ಲೇಖನಗಳು

ಸಂವಿಧಾನದ ಮೊದಲ ತಿದ್ದುಪಡಿಯ ಕಥೆ

ಹಕ್ಕು- ಕರ್ತವ್ಯ, ವ್ಯಕ್ತಿ ಸ್ವಾತಂತ್ರ್ಯ- ರಾಷ್ಟ್ರೀಯ ಭದ್ರತೆ, ಮಾನವ ಹಕ್ಕುಗಳು- ಕಾನೂನು ಸುವ್ಯವಸ್ಥೆ, ಸಮಾನತೆ- ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ- ಬಹುಸಂಖ್ಯಾತತೆ ಹೀಗೆ ಇವು ಒಂದಕ್ಕೊಂದು ಪೂರಕವಾದ ವಿಷಯಗಳಾಗಿದ್ದರೂ, ಒಂದು ಸಮಾಜವಾಗಿ ವಿರೋಧಭಾಸವಾಗಿಯೇ ನೋಡುವ ಅನಿವಾರ್ಯತೆಯನ್ನು ನಾವು ಕಟ್ಟಿಕೊಂಡುಬಿಟ್ಟಿದ್ದೇವೆ. ಅಂತಹ ಅನಿವಾರ್ಯತೆಯ ನಡುವೆಯೂ ಭರವಸೆ ಹುಟ್ಟಿಸುವುದು ಈ ವಿಚಾರಗಳ ಕುರಿತು ನಡೆಯುವ ನಿರಂತರವಾದ ಚರ್ಚೆಗಳು. ಒಂದೊಂದು ಚರ್ಚೆಯೂ ಒಂದೊಂದು ಕಾಲಘಟ್ಟದಲ್ಲಿ ಹೊಸಹುಟ್ಟು ಪಡೆಯುತ್ತದೆ. ಅದರಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಎಷ್ಟು ಹಳೆಯದೋ ಅಷ್ಟೇ ಹೊಸ ಹೊಸ ಸನ್ನಿವೇಶಗಳ ಮೂಲಕ ಮತ್ತೆ ಹೊಸ ರೂಪ ತಾಳಿ ಸಾರ್ವಜನಿಕ ಮತ್ತು ನ್ಯಾಯಾಂಗ ವಲಯದಲ್ಲಿ ಚರ್ಚೆಗೆ ದಾರಿಮಾಡಿಕೊಡುತ್ತದೆ. ‘ಸ್ವಾತಂತ್ರ್ಯ’ಕ್ಕೆ ಕಟ್ಟಳೆಗಳಿರಬೇಕೇ? ಕಟ್ಟಳೆಗಳ ಹೇರಿದೊಡೆ ಅಲ್ಲಿ ‘ಸ್ವಾತಂತ್ರ್ಯ’ ಉಳಿಯುವುದಾದರೂ ಹೇಗೆ? ಹಾಗದರೆ ‘ಸ್ವಾತಂತ್ರ್ಯ’ ಎಂಬುದು ಮುಕ್ತವಾಗಿರಬೇಕೆ? – ಈ ತರ್ಕ, ಜಿಜ್ಞಾಸೆ, ಅನುಸಂಧಾನವನ್ನು ಒಂದು ಸರಳ, ಖಚಿತ, ನಿರ್ದಿಷ್ಟ ರೀತಿಯಲ್ಲಿ, ಗೆರೆಗಳ ಎಳೆದು,  ವ್ಯಾಖ್ಯಾನಿಸಲಾಗುವುದಿಲ್ಲ. ಇದನ್ನು ಪರಿಸ್ಥಿತಿ ಮತ್ತು ಘಟನಾವಳಿಗಳ ಸತ್ಯಾಸತ್ಯತೆಯನ್ನು ನಿರುಕಿಸಿ ವಿಮರ್ಶಿಸಬೇಕೆ ಹೊರತು ಪೂರ್ವಗ್ರಹ ಪೀಡಿತರಾಗಿಯಲ್ಲ. ಸಂವಿಧಾನದ ತಿದ್ದುಪಡಿ ಪ್ರಕ್ರಿಯೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿರುವ ಬೆಸುಗೆ ತುಂಬಾ ಕುತೂಹಲಕಾರಿಯಾಗಿದ್ದು. ತಿದ್ದುಪಡಿಗಿರುವ ಕಟ್ಟಳೆಗಳು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿರುವ ಮಿತಿಗಳು ಮತ್ತು ಒಂದಿನ್ನೊಂದರ ಮೇಲೆ ಮಾಡುವ ಪರಿಣಾಮಗಳನ್ನು ತಿಳಿದಷ್ಟೂ ಕಡಿಮೆಯೇ. ಈ ಬರಹದಲ್ಲಿ ಸಂವಿಧಾನ ತಿದ್ದುಪಡಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕೆಲವು ಮಜಲುಗಳನ್ನು ನೋಡೋಣ. 

ಸಂವಿಧಾನದ  368 ನೇಯ ವಿಧಿ ಸಂವಿಧಾನದ ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರ ನೀಡುತ್ತದೆ.  ಆದರೆ ಈ ಪರಿಚ್ಛೇದದ ಅಡಿಯಲ್ಲಿ ಸಂವಿಧಾನದ ಎಲ್ಲ ವಿಷಯಗಳಿಗೂ  ತಿದ್ದುಪಡಿ ಮಾಡಬಹುದೇ? ಅಥವಾ ಪೂರಾ ಸಂವಿಧಾನವನ್ನೇ ಬದಲಾಯಿಸಬಹುದೇ? ಸಂವಿಧಾನ ತಿದ್ದುಪಡಿ ಪ್ರಕ್ರಿಯೆಗೆ ಏನೇನು ಮಿತಿಗಳುಂಟು? ಎಂಬ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಕೇಶವಾನಂದ ಭಾರತಿ  vs. ಸ್ಟೇಟ್ ಆಫ್ ಕೇರಳ ಒಂದು ಮಹತ್ವದ ತೀರ್ಪು. 1951 ರಲ್ಲಿ ಸಂವಿಧಾನದ 31A, 31B ವಿಧಿಗಳು ಮತ್ತು 9ನೇ ಪರಿಶಿಷ್ಟ ವನ್ನು ಪರಿಚಯಿಸಿದರು. 9 ನೇ ಪರಿಶಿಷ್ಟದ ವಿಶೇಷತೆ ಏನೆಂದರೆ, ಯಾವುದೇ ಕಾನೂನನ್ನು ಸಂವಿಧಾನದ 9ನೇ ಪರಿಶಿಷ್ಟದಲ್ಲಿ ಸೇರಿಸಿ ಬಿಟ್ಟರೆ ಅದು ನ್ಯಾಯಾಂಗ ವಿಮರ್ಶೆಯಿಂದ ಹೊರಗೆ ಉಳಿಯುತ್ತದೆ.  ಅಂದರೆ, ಒಂದು ಸಾರಿ ಆ ಪರಿಶಿಷ್ಟದಲ್ಲಿ ಕಾನೂನನ್ನು, ಅದರಲ್ಲಿ ಹೇಳಿದ ಪ್ರಕ್ರಿಯೆ ಅನುಸರಿಸಿ ಸೇರಿಸಿಬಿಟ್ಟರೆ, ಆಮೇಲೆ ಆ ಕಾನೂನು ಸಂವಿಧಾನದ ಚೌಕಟ್ಟು ಮೀರಿದೆಯೋ ಇಲ್ಲವೋ ಎಂಬ ತೀರ್ಮಾನವನ್ನು ನ್ಯಾಯಾಲಯಗಳು ಮಾಡಲಾಗುವುದಿಲ್ಲ. 1963ರಲ್ಲಿ ಕೇರಳ ಸರ್ಕಾರ ಭೂ ಸುಧಾರಣಾ ಕಾನೂನನ್ನು 9ನೇ ಪರಿಶಿಷ್ಟದಲ್ಲಿ ಸೇರಿಸಿತು. ಆಗ ಅಂದಿನ ಸಂವಿಧಾನದಲ್ಲಿ ನೀಡಲಾಗಿದ್ದ ಆಸ್ತಿಯ ಹಕ್ಕಿಗೆ ಇದು ಧಕ್ಕೆ ತರುತ್ತದೆ ಎಂದು ಇದರ ಸಂವಿಧಾನತ್ಮಕತೆಯನ್ನು ಪ್ರಶ್ನಿಸಿ ಕಾಸರಗೋಡಿನ ಎಡೆನೀರ್ ಮಠದ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ನಂತರ ಸರ್ವೋಚ್ಚ ನ್ಯಾಯಾಲಯದ 13 ಜನ ನ್ಯಾಯಧೀಶರ ಪೀಠ ಸರಕಾರಕ್ಕೆ ಮೂಲಭೂತ ಹಕ್ಕುಗಳನ್ನು ಮಾರ್ಪಡಿಸಲು ಇರುವ ಅಧಿಕಾರವನ್ನು ಎತ್ತಿ ಹಿಡಿದು, “ಮೂಲ ರಚನಾ ಸಿದ್ಧಾಂತ” (Basic Structure Doctrine) ಅನ್ನು ಪರಿಚಯಿಸಿದರು. ಸಂವಿಧಾನದ ಮೂಲೊದ್ದೇಶಗಳಿಗೆ ಧಕ್ಕೆ ತರುವ ಯಾವುದೇ ತಿದ್ದುಪಡಿ ಅಮಾನ್ಯ ಮತ್ತು ಅಸಂವಿಧಾನತ್ಮಕವಾಗಿರುತ್ತದೆ ಎಂದು ಈ ಸಿದ್ಧಾಂತದಲ್ಲಿ ಹೇಳಲಾಯಿತು. ಈ ತೀರ್ಪಿನ ನಂತರ ಬಂದ ಎಲ್ಲ ಸಂವಿಧಾನದ ತಿದ್ದುಪಡಿಗಳೂ ‘ಮೂಲ ರಚಾನಾ ಸಿದ್ಧಾಂತ’ ದ ಅಳತೆಗೋಲಿನಲ್ಲಿ ಪರೀಕ್ಷೆಗೊಳಪಟ್ಟಿದ್ದೆ ಆಗಿವೆ. ಆದರೆ ಈ ತೀರ್ಪಿನ ಎಷ್ಟೋ ಮೊದಲು ಸಂವಿಧಾನಕ್ಕೆ ತಿದ್ದುಪಡಿಗಳಾಗಿದ್ದವು. ಹಿತಿರುಗಿ ನೋಡಿದರೆ ಎಷ್ಟು ತಿದ್ದುಪಡಿಗಳು ಈ ಅಳತೆಗೋಲಿನ ಪರೀಕ್ಷೆಯಲ್ಲಿ ಪಾಸಾದವು ಎಂದು ಯೋಚಿಸಿದರೆ ನಮಗೆ ಸಿಗುವ ಉತ್ತರಗಳು ದೊಡ್ಡ ಪ್ರಶ್ನೆಗಳನ್ನೇ ಹುಟ್ಟು ಹಾಕಬಹುದು. ಬಹಳ ವಿವಾದಗಳಿಗೊಗಾಗಿರುವ ಇವತ್ತಿಗೂ ಚರ್ಚೆಯಾಗುವ ಮೊದಲ ತಿದ್ದುಪಡಿಯ ಕುರಿತು ಈ ಬರಹ. ಸೋಜಿಗವೆಂದರೆ ಸ್ವತಂತ್ರ ಭಾರತದ ಸಂವಿಧಾನದ ಮೊದಲ ತಿದ್ದುಪಡಿಯಲ್ಲೇ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಹೊಸ ಅಂಶಗಳನ್ನು ಸೇರಿಸಿದ್ದು. 

ಸಂವಿಧಾನದಲ್ಲಿ ಈಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅದರ ಮಿತಿಗಳು:

 ಅಭಿವ್ಯಕ್ತಿ ಸ್ವಾತಂತ್ರ್ಯ- ನಾಗರಿಕರಿಗೆ ಸಂವಿಧಾನ ನೀಡಿರುವ ಒಂದು ಮೂಲಭೂತ ಹಕ್ಕು. ಸಂವಿಧಾನದ 19(1) (A) ಅನುಚ್ಛೇದ ದೇಶದ ಎಲ್ಲ ನಾಗರಿಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನೀಡುತ್ತದೆ ಮತ್ತು 19(2) ವಿಧಿ ಅದರ ಮಿತಿಗಳನ್ನು ವಿವರಿಸುತ್ತದೆ. ರಾಷ್ಟ್ರೀಯ ಭದ್ರತೆ, ವಿದೇಶಗಳೊಂದಿಗೆ ಸ್ನೇಹ ಸೌಹಾರ್ದತೆ, ಕಾನೂನು ಸುವ್ಯವಸ್ಥೆ, ನೈತಿಕತೆ, ದೇಶದ ಅಖಂಡತೆ ಮತ್ತು ಏಕತೆಗೆ ಧಕ್ಕೆ ತರುವಂತಹ ಕೆಲಸಗಳ ಮೇಲೆ ಸರಕಾರ ಕಟ್ಟಳೆಗಳನ್ನು ಹೇರಬಹುದು. ಅಂದರೆ ಇಂತಹ ಕೆಲಸಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಕಾಪಾಡಲು ಆಗುವುದಿಲ್ಲ. 

ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ತನ್ನ ಭಾವನೆ, ವಿಚಾರ, ಸಿದ್ಧಾಂತಗಳನ್ನು ಮುಕ್ತವಾಗಿ ಮಾತು, ಬರಹ, ಪ್ರಕಟಣೆ, ಚಿತ್ರ ಅಥವಾ ಇನ್ನಾವುದೇ ಮಾಧ್ಯಮದ ಮೂಲಕ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದು. ಮುಕ್ತವಾದ ವಿಚಾರ ವಿನಿಮಯ ಮತ್ತು ಈ ಮೂಲಕ ಮಾಧ್ಯಮಗಳಿಗೆ ಸ್ವಾತಂತ್ರ್ಯ ಹಾಗೂ ಅವಕಾಶ ಕಲ್ಪಿಸಿ ಕೊಡುವುದು ಸಹ ಇದರ ಮುಖ್ಯ ಉದ್ದೇಶಗಳಲ್ಲೊಂದು. ಇದು ಅರಿವಿನ ಪ್ರಸಾರ- ಪ್ರಚಾರ, ಸತ್ಯಾನ್ವೇಷಣೆ, ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದನ್ನು  ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 

ಜನರು ಸರ್ಕಾರದ ನೀತಿಗಳು ಮತ್ತು ಸಮಾಜದಲ್ಲಿ ಚರ್ಚಿಸಲ್ಪಡುವ ವಿಷಯಗಳನ್ನು ಅರಿಯುವ ಅಧಿಕಾರದ ತತ್ವವೇ ‘ಅಭಿವ್ಯಕ್ತಿ ಮತ್ತು ಮಾಧ್ಯಮ ಸ್ವಾತಂತ್ರ್ಯದ ಅಡಿಪಾಯವಾಗಿದೆ. ಪ್ರಭು ದತ್ vs. ಯೂನಿಯನ್ ಆಫ್ ಇಂಡಿಯಾ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯ ಸರ್ಕಾರದ ಆಡಳಿತದ ವೈಖರಿ ಮತ್ತು ಸಮಾಜದ ಆಗುಹೋಗುಗಳ ಕುರಿತು ತಿಳಿಯುವ ಜನರ ಹಕ್ಕನ್ನು ಎತ್ತಿಹಿಡಿಯುತ್ತದೆ. ಹಾಗೆಯೇ 19(2) ವಿಧಿಯಲ್ಲಿ ವಿವರಿಸಲಾದ ಮಿತಿಯನ್ನು ಉಲ್ಲಂಘಿಸಿದರೆ ಅದು ದಂಡನಾರ್ಹನೀಯ ಅಪರಾಧವಾಗುತ್ತದೆ. ನಮ್ಮ ಅಭಿವ್ಯಕ್ತಿಯ ಹಿಂದಿನ ಉದ್ದೇಶ ಸತ್ಯಾನ್ವೇಷಣೆ ಅಥವಾ ವಿಚಾರ ವಿನಿಮಯದ ಧ್ಯೇಯವನ್ನು ಹೊಂದಿರಬೇಕೆ ವಿನ: ಅದರಿಂದ ಬೇರೊಬ್ಬರ ಘನತೆಗೆ, ಸಮಾಜಕ್ಕೆ, ರಾಷ್ಟ್ರಕ್ಕೆ ಕೇಡಾಗುವ ಸಂಗತಿಯಾಗಬಾರದು. ಅಭಿವ್ಯಕ್ತಿ ಮತ್ತು ಅದರ ಮಿತಿ ಎರಡೂ ಅರಿವಾಗಿ ಅದರಂತೆ ನಾವು ನಡೆದಾಗಲೇ ಸ್ವಾತಂತ್ರ್ಯ ನಿಜವಾಗಿಯೂ ಸಾಕಾರವಾಗುವುದು. ಮಿತಿಯಿಲ್ಲದ ಸ್ವಾತಂತ್ರ್ಯವನ್ನು ಕಡಿವಾಣವಿಲ್ಲದ ಹುಚ್ಚು ಕುದುರೆಗೆ ಸಮ. ಆದರೆ ಆ ಮಿತಿ ಪೂರ್ವಗ್ರಹ ಅಥವಾ ಗೊಂದಲಗಳಿಲ್ಲದ ನಿಷ್ಪಕ್ಷಪಾತ, ನ್ಯಾಯ ಸಮ್ಮತವಾಗಿರಬೇಕು. 

ಸಂವಿಧಾನದ ಮೊದಲ ತಿದ್ದುಪಡಿ ಕಾಯ್ದೆ:

1951ರಲ್ಲಿಅಂದಿನ ಹಂಗಾಮಿ ಸರ್ಕಾರ ಸಂವಿಧಾನಕ್ಕೆ ಮೊದಲ ತಿದ್ದುಪಡಿಯನ್ನು ಮಾಡಿತು. ಈ ತಿದ್ದುಪಡಿ ಕಾಯ್ದೆಯು ಮೂರು ಮುಖ್ಯ ಬದಲಾವಣೆಗಳನ್ನು ತಂದಿತು, ಮೊದಲನೆಯದೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕಡಿವಾಣ ಹಾಕಲು ಸರಕಾರಗಳಿಗೆ ‘ಕಾನೂನು ಸುವ್ಯವಸ್ಥೆ’ ಮತ್ತು ‘ವಿದೇಶಗಳೊಂದಿಗೆ ಸ್ನೇಹ ಸೌಹಾರ್ದತೆ’ ಎಂಬ ಇನ್ನೆರಡು ಹೊಸ ಹತಾರಗಳನ್ನು ನೀಡಿದ್ದು. ಎರಡನೇಯದೆಂದರೆ ಜಮೀನ್ದಾರಿ ಪದ್ಧತಿಯನ್ನು ನಿಷೇಧಿಸುವ ಕಾನೂನುಗಳನ್ನು ೯ನೇ ಪರಿಶಿಷ್ಟದಲ್ಲಿ ಸೇರಿಸಿದ್ದು ಮತ್ತು ಮೂರನೆಯದು ಸಮಾಜದಲ್ಲಿ ತುಳಿತಕ್ಕೊಳಗಾದವರಿಗೆ ವಿಶೇಷ ಸವಲತ್ತುಗಳನ್ನು ಕಲ್ಪಿಸಲು ಅವಕಾಶ ನೀಡಿದ್ದು. ಅದರಲ್ಲಿ ಸಂವಿಧಾನದ 19ನೇ ವಿಧಿಗೆ ತಿದ್ದುಪಡಿ ಮಾಡಿದರ ಹಿಂದಿನ ಮುಖ್ಯ ಉದ್ದೇಶ ಅಭಿವ್ಯಕ್ತಿ ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕೆ ಎಳೆಯಬಹುದಾದ ಗೆರೆಯನ್ನು ಬಲಗೊಳಿಸುವುದರ ಮೂಲಕ ಸರ್ಕಾರ ವಿರೋಧಿ ಮತ್ತು ಹಿಂಸಾತ್ಮಕ ಧೋರಣೆಯನ್ನು ಹತ್ತಿಕ್ಕುವುದಾಗಿತ್ತು. 

ಮೊದಲ ತಿದ್ದುಪಡಿಯ ಹಿನ್ನೆಲೆ:

1950ರಲ್ಲಿ ಅಂದಿನ ಪ್ರಧಾನಮಂತ್ರಿಗಳಾಗಿದ್ದ ನೆಹರೂರವರು ಸರ್ದಾರ್ ಪಟೇಲರಿಗೆ ದೇಶದಲ್ಲಿ ಉಂಟಾಗುತ್ತಿರುವ ವಿದ್ರೋಹತೆ ಮತ್ತು ಸಾಂವಿಧಾನಿಕ ಅರಾಜಕತೆಯನ್ನು ಸರಿಪಡಿಸುವುದಕ್ಕಾಗಿ ಸಲಹೆ ಕೋರಿ ಪತ್ರ ಬರೆದಿದ್ದರು. ಹಾಗೆಯೇ ಅಂದಿನ ಕಾನೂನು ಮಂತ್ರಿಗಳು ಮತ್ತು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ|| ಅಂಬೇಡ್ಕರ್ ರಿಗೂ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಿದ್ದುಪಡಿ ಮಾಡುವುದರ ಮೂಲಕ ಸ್ಪಷ್ಟವಾದ ಮಿತಿಯನ್ನು ಹಾಕಬೇಕೆಂದು ನೆಹರೂರವರು ದೀರ್ಘವಾದ ಪತ್ರ ಬರೆದಿದ್ದರು. ಅಷ್ಟೇ ಅಲ್ಲದೆ, ದೇಶದ ಹಲವು ಮಹತ್ವದ ತೀರ್ಪುಗಳಲ್ಲಿ ನ್ಯಾಯಾಲಯಗಳು, ಸರಕಾರದ ನಡೆಗಳಿಗೆ ವಿರುದ್ಧವಾಗಿ ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಎತ್ತಿಹಿಡಿದಿದ್ದವು. ಆ ತೀರ್ಪುಗಳೇ ತಿದ್ದುಪಡಿಗೆ ಪ್ರಚೋದನೆ ನೀಡಿದವು ಎಂದರೆ ತಪ್ಪಾಗಲಾರದೇನೋ.

ಅಂದಿನ ನೆಹರೂ ಸರಕಾರ ಮತ್ತು ರಾಜ್ಯ ಸರ್ಕಾರಗಳು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾಗ ಅದನ್ನು ಪ್ರಶ್ನಿಸಿ ನ್ಯಾಯಾಲಯದ ಕದ ತಟ್ಟಿದ್ದು- ಒಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಪತ್ರಿಕೆಯೆಂದೆ ಬಿಂಬಿತವಾದ “ಆರ್ಗನೈಸರ್” ಎಂಬ ಆಂಗ್ಲ ಪತ್ರಿಕೆ ಇನ್ನೊಬ್ಬರು ಎಡಪಂಥೀಯ ಪತ್ರಕರ್ತ, ಕಮ್ಯುನಿಸ್ಟ್ ನಾಯಕ ರೊಮೇಶ್ ಥಾಪರ್. ಇವೆರಡೂ ಪ್ರಕರಣಗಳು ಅಂದು ದೇಶದಲ್ಲೇ ಸಂಚಲನವನ್ನು ಸೃಷ್ಟಿಸಿದ್ದವು. 

ಬ್ರಿಜ್ ಭೂಷಣ್ ಮತ್ತು ಮತ್ತೊಬ್ಬ ವಿ. ದೆಹಲಿ ರಾಜ್ಯ :- 1949ರ ಪೂರ್ವ ಪಂಜಾಬ್ ಸಾರ್ವಜನಿಕ ಭದ್ರತಾ ಕಾಯ್ದೆಯ ಸೆಕ್ಷನ್ 7(1) (C) ( ದೆಹಲಿಯು ಅದರ ವ್ಯಾಪ್ತಿಗೆ ಸೇರಿತ್ತು) ಯ ಅನ್ವಯ “ಆರ್ಗನೈಸರ್” ಆಂಗ್ಲ ಪತ್ರಿಕೆಯ ಪ್ರಕಾಶಕರಾಗಿದ್ದ ಬ್ರಿಜ್ ಭೂಷಣ್ ಮತ್ತು ಸಂಪಾದಕರಾಗಿದ್ದ ಕೆ. ಆರ್. ಹಲಕರ್ಣಿಯವರಿಗೆ ಮುಖ್ಯ ಆಯುಕ್ತರು ಪತ್ರಿಕೆಯ ಪ್ರಸಾರಕ್ಕೆ ತಡೆಯೊಡ್ಡಿ ನೋಟೀಸು ಜಾರಿಮಾಡಿದ್ದರು ಮತ್ತು ಅದರ ಪ್ರಕಟಣೆಯು ಸರ್ಕಾರದ ಪರಿಶೀಲನೆಗೆ ಒಳಪಟ್ಟಿತ್ತು. ನೆಹರೂ- ಲಿಯಾಕತ್ ಒಪ್ಪಂದವನ್ನು ಖಂಡಿಸಿ ಅಂದಿನ ಜನಸಂಘದ ಮುಖಂಡರಾಗಿದ್ದ ಡಾ|| ಶ್ಯಾಮಪ್ರಸಾದ್ ಮುಖರ್ಜಿಯವರ ಹೇಳಿಕೆ ಮತ್ತು ಅಖಂಡ ಭಾರತದ ಅನಿವಾರ್ಯತೆಯ ಕುರಿತು “ಆರ್ಗನೈಸರ್” ಪ್ರಕಟಿಸಿತ್ತು. ಅದು ಹಿಂಸಾತ್ಮಕತೆಯಿಂದ ಕೂಡಿದೆ ಎಂದು ಸರಕಾರ ಪತ್ರಿಕೆಗೆ ತಡೆಯೊಡ್ಡಲು ಪ್ರಯತಿಸಿದಾಗ “ಆರ್ಗನೈಸರ್”ನ ಪ್ರಕಾಶಕರು ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಸರ್ವೋಚ್ಚ ನ್ಯಾಯಾಲಯದ 6  ಜನ ನ್ಯಾಯಾಧೀಶರ ಪೀಠದಲ್ಲಿ 5 ಜನ ನ್ಯಾಯಾಧೀಶರು ದೆಹಲಿ ಸರ್ಕಾರ ತಂದಿದ್ದ ಕಾನೂನನ್ನು ಅಸಿಂಧು ಮತ್ತು ಅಸಂವಿಧಾನಿಕ ಎಂದು ಘೋಷಿಸಿತು. 

ರೊಮೇಶ್ ಥಾಪರ್ ವಿ. ಮದ್ರಾಸ್ ರಾಜ್ಯ :- 50ರ ದಶಕ ಅದು, ಕಮ್ಯುನಿಸ್ಟ್ ವಿಚಾರಧಾರೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ. ಅಂದಿನ ಪ್ರಧಾನಿಗಳಾಗಿದ್ದ ನೆಹರೂರವರ ನೀತಿಗಳು ಅದರಲ್ಲೂ ವಿಶೇಷವಾಗಿ ಅವರ ವಿದೇಶಾಂಗ ನೀತಿಗಳನ್ನು ಖಂಡಿಸಿ “ಕ್ರಾಸ್ ರೋಡ್ಸ್” ಎಂಬ ಆಂಗ್ಲ ಪತ್ರಿಕೆಯು ಲೇಖನಗಳನ್ನು ಪ್ರಕಟಿಸಿತು. ಹಿರಿಯ ಕಮ್ಯುನಿಸ್ಟ್ ನಾಯಕ ರೊಮೇಶ್ ಥಾಪರ್ ಅದರ ಪ್ರಕಾಶಕರು ಮತ್ತು ಸಂಪಾದಕರಾಗಿದ್ದರು. ಆಗ 1949ರಲ್ಲಿ ಮದ್ರಾಸ್ ಸರ್ಕಾರ ಜಾರಿಗೆ ತಂದಿದ್ದ ಮದ್ರಾಸ್ ಸಾರ್ವಜನಿಕ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಯ್ದೆ ಯ  9(1-A) ಯ ಅನ್ವಯ ಸರ್ಕಾರ ಪತ್ರಿಕೆಯ ಪ್ರಸರಣದ ಮೇಲೆ ನಿರ್ಬಂಧ ಹೇರಿತು. ಇದನ್ನು ಪ್ರಶ್ನಿಸಿ ರೊಮೇಶ್ ಥಾಪರ್ ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಈ ಪ್ರಕರಣದಲ್ಲೂ ಸರ್ವೋಚ್ಚ ನ್ಯಾಯಾಲಯ ಮದ್ರಾಸ್ ಸರ್ಕಾರ ತಂದ ಕಾನೂನು ಸಂವಿಧಾನದ ಉದ್ದೇಶಕ್ಕೆ ಮಾರಕವಾಗಿದೆ ಎಂದು ಹೇಳಿ ಅರ್ಜಿದಾರನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಿತು. 

ಈ ಪ್ರಕರಣಗಳಲ್ಲಿ “ದೇಶದ್ರೋಹ”, ” ಸಾರ್ವಜನಿಕ ಸುರಕ್ಷತೆ ” , ” ಸಾರ್ವಜನಿಕ ಭದ್ರತೆ ” , “ಕಾನೂನು ಸುವ್ಯವಸ್ಥೆ” ಹೀಗೆ ಹಲವಾರು ಪದಗಳ ಬಗ್ಗೆ ವಿವರವಾದ ಚರ್ಚೆಗಳಾಯಿತು. ನ್ಯಾಯಮೂರ್ತಿ ಪತಂಜಲಿ ಶಾಸ್ತ್ರೀಗಳು ರಮೇಶ್ ಥಾಪರ್ ತೀರ್ಪಲ್ಲಿ ಹೇಳಿದ್ದು ಇಂದಿಗೂ ಪ್ರಸ್ತುತ: 

“Freedom of speech and of the Press lay at the foundation of all democratic organisations, for without free political discussion no public education, so essential for the proper functioning of the process of popular  Government, is possible “. 

ಈ ಪ್ರಕರಣಗಳ ತೀರ್ಪಿನಿಂದ ತನ್ನ ಅಧಿಕಾರ ಚಲಾಯಿಸಲು ಅನುಚ್ಛೇದ 19 ಕ್ಕೆ ಮಾಡಬೇಕಾದ ಬದಲಾವಣೆಗಳನ್ನು ಸರಕಾರ ಕಂಡುಕೊಂಡಿತು ಎಂದೇ ಹೇಳಬೇಕು. ಹಂಗಾಮಿ ಸರಕಾರ ತಂದ ತಿದ್ದುಪಡಿಯ ಪ್ರಕ್ರಿಯೆಯ ಸಂವಿಧಾನಿಕತೆಯ ಕುರಿತು ಇಂದಿಗೂ ಚರ್ಚೆ ನಡೆಯುತ್ತಿದೆ ಎಂದರೆ ತಪ್ಪಲ್ಲ.

ವಿವೇಕದ ಬೆಳಕಿನಲ್ಲಿ ಅಭಿವ್ಯಕ್ತಿಯ ಅನಾವರಣ:

ರಾಮಕೃಷ್ಣ ಮಿಷನ್ನಿನ ಹಿರಿಯ ಯತಿಗಳಾಗಿದ್ದ ಪರಮ ಪೂಜ್ಯ ಸ್ವಾಮಿ ರಂಗನಾಥನಂದರು ಇಂಗ್ಲೆಂಡ್ ನಲ್ಲಿ ಭಗವದ್ಗೀತೆಯ ಮೇಲೆ ಉಪನ್ಯಾಸ ನೀಡುತ್ತಿದ್ದರು. ಆಗ ಅಲ್ಲಿ ಆತ್ಮ ಸಂಯಮ ಯೋಗದ ಕುರಿತು ವಿವರಿಸುತ್ತಿದ್ದರು. ಅಲ್ಲಿದ್ದ ಒಬ್ಬ ಸಭಿಕ ಕಾರ್ಯಕ್ರಮದ ಕೊನೆಯಲ್ಲಿ ಎದ್ದು ನಿಂತು ಪ್ರಶ್ನೆ ಕೇಳಿದ ” ಇಡೀ ನಮ್ಮ ದೇಶ ಮತ್ತು ಕಾನೂನು ವ್ಯವಸ್ಥೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತದೆ. ಆದರೆ ನೀವು ಇಲ್ಲಿ ಆತ್ಮ ಸಂಯಮದ ಕುರಿತು ಮಾತನಾಡುತ್ತಿದ್ದೀರಿ.ಎಲ್ಲೋ ಒಂದು ಕಡೆ ಇವೆರಡೂ ವಿರೋಧಾಭಾಸದ ಸಂಗತಿಗಳು ಎಂದು ನಿಮಗೆ ಅನಿಸುವುದಿಲ್ಲವೇ? ” ಆಗ ಸ್ವಾಮೀಜಿ ಉತ್ತರಿಸಿದರು, ” ಇದು ನಮಗೆ ವಿರೋಧಭಾಸವಾಗಿ ಅನಿಸಬಹುದು. ಆದರೆ ಅವೆರಡು ಒಂದಕ್ಕೊಂದು ಪೂರಕವಾಗಿವೆ. ಆತ್ಮ ಸಂಯಮದಿಂದಲೇ ಅಭಿವ್ಯಕ್ತಿಯು ಪ್ರಕಾಶಿಸುತ್ತದೆ. ಓರ್ವ ಶ್ರೇಷ್ಠ ಸಂಗೀತಕಾರನ ಸಂಗೀತವನ್ನು ನಾವು ಆನಂದದಿಂದ ಅನುಭವಿಸುತ್ತೇವೆ. ಆತನ ಉತ್ತಮವಾದ ಸಂಗೀತ ಅಭಿವ್ಯಕ್ತಿಯ ಶ್ರೇಷ್ಠ ಉದಾಹರಣೆ, ಹಾಗೆಯೇ ಆತನು ಯಾವ ರಾಗ- ತಾಳ- ಭಾವಗಳ ಮಿತಿಯಲ್ಲಿ ಅದನ್ನು ಪರಿಪಕ್ವಗೊಳಿಸಿದ್ದನೋ ಅದು ನಮಗೆಲ್ಲ ತಿಳಿಯಬೇಕಾದ ವಿವೇಕ- ಅದೇ ಆತ್ಮ ಸಂಯಮ. ” 

ಸ್ವಾತಂತ್ರ್ಯಗಳಿಗೆ ಸಂವಿಧಾನದಲ್ಲಿ ಹಾಕಿದ ಕಟ್ಟಳೆಗಳು ರಾಗ – ತಾಳದ ಮಿತಿಗಳಾಗಲಿ ಮತ್ತು ನಿಯಮಗಳ ಹೆಸರಲ್ಲಿ ಹಾಡಲು ಬಾರದ ಕಟ್ಟುಪಾಡುಗಳಾಗದಿರಲಿ ಎಂಬ ಆಶಯ ನಮ್ಮದಾಗಲಿ.

ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನವರಾದ ಸಾಗರ ಮುಧೋಳ ಅವರು ಬಿಬಿಎ ಪದವೀಧರರು. ಪ್ರಸ್ತುತ ಅವರು ಕಲಬುರಗಿಯ ಎಸ್. ಎಸ್. ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ವಿದ್ಯಾರ್ಥಿ.


Spread the love