ಲೇಖನಗಳು

ಐದು ರೂಪಾಯಿಯ ಬಟ್ಟೆಸೋಪು, ಅಳತೆ, ಪ್ರಮಾಣಗಳು ಮತ್ತು ಕಾನೂನು

ಮುದುಡಿ ಹೊಗಿದ್ದ ಐದು ರೂಪಾಯಿಯ ನೋಟೊಂದನ್ನು ಕೈಗಿತ್ತ ಅಜ್ಜಿ “ಐದ್ರುಪಾಯಿದು ಒಂದು ಬಟ್ಟೆ ಸೋಪು ತಗಂಬಾ” ಅಂದರು. ಸಿದ್ದಯ್ಯನ ಅಂಗಡಿಗೆ ಹೋಗಿ ‘ಐದ್ರುಪಾಯ್ದೊಂದು ಬಟ್ಟೆ ಸೋಪು’ ಎನ್ನುವಷ್ಟರಲ್ಲಿ ನನ್ನ ಕ್ಲಾಸಿನಲ್ಲೇ ಓದುತ್ತಿದ್ದ ಚನ್ನಯ್ಯನೂ ಬಂದು ‘ಕಾಲು ಕೆಜಿ ಕಡಲೆ ಬೇಳೆ’ ಎಂದನು. ಅಂಗಡಿ ಸಿದ್ದಯ್ಯನು ಪ್ಲಾಸ್ಟಿಕ್ ಕವರಿಗೆ ಕಡಲೆ ಬೇಳೆ ಸುರಿದುಕೊಂಡು ತಕ್ಕಡಿಯ ಒಂದು ಬದಿಯಲ್ಲಿ ಅದನ್ನಿಟ್ಟು, ಇನ್ನೊಂದು ಬದಿಗೆ ಇಡಬೇಕಾದ ಕಾಲು ಕೆಜಿ ತೂಕದ ಕಲ್ಲುಗಳನ್ನಿಡಲು ತಡಕುವಾಗ, ರಪ್ಪನೆ ಏನೋ ಹೊಳೆದಂತಾಗಿ ಐದು ರೂಪಾಯಿಯ ಸೋಪೊಂದನ್ನು ತೂಕದ ಕಲ್ಲುಗಳಿಡಬೇಕಾದ ಜಾಗದಲ್ಲಿಟ್ಟು ಕಡಲೆ ಬೇಳೆಯನ್ನು ಸೋಪಿನ ತೂಕಕ್ಕೆ ಸಮ ಮಾಡಿ, ಪೊಟ್ಟಣ ಕಟ್ಟಿ ಕಡಲೆ ಬೇಳೆಯನ್ನು ಚನ್ನಯ್ಯನಿಗೂ ಸೋಪನ್ನು ನನಗೂ ಕೊಟ್ಟನು. ಚನ್ನಯ್ಯ ಮುಖ ನೋಡಿದ. ಸಿದ್ದಯ್ಯನಿಗೆ ಅರ್ಥವಾಯಿತು. ‘ಚನ್ನಯ್ಯಾ, ಈ ಐದ್ರುಪಾಯಿ ಸೋಪು ಕರೆಕ್ಟ್ ಕಾಲು ಕೆಜಿ ಇದೆ, ನೀನು ಎಲ್ಲಿ ಬೇಕಾದರೂ ತೂಕ ಹಾಕಿಸು, ಸೋಪಿನ ಮೇಲೆ 250 ಗ್ರಾಂ ಅಂತ ಇದೆ ನೋಡು ಬೇಕಾದ್ರೆ’ ಎನ್ನುತ್ತಾ ನನ್ನ ಕೈಲಿದ್ದ ಸೋಪಿನಲ್ಲಿದ್ದ ನೆಟ್ ವೆಯಿಟ್ 250 ಗ್ರಾಂ ಎಂದು ಬರೆದಿದ್ದನ್ನು ತೋರಿಸಿದರು. ಚನ್ನಯ್ಯನಿಗೆ ಸಮಾಧಾನವಾಯಿತು. ಬಟ್ಟೆ ಸೋಪಿಗೆ ಇನ್ನೊಂದು ಹೆಸರೇ ಆಗಿದ್ದ ಸುಪ್ರಸಿದ್ದ ಕಂಪನಿಯ ಸೋಪಾಗಿದ್ದರಿಂದ ನಂಬಿಕೆಯೂ ಇತ್ತು. ಅಲ್ಲಿಂದ ಹೊರಟೆವು. ಅಲ್ಲಿಯವರೆಗೂ ಎಷ್ಟೊಂದು ಸಲ ಆ ಸೋಪನ್ನು ಅಂಗಡಿಯಿಂದ ತಂದಿದ್ದ ನನಗೆ ಅದರ ತೂಕ ಎಷ್ಟಿರುತ್ತದೆಯೆಂದು ಗೊತ್ತಿರಲಿಲ್ಲ. ಅದರ ಮೇಲೆ ಬರೆದಿದ್ದನ್ನು ಓದುವ ಗೊಡವೆಗೂ ಹೋಗಿರಲಿಲ್ಲ. ಅದರ ಮೇಲೆ ಬರೆದಿದ್ದನ್ನು ಮತ್ತೆ ಮತ್ತೆ ನೋಡಿ ಅದರೊಂದಿಗೆ ಅದನ್ನು ತಯಾರಿಸಿದವರ ಹೆಸರು, ದಿನಾಂಕ, ಬೆಲೆ ಎಷ್ಟೊಂದು ವಿಷಯಗಳನ್ನು ಅದರ ಮೇಲೆ ಬರೆದಿದ್ದಾರೆಂದು ಆಶ್ಚರ್ಯವೂ ಆಗಿತ್ತು. ಆವಾಗಿನಿಂದ ಅಂಗಡಿಯಿಂದ ತಂದ ಪ್ಯಾಕೆಟ್ಟುಗಳ ಮೈಮೇಲಿದ್ದದ್ದನ್ನು ಓದುವ ಅಭ್ಯಾಸವಾಗಿತ್ತು. ಆದರೆ ನಮ್ಮಜ್ಜಿ ಮಾತ್ರ ‘ಹಾರುವಯ್ಯ ಕೆಟ್ಟು ಹಳೆಪತ್ರ ಹುಡುಕಿದ್ನಂತೆ’ ಅಂತ ನನ್ನನ್ನು ಗೊಣಗುತ್ತಿದ್ದರು.
ಎಷ್ಟೋ ತಿಂಗಳುಗಳ ನಂತರ ಮತ್ತೆ ಅಜ್ಜಿ ನನ್ನನ್ನು ಸೋಪು ತರಲು ಕಳಿಸಿದರು. ಆಶ್ಚರ್ಯ! ಐದ್ರೂಪಾಯಿಯ ಆ ಸೋಪಿನ ಮೇಲೆ ನೆಟ್ ವೆಯಿಟ್ 225 ಗ್ರಾಮಿಗೆ ಇಳಿದಿತ್ತು. ಕಚ್ಚಾ ವಸ್ತುಗಳ ಬೆಲೆಯೇರಿಕೆಯಿಂದ ಸೋಪಿನ ಬೆಲೆಯೇರಿಸಬೇಕಾಗಿದ್ದ ಕಂಪನಿಯು ತೂಕವನ್ನು ಕಡಿಮೆ ಮಾಡಿ ಅದೇ ಬೆಲೆಯಲ್ಲಿ ಮಾರುತ್ತಿತ್ತು. ಇನ್ನೂ ಸ್ವಲ್ಪ ದಿನಗಳಲ್ಲಿ 213 ಗ್ರಾಮಿಗೆ, ಅಲ್ಲಿಂದ 200 ಗ್ರಾಮಿಗೆ ಇಳಿದಿತ್ತು. ಅಷ್ಟೊತ್ತಿಗೆ ನಮ್ಮಜ್ಜಿಗೂ ಅರಿವಾಗತೊಡಗಿತ್ತು. ಐದ್ರೂಪಾಯಿ ಸೋಪು ತುಂಬಾ ಚಿಕ್ಕದಾಗಿದೆ ಮತ್ತು ಅದು ಬೇಗ ಕರಗುತ್ತಿದೆ ಎಂದು ಅದನ್ನು ಬಳಸುವುದನ್ನೂ ನಿಲ್ಲಿಸಿದರು.
ಹೀಗೆ ಐದ್ರೂಪಾಯಿಯ ಸೋಪಿನಿಂದಶುರುವಾದ ಅಳತೆ, ಪ್ರಮಾಣಗಳ ಕಥೆಯ ಕಾನೂನಿನ ಮಜಲನ್ನು ಇವತ್ತು ತಿಳಿದುಕೊಳ್ಳೋಣ.

ಸ್ವೀಟಿನ ಪ್ಯಾಕೆಟ್
ಸೋಪಿನ ಕಥೆ ಓದಿದ್ದಾಯ್ತು, ಸಿಹಿತಿಂಡಿಗಳ ಕಥೆ ಬೇರೆಯದೇ ಇದೆ. ಮೈಸೂರು ಪಾಕು, ಬರ್ಫಿ, ಜಿಲೇಬಿಯಂತಹ ಸಿಹಿತಿಂಡಿಗಳು ಮತ್ತು ಚಕ್ಕುಲಿ, ಕೋಡುಬಳೆಯಂತಹ ಕುರುಕಲು ತಿಂಡಿಗಳನ್ನು ಕೆಲವು ಬಾರಿ ತೂಕದ ಬದಲು ಎಣಿಕೆ ಸಂಖ್ಯೆಗಳಲ್ಲಿ ಪ್ಯಾಕ್ ಮಾಡಿ ಮಾರುತ್ತಾರೆ. ಅಂದರೆ 100 ಗ್ರಾಂ, 200 ಗ್ರಾಂ ಬದಲಿಗೆ 10 ಸಂಖ್ಯೆ, 20 ಸಂಖ್ಯೆಗಳಲ್ಲಿ ಪ್ಯಾಕ್ ಮಾಡಿ ಮಾರುವಲ್ಲಿಯೂ ಬೇಕರಿಯವರು ನಿಮಗೆ ಕಡಿಮೆ ಬೆಲೆಯ ಬಲೆಗೆ ಬೀಳಿಸಬಹುದು. ತಿಂಡಿಯ ಪರಿಮಾಣವು ಸಂಖ್ಯೆಯಲ್ಲಿದ್ದಾಗ ಅಷ್ಟೇ ಸಂಖ್ಯೆಯ ಮೈಸೂರು ಪಾಕನ್ನೋ, ಚಕ್ಕುಲಿಯನ್ನೋ ಕಡಿಮೆ ಅಳತೆಯಲ್ಲಿ/ ಗಾತ್ರದಲ್ಲಿ ತಯಾರಿಸಬಹುದು. ಮಾರುಕಟ್ಟೆಯಲ್ಲಿ ಎಣ್ಣೆಯ ಬೆಲೆ ಏರಿದಂತೆ ಹಳೆಯ ರೇಟಿನಲ್ಲಿಯೇ ನೀವು ಅಂಗಡಿಯಿಂದ ತಂದ ಮೈಸೂರು ಪಾಕಿನ ಇಲ್ಲವೆ ಕೋಡುಬಳೆಯ ಸೈಜು ಕಡಿಮೆಯಾಗಿರುವುದು ಗೊತ್ತಾಗದಿರಬಹುದು.

ಈ ಕುರಿತು ಕಾನೂನಿನಲ್ಲೇನಿದೆ?:
ಮಾರುಕಟ್ಟೆಯಲ್ಲಿ ಬೆಲೆಯೇರಿಕೆಯನ್ನು ಎದುರಿಸಲು ಕಂಪನಿಗಳು ಅನುಸರಿಸುವ ಈ ತಂತ್ರದ ಬಗ್ಗೆ ಕಾನೂನು ಮಾಪನಶಾಸ್ತ್ರ ಪೊಟ್ಟಣ ಸಾಮಗ್ರಿ ನಿಯಮಗಳಲ್ಲಿ (Legal Metrology Packaged commodities Rules, 2011) ಏನಿದೆ ಎಂದು ತಿಳಿದುಕೊಳ್ಳುವುದು ಮುಖ್ಯ. ಮಾರುಕಟ್ಟೆಯಲ್ಲಿ ತಮ್ಮ ಸರಕಿನ ಬೆಲೆಯ ಏರಿಕೆಯಾದಾಗ, ಮಾರಾಟದಲ್ಲಿ ಉಂಟಾಗಬಹುದಾದ ಕುಸಿತವನ್ನು ತಡೆಯಲು ತಯಾರಕರು ಬೆಲೆಯನ್ನು ಹಾಗೇ ಉಳಿಸಿದರೂ ಸರಕಿನ ಪ್ರಮಾಣದಲ್ಲಿ ಕಡಿಮೆ ಮಾಡಿರುತ್ತಾರೆ. ಎಷ್ಟೋ ಸಲ ಇದು ಹೆಚ್ಚಿನ ಗ್ರಾಹಕರ ಅರಿವಿಗೆ ಬರುವುದೇ ಇಲ್ಲ, ಕಂಪನಿಗಳೂ ಇದನ್ನು ಹೇಳುವುದಿಲ್ಲ. ಆದರೆ ಸರಕಿನ ಬೆಲೆಯನ್ನು ಮಾತ್ರ ಕೇವಲ ಇಷ್ಟು ರೂಪಾಯಿಗಳು ಎಂದು ಸಾರಿ ಸಾರಿ ಜಾಹೀರಾತು ಕೊಡುತ್ತವೆ.

ಆದರೆ ಕಾನೂನು ಮಾಪನಶಾಸ್ತ್ರ ಪೊಟ್ಟಣ ಸಾಮಗ್ರಿ ನಿಯಮಗಳ ಅನುಸಾರ ಯಾವುದೇ ಪೊಟ್ಟಣ ಸಾಮಗ್ರಿಯ ಜಾಹೀರಾತಿನಲ್ಲಿ ಮಾರಾಟ ಬೆಲೆಯನ್ನು ಹಾಕಿದ್ದರೆ, ಅಲ್ಲಿ ನಿವ್ವಳ ತೂಕ ಅಥವಾ ಪ್ರಮಾಣವನ್ನೂ ಅದೇ ಗಾತ್ರದ ಅಕ್ಷರಗಳಲ್ಲಿ ಹಾಕಬೇಕು (ನಿಯಮ 31). ಇಲ್ಲದಿದ್ದರೆ ಅಂತಹ ಜಾಹೀರಾತು ನೀಡಿದ ತಯಾರಕ ಕಂಪನಿಯ ವಿರುದ್ದ ಮೊಕದ್ದಮೆ ದಾಖಲಿಸಬಹುದು. 2011 ರಲ್ಲಿ ಜಾರಿಗೆ ಬಂದ ಪೊಟ್ಟಣ ಸಾಮಗ್ರಿ ನಿಯಮಗಳಲ್ಲಿ ಕೆಲವು ನಿರ್ದಿಷ್ಟ ಸರಕುಗಳನ್ನು ನಿಗದಿತ ಅಳತೆಯ ಸ್ಟಾಂಡರ್ಡ್ ಪ್ಯಾಕೇಜುಗಳಲ್ಲಿ ಅಂದರೆ ನಿರ್ದಿಷ್ಟ ಪರಿಮಾಣದಲ್ಲಿ ಮಾತ್ರ ಪ್ಯಾಕ್ ಮಾಡಿ ಮಾರಾಟ ಮಾಡಬೇಕು (ನಿಯಮ 5 ಮತ್ತು ಎರಡನೇ ಶೆಡ್ಯೂಲ್). ಉದಾಹರಣೆಗೆ ಬಟ್ಟೆ ಸೋಪನ್ನು 50 ಗ್ರಾಂ, 75 ಗ್ರಾಂ, 100 ಗ್ರಾಂ ನಂತರದಲ್ಲಿ 50ರ ಗುಣಕದ ತೂಕದ ಪೊಟ್ಟಣಗಳಲ್ಲಿ ಮಾತ್ರ ಪ್ಯಾಕ್ ಮಾಡಿ ಮಾರಬಹುದು. ಇಲ್ಲಿ ಸರಕಿನ ತೂಕ ಅಥವಾ ಪರಿಮಾಣ ಎಂದರೆ ಅದು ಪೊಟ್ಟಣದ ತೂಕವನ್ನು ಬಿಟ್ಟು ಬರೀ ಸರಕಿನ ತೂಕ ಮಾತ್ರ.

ಇನ್ನು ತಿಂಡಿಗಳಂತಹ ಘನ ವಸ್ತು ಪದಾರ್ಥಗಳನ್ನು ತೂಕದಲ್ಲಿ ಅಥವಾ ಸಂಖ್ಯೆಯ ಎಣಿಕೆಯಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡಲು ನಿಯಮಗಳಲ್ಲಿ ಅವಕಾಶವಿದೆ. ಆದರೆ ತಿಂಡಿ ತಿನಿಸುಗಳ ತಯಾರಕರು ಎಣ್ಣೆ, ಸಕ್ಕರೆಯಂತಹ ಕಚ್ಚಾವಸ್ತುಗಳ ಬೆಲೆಯೇರಿದಾಗ ಗಾತ್ರದಲ್ಲಿ ಹೆಚ್ಚು ಕಡಿಮೆ ಮಾಡಬಹುದು. ಗಾತ್ರವನ್ನು ಏರಿಳಿತ ಮಾಡಲು ಅವಕಾಶವಾಗುವುದರಿಂದ ಅವುಗಳನ್ನು ತೂಕದಲ್ಲಿಯೇ ಕೊಂಡುಕೊಳ್ಳುವುದು ಹೆಚ್ಚು ಸೂಕ್ತ.

ಹೊಸ ಬದಲಾವಣೆಗಳು:
ಈ ವಿಷಯದಲ್ಲಿ ಏಪ್ರಿಲ್ 1, 2022 ರಿಂದ ಹೊಸ ತಿದ್ದುಪಡಿಗಳು ಜಾರಿಗೆ ಬಂದಿದ್ದು ಸ್ಟಾಂಡರ್ಡ್ ಪ್ಯಾಕೇಜಿನ ನಿಯಮವನ್ನು ಕೈಬಿಡಲಾಗಿದೆ. ಅದರ ಬದಲಾಗಿ ಪ್ರತಿ ಪೊಟ್ಟಣದ ಮೇಲೆ ಗರಿಷ್ಟ ಮಾರಾಟ ಬೆಲೆ (ಎಂ.ಆರ್.ಪಿ) ಯ ಜೊತೆಗೆ ಬಿಡಿ ಪರಿಮಾಣದ ಬೆಲೆ (Unit sale price) ಯನ್ನೂ ನಮೂದಿಸಬೇಕು. ಅಂದರೆ ಪೊಟ್ಟಣದಲ್ಲಿನ ಸರಕಿನ ಪ್ರಮಾಣವು ಒಂದು ಕಿಗ್ರಾಂಗಿಂತ ಕಡಿಮೆ ಇದ್ದರೆ ಒಂದು ಗ್ರಾಂ ಸರಕಿನ ಬೆಲೆ ಎಷ್ಟು? ಒಂದು ಕಿಗ್ರಾಂಗಿಂತ ಹೆಚ್ಚಿದ್ದರೆ ಪ್ರತಿ ಕಿಲೋಗ್ರಾಂ ಸರಕಿನ ಬೆಲೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ನಿವ್ವಳ ಗಾತ್ರ ಒಂದು ಲೀಟರಿಗಿಂತ ಕಡಿಮೆ ಇದ್ದರೆ ಒಂದು ಮಿಲೀ ನ ಬೆಲೆಯನ್ನು ನಮೂದಿಸಬೇಕು. ಉದಾಹರಣೆಗೆ 100 ಗ್ರಾಂ ಮೈಸೋಪೊಂದರ ಬೆಲೆ 80ರೂ. ಇದ್ದರೆ ಗರಿಷ್ಟ ಮಾರಾಟ ಬೆಲೆ ರೂ. 80.00 (ಎಲ್ಲಾ ತೆರಿಗೆಗಳು ಸೇರಿ) ಮತ್ತು ಪ್ರತಿ ಗ್ರಾಮಿಗೆ ರೂ. 0.80 ಗಳು (ಎಂಬತ್ತು ಪೈಸೆ) ಎಂದು ನಮೂದಿಸಬೇಕು.

ಈ ಮೊದಲು ಇದ್ದ ನಿಗದಿತ ಪರಿಮಾಣದಲ್ಲೇ ಪ್ಯಾಕ್ ಮಾಡಬೇಕೆಂಬ ಸ್ಟಾಂಡರ್ಡ್ ಪ್ಯಾಕೇಜಿಂಗಿನ ನಿಯಮವು ಕೆಲವು ಸರಕುಗಳಿಗೆ ಮಾತ್ರ ಅನ್ವಯ ಆಗುತ್ತಿತ್ತು. ಜೊತೆಗೆ ಹೊಸ ಹೊಸ ಬಗೆಯ ಸರಕುಗಳು ಬೇರೆ ಬೇರೆ ಹೆಸರು ಮತ್ತು ಮಾದರಿಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದರಿಂದ ಸಾಕಷ್ಟು ಸರಕುಗಳು ಈ ನಿಯಮದಿಂದ ಹೊರಗುಳಿದಿದ್ದವು. ಆದರೆ ಇನ್ನು ಮುಂದೆ ಬಿಡಿ ಪರಿಮಾಣದ ಬೆಲೆಯನ್ನು (Unit sale price) ನಮೂದಿಸುವ ನಿಯಮವು ಎಲ್ಲಾ ಪೊಟ್ಟಣ ಸಾಮಗ್ರಿಗಳಿಗೂ ಅನ್ವಯವಾಗಲಿದೆ. ಆದರೆ ಹೆಚ್ಚಿನ ತಯಾರಕ ಕಂಪನಿಗಳು ಗ್ರಾಹಕರ ಪೂರ್ಣ ಅಂಕೆಯ ಬೆಲೆಯೆಡೆಗಿನ ಒಲವು (Round number bias) ಮತ್ತು 99 ಪೈಸೆಯೆಡೆಗಿನ ಒಲವು (99 cent pricing equilibrium) ಗಳನ್ನೂ ತಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳುವುದುಂಟು. ಕಂಪನಿಗಳು ಸರಕಿನ ಬೆಲೆಯನ್ನು ಆಕರ್ಷಕವಾಗಿಸಲು ಕೆಲವೊಮ್ಮೆ ಪೂರ್ಣಸಂಖ್ಯೆಗಳಲ್ಲಿ, ಮತ್ತು ಕೆಲವೊಮ್ಮೆ 99, 199, 299 ಕ್ಕೆ ಇಡುತ್ತಾರೆ – ಈ ರೀತಿಯ ಜನರ ಕೊಳ್ಳುವ ಗುಣವನ್ನು ಪ್ರಭಾವಿಸುವಂತಹ ತಂತ್ರಗಳನ್ನು ಬಳಸಿ ಬೆಲೆಗಳನ್ನಿಡುವುದರ ಸಂಪೂರ್ಣ ಲಾಭ ಪಡೆಯಲು ಮುಂದಾಗಬಹುದು. ಪ್ರತಿ ಬಾರಿ ಬೇರೆ ಬೇರೆ ಪರಿಮಾಣದ ಸರಕಿನ ಪೊಟ್ಟಣಗಳನ್ನು ಮಾರುಕಟ್ಟೆಗೆ ತಂದರೆ ಸರಕಿನ ಬೆಲೆಯ ಮೇಲೆ ನಿಗಾ ವಹಿಸುವುದು ಕಷ್ಟವಾಗಬಹುದು. ಪ್ರತಿ ಬಾರಿ ಸರಕು ಕೊಳ್ಳುವಾಗ ಬಿಡಿ ಪರಿಮಾಣದ ಬೆಲೆಯ(Unit sale price) ಮೇಲೆಯೂ ಇನ್ನು ಕಣ್ಣಿಡಬೇಕಾಗುತ್ತದೆ.

ಸರಕುಗಳ ಬೆಲೆಗಳ ಮೇಲೆ ಸರಕಾರದ ಯಾವುದೇ ನಿಯಂತ್ರಣವಿಲ್ಲದ ‘ಮುಕ್ತ ಬೆಲೆ ನೀತಿ’ ಇರುವುದರಿಂದ ತಯಾರಕ ಕಂಪನಿಗಳು ತಮ್ಮ ತಮ್ಮಲ್ಲಿ ಒಳ ಒಪ್ಪಂದದೊಂದಿಗೆ ಬೆಲೆಗಳನ್ನು ಹೆಚ್ಚಿಸಬಹುದು. ಹಾಗಾಗಿ ಇನ್ನು ಮುಂದೆ ಸಾಮಾನ್ಯ ಗ್ರಾಹಕರು ಎಂದಿಗಿಂತಲೂ ಎಚ್ಚರವಾಗಿರಬೇಕಾಗುತ್ತದೆ. ಪೊಟ್ಟಣಗಳ ಮೇಲೆ ಮುದ್ರಿಸಿದ ಇತರೆ ಮಾಹಿತಿಗಳನ್ನೂ ವಿವರವಾಗಿ ನೋಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

ಬಿಎಸ್ ಮಂಜಪ್ಪ ಅವರು ಮೂಲತಃ ಚಿಕ್ಕಮಗಳೂರಿನ ಕಡೂರು ತಾಲೂಕಿನ ಯಗಟಿಯವರು. ಪ್ರಸ್ತುತ ಮಂಗಳೂರಿನ ಮೂಡಬಿದರೆಯಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆ (ತೂಕ ಮತ್ತು ಅಳತೆ ಇಲಾಖೆ) ಯಲ್ಲಿ ಕೆಲಸ ಮಾಡುತ್ತಿದ್ದಾರೆ.

Spread the love