ಲೇಖನಗಳು

ಆರ್ಥಿಕ ದುರ್ಬಲ ವರ್ಗ ಮೀಸಲಾತಿ ನೀತಿ (EWS Reservation) : ಒಂದು ವಿಶ್ಲೇಷಣೆ

ಸಂವಿಧಾನದ (103ನೇ ತಿದ್ದುಪಡಿ) ಕಾಯಿದೆಯು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾತಿಯನ್ನು (Economically Weaker Sections Reservation) ಪರಿಚಯಿಸುತ್ತದೆ. ಜನವರಿ 9, 2019 ರಂದು ಭಾರತದ ಸಂಸತ್ತು ಸಂವಿಧಾನದ (103ನೇ ತಿದ್ದುಪಡಿ) ಕಾಯಿದೆ, 2019 ಅನ್ನು ಜಾರಿಗೊಳಿಸಿತು. ತಿದ್ದುಪಡಿ ಆರ್ಥಿಕ ಮಾನದಂಡಗಳ ಆಧಾರದ ಮೇಲೆ ಉನ್ನತ ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗದ ವಿಷಯಗಳಲ್ಲಿ ಮೀಸಲಾತಿ ನೀತಿಯನ್ನು ಮಾಡಲು ರಾಜ್ಯಗಳಿಗೆ ಸೂಚಿಸಿತು. ಇಂದಿನ ಬರಹ ಈ ಮೀಸಲಾತಿಯ ಕುರಿತು.

ಈ ಕಾಯಿದೆಯು ಸಂವಿಧಾನದ 15 ಮತ್ತು 16 ನೇ ವಿಧಿಗಳಿಗೆ 15 (6) ಮತ್ತು 16 (6) ಸೇರಿಸುವ ಮೂಲಕ ತಿದ್ದುಪಡಿ ಮಾಡಿದೆ. ಅನುಚ್ಛೇಧ 15 (6) ರ ಅಡಿಯಲ್ಲಿ ತಿದ್ದುಪಡಿಯು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ಸೇರಿದಂತೆ ಹಣಕಾಸಿನ ವಿಚಾರದಲ್ಲಿ ಹಿಂದುಳಿದ ನಾಗರಿಕರ ಪ್ರಗತಿಗೆ ವಿಶೇಷ ಸವಲತ್ತುಗಳನ್ನು ಒದಗಿಸಲು ರಾಜ್ಯಗಳಿಗೆ ಅಧಿಕಾರ ಕೊಡುತ್ತದೆ.

 ಅನುಚ್ಛೇಧ 30(1) ಅಡಿಯಲ್ಲಿ ಬರುವ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಸಂಸ್ಥೆಗಳು ಸೇರಿದಂತೆ, ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಮೀಸಲಾತಿಗಳನ್ನು ಕೊಡಬಹುದು ಎಂದು ತಿದ್ದುಪಡಿ ಹೇಳುತ್ತದೆ. EWS ಮೀಸಲಾತಿಗಳ ಮೇಲ್ಮಿತಿಯು 10% ಆಗಿರುತ್ತದೆ ಎಂದೂ ಅದು ಹೇಳುತ್ತದೆ. ಈ 10% ಸೀಲಿಂಗ್ ಈಗಿರುವ ಇತರ ಮೀಸಲಾತಿಗಳ ಸೀಲಿಂಗ್‌ಗಳ  ಹೊರತಾಗಿದೆ.

ಅನುಚ್ಛೇಧ 16(6) ನೇಮಕಾತಿಗಳಲ್ಲಿ ಮೀಸಲಾತಿಗೆ ನಿಬಂಧನೆಗಳನ್ನು ಮಾಡಲು ರಾಜ್ಯವನ್ನು ಶಕ್ತಗೊಳಿಸುತ್ತದೆ. ಇಲ್ಲಿಯೂ, ಈಗಿರುವ ಮೀಸಲಾತಿಗಳ ಜೊತೆಗೆ ಹೊರತಾಗಿ 10% ವರೆಗೆ ಮೀಸಲಾತಿಯನ್ನು ಕೊಡಬಹುದು.

ಗಮನಿಸುವ ಅಂಶವೇನೆಂದರೆ  8 ಲಕ್ಷ ರೂಪಾಯಿಗಳಿಗಿಂತ ಕಡಿಮೆ ವಾರ್ಷಿಕ ಆದಾಯವನ್ನು ಗಳಿಸುವ ಕುಟುಂಬಗಳನ್ನು ಮೀಸಲಾತಿಯ ಪ್ರಯೋಜನಕ್ಕಾಗಿ ‘ಆರ್ಥಿಕವಾಗಿ ದುರ್ಬಲ ವರ್ಗ ಎಂದು ಗುರುತಿಸಲಾಗುವುದು’ ಎಂದು ಕೇಂದ್ರ ಸರ್ಕಾರವು ಅಧಿಸೂಚನೆ ಬಿಡುಗಡೆ ಮಾಡಿದೆ. ಹಾಗೆಯೇ ಜುಲೈ 2021 ರಲ್ಲಿ, NEET ಅಖಿಲ ಭಾರತ ಕೋಟಾ ಸೀಟುಗಳಲ್ಲಿ OBC ಗಳಿಗೆ 27% ಮತ್ತು EWS ಗೆ 10% ಕೋಟಾದ ಬಗ್ಗೆ ಕೇಂದ್ರ ಸರ್ಕಾರವು ಅಧಿಸೂಚನೆಗಳನ್ನು ಹೊರಡಿಸಿತ್ತು. ಈ ನಡುವೆ ಕೆಲವು ನೀಟ್ (NEET) ಪರೀಕ್ಷೆಯ ಆಕಾಂಕ್ಷಿಗಳು ಇದನ್ನು ಪ್ರಶ್ನಿಸಿ ನೀಲ್ ಆರೆಲಿಯೊ ನ್ಯೂನ್ಸ್ ಮತ್ತು ಇತರರು ಹಾಗೂ ಯೂಥ್ ಫಾರ್ ಇಕ್ವಾಲಿಟಿ v. ಯೂನಿಯನ್ ಒಫ್ ಇಂಡಿಯಾ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋದರು. ಈ ಕೇಸಿನಲ್ಲಿ ಈಗ 10% ಮೀಸಲಾತಿ ನೀಡಲು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಅರ್ಹತೆಗೆ ತೀರ್ಮಾನಿಸಿದ ಅದೇ 8 ಲಕ್ಷ ರೂಪಾಯಿಗಳ ಮಿತಿಯನ್ನು ಹೇಗೆ ಆರ್ಥಿಕ ದುರ್ಬಲ ವರ್ಗಗಳ ಮಿತಿಯಾಗಿ ತೀರ್ಮಾನಿಸಲಾಗಿದೆ ಎಂಬುದನ್ನು ವಿವರಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಅಖಿಲ ಭಾರತ ಕೋಟಾ ಅಡಿಯಲ್ಲಿ 10% EWS ಕೋಟಾವನ್ನು ಪರಿಚಯಿಸಿದ 2019 ರ ನೂರಮೂರನೇ ಸಾಂವಿಧಾನಿಕ ತಿದ್ದುಪಡಿಯು ವಿಸ್ತ್ರತ ಪೀಠದ ಮುಂದೆ ಸವಾಲಿಗೆ ಒಳಪಟ್ಟಿರುವುದರಿಂದ ಮತ್ತು ಈ ಕೇಸು ಇನ್ನೂ ತೀರ್ಮಾನವಾಗಿರಬೇಕಾಗಿರುವುದರಿಂದ ಸುಪ್ರೀಂ ಕೋರ್ಟ್‌ನ ಪ್ರಶ್ನೆಯು ಮಹತ್ವದ್ದಾಗಿದೆ.

ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ OBCಗೆ 27% ಮತ್ತು EWSಗೆ 10% ಮೀಸಲಾತಿಯನ್ನು ಅನುಮತಿಸುವ ರೀತಿಯಲ್ಲಿ ಮೇಲೆ ಹೇಳಿದ ನೀಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದ್ದರೂ, ಅಂತಿಮವಾದ ತೀರ್ಪು ಇನ್ನೂ ಆಗಿಲ್ಲ.

EWS ಮೀಸಲಾತಿ ಪರ – ವಿರೋಧ ವಾದಗಳು:

ಈ ವರ್ಷದ ಆರಂಭದಲ್ಲಿ, ಮದ್ರಾಸ್ ಹೈಕೋರ್ಟ್ ವೈದ್ಯಕೀಯ ಶಿಕ್ಷಣದಲ್ಲಿ ಇಡಬ್ಲ್ಯೂಎಸ್ ಮೀಸಲಾತಿಯನ್ನು ರದ್ದುಗೊಳಿಸಿತು – ವಿಪರ್ಯಾಸವೆಂದರೆ ಅದೇ ವಲಯಕ್ಕೆ ಒಬಿಸಿ ಮೀಸಲಾತಿಯನ್ನು ಜಾರಿಗೊಳಿಸುವ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನಂತರ ಆ ಅವಲೋಕನಗಳನ್ನು ಪಕ್ಕಕ್ಕೆ ಹಾಕಿತು ಆದರೆ ಇದು EWS ಕೋಟಾಗಳ ಪರಿಣಾಮಕಾರಿತ್ವದ ಬಗ್ಗೆ ಹೊಸ ಸುತ್ತಿನ ಚರ್ಚೆಗೆ ಕಾರಣವಾಯಿತು.

ಮೀಸಲಾತಿ ಪ್ರಯೋಜನಗಳನ್ನು ನೀಡುವ ಏಕೈಕ ಆಧಾರವಾಗಿ ಆರ್ಥಿಕ ಮಾನದಂಡವನ್ನು ಮಾಡುವ ತಿದ್ದುಪಡಿ ಕೆಲವು ಕಾನೂನಾತ್ಮಕ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗುತ್ತದೆ.

ಸಂವಿಧಾನದ ಅಡಿಯಲ್ಲಿ ಎಲ್ಲರಿಗೂ ಸಮಾನತೆಯ ಭರವಸೆ ಇದೆ. ಆದರೆ ಶೋಷಣೆಗೊಳಪಟ್ಟ ಸಮುದಾಯಗಳನ್ನು, ವರ್ಗಗಳನ್ನು ಮೇಲೆತ್ತಲು ಜಾತಿ ಮತ್ತು ಸಾಮಾಜಿಕ ಸ್ಥಿತಿಯನ್ನು ಆಧರಿಸಿ ಮೀಸಲಾತಿಯನ್ನು ಒದಗಿಸಲಾಗಿದೆ. ಇಂತಹ ಮೀಸಲಾತಿಯು 50% ಮೀರಬಾರದು ಎಂದು ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ ಸತತವಾಗಿ ಹೇಳಿದೆ. ಎಂ.ಆರ್.ಬಾಲಾಜಿ v. ಸ್ಟೇಟ್ ಆಫ್ ಮೈಸೂರು ಕೇಸಿನಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ 60% ಮೀಸಲಾತಿ ಮೇಲ್ಮಿತಿಯನ್ನು ಮೀರಿದ್ದರಿಂದ ಅಮಾನ್ಯ ಎಂದು ಹೇಳಿತ್ತು. ಬಾಲಾಜಿ ಪ್ರಕರಣದ ತೀರ್ಪು ಇಂದ್ರಾ ಸವಾನಿ ಪ್ರಕರಣದಲ್ಲಿ ಮತ್ತು ನಂತರ ಎಂ ನಾಗರಾಜ್ v. ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಒತ್ತಿ ಹೇಳಲ್ಪಟ್ಟಿತು. ಎಂ ನಾಗರಾಜ್ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠವು ಮೀಸಲಾತಿಯ 50% ಮೇಲ್ಮಿತಿ ಸಮಾನತೆ ಮತ್ತು ಸಂವಿಧಾನದ ಮೂಲಭೂತ ರಚನೆಯ (Basic structure of the Constitution) ಅಡಿಪಾಯ ಆಗಿದೆ ಎಂದು ಹೇಳಿದೆ. ಆದರೆ EWS ಮೀಸಲಾತಿ 50% ಮಿತಿಯನ್ನು ದಾಟಲು ಕಾರಣವಾಗುತ್ತದೆ. 50% ಸೀಲಿಂಗ್ ಸರಿಯಾಗಿದೆ ಮತ್ತು ಪ್ರಸ್ತುತ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಅದನ್ನು ಮೀರುವಂತಿಲ್ಲ ಎಂಬುದು ಈ ಮೀಸಲಾತಿಯನ್ನು ವಿರೋಧಿಸುವವರ ವಾದವಾಗಿದೆ.

ಹಾಗೆಯೇ, ‘ಆರ್ಥಿಕವಾಗಿ ದುರ್ಬಲ ವರ್ಗಗಳು’ ಎಂಬುದಕ್ಕೆ ಸ್ಪಷ್ಟವಾದ ವ್ಯಾಖ್ಯಾನವಿಲ್ಲ. ಈ ಮೀಸಲಾತಿಯಿಂದ ಯಾರು ಪ್ರಯೋಜನ ಪಡೆಯುತ್ತಾರೆ ಎಂಬುದನ್ನು ನಿರ್ಧರಿಸುವಲ್ಲಿ ಇದು ರಾಜ್ಯಗಳಿಗೆ ಅನಿಯಂತ್ರಿತ ಅಧಿಕಾರವನ್ನು ನೀಡುತ್ತದೆ. ಇದು ಸಂವಿಧಾನದ 15 (1) ಮತ್ತು 16 (2) ರ ಅಡಿಯಲ್ಲಿನ ರಕ್ಷಣೆಗೆ ಬೆದರಿಕೆ ಹಾಕುತ್ತದೆ ಎಂಬ ವಾದವೂ ಇದೆ.

ಅದಲ್ಲದೇ ಅನುದಾನರಹಿತ ಶಿಕ್ಷಣ ಮತ್ತು ಉದ್ಯೋಗ ಸಂಸ್ಥೆಗಳ ಮೇಲೆ ಈ ಆರ್ಥಿಕ ದುರ್ಬಲ ವರ್ಗ ಮೀಸಲಾತಿ ನೀತಿಯನ್ನು ಹೇರಲಾಗದು. ಏಕೆಂದರೆ ಅನುದಾನರಹಿತ ಸಂಸ್ಥೆಗಳಿಗೆ ರಾಜ್ಯದಿಂದ ಹಣಕಾಸು ಒದಗಿಸುವುದಿಲ್ಲ. ಹಿಂದುಳಿದ ವರ್ಗಗಳ ಶೈಕ್ಷಣಿಕ ಹಿಂದುಳಿದಿರುವಿಕೆ ಅವರ ಸಾಮಾಜಿಕ ಹಿಂದುಳಿದಿರುವಿಕೆಯಿಂದ ಆಗಿದೆ. ಇದಲ್ಲದೆ, ಆರ್ಥಿಕವಾಗಿ ಹಿಂದುಳಿಯುವುದು ಮಾತ್ರ ಹಿಂದುಳಿಯುವಿಕೆಯ ಆಧಾರವಾಗಲು ಸಾಧ್ಯವಿಲ್ಲ. ಆದ್ದರಿಂದ ಈ ತಿದ್ದುಪಡಿಯು ಸಂವಿಧಾನದ ಮೂಲ ರಚನೆಯ ಭಾಗವಾಗಿರುವ ಸಮಾನತೆಯ ಹಕ್ಕನ್ನು ಉಲ್ಲಂಘಿಸಿದೆ ಎಂಬುದು ಕೆಲವು ಕಾನೂನು ತಜ್ಞರ ವಾದವಾಗಿದೆ.

ಆದರೆ ತಿದ್ದುಪಡಿಯನ್ನು ತಂದ ಒಕ್ಕೂಟ ಸರ್ಕಾರ ತನ್ನ ನಡೆಯನ್ನು ಒಂದು ಐತಿಹಾಸಿಕ ನಡೆ ಎಂದು ಸಮರ್ಥಿಸಿದೆ. ಕಾಯಿದೆ ಸಂವಿಧಾನದ ಮೂಲ ರಚನೆಯನ್ನು ಮೀರುವುದಿಲ್ಲ ಎಂದು ಸರ್ಕಾರ ವಾದಿಸುತ್ತದೆ. ಸಂವಿಧಾನದ 46 ನೇ ವಿಧಿಯ ಅಡಿಯಲ್ಲಿ ಸಾಮಾಜಿಕ ಸಮಾನತೆಯನ್ನು ಉತ್ತೇಜಿಸಲು ಮತ್ತು ಭಾರತೀಯ ಸಮಾಜದ ದುರ್ಬಲ ವರ್ಗಗಳ ಕಲ್ಯಾಣವನ್ನು ಸಾಧಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಆಯೋಗವು ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಸಾಮಾನ್ಯ ವರ್ಗದ ಕುಟುಂಬಗಳಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ಶಿಫಾರಸು ಮಾಡಿದೆ. ಈ ಸಾಂವಿಧಾನಿಕ ತಿದ್ದುಪಡಿ  ಉನ್ನತ ಶಿಕ್ಷಣ ಸಂಸ್ಥೆಗಳಿಂದ ಹೊರಗಿಡಲ್ಪಟ್ಟಿರುವ ಮತ್ತು ಈಗಿರುವ ಮೀಸಲಾತಿ ಯೋಜನೆಗಳ ಅಡಿಯಲ್ಲಿ ಒಳಗೊಳ್ಳದ ಹೆಚ್ಚಿನ ಸಂಖ್ಯೆಯ ಬಡ ಭಾರತೀಯರಿಗೆ ನ್ಯಾಯಯುತ ಮತ್ತು ಸಮಾನ ಅವಕಾಶವನ್ನು ಒದಗಿಸುತ್ತದೆ ಎಂಬುದು ಸರ್ಕಾರದ ವಾದ. ಒಕ್ಕೂಟ ಸರ್ಕಾರದ ಮತ್ತೊಂದು ವಾದವೇನೆಂದರೆ ಹಲವು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎತ್ತಿ ಹಿಡಿದ 50% ಸೀಲಿಂಗ್ ಮಿತಿಯು ಅನುಚ್ಛೇದ 15(6) ಗೆ ಅನ್ವಯಿಸುವುದಿಲ್ಲ, ಏಕೆಂದರೆ ಅದು ಅನುಚ್ಛೇದ 16(1) ಮತ್ತು 16(4) ಅಡಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಗೆ ಸಂಬಂಧಿಸಿದೆ. ಅನುಚ್ಛೇಧ 15(6) ಮತ್ತು 16(6) ಎರಡೂ ಆರ್ಥಿಕ ಹಿಂದುಳಿದಿರುವಿಕೆಗೆ ಸಂಬಂಧಿಸಿರುವುದರಿಂದ ಇವೆರಡನ್ನು ಬೇರೆ ಬೇರೆಯಾಗಿ ಸ್ವತಂತ್ರವಾಗಿ ಪರೀಕ್ಷಿಸಬೇಕು ಎಂಬುದು ಸರ್ಕಾರದ ವಾದವಾಗಿದೆ.

ಎರಡೂ ಅಂಚುಗಳ ನಡುವೆ ಇರುವ ವಾಸ್ತವ:

ಮೀಸಲಾತಿ ಸ್ಥಾನಗಳು ನಿರ್ದಿಷ್ಟ ಮಿತಿಯನ್ನು ಮೀರಬಾರದು ಎಂದು ಹೇಳುವ ಯಾವುದೇ ನಿಬಂಧನೆ ಸಂವಿಧಾನದಲ್ಲಿಲ್ಲ. 50% ಸೀಲಿಂಗ್ ಅನ್ನು ವಿಧಿಸುವಾಗ, ನ್ಯಾಯಾಲಯವು ಹಿಂದುಳಿದ ವರ್ಗಗಳಿಗೆ ಒದಗಿಸಲಾದ ಮೀಸಲಾತಿಯ ಬಗ್ಗೆ ಮಾತ್ರ ಪರಿಶೀಲನೆ ನಡೆಸಿತ್ತು. ಅಲ್ಲದೆ, ಸಂವಿಧಾನದ ಅನುಚ್ಛೇದ 15(5) ಮತ್ತು ಅನುಚ್ಛೇದ 16(4) ರ ಅಡಿಯಲ್ಲಿನ  ಮೀಸಲಾತಿಗಳನ್ನು ಮಾತ್ರ ಆ ಪ್ರಕರಣಗಳಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿತ್ತು. ಈಗ ಒದಗಿಸಿರುವ ಸೀಲಿಂಗ್ ಹಿಂದುಳಿದ ವರ್ಗಗಳ ಸಲುವಾಗಿ ಮಾತ್ರ, ಆರ್ಥಿಕ ಹಿಂದುಳಿದಿರುವಿಕೆಗೆ ಅದು ಅನ್ವಯಿಸುವುದಿಲ್ಲ. ಆದ್ದರಿಂದ, ಕಾನೂನಿನ ದೃಷ್ಟಿಯಿಂದ ನೋಡಿದರೆ, ಸಂವಿಧಾನದ ತಿದ್ದುಪಡಿ ಮಾನ್ಯವಾದದ್ದೇ ಎಂದು ಹೇಳಬಹುದು.

ಆದರೆ ಮೀಸಲಾತಿಯು ನಿಜವಾದ ಪ್ರತಿಭಾಶಾಲಿಗಳು ಪ್ರವೇಶಿಸಬಹುದಾದ ಸ್ಪರ್ಧಾತ್ಮಕ ಪೂಲ್ ಅನ್ನು ಕುಗ್ಗಿಸುವ ಮೂಲಕ EWS ಅನ್ನು ಹೊರತುಪಡಿಸಿ ಎಲ್ಲಾ ವರ್ಗಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾದಾಗ ಅರ್ಹರಲ್ಲದ ಜನಸಂಖ್ಯೆಯು EWS ಪ್ರಮಾಣಪತ್ರವನ್ನು ಪಡೆಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕಾದ ಹೆಚ್ಚಿನ ಬಾಧ್ಯತೆ ಆಡಳಿತದ ಮೇಲೆ ಬರುತ್ತದೆ. ಅಪ್ಪಟ ಬಡವರು ಮತ್ತು ನಿರ್ಗತಿಕರಿಗೆ ಅವಕಾಶ ಸಿಗಬೇಕು ಎಂಬುದೇನೋ ನಿಜ. ಆದರೆ, ಪ್ರಾಯೋಗಿಕವಾಗಿ, EWS ನ ಅಭ್ಯರ್ಥಿಗಳು ಈಗಾಗಲೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮವಾಗಿ ಪ್ರತಿನಿಧಿಸಲ್ಪಟ್ಟಿರುವುದರಿಂದ ಈ ಮೀಸಲಾತಿ ಸಮರ್ಥನೀಯವೆಂದು ತೋರುತ್ತಿಲ್ಲ. ಸರ್ಕಾರವು ಹೊಸ ಹೊಸ ಮಾನದಂಡಗಳ ಆಧಾರದ ಮೇಲೆ ಮೀಸಲಾತಿ ನೀಡುವ ಬದಲು ಶಿಕ್ಷಣದ ಗುಣಮಟ್ಟ ಮತ್ತು ಉದ್ಯೋಗ ರಂಗಗಳಲ್ಲಿ ಇತರ ಸಾಮಾಜಿಕ ಉನ್ನತಿ ಕ್ರಮಗಳತ್ತ ಗಮನಹರಿಸಿದರೆ ಏನಾದರೂ ಪರಿಣಾಮಕಾರಿ ಬದಲಾವಣೆ ಸಾಧ್ಯವಾಗಬಹುದು.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

Spread the love