ಲೇಖನಗಳು

ಅಂತರ್ಮತೀಯ ಮದುವೆಗಳು ಮತ್ತು ಹಿಂದೂ ಉತ್ತರಾಧಿಕಾರ ಅಧಿನಿಯಮದ ಸೆಕ್ಷನ್ 26

ತನ್ನನ್ನು ತಾನು ಸೆಕ್ಯುಲರ್ (ಜಾತ್ಯಾತೀತ ಎಂಬ ಪದ ಸೂಕ್ತವಲ್ಲ ಎಂಬ ಅನಿಸಿಕೆ) ದೇಶ ಎಂದು ಸಂವಿಧಾನದಲ್ಲಿ ಹೇಳಿಕೊಳ್ಳುವ ದೇಶ ವೈಯಕ್ತಿಕ ಕಾನೂನುಗಳ ವಿಚಾರದಲ್ಲಿ ಎಷ್ಟೋ ಸಾರಿ ಕವಲುದಾರಿಯಲ್ಲಿ ನಿಲ್ಲಬೇಕಾಗುತ್ತದೆ. ವೈಯಕ್ತಿಕ ಕಾನೂನುಗಳು ಅಂದರೆ ಮದುವೆ, ಉತ್ತರಾಧಿಕಾರ, ಪಾಲಕತ್ವ ಇತ್ಯಾದಿ ವಿಷಯಗಳಲ್ಲಿ ನಮ್ಮ ಜೀವನವನ್ನು ನಿಯಂತ್ರಿಸುವ ಕಾನೂನುಗಳು. ಜೀವನದ ನಿಕಟ ಅಂಶಗಳಾಗಿರುವ ಇವು ನಮ್ಮ ಮೂಲಭೂತ ಹಕ್ಕುಗಳೊಂದಿಗೆ ಹೆಣೆದುಕೊಂಡಿವೆ. ಸಂವಿಧಾನವು ಮೂಲಭೂತ ಹಕ್ಕುಗಳನ್ನು ಕಾಪಾಡುತ್ತದೆಯಾದರೂ ಮದುವೆ ಅಥವಾ ಜೀವನಶೈಲಿಯನ್ನು ವೈಯಕ್ತಿಕ ಕಾನೂನುಗಳೂ ನಿಯಂತ್ರಿಸುತ್ತವೆ. ಆದ್ದರಿಂದ ಈ ಕಾನೂನುಗಳು ನಮ್ಮ ಆಯ್ಕೆಗಳನ್ನು ಕಟ್ಟಿ ಹಾಕುತ್ತವೆ ಮತ್ತು ಅವುಗಳ ಮೇಲೆ ಪರಿಣಾಮ ಬೀರುತ್ತವೆ ಎಂದರೆ ತಪ್ಪಾಗಲಾರದು. ಇತ್ತೀಚಿಗೆ, ನ್ಯಾಯಾಂಗದ ಹಸ್ತಕ್ಷೇಪದಿಂದ ಮತ್ತು ಶಾಸಕಾಂಗದ ಸುಧಾರಣೆಗಳ ಮೂಲಕ ವೈಯಕ್ತಿಕ ಕೇಂದ್ರಿತ ಹಕ್ಕುಗಳ ಹರವು ದೊಡ್ಡದಾಗುತ್ತಿದೆ. ಹೀಗಾಗಿ, ವೈಯಕ್ತಿಕ ಸ್ವಾತಂತ್ರ್ಯಗಳನ್ನು ಮತ ಅಥವಾ ಸಂಸ್ಕೃತಿಯ ಹೆಸರಲ್ಲಿ ಕಟ್ಟಿಹಾಕುವ ವೈಯಕ್ತಿಕ ಕಾಯ್ದೆಗಳು ಸಾಂವಿಧಾನಿಕ ತತ್ವಗಳ ಒರೆಗೆ ಒಡ್ಡಿಕೊಳ್ಳಲೇಬೇಕಾಗಿದೆ.

ಸಂವಿಧಾನವು ಸ್ವಾತಂತ್ರ್ಯ, ಸಮಾನತೆ, ಸೋದರತ್ವ ಮತ್ತು ಇತರ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರೂ, ನಮ್ಮ ಎಲ್ಲಾ ಕಾನೂನುಗಳೂ ಆ ಚಿತ್ರವನ್ನು ಬಿಂಬಿಸಬೇಕಾಗಿಲ್ಲ.  ಪ್ರಜಾಪ್ರಭುತ್ವ ಭಾರತದ ಮಣ್ಣಿನ ಮೇಲೆ ಒಂದು ಮೇಲ್ಹೊದಿಕೆ ಇದ್ದಂತೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಬಣ್ಣಿಸಿದ್ದರು, ಅಂತೆಯೇ ಸಾಂವಿಧಾನಿಕತೆ ಎಂದೂ ಹೇಳಬಹುದೇನೋ. ಜಾತಿ – ಮತಗಳು ಎಲ್ಲಾ ಸಾಂವಿಧಾನಿಕ ಮೌಲ್ಯಗಳನ್ನು ಕಡೆಗಣಿಸಿ ಜನರ ಸಾಮಾಜಿಕ-ರಾಜಕೀಯ ಜೀವನದ ಮೇಲೆ ಇನ್ನೂ ಪರಿಣಾಮ ಬೀರುತ್ತಿವೆ. ಕೆಲ ಕಾನೂನುಗಳು ಸಹ, ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ, ವ್ಯವಸ್ಥೆಯನ್ನೂ ಮತ್ತು ಅದರಿಂದ ಹುಟ್ಟುವ ಸಮಸ್ಯೆಗಳನ್ನೂ ಬಲಗೊಳಿಸುತ್ತಿವೆ. ಅಂತರ್ಜಾತಿ ಅಥವಾ ಅಂತರ್ಮತೀಯ ಮದುವೆಗಳು ಸಮಾಜದ ಬೇರೆ ಬೇರೆ ಗುಂಪುಗಳ ನಡುವೆ ಸೇತುವೆ ಆಗಬಹುದು. ಆದರೆ ಅಂತಹ ಮದುವೆಗಳಿಗೆ ಅಡೆತಡೆಗಳನ್ನು ಒಡ್ಡುವ ಹಲ ಕಾನೂನುಗಳಿವೆ. ಈ ಅಡೆತಡೆಗಳು, ಸಂವಿಧಾನದ ಆದೇಶಕ್ಕೆ ಬದ್ಧವಲ್ಲದ್ದರಿಂದ ಸಾಮಾಜಿಕ ವಿರೋಧಿ ಮಾತ್ರವಲ್ಲದೆ ಕಾನೂನುಬಾಹಿರವೂ ಆಗಿವೆ.

ಉತ್ತರಾಧಿಕಾರದ ಹಕ್ಕುಗಳನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನುಗಳು, ಜೋಡಿಗಳನ್ನು ಅಂತರ್ಮತೀಯ ಮದುವೆಗಳಿಂದ ದೂರವಿಡಲು ಪ್ರಯತ್ನಿಸುವ ಪ್ರಶ್ನಾರ್ಹ ನಿಬಂಧನೆಗಳನ್ನು ಹೊಂದಿದೆ. ಹಿಂದೂ ಉತ್ತರಾಧಿಕಾರ ಕಾಯಿದೆ, 1956 ರ ಸೆಕ್ಷನ್ 26 ಅವುಗಳಲ್ಲಿ ಒಂದು. ಅದರ ಕುರಿತು ಮಾತ್ರ ಇಂದಿನ ಲೇಖನದಲ್ಲಿ ನೋಡೋಣ. 

ಏನಿದು ಸೆಕ್ಷನ್ 26 ?

ಸೆಕ್ಷನ್ 26 ಹೇಳುವುದೆಂದರೆ ಕಾಯಿದೆಯ ಪ್ರಾರಂಭದ ಮೊದಲು ಅಥವಾ ನಂತರ, ಹಿಂದೂಗಳು ಬೇರೆ ಮತಕ್ಕೆ ಮತಾಂತರಗೊಳ್ಳುವ ಮೂಲಕ ಹಿಂದೂವಲ್ಲವಾದರೆ ಅಂತಹ ಮತಾಂತರದ ನಂತರ ಅವನಿಗೆ ಅಥವಾ ಅವಳಿಗೆ ಜನಿಸಿದ ಮಕ್ಕಳು ಮತ್ತು ಅವರ ವಂಶಸ್ಥರು ಉತ್ತರಾಧಿಕಾರಕ್ಕೆ ಅನರ್ಹರಾಗುತ್ತಾರೆ. ಆದರೆ ಪರಭಾರೆ ಮಾಡುವ ಸಂದರ್ಭದಲ್ಲಿ ಅಂತಹ ಮಕ್ಕಳು ಹಿಂದೂವಾಗಿದ್ದರೆ ಅವರಿಗೂ ಆಸ್ತಿಯಲ್ಲಿ ಪಾಲು ಸಿಗುತ್ತದೆ ಎಂದೂ ಸೆಕ್ಷನ್ ಹೇಳಿದೆ.

ಸರಳವಾದ ಮತ್ತು ಮೊದಲ ಓದಿಗೇ ತಿಳಿಯುವುದೆಂದರೆ, ಮತಾಂತರ ಹೊಂದಿದವರ ಮಕ್ಕಳಿಗೆ ಆಸ್ತಿಯಲ್ಲಿ ಪಾಲಿಲ್ಲ, ಆದರೆ ಮತಾಂತರ ಹೊಂದಿದವರಿಗಿದೆ. ವಿಚಿತ್ರವಲ್ಲವೇ? ಇನ್ನೂ ವಿಚಿತ್ರವೆಂದರೆ, ಈ ಸೆಕ್ಷನ್ನಿನ ವ್ಯಾಪ್ತಿ ಮತ್ತು ಅರ್ಥವನ್ನು ಚರ್ಚಿಸುವ ಕೆಲವೇ ಕೆಲವು ಪ್ರಕರಣಗಳು ಮಾತ್ರ ಇವೆ.

ಮತಾಂತರಗೊಂಡವರ ಬಗ್ಗೆ ಇರುವ ಕಾನೂನು ಹೇಗೆ ಎಲ್ಲಾ ಅಂತರ್ಮತೀಯ ಜೋಡಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆ ಏಳಬಹುದು. ಎಲ್ಲಾ ಅಂತರ್ಮತೀಯ ಮದುವೆಗಳಲ್ಲಿ ಮತಾಂತರದ ವಿಚಾರ ಬರದೇ ಇರಬಹುದು, ನಿಜ. ಆದರೆ, ನಮ್ಮ ಸಮಾಜದಲ್ಲಿ ಒಂದೇ ಸೂರಿನಡಿ ಸಂಪೂರ್ಣವಾಗಿ ಬೇರೆ ಬೇರೆ ದೇವರುಗಳನ್ನು ಪೂಜಿಸುವ ಸದಸ್ಯರನ್ನು ಹೊಂದಿರುವ ಕುಟುಂಬವನ್ನು ಕಲ್ಪಿಸುವುದು ಅಷ್ಟು ಸುಲಭವಲ್ಲ. ಅದರಲ್ಲಿಯೂ ಮದುವೆಯಾದ ಹೆಣ್ಣು ಗಂಡನ ದೇವರನ್ನಲ್ಲದೆ, ತನ್ನದೇ ಆದ ಬೇರೆ ದೇವರನ್ನು ಪೂಜಿಸುವುದನ್ನು ಊಹಿಸುವುದು ಇನ್ನೂ ಕಷ್ಟವೇ ಆದೀತು. ಆದ್ದರಿಂದ ಜೋಡಿಗಳು ಸಮಾಜದ ಸಲುವಾಗಿ, ಅಥವಾ ತಮ್ಮ ಸಲುವಾಗಿ ತಮ್ಮಿಷ್ಟದ ಸಂಗಾತಿಯ ಕೈ ಹಿಡಿಯಲು ಬೇರೆ ಮತಕ್ಕೆ ಮೊರೆ ಹೋಗಬಹುದು. ಹಾಗೆ ಮಾಡುವ ಹಕ್ಕುನ್ನು ಸಂವಿಧಾನ ಕಾಪಾಡಿಯೂ ಇದೆ. ಇದಕ್ಕಾಗಿಯೇ ಇತ್ತೀಚೆಗೆ ಕೆಲವು ರಾಜ್ಯಗಳು ಮತಾಂತರ ವಿರೋಧಿ ಮಸೂದೆಗಳಿಗೆ ಮಂಡಿಸಿದ ತಿದ್ದುಪಡಿಗಳಿಗೂ ಆಕ್ಷೇಪ ವ್ಯಕ್ತವಾಗಿದೆ. ಸಾಮಾಜಿಕ-ಸಾಂಸ್ಕೃತಿಕ ಕಾರಣಗಳು ಹೊಸ ದಂಪತಿಗಳನ್ನು ಮತಾಂತರದ ಆಯ್ಕೆ ಮಾಡಲು ಹೇಗೆ ಪ್ರೇರೇಪಿಸುತ್ತವೆಯೋ, ಅದೇ ಸಮಯದಲ್ಲಿ, ಕಾನೂನಿನಿಂದ ಬಲ ಹೊಂದಿದ ಸಾಮಾಜಿಕ-ಆರ್ಥಿಕ ಕಾರಣಗಳು ಅಂತಹ ಮತಾಂತರಿಗಳಿಂದ ಭೂಮಿ ಮತ್ತು ಸಂಪತ್ತನ್ನು ಉಳಿಸಲು ಪ್ರಯತ್ನಿಸುತ್ತವೆ. ಅಂತಹ ಪ್ರಯತ್ನದ ಉದಾಹರಣೆಯೇ ಸೆಕ್ಷನ್ 26.

ನ್ಯಾಯಾಲಯಗಳು ಸೆಕ್ಷನ್ 26ಅನ್ನು ವಿವರಿಸಿದಾಗಲೆಲ್ಲ, ಸೆಕ್ಷನ್ನಿನಲ್ಲಿ ಹೇಳಿರುವುದನ್ನೇ ಪುನರುಚ್ಚರಿಸುತ್ತದೆ, ಅಂದರೆ ಮತಾಂತರಗೊಂಡವರ ಮುಂದಿನ ತಲೆಮಾರನ್ನು ಚಿತ್ರದಿಂದ ಹೊರಗಿಡಲಾಗುತ್ತದೆ, ಮತಾಂತರಗೊಂಡವರನ್ನು ಹೊರಗಿಡಲು ಸಾಧ್ಯವಿಲ್ಲ ಎಂದು. ಅದರಲ್ಲಿ ತೀರಾ ಇತ್ತೀಚಿನ ತೀರ್ಪು ಬಾಂಬೆ ಉಚ್ಚ ನ್ಯಾಯಾಲಯದ್ದು, ಬಾಲ್ಚಂದ್ ಜೈರಾಮದಾಸ್ ಲಾಲ್ವಂತ್ ವಿರುದ್ಧ ನಜ್ನೀನ್ ಖಾಲಿದ್ ಖುರೇಷಿ ಕೇಸಿನಲ್ಲಿ[i]. ಅದರಲ್ಲಿ, ಹಲವಾರು ತೀರ್ಪುಗಳನ್ನು[ii] ಉಲ್ಲೇಖಿಸಿದ ನಂತರ, ಯಾವುದೇ ನಿರ್ದಿಷ್ಟ ಜೀವನಶೈಲಿ ಮತ್ತು ನಂಬಿಕೆಯನ್ನು ಅಳವಡಿಸಿಕೊಳ್ಳುವ ವ್ಯಕ್ತಿಯ ಹಕ್ಕನ್ನು ನ್ಯಾಯಾಲಯವು ಗುರುತಿಸಿತು. ನ್ಯಾಯಾಲಯ ಹೀಗೂ ಹೇಳಿತು:

“19. ಉತ್ತರಾಧಿಕಾರದ ಹಕ್ಕು ಆಯ್ಕೆಯಲ್ಲ, ಅದು ಹುಟ್ಟಿನಿಂದ ಮತ್ತು ಕೆಲವು ಸಂದರ್ಭಗಳಲ್ಲಿ ಮದುವೆಯ ಮೂಲಕ ಪಡೆದುಕೊಂಡಿದ್ದು. ನಿರ್ದಿಷ್ಟ ಮತವನ್ನು ಬಿಡುವುದು ಮತ್ತು ಮತಾಂತರಗೊಳ್ಳುವುದು ಆಯ್ಕೆ ಮತ್ತು ಹುಟ್ಟಿನಿಂದ ಬಂದಿರುವ ಸಂಬಂಧಗಳನ್ನು ಬೇರೆ ಮಾಡಲು ಅಥವಾ ಕಡಿಯಲು ಮತಾಂತರದಿಂದ ಸಾಧ್ಯವಿಲ್ಲ. ಆದ್ದರಿಂದ, ಹಿಂದೂ ಮತದಿಂದ ಮತಾಂತರಗೊಂಡವನು ಅವನ/ಅವಳ ತಂದೆಯ ಆಸ್ತಿಗೆ ಅರ್ಹನಾಗಿರುತ್ತಾನೆ.”

ಹೀಗಾಗಿ, ಪ್ರಸ್ತುತ ಕಾನೂನಿನ ಮತ್ತು ನ್ಯಾಯಾಲಯದ ನಿಲುವು ಏನೆಂದರೆ, ಮತಾಂತರಗೊಂಡವರು ತನ್ನ ಪೂರ್ವಜರ ಆಸ್ತಿಯಲ್ಲಿ ಹಕ್ಕು ಪಡೆಯಲು ಸಾಧ್ಯವಾಗುತ್ತದೆ ಆದರೆ ಅವಳ ಅಥವಾ ಅವನ ಮಕ್ಕಳಿಗೆ ಅದು ಸಾಧ್ಯವಿಲ್ಲ. ಅಲ್ಲದೆ, ಪಾಲು ಮಾಡುವ ಹೊತ್ತಿಗೆ ಮತಾಂತಾರವಾದ ಮಗನೋ ಮಗಳೋ ಸತ್ತು ಹೋಗಿದ್ದರೆ ಅವರ ಪಾಲು ಅವರ ಮಕ್ಕಳಿಗೆ ಸಿಗುವುದು ಸಾಧ್ಯವಿಲ್ಲ.

ಕಾಯಿದೆಯ ಸೆಕ್ಷನ್ 26 ಸಾಂವಿಧಾನಿಕತೆ:

  1. ಸಮಂಜಸವಾದ ಕಾರಣವಿಲ್ಲದಿರುವುದು:

ಈ ಕಾಯಿದೆಯು ಆಸ್ತಿಯನ್ನು ಒಬ್ಬ ವ್ಯಕ್ತಿಗೆ ತನ್ನ ಮುಂದಿನ ತಲೆಮಾರಿಗೆ ಕೊಡುವ ಅಥವಾ ತನ್ನ ಪೂರ್ವಜರಿಂದ ಪಡೆಯುವ ಹಕ್ಕನ್ನು ಮತಾಂತರದ ಆಧಾರದ ಮೇಲೆ ಕಟ್ಟಿ ಹಾಕುತ್ತದೆ. ಮೊದಲನೆಯದಾಗಿ, ಈ ನಿಬಂಧನೆ ತಳವೇ ಇಲ್ಲದ್ದಾಗಿದೆ. ಒಂದು ಕಾನೂನು ಯಾವುದೇ ಸರಿಯಾದ ಕಾರಣವಿಲ್ಲದಿರುವಂತದ್ದಾಗಿದ್ದರೆ, ಅದನ್ನು ಪ್ರಶ್ನೆ ಮಾಡಲು ಅದು ಒಂದು ಗಟ್ಟಿಯಾದ ವಾದವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ[iii]. ಈ ಸೆಕ್ಷನ್ ಮತಾಂತರಗೊಂಡವರ ವಂಶಸ್ಥರನ್ನು ಮಾತ್ರ ಅನರ್ಹಗೊಳಿಸುತ್ತದೆ ಆದರೆ ಮತಾಂತರಗೊಂಡವನು ತನ್ನ ಹಿಂದೂ ಸಂಬಂಧಿಕರಿಂದ ಆಸ್ತಿಯನ್ನು ಪಡೆಯಬಹುದು. ಮತಾಂತರ ಹೊಂದಿದ ವ್ಯಕ್ತಿಗೆ ಆಸ್ತಿ ಸಿಗಬಹುದಾದರೆ, ಅವನ ಅಥವಾ ಅವಳ ಮಕ್ಕಳನ್ನು ಆಸ್ತಿಯ ಹಕ್ಕಿನಿಂದ ಹೊರಗಿಡುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ, ಮತಾಂತರ ಹೊಂದಿದವರು ಮತ್ತು ಅವನ/ಳ ಮಕ್ಕಳು, ಎರಡೂ ವರ್ಗದ ವ್ಯಕ್ತಿಗಳು ಬೇರೆ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಬರುವವರು, ಅವರಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.

ಬಾಲ್ಚಂದ್ ಜೈರಾಮದಾಸ್ ಕೇಸಿನಲ್ಲಿ, ನ್ಯಾಯಾಲಯವು ಮತಾಂತರದ ಕಾರಣದಿಂದ ತನ್ನ ಪೂರ್ವಜರ ಆಸ್ತಿಯ ಮೇಲಿನ ಹಕ್ಕುಗಳನ್ನು ಬಿಟ್ಟುಕೊಡುವಂತೆ ಮತಾಂತರವಾದವನನ್ನು ಕೇಳುವಂತಿಲ್ಲ, ಮತಾಂತರ ಅವಳ ಅಥವಾ ಅವನ ಆಯ್ಕೆಯ ವಿಷಯವಾಗಿದೆ ಎಂದು ಹೇಳಿದೆ. ಹಾಗಿದ್ದರೆ ಮತಾಂತರಗೊಂಡವರ ಸಂತತಿಗೂ ಇದೇ ತರ್ಕ ಅನ್ವಯಿಸಬೇಕಲ್ಲವೇ? ಒಬ್ಬ ವ್ಯಕ್ತಿಯ ತಂದೆ ಅಥವಾ ತಾಯಿ, ಅವರ ಒಂದು ಹಕ್ಕನ್ನು ಚಲಾಯಿಸಲು ಆಯ್ಕೆ ಮಾಡಿಕೊಂಡರೆ, ಇನ್ನೊಂದನ್ನು ಮಕ್ಕಳು ಕಳೆದುಕೊಳ್ಳಬೇಕಾದ ಸ್ಥಿತಿ. ಮೂಲಭೂತ ಹಕ್ಕಲ್ಲದಿದ್ದರೂ ಆಸ್ತಿಯ ಹಕ್ಕು ಇನ್ನೂ ಸಾಂವಿಧಾನಿಕ ಹಕ್ಕು[iv].

ಸರಳವಾಗಿ ಹೇಳಬೇಕೆಂದರೆ, ಆಸ್ತಿಯ ಹಕ್ಕು ಬೇಕೆಂದರೆ ತಮ್ಮ ನಂಬಿಕೆ ಅಥವಾ ತನ್ನ ಇಷ್ಟದ ಸಂಗಾತಿಯ ಹಕ್ಕನ್ನು ಆರಿಸಿಕೊಳ್ಳುವ ಹಕ್ಕನ್ನು ಬಿಟ್ಟುಕೊಡಬೇಕು. ಇದು ಯಾವುದೋ ಹಳೆಯ ಸಿನೆಮಾ ಡೈಲಾಗ್ ಅಲ್ಲ, ನಮ್ಮ ಕಾನೂನು. ಒಬ್ಬ ವ್ಯಕ್ತಿ ಉಯಿಲು ಬರೆದಿಲ್ಲವೆಂದರೆ, ತನ್ನ ಮತಾಂತರಗೊಂಡ ಮಗಳು ಅಥವಾ ಮಗನ ವಾರಸುದಾರರಿಗೆ ಆಸ್ತಿಯನ್ನು ಕೊಡಲು ಸಿದ್ಧನಿಲ್ಲ ಎಂದು ಸರಕಾರವೇ ಒಂದು ರೀತಿಯಲ್ಲಿ ಊಹಿಸುತ್ತದೆ. ಸರಕಾರ ಈ ರೀತಿ ಊಹಿಸುವುದು ಸಂವಿಧಾನದ ತತ್ವಗಳಿಗೆ ವಿರುದ್ಧವೆಂದೇ ಹೇಳಬೇಕು.

  • ಗೌಪ್ಯತೆ ಮತ್ತು ಸ್ವಾಯತ್ತತೆಯ ಹಕ್ಕು:

ಕೆ.ಎಸ್. ಪುಟ್ಟಸ್ವಾಮಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ[v] ನ್ಯಾಯಾಲಯವು ಗೌಪ್ಯತೆಯ ಹಕ್ಕನ್ನು ‘ಕೇವಲ ತಮ್ಮಷ್ಟಕ್ಕೆ (ವ್ಯಕ್ತಿಗಳನ್ನು) ಬಿಡುವ ಹಕ್ಕಿನಿಂದ’ ವೈಯಕ್ತಿಕ ಆಯ್ಕೆಗಳ ಹಕ್ಕುಗಳಾಗಿ ಅರ್ಥೈಸುವವರೆಗೆ ನ್ಯಾಯಾಲಯಗಳು ‘ದೂರದ ಪ್ರಯಾಣ’ ಮಾಡಿವೆ ಎಂದಿದೆ. ಮದುವೆಯಾಗುವ ಹಕ್ಕು, ಸಂತಾನೋತ್ಪತ್ತಿ, ಗರ್ಭನಿರೋಧಕ, ಕೌಟುಂಬಿಕ ಸಂಬಂಧಗಳು, ಮಕ್ಕಳನ್ನು ಹೆರುವ ಹಕ್ಕು, ಶಿಕ್ಷಣ, ಡೇಟಾ ರಕ್ಷಣೆ ಇತ್ಯಾದಿಗಳನ್ನು ಖಾಸಗಿತನದ ಹಕ್ಕಿನ ವಿಶಾಲವಾದ ಕೊಡೆಯಲ್ಲಿ ಕಾಪಾಡಲಾಗಿದೆ ಎಂದು ಕರಾರುವಕ್ಕಾಗಿ ಹೇಳಿದೆ.

ಶಫಿನ್ ಜಹಾನ್ ವಿರುದ್ಧ ಅಶೋಕನ್ ಕೆ.ಎಂ. ತೀರ್ಪಿನಲ್ಲಿ[vi] ಸುಪ್ರೀಂ ಕೋರ್ಟ್ ‘ತಮ್ಮ ಇಷ್ಟದ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು’ ಸಂವಿಧಾನದ 21 ನೇ ಅನುಚ್ಛೇದದ ಅವಿಭಾಜ್ಯ ಅಂಗ ಎಂದಿದೆ. ಕೋರ್ಟ್ ಹೇಳಿದ್ದು:

“86. ಸಂವಿಧಾನವು ಮೂಲಭೂತ ಹಕ್ಕು ಎಂದು ಕಾಪಾಡುವ ಸ್ವಾತಂತ್ರ್ಯದ ತಿರುಳೆಂದರೆ ಸಂತೋಷ ಅರಸಿ, ನಿಟ್ಟಿನಲ್ಲಿ ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯ ಸಾಮರ್ಥ್ಯ. ಮತ ಮತ್ತು ನಂಬಿಕೆಯ ವಿಚಾರಗಳು, ನಂಬಬೇಕೇ ಅಥವಾ ಬೇಡವೇ ಎಂಬುದನ್ನೂ ಒಳಗೊಂಡಿರುವ ಹಕ್ಕು ಸಾಂವಿಧಾನಿಕ ಸ್ವಾತಂತ್ರ್ಯದ ತಿರುಳಾಗಿದೆ. ಸಂವಿಧಾನವು ನಂಬಿಕೆಯುಳ್ಳವರಿಗೆ ಮತ್ತು ಇಲ್ಲದವರಿಗೂ ಇರುವುದಾಗಿದೆ. ಅದು ಪ್ರತಿ ವ್ಯಕ್ತಿಯ ಜೀವನ ವಿಧಾನ ಅಥವಾ ನಂಬಿಕೆಯನ್ನು ಅನುಸರಿಸುವ ಸಾಮರ್ಥ್ಯವನ್ನು ಕಾಪಾಡುತ್ತದೆ. ಉಡುಗೆಉಣ್ಣುವ ವಿಷಯಗಳು, ಕಲ್ಪನೆಗಳುಸಿದ್ಧಾಂತಗಳು, ಪ್ರೀತಿಸಾಂಗತ್ಯದ ವಿಚಾರಗಳು ಒಬ್ಬರ ಗುರುತಿನ ಮೂಲ ಅಂಶಗಳು.”

ನ್ಯಾಯಾಲಯವು ಒಬ್ಬರ ‘ಸಂಗಾತಿಯನ್ನು ನಿರ್ಧರಿಸುವಲ್ಲಿ ಸಮಾಜಕ್ಕೆ ಯಾವುದೇ ಪಾತ್ರವಿಲ್ಲ’ ಎಂದೂ ಜೊತೆಗೇ ಅಭಿಪ್ರಾಯಪಟ್ಟಿದೆ. ಖಾಸಗಿತನದ ಹಕ್ಕನ್ನು ಸಂವಿಧಾನ ಕಾಪಾಡುತ್ತದೆ ಎಂದು ಒತ್ತಿ ಹೇಳಿದ, ಮೇಲಿನ ಎರಡೂ ತೀರ್ಪುಗಳ ಹಿನ್ನೆಲೆಯಲ್ಲಿ, ಕಾನೂನುಗಳೂ ಈ ಹಕ್ಕನ್ನು ಕಾಪಾಡುವ ರೀತಿಯಲ್ಲಿಯೇ ಇರಬೇಕಾಗುತ್ತದೆ. ಆದರೆ ಸೆಕ್ಷನ್ 26 ವ್ಯಕ್ತಿಯ ಆಸ್ತಿಯ ಹಕ್ಕುಗಳನ್ನು ಮೊಟಕುಗೊಳಿಸುವ ಮೂಲಕ ಆತನ ಅಥವಾ ಅವಳ ಮದುವೆಯಾಗುವ ಹಕ್ಕಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ.

  • ಸಾಂವಿಧಾನಿಕ ನೈತಿಕತೆ ಮತ್ತು ಸೆಕ್ಷನ್ 26:

ಸಾಂವಿಧಾನಿಕ ನೈತಿಕತೆಯ ಪರಿಕಲ್ಪನೆಯನ್ನು ಸ್ಟೇಟ್ (ಎನ್‌ಸಿಟಿ ಆಫ್ ದೆಹಲಿ) ವಿ. ಯೂನಿಯನ್ ಆಫ್ ಇಂಡಿಯಾ ಕೇಸಿನಲ್ಲಿ[vii] ಸಾಂವಿಧಾನಿಕ ತತ್ವಗಳ ಒಂದು ಗುಂಪಾಗಿ, ಮತ್ತು ಇವನ್ನು ಎಲ್ಲಾ ಸಾಂವಿಧಾನಿಕ ಅಂಗಗಳು ನಿರಂತರವಾಗಿ ಅನುಸರಿಸಬೇಕು, ಎಂದು ವಿವರಿಸಲಾಗಿದೆ. ಸಂವಿಧಾನವನ್ನು, ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ‘ವಿಚಲಿತವಾಗದಂತೆ’, ‘ದಾರಿ ತೋರುವ’ ‘ಇರಲೇಬೇಕಾದ ತಳಹದಿ’ ಎಂದು ಕೇಸಿನಲ್ಲಿ ಬಣ್ಣಿಸಲಾಗಿದೆ. ಆದ್ದರಿಂದ, ಸಂವಿಧಾನದ ಅಡಿಯಲ್ಲಿ ಬರುವ ಪ್ರತಿ ಪಾತ್ರವೂ, ಪ್ರತಿ ಕೆಲಸವೂ ‘ಸಂವಿಧಾನದ ಮೂಲ ತತ್ವ’ಗಳಿಗೆ ಬದ್ಧವಾಗಿರಬೇಕು ಎಂದು ಕೋರ್ಟ್ ಒತ್ತಿ ಹೇಳಿತು. ನವತೇಜ್ ಸಿಂಗ್ ಜೋಹರ್ ವಿ. ಯೂನಿಯನ್ ಆಫ್ ಇಂಡಿಯಾ[viii]ದಲ್ಲಿ ಗಮನಿಸಿದಂತೆ ‘ಮೂಲ ಸಾಂವಿಧಾನಿಕ ತತ್ವ’ಗಳಿಗೆ ಸೀಮಿತವಾಗದೆ, ಅವುಗಳಿಂದ ಹರಿಯುವ ಮೌಲ್ಯಗಳು ಸಾಂವಿಧಾನಿಕ ನೈತಿಕತೆಗೆ ಆಕಾರ ನೀಡುತ್ತದೆ. ಸಮಾನತೆ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮತದ ಆಯ್ಕೆಯು ಅಂತಹ ಮೂಲ ತತ್ವಗಳ ಉದಾಹರಣೆಗಳಾಗಿವೆ. ತಮ್ಮ ಮತದಲ್ಲಿಯೇ ಮದುವೆ ಮಾಡಿಕೊಳ್ಳಲು ಆಮಿಷ ಒಡ್ಡುವ, ಮತ್ತು ಬೇರೆ ಮತಕ್ಕೆ ಹೋದರೆ ಆಸ್ತಿ ಹಕ್ಕುಗಳನ್ನು ಮೊಟಕುಗೊಳಿಸುವ ಈ ಕಾನೂನು ಆ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಮತಾಂತರ ಯಾವುದೇ ರೀತಿಯಲ್ಲಿ ಒಬ್ಬರ ಹಕ್ಕುಗಳನ್ನು ಮೊಟಕುಗೊಳಿಸಿದರೆ ಮತ್ತು ಅಂತಹ ಕಟ್ಟಳೆಗಳನ್ನು ತೆಗೆದುಹಾಕದಿದ್ದರೆ, ಒಬ್ಬರ ಜೀವನವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಎನ್ನುವುದು ಕಾಗದದ ಹುಲಿಯಾಗುತ್ತದೆ.

ಆದರೆ, ಸೆಕ್ಷನ್ 26 ನ್ನು ಸಂಪೂರ್ಣವಾಗಿ ಹೊಡೆದು ಹಾಕಿದರೆ, ಈಗ ಕಾಪಾಡಲಾಗಿರುವ ಮತಾಂತರಿಗಳೂ ವಂಶವೃಕ್ಷದಿಂದ ಸಂಪೂರ್ಣವಾಗಿ ಹೊರಗಾಗುತ್ತಾರೆ. ಇದಕ್ಕೆ ಕಾರಣ ಕಾಯ್ದೆಯ ಸೆಕ್ಷನ್ ೨ ಒದಗಿಸುವ ‘ಹಿಂದೂ’ ಎಂಬ ಪದದ ವ್ಯಾಖ್ಯಾನ. ಆದ್ದರಿಂದ, ಈ ಸೆಕ್ಷನ್ನಿನಿಂದಾದ ನಷ್ಟವನ್ನು ಸರಿ ಪಡಿಸಲು ಕಾನೂನು ಮಾಡುವವರು, ಹೊಸ ನಿಬಂಧನೆಯನ್ನೇ ಸೇರಿಸಬೇಕಾಗಿ ಬರಬಹುದು. 

ಸಮಾಜ ಬೆಳೆದಂತೆ ಖಾಸಗಿತನ, ಸ್ವಾಯತ್ತತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯಗಳ ಕಲ್ಪನೆಗಳೂ ದೊಡ್ಡದಾಗುತ್ತಿವೆ. ಸಮುದಾಯದ ಸುತ್ತ ಸುತ್ತುವ ಕಲ್ಪನೆಗಳು ವೈಯಕ್ತಿಕ ಹಕ್ಕುಗಳಿಗೆ ದಾರಿ ಬಿಟ್ಟುಕೊಡುತ್ತಿವೆ. ಬಹುಮಟ್ಟಿಗೆ ಸಾಮುದಾಯಿಕವಾಗಿದ್ದ ಭಾರತ ಕೂಡ ವೈಯಕ್ತಿಕ ಕೇಂದ್ರಿತ ಪ್ರಜಾಪ್ರಭುತ್ವ ವ್ಯವಸ್ಥೆಯತ್ತ ನಡೆಯುತ್ತಿದೆ. ಹೀಗಾಗಿ, ಕಾನೂನುಗಳನ್ನು ಹೊಸ ಕಲ್ಪನೆಗಳಿಗೆ ತಕ್ಕಂತೆ ತಿದ್ದಬೇಕಿದೆ. ವಿಶೇಷ ವಿವಾಹ ಕಾಯಿದೆ, 1954 ಸೇರಿದಂತೆ ಬೇರೆ ಬೇರೆ ಕಾನೂನುಗಳಲ್ಲಿ ಅಂತರ್ಮತೀಯ ಮತ್ತು ಅಂತರ್ಜಾತಿ ಮದುವೆಗಳಿಗೆ ಅಡ್ಡಿ ಬರುವ ಸಾಕಷ್ಟು ನಿಬಂಧನೆಗಳಿವೆ. ಸೆಕ್ಷನ್  26 ಕೆಲವು ಜನರ ಮೇಲೆ ಮಾತ್ರ ಪರಿಣಾಮ ಬೀರುವ ಒಂದು ಚಿಕ್ಕ ಉದಾಹರಣೆಯಾಗಿದೆ. ಇಂತಹ ಹಲವು ಕಾನೂನುಗಳನ್ನು ಮುಂದಿನ ದಿನಗಳಲ್ಲಿ ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತೇನೆ.


[i] 2018 SCC OnLine Bom 21174

[ii] Nayanaben Firozkhan Pathan alias Nasimbanu Firozkhan Pathan v. Patel Shantaben Bhikhabhai 2017 SCC OnLine Guj 1271, K. Sivanandam v. Maragathammal AIR 2013 Mad 30, The Controller of Estate Duty Mysore, Bangalore (1972) 2 SCC 350, Sultana Begum v. Prem Chand Jain, (1997) 1 SCC 373, Jujjavarapu Yesurao v. Nadakuduru Kamala Kumar, (2007) 5 ALD 140,  Asoke Naidu v. Raymond S. Mul, AIR 1976 Cal 272, Shabana Khan v. D.B. Sulochana, 2007 DGLS (AP) 755 and  E. Ramesh v. P. Rajini, (2002) 1 Mad LJ 216

[iii] Shayara Bano v. Union of India, AIR 2017 9 SCC 1 (SC).

[iv] ಸಂವಿಧಾನದ ಅನುಚ್ಛೇದ 300 -A .

[v] (2017) 10 SCC 1

[vi]  (2018) 16 SCC 368

[vii] (2018) 8 SCC 501

[viii]  (2018) 10 SCC 1

ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.

Spread the love