ಲೇಖನಗಳು

ಗ್ರಾಹಕ ರಕ್ಷಣಾ ಕಾಯಿದೆ -2019 : ಒಂದು ಪಕ್ಷಿನೋಟ


ಗ್ರಾಹಕರ ಶೋಷಣೆ ನಿನ್ನೆ ಮೊನ್ನೆಯದಲ್ಲ. ‘ವ್ಯಾಪಾರಂ ದ್ರೋಹ ಚಿಂತನಂ’ ಎಂಬ ಗಾದೆಯೇ ಇದೆಯೆಂದರೆ, ಎಷ್ಟು ಹಳೆಯದಿರಬಹುದು ಗ್ರಾಹಕರ ಮೇಲಿನ ಶೋಷಣೆ ಎಂದು ಊಹಿಸಿಕೊಳ್ಳಬಹುದು. ಯಾಕೆಂದರೆ ಬಹುತೇಕ ಎಲ್ಲಾ ವ್ಯಾಪಾರಸ್ಥರ ಕಣ್ಣೂ ಗ್ರಾಹಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಯೋಜನೆಗಿಂತ ತಮ್ಮ ಲಾಭದ ಕಡೆಗೇ. ವಿಪರ್ಯಾಸವೆಂದರೆ ಪ್ರತಿಯೊಬ್ಬ ವ್ಯಾಪಾರಿ ಗ್ರಾಹಕನೂ ಆಗಿರುತ್ತಾನೆ. ಆದರೂ ಕಳಪೆ ಗುಣಮಟ್ಟದ, ಬಳಕೆಯ ಅವಧಿ ಮುಗಿದಿರುವ, ಇರುವ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಸರಕುಗಳನ್ನು ಒದಗಿಸುವ ಸಾಗಿಸುವ ರೂಢಿಗಳು ಇವತ್ತಿಗೂ ಹೊಸ ಹೊಸ ರೂಪ ತಾಳಿ ಬರುತ್ತಿವೆ. ಸೇವೆಗಳನ್ನು ಒದಗಿಸುವಾಗಲೂ ಹಲವು ರೀತಿಯ ಮೋಸಗಳಾಗುತ್ತವೆ. ಇವೆಲ್ಲಕ್ಕೂ ಕಡಿವಾಣ ಹಾಕುವ ಆಶಯವನ್ನಿಟ್ಟುಕೊಂಡು ಗ್ರಾಹಕರ ಕಾನೂನುಗಳನ್ನು ಜಾರಿಗೆ ತರಲಾಗಿವೆ. ಈಗ ಸದ್ಯಕ್ಕೆ ಭಾರತದಲ್ಲಿ ಅನ್ವಯಾವಾಗುವಂತಹ ಕಾಯ್ದೆಯೇ ಈ ಗ್ರಾಹಕ ರಕ್ಷಣಾ ಕಾಯಿದೆ -2019. ಈ ಬರಹದಲ್ಲಿ ಕಾಯಿದೆ ಹೇಗೆ ರೂಪ ತಳೆಯಿತು, ಏನು ಇವುಗಳು ಹೇಳುವುದು ಮುಂತಾದ ವಿಚಾರಗಳ ಬಗ್ಗೆ ವಿವರಿಸಿದೆ.

ಈ ಕಾನೂನು ಕೇವಲ ಇತ್ತೀಚಿನದಲ್ಲ. 1986 ರಲ್ಲಿ ಗ್ರಾಹಕ ರಕ್ಷಣಾ ಕಾಯಿದೆಯನ್ನು ಮೊದಲ ಬಾರಿಗೆ ಜಾರಿಗೊಳಿಸಲಾಗಿತ್ತು. ಇದರ ಅಡಿಯಲ್ಲಿ ಶೋಷಣೆಗೊಳಪಟ್ಟ ಗ್ರಾಹಕನೊಬ್ಬ ಗ್ರಾಹಕ ಆಯೋಗದ ಎದುರು ದಾವೆಯನ್ನು ಹೂಡಬಹುದಾಗಿತ್ತು. ಆದರೆ ಆಯೋಗದ ಹಣದ ವ್ಯಾಪ್ತಿಯು ಜಿಲ್ಲಾ ಹಾಗೂ ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗದಲ್ಲಿ ಈಗಿನ ಕಾನೂನಿಗೆ ಹೋಲಿಸಿದರೆ ಕಡಿಮೆ ಇತ್ತು. ಜಿಲ್ಲಾ ಆಯೋಗ 20 ಲಕ್ಷಕ್ಕೆ ಮೀರದ ಸರಕಿನ ಮೊತ್ತವನ್ನು ಒಳಗೊಂಡಂತಹ ದಾವೆಗಳನ್ನು ಪರಿಹರಿಸಬಹುದಿತ್ತು ಹಾಗೂ ರಾಜ್ಯ ಆಯೋಗ 20 ಲಕ್ಷದಿಂದ 1 ಕೋಟಿ ಸರಕಿನ /ಸೇವೆಯ ಮೊತ್ತವುಳ್ಳ ದಾವೆಗಳನ್ನು ಪರಿಹರಿಸಬಹುದಿತ್ತು. ರಾಷ್ಟ್ರೀಯ ಮಟ್ಟದಲ್ಲಿ 1 ಕೋಟಿ ಮೇಲ್ಪಟ್ಟ ಮೊತ್ತವುಳ್ಳ ದಾವೆಗಳನ್ನು ಪರಿಹರಿಸಬಹುದಿತ್ತು. ಸತತ 30 ದಶಕಗಳ ಕಾಲ ಈ ಕಾನೂನು ಜಾರಿಯಲ್ಲಿತ್ತು. ಆದರೂ ಈ ಕಾಯಿದೆಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ಆದ ಕಾರಣ 2019 ರಲ್ಲಿ ಈ ಕಾಯಿದೆಯನ್ನು ಸಂಪೂರ್ಣವಾಗಿ ವಜಾಗೊಳಿಸಿ ಹೊಸ ಕಾಯಿದೆಯನ್ನು ಹೊಸ ಅಂಶಗಳೊಂದಿಗೆ ಜಾರಿಗೊಳಿಸಲಾಯಿತು.

2019 ರ ಕಾಯಿದೆಯ ಪಯಣ 2010 ನೇ ಇಸವಿಯಿಂದಲೇ ಆರಂಭವಾಗುತ್ತದೆ. ಅಂದಿನ ಸರ್ಕಾರ 2010 ರಲ್ಲಿಯೇ ಒಂದು ಕರಡನ್ನು ಸಿದ್ಧಪಡಿಸಿ ಅದರ ಬಗ್ಗೆ ವಿಚಾರ ವಿನಿಮಯವನ್ನು ಹಮ್ಮಿಕೊಂಡಿತ್ತು. ಜೊತೆಗೆ ಕಟ್ಸ್ ಇಂಟರ್ನ್ಯಾಷನಲ್ (CUTS International) ಎಂಬ ಸಂಸ್ಥೆಯ ವತಿಯಿಂದ ಗ್ರಾಹಕ ರಕ್ಷಣಾ ಕಾಯಿದೆ – 1986 ರ ಉಪಯೋಗ ಎಷ್ಟರ ಮಟ್ಟಿಗೆ ಆಗಿದೆ ಎಂದು ಸಮೀಕ್ಷೆಯನ್ನು 2012 ರಲ್ಲಿ ನಡೆಸಿತ್ತು. ಇದರ ಪ್ರಕಾರ ಕೇವಲ ಶೇಕಡಾ 2 ಹಾಗೂ 3 ರಷ್ಟು ಜನಸಂಖ್ಯೆ ಗ್ರಾಹಕ ಶೋಷಣೆಯ ವಿರುದ್ಧ ಧ್ವನಿಯೆತ್ತಿ ಆಯೋಗಕ್ಕೆ ದೂರು ದಾಖಲಿಸುತ್ತಾರೆ, ಉಳಿದ ಬಹುಪಾಲು ಜನಸಂಖ್ಯೆಗೆ ಈ ಕಾನೂನಿನ ಹಾಗೂ ಅವರಿಗೆ ಲಭ್ಯವಿರುವ ಹಕ್ಕುಗಳ ಬಗ್ಗೆ ಅರಿವೇ ಇಲ್ಲ. ಇದನ್ನರಿತ ಸರ್ಕಾರ ಇನ್ನೂ ಬಲಿಷ್ಠ ಕಾನೂನನ್ನು ತರಬೇಕೆಂದು ನಿರ್ಧರಿಸಿತು. ಅದರಂತೆ 2015 ರಲ್ಲಿ ಮಸೂದೆಯು ಸಿದ್ಧಗೊಂಡಿತ್ತು. ಅದನ್ನು ಸ್ಥಾಯಿ ಸಮಿತಿ (Standing Council) ಗೆ ಆಗಸ್ಟ್ 26, 2015 ರಂದು ವರ್ಗಾಯಿಸಲಾಗಿತ್ತು. ಈ ಸಮಿತಿಯು ಒಂದು ವರ್ಷದ ನಂತರ ವರದಿಯನ್ನು ಸಲ್ಲಿಸಿತ್ತು. ದುರಾದೃಷ್ಟವಶಾತ್ ಮಾಸೂದೆಯನ್ನು ಹಿಂಪಡೆಯಲಾಗಿತ್ತು, ಹಾಗಾಗಿ ಆ ವರ್ಷ ಈ ಮಸೂದೆ ಕಾನೂನಿನ ರೂಪ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.

ಈ ಕಾನೂನಿನ ಇತಿಹಾಸದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಮತ್ತೊಂದು ಘಟನೆ ಎಂದರೆ ಸ್ಟೇಟ್ ಆಫ್ ಉತ್ತರ ಪ್ರದೇಶ ವಿ. ಆಲ್ ಇಂಡಿಯಾ ಯು ಪಿ ಕನ್ಸುಮರ್ ರ್ಪ್ರೊಟೆಕ್ಷನ್ ಬಾರ್ ಅಸೋಸಿಯೇಷನ್ ಪ್ರಕರಣ. ಈ ಪ್ರಕರಣದಲ್ಲಿ ಗ್ರಾಹಕ ವಿವಾದ ಪರಿಹಾರ ಆಯೋಗದ ಕಾರ್ಯಕ್ಷಮತೆಯ ಬಗ್ಗೆ ವಿಚಾರಣೆ ನಡೆಸುವ ಸಲುವಾಗಿ ನ್ಯಾ. ಅರಿಜಿತ್ ಪಶಾಯತ್ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿ ದೇಶದಲ್ಲಿನ ಬಹುತೇಕ ಎಲ್ಲಾ ಆಯೋಗಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನೆಲ್ಲ ಪರಿಶೀಲಿಸಿ ಸರ್ವೋಚ್ಛ ನ್ಯಾಯಾಲಯಕ್ಕೆ ಒಂದು ವರದಿಯನ್ನು ಸಲ್ಲಿಸಿತ್ತು. ಸಮಿತಿ ಬಹುತೇಕ ಆಯೋಗಗಳಲ್ಲಿ ಒಳ್ಳೆಯ ಕಟ್ಟಡಗಳಿಲ್ಲ ಹಾಗೂ ಆಯೋಗದ ಅಧ್ಯಕ್ಷರಿಗೆ ಮತ್ತು ಉಳಿದ ಸದಸ್ಯರುಗಳಿಗೆ ಸರಿಯಾದ ಸಮಯದಲ್ಲಿ ಸಂಬಳ ದೊರೆಯುತ್ತಿಲ್ಲ, ಸರಿಯಾದ ರೀತಿಯಲ್ಲಿ ಹುದ್ದೆಗಳನ್ನು ಭರ್ತಿ ಮಾಡದ ಕಾರಣ ದೊಡ್ಡ ಪ್ರಮಾಣದಲ್ಲಿ ಕೇಸುಗಳು ಬಾಕಿಯಿವೆ ಎಂದು ವರದಿ ಮಾಡಿತು. ಇದನ್ನು ಮನಗಂಡ ಸರ್ವೋಚ್ಛ ನ್ಯಾಯಾಲಯ ಈ ಸಮಸ್ಯೆ ಪರಿಹಾರಕ್ಕಾಗಿ ಅಗತ್ಯ ಮಾರ್ಗ ಸೂಚಿಗಳನ್ನು ನೀಡಿತ್ತು. ಈ ಮಾರ್ಗಸೂಚಿಗಳು 2019 ರ ಕಾನೂನಿನಲ್ಲಿ ಅಡಕವಾಗಿದೆ. ನಂತರ 2015 ರ ಮಸೂದೆ ಮತ್ತೆ ಹೊಸ ಅಂಶಗಳೊಂದಿಗೆ 2018 ರಲ್ಲಿ ಸಂಸತ್ತಿನ ಮುಂದೆ ಹಾಜರಾಗಿತ್ತು. ಆ ಸಮಯದಲ್ಲಿ ಚುನಾವಣೆ ಇದ್ದ ಕಾರಣದಿಂದ ಮಸೂದೆಯೂ ಚ್ಯುತಿಯಾಯಿತು. ನಂತರ 2019 ರಲ್ಲಿ ಕಾನೂನು ಜಾರಿಗೆ ಬಂತು ಹಾಗೂ ಜುಲೈ 24, 2020 ರಂದು ಸಂಪೂರ್ಣ ಕಾಯಿದೆ ಜಾರಿಗೊಂಡಿತು.

ಈ 2019 ರ ಕಾಯಿದೆಯು 1986 ರ ಮುಂದುವರೆದ ಭಾಗವಾಗಿದ್ದು, 1986 ರ ಕಾಯಿದೆಯ ಬಹುತೇಕ ಎಲ್ಲಾ ಕಲo ಗಳೊಂದಿಗೆ ಹಲವಾರು ಹೊಸ ಅಂಶಗಳನ್ನು ಹೊಂದಿದೆ. 1986 ರ ಕಾಯಿದೆಯ ಕೆಲ ಕಲಂಗಳನ್ನು ಬದಲಾಯಿಸಲಾಗಿದೆ. 2019 ರ ಕಾಯಿದೆ 8 ಅಧ್ಯಾಯಗಳನ್ನು ಹೊಂದಿದ್ದು ಹೊಸದಾಗಿ 4 ಅಧ್ಯಾಯಗಳನ್ನು ಒಳಗೊಂಡಿದೆ. ಹೊಸ ಅಧ್ಯಾಯಗಳೆಂದರೆ ಅಧ್ಯಾಯ 3- ಕೇಂದ್ರ ಗ್ರಾಹಕ ರಕ್ಷಣಾ ಪ್ರಧಿಕಾರ, ಅಧ್ಯಾಯ 5- ಮಧ್ಯಸ್ಥಿಕೆ, ಅಧ್ಯಾಯ 6- ಉತ್ಪನ್ನ ಹೊಣೆಗಾರಿಕೆ ಹಾಗೂ ಅಧ್ಯಾಯ 7- ಅಪರಾಧಗಳು ಮತ್ತು ದಂಡಗಳು. ಅಪರಾಧಗಳು ಮತ್ತು ದಂಡಗಳ 2019 ರ ಕಾನೂನಿನಲ್ಲಿ ಹೊಸ ರೂಪ ಪಡೆದುಕೊಂಡಿದೆ. 1986 ನೇ ಕಾಯಿದೆಯಲ್ಲಿ 31 ಕಲಂ ಗಳಿದ್ದರೆ 2019 ನೇ ಕಾಯಿದೆಯಲ್ಲಿ 107 ಕಲಂ ಗಳಿವೆ. ಈ ಕಾನೂನಿನ ಮಹತ್ತರ ಅಂಶವೆಂದರೆ ಇದು ಆನ್ಲೈನ್ ವ್ಯವಹಾರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದರ ಪರಿಣಾಮವಾಗಿ ಯಾವ ವ್ಯಕ್ತಿ ಆನ್ಲೈನ್ ನಲ್ಲಿ ಯಾವುದೇ ವಸ್ತು ಖರೀದಿಸಿದರೂ ಆ ವ್ಯಕ್ತಿ ಈ ಕಾಯಿದೆಯಡಿ ಗ್ರಾಹಕ ಎಂದು ಗುರುತಿಸಲ್ಪಡುತ್ತಾನೆ. ಇದರಿಂದ ಈ ಕಾಯಿದೆಯ ವ್ಯಾಪ್ತಿ ಹೆಚ್ಚಿದೆ. ಈ ಕಾಯಿದೆಯ ಮತ್ತೊಂದು ವಿಶೇಷತೆ ಎಂದರೆ ಗ್ರಾಹಕ ಆಯೋಗದ ಹಣದ ವ್ಯಾಪ್ತಿಯಲ್ಲಿ ಮಾಡಿದಂತಹ ಬದಲಾವಣೆ. 2019 ರ ಮೂಲ ಕಾಯಿದೆಯ ಪ್ರಕಾರ ಜಿಲ್ಲಾ ಆಯೋಗದ ಹಣದ ವ್ಯಾಪ್ತಿ 1 ಕೋಟಿ ಮೊತ್ತದ ಸರಕು ಹಾಗೂ ಸೇವೆಗಳ ಬಗೆಗಿನ ದಾವೆಗಳು ಹಾಗೂ ರಾಜ್ಯ ಆಯೋಗದ ಹಣದ ವ್ಯಾಪ್ತಿಯು 1 ಕೋಟಿಯಿಂದ 10 ಕೋಟಿಯ ವರೆಗಿನ ದಾವೆಗಳು ಆಗಿದ್ದವು. ಇನ್ನೂ 10 ಕೋಟಿ ರೂಪಾಯಿಗಳ ಮೇಲ್ಪಟ್ಟ ಮೊತ್ತವುಳ್ಳ ದಾವೆಗಳು ರಾಷ್ಟ್ರೀಯ ಗ್ರಾಹಕ ಆಯೋಗಕ್ಕೆ ಸೇರಲ್ಪಡುತ್ತಿದ್ದವು. ಈ ರೀತಿಯ ವ್ಯವಸ್ಥೆಯಿಂದ ಜಿಲ್ಲಾ ಗ್ರಾಹಕ ಆಯೋಗಕ್ಕೆ ಹೆಚ್ಚಿನ ಒತ್ತಡ ಉಂಟಾಗಬಹುದೆಂದು ಡಿಸೆಂಬರ್ 30, 2021 ರಂದು ಹೊಸ ತಿದ್ದುಪಡಿಯನ್ನು ಮಾಡಿ ಮೂರೂ ಆಯೋಗದ ಹಣದ ವ್ಯಾಪ್ತಿಯನ್ನು ಸರ್ಕಾರ ಕಡಿಮೆ ಮಾಡಿದೆ. ಅದರಂತೆ ಜಿಲ್ಲಾ ಆಯೋಗದ ವ್ಯಾಪ್ತಿ 50 ಲಕ್ಷ ಮೀರದಂತೆ, ರಾಜ್ಯ ಆಯೋಗದ ವ್ಯಾಪ್ತಿ 50 ಲಕ್ಷದಿಂದ 2 ಕೋಟಿ ರೂಪಾಯಿ ಮೀರದಂತೆ ಮತ್ತು ರಾಷ್ಟ್ರೀಯ ಆಯೋಗದ ವ್ಯಾಪ್ತಿಯನ್ನು 2 ಕೋಟಿ ರೂಪಾಯಿ ಮೇಲ್ಪಟ್ಟು ಎಂದು ನಿಶ್ಚಯಿಸಲಾಗಿದೆ.

ಈ ಕಾನೂನು ರಾಷ್ಟ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಿದೆ. ಈ ಪ್ರಾಧಿಕಾರವು ದಾರಿ ತಪ್ಪಿಸುವ ಹಾಗೂ ಮೋಸದ ಜಾಹೀರಾತು ಕಂಡುಬಂದಲ್ಲಿ ಅದರ ವಿರುದ್ಧ ತಾನೇ ಸ್ವತಃ ದಾವೆಯನ್ನು (suo motto) ಕೈಗೆತ್ತಿಕೊಂಡು ವಿಚಾರಣೆ ನಡೆಸಬಹುದು. ಅನ್ಯಾಯದ ವ್ಯಾಪಾರ ಅಭ್ಯಾಸ (unfair trade practice) ಹಾಗೂ ಅನುಮೋದಕರ ಹೊಣೆಗಾರಿಕೆ (endorsers liability) ಸಹ ಈ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುತ್ತದೆ. ಈ ಪ್ರಾಧಿಕಾರವು ಮೋಸದ ಜಾಹೀರಾತು ಅಥವಾ ವ್ಯಾಪಾರವನ್ನು ನಿಲ್ಲಿಸುವಂತೆ ಆದೇಶಿಸಬಹುದು ಇಲ್ಲವೇ ಅಪಾಯಕಾರಿ ಸರಕು ಅಥವಾ ವಸ್ತುಗಳು ಮಾರಾಟಕ್ಕೆ ಒಳಗಾಗಿದ್ದರೆ ಅಂತಹ ವಸ್ತುಗಳ ಮರಾಟವನ್ನು ತಡೆಹಿಡಿಯಬಹುದು. ಹಣದ ಮರುಪಾವತ್ತಿಗೂ ಸಹ ಆದೇಶಿಸುವ ಹಕ್ಕು ಪ್ರಾಧಿಕಾರಕ್ಕಿದೆ. ಈ ಪ್ರಾಧಿಕಾರಕ್ಕೆ 10 ಲಕ್ಷ ರೂಪಾಯಿಯಿಂದ ಬರೋಬರಿ 50 ಲಕ್ಷ ರೂಪಾಯಿ ವರೆಗೆ ದಂಡ ವಿಧಿಸುವ ಶಕ್ತಿ ಇದೆ. ಈ ಪ್ರಾಧಿಕಾರದ ಆದೇಶದಿಂದ ನೊಂದವರು ರಾಷ್ಟ್ರೀಯ ಗ್ರಾಹಕ ಆಯೋಗಕ್ಕೆ 30 ದಿನದ ಒಳಗಾಗಿ ಮೇಲ್ಮನವಿಯನ್ನು ಸಲ್ಲಿಸಬಹುದು.

ಈ ಕಾನೂನಿನ ಅಡಿಯಲ್ಲಿ ಮಧ್ಯಸ್ಥಿಕೆಗೆ ಹೆಚ್ಚಿನ ಒಟ್ಟು ನೀಡಲಾಗಿದೆ. ಮಧ್ಯಸ್ಥಿಕೆ ಒಂದು ಪರ್ಯಾಯ ವಿವಾದ ಪರಿಹಾರವಾಗಿದ್ದು ನ್ಯಾಯಾಲಯದಲ್ಲಿನ ಕಟ್ಟು ಪಾಡುಗಳಿಂದ ಮುಕ್ತವಾಗಿರುತ್ತದೆ. ಇದೊಂದು ಗ್ರಾಹಕ ಸ್ನೇಹಿ ವ್ಯವಸ್ಥೆಯಾಗಿದ್ದು 2019 ರ ಕಾಯಿದೆಯ ಗುರಿ ಹಾಗೂ ಆಶಯಗಳಿಗೆ ಅನುಗುಣವಾಗಿದೆ. ಈ ಕಾಯಿದೆಯ ಪ್ರಕಾರ ಪ್ರತಿಯೊಂದು ಗ್ರಾಹಕ ಆಯೋಗದಲ್ಲಿ ಒಂದು ಮಧ್ಯಸ್ಥಿಕೆ ಕಿರು ಕೊಠಡಿ ಇರಬೇಕು. ಈ ವ್ಯವಸ್ಥೆಯಲ್ಲಿ 5 ಲಕ್ಷ ರೂಪಾಯಿಗಳವರೆಗಿನ ನ್ಯಾಯಾಲಯದ ಶುಲ್ಕವನ್ನು ತೆಗೆದುಕೊಳ್ಳಲಾಗುವುದಿಲ್ಲ. ಕೇವಲ ಮಧ್ಯವರ್ತಿಯ ಭತ್ಯೆಯನ್ನು ಗ್ರಾಹಕರು ತೆರಬೇಕಾಗುತ್ತದೆ. ಈ ಕಾನೂನಿನ ಅಡಿಯಲ್ಲಿ ಸರಕುಗಳ ತಯಾರಕರು, ಮಾರಾಟಗಾರರು ಹಾಗೂ ಸೇವೆಗಳನ್ನು ಒದಗಿಸುವವರ ಎಲ್ಲಾ ಪ್ರತ್ಯೇಕ ಹಕ್ಕು ಮತ್ತು ಹೊಣೆಗಾರಿಕೆಯನ್ನು ಉತ್ಪಾದಕರ ಹೊಣೆಗಾರಿಕೆ ಅಧ್ಯಾಯದಲ್ಲಿ ನೀಡಲಾಗಿದೆ. ಈ ಕಾನೂನಿನ ಅಡಿಯಲ್ಲಿ ಪ್ರಾದೇಶಿಕ ನ್ಯಾಯಾವ್ಯಾಪ್ತಿಯು ಬದಲಾವಣೆಯಾಗಿದ್ದು ಈಗ ಗ್ರಾಹಕರು ಯಾವುದೇ ಪ್ರದೇಶದಿಂದ ಆನ್ಲೈನ್ ಮೂಲಕ ದಾವೆಯನ್ನು ಹೂಡಬಹುದು. ಅಥವಾ ಗ್ರಾಹಕರ ನಿವಾಸದ ಪ್ರದೇಶದಿಂದ ಯಾವುದೇ ಪ್ರದೇಶದಲ್ಲಿ ವಾಸವಿರುವ ತಯಾರಕರು ಅಥವಾ ಮಾರಾಟಗಾರರ ವಿರುದ್ಧ ದಾವೆಯನ್ನು ಹೂಡಬಹುದು. 1986ರ ಕಾಯಿದೆಯಲ್ಲಿ ಶಿಕ್ಷೆ ಹಾಗೂ ದಂಡದ ವ್ಯಾಪ್ತಿಯು ಕೇವಲ 3 ವರ್ಷ ಹಾಗೂ 2 ಸಾವಿರ ರೂಪಾಯಿ ಇಂದ 10 ಸಾವಿರ ರೂಪಾಯಿ ತನಕ ಇತ್ತು. ಆದರೆ, 2019 ರ ಕಾಯಿದೆಯಲ್ಲಿ ದಂಡದ ವ್ಯಾಪ್ತಿಯು ಹೆಚ್ಚಲ್ಪಟ್ಟಿದ್ದು 25 ಸಾವಿರ ರೂಪಾಯಿ ಇಂದ 1 ಲಕ್ಷ ರೂಪಾಯಿ ಯ ವರೆಗೆ ದಂಡ ವಿಧಿಸಬಹುದಾಗಿದೆ. ಯಾವುದೇ ಗ್ರಹಕನಿಗೆ ಯಾವುದೇ ಸರಕು ಅಥವಾ ಸೇವೆಯ ಬಳಕೆಯಿಂದ ಗಾಯ ಮತ್ತಿತರ ಹಾನಿಯುಂಟಾದಲ್ಲಿ 1-7 ವರ್ಷ ಜೈಲು ಶಿಕ್ಷೆ ಹಾಗೂ 3-5 ಲಕ್ಷ ರೂಪಾಯಿಗಳ ತನಕ ದಂಡ ವಿಧಿಸಬಹುದು. ಯಾವುದೇ ಗ್ರಾಹಕನ ಜೀವಹಾನಿಯಾದಲ್ಲಿ ಅದಕ್ಕೆ ಕಾರಣರಾದವರಿಗೆ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ರೂಪಾಯಿ ದಂಡ ವಿಧಿಸುವ ಶಕ್ತಿ ಆಯೋಗಕ್ಕೆ ಇದೆ. ಇವೆಲ್ಲವನ್ನೂ ಗಮನಿಸಿದಾಗ ಈ ಕಾಯಿದೆಗೆ ಈಗ ಸ್ವಲ್ಪ ಬಲ ಬಂದಿದೆ ಎನ್ನಬಹುದು.

ಕಾಯಿದೆ ಎಷ್ಟೇ ಬಲಿಷ್ಠವಾಗಿದ್ದರೂ ಸರಿಯಾಗಿ ಜಾರಿಗೆ ಬರದೇ ಇದ್ದರೆ ಕಾಯಿದೆಯ ಪ್ರಯೋಜನ ಉಂಟಾಗುವುದಿಲ್ಲ. ಆದರೆ ಕಾಯ್ದೆ ಜಾರಿಗೆ ಬರಲು ಕೆಲ ಸಮಸ್ಯೆಗಳಿವೆ. ಉದಾಹರಣೆಗೆ ನಮ್ಮ ದೇಶದ ಹಳ್ಳಿ ಪ್ರದೇಶದ ಗ್ರಾಹಕ ಆಯೋಗಗಳಲ್ಲಿ ಮೂಲ ಸೌಕರ್ಯದ ಕೊರತೆ ಇವೆ. ಈ ಸಮಸ್ಯೆ ಪರಿಹಾರವಾಗಬೇಕೆಂದರೆ ಕೇಂದ್ರ ಸರ್ಕಾರದಿಂದ ಮಂಜೂರಾಗುವ ಹಣಕಾಸನ್ನು ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಈ ಕಾನೂನಿನ ಬಗ್ಗೆ ಜನಸಾಮಾನ್ಯರಿಗೆ ಅಗತ್ಯವಾದ ಶಿಕ್ಷಣ ದೊರೆಯಲೇಬೇಕಾಗಿದೆ. ಈ ನಿಟ್ಟಿನಲ್ಲಿ ಹಲವಾರು ಸರ್ಕಾರೇತರ ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕಾಗಿದೆ. ದೇಶದ ಪ್ರತಿಷ್ಟಿತ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ, ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಸಚಿವಾಲಯದಿಂದ ಸ್ಥಾಪಿಸಲ್ಪಟ್ಟ, ಪ್ರೊ. ಡಾ. ಅಶೋಕ ಆರ್. ಪಾಟೀಲ್ ರವರ ಮುಂದಾಳತ್ವದಲ್ಲಿ ಗ್ರಾಹಕ ಕಾನೂನು ಮತ್ತು ಅಭ್ಯಾಸ ಕೇಂದ್ರ ಗ್ರಾಹಕರ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಗಾರಗಳು ಹಾಗೂ ಮತ್ತು ಸಭೆಗಳನ್ನು ನಡೆಸುತ್ತಿವೆ. ಈ ರೀತಿಯ ಕೆಲಸಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕಿವೆ. ಅರಿವು ಹೆಚ್ಚಿಸುವ ಪ್ರಯತ್ನಗಳಿಂದ ಮಾತ್ರ ಒಂದು ಕಾನೂನಿನ ಸರಿಯಾದ ಬಳಕೆ ಆಗುತ್ತದೆ. ಇನ್ನು ಗ್ರಾಹಕ ವಿವಾದ ಪರಿಹಾರ ಆಯೋಗಗಳಲ್ಲಿ ಸದಸ್ಯರುಗಳ ನೇಮಕಾತಿ ಮತ್ತು ಮೂಲಸೌಕರ್ಯದ ಕೊರತೆಗಳನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಒಂದು ಪ್ರಕರಣ ಪ್ರಸ್ತುತ ವಿಚಾರಣೆಯಲ್ಲಿದೆ. ಕಾನೂನಿನ ಅಡಿಯಲ್ಲಿ ಇರುವ ಕೆಲ ವಿಚಾರಗಳನ್ನು ವಿವರವಾಗಿ ಮುಂದಿನ ಬರಹಗಳಲ್ಲಿ ನೋಡೋಣ. ನ್ಯಾಯಾಂಗ ಶಾಸಕಾಂಗವಲ್ಲದೆ, ಗ್ರಾಹಕರೂ ತಮ್ಮ ಹಕ್ಕುಗಳನ್ನು ಅರಿತು ಎಚ್ಚೆತ್ತುಕೊಂಡರೆ ಮಾತ್ರ ವ್ಯವಸ್ಥೆ ಇನ್ನೂ ಬಲಶಾಲಿಯಾಗಲು ಸಾಧ್ಯ.

ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.

Spread the love