ಲೇಖನಗಳು

ಉತ್ತರಾಧಿಕಾರ ಕಾನೂನು: ಲಿಂಗ, ಧರ್ಮ ಸಮಾನತೆ ಮತ್ತು ಸಾಂವಿಧಾನಿಕ ನ್ಯಾಯ

ನಮ್ಮ ಸಮಾಜದಲ್ಲಿ ಕೌಟುಂಬಿಕ ವ್ಯವಸ್ಥೆಗಳಲ್ಲಿ ಉತ್ತರಾಧಿಕಾರವು ಅತ್ಯಂತ ನಿರ್ಣಾಯಕ ಮತ್ತು ಪ್ರಮುಖ ಕೊಂಡಿಯಾಗಿದೆ ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಕಾಪಾಡಲಾದ ಜೀವನ, ಸ್ವಾತಂತ್ರ್ಯ ಮತ್ತು ಘನತೆಯ ಹಕ್ಕಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಭಾರತದಲ್ಲಿ ಇಂದು ಮದುವೆ, ವಿಚ್ಛೇದನ, ನಿರ್ವಹಣೆ ಮತ್ತು ಜೀವನಾಂಶ, ದತ್ತು ಮತ್ತು ಪಾಲನೆ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ಕೌಟುಂಬಿಕ ಕಾನೂನುಗಳು ಬೇರೆ ಬೇರೆ ಧಾರ್ಮಿಕ ಮೂಲಗಳು ಮತ್ತು ಸಾಂಪ್ರದಾಯಿಕ ಆಚರಣೆಗಳ ಅಡಿಪಾಯದ ಮೇಲೆ ‘ವೈಯಕ್ತಿಕ ಕಾನೂನು’ಗಳ ಚೌಕಟ್ಟಿನಿಂದ ನಿಯಂತ್ರಿಸಲ್ಪಡುತ್ತವೆ. ಆದ್ದರಿಂದ, ಈ ವಿಷಯಗಳಿಗೆ ವಿವಿಧ ಧರ್ಮಗಳು ವಿಭಿನ್ನ ನಿಯಮಗಳನ್ನು ಹೊಂದಿವೆ.

ಉತ್ತರಾಧಿಕಾರ ಕಾನೂನಿನಲ್ಲಿ ಹಿಂದೂಗಳು, ಜೈನರು, ಬೌದ್ಧರು ಮತ್ತು ಸಿಖ್ಖರು ಹಿಂದೂ ಉತ್ತರಾಧಿಕಾರ ಕಾಯಿದೆ, 1956 ಗೆ ಒಳಪಡುತ್ತಾರೆ; ಮುಸ್ಲಿಮರು ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಕಾಯಿದೆ, 1937 ಗೆ ಒಳಪಡುತ್ತಾರೆ ಮತ್ತು ಕ್ರಿಶ್ಚಿಯನ್ನರು, ಪಾರ್ಸಿಗಳು ಮತ್ತು ಯಹೂದಿಗಳು ಭಾರತೀಯ ಉತ್ತರಾಧಿಕಾರ ಕಾಯಿದೆ, 1925 ಗೆ ಒಳಪಡುತ್ತಾರೆ. ಈ ಕಾನೂನುಗಳ ನಡುವಿನ ವ್ಯತ್ಯಾಸಗಳು ಸಾಂವಿಧಾನಿಕ ಸಮಾನತೆಯ ಖಾತರಿಯನ್ನು ಉಲ್ಲಂಘಿಸುತ್ತವೆ. ಈ ಸಮಸ್ಯೆಗೆ ಏಕರೂಪ ನಾಗರಿಕ ಸಂಹಿತೆಯ ಜಾರಿಯೊಂದೇ ಪರಿಹಾರವೆನ್ನುವುದು ಈ ಬರಹದ ಪ್ರಾಮಾಣಿಕ ಅಭಿಪ್ರಾಯ.

ಸಮಸ್ಯೆ ಎಲ್ಲಿ?
ಪ್ರಸಕ್ತ ಜಾರಿಯಲ್ಲಿರುವ ಉತ್ತರಾಧಿಕಾರದ ಕಾನೂನುಗಳು ಧರ್ಮ ಮತ್ತು ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುತ್ತವೆ ಮತ್ತುಉತ್ತರಾಧಿಕಾರ ಕಾನೂನಿನ ತಾರತಮ್ಯಗಳಿಗೆ ಆಧಾರಗಳು ಇಲ್ಲ. ಉದಾಹರಣೆಗೆ, ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ, ತಂದೆ-ತಾಯಿಯ ಮರಣದ ನಂತರ, ಒಬ್ಬ ಮಗನಿಗೆ ಸಾಮಾನ್ಯವಾಗಿ ಮಗಳಿಗೆ ಹೋಲಿಸಿದರೆ ಪಿತ್ರಾರ್ಜಿತ ಮೊತ್ತವನ್ನು ದ್ವಿಗುಣಗೊಳಿಸಲು ಅರ್ಹತೆ ಇರುತ್ತದೆ. ಇದಲ್ಲದೆ, ಮುಸ್ಲಿಮರು ತಮ್ಮ ಎಲ್ಲಾ ಆಸ್ತಿಯನ್ನು ವಿಲ್ ಮಾಡಲು ಅನುಮತಿಸಲಾಗುವುದಿಲ್ಲ. ಅದರಲ್ಲಿ 2/3 ಭಾಗವು ಅವರ ವಾರಸುದಾರರಿಗೆ ಹೋಗಬೇಕು. ಆದಾಗ್ಯೂ, ಹಿಂದೂ ಉತ್ತರಾಧಿಕಾರ ಕಾಯಿದೆ, 1956 ಪ್ರಕಾರ ಹಿಂದೂಗಳು ತಮ್ಮ ಎಲ್ಲಾ ಸ್ವಯಾರ್ಜಿತ ಆಸ್ತಿಯನ್ನು ಸ್ವಯಂಪ್ರೇರಣೆಯಿಂದ ಯಾರಿಗಾದರೂ ವಿಲೇವಾರಿ ಮಾಡಲು ಅನುಮತಿಸುತ್ತದೆ. ಹಾಗೆಯೇ ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯಿದೆ, 2005, ಮಗಳಿಗೆ ಹುಟ್ಟಿನಿಂದ ಮಗನಿಗೆ ಇರುವಂತೆ ವಂಶಸ್ಥಳಾಗಲು ಮತ್ತು ಆಸ್ತಿಯಲ್ಲಿ ಸಮಾನವಾದ ಪಾಲಿಗೆ ಹಕ್ಕನ್ನು ನೀಡಿದೆ. ಆದರೆ ಈ ಕಾನೂನಿನ ಅಂಶವು ಇತರ ಧರ್ಮಗಳ ಉತ್ತರಧಿಕಾರ ಕಾನೂನುಗಳಿಗೆ ಅನ್ವಯಿಸುವುದಿಲ್ಲ. ಇದು ಧರ್ಮದ ಆಧಾರದಲ್ಲಿ ಅಸಮಾನತೆಯಾಗಿದೆ ಮತ್ತು ಅಸಂವಿಧಾನಿಕ ನೀತಿಯಾಗಿರುತ್ತದೆ.

ಪ್ರಸ್ತುತ ಇರುವ ಕಾನೂನುಗಳು ಧರ್ಮಧಾರಿತ ಪುರುಷ ಪ್ರಧಾನ ಸಮಾಜದ ರೂಢಿಗತ ಕಲ್ಪನೆಗಳನ್ನು ಮಾತ್ರ ಬಲಪಡಿಸುತ್ತದೆ.ಆದರೆ ಇವುಗಳಿಗೆ ವಿರುದ್ಧವಾಗಿ ಲಿಂಗ ನ್ಯಾಯ, ಲಿಂಗ ಸಮಾನತೆ ಮತ್ತು ಮಹಿಳೆಯರ ಘನತೆಯ ತತ್ವಗಳು ಸಂವಿಧಾನದ 14, 15 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಕಾಯಲಾಗಿದೆ. ಮಹಿಳೆಯರು ಘನತೆಯಿಂದ ಬದುಕುವ ಹಕ್ಕನ್ನು ಸಂವಿಧಾನವು ನೀಡುತ್ತದೆ.

ಸಾಂವಿಧಾನಿಕ ಅಂಶಗಳು:
ಸಮಾನತೆಯ ಹಕ್ಕು:
ಲಿಂಗ ನ್ಯಾಯ ಮತ್ತು ಲಿಂಗ ಸಮಾನತೆಯು ಭಾರತದ ಸಂವಿಧಾನದ ಅಡಿಯಲ್ಲಿ ಮೂಲಭೂತ ಹಕ್ಕುಗಳ ಭಾಗವಾಗಿದೆ. ನಿರ್ದಿಷ್ಟವಾಗಿ, ಅನುಚ್ಛೇದ 14 ಸಮಾನತೆಯ ಹಕ್ಕನ್ನು ಒದಗಿಸುತ್ತದೆ ಮತ್ತು ಅನುಚ್ಛೇದ 15 ಇತರ ವಿಷಯಗಳ ಜೊತೆಗೆ ಲಿಂಗ ಮತ್ತು ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ.

ಘನತೆಯಿಂದ ಜೀವಿಸುವ ಹಕ್ಕು:
ಅನುಚ್ಛೇದ 21 ರ ಅಡಿಯಲ್ಲಿ ಮಹಿಳೆಯರ ಘನತೆಯು ಬದುಕುವ ಹಕ್ಕಿನ ಒಂದು ಭಾಗವಾಗಿದೆ. ಪೂರ್ವಜರ ಆಸ್ತಿಯಲ್ಲಿ ಮಹಿಳೆಯರ ಉತ್ತರಾಧಿಕಾರವು ಮಹಿಳೆಯರ ಜೀವನ, ಸ್ವಾತಂತ್ರ್ಯ ಮತ್ತು ಘನತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮಹಿಳೆಯರಿಗೆ ಅವರು ಆಚರಿಸುವ ಧರ್ಮಗಳಿಗನುಸಾರ ಉತ್ತರಧಿಕಾರಕ್ಕೆ ವಿಭಿನ್ನ ಮಾನದಂಡಗಳನ್ನು ಅನ್ವಯಿಸುವ ಮೂಲಕ, ವೈಯಕ್ತಿಕ ಕಾನೂನು ಸಂವಿಧಾನದತ್ತವಾಗಿರುವ ಮಹಿಳೆಯರನ್ನು ಸಮಾನವಾಗಿ ಭಾವಿಸುವ ಹಕ್ಕನ್ನು ಮತ್ತು ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ.

ಸಂವಿಧಾನದ ರಾಜ್ಯಂಗ ನಿರ್ದೇಶಕ ತತ್ವಗಳು ಅನುಚ್ಛೇದ 44 ರ ಪ್ರಕಾರ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಪ್ರಯತ್ನಿಸಲು ರಾಜ್ಯಕ್ಕೆ ಕರೆ ನೀಡುತ್ತದೆ. ಆದರೆ ಸಮಸ್ಯೆ ಏನೆಂದರೆ ಸಂವಿಧಾನವು ರಾಜ್ಯಂಗ ನಿರ್ದೇಶಕ ತತ್ವಗಳನ್ನು ಹೇಗೆ ಜಾರಿಗೊಳಿಸಬೇಕು ಎಂಬುದನ್ನು ಸ್ಪಷ್ಟಪಡಿಸುವುದಿಲ್ಲ.

ಈ ನಿಟ್ಟಿನಲ್ಲಿ ಭಾರತದ ಗೋವಾ ರಾಜ್ಯವು ಏಕರೂಪ ನಾಗರಿಕ ಸಂಹಿತೆಯ ಜಾರಿಗೆ ಒಂದು ಮಾದರಿಯಾಗಿದೆ.1869 ರಲ್ಲಿ ಪೋರ್ಚುಗೀಸ್ ಗೋವಾ ಮತ್ತು ದಮನ್ ಕೇವಲ ವಸಾಹತುಗಳಿಂದ ಸಾಗರೋತ್ತರ ಸ್ವಾಧೀನದ ಸ್ಥಿತಿಗೆ ಏರಿಸಿದ ನಂತರ ಗೋವಾ ಸಿವಿಲ್ ಕೋಡ್ ಅನ್ನು ಪರಿಚಯಿಸಲಾಯಿತು. ಇದು ಯುರೋಪ್‌ನಲ್ಲಿ ಸಾಮಾನ್ಯವಾದ ಕಾನೂನು ವ್ಯವಸ್ಥೆಯಾದ ನೆಪೋಲಿಯನ್‌ ಕೋಡ್ ನಿಂದ ಸ್ಪೂರ್ತಿ ಪಡೆದಿದ್ದು, ಪೋರ್ಚುಗೀಸ್ ಕಾನೂನು ವ್ಯವಸ್ಥೆಯ ಭಾರತೀಯ ರೂಪಾಂತರವಾಗಿದೆ. ಭಾರತೀಯ ಕಾನೂನುಗಳು ಇಂಗ್ಲಿಷ್ ಸಾಮಾನ್ಯ ಕಾನೂನಿನಿಂದ ಹುಟ್ಟಿಕೊಂಡಿವೆ.

ಏಕರೂಪ ನಾಗರಿಕ ಸಂಹಿತೆ ಕುರಿತಂತೆ ಭಾರತದ ಸರ್ವೋಚ್ಛ ನ್ಯಾಯಾಲಯದ ಅಭಿಪ್ರಾಯಗಳು :

  1. ಷಾ ಬಾನೊ ಪ್ರಕರಣದಲ್ಲಿ ಭಾರತದ ಅಂದಿನ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ಯಶವಂತ ವಿಷ್ಣು ಚಂದ್ರಚೂಡ್ ರವರು “ಸಂವಿಧಾನದ ಅನುಚ್ಛೇದ 44 ಸತ್ತ ಅಕ್ಷರಗಳಾಗಿ ಉಳಿದಿರುವುದು ವಿಷಾದದ ಸಂಗತಿಯಾಗಿದೆ. ಏಕರೂಪ ಸಂಹಿತೆಯು ರಾಷ್ಟ್ರೀಯ ಏಕೀಕರಣದ ಕಾರಣಕ್ಕೆ ಸಹಾಯ ಮಾಡುತ್ತದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ.
  2. ಶ್ರೀಮತಿ. ಸರಳಾ ಮುದ್ಗಲ್ vs ಯೂನಿಯನ್ ಆಫ್ ಇಂಡಿಯಾ & ಇತರರು ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ಭಾರತದ ಭೂಪ್ರದೇಶದಾದ್ಯಂತ ನಾಗರಿಕರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಭದ್ರಪಡಿಸಲು ರಾಜ್ಯವು ಪ್ರಯತ್ನಿಸುತ್ತದೆ ಎಂಬುದು ಭಾರತದ ಸಂವಿಧಾನದ 44 ನೇ ವಿಧಿಯ ಅಡಿಯಲ್ಲಿ ನಿಸ್ಸಂದೇಹವಾದ ಅಂಶವಾಗಿದೆ ಮತ್ತು ಇದು ಏಕರೂಪದ ವೈಯಕ್ತಿಕ ಕಾನೂನನ್ನು ಪರಿಚಯಿಸಲು ಪ್ರಯತ್ನಿಸುತ್ತದೆ ; ಇದು ರಾಷ್ಟ್ರೀಯ ಬಲವರ್ಧನೆಗೆ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಅವಲೋಕಿಸಿದೆ. ಮುಂದುವರೆದು ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಏಕರೂಪ ನಾಗರಿಕ ಸಂಹಿತೆಯ ಅಗತ್ಯವನ್ನು ‘ಸಂಶಯಿಸಲಾಗುವುದಿಲ್ಲ’ ಎಂದು ಒತ್ತಿಹೇಳಿದೆ. ಆದರೆ ಇದಕ್ಕೆ ಮೊದಲು ಅನುಕೂಲಕರವಾದ ‘ಸಾಮಾಜಿಕ ವಾತಾವರಣ’ ಬೇಕಾಗುತ್ತದೆ ಎಂದೂ ತೀರ್ಪಿನಲ್ಲಿ ತಿಳಿಸಿದೆ.
  3. ಸೆಪ್ಟೆಂಬರ್ 2019 ರಲ್ಲಿ, ಗೋವಾದ ಆಸ್ತಿಗೆ ಸಂಬಂಧಿಸಿದ ವಿಷಯದಲ್ಲಿ, ಸರ್ವೋಚ್ಚ ನ್ಯಾಯಾಲಯವು ಗೋವಾ ರಾಜ್ಯದಲ್ಲಿರುವ ಏಕರೂಪ ನಾಗರಿಕ ಸಂಹಿತೆಯನ್ನು “ಮಾದರಿ ಉದಾಹರಣೆ” ಎಂದು ಬಣ್ಣಿಸಿತು ಮತ್ತು ಸಂವಿಧಾನದ ಸಂಸ್ಥಾಪಕರು ಏಕರೂಪ ನಾಗರಿಕ ಸಂಹಿತೆಯನ್ನು “ಆಶಿಸಿದರು ಮತ್ತು ನಿರೀಕ್ಷಿಸಿದ್ದಾರೆ” ಎಂದು ಗಮನಿಸಿತು.
    ಸುಪ್ರೀಂ ಕೋರ್ಟ್‌ನ 2019 ರ ಜೋಸ್ ಪಾಲೊ ಕೌಟಿನ್ಹೋ ಈ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯ ದ್ವಿಸದಸ್ಯ ಪೀಠವು “ರಾಷ್ಟ್ರವು ತನ್ನ ನಾಗರಿಕರಿಗೆ ಸಾಮಾನ್ಯ ನಾಗರಿಕ ಸಂಹಿತೆಯನ್ನು ಪಡೆಯಲು ಏಕೆ ಪ್ರಯತ್ನಿಸಲಿಲ್ಲ” ಎಂದು ಆಶ್ಚರ್ಯ ಪಡುತ್ತದೆ. ನ್ಯಾಯಮೂರ್ತಿ ದೀಪಕ್ ಗುಪ್ತಾ ಮತ್ತು ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರ ಈ ಪೀಠವು “ಹಿಂದೂ ಕಾನೂನುಗಳನ್ನು 1956 ರಲ್ಲಿ ಕ್ರೋಡೀಕರಿಸಲಾಗಿದ್ದರೂ, ದೇಶದ ಎಲ್ಲಾ ನಾಗರಿಕರಿಗೆ ಅನ್ವಯಿಸುವ ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸುವ ಯಾವುದೇ ಪ್ರಯತ್ನ ನಡೆದಿಲ್ಲ” ಎಂದು ಹೇಳಿದೆ.

ಅದಲ್ಲದೇ ಭಾರತದ ಮಾಜಿ ಮುಖ್ಯ ನ್ಯಾಯಧೀಶರಾದ ಶ್ರೀ ಶರದ್ ಅರವಿಂದ್ ಬೋಬ್ಡೆರವರು ಗೋವಾ ರಾಜ್ಯದ ಏಕರೂಪ ಸಂಹಿತೆಯ ಕಾರ್ಯರೂಪದ ಬಗ್ಗೆ ಕೆಳಕಂಡ ಮಾತುಗಳನ್ನಾಡಿದ್ದಾರೆ:
“ಭಾರತಕ್ಕೆ ಸಾಂವಿಧಾನಿಕ ರಚನಾಕಾರರು ಏನನ್ನು ರೂಪಿಸಿದ್ದಾರೋ ಅದನ್ನು ಗೋವಾ ಹೊಂದಿದೆ – ಏಕರೂಪ ನಾಗರಿಕ ಸಂಹಿತೆ. ಮತ್ತು ಆ ಸಂಹಿತೆಯ ಅಡಿಯಲ್ಲಿ ನ್ಯಾಯವನ್ನು ನಿರ್ವಹಿಸುವ ಮಹಾನ್ ಸವಲತ್ತು ಬಾಂಬೆ ಹೈ ಕೋರ್ಟ್ ನ ಗೋವಾ ಪೀಠದಲ್ಲಿ ನನಗೆ ಸಿಕ್ಕಿದೆ. ಇದು ಮದುವೆ ಮತ್ತು ಉತ್ತರಾಧಿಕಾರದಲ್ಲಿ ಅನ್ವಯಿಸುತ್ತದೆ, ಧಾರ್ಮಿಕ ಸಂಬಂಧವನ್ನು ಲೆಕ್ಕಿಸದೆ ಸಮಾಜದ ಎಲ್ಲಾ ವರ್ಗಗಳನ್ನು ನಿಯಂತ್ರಿಸುತ್ತದೆ. ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸಾಕಷ್ಟು ಶೈಕ್ಷಣಿಕ ಚರ್ಚೆಗಳನ್ನು ನಾನು ಕೇಳಿದ್ದೇನೆ. ಎಲ್ಲಾ ಬುದ್ಧಿಜೀವಿಗಳು ಇಲ್ಲಿಗೆ ಬಂದು ಈ ನ್ಯಾಯದ ಆಡಳಿತವನ್ನು ಕಲಿಯಲು ಮತ್ತು ಅದರ ಒಳ್ಳೆಯ ಪರಿಣಾಮ ಏನಾಗುತ್ತದೆ ಎಂದು ತಿಳಿಯಲು ನಾನು ವಿನಂತಿಸುತ್ತೇನೆ.” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ಬೆಳವಣಿಗೆ ಪ್ರಕಾರ ಮಹಿಳೆಯರಿಗೆ ಲಿಂಗ ನ್ಯಾಯ ಮತ್ತು ಘನತೆಯನ್ನು ಖಾತ್ರಿಪಡಿಸಲು ಏಕರೂಪ ನಾಗರಿಕ ಸಂಹಿತೆಗಾಗಿ ಹಿರಿಯ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿರುವ ಹಿಂದೂ ಉತ್ತರಾಧಿಕಾರ ಕಾನೂನಿನಲ್ಲಿ ಲಿಂಗ ತಾರತಮ್ಯದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಇಂದು ದೇಶದಲ್ಲಿ ಉತ್ತರಾಧಿಕಾರತ್ವಕ್ಕೆ ಸಂಬಂಧಿಸಿದಂತೆ ಅನುಚ್ಛೆಧ 14, 15, 21, 44 ಮತ್ತು ಅಂತರರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಲಿಂಗ ತಟಸ್ಥ ಮತ್ತು ಧರ್ಮ ತಟಸ್ಥ ಕಾನೂನಿನ ಅವಶ್ಯಕತೆಯಿದೆ.
ಉತ್ತರಾಧಿಕಾರ ಮತ್ತು ಆನುವಂಶಿಕತೆಯಲ್ಲಿ ಏಕರೂಪತೆಯು ಕೇವಲ ಅಗತ್ಯವಲ್ಲ, ಲಿಂಗ ನ್ಯಾಯ, ಲಿಂಗ ಸಮಾನತೆ ಮತ್ತು ಮಹಿಳೆಯರ ಘನತೆ ಭಾರತದಲ್ಲಿ ಭ್ರಾತೃತ್ವ, ಏಕತೆ ಮತ್ತು ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಲು ಅತ್ಯಗತ್ಯ. ಆದರೆ, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ವೈಯಕ್ತಿಕ ಕಾನೂನುಗಳಲ್ಲಿ ಉತ್ತರಾಧಿಕಾರತ್ವವು ಲಿಂಗ ಮತ್ತು ಧರ್ಮದ ಆಧಾರದ ಮೇಲೆ ಮುಂದುವರೆಯುತ್ತಿದೆ.

ಉತ್ತರಾಧಿಕಾರ ಕಾನೂನುಗಳಿಗೆ ಸಂಬಂಧಿಸಿದಂತೆ ಏಕರೂಪ ನಾಗರಿಕ ಸಂಹಿತೆಯನ್ನು ಅನುಷ್ಠಾನಗೊಳಿಸುವುದು ಮತ್ತು ಭಾರತೀಯ ಸಂವಿಧಾನದ ಭಾಗ-III ಮತ್ತು IV ರಲ್ಲಿ ಸೂಚಿಸಿದಂತೆ ಸಾಂವಿಧಾನಿಕ ನೀತಿಗಳನ್ನು ಬಲಪಡಿಸುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಅತ್ಯಗತ್ಯವಾಗಿದೆ. ಆದರೆ ಸಂವಿಧಾನ ಅನುಷ್ಠಾನಗೊಂಡು ಇಷ್ಟು ವರ್ಷಗಳ ನಂತರವೂ ಸರ್ಕಾರಗಳ ನಿಷ್ಕ್ರಿಯತೆಯಿಂದಾಗಿ ಲಿಂಗ-ಧರ್ಮ ಪಕ್ಷಪಾತದ ವೈಯಕ್ತಿಕ ಕಾನೂನುಗಳು ಇನ್ನೂ ಅಸ್ತಿತ್ವದಲ್ಲಿರುವುದು ಸಂವಿಧಾನಿಕ ವ್ಯವಸ್ಥೆಯ ಅಣಕವೇ ಆಗಿದೆ. ಎಲ್ಲಾ ಭಾರತೀಯರಿಗೆ ಏಕೀಕೃತ ವೈಯಕ್ತಿಕ ಕಾನೂನಿನ ಕಡೆಗೆ ಯಾವುದೇ ಪ್ರಯತ್ನವನ್ನು ಮಾಡಲು ಬಂದ ಮತ್ತು ಹೋದ ಸರ್ಕಾರಗಳು ಇಲ್ಲಿಯವರೆಗೆ ವಿಫಲವಾಗಿವೆ. ಈ ಕುರಿತಾಗಿ ಸರ್ಕಾರಗಳು ಅಥವಾ ನ್ಯಾಯಾಲಯಗಳು ತ್ವರಿತವಾಗಿ ತಮ್ಮ ಪರಿಧಿಯೊಳಗೆ ಕ್ರಮಗಳನ್ನು ಕೈಗೊಂಡಲ್ಲಿ ಸಾಂವಿಧಾನಿಕ ನ್ಯಾಯವಾದ ಸಮಾನತೆಯಿಂದ ಜೀವಿಸುವ ಹಕ್ಕನ್ನು ಸಮಾಜದಲ್ಲಿ ಕಾಣಬಹುದಾಗಿದೆ.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

Spread the love