ಲೇಖನಗಳು

ಸಿಗರೇಟು ಮತ್ತು ಹೊಗೆಸೊಪ್ಪು ಉತ್ಪನ್ನಗಳು: ಕಾಯ್ದೆ- ಕಾನೂನುಗಳ ಬಗ್ಗೆ ನಿಮಗೆಷ್ಟು ಗೊತ್ತು?

ಸಿಗರೇಟ್ ಹಾಗೂ ತಂಬಾಕು ಸೇವನೆ ಹಾಗೂ ಧೂಮಪಾನ ಆರೋಗ್ಯಕ್ಕೆ ಕೆಟ್ಟದ್ದು ಎಂಬುದು ಎಲ್ಲರಿಗೂ ತಿಳಿದಿದೆಯಾದರೂ ಬಹುತೇಕರು ಈ ಚಟದ ದಾಸರಾಗಿರುವುದು ಕಟು ಸತ್ಯ. ಈ ಅಪಾಯಕಾರಿ ಉತ್ಪನ್ನಗಳು ನಿಷೇಧಕ್ಕೆ ಒಳಪಡುವ ಬದಲು ಅತಿಯಾಗಿ ವೈಭವೀಕರಣಗೊಳ್ಳಲ್ಪಡುತ್ತವೆ. ಇತ್ತೀಚೆಗೆ ಬಿಡುಗಡೆಯಾದ ಕೆ. ಜಿ.ಎಫ್ ಚಲನಚಿತ್ರದಲ್ಲಿ ಜನಪ್ರಾಯವಾದ ರಾಕಿ ಸಿಗರೇಟ್ ಸೇದುವ ರೀತಿಯು ಅದೆಷ್ಟು ಜನರನ್ನು ಹಾಗೆ ಸಿಗರೇಟ್ ಸೇದಲು ಪ್ರೇರೇಪಿಸಿರಬಹುದು ಎಂಬುದು ಊಹಿಸಲು ಕೊಂಚ ಕಷ್ಟ. ಇದು ಧೂಮಪಾನ ಮತ್ತು ತಂಬಾಕು ಸೇವನೆ ನಮ್ಮ ಜೀವನಗಳಲ್ಲಿ ಅದೆಷ್ಟು ಹಾಸುಹೊಕ್ಕಾಗಿದೆ ಎಂದು ತೋರಿಸುತ್ತದೆಯಷ್ಟೇ? ಹಾಗಂತ ಇವುಗಳ ಬಳಕೆಗೆ ನಮ್ಮ ದೇಶದ ಕಾಯ್ದೆಯಲ್ಲಿ ಕೊಂಚವೂ ಕಡಿವಾಣ ಇಲ್ಲ ಎಂದಲ್ಲ. ಸಿಗರೇಟ್ ಹಾಗೂ ತಂಬಾಕು ಸೇವನೆಯ ಬಗೆಗಿನ ಕಾನೂನಿನ ಅಂಶಗಳನ್ನು ಈ ಅಂಕಣದ ಮೂಲಕ ಬಿತ್ತರಿಸುವ ಒಂದು ಪ್ರಯತ್ನ.

ಸರಿಸುಮಾರು 16ನೇ ಶತಮಾನದಲ್ಲಿ ಅಮೆರಿಕಾ ದೇಶದ ಕೆಲವು ಪ್ರದೇಶಗಳಲ್ಲಿ ಖಾಸಗಿ ಸಮಾರಂಭಗಳಲ್ಲಿ ತಂಬಾಕಿನ ಬಳಕೆ ಪ್ರಾರಂಭವಾಯಿತು. ಅಂದಿನಿಂದ ಶುರು ಆದ ಇವುಗಳ ಬಳಕೆ ಈಗ ಇಡೀ ಜಗತ್ತಿಗೇ ವ್ಯಾಪಿಸಿದೆ. ಪ್ರತಿ ವರುಷ ಕನಿಷ್ಠ ಪಕ್ಷ 1.2 ದಶಲಕ್ಷ ಜನರು ತಂಬಾಕು ಹಾಗೂ ಇತರೆ ಸಂಬಂಧಿಸಿದ ಉತ್ಪನ್ನಗಳ ಸೇವನೆಯಿಂದಾದ ದುಷ್ಪರಿಣಾಮಗಳಿಗೆ ಜೀವ ತೆರುತ್ತಿದ್ದಾರೆ. ಇದರಲ್ಲಿ ಒಂದು ದಶಲಕ್ಷ ಜನಸಂಖ್ಯೆ ಧೂಮಪಾನದಿಂದ ಮರಣವನ್ನು ಹೊಂದಿದರೆ ಇನ್ನೂ 35000 ಜನಸಂಖ್ಯೆ ತಂಬಾಕು ಬಳಕೆಯಿಂದ ಸಾವನ್ನಪ್ಪುತ್ತಾರೆ. ಇನ್ನು ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ, 2016 -17(Global Adult Tobacco Survey) ರ ಪ್ರಕಾರ ಭಾರತದಲ್ಲಿ ಶೇಕಡಾ 28 .6% ರಷ್ಟು ಯುವಜನತೆ ಅಂದರೆ ಸರಿ ಸುಮಾರು 268 ದಶಲಕ್ಷ ಜನ ತಂಬಾಕು ಹಾಗೂ ಧೂಮಪಾನ ವ್ಯಸನಿಗಳಾಗಿದ್ದು, ನಮ್ಮ ದೇಶ ತಂಬಾಕು ಹಾಗೂ ಧೂಮಪಾನ ಉತ್ಪನ್ನಗಳ ಬಳಕೆಯಲ್ಲಿ ಇಡೀ ವಿಶ್ವದಲ್ಲೇ ಎರಡನೇ ಸ್ಥಾನ ಗಳಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯದಿಂದ ಬಿಡುಗಡೆಯಾದ ಈ ಸಮೀಕ್ಷೆ ತಂಬಾಕು ಹಾಗೂ ಧೂಮಪಾನಗಳ ಸೇವನೆ 15 ವರ್ಷ ದಿಂದ 24 ನೇ ವರ್ಷದ ಯುವಕರಲ್ಲಿ ಹೆಚ್ಚಿನ ಪ್ರಮಾಣದಲ್ಲಿ (12.4%)ಹರಡುತ್ತಿದೆ ಎಂದು ಅಭಿಪ್ರಾಯ ಪಟ್ಟಿದೆ.

ಇವುಗಳ ಬಳಕೆಯನ್ನು ನಿಯಂತ್ರಿಸುವ ಪ್ರಯತ್ನ 1975 ರಿಂದಲೇ ಆರಂಭವಾಯಿತು. ಸಿಗರೇಟ್ (ಉತ್ಪಾದನೆಯ ಪೂರೈಕೆ ಮತ್ತು ವಿತರಣೆಯ ನಿಯಂತ್ರಣ) ಕಾಯಿದೆ 1975 ಸಿಗರೇಟ್ ಪೊಟ್ಟಣದ ಮೇಲ್ಭಾಗದಲ್ಲಿ ಸಿಗರೇಟ್ ಸೇವನೆಯಿಂದ ಆರೋಗ್ಯದಲ್ಲಿ ಉಂಟಾಗುವ ದುಷ್ಪರಿಣಾಮದ ಎಚ್ಚರಿಕೆಯನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿತು. ಆದರೆ ಈ ಕಾಯಿದೆಯು ಸಿಗರೇಟ್ ಹಾಗೂ ತಂಬಾಕು ಸಂಬಂಧಿ ಇತರ ಅಂಶಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಲಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಒಂದು ಬಲಿಷ್ಠವಾದ ಕಾನೂನನ್ನು ಜಾರಿಗೆ ತರಲು ನಿರ್ಧರಿಸಿತು. ಇದೇ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತಂಬಾಕು ನಿಯಂತ್ರಣದ ಚೌಕಟ್ಟಿನ ಸಮಾವೇಶ (WHO Framework Convention on Tobacco Control), 2003ನ್ನು ಕೈಗೆತ್ತಿಕೊಳ್ಳಲಾಯಿತು. ಈ ಸಮಾವೇಶದ ಮೂಲ ಉದ್ದೇಶವೆಂದರೆ ವಿಶ್ವದಾದ್ಯಂತ ಅಕ್ರಮ ತಂಬಾಕು ಸೇವನೆ, ವ್ಯಾಪಾರವನ್ನು ನಿಯಂತ್ರಿಸುವುದು. ಫೆಬ್ರುವರಿ 27, 2005ರಂದು ಜಾರಿಗೊಂಡಂತಹ ಈ ಸಮಾವೇಶಕ್ಕೆ ಭಾರತವನ್ನು ಒಳಗೊಂಡು 179 ದೇಶಗಳು ಅನುಮೋದಿಸಿದ್ದಾರೆ.

1975ರಲ್ಲಿ ಜಾರಿಯಾದಂತಹ ಸಿಗರೇಟ್ ಕಾಯಿದೆಯ ವ್ಯಾಪ್ತಿ ಅಷ್ಟೊಂದು ವ್ಯಾಪಕವಾಗಿರಲಿಲ್ಲ. ಆದಕಾರಣ ಕೇಂದ್ರ ಸರ್ಕಾರ 2003ರಲ್ಲಿ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ, ವಾಣಿಜ್ಯ, ಉತ್ಪಾದನೆ, ಪೂರೈಕೆ ಹಾಗೂ ವಿತರಣೆ) ಕಾಯಿದೆ ಯನ್ನು ಜಾರಿಗೊಳಿಸಿತು. ಈ ಕಾಯ್ದೆಯ ಶೀರ್ಷಿಕೆಯೇ ಸೂಚಿಸುವಂತೆ ಇದರ ವ್ಯಾಪ್ತಿ ಬಹಳ ವಿಶಾಲವಾಗಿದೆ. ಒಟ್ಟೂ 33 ಕಲಂ ಗಳನ್ನು ಒಳಗೊಂಡಿರುವ ಈ ಕಾಯಿದೆ ಮೊದಲು ಜಾರಿಯಲ್ಲಿದ್ದ 1975ರ ಸಿಗರೇಟ್ ಕಾಯಿದೆಯನ್ನು ರದ್ದುಗೊಳಿಸಿದೆ. ಈ ಕಾಯ್ದೆಯ ಮೂಲ ಉದ್ದೇಶವೆಂದರೆ ಸಿಗರೇಟ್ ಹಾಗೂ ತಂಬಾಕುಗಳ ಜಾಹೀರಾತು, ವ್ಯಾಪಾರ, ವಹಿವಾಟು, ಉತ್ಪಾದನೆ ಹಾಗೂ ಪೂರೈಕೆಗಳನ್ನು ನಿಷೇಧಿಸುವುದು. ಮೇ 15, 1980 ರಂದು ವಿಶ್ವ ಆರೋಗ್ಯ ಸಂಸ್ಥೆಯ 39ನೇ ನಿರ್ಣಯದಲ್ಲಿ ಧೂಮಪಾನ ಹಾಗೂ ತಂಬಾಕಿನ ದುಷ್ಪರಿಣಾಮದಿಂದ ಮಕ್ಕಳು, ಯುವಕರು ಹಾಗೂ ಧೂಮಪಾನಿಗಳಲ್ಲದವರನ್ನು ರಕ್ಷಿಸಲು ಸೂಕ್ತವಾದ ಕಾನೂನಿನ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ಣಯಿಸಲಾಗಿತ್ತು. ತದನಂತರ 43ನೇ ನಿರ್ಣಯದಲ್ಲಿಯೂ ಸಹ ಇದಕ್ಕೆ ಒತ್ತು ನೀಡಲಾಗಿತ್ತು.

ಈ ಕಾನೂನಿನ ಉಗಮಕ್ಕೆ ಮತ್ತೊಂದು ಮಹತ್ತರವಾದ ಕಾರಣವೆಂದರೆ ಸಾರ್ವಜನಿಕ ಹಿತಾಸಕ್ತಿ ಹಾಗೂ ಸಾರ್ವಜನಿಕ ಆರೋಗ್ಯದ ರಕ್ಷಣೆ. ಭಾರತೀಯ ಸಂವಿಧಾನದ 47ನೇ ಅನುಚ್ಛೇದದ ಪ್ರಕಾರ ಆರೋಗ್ಯಕ್ಕೆ ಹಾನಿಕಾರಕವಾದಂತಹ ಮಾದಕ ದ್ರವ್ಯಗಳ ಬಳಕೆಯನ್ನು ನಿಷೇಧಿಸುವುದು ಹಾಗೂ ಸಾರ್ವಜನಿಕರ ಆರೋಗ್ಯವನ್ನು ಮತ್ತು ಜೀವನ ಮಟ್ಟವನ್ನು ಸುಧಾರಿಸಲು ಅವಶ್ಯವಿರುವ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ. ಈ ಎಲ್ಲಾ ಅಂಶಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಕೇಂದ್ರ ಸರ್ಕಾರ ಈ ಕಾನೂನನ್ನು ಜಾರಿಗೊಳಿಸಿತು.

ಕಾಯ್ದೆಯ ಪ್ರಕಾರ ಸಾರ್ವಜನಿಕ ಹಿತಾಸಕ್ತಿ ಹಾಗೂ ರಕ್ಷಣೆಯ ದೆಸೆಯಿಂದ ತಂಬಾಕು ಉದ್ಯಮ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುತ್ತದೆ. ಕಲಂ 4ರ ಪ್ರಕಾರ ಯಾವುದೇ ವ್ಯಕ್ತಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಸಲ್ಲ. ಆದರೆ ಈ ಕಲಂನಲ್ಲಿ ಒಂದು ವಿನಾಯ್ತಿ ಇದೆ. ಅದರ ಪ್ರಕಾರ 30 ಜನರು ಕುಳಿತುಕೊಳ್ಳಬಹುದಾದ ಉಪಹಾರ ಗೃಹ ಹಾಗೂ ವಿಮಾನ ನಿಲ್ದಾಣಗಳಲ್ಲಿ ಧೂಮಪಾನ ಮಾಡಲು ಪ್ರತ್ಯೇಕ ಕೊಠಡಿಯನ್ನು ನಿರ್ಮಿಸಬಹುದು. ಈ ವಿನಾಯ್ತಿ ಮಕ್ಕಳು, ಮಹಿಳೆಯರು ಹಾಗೂ ಧೂಮಪಾನಿಗಳಲ್ಲದವರಿಗೆ ಸಮಸ್ಯೆಯನ್ನು ಉಂಟು ಮಾಡಬಹುದಾದ್ದರಿಂದ ಇದನ್ನು ತೆಗೆದು ಹಾಕಬೇಕೆಂಬ ಕರೆಯೂ ಇದೆ.

ಈ ಕಾನೂನಿನ ಐದನೇ ಕಲಂ ವ್ಯಾಪಕವಾಗಿದ್ದು ಸಿಗರೇಟ್ ಹಾಗೂ ಇನ್ನಿತರ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನ ನಿಷೇಧಿಸುತ್ತದೆ. ಉಪ ಕಲಂ (1) ರ ಪ್ರಕಾರ ತಂಬಾಕು ಹಾಗೂ ಸಿಗರೇಟ್ ಗಳ ಉತ್ಪನ್ನ, ಮಾರಾಟ ಮತ್ತು ವಿತರಣೆಯಲ್ಲಿ ಒಳಗೊಂಡಂತವರು ಇವುಗಳ ಬಗ್ಗೆ ಜಾಹೀರಾತು ಮಾಡುವಂತಿಲ್ಲ ಹಾಗೂ ಅಂತವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಇವುಗಳ ಪ್ರಚಾರ ಮಾಡುವ ಜಾಹೀರಾತುಗಳಲ್ಲಿ ಭಾಗವಹಿಸುವಂತಿಲ್ಲ. ಉಪಕಲಂ (2) ರ ವ್ಯಾಪ್ತಿ ವಿಶಾಲವಾಗಿದ್ದು ಹಣದ ಲಾಭಕ್ಕೋಸ್ಕರ ತಂಬಾಕು ಹಾಗೂ ಸಿಗರೇಟ್ ಗಳನ್ನ ಜಾಹಿರಾತುಗಳಲ್ಲಿ ಪ್ರದರ್ಶಿಸುವಂತಿಲ್ಲ ಹಾಗೂ ಪ್ರದರ್ಶಿಸಲು ಕಾರಣವಾಗುವಂತಿಲ್ಲ. ಈ ಕಲಂನ ಪ್ರಕಾರ ಈ ಜಾಹೀರಾತುಗಳನ್ನು ಒಳಗೊಂಡಂತಹ ಯಾವುದೇ ವಿಡಿಯೋ ಟೇಪ್/ಫಿಲಂಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಾರಾಟ ಮಾಡುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಈ ಜಾಹೀರಾತುಗಳನ್ನೊಳಗೊಂಡ ಕರಪತ್ರ, ಬಿಲ್ (bill) ಗಳ ಮೇಲೆ ಮುದ್ರಿಸಿ ಹಂಚುವಂತಿಲ್ಲ. ಯಾವುದೇ ಕಟ್ಟಡ, ಗೋಡೆ ಅಥವಾ ಗಾಡಿಗಳ ಹಿಂಬದಿಯಲ್ಲಿ ಈ ಜಾಹೀರಾತುಗಳನ್ನು ಅಂಟಿಸುವಂತಿಲ್ಲ. ಸಿಗರೇಟ್ ಹಾಗೂ ತಂಬಾಕುಗಳ ಪೊಟ್ಟಣ, ಕಾರ್ಖಾನೆ ಹಾಗೂ ಮಾರಾಟ ಮಾಡುವ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ/ಸಾರ್ವಜನಿಕ ಸ್ಥಳಗಳಿಗೆ ಈ ಕಲಂ ಅನ್ವಯಿಸುತ್ತದೆ. ಸಿಗರೇಟ್ ಹಾಗೂ ತಂಬಾಕುಗಳ ಪ್ರಚಾರವನ್ನು ಯಾವುದೇ ಉಡುಗೊರೆ, ವೇತನ ಹಾಗೂ ಪ್ರಾಯೋಜಕತ್ವದ ವಿನಿಮಯಕ್ಕೊಸ್ಕರವೂ ಮಾಡುವಂತಿಲ್ಲ.

ಈ ಕಾಯ್ದೆ ಅಡಿಯಲ್ಲಿ ಯಾವುದೇ ವ್ಯಕ್ತಿ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳನ್ನು 18 ವರ್ಷದ ಒಳಗಿನ ವ್ಯಕ್ತಿಗೆ ಮಾರಾಟ, ವಿತರಣೆ ಮಾಡುವಂತಿಲ್ಲ. . ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸಿಗರೇಟ್ ಮತ್ತು ತಂಬಾಕುಗಳ ಚಟಕ್ಕೆ ಬಲಿ ಆಗದಿರಲಿ ಎಂಬ ಆಶಯದಿಂದ ವಿದ್ಯಾಸಂಸ್ಥೆಗಳು ಇರುವ ಜಾಗದಿಂದ 100 ಯಾರ್ಡ್ (ಎಂದರೆ ಸುಮಾರು 91.44 ಮೀಟರ್ ) ದೂರದವರೆಗೆ ಇಂತಹ ಉತ್ಪನ್ನಗಳನ್ನು ಮಾರಾಟ, ವಿತರಣೆ ಮಾಡುವಂತಿಲ್ಲ. ಈ ಕಲಂಗೆ ತಿದ್ದುಪಡಿ ತಂದು ವಯಸ್ಸಿನ ಮಿತಿಯನ್ನು 21 ವರುಷಕ್ಕೆ ಹೆಚ್ಚಿಸಬೇಕು ಎಂಬ ವಾದವೂ ಕೇಳಿಬರುತ್ತಿದೆ. ಕಲಂ 7 ರ ಪ್ರಕಾರ ಯಾವುದೇ ವ್ಯಕ್ತಿ ಸಿಗರೇಟ್ ಮತ್ತು ತಂಬಾಕು ಉತ್ಪಾದನೆಗಳ ಮೇಲೆ ಇವುಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ಹಾನಿಕಾರಕ ಪರಿಣಾಮಗಳ ಎಚ್ಚರಿಕೆ ಸಂದೇಶ ಹಾಗೂ ಫೋಟೋ ಇರುವುದಿಲ್ಲವೋ ಅಂತಹ ಉತ್ಪಾದನೆಗಳನ್ನು ಮಾರುವುದಾಗಲಿ/ವಿತರಿಸುವುದಾಗಲಿ ಮಾಡುವಂತಿಲ್ಲ. ಇಂತಹ ಉತ್ಪನ್ನಗಳನ್ನು ಆಮದು ಸಹ ಮಾಡಿಕೊಳ್ಳಲು ಈ ಕಾನೂನು ಅನುಮತಿ ನೀಡುವುದಿಲ್ಲ. ಪ್ರತಿ ಸಿಗರೇಟ್ ಮತ್ತು ತಂಬಾಕಿನ ಪೊಟ್ಟಣದ ಮೇಲೆ ದೊಡ್ಡ ಹಾಗೂ ಓದಬಲ್ಲ ರೀತಿಯಲ್ಲಿ ಇವುಗಳಲ್ಲಿ ನಿಕೋಟಿನ್ ಹಾಗೂ ಡಾಂಬರು ಅಂಶಗಳು ಇರುತ್ತವೆ ಎಂಬ ಎಚ್ಚರಿಕೆ ಸಂದೇಶ ಎಚ್ಚರಿಕೆ ಮುದ್ರಿಸಿರಬೇಕೆಂದು ಉಪ ಕಲಂ (4) ಹೇಳುತ್ತದೆ. ನಿರ್ದಿಷ್ಟ ಎಚ್ಚರಿಕೆ ಯಾವ ರೀತಿಯಲ್ಲಿ ಇರಬೇಕೆಂದು ಕಲಂ 8 ವಿವರಿಸುತ್ತದೆ. ಇದರ ಪ್ರಕಾರ ಪ್ರತಿ ಸಿಗರೇಟ್ ಮತ್ತು ತಂಬಾಕಿನ ಪೊಟ್ಟಣದ ಮೇಲೆ ಇಂತಹ ಉತ್ಪನ್ನಗಳನ್ನು ಕೊಂಡುಕೊಂಡಾಗ ಮೊದಲಿಗೆ ಈ ನಿರ್ದಿಷ್ಟ ಎಚ್ಚರಿಕೆ ಸಂದೇಶವೇ ಗಮನಕ್ಕೆ ಬರುವಂತೆ ನಿರ್ದಿಷ್ಟ ಎಚ್ಚರಿಕೆಗಳು ಎದ್ದು ಕಾಣುವ ರೀತಿ ದೊಡ್ಡ ಅಕ್ಷರದಲ್ಲಿ ಇರಬೇಕು. ಕಲಂ 9 ರ ಪ್ರಕಾರ ಈ ಎಚ್ಚರಿಕೆ ಸಂದೇಶವು ಆಂಗ್ಲ ಅಥವಾ ಯಾವುದೇ ಪ್ರಾದೇಶಿಕ ಭಾಷೆ, ಇಲ್ಲವೇ ಆಂಗ್ಲ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಇರಬೇಕು. ವಿದೇಶಿ ಭಾಷೆಯಲ್ಲಿಯೂ ಸಹ ಇರಬಹುದು. ಕಲಮ್ಮಿನಲ್ಲಿ ಸ್ಪಷ್ಟಪಡಿಸಿದ ಸಂದೇಶದ ಹೊರತು ಬೇರಾವುದೇ ರೀತಿಯ ಎಚ್ಚರಿಕೆಯನ್ನು ಪೊಟ್ಟಣದ ಮೇಲೆ ಮುದ್ರಿಸಿ ಮಾರಾಟ ಮಾಡುವಂತಿಲ್ಲ.

ಈ ಕಾನೂನಿನ ಕಲಂ 12 ರಲ್ಲಿ ಒಬ್ಬ ಪೊಲೀಸ್ ಅಧಿಕಾರಿ, ಅಥವಾ ರಾಜ್ಯ ಆಹಾರ ಮತ್ತು ಔಷಧ ಆಡಳಿತ ಮಂಡಳಿಯ ಅಧಿಕಾರಿಗೆ ಯಾವುದೇ ಕಾರ್ಖಾನೆ, ಕಟ್ಟಡ ಅಥವಾ ವ್ಯಾಪಾರದ ಆವರಣಕ್ಕೆ ಹೋಗಿ ಅಲ್ಲಿ ಕಾಯ್ದೆಯ ಉಲ್ಲಂಘನೆ ನಡೆದಿದೆಯೇ ಎಂದು ಪರಿಶೀಲಿಸುವ ಅಧಿಕಾರವಿದೆ. ಅಕಸ್ಮಾತ್ ಈ ಸಮಯದಲ್ಲಿ ಯಾವುದೇ ಅಕ್ರಮ ಉತ್ಪಾದನೆಗಳು ಅಥವಾ ಕಾಯಿದೆಯ ಉಲ್ಲಂಘನೆಯು ಕಂಡುಬಂದಲ್ಲಿ ಮೇಲೆ ನಮೂದಿಸಿದ ಅಧಿಕಾರಿಗಳು ಅಂತಹ ಉತ್ಪಾದನೆಗಳನ್ನು ಕಲಂ 13 ರ ಅಡಿಯಲ್ಲಿ ವಶಪಡಿಸಿಕೊಳ್ಳಬಹುದು.

ಇನ್ನು ಕಲಂ 14 ಸಿಗರೇಟ್ ಹಾಗೂ ತಂಬಾಕುಗಳ ಪೊಟ್ಟಣದ ಮುಟ್ಟುಗೋಲುಗಳ ಬಗ್ಗೆ ವಿವರಿಸುತ್ತದೆ. ಇದರ ಪ್ರಕಾರ ಯಾವುದೇ ಸಿಗರೇಟ್ ಹಾಗೂ ತಂಬಾಕುಗಳ ಪೊಟ್ಟಣ ಅಥವಾ ಜಾಹೀರಾತು ಕಾಯ್ದೆಯನ್ನು ಉಲ್ಲಂಘಿಸಿದರೆ ಅಂತಹ ಪೊಟ್ಟಣಗಳನ್ನು ಮುಟ್ಟುಗೋಲು ಮಾಡಬಹುದು. ಆದರೆ ವಿಚಾರಣೆಯ ನಂತರ ವ್ಯಕ್ತಿ ಇಂಥ ಉಲ್ಲಂಘನೆಗೆ ಜವಾಬ್ದಾರನಾಗಿರುವುದಿಲ್ಲ ಎಂದು ಕಂಡುಬಂದಲ್ಲಿ ನ್ಯಾಯಾಲಯವು ಮುಟ್ಟುಗೋಲಿಗೆ ಬದಲಾಗಿ ಈ ಘಟನೆಯನ್ನು ಕಾನೂನಿನ ಉಲ್ಲಂಘನೆ ಎಂದು ಆದೇಶ ಹೊರಡಿಸಬಹುದು. ಮುಟ್ಟುಗೋಲಿನ ಸಂದರ್ಭದಲ್ಲಿ ನ್ಯಾಯಾಲಯ ಪೊಟ್ಟಣಗಳ ಬೆಲೆಯನ್ನು ಆದೇಶದ ರೂಪದಲ್ಲಿ ಉಲ್ಲಂಘನೆ ಮಾಡಿದ ವ್ಯಕ್ತಿಯ ಮೇಲೆ ಹೇರಬಹುದು. ಹಣ ತೆತ್ತಾದ ನಂತರ ಅಂತಹ ಪೊಟ್ಟಣಗಳನ್ನು ಹಿಂದಿರುಗಿಸಿದರೂ, ನಿರ್ದಿಷ್ಟ ಎಚ್ಚರಿಕೆಗಳನ್ನು ಪೊಟ್ಟಣಗಳ ಮೇಲೆ ಮುದ್ರಿಸಿದ ನಂತರ ಮಾತ್ರ ವಹಿವಾಟುಗಳನ್ನು ಮಾಡಬಹುದು ಎಂಬ ಆದೇಶದೊಂದಿಗೆ ಹಿಂತಿರುಗಿಸುತ್ತದೆ. ಕಲಂ 16ರ ಪ್ರಕಾರ ಇಂತಹ ಮುಟ್ಟುಗೊಲು ಈ ಕಾಯ್ದೆ ಅಡಿಯಲ್ಲಿ ಬರುವಂತಹ ಉಳಿದ ಶಿಕ್ಷೆಗಳ ಹೊರತಾಗಿ ಇರುವಂತಾಗಿದೆ.

ಕಲಂ 17ರ ಪ್ರಕಾರ ಮುಟ್ಟುಗೋಲಾದ ಸಿಗರೇಟ್ ಮತ್ತು ತಂಬಾಕು ಪೊಟ್ಟಣದ ವಿಚಾರಣೆ ಮೂಲ ನ್ಯಾಯ ವ್ಯಾಪ್ತಿಯ ಪ್ರಧಾನ ಸಿವಿಲ್ ನ್ಯಾಯಾಲಯ ಮಾಡಬಹುದು ಹಾಗೂ ಹಣದ ವ್ಯಾಪ್ತಿ 5000 ಕ್ಕಿಂತಲೂ ಕಡಿಮೆ ಇರುವ ನ್ಯಾಯಾಲಯ ವಿಚಾರಣೆ ಮಾಡುವಂತಿಲ್ಲ. ಕಲಂ 18 ರಲ್ಲಿ ಮುಟ್ಟುಗೋಲಾದ ಉತ್ಪನ್ನಗಳ ಮಾಲೀಕರಿಗೆ ವಿಚಾರಣೆಯ ಸಂದರ್ಭದಲ್ಲಿ ಅವರ ವಾದವನ್ನು ಮಂಡಿಸುವ ಅವಕಾಶ ಇರುತ್ತದೆ. ವಿಚಾರಣೆ ಪ್ರಾರಂಭವಾಗುವ ಮೊದಲು ಅವರಿಗೆ ಸೂಚನೆ ನೀಡಲಾಗುತ್ತದೆ. ಇಂತಹ ಎಲ್ಲಾ ಸಂದರ್ಭದಲ್ಲಿ code of civil procedure ಅನ್ವಯವಾಗುತ್ತದೆ.
ಕಲಂ 19 ಮೇಲ್ಮನವಿಯ ಬಗ್ಗೆ ಹೇಳುತ್ತದೆ. ಉಪಕಲಂ 3 ರ ಪ್ರಕಾರ ಈ ನ್ಯಾಯಾಲಯದ ಮೇಲೆ ಬೇರೆ ಮೇಲ್ಮನವಿಗೆ ಅವಕಾಶವಿಲ್ಲ. ಕಲಂ 20 ಉಲ್ಲಂಘನೆಗಳಿಗೆ ಶಿಕ್ಷೆಯನ್ನು ಹೇಳುತ್ತದೆ. ಇಲ್ಲಿ ಹೇಳಲಾದ ಶಿಕ್ಷೆಗಳು ಬಹಳ ಸರಳವಾಗಿರುವುದರಿಂದ ಶಿಕ್ಷೆಗಳ ಬಗ್ಗೆ ಅರಿವಿದ್ದವರೂ ಕೂಡ ಈ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಯಾರಾದರೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ತೆರಬೇಕಾದ ದಂಡ ಕೇವಲ 200 ರೂಪಾಯಿ. ಸಿಗರೇಟ್ ಹಾಗೂ ತಂಬಾಕುಗಳ ಬಳಕೆಯ ಬಗ್ಗೆ ಜಾಹಿರಾತು ಮಾಡಿದರೆ ಮೊದಲನೇ ಬಾರಿಗೆ ದೊರಕುವ ಶಿಕ್ಷೆ ಕೇವಲ ಎರಡು ವರ್ಷ ಜೈಲು ಶಿಕ್ಷೆ ಹಾಗೂ 1000 ರೂಪಾಯಿ ದಂಡ ಮತ್ತು ಎರಡನೇ ಬಾರಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ 5000 ರೂಪಾಯಿ ದಂಡ. ಕಲಂ 24 ರ ಪ್ರಕಾರ ಸಿಗರೇಟ್ ಹಾಗು ತಂಬಾಕುಗಳನ್ನು 18 ವರ್ಷ ಒಳಗಿನ ವ್ಯಕ್ತಿಗಳಿಗೆ ಮಾರಾಟ ಮತ್ತು ಹಚಿಕೆ ಮಾಡಿದರೆ ಹಾಕಬೇಕಾದ ದಂಡ ಕೇವಲ 200 ರೂಪಾಯಿ. ಇಂತಹ ಶಿಕ್ಷೆಗಳಿಂದ ಈ ಕಾನೂನಿನಲ್ಲಿ ಅಡಕವಾದಂತಹ ಗುರಿ ಮತ್ತು ಆಶಯಗಳನ್ನು ತಲುಪುವುದು ಕಷ್ಟವೇ. ಆದ್ದರಿಂದ ಈ ಎಲ್ಲಾ ಕಲಂಗಳಿಗೆ ತಿದ್ದುಪಡಿಯನ್ನು ತಂದು ಶಿಕ್ಷೆಗಳ ಮಟ್ಟವನ್ನು ಹೆಚ್ಚಿಸಬೇಕೆಂದು ಈ ಅಂಕಣದ ಮೂಲಕ ಒಂದು ಕಳಕಳಿಯ ಕರೆ.

ಒಂದು ಕಂಪನಿ ಈ ಕಾನೂನಿನ ಉಲ್ಲಂಘನೆ ಮಾಡಿದಾದಲ್ಲಿ ಉಲ್ಲಂಘನೆ ನಡೆದ ಸಂದರ್ಭದಲ್ಲಿ ಇದ್ದ ಎಲ್ಲಾ ಉದ್ಯೋಗಿಗಳು ಆ ಉಲ್ಲಂಘನೆಗೆ ಜವಾಬ್ದಾರರಾಗುತ್ತಾರೆ ಹಾಗೂ ಸಂಪೂರ್ಣ ಕಂಪನಿಯನ್ನ ತಪ್ಪಿತಸ್ಥ ಎಂದು ಪರಿಗಣಿಸಿ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಆದರೆ ಒಬ್ಬ ವ್ಯಕ್ತಿಗೆ ಕಾನೂನಿನ ಉಲ್ಲಂಘನೆ ನಡೆದ ಸಂದರ್ಭದಲ್ಲಿ ಅದರ ಬಗ್ಗೆ ಅರಿವಿರಲಿಲ್ಲ ಹಾಗೂ ಉಲ್ಲಂಘನೆಯನ್ನು ತಪ್ಪಿಸಲೋಸುಗ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಸಾಬೀತುಪಡಿಸಿದರೆ ಅಂತಹ ವ್ಯಕ್ತಿಯನ್ನು ತಪ್ಪಿತಸ್ಥ ಎಂದು ಕಲಂ 26 ರ ಅಡಿಯಲ್ಲಿ ಲೆಕ್ಕಿಸುವುದಿಲ್ಲ. ಈ ಕಾನೂನಿನಡಿಯ ಎಲ್ಲಾ ಅಪರಾಧಗಳು ಜಾಮೀನೀಯವಾಗಿದೆ. ಕಲಂ 29 ರ ಪ್ರಕಾರ ಯಾವುದೇ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಒಳ್ಳೆಯ ಉದ್ದೇಶದಿಂದ ತೆಗೆದುಕೊಂಡ ಕ್ರಮದ ವಿರುದ್ಧ ಯಾವ ವ್ಯಕ್ತಿಯೂ ದಾವೆ ಹೂಡುವಂತಿಲ್ಲ. ಕಲಂ 31ರ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಸಿಗರೇಟ್ ಮತ್ತು ತಂಬಾಕಿನ ಪೊಟ್ಟಣದ ಮೇಲೆ ಕಾಣುವ ನಿರ್ದಿಷ್ಟ ಎಚ್ಚರಿಕೆ ಸಂದೇಶದ ಅಕ್ಷರಗಳ ಗಾತ್ರ, ಹಾಗೂ ಯಾವ ತರಹದ ಛಾಯಾಚಿತ್ರಗಳನ್ನು ಬಳಸಬೇಕು ಎಂಬಂತಹ ಮಾರ್ಗಸೂಚಿಗಳನ್ನು ಒಳಗೊಂಡ ನಿಯಮಗಳನ್ನು ಮಾಡಬಹುದಾದ ಅಧಿಕಾರವಿದೆ. ಕಲಂ 32 ರ ಪ್ರಕಾರ ಕಾನೂನಿನ ನಿಯಮಗಳು ರಫ್ತಿಗೆ ಒಳಪಡುವ ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳಿಗೆ ಅನ್ವಯವಾಗುವುದಿಲ್ಲ.

ಒಟ್ಟಾರೆ ಹೇಳಬೇಕೆಂದರೆ ಈ ಕಾನೂನಿಗೆ ಇನ್ನಷ್ಟು ತಿದ್ದುಪಡಿಗಳ ಅವಶ್ಯತೆ ಖಂಡಿತ ಇದೆ. ಕಾಲಕ್ಕೆ ತಕ್ಕಂತೆ ಕಾನೂನುಗಳು ಬದಲಾದರೆ ಮಾತ್ರ ಅವುಗಳಿಗೆ ಉಳಿವು. ಅದರಂತೆ ಈ ಕಾನೂನಿನ ಅಡಿಯಲ್ಲಿನ ಶಿಕ್ಷೆಗಳು/ ದಂಡದ ಮೊತ್ತಗಳು ಹೆಚ್ಚಾಗಬೇಕು. ಶಿಕ್ಷೆಯಿಲ್ಲದ ಕಾನೂನು ಹುಲಿವೇಷದ ಹುಲಿಯಾಗೇ ಉಳಿದೀತು. ಹಳ್ಳಿಯಿಂದ ದಿಲ್ಲಿಯವರೆಗೆ ದೇಶದ ಎಲ್ಲ ಕಡೆ ಈ ಕಾನೂನಿನ ಸರಿಯಾದ ಶಿಕ್ಷಣ ದೊರಕಬೇಕು. ಸಿಗರೇಟ್ ಮತ್ತು ತಂಬಾಕಿನ ದುಷ್ಪರಿಣಾಮಗಳು ಜನರ ಮನಸ್ಸನ್ನು ನಾಟುವಂತೆ ಬಿಂಬಿತವಾಗಬೇಕು. ಎರಡೂ ಕೈ ಸೇರಿದರೆ ಚಪ್ಪಾಳೆ ಎಂಬಂತೆ ಈ ಕಾನೂನು ಸಾಕಾರವಾಗಲು ಜನತೆ ಹಾಗೂ ಸರ್ಕಾರ ಇಬ್ಬರೂ ಕೈಜೋಡಿಸಬೇಕು.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

Spread the love