ಲೇಖನಗಳು

#TRIPSWaiver ಹೆಸರಲ್ಲಿ

TRIPS ಒಪ್ಪಂದದಡಿಯಲ್ಲಿ ಹಲವು ಹೊಣೆಗಾರಿಕೆ/ಬಾಧ್ಯತೆಗಳ ವಿನಾಯ್ತಿ ಕೋರಿ ಅಕ್ಟೋಬರ್, 2020ರಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳೆರಡೂ ಪ್ರಸ್ತಾವನೆಯೊಂದನ್ನು ವಿಶ್ವ ವಾಣಿಜ್ಯ ಸಂಸ್ಥೆಯ (WTO) TRIPS ಕೌನ್ಸಿಲ್ಗೆ ಸಲ್ಲಿಸಿದ್ದವು. ಈ ವಿನಾಯ್ತಿಗೆ ಒಪ್ಪಿಗೆ ಸಿಕ್ಕಿದ್ದರೆ ಬೌದ್ಧಿಕ ಸ್ವತ್ತು(Intellectual Property) ಕಾಪಾಡಲು ಇರುವ ಹಲವು ಬಾಧ್ಯತೆಗಳನ್ನು ಮತ್ತು TRIPS ಒಪ್ಪಂದದ ಪ್ರಕಾರ ಅದನ್ನು ಕಡ್ಡಾಯವಾಗಿ ಜಾರಿಗೊಳಿಸುವ ಕ್ರಮಗಳು ಹಂಗಾಮಿಯಾಗಿ ಅಮಾನತುಗೊಳ್ಳುತ್ತಿದ್ದವು. ಕೋವಿಡ್ನ ಜೊತೆ ಸಮರ್ಥವಾಗಿ ಹೋರಾಡಲು ಬೌದ್ಧಿಕ ಸ್ವತ್ತಿನ ಬೇಲಿಗಳನ್ನು ದಾಟಿ ಕೋವಿಡ್ ಲಸಿಕಾ ತಯಾರಿಕೆ ಮತ್ತು ಇತರೆ ವೈದ್ಯಕೀಯ ಉತ್ಪನ್ನಗಳ ತಯಾರಿಕೆಗೆ ಈ ಮೇಲೆ ತಿಳಿಸಿದ ವಿನಾಯ್ತಿಯ ಅತ್ಯವಶ್ಯವಾಗಿತ್ತು. ಇದರಿಂದಾಗಿ, ಲಸಿಕೆಗಳು ಮತ್ತು ಇನ್ನಿತರ ವೈದ್ಯಕೀಯ ಉತ್ಪನ್ನಗಳು ಎಲ್ಲರಿಗೆ ಕೈಗೆಟಕುವ ಬೆಲೆಯಲ್ಲಿ ಮತ್ತು ಹೇರಳವಾಗಿ ಲಭ್ಯವಾಗುವ ಸಾಧ್ಯತೆಯಿತ್ತು.
WTOದ ಸದಸ್ಯ ರಾಷ್ಟ್ರಗಳಾದ ಯುರೋಪಿಯನ್ ಯುನಿಯನ್, ಅಮೇರಿಕಾ, ದಕ್ಷಿಣ ಆಫ್ರಿಕಾ ಮತ್ತು ಭಾರತದ ಮಧ್ಯೆ WTO ಸೆಕ್ರಟೆರಿಯಟ್ ನಡೆಸಿದ ʼquad processʼ ಎಂದೆ ಕರೆಯಲ್ಪಡುವ ಮಾತುಕತೆಯು ಒಂದು ಒಪ್ಪಂದಕ್ಕೆ ತಲುಪಿದೆ ಎಂದು ವರದಿಯಾಗಿತ್ತು. TRIPS ವಿನಾಯ್ತಿ ಪಡೆಯಲು ಅಭಿವೃದ್ಧಿಶೀಲ ದೇಶಗಳ ಸತತ ಎರಡು ವರ್ಷಗಳ ಹೋರಾಟವು ಬಹುಶಃ ಅಂತ್ಯ ಕಾಣುವಂತಿತ್ತು. ದುರದೃಷ್ಟವಶಾತ್ ಆ ಅಂತ್ಯ ಗೆಲುವಾಗಲಿಲ್ಲ. ಸೋರಿಕೆಯಾದ (leaked) ʼquad text’, ಯುರೋಪಿಯನ್ ಯುನಿಯನ್ 2021ರಲ್ಲಿ ಸಲ್ಲಿಸಿದ ಕಡ್ಡಾಯ ಪರವಾನಿಗೆ ಪರಕಲ್ಪನೆ ಪ್ರಸ್ತಾವನೆಯ ಆಧಾರದ ಮೇಲೆ ತಯಾರಾಗಿದೆ. ಇದಾದ ನಂತರ ʼquadʼ ತೀರ್ಮಾನಗಳ ಮೇಲೆ ಇನ್ನೂ ಒಪ್ಪಂದಕ್ಕೆ ಬರಬೇಕಿದೆ ಎಂದು USTR ತಿಳಿಸಿದೆ. ಹಾಗೆಯೇ, WTOದ ಮುಖ್ಯಸ್ಥರು ನೀಡಿದ ಹೇಳಿಕೆ ಸಹ ಒಪ್ಪಂದ ಇನ್ನೂ ವಿವರವಾಗಿ ರೂಪಗೊಳ್ಳಬೇಕು ಎಂಬುದನ್ನು ಸೂಚಿಸಿದೆ. ದಕ್ಷಿಣ ಆಫ್ರಿಕಾ ಮತ್ತು ಭಾರತ ದೇಶಗಳಿಂದ ʼquadʼ text ನ ಕುರಿತು ಯಾವುದೇ ಅಧಿಕೃತ ಹೇಳಿಕೆಗಳು ಇಲ್ಲದಿದ್ದರೂ, ಈ ದೇಶಗಳ ಆಡಳಿತದ ಚುಕ್ಕಾಣಿ ಹಿಡಿದಿರುವವರ ಹಸ್ತಕ್ಷೇಪವಿಲ್ಲದೆ ʼquadʼ ಸಂಬಂಧಿ ಮಾತುಕತೆಗಳಾಗಲಿ-ಕೆಲಸಗಳಾಗಲಿ ಹೊಸತಾಗಿ ಶುರುವಾಗುವುದಿಲ್ಲ ಎಂಬುದು WTOದ ವೀಕ್ಷಕರ ಅಂಬೋಣ.
ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಜಾಗತಿಕ ಉತ್ತರದ ದೇಶಗಳ ಒತ್ತಡಕ್ಕೆ ಶರಣಾಗಿ ಸಣ್ಣ ಮತ್ತು ಸಂಕುಚಿತವಾದ ವಿನಾಯ್ತಿ ಪ್ರಸ್ತಾವನೆಗೆ ಒಪ್ಪಿವೆ ಎಂದು ʼquadʼ ಓದಿದಾಗ ಅನಿಸುತ್ತದೆ. 2021ರಲ್ಲಿ, 10%ಕ್ಕಿಂತ ಕಡಿಮೆ COVÏD-19 ಲಸಿಕೆಗಳನ್ನು ರಫ್ತು ಮಾಡಿದ ಅಭಿವೃದ್ಧಿಶೀಲ ದೇಶಗಳಿಗೆ ಮಾತ್ರ ಸದಸ್ಯತ್ವ ಹೊಂದಲು ಅವಕಾಶವಿದೆ ಸೋರಿಕೆಯಾದ ʼquad text’ ನಲ್ಲಿ. ಇದು ಚೀನಾವನ್ನು ಗುರಿಯಾಗಿಸಿಕೊಂಡು ಮಾಡಿದ ನಿಬಂಧನೆಯಾಗಿದ್ದರೂ ಇದೊಂದು ಪ್ರಮಾದವೇ ಸರಿ.
ಅಭಿವೃದ್ಧಿಶೀಲ ರಾಷ್ಟ್ರಗಳಾಗಲಿ ಅಥವಾ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗಲಿ ಭಾರತ ಮತ್ತು ಚೀನಾ ದೇಶಗಳ ಉತ್ಪಾದನಾ ಶಕ್ತಿಯ ಮೇಲೆ ಅವಲಂಬಿತವಾಗಿವೆ. ಹಾಗಾಗಿ ಈ ದೇಶಗಳಿಗಾಗುವ ಲಾಭಗಳನ್ನು ಕಡಿತಗೊಳಿಸುವುದೆಂದರೆ ವಿನಾಯ್ತಿಯಿಂದಾಗುವ ಲಾಭದ ಮೇಲೆಯೇ ಪರಿಣಾಮ ಬೀರುತ್ತದೆ. ಅಲ್ಲದೆ, ವಿನಾಯ್ತಿಯನ್ನು ಎಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದಿಲ್ಲವೋ, ಅಲ್ಲಿ ಈ ವಿನಾಯ್ತಿ ಜಾರಿಯಲ್ಲಿರುತ್ತದೆ. ವೈದ್ಯಕೀಯ ಉತ್ಪನ್ನಗಳ ತಯಾರಿಕೆಯ ಮತ್ತು ತಳಮಟ್ಟದವರೆಗೂ ಸವಲತ್ತುಗಳನ್ನು ತಲುಪಿಸುವ ಅಭಿವೃದ್ಧಿಶೀಲ ದೇಶಗಳ ಸಾಮರ್ಥ್ಯವನ್ನು ಬಲಗೊಳಿಸುವುದು ಈ ವಿನಾಯ್ತಿಯ ಮೂಲೋದ್ದೇಶವಾಗಿತ್ತು. ಆದರೆ ಅದಾಗುವುದು ಎಲ್ಲಿ ಕನಿಷ್ಠ ಮೂಲ ಸೌಕರ್ಯ ಮತ್ತು ತಾಂತ್ರಿಕ ತಿಳಿವಳಿಕೆ ಇದ್ದಲ್ಲಿ ಮಾತ್ರ. ಅಷ್ಟೇ ಅಲ್ಲದೆ, ಸಂದರ್ಭಕ್ಕೆ ಸರಿಯಾಗಿ ವಿವಿಧ ದೇಶಗಳ ಅಗತ್ಯತೆಗಳನ್ನು ಪೂರೈಸಿದ್ದಕ್ಕೇ ಚೀನಾ ತನ್ನ ಮೂಲಸೌಕರ್ಯಗಳ ಸಾಮರ್ಥ್ಯತೆಯನ್ನು ಹೆಚ್ಚಿಸಿಕೊಳ್ಳುವ ನ್ಯಾಯಯುತ ಅವಕಾಶವನ್ನು ಅನ್ಯಾಯವಾಗಿ ಕಳೆದುಕೊಳ್ಳಲಿದೆ.
ವಿನಾಯ್ತಿಯ ಪರಿಷ್ಕರಿಸಿದ ಪ್ರಸ್ತಾವನೆಯು ವ್ಯಾಕ್ಸಿನ್/ಲಸಿಕೆ, ರೋಗನಿರ್ಣಯಕ ಮತ್ತು ಚಿಕಿತ್ಸಕ ವಿಷಯಗಳನ್ನೊಳಗೊಂಡಂತೆ ಅವುಗಳ ಸಂಬಂಧಿ ಉತ್ಪನ್ನಗಳ ತಯಾರಿಕೆಯನ್ನು ಒಳಗೊಂಡಿದೆ. ಆದರೆ ಸೋರಿಕೆಯಾದ ʼtextʼನ ಪ್ರಕಾರ ಪ್ರಸ್ತಾವಿತ ಪರಿಹಾರವು ಕೇವಲ ವ್ಯಾಕ್ಸಿನ್ಗೆ ಸೀಮಿತಗೊಂಡಿದೆ. COVÏD-19 ಸೋಂಕು ಇನ್ನೂ ಕೊನೆಯಾಗುವುದು ಬಾಕಿ ಇದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುಬೇಕು. ವ್ಯಾಕ್ಸಿನ್ ಸೋಂಕನ್ನು ತಡೆಗಟ್ಟದಿದ್ದರು, ಸೋಂಕು ಕಡಿಮೆ ಮಾಡುವಲ್ಲಿ ಮತ್ತು ತ್ವರಿತ ಆರೋಗ್ಯ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಬಹು ಪರಿಣಾಮಕಾರಿಯಾಗಿ ಕೆಲಸ ಮಾಡಿವೆ ಎಂದು ಸಾಬೀತಾಗಿದೆ. ಇಂತಹ ಸಂದರ್ಭಗಳಲ್ಲಿ ಚಿಕಿತ್ಸಕ ಉತ್ಪನ್ನಗಳ ಅತೀ ಅವಶ್ಯಕವಿದ್ದು ಅವುಗಳನ್ನೇ ಪ್ರಸ್ತಾವಿತ ಪರಿಹಾರದಿಂದ ಕೈಬಿಡಲಾಗಿದೆ.
“ಸದರಿ ತೀರ್ಮಾನದ ದಿನಾಂಕದಿಂದ ಆರು ತಿಂಗಳೊಳಗಾಗಿ, ಸದಸ್ಯರು text ಅನ್ನು COVID-19ನ ಚಿಕಿತ್ಸಕ ಮತ್ತು ರೋಗನಿರ್ವಾಹಕ ಉತ್ಪನ್ನಗಳ ತಯಾರಿಕೆ ಮತ್ತು ಹಂಚಿಕೆಗೆ ವಿಸ್ತರಿಸಬೇಕೇ ಬೇಡವೇ ಎಂಬುದರ ಬಗ್ಗೆ ತೀರ್ಮಾನಿಸಲಿದ್ದಾರೆ”, ಎಂದು ಸೋರಿಕೆಯಾದ textನಿಂದ ತಿಳಿದು ಬರುತ್ತದೆ. ಅಂದರೆ, ಕಳೆದ ಎರಡು ವರ್ಷಗಳಲ್ಲಿ ನಡೆದಂತಹ ಮಾತುಕತೆಗಳೇ ಹೆಚ್ಚೆಂದರೆ ಮರುಕಳಿಸಬಹುದು. ಈಗಾಗಲೇ, ಹಲವು ಕಡೆಗಳಲ್ಲಿ COVIDನ ಚಿಕಿತ್ಸಕ ವಿಧಾನಗಳ ಮೇಲೆ ಪ್ರಾಥಮಿಕ ಮತ್ತು ದ್ವೀತಿಯ patentಗಳಿಗೆ ಅಂದರೆ ಸ್ವಾಮ್ಯ ಸನ್ನದುಗಳಿಗೆ ಅರ್ಜಿ ಸಲ್ಲಿಸಿದ್ದು ಅವುಗಳಲ್ಲಿ ಈಗಾಗಲೇ ಕೆಲವು ಸ್ವಾಮ್ಯ ಸನ್ನದುಗಳನ್ನು ನೀಡಲಾಗಿದೆ ಎಂಬುದು ಗಮನದಲ್ಲಿಡಬೇಕಾದ ವಿಷಯ. ಕೌನ್ಸಿಲ್ನ ಸದಸ್ಯರು ತೀರ್ಮಾನ ತೆಗೆದುಕೊಳ್ಳುವ ಹೊತ್ತಿಗೆ ಕೆಳಮಟ್ಟದ ತಯಾರಕರೆಲ್ಲರೂ ಈ ಕಟ್ಟುಪಾಡುಗಳಿಗೆ ಒಳಗಾಗಿರುತ್ತಾರೆ. ಆದ್ದರಿಂದ ನಿಸ್ಸಂಶಯವಾಗಿ ಇದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಹಿತಾಸಕ್ತಿಯಲ್ಲಿರುವಂತಾಗಿದೆ.
ಗಮನಿಸಬೇಕಾದ ಅಂಶವೆಂದರೆ TRIPS ಒಪ್ಪಂದದ Article 31 ಮೇಲಿನ ಕೆಲವು ಸ್ಪಷ್ಟೀಕರಣಗಳನ್ನು ಬಿಟ್ಟರೆ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಯಾವುದೇ ವಿನಾಯ್ತಿ text ನಲ್ಲಿ ಕೊಟ್ಟಿಲ್ಲ ಎಂಬುದು ಕಂಡುಬರುತ್ತದೆ. ಈಗಾಗಲೇ TRIPS ಒಪ್ಪಂದದ Art. 31(b)ರಡಿಯಲ್ಲಿ, ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಸಮಾಲೋಚನೆಯಂತಹ ಪ್ರಕ್ರಿಯೆಗಳನ್ನು ಕೈಬಿಡಲಾಗಿದೆ. ಸೋರಿಕೆಯಾದ text ಕೂಡ ಇದೇ ವಿನಾಯ್ತಿಯನ್ನ ನೀಡುತ್ತದೆ. ಇದು ಬೇಕಾಗೇ ಇರಲಿಲ್ಲ.
Art. 31ರ ಪ್ರಕಾರ “ಸ್ವಾಮ್ಯ ಸನ್ನದು ಪಡೆದವನ ಮುಂಚಿತವಾದ ಒಪ್ಪಿಗೆ ಇಲ್ಲದೆ ಅದನ್ನು ಉಪಯೋಗಿಸುವುದಕ್ಕೆ, ಹಾಗೆ ಉಪಯೋಗಿಸಿವುದರ ಮೊದಲು ಆ ಹಕ್ಕುಗಳನ್ನು ಪಡೆದವನ ಒಪ್ಪಿಗೆಯನ್ನು ಸಮಂಜಸವಾದ ಷರತ್ತು ಮತ್ತು ನಿಬಂಧನೆಗಳ ಜೊತೆ ಪಡೆಯಲು ಪ್ರಯತ್ನ ಪಟ್ಟೂ, ಸಮಯಕ್ಕೆ ಸರಿಯಾಗಿ ಒಪ್ಪಿಗೆ ಪಡೆಯಲು ಸೋತಿದ್ದಲ್ಲಿ, ಅವಕಾಶವಿದೆ. ಈ ನಿಬಂಧನೆಯನ್ನು, ಸದಸ್ಯ ರಾಷ್ಟ್ರವು ತುರ್ತು ಪರಿಸ್ಥಿತಿಯಂತಹ ಅಥವಾ ಇತರೆ ಯಾವುದೇ ವಿಶೇಷ ಸಂದರ್ಭಗಳಲ್ಲಿ ಸಾರ್ವಜನಿಕ ಮತ್ತು ವಾಣಿಜ್ಯೇತರ ಉಪಯೋಗದ ಸಲುವಾಗಿ ಕೈ ಬಿಡಬಹುದಾಗಿದೆ.”
ಸುಮ್ಮನೆ ಓದಿದರೂ ರಾಷ್ಟ್ರೀಯ ತುರ್ತು ಪರಿಸ್ಥಿತಿ ಅಥವಾ ಅಂತಹ ಇತರೆ ಸಂದರ್ಭಗಳಲ್ಲಿ ಅಥವಾ ವಾಣಿಜ್ಯೇತರ ಸಾರ್ವಜನಿಕ ಬಳಕೆಗಾಗಿ ಸದಸ್ಯ ರಾಷ್ಟ್ರಗಳು ʼಸಮಂಜಸ ವಾಣಿಜ್ಯ ಷರತ್ತುಗಳ ಮೂಲಕ ಮುಂಚಿತವಾದ ಒಪ್ಪಿಗೆ ಪಡೆಯುವ ಅಗತ್ಯತೆಯನ್ನು ಸದಸ್ಯ ರಾಷ್ಟ್ರಗಳು ಕೈಬಿಡಬಹುದಾದ ಅವಕಾಶ ಹೊಂದಿವೆ ಎಂದು ಗೊತ್ತಾಗುತ್ತದೆ. Art. 31(b)ಯ ವ್ಯಾಪ್ತಿಯಲ್ಲಿ ಸಾಂಕ್ರಮಿಕ ರೋಗದ ಪರಿಸ್ಥಿತಿಯು ಒಂದು ಯೋಗ್ಯ ತುರ್ತು ಪರಿಸ್ಥಿತಿಯಾಗಿ ಬಂದೇ ಬರುತ್ತದೆ. ಹಾಗಾಗಿ Art. 31(b)ರಡಿಯಲ್ಲಿ ನೀಡಿರುವ ವಿನಾಯ್ತಿಯು ಸ್ಪಷ್ಟವಾಗಿ ಅನ್ವಯಿಸುತ್ತದೆ. ಹೀಗಿರುವಾಗ ವಿನಾಯ್ತಿ ಬೇಕೆಂದು ದೇಶಗಳು ಬೇಡಿಕೆ ಇರಿಸಿದ್ದು, ಈಗಿರುವ ಲಾಭಗಳನ್ನೇ ಇನ್ನೊಮ್ಮೆ ಒತ್ತಿ ಹೇಳುವುದಕ್ಕಾಗಿರಲಿಲ್ಲ.
ಆಸಕ್ತಿಕರ ವಿಷಯವೆಂದರೆ, Art. 31ರಲ್ಲಿ ಈಗ ಇಲ್ಲದೆ ಇರುವಂತಹ ಹೊಸ ಕಟ್ಟಳೆಗಳನ್ನೂ ಸೋರಿಕೆಯಾದ text, ರಾಷ್ಟ್ರಗಳ ಮೇಲೆ ಹೊರಸುತ್ತಿದೆ. ಇದರಿಂದಾಗಿ, Art. 31 ಇನ್ನಷ್ಟು ಭಾರವಾಗುತ್ತಿದೆ ಹಾಗೂ ಇದು ತೊಡಕಿನ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ ವಿನಾಯ್ತಿ ಕೇಳಿದ್ದರ ಮೂಲಭೂತ ಆಶಯಕ್ಕೇ ವಿರುದ್ಧವಾಗಿದೆ.
Text ನ ಕಂಡಿಕೆ 3(a)ಯು ಎಲ್ಲಾ ಸಾಮ್ಯ ಸನ್ನದುಗಳನ್ನು ಪಟ್ಟಿ ಮಾಡಬೇಕು ಎಂಬ ಅಗತ್ಯತೆಯೊಂದಿಗೆ, ತುರ್ತಾಗಿ ಸ್ವಾಮ್ಯ ಸನ್ನದು ಹಕ್ಕುಗಳಿಗೆ ವಿನಾಯ್ತಿ ನೀಡುವ ಸಾಧ್ಯತೆಯನ್ನು ಇಲ್ಲವಾಗಿಸುವ ಪ್ರಕ್ರಿಯೆಯನ್ನು ಒಳಗೊಂಡಿದೆ. Text ನ ಕಂಡಿಕೆ 5ರ 4ನೇ ಅಡಿಟಿಪ್ಪಣಿ, ಪಾರದರ್ಶಕತೆಯ ಹೆಸರಿನಲ್ಲಿ ರಾಷ್ಟ್ರೀಯ ವ್ಯವಹಾರಗಳ ಮೇಲೆ ಅಂತರಾಷ್ಟ್ರೀಯ ನಿಗಾ ಹೇರಿದೆ. ಇದು Art. 31ರ ಮೇಲಿನ ಮತ್ತೊಂದು ಹೊಸ ಷರತ್ತಾಗಿದೆ. ಈ ಉಪಬಂಧದ ಪ್ರಕಾರ ಸದಸ್ಯ ರಾಷ್ಟ್ರಗಳೆಲ್ಲವೂ, (a) ಅಧಿಕೃತ ಸಂಸ್ಥೆಯ ಹೆಸರು ಮತ್ತು ವಿಳಾಸ, (b)ಅಧಿಕೃತ ಉತ್ಪನ್ನಗಳು, (c) ಪರವಾನಗಿ ನೀಡಿದ ಕಾಲಾವಧಿ, (d) ಅಧಿಕೃತಗೊಳಿಸಿದ ಪ್ರಮಾಣ (e) ಉತ್ಪನ್ನಗಳ ಸರಬರಾಜು ಮಾಡಲಾಗುವ ರಾಷ್ಟ್ರಗಳ ಪಟ್ಟಿ, ಇವೆಲ್ಲವನ್ನು ಒಳಗೊಂಡಂತೆ ವಿವರವಾದ ವರದಿ ಸಲ್ಲಿಸಬೇಕಿದೆ. ಒಟ್ಟಿನಲ್ಲಿ ಹೇಳುವುದಾದರೆ Art. 31 ಮತ್ತು ಕಡ್ಡಾಯ ಪರವಾನಗಿಯಡಿಯಲ್ಲಿ ಬರುವ ಎಲ್ಲ ಆಡಳಿತಾತ್ಮಕ ಹೊರೆಭಾರಗಳನ್ನು ಉಪಬಂಧವು ಹೊಂದಿದೆ.
ಎಲ್ಲದಕ್ಕಿಂತ ಹೆಚ್ಚಾಗಿ, ಪ್ರಸ್ತಾವಿತ ಪರಿಹಾರವು ಲಸಿಕಾ ಪೇಟೆಂಟ್ಗಳಿಗೆ ಪ್ರತ್ಯೇಕವಾಗಿ ಮಾಡಿದಂತಿದೆ. ಅಲ್ಲದೆ, ವ್ಯಾಪಾರ ರಹಸ್ಯ(trade secret)ಗಳ ಕುರಿತಾದ ಚರ್ಚೆಯನ್ನು ಮತ್ತು ವ್ಯಾಪಾರ ರಹಸ್ಯಗಳು ಲಸಿಕೆ ಉತ್ಪಾದನೆಯಲ್ಲಿ ವಹಿಸುವ ಪಾತ್ರದ ಕುರಿತಾದ ಸಾಮಾನ್ಯ ಅರಿವನ್ನು ಪೂರ್ತಿಯಾಗಿ ಕಡೆಗಣಿಸುತ್ತದೆ. ವ್ಯಾಪಾರ ರಹಸ್ಯಗಳೆಂದರೆ ಹೆಚ್ಚಾಗಿ- ʼಉತ್ಪಾದನಾ ವಿಧಾನಗಳು, ಪೇಟೆಂಟ್ ರಹಿತ ವೈದ್ಯಕೀಯ ಫಾರ್ಮುಲಾಗಳು, genomic ಮಾಹಿತಿ, ಜೀವಕೋಶಗಳ ಸಾಲುಗಳು ಮತ್ತು ಇತರ ಜೈವಿಕ ವಸ್ತುಗಳ ಮಾಹಿತಿʼಯನ್ನು ಒಳಗೊಂಡಿರುತ್ತದೆ. ಹೀಗಾಗಿ, ಪ್ರಸ್ತಾವಿತ text, ಪರಿಹಾರದ ಸಲುವಾಗಿ ಮೇಲ್ನೋಟದ ಪ್ರಯತ್ನವನ್ನೂ, ಈಗಿರುವ ಸವಲತ್ತುಗಳನ್ನು ದುರ್ಬಲಗೊಳಿಸಲು ಮಾಡಿರುವ ಸಮರ್ಥ ಪ್ರಯತ್ನವಾಗಿದೆ.
ಚಿಕ್ಕದಾಗಿ ಹೇಳುವುದಾದರೆ, ಬೌದ್ಧಿಕ ಸ್ವತ್ತಿನ ಅಡೆತಡೆಗಳನ್ನು ಸರಳಗೊಳಿಸುವ ಉದ್ದೇಶದಿಂದ ಮಾಡಿದ ಪ್ರಸ್ತಾವನೆಯಿಂದ, ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಯುರೋಪಿಯನ್ ಯುನಿಯನ್ ಮತ್ತು ಅಮೇರಿಕಾದೊಂದಿಗೆ ಮಾಡಿಕೊಂಡ ರಾಜಿಯಿಂದಾಗಿ, ಅಭಿವೃದ್ಧಿಶೀಲ ರಾಷ್ಟ್ರಗಳೆಲ್ಲವೂ TRIPS ಒಪ್ಪಂದದಲ್ಲಿ ಈಗಾಗಲೇ ಇರುವ ಷರತ್ತುಗಳನ್ನೂ ಮೀರಿದ ನಿಬಂಧನೆಗಳಿಗೆ ಒಪ್ಪಿಕೊಳ್ಳುವಂತಾಗಿದೆ. ಇದು ಕೇವಲ ಸಾಂಕ್ರಮಿಕ ರೋಗಗಳ ಸಂದರ್ಭಗಳಲ್ಲಿ ಮಾತ್ರವಲ್ಲ, ಅದನ್ನು ಹೊರತಾಗಿಯೂ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಪ್ರತಿ ವ್ಯಕ್ತಿಯ ಆರೋಗ್ಯ ಕಡೆಗಣಿಸುವ ಕೆಟ್ಟ ಮುಂಪಂಕ್ತಿ ಹಾಕುವ ರಾಜಿಯಾಗಿದೆ. COVID-19 ಸಂದರ್ಭದಲ್ಲಿ ಸಮಯದ ಅಗತ್ಯಕ್ಕೆ ತಕ್ಕಂತೆ ನೀರ್ಭಿತರಾಗಿ ನಡೆದುಕೊಳ್ಳಲು ಅನುವು ಮಾಡಿಕೊಡುವ ನೀತಿ ರಚಿಸಲು ಮತ್ತು ಅಗತ್ಯವಿರುವ ಎಲ್ಲ ವೈದ್ಯಕೀಯ ಉತ್ಪನ್ನಗಳ ಉತ್ಪಾದನೆಗೆ ಬೇಕಾದ ಮಾಹಿತಿ-ತಂತ್ರಜ್ಞಾನ, ಮೂಲಭೂತ ಮಾಹಿತಿ ಬಳಸುವ ಮುಕ್ತ, ಸರಳ ಮತ್ತು ಸಮನಾದ ಹಕ್ಕುಗಳಿಗಾಗಿ TRIPS ವಿನಾಯ್ತಿಯ ಹೋರಾಟವಾರಂಭಿಸಿದ ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ತಮ್ಮ ಮೂಲ ಗುರಿ ಮತ್ತು ಉದ್ದೇಶಗಳನ್ನು ನೆನಪು ಮಾಡಿಕೊಳ್ಳಲು ಇನ್ನೂ ಕಾಲಾವಕಾಶವಿದೆ.

(ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.)

ಮೂಲ ಬರಹ ಲೈವ್ ಲಾ ನಲ್ಲಿ ಮಾರ್ಚ್ 23 , 2022 ರಂದು ಪ್ರಕಟವಾಗಿದ್ದು, ಲೇಖಕರ ಅನುಮತಿಯೊಂದಿಗೆ ಪ್ರಕಟಿಸಲಾಗಿದೆ.

ಕನ್ನಡಕ್ಕೆ : ನೇತ್ರಾ ಕೊಪ್ಪದ

ಇವನ್ನೂ ಓದಿ :

Spread the love