ಲೇಖನಗಳು

ಶ್ರೀಗಳ ವಿರುದ್ಧ ಅತ್ಯಾಚಾರ ಪ್ರಕರಣದ ಹೈಕೋರ್ಟ್ ತೀರ್ಪು: ತಾಂತ್ರಿಕತೆಯ ಸೆರಗಿನಲ್ಲಿ ಹಿಂದೆ ಸರಿದ ನ್ಯಾಯ

ಬಹು ಪ್ರಭಾವಿತ ಮಠಾಧಿಕಾರಿ ಶ್ರೀಗಳೊಬ್ಬರ ಹೆಸರಿರುವ ವಿಚಿತ್ರವಾದ ಅತ್ಯಾಚಾರದ ಪ್ರಕರಣವೊಂದು ಕರ್ನಾಟಕದಲ್ಲಿ ಅತೀವ ಗೊಂದಲದ ಅಂತ್ಯ ಕಂಡಿದೆ. ಡಿಸೆಂಬರ್‌ 29, 2021 ರಂದು ಕರ್ನಾಟಕ ಉಚ್ಛ ನ್ಯಾಯಾಲಯವು ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಮೇಲೆ ಅವರ ಮಠಕ್ಕಾಗಿ ಹಾಡುತ್ತಿದ್ದ ಮಹಿಳೆಯೊಬ್ಬರು ಮಾಡಿದ್ದ ಲೈಂಗಿಕ ಕಿರುಕುಳ – ಅತ್ಯಾಚಾರದ ಆರೋಪಗಳಿಂದ ಕೆಳಗಿನ ಕೋರ್ಟು ನೀಡಿದ ಖುಲಾಸೆಯ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಸಮಸ್ಯೆ ಏನೆಂದರೆ, ಉಚ್ಛನ್ಯಾಯಲಯದ ಆದೇಶದಲ್ಲಿ, ದಂಡ ಪ್ರಕ್ರಿಯಾ ಸಂಹಿತೆ (CrPC)ಯ ಸೆಕ್ಷನ್ 173 ಕ್ಕೆ ತೀರಾ ತಾಂತ್ರಿಕವಾದ ಅರ್ಥ ನೀಡಿದ್ದು, ದೂರುದಾರಳ ಹಕ್ಕುಗಳು ನುಚ್ಚು ನೂರಾಗಿವೆ.

2014 ರಲ್ಲಿ, ದೂರುದಾರಳ ಮಗಳು, ಬನಶಂಕರಿ ಪೋಲಿಸ್ ಠಾಣೆಯಲ್ಲಿ, ಶ್ರೀಗಳು ತಮ್ಮ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆಂದು ಆರೋಪಿಸಿ FIR-ಪ್ರಥಮ ಮಾಹಿತಿ ವರದಿಯನ್ನ ಸಲ್ಲಿಸಿದ್ದರು. ಕರ್ನಾಟಕದ ಪ್ರತಿಷ್ಠಿತ ವಿಚಾರಣಾ ಸಂಸ್ಥೆಯಾದಂತಹ Criminal Investigation Department(CID)ಗೆ ಮೊಕದ್ದಮೆಯನ್ನ ವರ್ಗಾಯಿಸಲಾಗಿತ್ತು. ದೂರುದಾರಳು ಶ್ರೀಗಳ ಮಠದಲ್ಲಿ ಹಾಡುತ್ತಿದ್ದಾಗ, ಶ್ರೀಗಳನ್ನು ಎದುರು ಹಾಕಿಕೊಂಡರೆ ದೇವರ ಕೋಪಕ್ಕೆ ಗುರಿಯಾಗಬೇಕಾದೀತೆಂಬ ಅಂಜಿಕೆ ಹುಟ್ಟಿಸಿ ಹಲವು ಸಂದರ್ಭಗಳಲ್ಲಿ ಅವರ ಮೇಲೆ ಅತ್ಯಾಚಾರವೆಸಗಿದ್ದರು ಎಂಬ ಸಂಗತಿಯನ್ನು ಕಾಲಕ್ರಮೇಣ ಬಹಿರಂಗಪಡಿಸಿದ್ದರು. ದೇಶದ್ಯಾಂತ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರವಾಸದಲ್ಲಿದ್ದಾಗಲೂ, ಶ್ರೀಗಳು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರೆಂದು ದೂರುದಾರಳು ಆರೋಪಿಸಿದ್ದರು. ವೈದ್ಯಕೀಯ ವರದಿಗಳು ಮತ್ತು ಸಾಕ್ಷಿಗಳ ಹೇಳಿಕೆಯನ್ನ ದಾಖಲಿಸಿದ ನಂತರ, CIDಯು IPCಯ ಪ್ರಕರಣ 376(2)(f)[i], 376(2)(n)[ii]– ಮತ್ತು 508[iii]ಗಳನ್ನು ಒಳಗೊಂಡಂತೆ ದೊಡ್ಡ ದೋಷಾರೋಪಣೆಯ ಪಟ್ಟಿಯನ್ನೇ ಸಲ್ಲಿಸಿತ್ತು.

ಮೊಕದ್ದಮೆಯ ವಿಚಾರಣೆಗಾಗಿ ಸತ್ರ ನ್ಯಾಯಾಲಯಕ್ಕೆ(Sessions Court) ಒಪ್ಪಿಸಿದಾಗ, ಶ್ರೀಗಳು ಪ್ರಕರಣದಿಂದ ಖುಲಾಸೆಯಾಗಲು ಕೋರಿದ್ದರು[iv]. 2016 ರಲ್ಲಿ, ಶ್ರೀಗಳ ಅರ್ಜಿಯನ್ನ ಮನ್ನಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶ್ರೀಗಳನ್ನ ದೋಷಮುಕ್ತರೆಂದು ಹೇಳಿತು. ಉಚ್ಛ ನ್ಯಾಯಾಲಯದ ಎದುರು ರಿವಿಸನ್ ಅರ್ಜಿ ಸಲ್ಲಿಸುವುದರ ಮೂಲಕ, ಸರಕಾರ ಮತ್ತು ದೂರುದಾರಳು ಸದರಿ ವಿಚಾರಣೆಯ ಖುಲಾಸೆಯನ್ನು ಪ್ರಶ್ನಿಸಿದರು. ವಿಚಾರಣೆಯ ಖುಲಾಸೆಯು ಕಾನೂನುಬಾಹಿರವಾದದ್ದೆಂದೂ, ನ್ಯಾಯಾಲಯವು ಮೇಲ್ನೋಟಕ್ಕೆ ಆರೋಪಿಯ ವಿರುದ್ಧವಾದ ವಾದದಲ್ಲಿ ಹುರುಳಿದೆಯೇ ಎಂದು ಮಾತ್ರ ನೋಡುವುದನ್ನು ಬಿಟ್ಟು, ಚಿಕ್ಕ ವಿಚಾರಣೆಯನ್ನೇ ನಡೆಸಿ, ಆರೋಪಿಯನ್ನು ಖುಲಾಸೆಗೊಳಿಸುವ ಅಧಿಕಾರದ ವ್ಯಾಪ್ತಿಯನ್ನು ಕಡೆಗಣಿಸಿದೆ ಎಂದು ಅವರು ವಾದಿಸಿದರು. ನ್ಯಾಯಾಲಯವು ವಿಚಾರಣೆ ಶುರುವಾಗುವ ಮೊದಲೇ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ, ಹೇಳಿಕೆಗಳ ಸತ್ಯಾಸತ್ಯತೆಯನ್ನು ಅಳೆದು, ಮೊಕದ್ದಮೆಯ ಗುಣಾವಗುಣಗಳ ಮೇಲೆ ಅಭಿಪ್ರಾಯ ವ್ಯಕ್ತಪಡಿಸಿತ್ತು ಎಂಬುದೂ ಅರ್ಜಿಯ ವಾದವಾಗಿತ್ತು.

ಕ್ಷುಲ್ಲಕ ಆಕ್ಷೇಪಗಳು:

ಆರೋಪಿ ಪರ ವಕೀಲರು, ಕೇವಲ ಸರಕಾರಕ್ಕೆ ಮಾತ್ರ ರಿವಿಸನ್ ಅರ್ಜಿ ಹಾಕಲು ಅಧಿಕಾರವಿದ್ದು, CrPCಯ ಅಡಿಯಲ್ಲಿ ದೂರುದಾರಳಿಗೆ ಖುಲಾಸೆಯನ್ನು ಪ್ರಶ್ನಿಸುವ ಹಕ್ಕಿಲ್ಲ ಎಂದು ವಾದಿಸಿತು. ಅಲ್ಲದೆ, CrPCಯ ಸೆಕ್ಷನ್ 2(s) ಅಡಿಯಲ್ಲಿ CIDಯನ್ನು ಪೋಲಿಸ್ ಠಾಣೆ ಎಂದು ಗುರುತಿಸಿಲ್ಲ ಎಂದು ತೀವ್ರವಾಗಿ ವಾದಿಸಿದರು. CrPCಯ ಸೆಕ್ಷನ್173ರ ಅಡಿಯಲ್ಲಿ, ಠಾಣೆಯ ಉಸ್ತುವಾರಿ ಹೊಂದಿರುವ ಅಧಿಕಾರಿಯು ಮ್ಯಾಜೀಸ್ಟ್ರೆಟ್ ಅವರಿಗೆ ಪೋಲಿಸ್ ವರದಿಯನ್ನ ರವಾನಿಸಬೇಕಾಗಿರುವದರಿಂದ, CID ಸಲ್ಲಿಸಿದ ವರದಿ ಮಾನ್ಯವಲ್ಲ ಎಂದೂ ವಾದಿಸಲಾಯಿತು.

ವಿಚಿತ್ರವೆಂದರೆ, ಆ ವಾದವನ್ನೊಪ್ಪಿಕೊಂಡ ಉಚ್ಚ ನ್ಯಾಯಾಲಯ, ಸಂಪೂರ್ಣ ನಡಾವಳಿಗಳು ದೋಷಪೂರಿತವೆಂದು ಹೇಳಿತು. CIDಯು ಒಂದು ʼಪೋಲಿಸ್ ಠಾಣೆʼ ಎಂದು ಗುರುತಿಸಲ್ಪಡದಿದ್ದರೂ,  ಸರ್ಕಾರವು ಒಂದು ಅಧಿಸೂಚನೆ ಹೊರಡಿಸುವ ಮೂಲಕ, CIDಯ ಸಬ್ ಇನಸ್ಪೆಕ್ಟರ್ ಒಬ್ಬರು ಮೊಕದ್ದಮೆಯ ವಿಚಾರಣೆ ನಡೆಸಿದಾಗ, ಅವರನ್ನು ಆ ವ್ಯಾಪ್ತಿಯ ಪೋಲಿಸ್ ಠಾಣೆಯ ಉಸ್ತುವಾರಿ ಹೊಂದಿದ  ಅಧಿಕಾರಿಯೆಂದು ಲೆಕ್ಕಿಸಬೇಕಾಗಿದೆ ಎಂದು ಹೇಳಿದೆ. ಸದರಿ ಅಧಿಸೂಚನೆಯು 1970ರಲ್ಲಿಯೇ ಹೊರಡಿಸಿದ್ದಾಗಿದ್ದು, ಅವತ್ತಿನಿಂದ CIDಯು ಹಲವು ಹೆಸರಾಂತ ಮತ್ತು ಪ್ರಭಾವಿ ಮೊಕದ್ದಮೆಗಳನ್ನು ತನಿಖೆ ಮಾಡಿದೆ ಮತ್ತು ಉಚ್ಛ ನ್ಯಾಯಾಲಯವು, ಆ ತನಿಖೆಗಳಲ್ಲಿನ ಅಪರಾಧ ನಿರ್ಣಯಗಳನ್ನ ಎತ್ತಿ ಹಿಡಿದಿದೆ.

ಈ ಅಧಿಸೂಚನೆಯ ಕುರಿತಾಗಿ ಉಚ್ಛ ನ್ಯಾಯಾಲಯಕ್ಕೆ ಸರಕಾರ ತಿಳಿಸಿದರೂ ನ್ಯಾಯಾಲಯವು, ಸರಕಾರ CIDಯನ್ನು ಪೋಲಿಸ್ ಠಾಣೆ ಎಂದು ಸ್ಪಷ್ಟವಾಗಿ ಘೋಷಿಸದ ಕಾರಣ ಸದರಿ ಅಧಿಸೂಚನೆಯು ಯಾವ ಸಹಾಯಕ್ಕೂ ಬಾರದು ಎಂದು ತಳ್ಳಿಹಾಕಿತು. CrPCಯ ಸೆಕ್ಷನ್ 173ರ ಪ್ರಕಾರ ತನಿಖೆ ಮುಗಿದ ನಂತರ, ಪೋಲಿಸ್ ವರದಿಯು ಠಾಣೆಯ ಉಸ್ತುವಾರಿಯ ಅಧಿಕಾರಿಯಿಂದ ಮೇಜಿಸ್ಟ್ರೇಟ್ ಅವರಿಗೆ ರವಾನೆಯಾಗಬೇಕಂದಷ್ಟೆ ಹೇಳುತ್ತದೆಯಾದ್ದರಿಂದ ಉಚ್ಛ ನ್ಯಾಯಾಲಯದ ಈ ಅಭಿಪ್ರಾಯಗಳು ತಪ್ಪೆನ್ನಬಹುದು. ಯಾವಾಗ CIDಯ ತನಿಖಾಧಿಕಾರಿಯನ್ನೇ ಠಾಣೆಯ ಉಸ್ತುವಾರಿ ಹೊಂದಿದ ಅಧಿಕಾರಿ ಎಂದು ಲೆಕ್ಕಿಸಲಾಗುತ್ತದೆಯೋ, ಆ ಅಧಿಸೂಚನೆಯನ್ನ ಕಡೆಗಣಿಸಿ, ಸಂಪೂರ್ಣ CIDಯನ್ನೇ ಪೋಲಿಸ್ ಠಾಣೆಯೆಂದು ಲೆಕ್ಕಿಸಬೇಕಿತ್ತು ಎನ್ನುವುದು  ನಿಷ್ಠುರವೇ ಸರಿ.

ಒಂದು ವೇಳೆ ಪೋಲಿಸ್ ವರದಿಯೇ ಕ್ರಮಬದ್ಧ ಅಲ್ಲ ಎಂದಾದರೂ, ಹೇಗೆ ಸಂಪೂರ್ಣ ಪ್ರಕ್ರಿಯೆ ದೋಷಪೂರಿತವಾಗುತ್ತದೆ ಎಂಬುದು ಪ್ರಶ್ನೆ. CrPCಯ ಸೆಕ್ಷನ್ 461 ರ ಪ್ರಕಾರ ಕ್ರಮಬದ್ಧವಲ್ಲದ ತನಿಖೆಯನ್ನ, ಮಾನ್ಯವಲ್ಲದ ಪ್ರಕ್ರಿಯೆಗಳ ಪಟ್ಟಿಯಲ್ಲಿ ಗುರುತಿಸಿಲ್ಲ. ಅಲ್ಲದೆ, CrPCಯ ಸೆಕ್ಷನ್ 465 ರ ಪ್ರಕಾರ ತಪುಗಳು, ಲೋಪಗಳು ಇದ್ದರೂ, ಅನ್ಯಾಯವಾಗಿದೆ ಎನ್ನಲಾಗದಿದ್ದರೆ ಸಂಪೂರ್ಣವಾದ ಪ್ರಕ್ರಿಯೆಯನ್ನು ಅಮಾನ್ಯಗೊಳಿಸಲಿಕ್ಕಾಗುವುದಿಲ್ಲ ಎಂದೇ ಸ್ಪಷ್ಟವಾಗಿ ಹೇಳಿದೆ. CIDಯ ತನಿಖೆಯು ಯಾವುದೇ ರೀತಿಯಲ್ಲಿ ನ್ಯಾಯದ ವೈಫಲ್ಯಕ್ಕೆ ದಾರಿ ಮಾಡಿತ್ತು ಎನ್ನಲಾಗತ್ತಿರಲಿಲ್ಲ ಎಂಬುದು ಸ್ಪಷ್ಟ ಸಂಗತಿ. CrPCಯ ಸೆಕ್ಷನ್ 482 ರ ಅಡಿಯಲ್ಲಿ ಉಚ್ಛ ನ್ಯಾಯಾಲಯಕ್ಕೆ ನ್ಯಾಯವನ್ನು ಕಾಪಾಡುವ ಸಲುವಾಗಿ ಯಾವುದೇ ರೀತಿಯ ಆದೇಶ ಹೊರಡಿಸಲು CrPC ಯ ಯಾವ ಸೆಕ್ಷನ್ನುಗಳೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಮರೆಯಬಾರದು. ಹಾಗಿರುವಾಗ, ಉಚ್ಛ ನ್ಯಾಯಾಲಯಕ್ಕೆ CIDಯ ಪೋಲಿಸ್ ವರದಿಯಲ್ಲಿ ಕ್ರಮಬಾಹಿರತೆ ಕಂಡಿದ್ದರೂ, ಅದನ್ನು ಮನ್ನಿಸಿ, ವಿಚಾರಣೆ ಶುರು ಮಾಡುವುದಕ್ಕೆ ಅನುಮತಿ ಕೊಡಬಹುದಿತ್ತು.

ಪೂರ್ವ ನಿದರ್ಶನಗಳ ಕಡೆಗಣನೆ:

ಉಚ್ಛ ನ್ಯಾಯಾಲಯವು ಎಚ್. ಎನ್. ರಿಶ್ಬುದ್ ಮತ್ತು ಆರ್. ಎ. ಎಚ್. ಸಿಗುರನ್ ತೀರ್ಪುಗಳಲ್ಲಿ ಸರ್ವೋಚ್ಛ ನ್ಯಾಯಾಲಯ ‘ಕೆಲವು ಕ್ರಮಬಾಹಿರತೆಗಳು ಇಡೀ ತನಿಖೆ/ವಿಚಾರಣೆಯನ್ನೇ ನಿರರ್ಥಗೊಳಿಸುವುದಿಲ್ಲ’ ಎಂದು ಹೇಳಿದ್ದನ್ನು ಗಮನಿಸಲೇ ಇಲ್ಲ. ಹಾಗೆಯೇ, CIDಗೆ ವಹಿಸಿದ ಕೇಸುಗಳ ತನಿಖೆಯ ಅಧಿಕಾರ CIDಗೆ ಇರುವುದನ್ನು ಗುರುತಿಸಿದ ನರಸಿಂಹಯ್ಯ ಮತ್ತು ಇದೆಯವೇದನ್ ಎಂಬ ಕರ್ನಾಟಕ ಹೈ-ಕೋರ್ಟಿನ ತೀರ್ಪುಗಳನ್ನೂ ಲೆಕ್ಕಿಸಲಿಲ್ಲ. ಬದಲಾಗಿ, CIDಗೆ ಪೋಲಿಸ್ ವರದಿ ರವಾನಿಸುವ ಅಧಿಕಾರವಿಲ್ಲವೆಂದು ಹೊರಡಿಸಿದ ಒಬ್ಬ-ನ್ಯಾಯಾಧೀಶರ ಪೀಠದ ಒಂದು ತೀರ್ಪಿನ ಆಧಾರದ ಮೇಲೆಯೇ ಅವಲಂಬಿಸಿ ಆದೇಶ ಹೊರಡಿಸಿತು. ಆ ತೀರ್ಪೂ ಈ ಮೇಲೆ ಹೇಳಿದ ಮುಖ್ಯವಾದ ತೀರ್ಪುಗಳ ಕುರಿತಾಗಿ ಸರಿಯಾಗಿ ಚರ್ಚಿಸಿರಲಿಲ್ಲ, ಮತ್ತು ಆ ತೀರ್ಪೂ ಶ್ರೀಗಳ ಮೇಲಿನ ಆರೋಪಗಳ ಕುರಿತೇ ಆಗಿತ್ತು.

ಉಚ್ಛ ನ್ಯಾಯಾಲಯವು ಸದರಿ ತೀರ್ಪಿನಿಂದ ದೂರುದಾರಳ ಮೇಲೆ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಮೇಲೆ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ಪರಿಗಣಿಸಬೇಕಿತ್ತು. ಹತ್ತಕ್ಕಿಂತ ಹೆಚ್ಚು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು, ಈ ಕೇಸನ್ನು ನಿರ್ಣಯಿಸಲು ಹಿಂದೆ ಸರಿದಿದ್ದರಿಂದ ಕೇಸು ತೀರ್ಮಾನವಾಗಲೂ ತಡವಾಯಿತು. ಇಂತಹ ಘಟನೆಗಳ ಜೊತೆಗೆ ಕಾನೂನಿನ ನಿಷ್ಠುರ ಅನ್ವಯಿಸುವಿಕೆಯೂ ಆದರೆ, ಜನಸಾಮನ್ಯರು ನ್ಯಾಯಾಂಗ ಪ್ರಕ್ರಿಯೆಯಲ್ಲಿ ನಂಬಿಕೆಯನ್ನೇ ಕಳೆದುಕೊಳ್ಳಬಹುದು. ಅದಲ್ಲದೇ, ದೀರ್ಘ ಮತ್ತು ಪ್ರಯಾಸಕರ ಹೋರಾಟದ ನಂತರ, ಆರೋಪಿಯು ವಿಚಾರಣೆಗೂ ಒಳಪಡದೆ ಇರಬಹುದು ಎಂದಾದರೆ ಲೈಂಗಿಕ ಕಿರುಕುಳದ ಸಂತ್ರಸ್ತರು ಮುಂದೆ ಬಂದು ದೂರು ನೀಡಲೂ ಹಿಂಜರಿಯಬಹುದು.

ಶ್ರೀಗಳು ಅಪರಾಧಿ ಎಂದಲ್ಲ. ಆದರೆ, ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆಯಂತಹ ಗಂಭೀರವಾದ ಆರೋಪಗಳು ವಿಚಾರಣೆಯಾಗಬೇಕಿತ್ತು. ಒಂದು ಕ್ಷುಲ್ಲಕ ಕ್ರಮಬಾಹಿರತೆಯಿಂದಾಗಿ ಒಬ್ಬ ಆರೋಪಿಯು ವಿಚಾರಣೆಯನ್ನ ಎದುರಿಸದಯೇ ಪಾರಾಗುತ್ತಾನೆ ಎಂದರೆ ನ್ಯಾಯದ ಹಾಸ್ಯಾಸ್ಪದವೇ ಸರಿ.


[i] ಮಹಿಳೆಯ ಬಂಧು, ಪಾಲಕರು, ಗುರುಗಳು ಅಥವಾ ಆಕೆ ನಂಬಿದ ಅಥವಾ ಗೌರವಿಸುವ ಸ್ಥಾನದಲ್ಲಿದ್ದು ಅತ್ಯಾಚಾರವನ್ನು ಮಾಡುವುದು.

[ii] ಪದೇ ಪದೇ ಅದೇ ಮಹಿಳೆಯ ಮೇಲೆ ಅತ್ಯಾಚಾರ ಮಾಡುವುದು.

[iii] ದೇವರ ಅಸಂತೋಷಕ್ಕೆ ಗುರಿಯಾಗುವರೆಂದು ನಂಬಿಸಿ ಯಾವುದೇ ರೀತಿಯ ಕಾನೂನಿಗೆ ವಿರುದ್ಧವಾದ ಕೆಲಸ ಮಾಡಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು ಒಂದು ವರ್ಷದವರೆಗೆ ಜೈಲು, ದಂಡ ಅಥವಾ ಎರಡೂ ಶಿಕ್ಷೆ ವಿಧಿಸಬಹುದು.

[iv] CrPC ಯ ಸೆಕ್ಷನ್ 227 ಹೇಳುವುದೆಂದರೆ ಕೇಸಿನ ದಾಖಲೆಗಳನ್ನು, ಆರೋಪಿಯ ಮತ್ತು ಸರಕಾರದ ವಾದವನ್ನು ಕೇಳಿದ ಮೇಲೆ ಆರೋಪಿಯ ವಿರುದ್ಧ ವಿಚಾರಣೆ ನಡೆಸಲು ಯಾವುದೇ ಆಧಾರವಿಲ್ಲವೆಂದು ನ್ಯಾಯಾಧೀಶರಿಗೆ ಅನಿಸಿದರೆ, ಕಾರಣವನ್ನು ನೀಡಿ, ಆರೋಪಿಯನ್ನು ಆರೋಪಗಳಿಂದ ಖುಲಾಸೆ ಮಾಡಬಹುದು.

(ಲೇಖನವು ಮೂಲ ‘ದ ಲೀಫ್ಲೆಟ್’ ನಲ್ಲಿ 31.01.2022ರಂದು ಪ್ರಕಟವಾಗಿದ್ದು ನೇತ್ರಾ ಕೊಪ್ಪದ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.)

ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.

ರಾಹುಲ್ ಮಾಚಯ್ಯ ಅವರು ಕರ್ನಾಟಕದಲ್ಲಿ ವಕೀಲರಾಗಿದ್ದಾರೆ. ಅವರು ಕಾನೂನು ಮತ್ತು ಅಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಬೆಂಗಳೂರಿನ ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯದಿಂದ ಪಡೆದಿದ್ದು, ಲೇಖಕರೂ ಆಗಿದ್ದಾರೆ.

Spread the love