್ಪನೆಯಿಂದ ರೂಪ ತಳೆಯಿತು ಎಂದರು. ಸರಕಾರಗಳು ಹೇಗೆ ಕೆಲಸ ಮಾಡಬೇಕು, ಪ್ರಜೆಗಳ ಕರ್ತವ್ಯ ಏನು, ಹೇಗೆ ಮೂಲಭೂತ ಹಕ್ಕುಗಳು ರಕ್ಷಿಸಲ್ಪಡಬೇಕು ಮೊದಲಾದ ಹಲವಾರು ವಿಚಾರಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ಪ್ರಾಮುಖ್ಯತೆ ಹೊಂದಿವೆ ಎಂದರು. ಸಂಪ್ರದಾಯಿಕ ಪದ್ಧತಿಯನ್ನು ನೋಡಿದರೆ, ಯಾರ ಮೂಲಭೂತ ಹಕ್ಕು ಮೊಟಕುಗೊಂಡಿದೆಯೋ ಆ ವ್ಯಕ್ತಿ ಅನುಚ್ಛೇದ 32ರ ಅಡಿಯಲ್ಲಿ ನ್ಯಾಯಾಲಯದ ಮುಂದೆ ಪರಿಹಾರ ಕೇಳಬಹುದಾಗಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳಿಂದಾಗಿ ನೊಂದ ವ್ಯಕ್ತಿಯಲ್ಲದೆ ಅವನ ಪರವಾಗಿ ಸಾರ್ವಜನಿಕ ಹಿತದಲ್ಲಿ ಆಸಕ್ತಿ ಹೊಂದಿದ ವ್ಯಕ್ತಿಗಳು ಕೂಡ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬಹುದಾಗಿದೆ. ಇಂಥ ಕಾರ್ಯವ್ಯಾಪ್ತಿಯನ್ನು ಉಚ್ಚ ನ್ಯಾಯಾಲಯ ಮೂಲಭೂತ ಹಕ್ಕು ಅಥವಾ ಇತರ ಯಾವುದೇ ಕಾನೂನುಬದ್ಧ ಹಕ್ಕಿಗೆ ಸಂಬಂಧಿಸಿದಂತೆ ಅನುಚ್ಛೇದ 226 ರಲ್ಲಿ ಚಲಾವಣೆ ಮಾಡಬಹುದಾಗಿದೆ. ಇದನ್ನೇ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಎನ್ನಲಾಗುತ್ತದೆ ಎಂದು ಶ್ರೀಯುತರು ವಿವರಿಸಿದರು.

ಮುಂದುವರಿದು ಪ್ರೊಫೆಸರರು ಸಾರ್ವಜನಿಕ ಹಿತಾಸಕ್ತಿಯ ಅಗತ್ಯ ಅಥವಾ ಅದರ ಮೂಲೋದ್ದೇಶವನ್ನು ಹೇಳಿದರು. ನಮ್ಮಲ್ಲಿ ಮೊದಲು ಯಾವ ವ್ಯಕ್ತಿಗೆ ಹಕ್ಕಿಗೆ ಹಾನಿ ಉಂಟಾಗಿದೆ ಅವರು ಮಾತ್ರ ದಾವೆ ಹಾಕಬಹುದಾಗಿತ್ತು. ಆದರೆ ಲಕ್ಷಾಂತರ ಜನರಿಗೆ ಅಂದರೆ ಬಡವರು, ದಲಿತರು, ಹಿಂದುಳಿದ ವರ್ಗದವರು, ಆರ್ಥಿಕವಾಗಿ ಸಬಲರಾಗಿಲ್ಲದವರು, ಇವರು ನ್ಯಾಯಾಲಯದ ಮೆಟ್ಟಿಲು ಹತ್ತಲು ಆಗುತ್ತಿರಲಿಲ್ಲ, ನ್ಯಾಯಾಲಯದ ಹಣವನ್ನು ಕೂಡ ಕಟ್ಟಲು ಆಗುತ್ತಿರಲಿಲ್ಲ. ಇಂತಹವರಿಗೆ ನ್ಯಾಯ ದೊರಕಿಸಲು ಸಮರ್ಥವಾದ ದಾರಿ ಎಂದರೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ಎಂದರು ಶ್ರೀ. ಬಸವರಾಜು ಅವರು. ಅದೇ ಸಮಯ ಈ ಮೊಕದ್ದಮೆಗಳು ಸದ್ಭಾವನೆಯಿಂದ ಕೂಡಿರಬೇಕು. ಇಂದಿನ ದಿನಮಾನದಲ್ಲಿ ಸಾಮಾನ್ಯ ವರ್ಗದವರ ಮನೆಗೆ ನ್ಯಾಯ ತಲುಪಿಸಲು ಇರುವ ಬಲಿಷ್ಠವಾದಂತಹ ಸಾಧನ ಅದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಎಂದು ಅವರು ಅಭಿಪ್ರಾಯಪಟ್ಟರು.

ಸರಕಾರಗಳು ಕೂಡ ಕೆಲವು ಸಂದರ್ಭದಲ್ಲಿ ಕೆಲವು ಯೋಜನೆಗಳನ್ನು ಮಾಡುವಾಗ ನಾಗರಿಕರ ಹಕ್ಕುಗಳಿಗೆ ದಕ್ಕೆಯಾದ ಸಂದರ್ಭಗಳು ಇವೆ. ಇಂದಿನ ಸಮಾಜ ಅರಾಜಕತೆಯಿಂದ ಕೂಡಿದೆ. ದ್ವಂದ್ವಗಳ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ, ಬಡವ – ಬಲ್ಲಿದ, ಬಹುಸಂಖ್ಯಾತರು – ಅಲ್ಪಸಂಖ್ಯಾತರು, ಬುದ್ದಿವಂತರು – ಗುಣವಂತರು, ಒಳ್ಳೆಯದು – ಕೆಟ್ಟದು ಹೀಗೆ ಹಲವು ರೀತಿಯಲ್ಲಿ ವಿಭಜಿತವಾದ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಎಂದ ಅವರು, ಇವುಗಳ ನಡುವೆ ಹಲವು ಹಕ್ಕುಗಳು ಉಲ್ಲಂಘನೆಯಾಗುತ್ತವೆ, ಕರ್ತವ್ಯಗಳಿಗೆ ಲೋಪವಾಗುತ್ತವೆ. ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಮೂಲಭೂತ ಕರ್ತವ್ಯಗಳಿಗೆ ಕೊಟ್ಟ ಪ್ರಾಮುಖ್ಯತೆಯನ್ನು ನೆನೆದರೆ ಎಲ್ಲರೂ ತಮ್ಮ ಕರ್ತವ್ಯ ಮಾಡಿದರೆ ಹಕ್ಕುಗಳು ಉಲ್ಲಂಘನೆಯಾಗುವ ಪ್ರಶ್ನೆಯಿಲ್ಲ ಎಂದರು.

ಮೊದಲು ನೈಸರ್ಗಿಕ ಹಕ್ಕುಗಳು ಇದ್ದವು, ಅವುಗಳನ್ನು ಮುಂದೆ ಮಾನವಹಕ್ಕುಗಳನ್ನು ಆಗಿ ಪರಿವರ್ತಿಸಲಾಯಿತು. ಒಬ್ಬ ವ್ಯಕ್ತಿ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸಲು ಬೇಕಾದ ಎಲ್ಲಾ ಹಕ್ಕುಗಳನ್ನು ಮಾನವ ಹಕ್ಕುಗಳು ಎನ್ನಲಾಯಿತು. ಈ ಹಕ್ಕುಗಳೇ ತದನಂತರದಲ್ಲಿ ಸಾಂವಿಧಾನಿಕ ಹಕ್ಕುಗಳಾದವು. ಅಮೆರಿಕಾ ದೇಶದ ಸಂವಿಧಾನದಲ್ಲಿ ಮೊದಲು ಗುರುತಿಸಲ್ಪಟ್ಟ ಈ ಸಾಂವಿಧಾನಿಕ ಹಕ್ಕುಗಳ ನಂತರದಲ್ಲಿ ಹಲವು ರೀತಿಯ ಕಾನೂನಿನ ಹಕ್ಕುಗಳು, ಒಪ್ಪಂದದ ಹಕ್ಕುಗಳು ಹೀಗೆ ಹಲವು ರೀತಿಯ, ಸ್ತರದ ಹಕ್ಕುಗಳನ್ನು ನಾವು ಗುರುತಿಸಿಕೊಂಡಿದ್ದೇವೆ ಎಂದು ತಿಳಿಸಿದರು. ಉಪೇಂದ್ರ ಅವರು ಎರಡನೇ ಉಪನ್ಯಾಸದಲ್ಲಿ ಪ್ರತಿಪಾದಿಸಿದಂತೆ, ಜನರಿಗೆ ಸರಕಾರವನ್ನು ಕೆಳಗಿಳಿಸುವ ಹಕ್ಕು ಇರಬೇಕು ಎಂಬುದು ಆದರ್ಶಯುತವಾದರೂ ಅದನ್ನು ಜಾರಿಗೆ ತರುವುದು ಸುಲಭದ ಮಾತಲ್ಲ ಎಂದರು.

ಇಂದಿನ ದಿನಮಾನಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಮೊದಲೇ ಹೇಳಿದ ದ್ವಂದ್ವಗಳ ನಡುವಿನ ಅಂತರ ಇವತ್ತಿಗೆ ಬಹುದೊಡ್ಡದು. ಆ ವಿಭಜಿತ ವರ್ಗಗಳ ನಡುವೆ ಎಲ್ಲಿಯವರೆಗೆ ನಮಗೆ ಅಂತರವನ್ನು ಕಡಿಮೆ ಮಾಡಲು ಆಗವುದಿಲ್ಲವೋ ಅಲ್ಲಿಯವರೆಗೆ ಸಮಾಜ ಒಳ್ಳೆಯ ಹಾದಿಯಲ್ಲಿ ನಡೆಯುವುದು ಸಾಧ್ಯವಿಲ್ಲ ಎಂದು ಪ್ರೊಫೆಸರರು ಅಭಿಪ್ರಾಯಪಟ್ಟರು. ಇಂದು ನಾವು ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೋ, ಅಥವಾ ನಿರಂಕುಶ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂಬ ಸಂದೇಹ ಉಂಟಾಗಿದೆ. ಅನುಚ್ಛೇದ 32 ಮತ್ತು ಅನುಚ್ಛೇದ 226 ರಲ್ಲಿ ಕೇವಲ ಪ್ರಜೆಗಳಿಗೆ ಹಕ್ಕನ್ನು ಮಾತ್ರ ಕೊಟ್ಟಿಲ್ಲ, ಆ ಅನುಚ್ಛೇದಗಳಲ್ಲಿ ನ್ಯಾಯಾಲಯಗಳ ಮೇಲೆ ಪ್ರಜೆಗಳ ಹಕ್ಕನ್ನು ಕಾಪಾಡುವ ಭಾದ್ಯತೆಯೂ ಇರುತ್ತದೆ ಎಂದರು. ಈ ಅನುಚ್ಚೇದಗಳ ಅನ್ವಯ, ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಿಗೆ ವಿವೇಚನಾಶಕ್ತಿಗಳ ಮೂಲಕ ಅಧಿಕಾರ ನೀಡಲಾಗಿದೆ. ಇದನ್ನು ಬಳಸಿ ನ್ಯಾಯಾಲಯಗಳು ರಿಟ್, ನಿರ್ದೇಶನಗಳನ್ನು ನೀಡಬಹುದಾಗಿದೆ. ಸಂವಿಧಾನದ ಮೊದಲನೇ ಪುಟದಿಂದ, ಕೊನೆಯ ಪುಟದವರೆಗೂ ಸಾಮಾಜಿಕ ನ್ಯಾಯವನ್ನೇ ಪ್ರತಿಪಾದನೆ ಮಾಡಲಾಗಿದೆ. ಆದರೆ ಸಂಪೂರ್ಣವಾಗಿ ಅದರ ಫಲ ಎಲ್ಲರಿಗೂ ಸಿಕ್ಕಿಲ್ಲ. ಅಂದು ಅಂಬೇಡ್ಕರ್ ಅವರು ನಿರೀಕ್ಷೆ ಮಾಡಿದಂತ ಸಾಮಾಜಿಕ ನ್ಯಾಯವನ್ನು ಇಂದಿನ ಸಮಾಜದಲ್ಲಿ ನಾವು ಕಾಣಲು ಸಾಧ್ಯವಿಲ್ಲ. ಇದಕ್ಕಾಗಿ ಅಂಬೇಡ್ಕರ್ ಅವರು ಹತ್ತು ವರ್ಷ ಕಾಲಾವಧಿಯನ್ನು ನಿರೀಕ್ಷಿಸಿದ್ದರು. ಆದರೆ ಆ ನಿರೀಕ್ಷೆಗಳು ಇನ್ನೂ ಸಂಪೂರ್ಣವಾಗಿ ನೆರವೇರಿಲ್ಲ ಎಂಬುದು ನನ್ನ ಅನಿಸಿಕೆ ಎಂದರು ಪ್ರೊಫೆಸರರು. ಹಾಗೆಂದ ಮಾತ್ರಕ್ಕೆ ಸಂವಿಧಾನದ ಮೂರೂ ಅಂಗಗಳು ಯಾವುದೇ ಕೆಲಸ ಮಾಡಿಲ್ಲ ಎಂದು ಹೇಳಲಾಗದು ಎಂದರು.

ಇಂದಿನ ಸಮಾಜದಲ್ಲಿ ದ್ವೇಷ, ಅಸೂಯೆ, ವಂಚನೆ, ಮೋಸ, ತಾರತಮ್ಯದಿಂದ ತುಂಬಿರುವುದನ್ನು ಕಾಣಬಹುದು. ಸಂವಿಧಾನ ಕರ್ತೃಗಳು ಕಂಡ ಸಮಾಜ ಇದಲ್ಲ. ಅಧಿಕಾರ ದುರ್ಬಳಕೆಯ ಘಟನೆಗಳು ಜಾಸ್ತಿಯಾಗಿವೆ. ಇಂತಹ ಸವಾಲುಗಳನ್ನು ಎದುರಿಸಲು ಸಮರ್ಥವಾದ ಆಯುಧದ ಅಗತ್ಯವಿದೆ, ಅದಕ್ಕೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸರಿಯಾದ ದಾರಿ ಎಂದು ಹೇಳಿದರು. ವಿ ಆರ್ ಕೃಷ್ಣ ಅಯ್ಯರ್ ಅವರು ಹಲವಾರು ತೀರ್ಪುಗಳಲ್ಲಿ ಸಂವಿಧಾನದಲ್ಲಿ ಕೊಟ್ಟಿರುವ ಹಕ್ಕುಗಳು ಎಲ್ಲರೂ ಸಮನಾಗಿ ಅನುಭವಿಸಬೇಕು ಎಂದು ಹೇಳಿದ್ದಾರೆ. ಆದರೆ ಇವತ್ತಿಗೂ ಎಷ್ಟೋ ಸಮುದಾಯಗಳು, ಸಮಾಜದ ವರ್ಗದವರಿಗೆ ಎಲ್ಲ ಹಕುಗಳೂ ಸಾಕಾರವಾಗಿಲ್ಲ. ಆದ್ದರಿಂದ ಇಂತಹ ಸಮುದಾಯಗಳ ವಿಚಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ವರದಾನವಾಗಿದೆ ಎಂದು ಹೇಳಿದರು.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ನಾವು ಅನುಚ್ಛೇದ 32 ಮತ್ತು 226 ರಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ನಲ್ಲಿ ಹಾಕಬಹುದು. ದಿವಾನಿ ಪ್ರಕ್ರಿಯಾ ಸಂಹಿತೆ ಕಲಂ 32 ರಲ್ಲೇ ಜೈಲಿನಲ್ಲಿರುವವರ ಪರವಾಗಿ ಅಥವಾ ಪ್ರೌಢಾವಸ್ಥೆಗೆ ಬಾರದವರ ಸಲುವಾಗಿ ನ್ಯಾಯಾಲಯದಲ್ಲಿ ಕೇಸುಗಳನ್ನು ಹಾಕಬಹುದಿತ್ತು. ಆದರೆ ಅದು ಪ್ರಚಲಿತದಿರಲಿಲ್ಲ. ನ್ಯಾ. ಭಗವತಿ, ನ್ಯಾ. ಚಂದ್ರಚೂಡ್ ಮತ್ತು ನ್ಯಾ. ಕೃಷ್ಣ ಅಯ್ಯರ್ ರವರ ಕಾಲದಲ್ಲಿ ಇದು ಹೊಸ ರೂಪ ಪಡೆದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ರೂಪ ಪಡೆಯಿತು ಎಂದರು.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅಡಿಯಲ್ಲಿ, ಎಲ್ಲ ವರ್ಗದವರು, ಎಲ್ಲಕ್ಷೇತ್ರದ ಅನ್ಯಾಯಗಳಿಗೂ, ಯಾವುದೇ ಹಕ್ಕುಗಳ ಉಲ್ಲಂಘನೆಗೆ ಪರಿಹಾರವನ್ನು ಪಡೆಯಬಹುದಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಮೂಲಭೂತ ಹಕ್ಕುಗಳ ಚ್ಯುತಿಯಾದಲ್ಲಿ ಮಾತ್ರ ಕೇಸು ಹಳಬಹುದು. ಆದರೆ ಉಚ್ಚ ನ್ಯಾಯಾಲಯಗಳ ವ್ಯಾಪ್ತಿ ಬಹು ದೊಡ್ಡದಾಗಿದ್ದು, ಕಾನೂನಿನ ಹಕ್ಕುಗಳ ಉಲ್ಲಂಘನೆಯಾದರೂ ಸಮೀಪಿಸಬಹುದು. ಹಕ್ಕುಗಳ ಉಲ್ಲಂಘನೆ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿದ್ದಂತೆಯೇ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವ್ಯಾಪ್ತಿಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದರು. ಇದರ ನಂತರ ಈ ಕೆಳಗಿನ ಪ್ರಕರಣಗಳನ್ನು ಶ್ರೀಯುತರು ಉದಾಹರಣೆಯಾಗಿ ಕೊಟ್ಟರು:

ಏಷ್ಯಾಡ್ ಕ್ರೀಡಾಕೂಟದ ಸಂದರ್ಭದಲ್ಲಿ ಅಲ್ಲಿನ ಕೆಲಸಗಾರರಿಗೆ ಆಗುತ್ತಿದ್ದ ಹಲವು ಅನ್ಯಾಯಗಳನ್ನು ಪಟ್ಟಿ ಮಾಡಿ ಸಂಸ್ಥೆಯೊಂದು ಪಾತ್ರ ಬರೆದಾಗ ಸುಪ್ರೀಂ ಕೋರ್ಟ್ ಆ ಪಾತ್ರವನ್ನು ಒಂದು ಕೇಸನ್ನಾಗಿ ಪರಿವರ್ತನೆ ಮಾಡಿ ಕೆಲಸಗಾರರಿಗೆ ಎಲ್ಲ ಕಾರ್ಮಿಕ ಕಾನೂನುಗಳ ಪ್ರಕಾರ ಕೊಡಬೇಕಾದ ಎಲ್ಲ ಸವಲತ್ತುಗಳನ್ನೂ ಕೊಡಬೇಕೆಂದು ಆದೇಶ ನೀಡಿತು. ಹೀಗೆ ಆದೇಶ ನೀಡಲು ಸಾಧ್ಯವಾಗಿದ್ದು ಈ ಹೊಸ ಕಲ್ಪನೆಯ ಮೊಕದ್ದಮೆಯಿಂದಲೇ ಎಂದು ನೆನಪಿಸಿಕೊಂಡರು.

ಇನ್ನು ಬಂಧುವಾ ಮುಕ್ತಿ ಮೋರ್ಚಾ ವಿರುದ್ಧ ಭಾರತ ಒಕ್ಕೂಟ ಪ್ರಕರಣದಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಹಲವಾರು ಜನರನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಹಾಕುವ ಮೂಲಕ ಆದೇಶ ಹೊರಡಿಸಿ ಅವರನ್ನು ಜೀತದಾಳುಗಳಿಂದ ಮುಕ್ತಿ ನೀಡಲಾಯಿತು.

ಒಲ್ಗಾ ಟೆಲಿಸ್ ಪ್ರಕರಣದಲ್ಲಿ ರಸ್ತೆ ಬದಿಯಲ್ಲಿ ಬೀಡು ಬಿಟ್ಟಿದ್ದ ಹಲವಾರು ಕುಟುಂಬಗಳನ್ನು ಬಾಂಬೆ ಮುನ್ಸಿಪಾಲಿಟಿ ಒಕ್ಕಲೆಬ್ಬಿಸಿದಾಗ, ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ, ಅಂತಹ ಬೀದಿ ಬದಿಯ ಕುಟುಂಬಗಳಿಗೆ ಪುನರ್ವಸತಿ ಕೊಡದೆ ಅವರ ಜೀವನದ ಹಕ್ಕುಗಳನ್ನು ಹೀಗೆ ಕಸಿದುಕೊಳ್ಳುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿತು. ಆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮೊದಲ ಬಾರಿಗೆ ಜೀವದ ಹಕ್ಕಿನಲ್ಲಿ ಜೀವನೋಪಾಯದ ಹಕ್ಕೂ ಒಳಗೊಂಡಿದೆ ಎಂದು ಹೇಳಿತು.

ಪೊಲೀಸ್ ದೌರ್ಜನ್ಯದ ಸಂದರ್ಭದಲ್ಲಿ ಆಗುವ ಮೂಲಭೂತ ಹಕ್ಕುಗಳ ಚ್ಯುತಿಯ ಬಗ್ಗೆ ಮಾತಾಡುತ್ತ ಪ್ರೊಫೆಸರರು ನೀಲಬತಿ ಬೆಹ್ರಾ ಕೇಸನ್ನು ಶ್ರೀ ಬಸವರಾಜು ಅವರು ಉಲ್ಲೇಖಿಸುತ್ತಾರೆ. ಎಂಸಿ ಮೆಹತಾ ಅವರ ಹಲವಾರು ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವನ್ನು ಸಮೀಪಿಸಿ, ಪರಿಸರಕ್ಕೆ ಆಗುತ್ತಿದ್ದಂತಹ ಹಲವಾರು ರೀತಿಯ ಅಕ್ರಮಗಳನ್ನು ಕೋರ್ಟ್ ನ ಗಮನಕ್ಕೆ ತಂದು ಆದೇಶಗಳನ್ನು ಪಡೆಯುವಲ್ಲಿ ಸಫಲರಾಗಿದ್ದನ್ನೂ ನೆನೆಸಿಕೊಂಡರು. ಜೀವಿಸುವ ಹಕ್ಕು ಇದು ಹಲವಾರು ಬಗೆಯ ಹಕ್ಕುಗಳನ್ನು ಹೊಂದಿದೆ, ಅದರಲ್ಲಿ ನೈರ್ಮಲ್ಯರಹಿತ ಪರಿಸರ ಕೂಡ ಒಂದಾಗಿದೆ ಎಂಬ ಸಿದ್ಧಾಂತವನ್ನು ಸರ್ವೋಚ್ಚ ನ್ಯಾಯಾಲಯ ಹುಟ್ಟು ಹಾಕಿತು. ಹೀಗೆ ಹೊಸ ಹೊಸ ಸಿದ್ಧಾಂತಗಳನ್ನು ಹಲವು ಕ್ಷೇತ್ರಗಳಲ್ಲಿ ಹುಟ್ಟು ಹಾಕುವುದು ಸಾರ್ವಜನಿಕ ಹಿತಾಸಕ್ತಿ ಕೇಸುಗಳ ಮೂಲಕ ಸಾಧ್ಯವಾಗಿದೆ ಎಂದು ಹೇಳಿದರು.

ರತ್ಲಾಮ್ ಮುನ್ಸಿಪಾಲಿಟಿ ಕೇಸನ್ನು ನೆನಪಿಸಿಕೊಳ್ಳುತ್ತಾ ಅವರು ಆರ್ಥಿಕ ಸಂಕಷ್ಟ ಪರಿಸರ ಕಾನೂನುಗಳ ಉಲ್ಲಂಘನೆಗೆ ಸ್ಪಷ್ಟೀಕರಣ ಅಲ್ಲ ಎಂದು ಹೇಳಿದ್ದನ್ನು ಅವರು ತಿಳಿಸಿದರು. ಬೆಂಗಳೂರು ಮೆಡಿಕಲ್ ಟ್ರಸ್ಟ್ ವಿರುದ್ಧ ಬಿಎಸ್ ಮುದ್ದಪ್ಪ ಪ್ರಕರಣದಲ್ಲಿ ಸಾರ್ವಜನಿಕ ಪಾರ್ಕ್ ಸಲುವಾಗಿ ಮೀಸಲಿಟ್ಟಿದ್ದ ಸ್ಥಳವನ್ನು ಖಾಸಗಿ ಆಸ್ಪತ್ರೆ ಕಟ್ಟಲು ನೀಡಿದ್ದು ಇದನ್ನು ರಿಟ್ ಹಾಕುವ ಮೂಲಕ ಪ್ರಶ್ನಿಸಿದಾಗ, ಸರ್ವೋಚ್ಚ ನ್ಯಾಯಾಲಯವು ನಗರ ಪ್ರದೇಶಗಳಲ್ಲಿ ಪರಿಸರ ಸಮತೋಲನವನ್ನು ಕಾಪಾಡಲು ಉದ್ಯಾನವನಗಳು ತೀರ್ಪು ನೀಡಿತು.

ಪರಮಾನಂದ ಕಟಾರ ವಿರುದ್ಧ ಭಾರತ ಒಕ್ಕೂಟ ಪ್ರಕರಣದಲ್ಲಿ 12 ವರ್ಷದ ಬಾಲಕನು ರೈಲ್ವೆ ಚಕ್ರದಡಿ ಬಿದ್ದು ಎರಡು ಕಾಲುಗಳನ್ನು ಕಳೆದುಕೊಂಡು, ತುರ್ತು ಚಿಕಿತ್ಸೆ ಗಳನ್ನು ಹಲವಾರು ಆಸ್ಪತ್ರೆಗಳು ಕಾರಣಗಳನ್ನು ನೀಡಿ, ಚಿಕಿತ್ಸೆ ನೀಡದ್ದಕ್ಕಾಗಿ ರಿಟ್ ಹಾಕಲಾಯಿತು. ಅಲ್ಲಿ ಸರ್ವೋಚ್ಚ ನ್ಯಾಯಾಲಯವು ತುರ್ತು ಸಂದರ್ಭದಲ್ಲಿ ಚಿಕಿತ್ಸೆಯನ್ನು ನೀಡದಿದ್ದರೆ ಅದು ಜೀವಿಸುವ ಹಕ್ಕಿಗೆ ಧಕ್ಕೆಯಾದಂತೆ ಎಂದು ತೀರ್ಪು ನೀಡಿತು, ಎಂದು ವಿವರಿಸಿದರು ಪ್ರೊ. ಬಸವರಾಜು ಅವರು.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದೇಶದ ಹಲವಾರು ಜನರಿಗೆ ತಿಳಿದಿಲ್ಲ, ಎಲ್ಲಾ ಶೈಕ್ಷಣಿಕ ಕ್ಷೇತ್ರದಲ್ಲಿ ಇದರ ಬಗ್ಗೆ ತಿಳುವಳಿಕೆ ನೀಡಿದರೆ ಇದರ ಅರಿವು ಹೆಚ್ಚಾಗುತ್ತದೆ. ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಿಗೆ ಮಾತ್ರ ಈ ಅಧಿಕಾರ ನೀಡಲಾಗಿದೆ, ಗ್ರಾಮಮಟ್ಟದ ಜನರಿಗೆ ಇದರ ಪ್ರಯೋಜನ ಸಾಧ್ಯವಾಗುತ್ತಿಲ್ಲ, ಇದರಿಂದ ಜಿಲ್ಲಾ ಮಟ್ಟದಲ್ಲೂ ಇದನ್ನು ವಿಸ್ತರಿಸಿದರೆ ಸಾರ್ವಜನಿಕರಿಗೆ ಬಹಳ ಅನುಕೂಲವಾಗುತ್ತದೆ ಎಂಬುದು ನನ್ನ ಅನಿಸಿಕೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಕೆ. ಆರ್. ವೇಣುಗೋಪಾಲ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಅಧಿಕಾರಿಗಳಾದ ಪ್ರತಾಪ್ ಲಿಂಗಯ್ಯರವರು ಮತ್ತು ಕಾರ್ಯಕ್ರಮದ ಸಂಯೋಜಕರಾದ ಸತೀಶ್ ಗೌಡರವರು ಉಪಸ್ಥಿತರಿದ್ದರು.

ವರದಿ: ಪ್ರಕಾಶ ಪತ್ತಾರ

ವಿ. ಸೂ. ನ್ಯಾಯನಿಷ್ಠ ಹಲವು ವಿಚಾರಧಾರೆಗಳನ್ನು, ಮಾಹಿತಿಗಳನ್ನು ಮತ್ತು ಕಾನೂನಿನ ಮಜಲುಗಳನ್ನು ಓದುಗರ ಮುಂದಿಡಬೇಕೆಂಬ ಉದ್ದೇಶದಿಂದ ಈ ಉಪನ್ಯಾಸ ಮಾಲಿಕೆಯನ್ನು ವರದಿಯ ರೂಪದಲ್ಲಿ ಪ್ರಕಟಿಸಲು ಹೊರಟಿದೆ. ಉಪನ್ಯಾಸಕರ ಅಭಿಪ್ರಾಯಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು ನ್ಯಾಯನಿಷ್ಠ ಯಾವುದೇ ರೀತಿಯಲ್ಲಿ ಅವನ್ನು ಅನುಮೋದಿಸಿಯೋ ಅಥವಾ ತಿರಸ್ಕರಿಸಿಯೋ ಇರುವುದಿಲ್ಲ.

ಪ್ರಕಾಶ ಪತ್ತಾರ ಮೂಲತಃ ಕೊಪ್ಪಳ ಜಿಲ್ಲೆಯ ಹುಲಿಗಿ ಗ್ರಾಮದವರಾಗಿದ್ದು, ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದಾರೆ.

Spread the love