ಲೇಖನಗಳು

“ನಡ್ಜ್” (Nudge) ಎಂಬ ನೀತಿ ಉಪಕರಣ : ಏನು, ಯಾವಾಗ, ಮತ್ತು ಯಾಕೆ?

ಭಾರತದಂತಹ ಒಂದು ಪ್ರಜಾಸತ್ತಾತ್ಮಕ ಹಾಗೂ ಬಹುಸಾಂಸ್ಕೃತಿಕ ದೇಶವನ್ನು ನಡೆಸುವುದು ಸಾಧಾರಣ ಮಾತಲ್ಲ. ಅನೇಕ ತರಹಗಳ ಜನರನ್ನು ವಿಭಿನ್ನ ರೀತಿಯ ಕಾಯಿದೆ ಕಾನೂನುಗಳಿಂದ ನಿರ್ವಹಿಸಬೇಕಾಗುತ್ತದೆ. ಸಮಾಜದ ಯಾವುದೇ ವರ್ಗದ ಜನರಿಗೂ ಹಾನಿ ಉಂಟಾಗದ ಹಾಗೆ ನೋಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿಯೇ ನಮ್ಮಲ್ಲಿ ಜೈಲುಗಳು, ಪೊಲೀಸ್ ಠಾಣೆಗಳು ಇವೆ. ಇಷ್ಟೇ ಯಾಕೆ, ನಮ್ಮ ಇಡೀ ನ್ಯಾಯಾಂಗ ಕೆಲಸ ಮಾಡುತ್ತಿರುವುದು ಇದೇ ನೈತಿಕ ಅಡಿಪಾಯದ ಮೇಲೆ – ಯಾರು ಬೇರೆಯವರಿಗೆ ಹಾನಿ ಮಾಡುತ್ತಾರೋ, ಅವರಿಗೆ ಶಿಕ್ಷೆ ಆಗಲೇಬೇಕು ಎಂಬ ನಂಬಿಕೆಯ ಮೇಲೆ.

ಈ ಒಂದು ನೈತಿಕತೆಯನ್ನು ಸಾಕಾರಗೊಳಿಸಲು, ಸರ್ಕಾರ ಹಲವಾರು ಅಕ್ರಮ ಚಟುವಟಿಕೆಗಳನ್ನು ನಿಷೇಧಿಸಿದೆ. ಉದಾಹರಣೆಗೆ, ಹಲವಾರು ಕಾಡು ಪ್ರಾಣಿಗಳು ಹಾಗೂ ಮರ-ಗಿಡ-ಮೂಲಿಕೆಗಳ ಕಳ್ಳಸಾಗಾಣಿಕೆ, ಮಹಿಳೆಯರು, ಮಕ್ಕಳು, ಹಾಗು ದಲಿತರ ಶೋಷಣೆ, ಅಕ್ರಮವಾಗಿ ಮದ್ಯ ತಯಾರಿಕೆ, ಇತ್ಯಾದಿಗಳಿಗೆ, ನಮ್ಮ ಕಾನೂನುಗಳು ಸಮಂಜಸ ದಂಡ ವಿಧಿಸುತ್ತದೆ. ಯಾಕೆಂದರೆ, ಈ ಎಲ್ಲ ಮತ್ತು ಇನ್ನೂ ಹಲವಾರು ಅಕ್ರಮ ಚಟುವಟಿಕೆಗಳು ನಮ್ಮ ಸಮಾಜದ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ ಎಂಬುದು ನಮ್ಮ ನೈತಿಕ ನಂಬಿಕೆ.

ಆದರೆ, ಎಲ್ಲರಿಗೂ ತಿಳಿದಿರುವಂತೆ, ನಮ್ಮ ಜೀವನದ ಹಲವಾರು ಅಭ್ಯಾಸಗಳು ನಮಗೆ ಹಾನಿಕಾರಕವಾಗಿದ್ದರೂ ಅವು ಕಾನೂನು ಬಾಹಿರವಾಗಿಲ್ಲ. ಅಂದರೆ, ಕೆಲವರು ಈ ಚಟುವಟಿಕೆಗಳನ್ನು ಅನೈತಿಕ ಎಂದು ತಿಳಿದರೂ, ಅವು ಅಕ್ರಮವಲ್ಲ. ಉದಾಹರಣೆಗೆ, ಸಿಗರೆಟ್, ಬೀಡಿ, ತಂಬಾಕು, ಹಾಗು ಮದ್ಯಪಾನಗಳ ಸೇವನೆ ತೆಗೆದುಕೊಳ್ಳೋಣ.

ಈ ಎಲ್ಲ ಪದಾರ್ಥಗಳ ಸೇವನೆ ನಮ್ಮ ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದರೂ, ಇವುಗಳ ಮಾರಾಟ, ಸೇವನೆ ಎಲ್ಲಿಲ್ಲದ ಹುರುಪಿನಿಂದಲೇ ಆಗುತ್ತದೆ. ನಮ್ಮ ರಾಜ್ಯದಲ್ಲಿ ಮದ್ಯಪಾನ ಸಂಯಮ ಮಂಡಳಿ ಇದೆಯೇ ಹೊರತು, ಮದ್ಯದ ಪೂರ್ಣ ಬಹಿಷ್ಕಾರ ಇಲ್ಲ. 

ನಮ್ಮ ಸರ್ಕಾರವು ಮದ್ಯ ಹಾಗು ತಂಬಾಕು ಸೇವನೆ ತಡೆಗಟ್ಟಲು, ಅವುಗಳ ಮೇಲೆ ತೆರಿಗೆ ಹೆಚ್ಚಿಸುತ್ತದೆ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ, ಟಿವಿ ಹಾಗು ಸಿನಿಮಾಗಳಲ್ಲಿ ಮದ್ಯ ಹಾಗು ತಂಬಾಕು ಸೇವನೆ ತೋರಿಸಿದಾಗಲೆಲ್ಲ “ಇವು ಆರೋಗ್ಯಕ್ಕೆ ಹಾನಿಕರ, ಯಾವುದೇ ನಟ-ನಟಿಯರು ಇವುಗಳ ಸೇವನೆ ಬೆಂಬಲಿಸುವುದಿಲ್ಲ” ಎಂಬ ಘೋಷಣೆಯನ್ನು ಪರದೆಯ ಮೇಲೆ ಕಡ್ಡಾಯವಾಗಿ ತೋರಿಸಬೇಕು ಎಂದು ಕಾನೂನು ಜಾರಿಗೆ ತರುತ್ತದೆ. ಇಷ್ಟೇ ಅಲ್ಲ, ಎಲ್ಲ ಸಿಗರೆಟ್ ಪ್ಯಾಕುಗಳ ಮೇಲೆ, ಮತ್ತು ಮದ್ಯದ ಬಾಟಲಿಗಳ ಮೇಲೆ “ಇವು ಆರೋಗ್ಯಕ್ಕೆ ಹಾನಿಕಾರಕ, ಕರ್ಕ ರೋಗಕ್ಕೆ ಕಾರಣ” ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ಕಾನೂನು ಜಾರಿಗೆ ತಂದಿದೆ. 

ಇದು ಎಂಥ ಕಾನೂನು, ನೇರವಾಗಿ ಇಂತಹ ಪದಾರ್ಥಗಳನ್ನು, ಗುಜರಾತ್ ಹಾಗು ಬಿಹಾರ್ ರಾಜ್ಯಗಳ ಹಾಗೆ, ಬಹಿಷ್ಕರಿಸುವುದನ್ನು ಬಿಟ್ಟು, ಕರ್ನಾಟಕ ಸರ್ಕಾರವು ಕೇವಲ ಬಾಯುಪಚಾರ ಮಾಡುತ್ತಿದೆಯಲ್ಲ? ಅಂತ ನಿಮ್ಮ ಮನದಲ್ಲಿ ಪ್ರಶ್ನೆ ಮೂಡಿದರೆ ಅದು ತಾರ್ಕಿಕವೆ. ಈ ನೀತಿ ನಿರ್ಧಾರದ ಕಾರಣ ರಾಜಕೀಯ ವಿಜ್ಞಾನ ಹಾಗು ಅರ್ಥಶಾಸ್ತ್ರದ ಒಂದು ಸಿದ್ಧಾಂತದಲ್ಲಿ ಅಡಗಿದೆ. ಆ ಸಿದ್ಧಾಂತದ ಹೆಸರು – ಸ್ವಾತಂತ್ರ್ಯವಾದಿ ಪಿತೃತ್ವ (libertarian paternalism).

“ಸ್ವಾತಂತ್ರ್ಯವಾದ” (libertarianism) ಹಾಗು “ಸ್ವಾತಂತ್ರ್ಯವಾದಿ ಪಿತೃತ್ವ”:

ಜಗತ್ತಿನಾದ್ಯಂತ ನಮ್ಮ ನಾಗರೀಕತೆಯ ಪ್ರಜಾರಾಜ್ಯ ಪದ್ಧತಿಯು ನಿರಂತರವಾಗಿ ಬದಲಾಗುತ್ತಲೇ ಬಂದಿದೆ. ಸಾವಿರಾರು ವರ್ಷಗಳ ಹಿಂದೆ ಎಲ್ಲೆಡೆ ರಾಜಪ್ರಭುತ್ವ ರಾರಾಜಿಸುತ್ತಿತ್ತು. ಅಂದರೆ, ರಾಜನೇ ದೇವರ ರೂಪ, ಅವನು ಹೇಳಿದ್ದೇ ಕಾನೂನು, ಅವನು ಯಾವಾಗಲೂ ಪ್ರಜೆಗಳ ಹಿತದೃಷ್ಟಿಯಿಂದಲೇ ನಿರ್ಧಾರಗಳನ್ನು ತೆಗೆದುಕೊಳ್ಳುವನು ಎಂಬ ನೈತಿಕ ನಂಬಿಕೆ ಇತ್ತು. ಆದ್ದರಿಂದ ರಾಜದ್ರೋಹ ಬಗೆದವರಿಗೆ ಅತ್ಯಂತ ಕಠಿಣ ಶಿಕ್ಷೆ ದೊರೆಯುತ್ತಿತ್ತು. ಈ ಒಂದು ಪ್ರಜಾರಾಜ್ಯ ಪದ್ಧತಿಯಲ್ಲಿ ಪ್ರಜೆಗಳ ಪ್ರತ್ಯೇಕತೆ ಹಾಗು ವೈಯಕ್ತಿಕ ಹಕ್ಕುಗಳಿಗೆ ಅತ್ಯಂತ ಕಡಿಮೆ ವ್ಯಾಪ್ತಿ ಇತ್ತು. “ಸಾಮೂಹಿಕವಾದ” (collectivism) ವ್ಯಕ್ತಿವಾದ (individualism)ವನ್ನು ಸಾಮಾಜಿಕ ಮಟ್ಟದಲ್ಲಿ ಸೋಲಿಸಿತ್ತು.  

ಕಾಲಾಂತರದಲ್ಲಿ, ನ್ಯಾಯಶಾಸ್ತ್ರವು ಮಾನವ ಹಕ್ಕುಗಳು, ವೈಯಕ್ತಿಕ ಹಕ್ಕುಗಳು, ಹಾಗು ರಾಜಕೀಯ ಶಾಸ್ತ್ರದಿಂದ ಎರವಲು ಪಡೆದ ವ್ಯಕ್ತಿವಾದ (individualism) ಹಾಗು ಸ್ವಾತಂತ್ರ್ಯವಾದ (libertarianism)ದ ಸಿದ್ಧಾಂತಗಳನ್ನು ನಮ್ಮ ಸಾಮೂಹಿಕ ಪ್ರಜ್ಞೆಯಲ್ಲಿ ಬೇರೂರಿಸಿತು. ಈ ಘಟ್ಟದಲ್ಲಿ ನಾವೆಲ್ಲರೂ ಸ್ವೇಚ್ಛೆಯಿಂದ, ಬೇರೆಯವರಿಗೆ ಹಾನಿ ಮಾಡದೆ ನಮ್ಮ ಜೀವನದಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ನೈತಿಕತೆ ನಮ್ಮ ಸಮಾಜದಲ್ಲಿ ಶಕ್ತಗೊಂಡಿತು.

ಉದಾಹರಣೆಗೆ, ಸ್ವಾತಂತ್ರ್ಯವಾದಿ ದೃಷ್ಟಿಕೋನದಿಂದ ನೋಡಿದರೆ ಬೀಡಿ, ಸಿಗರೆಟ್, ಹಾಗು ತಂಬಾಕು ಸೇವನೆ ಅವರವರ ವೈಯಕ್ತಿಕ ಆಯ್ಕೆಯಾಗಿದೆ. ಅವರು ಸಾರ್ವಜನಿಕ ಸ್ಥಳಗಳಲ್ಲಿ, ಇತರರಿಗೆ ಹಾನಿಯಾಗುವಂತೆ ಸೇವನೆ ಮಾಡದಿದ್ದರೆ ಸಾಕು. ಇದಕ್ಕಾಗಿಯೇ ನೀವು ವಿಮಾನ ನಿಲ್ದಾಣಗಳಲ್ಲಿ, ದೊಡ್ಡ ದೊಡ್ಡ ಹೊಟೇಲುಗಳಲ್ಲಿ ಸಿಗರೇಟ್ ಸೇದುವುದಕ್ಕೆ ಪ್ರತ್ಯೇಕ ಕಾಜಿನ ಕೊಠಡಿಗಳನ್ನು ಮಾಡಿರುವುದನ್ನು ನೋಡಿರಬಹುದು.

ಹೀಗಿರುವಾಗ, ಸರ್ಕಾರವು ಕೋಟ್ಯಂತರ ರೂಪಾಯಿಗಳನ್ನು ಬೀಡಿ, ಸಿಗರೆಟ್, ತಂಬಾಕು ನಿಷೇಧದ ಜಾಹೀರಾತುಗಳಲ್ಲಿ ಯಾಕೆ ವಿನಿಮಯ ಮಾಡುತ್ತದೆ?

ಇದಕ್ಕೆ ಕಾರಣ “ಸ್ವಾತಂತ್ರ್ಯಾವಾದಿ ಪಿತೃತ್ವ”ದ ರಾಜಕೀಯ ಸಿದ್ಧಾಂತ. ನ್ಯಾಯಶಾಸ್ತ್ರ, ರಾಜಕೀಯ ಶಾಸ್ತ್ರ, ಹಾಗು ಅರ್ಥಶಾಸ್ತ್ರಗಳಲ್ಲಿ “ಮಾನವ ವಿವೇಕಿ” (Human being is reasonable”) ಎಂಬ ಮೂಲಭೂತವಾದ ಸೈದ್ಧಾಂತಿಕ ನಂಬಿಕೆ ಇದೆ. ಇದರರ್ಥ, ಮಾನವರು ಎಂದೂ ಅವಿವೇಕಿತನ ಮಾಡಲಾರರು ಎಂಬ ನಂಬಿಕೆ! ಇದು ಹಾಸ್ಯಾಸ್ಪದವೆನಿಸಬಹುದು. ಏಕೆಂದರೆ ಸಮಾಜದಲ್ಲಿ ಎಷ್ಟರ ಮಟ್ಟಿಗೆ ಅವಿವೇಕಿತನ ತುಂಬಿಕೊಂಡಿದೆ ಎಂದು ನಾವೆಲ್ಲರೂ ನೋಡಿದ್ದೇವೆ. ಸಮಾಜದಲ್ಲಿ ಅಪರಾಧಗಳು, ಅನಾಗರೀಕತೆ, ಕೋಮುಗಲಭೆಗಳು, ಹಿಂಸೆ, ತಾರತಮ್ಯ, ಇತ್ಯಾದಿ ಅನಾಗರಿಕ ಘಟನೆಗಳು ನಾವು ವಿವೇಕಿಗಳಾಗಿದ್ದರೆ ಆಗುತ್ತಲೇ ಇರಲಿಲ್ಲ.

ಇಷ್ಟೇ ಏಕೆ, ನಮ್ಮ ಮಿತಿ ಮೀರಿದ ದುರಾಸೆ, ಹಣದಾಸೆ, ಹಾಗು ಬಂಡವಾಳಶಾಹಿ ಜೀವನಶೈಲಿಯಿಂದಾಗಿ ಜಾಗತಿಕ ತಾಪಮಾನ ವಿಪತ್ತಿನೆತ್ತ ಏರುತ್ತಿದೆ. ಹೀಗಿರುವಾಗ, ನಾವು ವಿವೇಕಿಗಳೋ, ಅವಿವೇಕಿಗಳೋ?

ಈ ಸೈದ್ಧಾಂತಿಕ ನ್ಯೂನತೆಯನ್ನು ಸರಿಪಡಿಸಲು ಹುಟ್ಟಿಕೊಂಡಿದ್ದೇ ನಡ್ಜ್ ನೀತಿಯಡಿ ಇರುವ ಸಿದ್ಧಾಂತ – ಸ್ವಾತಂತ್ರ್ಯಾವಾದಿ ಪಿತೃತ್ವ.

ನಡ್ಜ್ ಹಾಗು ಸ್ವಾತಂತ್ರ್ಯಾವಾದಿ ಪಿತೃತ್ವ:

ನಾವೆಲ್ಲರೂ ನಮಗೆ ಮನಸ್ಸಿಗೆ ಬಂದ ಹಾಗೆ ಮಾಡುತ್ತೇವೆ, ಯಾಕೆಂದರೆ ನಮ್ಮೆಲ್ಲರಿಗೆ ವೈಯಕ್ತಿಕ ಸ್ವಾತಂತ್ರ್ಯವಿದೆ ಎಂದು ನಾವು ಹೊರಟರೆ, ಸಾಮಾಜಿಕ ಸಮತೋಲನ ಹಾಳಾಗುವುದು ನಿಶ್ಚಿತ. ನಮ್ಮ ಆರೋಗ್ಯ, ಶಿಕ್ಷಣ, ಹಾಗು ಜೀವನವನ್ನು ಹಾಳುಮಾಡಿಕೊಳ್ಳುವುದೂ ಸಾಧ್ಯ. ಅದಕ್ಕಾಗಿ, ಸರ್ಕಾರವು, ಯಾವ ಬಲವನ್ನೂ ಪ್ರಯೋಗ ಮಾಡದೆ, ನಮ್ಮನ್ನು ಸರಿ ದಾರಿಗೆ ಕರೆತರಲು  ಪ್ರಯತ್ನಿಸಲು ಉಪಯೋಗಿಸುವ ಉಪಕರಣಗಳಿಗೆ ನಡ್ಜ್ ಎಂದು ಕರೆಯಲಾಗುತ್ತದೆ.

ಬೀಡಿ, ಸಿಗರೆಟ್, ತಂಬಾಕಿನ ಜಾಹಿರಾತುಗಳಲ್ಲದೆ, ನಡ್ಜ್ ನೀತಿಗಳ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಅವುಗಳಲ್ಲಿ ಕೆಲವು:

೧. “ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ” ಎಂಬ ಜಾಹಿರಾತುಗಳು.

೨. ಸ್ವಚ್ಛ ಭಾರತ ಅಭಿಯಾನದ ಜಾಹಿರಾತುಗಳು

೩. ಎಲ್.ಪಿ.ಜಿ. ಅನುದಾನವನ್ನು ಸ್ವಯಂಪ್ರೇರಿತವಾಗಿ ಬಿಟ್ಟು ಕೊಡುವುದಾಗಿ ಪ್ರೋತ್ಸಾಹಿಸುವು ಜಾಹಿರಾತುಗಳು

೪. ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ, ಹಾಗು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ನಮಗೆ ಜ್ನ್ಯಾಪಿಸುವ ಜಾಹಿರಾತುಗಳು.

ಈ ಎಲ್ಲ ಸರ್ಕಾರಿ ಕ್ರಮಗಳನ್ನು ನೋಡಿದರೆ ಒಂದು ವಿಷಯವನ್ನು ಗಮನಿಸಬಹುದು: ಈ ಯಾವ ನೀತಿ ಉಪಕರಣಗಳೂ ಸಹ ನಮ್ಮ ನಡವಳಿಕೆಯನ್ನು ಬದಲಾಯಿಸಲು ಒತ್ತಾಯ ಅಥವಾ ಬಲದ ಬಳಕೆ ಮಾಡುವುದಿಲ್ಲ. ನಿರಂತರವಾಗಿ ಇಂತಹ ಜಾಹಿರಾತುಗಳನ್ನು ನಾವು ನೋಡಿ, ಸ್ವಯಂಪ್ರೇರಿತರಾಗಿ ನಮ್ಮನ್ನು ನಾವೇ ತಿದ್ದಿಕೊಳ್ಳುತ್ತೀವಿ ಎಂಬುದು ಈ “ನಡ್ಜ್”ಗಳ ವಿಶ್ವಾಸ ಹಾಗು ನಿರೀಕ್ಷೆ. ಅಂದರೆ, ನಾವು ಈ ಜಾಹಿರಾತುಗಳಿಗೆ ಕಿವಿಯೊಡ್ಡದಿದ್ದರೆ ನಾವು ಅಪರಾಧಿಗಳಾಗುವುದಿಲ್ಲ, ನಮ್ಮನ್ನು ಜೈಲಿಗೆ ಹಾಕುವುದಿಲ್ಲ. ನಮ್ಮ ಜೀವನಕ್ಕೆ ನಾವೇ ಹೊಣೆ, ಆದರೆ ಕೆಲವು ಬಾರಿ ನಮಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ತಿಳಿಯದು, ಆದ್ದರಿಂದ ನಮ್ಮ ಅರಿವು ಮೂಡಿಸುವುದು ಸರ್ಕಾರದ ಬಾಧ್ಯತೆಯಾಗಿದೆ ಎಂಬ ನಂಬಿಕೆ “ಸ್ವಾತಂತ್ರ್ಯಾವಾದಿ ಪಿತೃತ್ವ”ದ್ದು.

ಹೀಗೆ, ನಡ್ಜ್ ಎಂಬ ನೀತಿ ಉಪಕರಣ ಸಾಮಾಜಿಕ ಬದಲಾವಣೆಗೆ ಬಹು ಸಹಾಯ ಮಾಡಬಲ್ಲುದು. “ನಡ್ಜ್”ಅನ್ನು ಈ ಕೆಳಕಂಡ ರೀತಿಗಳಲ್ಲೂ ಸಹ ಸಮಾಜ ಸುಧಾರಣೆಗೆ ಬಳಸಬಹುದು:

೧. ಪೂರ್ವನಿಯೋಜಿತ ನಿಯಮಗಳು: ಖಾಸಗಿ ಉದ್ಯಮಗಳಲ್ಲಿ ಪಿಂಚಣಿ ಯೋಜನೆಯನ್ನು ಉದ್ಯೋಗವನ್ನು ಸೇರಿದಾಗಲೇ ಒಂದು ಪೂರ್ವನಿಯೋಜಿತ ನಿಯಮವನ್ನಾಗಿ ಒಪ್ಪಂದದಲ್ಲಿ ಸೇರಿಸಿದರೆ, ಉದ್ಯೋಗಿಗಳ ಮುಪ್ಪಿನ ಸಮಯದಲ್ಲಿ ಅವರ ಆರ್ಥಿಕ ಭದ್ರತೆ ಕಾಪಾಡಬಹುದು. ಹೀಗೆ, ಸಮಾಜದ ಸ್ವಾಸ್ಥ್ಯ ಕಾಪಾಡಿದಂತಾಗುತ್ತದೆ. ಮಾರಣಾಂತಿಕ ಅಪಘಾತವನ್ನಪ್ಪಿದಾಗ ಪೂರ್ವನಿಯೋಜಿತವಾಗಿ  ಅಂಗಾಂಗ ದಾನವನ್ನು ಕೂಡ ನಾವು ಇಂತಹ ನಿಬಂಧನೆಗಳಿಂದ ಮಾಡಬಹುದಾಗಿದೆ.

೨. ನೀರನ್ನು ಅಥವಾ ವಿದ್ಯುತ್ ಶಕ್ತಿಯನ್ನು ವ್ಯರ್ಥಮಾಡಿದಾಗ, ವ್ಯರ್ಥವಾದ ಸಂಪನ್ಮೂಲಗಳ ವಿತ್ತೀಯ ಮೌಲ್ಯವನ್ನು ಬಿಲ್ ಮೇಲೆ ಮುದ್ರಿಸಿದರೆ, ಜಾಗೃತವಾದ ಮಿತವ್ಯಯದ  ವರ್ತನೆಯನ್ನು ಕಾಲಾಂತರದಲ್ಲಿ ಜನರಲ್ಲಿ ಮೂಡಿಸಬಹುದು.

೩. ಸಕಾಲಿಕ ತೆರಿಗೆ ಪಾವತಿ ಮಾಡುವುದಕ್ಕೆ ನಿಯತಕಾಲಿಕವಾಗಿ ಜ್ಞಾಪನಾ ಜಾಹಿರಾತುಗಳನ್ನು ಸಮಾಚಾರಪತ್ರಿಕೆಗಳಲ್ಲಿ ನೋಡಿದ್ದೇವೆ. ಈ “ನಡ್ಜ್”ಗಳು ನಮ್ಮ ದೇಶದ ಆರ್ಥಿಕ ಯೋಜನೆಗೆ ಸಹಕರಿಸುತ್ತವೆ.

೪. ನಿಮ್ಮ ವಿದ್ಯುತ್ ಬಿಲ್ ಅಥವಾ ನೀರಿನ ಬಿಲ್ ಎಂದಿಗಿಂತ ಕಡಿಮೆ ಬಂದಲ್ಲಿ, ಅದನ್ನು ನಿಮಗೆ ಎಸ್.ಎಂ.ಎಸ್. ಮೂಲಕ ತಿಳಿಸಿದರೆ ನಿಮ್ಮ ಮಿತವ್ಯಯದ ನಡವಳಿಕೆ ಮುಂದುವರೆಯಬಹುದು.

೫. ಖಾಸಗಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಹಾಗು ಹದಿ ಹರೆಯದವರಿಗೆ ಅಪೌಷ್ಟಿಕ ಆಹಾರ ಸೇವನೆಯನ್ನು ಬಿಡಿಸಲು ಅಮೇರಿಕಾದಲ್ಲಿ ಒಂದು ನಡ್ಜ್ ಪ್ರಯೋಗ ಸಫಲವಾಯಿತು. ಮಕ್ಕಳ/ಹದಿ ಹರೆಯದವರ ಕಣ್ಣಿನ ಮಟ್ಟಕ್ಕೆ ಕಾಣುವಂತೆ ಶಾಲಾ ಕ್ಯಾಂಟೀನಿನ ಕಟ್ಟೆಯ ಮೇಲೆ ಹಣ್ಣುಗಳು, ಹಾಗು ಹಸಿ ತರಕಾರಿಗಳಿಂದ ಮಾಡಿದ ಪೌಷ್ಟಿಕ ಭಕ್ಷ್ಯಗಳನ್ನು ಮಾರಾಟಕ್ಕೆ ಇಟ್ಟರು. ಯಾರ ಒತ್ತಾಯವಿಲ್ಲದೆ, ಮಕ್ಕಳು ಇವಗಳನ್ನು ಹೆಚ್ಚೆಚ್ಚು ಕೊಂಡತೊಡಗಿದರು. ಇದೇ ನಡ್ಜ್ ನ ತಾಕತ್ತು.

೬. ಪುರುಷರ ಮೂತ್ರಾಲಯಗಳ ಕಮೋಡುಗಳಲ್ಲಿ ಒಂದು ನೊಣದ ಚಿತ್ರ ಬಿಡಿಸಿ, ಆ ನೊಣಕ್ಕೇ ಗುರಿಯಿಟ್ಟು ಮೂತ್ರ ವಿಸರ್ಜನೆ ಮಾಡುವಂತೆ, ಸಾರ್ವಜನಿಕ ಮೂತ್ರಾಲಯಗಳನ್ನು ಸ್ವಚ್ಛವಾಗಿರಿಸಲು ಮಾಡಿದ ನೂತನ ಪ್ರಯೋಗವೂ ಸಫಲವಾಗಿದೆ!

ಸಮಾರೋಪ

ಒಟ್ಟಿನಲ್ಲಿ, ಯಾರ ಬಲವಂತವೂ ಇಲ್ಲದೆ, ಜನರು ತಾವಾಗಿಯೇ ತಮ್ಮ ನಡತೆಯನ್ನು ತಿದ್ದಿಕೊಳ್ಳುವಂತೆ ಮಾಡುವ, ಮನಶಾಸ್ತ್ರದ ಸಂಶೋಧನೆಯನ್ನಾಧರಿಸಿ ರಚಿಸಿದ ನೀತಿ ಉಪಕರಣಕ್ಕೆ ನಡ್ಜ್ ಎಂದು ಕರೆಯುತ್ತಾರೆ.

ಕಾನೂನು ಹಾಗು ಸಾರ್ವಜನಿಕ ನೀತಿ ಕ್ಷೇತ್ರಗಳಲ್ಲಿ ಇಂತಹ ಹೊಸ ಉಪಕರಣಗಳನ್ನು ಉಪಯೋಗಿಸಿ ಸಾರ್ವಜನಿಕ ಹಿತಾಸಕ್ತಿ ಸರ್ಕಾರ ಹೆಚ್ಚಿಸುತ್ತಿದೆ, ದೇಶದ ಅಭಿವೃದ್ಧಿಗೆ, ಸಾರ್ವಜನಿಕ ಆರೋಗ್ಯಕ್ಕೆ ಸಹಾಯ ಮಾಡುತ್ತಿದೆ ಅಂದರೆ ಅದು ಶ್ಲಾಘನೀಯ.

ನೀವು ಇನ್ನೆಲ್ಲೆಲ್ಲಿ ನಡ್ಜ್ ನ ಬಳಕೆ ನೋಡಿದ್ದೀರಿ? ಇದು ಅಮಾಯಕರನ್ನು ಕಪಟ ವಂಚನೆ ಮಾಡಿದಂತೆ ಆಗುವುದೇ? ನಡ್ಜ್ ನಮ್ಮ ವೈಯಕ್ತಿಕ ಸ್ವಾತಂತ್ರ್ಯಕ್ಕೆ ವಿರುದ್ಧವೇ? ಈ ಬಗ್ಗೆ ಕಾಮೆಂಟ್ಸ್ ಮೂಲಕ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

Spread the love