ಲೇಖನಗಳು

ಭಾರತದ ಕ್ರೀಡಾಜಗತ್ತಿನ ಮೋಹಿನಿಗೆ ಮಂತ್ರವಾದ ಲೋಧಾ ಸಮಿತಿಯ ವರದಿ ಮತ್ತು ಸುತ್ತಣ ವಿಚಾರಗಳು

ಕ್ರಿಕೆಟ್ ಎಂಬ ಭಾರತದ ಮೋಹ ಹುಟ್ಟುಹಾಕುವ ಹುಚ್ಚು, ಹಣ, ಹೆಸರು ಅವುಗಳ ಜೊತೆಗೇ ಬರುವ ರಾಜಕೀಯ, ಭ್ರಷ್ಟಾಚಾರ ಮತ್ತು ಮೋಸ ಕಲ್ಪನೆಗೇ ಸವಾಲು ಹಾಕುವಂತದ್ದು. ನೂರಾರು ಕೋಟಿ ವಹಿವಾಟಾಗುವ ಈ ಆಟ, ಕೇವಲ ಆಟವಾಗಿ ಉಳಿದಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆಟವಲ್ಲದ ಈ ಆಟವು, ಕಾನೂನಿನ ಮೂಗುದಾರಕ್ಕೆ ಸಿಕ್ಕುವುದಕ್ಕೆ ದೊಡ್ಡ ಹಗರಣವೇ ಆಗಬೇಕಾಯ್ತು. 2013 ರ ಐಪಿಎಲ್ ಕ್ರಿಕೆಟ್ ಜಗತ್ತನ್ನೇ ತಲ್ಲಣಗೊಳಿಸಿತ್ತು. ಮೋಸದಾಟದಂತಹ ಆಟೇತರ ಚಟುವಟಿಕೆಗಳಿಂದ ಐಪಿಎಲ್ ಆಯೋಜಿಸುವ ಬಿಸಿಸಿಐ ವಿಶ್ವಕ್ರಿಕೆಟ್ ನ ಕೆಂಗಣ್ಣಿಗೆ ಗುರಿಯಾಯಿತು. ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಅಂತರಾಷ್ಟ್ರೀಯ ಕ್ರಿಕೆಟಿಗ ಶ್ರೀಶಾಂತ್ ಸೇರಿ ದೇಸೀ ಆಟಗಾರರಾದ ಅಂಕಿತ್ ಚವಾಣ್ ಮತ್ತು ಅಜಿತ್ ಚಂಡೀಲಾ ಸೆರೆವಾಸ ಅನುಭವಿಸಿದರೆ, ಚೆನ್ನೈ ತಂಡದ ಒಡೆಯರಾದ ಗುರುನಾಥ್ ಮೇಯಪ್ಪನ್ ಮತ್ತು ರಾಜಸ್ಥಾನ ತಂಡದ ಒಡೆಯರಾದ ರಾಜ್ ಕುಂದ್ರಾ ಮೇಲೆ ಬೆಟ್ಟಿಂಗ್ ಆರೋಪಗಳು ಸಾಬೀತಾದವು. ಆ ಬಳಿಕ ಎಲ್ಲಾ ಆಟಗಾರರಿಗೆ ಆಜೀವ ನಿಷೇಧ ಹೇರಿದರೆ (ಶ್ರೀಶಾಂತ್ ಕೋರ್ಟ್ ನಲ್ಲಿ ನಿಷೇಧವನ್ನು ತಡೆಹಿಡಿದು ಈಗ ಮತ್ತೆ ದೇಸೀ ಕ್ರಿಕೆಟ್ ಆಡುತ್ತಿದ್ದಾರೆ), ಎರಡೂ ತಂಡಗಳು ಐಪಿಎಲ್ ನಲ್ಲಿ ಪಾಲ್ಗೊಳ್ಳದಂತೆ ಎರಡು ವರ್ಷಗಳ ಕಾಲ ನಿಷೇಧ ಹೇರಲಾಯಿತು.

ಸಂಭಾವಿತರ ಆಟ ಎನ್ನುವ ಹಣೆಪಟ್ಟಿ ಹೊತ್ತಿರುವ ಕ್ರಿಕೆಟ್ ಗೆ ಐಪಿಎಲ್ ನಿಂದ ಚ್ಯುತಿ ಬಂದಿದೆ ಎಂದು ವಿಶ್ವ ಕ್ರಿಕೆಟ್ ನ ಹಲವಾರು ವಲಯದಿಂದ ವ್ಯಾಪಕ ಟೀಕೆಗಳು ಕೂಡ ಕೇಳಿಬಂದವು. ಈ ಎಲ್ಲಾ ಬೆಳವಣಿಗೆಗಳಿಂದ ಭಾರತಕ್ಕಾದ ಮುಜುಗರವನ್ನು ಕೊಂಚ ಮಟ್ಟಿಗಾದರೂ ಕಡಿಮೆ ಮಾಡಿ, ಜನರಲ್ಲಿ ಮತ್ತೊಮ್ಮೆ ಕ್ರಿಕೆಟ್ ಆಟದ ಬಗ್ಗೆ ನಂಬಿಕೆ ಮೂಡಿಸಲು ಸುಪ್ರೀಮ್ ಕೋರ್ಟ್ ಆದಷ್ಟು ಬೇಗ ಕ್ರಮ ಕೈಗೊಳ್ಳಲೇಬೇಕಿತ್ತು.

ಈ ಸಂದರ್ಭದಲ್ಲಿಯೇ ಬಿಸಿಸಿಐ ಎಂಬ ಖಾಸಗಿ ಸಂಸ್ಥೆ ರಿಟ್ ಕೋರ್ಟ್ ನ ವ್ಯಾಪ್ತಿಯಲ್ಲಿ ಬರುವುದೇ, ಅಲ್ಲಿ ಆದ ಹಗರಣಗಳನ್ನು ಹೈಕೋರ್ಟಿನಲ್ಲಿ ಪ್ರಶ್ನೆಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್ ದಿಟ್ಟ ಉತ್ತರವನ್ನೇ ನೀಡಿತು ಎಂದರೆ ತಪ್ಪಾಗಲಾರದು. ಬಿಸಿಸಿಐ ಖಾಸಗಿ ಸಂಸ್ಥೆಯಾಗಿದ್ದರೂ ಕೂಡಾ, ಅದು ಮಾಡುವ ಕೆಲಸಗಳು ಸಾರ್ವಜನಿಕ ಸ್ವಭಾವದದ್ದರಿಂದ, ರಿಟ್ ಕೋರ್ಟಿನ ವ್ಯಾಪ್ತಿಯಲ್ಲಿ ಬರುತ್ತದೆ ಎಂಬ ಮಹತ್ವದ ತೀರ್ಪು ನೀಡಿತು.[i] ಬಾಂಬೆ ಹೈಕೋರ್ಟಿನಲ್ಲಿ ಶುರುವಾದ ಕೇಸು, ಸುಪ್ರೀಂ ಕೋರ್ಟ್ ತಲುಪಿ, ನ್ಯಾ. ಮುದ್ಗಲ್ ಅವರ ಸಮಿತಿ ಹಗರಣದ ತಪ್ಪಿತಸ್ಥರನ್ನು ಕಂಡು ಹಿಡಿದರೂ ಸಹ, ಈ ಹಗರಣದಿಂದಾಗಿ ಬಿಸಿಸಿಐನ ಮೇಲಿನ ನಂಬಿಕೆಯ ಬುಡವೇ ಅಲ್ಲಾಡಿದ್ದರಿಂದ, ಆ ಇಡೀ ವ್ಯವಸ್ಥೆಯಲ್ಲಿನ ಹುಳುಕುಗಳು ದೊಡ್ಡ ಕಂದರಗಳಾಗಿ ಜಗತ್ತಿನ ಮುಂದೆ ಬೆಳಕಿಗೆ ಬಂದಿದ್ದರಿಂದ, ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಆಳವಾದ ವಿಚಾರಣೆಗೆ ಸಮಿತಿಯೊಂದನ್ನು ನೇಮಿಸಿತು.

ಬಿಸಿಸಿಐ ಮತ್ತು ಐಪಿಎಲ್ ನ ಎಲ್ಲಾ ವ್ಯವಹಾರಗಳು ಭ್ರಷ್ಟಾಚಾರವಿಲ್ಲದೆ ಪಾರದರ್ಶಕವಾಗಿ ನಡೆಯುವಂತೆ ಮಾಡಲು ಏನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ವರದಿ ಸಲ್ಲಿಸಲು ನ್ಯಾ. ಲೋಧಾ ಅವರ ನೇತೃತ್ವದಲ್ಲಿನ ಸಮಿತಿಗೆ ಕೋರಿಕೊಂಡಿತು. ಒಡನೇ ಕಾರ್ಯೋನ್ಮುಖವಾದ ಸಮಿತಿ, ಬಿಸಿಸಿಐನ ಎಲ್ಲಾ ಪಾಲುದಾರರು, ಮಾಜಿ ಹಾಗೂ ಹಾಲಿ ಆಟಗಾರರು, ಆಡಳಿತಗಾರರು ಮತ್ತು ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಅರಿವಿದ್ದ ವಕೀಲರೊಟ್ಟಿಗೆ ಸಮಾಲೋಚನೆ ನಡೆಸಿ ಭಾರತದ ಕ್ರಿಕೆಟ್ ಆಡಳಿತದ ವಿಧಾನದಲ್ಲಿಆಗಲೇಬೇಕಾದ ಸಾಕಷ್ಟು ಮಾರ್ಪಾಡುಗಳನ್ನು ಶಿಫಾರಸ್ಸು ಮಾಡುತ್ತಾ 2015ರ ಜುಲೈನಲ್ಲಿ ಮೊದಲ ವರದಿ ಸಲ್ಲಿಸಿತು. ಈ ವರದಿಯ ಹಲವಾರು ಶಿಫಾರಸ್ಸುಗಳು ಕೆಲವರಿಗೆ ನುಂಗಲಾರದ ತುತ್ತಾದರೆ ಇನ್ನೂ ಕೆಲವರಿಗೆ ಹೊಸ ಅವಕಾಶಗಳನ್ನುಮಾಡಿ ಕೊಟ್ಟಿತು. ಈ ವರದಿ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದರೆ ತಪ್ಪಾಗಲಾರದು. ಮೊದಲ ವರದಿಯಲ್ಲಿ ಸಮಿತಿಯು ಕೋರಿದ ಪ್ರಮುಖ ಬದಲಾವಣೆಗಳು ಹೀಗಿದ್ದವು:

ಬಿಸಿಸಿಐನ ಆಡಳಿತ ವಿಭಾಗದ ರಚನೆ:

ಬಿಸಿಸಿಐನಲ್ಲಿ ಭಾರತದ ಎಲ್ಲಾ ರಾಜ್ಯಗಳ ಪಾಲುದಾರಿಕೆ ಇಲ್ಲದನ್ನು ಮನಗಂಡು ರಾಜ್ಯಕ್ಕೊಂದು ದೇಸೀ ಕ್ರಿಕೆಟ್ ತಂಡ ಹಾಗೂ ಆಡಳಿತದಲ್ಲಿ ರಾಜ್ಯಕ್ಕೊಂದೇ ಮತವಿರಬೇಕು. ಹಾಗೂ ಒಂದು ರಾಜ್ಯದಲ್ಲಿಒಂದಕ್ಕಿಂತ ಹೆಚ್ಚು ಕ್ರಿಕೆಟ್ ತಂಡಗಳಿದ್ದರೆ (ಉದಾ: ಮಹಾರಾಷ್ಟ್ರ, ಗುಜರಾತ್), ಅವುಗಳಲ್ಲಿ ಒಂದು ತಂಡಕ್ಕೆ ಮಾತ್ರ ಸಂಪೂರ್ಣ ಸದಸ್ಯತ್ವ ನೀಡಿ ಇನ್ನುಳಿದ ತಂಡಗಳಿಗೆ ಸಹವರ್ತಿ ಸದಸ್ಯತ್ವ ನೀಡಬೇಕು. ಈ ಮಾರ್ಪಾಡು ಜಾರಿಯಾದ ಮೇಲೆ ಈಶಾನ್ಯ ರಾಜ್ಯಗಳೊಟ್ಟಿಗೆ ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ಚಂಡಿಗಢಗಳೂ ಕೂಡ ಕ್ರಿಕೆಟ್ ತಂಡಗಳನ್ನು ಹುಟ್ಟು ಹಾಕಿದವು.

ಈಗ ಭಾರತದಲ್ಲಿ ದೇಸೀ ತಂಡಗಳ ಸಂಖ್ಯೆ ಪ್ರಪಂಚದಲ್ಲೇ ಅತ್ಯಧಿಕ 38 ಕ್ಕೆ ಏರಿದೆ. ಇದರೊಟ್ಟಿಗೆ ರಾಜ್ಯಗಳಲ್ಲದೆ ಸಂಸ್ಥೆಗಳನ್ನು ಪ್ರತಿನಿಧಿಸುವ ಸರ್ವಿಸಸ್ ಹಾಗೂ ರೈಲ್ವೇಸ್ ತಂಡಗಳಿಗೆ ಸಹವರ್ತಿಸದಸ್ಯತ್ವ ನೀಡಿ ಗೌರವಿಸಿದರೂ, ಮತ ಚಲಾಯಿಸುವ ಹಕ್ಕು ಮಾತ್ರ ನೀಡಲಾಗಿಲ್ಲ.

ಮೊದಲಿನಂತೆ ಬಿಸಿಸಿಐನ ಸದಸ್ಯರನ್ನು ವಲಯವಾರು ಪ್ರಾಂತ್ಯಗಳ ಆಧಾರದ ಮೇಲೆ ವಿಂಗಡಿಸುವ ವಾಡಿಕೆಯನ್ನು ಕೂಡ ರದ್ದು ಮಾಡಬೇಕು. ಹಾಗೂ ಕಡೆಯದಾಗಿ ರಾಜ್ಯಗಳಿಗೆ ಬಿಸಿಸಿಐನ ಹಣ ಹಂಚಿಕೆಯ ಪ್ರಕ್ರಿಯೆಗೆ ಹೊಸ ರೂಪುರೇಶೆ ಸಿದ್ದಪಡಿಸಿ ಎಲ್ಲರಿಗೂ ಸಮಾನವಾಗಿ ಅನುದಾನ ದೊರೆಯುವಂತೆ ಮಾರ್ಪಾಡು ಮಾಡಬೇಕು. ಈ ಶಿಫಾರಸ್ಸುಗಳ ಉದ್ದೇಶ ಬಲಿಷ್ಠ ರಾಜ್ಯಗಳ ಬಳಿ ಅಧಿಕಾರ ಕ್ರೋಢಿಕರಣವನ್ನು ತಪ್ಪಿಸಿ ಎಲ್ಲರಿಗೂ ಸಮಾನಾವಕಾಶ ನೀಡುವುದಾಗಿತ್ತು.

ಆಡಳಿತ ವಿಧಾನ

ಬಿಸಿಸಿಐ ನಲ್ಲಿ ದಶಕಗಳಿಂದ ನಡೆಯುತ್ತಿದ್ದ ಅವ್ಯವಹಾರಗಳನ್ನು ಹತ್ತಿಕ್ಕಲು ಮೊದಲಿದ್ದ 14 ಸದಸ್ಯರ ಸಮಿತಿಯ ಬದಲಾಗಿ 9 ಸದಸ್ಯರ ಹೊಸದೊಂದು ಅಪೆಕ್ಸ್ ಕೌನ್ಸಿಲ್ ನೊಟ್ಟಿಗೆ ಐಪಿಎಲ್ ನಿರ್ವಹಣೆಗೆಂದೇ ಪ್ರತ್ಯೇಕ ಕೌನ್ಸಿಲ್  ಹುಟ್ಟುಹಾಕಬೇಕು. ಅಪೆಕ್ಸ್ ಕೌನ್ಸಿಲ್ ನಲ್ಲಿ ಸಮಾನವಾಗಿ ಅಧಿಕಾರ ಹಂಚಿಕೆಯಾಗಲು 9 ಮಂದಿ ಸದಸ್ಯರಲ್ಲಿ 5 ಮಂದಿ ಪದಾಧಿಕಾರಿಗಳು ಹಾಗೂ 4 ಮಂದಿ ಕೌನ್ಸಿಲರ್ ಗಳನ್ನು ಒಟ್ಟಿಗೆ ನೇಮಿಸಬೇಕು. ಇವರುಗಳ ಪೈಕಿ ಒಬ್ಬರನ್ನು ಮಾತ್ರ ಬಿಸಿಸಿಐಗೆ ಆಯ್ಕೆ ಮಾಡಲು ಅವಕಾಶ ನೀಡಿದರೆ, Comptroller and Auditor General of India (CAG) ಗೂ ಸಹ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡುವ ಹಕ್ಕು ನೀಡುವುದರ ಜೊತೆಗೆ ಕಡ್ಡಾಯವಾಗಿ ಒಬ್ಬರು ಮಹಿಳಾ ಪ್ರತಿನಿಧಿ ಇರುವಂತೆ ಸೂಚಿಸಿತು. 70 ವರ್ಷಗಳ ವಯಸ್ಸಿನ ಮೇಲ್ಪಟ್ಟ ಸದಸ್ಯರು ಅಧಿಕಾರದಲ್ಲಿರದಂತೆ ಹೊಸದೊಂದು ನಿಯಮ ಸೇರಿಸಿ ಸದಸ್ಯರ ಆಡಳಿತಾವಧಿಯನ್ನು ಕೇವಲ 3 ವರ್ಷಗಳಿಗೆ ಮೊಟಕುಗೊಳಿಸುವಂತೆ ಸಮಿತಿ ಸೂಚಿಸಿತು. ಹಾಗೂ ಬಿಸಿಸಿಐ ಅಧ್ಯಕ್ಷನ ಆಯ್ಕೆ ಪ್ರಕ್ರಿಯೆಯನ್ನು ವಲಯವಾರು ವಿಧಾನದ ಬದಲಾಗಿ ಎಲ್ಲಾ ರಾಜ್ಯಗಳು ಮತ ಚಲಾಯಿಸಿ ಪಾರದರ್ಶಕವಾಗಿ ಚುನಾವಣೆ ಮೂಲಕ ಆರಿಸುವಂತಹ ಪರಿಪಾಠ ತರಬೇಕು. ಜೊತೆಗೆ ಬಿಸಿಸಿಐ ಅಧ್ಯಕ್ಷನ ಅಧಿಕಾರಾವಧಿಯನ್ನು 2 ವರ್ಷಗಳಿಗೆ ನಿಗದಿ ಮಾಡಬೇಕು ಎಂಬಿತ್ಯಾದಿ ಸಲಹೆಗಳನ್ನು ಸಮಿತಿ ನೀಡಿತು.

ವೃತ್ತಿಪರ ಮಾರ್ಪಾಡುಗಳು

ಕಾರ್ಪರೇಟ್ ಸಂಸ್ಥೆಗಳ ಮಾದರಿಯಲ್ಲಿ ಬಿಸಿಸಿಐನಲ್ಲೂ ವೃತ್ತಿಪರ ತೀರ್ಮಾನಗಳನ್ನು ಕೈಗೊಳ್ಳಲು ನುರಿತವರನ್ನುಆರಿಸಬೇಕು. CEO ಒಬ್ಬರನ್ನು ನೇಮಿಸಿ ಅವರಡಿ ಆಟೇತರ ವ್ಯವಹಾರಗಳನ್ನು ನಿಭಾಯಿಸಲು 6 ಮಂದಿ ವ್ಯವಸ್ಥಾಪಕರ ತಂಡವನ್ನು ಕಟ್ಟಬೇಕು. ಆಟಗಾರರ ಆಯ್ಕೆ ಪ್ರಕ್ರಿಯೆ, ಪ್ರದರ್ಶನದ ಗುಣಮಟ್ಟ, ತರಬೇತಿಯಂತಹ ಕ್ರಿಕೆಟ್ ಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಗಮನ ಹರಿಸಲು ಒಟ್ಟು 7 ಕ್ರಿಕೆಟ್ ಕಮಿಟಿಗಳನ್ನು ಸೃಷ್ಟಿಸಬೇಕು. ಈ ಕಮಿಟಿಗಳಲ್ಲಿ ಕನಿಷ್ಠ 3 ಮಂದಿಯಾದರೂ ಮಾಜಿ ಆಟಗಾರರಿರಲೇಬೇಕು ಎಂಬ ಕಡ್ಡಾಯ ನಿಯಮ ಕೂಡ ಮಾಡಲಾಯಿತು. ಹಾಗೂ ಇದರೊಟ್ಟಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಕಮಿಟಿಯಲ್ಲಿ ಮಾಜಿ ಟೆಸ್ಟ್ ಆಟಗಾರರಿಗೆ ಮಾತ್ರ ಮಣೆ ಹಾಕಿ ಅವರ ಪೈಕಿ ಹೆಚ್ಚು ಪಂದ್ಯವಾಡಿರುವವರಿಗೆ ಅಧ್ಯಕ್ಷ ಸ್ಥಾನ ನೀಡುವಂತ ಹೊಸದೊಂದು ಕಟ್ಟಳೆ ಜಾರಿಗೆ ತರುವಂತೆ ಸೂಚಿಸಲಾಯಿತು.

ಐಪಿಎಲ್ ಮಾರ್ಪಾಡು

ಎಲ್ಲಾ ಸಮಸ್ಯೆಗಳ ಮೂಲವೆಂದೇ ಬಿಂಬಿಸಲಾಗಿದ್ದ ಐಪಿಎಲ್ ಅನ್ನು ಸುಧಾರಿಸಲು 9 ಮಂದಿ ಸದಸ್ಯರ ಹೊಸದೊಂದು ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಅನ್ನು ಸೃಷ್ಟಿ ಮಾಡಿ, ಈ ಪಂದ್ಯಾವಳಿಯ ಎಲ್ಲಾ ವ್ಯವಹಾರಗಳ ಹೊಣೆಯನ್ನು ಈ ಕೌನ್ಸಿಲ್ ಹೆಗಲಿಗೆ ಹೊರಿಸಬೇಕು ಎಂದು ಶಿಫಾರಸ್ಸು ಮಾಡಿತು ಸಮಿತಿ. ಐಪಿಎಲ್ ಫ್ರ್ಯಾಂಚೈಸಿಗಳ  ಜೊತೆಗೆ ಪಂದ್ಯವಾಳಿಯ ಸ್ವರೂಪ ತೀರ್ಮಾನಿಸುವ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆಗಳನ್ನೂ ಸೂಚಿಸಲಾಯಿತು. ಪ್ರತೀ ಐಪಿಎಲ್ ಮೊದಲ್ಗೊಳ್ಳುವ 15 ದಿನ ಮೊದಲು ಹಾಗೂ ಕೊನೆಗೊಂಡ 15 ದಿನ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ ಅನ್ನು ಗಮನದಲ್ಲಿಟ್ಟುಕೊಂಡು ವಿಶ್ರಾಂತಿ ಇರಬೇಕಾಗಿ ಕೋರಲಾಯಿತು.

ಆಟಗಾರರ ಒಕ್ಕೂಟ

ಬಿಸಿಸಿಐ ನ ಗುತ್ತಿಗೆಯಲ್ಲಿರುವ ಭಾರತದ ಎಲ್ಲಾ ಆಟಗಾರರ ಕುಂದು ಕೊರತೆಗಳನ್ನು ವಿಚಾರಿಸಲು ಸಂಸ್ಥೆಯ ವೆಚ್ಚದಲ್ಲೇ ಆಟಗಾರರ ಒಕ್ಕೂಟವನ್ನು ಹುಟ್ಟುಹಾಕುವಂತೆ ಸೂಚಿಸಿತು ಸಮಿತಿ. ಇದರ ನಿಗಾ ವಹಿಸಲು ಮಾಜಿ ಆಟಗಾರರನ್ನೊಳಗೊಂಡ 4 ಮಂದಿ ಸದಸ್ಯರ ಸೀರಿಂಗ್ ಕಮಿಟಿಯನ್ನು ಜಾರಿಗೆ ತರುವಂತೆಯೂ ಸೂಚಿಸಿತು.

ಹಿತಾಸಕ್ತಿ ಸಂಘರ್ಷ (Conflict of interest):

ಹಿತಾಸಕ್ತಿ ಸಂಘರ್ಷದ ಕಲ್ಪನೆಯೇ ಇಲ್ಲದಂತೆ ಬಿಸಿಸಿಐನ ಹಲವಾರು ಸದಸ್ಯರು ಎರಡು-ಮೂರು ಖಾತೆಗಳನ್ನು ಒಟ್ಟಿಗೆ ನಿಭಾಯಿಸುತ್ತಾ ಅಧಿಕ ಲಾಭವನ್ನು ಪಡೆಯುತ್ತಿದ್ದರು. ಇದರಿಂದ ಸದಸ್ಯರ ಬದಿಯೊಲವು ಹೆಚ್ಚಾಗಿ ಕೆಲವು ಭ್ರಷ್ಟಾಚಾರದ ಪ್ರಕರಣಗಳು ಕೇಳಿ ಬಂದಿದ್ದವು. ಇದನ್ನು ತಪ್ಪಿಸಲೆಂದೇ ಹೊಸದೊಂದು ಕಾರ್ಯಕಾರಿ ಸಮಿತಿ ರಚಿಸಿ ಕೆಲವು ನಿಯಮಗಳನ್ನು ಮಾಡುವಂತೆ ಶಿಫಾರಸ್ಸು ಮಾಡಿತು ಸಮಿತಿ.

ಇದರಿಂದ ಶಿಫಾರಸ್ಸುಗಳು ಜಾರಿಯಾದ ಮೇಲೆ, ಬಿಸಿಸಿಐ ಮತ್ತು ಐಪಿಎಲ್ ನಲ್ಲಿ ಒಟ್ಟಿಗೆ ದುಡಿಯುವ ಅವಕಾಶಕ್ಕೆ ತಡೆ ಹಿಡಿಯಲಾಯಿತು. ಐಪಿಎಲ್ ನ ದೆಹಲಿ ತಂಡ ಹಾಗೂ ಭಾರತದ ಕಿರಿಯರ ತಂಡ ಎರಡಕ್ಕೂ ಒಟ್ಟಿಗೆ ತರಬೇತುದಾರರಾಗಿದ್ದ ರಾಹುಲ್ ದ್ರಾವಿಡ್ ರಿಗೆ ಒಂದನ್ನು ಮಾತ್ರ ಆರಿಸಿಕೊಳ್ಳಲು ಅಪ್ಪಣೆ ಮಾಡಲಾಯಿತು. ದ್ರಾವಿಡ್ರಂತೆಯೇ ಹಲವಾರು ಮಂದಿಗೂ ಸಹ ಒಂದು ಜವಾಬ್ದಾರಿಯನ್ನಷ್ಟೇ ಆರಿಸಿಕೊಳ್ಳುವಂತೆ ಅಧಿಕೃತವಾಗಿ ಘೋಷಣೆ ಹೊರಡಿಸಲಾಯಿತು. ಜೊತೆಗೆ ಆಟಗಾರರ ಹಾಗೂ ಪ್ರಾಯೋಜಕರ ನಡುವಣ ಜಾಹಿರಾತು ಕಟ್ಟಳೆಗಳಿಗೂ ಕೆಲವು ತಿದ್ದುಪಡಿ ಮಾಡಿ ಬಿಸಿಸಿಐನ ನಿಯಮಗಳಡಿ ಹಿತಾಸಕ್ತಿ ಸಂಘರ್ಷ ಆಗದಂತೆ ಎಚ್ಚರ ವಹಿಸಲಾಯಿತು. ಪ್ರಭಾವಿ ಸ್ಥಾನದಲ್ಲಿರುವ ಸದಸ್ಯರ ಕುಟುಂಬ ಹಾಗೂ ಸಂಬಂಧಿಗಳು ಲಾಭ ಪಡೆಯದಂತೆ ಕೂಡ ಕಡಿವಾಣ ಹಾಕಲಾಯಿತು.  

ಬಾಹ್ಯ ಮೇಲ್ವಿಚಾರಣೆ

ಸಮಿತಿಯು ಬಿಸಿಸಿಐನ ಎಲ್ಲಾ ವ್ಯವಹಾರಗಳನ್ನು ಬಾಹ್ಯ ಮೇಲ್ವಿಚಾರಣೆಗೆ ಒಳಪಡಿಸಲು 3 ಹೊಸ ಅಧಿಕಾರಿಗಳನ್ನು ನೇಮಿಸಿ ಅವರೆಲ್ಲರಿಗೂ ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳಲು ಹಕ್ಕು ನೀಡಬೇಕೆಂದು ಸೂಚಿಸಿತು.

ಒಂಬುಡ್ಸ್ಮನ್: ಸುಪ್ರೀಮ್ ಕೋರ್ಟ್ ನ ಮಾಜಿ ನ್ಯಾಯಾಧೀಶರು ಅಥವಾ ಹೈ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶರು ಮಾತ್ರ ಒಂಬುಡ್ಸ್ಮನ್ ಆಗುವ ಅರ್ಹತೆ ಉಳ್ಳವರಾಗಿದ್ದು, ಬಿಸಿಸಿಐನ ಆಟಗಾರರು ಹಾಗೂ ರಾಜ್ಯ ಸಂಸ್ಥೆಗಳ ನಡುವಣ ತಕರಾರುಗಳು, ಹಾಗೂ ಜನತೆಯಿಂದ ಕ್ರಿಕೆಟ್ ಪಂದ್ಯಗಳ ಟಿಕೆಟ್ ಗಳ ಬಗ್ಗೆ ಮತ್ತು ಕ್ರೀಡಾಂಗಣದ ಸೌಲಭ್ಯಗಳ ಬಗ್ಗೆ ಕೇಳಿ ಬರುವ ದೂರುಗಳನ್ನು ಪರಿಶೀಲಿಸಿ ಬಹೆಗರಿಸುವ ಸ್ವತಂತ್ರ ಅಧಿಕಾರವನ್ನು ಇವರಿಗೆ ನೀಡಬೇಕೆಂದು ಸಮಿತಿ ಸೂಚಿಸಿತು.

ಎಥಿಕ್ಸ್ ಅಧಿಕಾರಿ: ಹೈ ಕೋರ್ಟ್ ನ ಮಾಜಿ ನ್ಯಾಯಾಧೀಶರು ಇವರಾಗಿದ್ದು ಬಿಸಿಸಿಐನ ಕಾರ್ಯವೈಖರಿಯನ್ನು ಪ್ರಸ್ತುತ ಸಿದ್ದಪಡಿಸಿರುವ ನೀತಿ-ನಿಯಮಗಳ ಚೌಕಟ್ಟಿನಲ್ಲೇ ನಡೆಯುವಂತೆ ನೋಡಿಕೊಂಡು ವ್ಯತ್ಯಾಸ ಕಂಡುಬಂದಲ್ಲಿ ಛೀಮಾರಿ ಹಾಕಿ ದಂಡ ವಿಧಿಸುವ ಅಧಿಕಾರ ಎಥಿಕ್ಸ್ ಅಧಿಕಾರಿಗೆ ಕೊಡಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿತು.

ಎಲೆಕ್ಟೋರಲ್ ಅಧಿಕಾರಿ: ಭಾರತದ ಚುನಾವಣಾ ಸಮಿತಿಯ ಮಾಜಿ ಅಧ್ಯಕ್ಷರಾದ ಇವರ ಮೇಲೆ ಬಿಸಿಸಿಐನ ಎಲ್ಲಾ ಬಗೆಯ ಚುನಾವಣೆಗಳ ಮೇಲ್ವಿಚಾರಣೆಯ ಹೊಣೆ ಕೊಡಬೇಕು ಎಂದು ಸಮಿತಿ ಸೂಚಿಸಿತು. ಚುನಾವಣೆ ಪ್ರಕ್ರಿಯೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ನಿಗಾ ವಹಿಸಿ ನಿಯಮದ ಅನುಸಾರವೇ ಎಲ್ಲಾ ಸ್ಥಾನಗಳಿಗೆ ಅಧಿಕಾರಿಗಳನ್ನು ಆರಿಸುವ ಸಂಪೂರ್ಣ ಜವಾಬ್ದಾರಿ ಎಲೆಕ್ಟೋರಲ್ ಅಧಿಕಾರಿಯ ಪಾತ್ರ. ಜೊತೆಗೆ ಚುನಾವಣೆ ವಿಷಯವಾಗಿ ಇವರು ಸರ್ವಾಧಿಕಾರಿಯಾಗಿದ್ದು, ಇವರ ತೀರ್ಮಾನವೇ ಅಂತಿಮ ಎಂದೂ ಸೂಚಿಸಿತು.

ಪಾರದರ್ಶಕತೆ ಮತ್ತು ಮೇಲ್ವಿಚಾರಣೆ

ಬಿಸಿಸಿಐನ ಎಲ್ಲಾ ವಿಭಾಗಗಳಲ್ಲಿಯೂ ಪಾರದರ್ಶಕತೆ ತರಲು ಸಂಸ್ಥೆಯನ್ನು RTI act, 2005 (ಮಾಹಿತಿ ಹಕ್ಕು ಕಾಯ್ದೆ) ಗೆ ಒಳಪಡಿಸುವಂತೆ ಸೂಚಿಸಿಲಾಯಿತು. ಸಂಸ್ಥೆಯ ಎಲ್ಲಾ ಹಳೆಯ ಗುತ್ತಿಗೆಗಳನ್ನು ಮರುಪರಿಶೀಲಿಸಿ ಅಗತ್ಯ ಇದ್ದಲ್ಲಿ ತಿದ್ದುಪಡಿಗೆ ಅವಕಾಶ ಕೊಡುವುದರೊಟ್ಟಿಗೆ ಜಾಹಿರಾತು, ಪಂದ್ಯಗಳ ಪ್ರಸಾರ ಹಕ್ಕುಗಳ ವಿತರಣೆ ಮತ್ತು ತಂಡದ ಪ್ರಯೋಜಕತ್ವದ ಹೊಸ ಗುತ್ತಿಗೆಗಳಿಗೆ ಪ್ರತ್ಯೇಕ ನಿಯಮಗಳನ್ನು ಸಮಿತಿ ಸೂಚಿಸಿತು. ಹಾಗೂ ಬಿಸಿಸಿಐನ ಎಲ್ಲಾ ವಾರ್ಷಿಕ ವರದಿಗಳು ಮತ್ತು ಬ್ಯಾಲೆನ್ಸ್ ಶೀಟ್ ನ ಪರಿಶೀಲನೆಯ ಹಕ್ಕು ಒಂಬುಡ್ಸ್ಮನ್, ಎಥಿಕ್ಸ್ ಅಧಿಕಾರಿ ಮತ್ತು ಎಲೆಕ್ಟೋರಲ್ ಅಧಿಕಾರಿಗೆ ನೀಡಿ ಕುಂದುಗಳಿದ್ದಲ್ಲಿ ವರದಿ ಸಲ್ಲಿಸಲು ಕೋರಲಾಯಿತು.

ಲೋಧಾ ಸಮಿತಿಯ ಮೊದಲ ವರದಿಯ ಶಿಫಾರಸ್ಸುಗಳು ಇವು. ಎರಡನೇ ವರದಿಯಲ್ಲಿ ಬೆಟ್ಟಿಂಗನ್ನು ಕಾನೂನುಬದ್ಧ ಮಾಡಬೇಕು ಎಂಬಂತೆ ಇನ್ನೂ ಹಲವು ಆಸಕ್ತಿದಾಯಕ ವಿಚಾರಗಳು ಇವೆ. ಅಷ್ಟೇ ಅಲ್ಲದೆ, ಮಾಡಿದ ಶಿಫಾರಸ್ಸುಗಳಲ್ಲಿ ಯಾವುದೆಲ್ಲವನ್ನು ಕೋರ್ಟ್ ಒಪ್ಪೊಕೊಂಡಿತು ಮತ್ತು ಯಾವ ರೀತಿಯಲ್ಲಿ ಇವು ಜಾರಿಗೆ ಬಂದವು ಎನ್ನುವುದರ ಕುರಿತು ಮುಂದಿನ ಲೇಖನದಲ್ಲಿ ನೋಡೋಣ.

ಅದೇನೇ ಇರಲಿ, ಕ್ರಿಕೆಟ್ಟು ಹೀಗೆ ಕಾನೂನಿನ ಚೌಕಟ್ಟಿನಲ್ಲಿ ಬಂದಿದ್ದು ಜನರಲ್ಲಿ ನಂಬಿಕೆ ಮೂಡಿಸಿ ಖಂಡಿತ ಸಮಾಧಾನ ತಂದಿದೆ ಎನ್ನುವುದು ಗಮನಾರ್ಹ ಅಂಶ. ಭಾರತದ 130 ಕೋಟಿ ಜನರ ಕ್ರಿಕೆಟ್ ಹುಚ್ಚನ್ನೇ ಬಂಡವಾಳ ಮಾಡಿಕೊಂಡು ಪ್ರತೀ ವರ್ಷ ಸಾವಿರಾರು ಕೋಟಿ ಲಾಭ ಗಳಿಸುವ ಬಿಸಿಸಿಐನ ಕಾರ್ಯ ವೈಖರಿ ಇನ್ನಷ್ಟು ಸುಧಾರಿಸಿ ಬರುವ ದಿನಗಳಲ್ಲಾದರೂ ಅವ್ಯವಹಾರಕ್ಕೆ ಎಡೆ ಕೊಡದೆ ಪಾರದರ್ಶಕತೆಯಿಂದ ನಡೆಯಲಿ ಎನ್ನುವುದೇ ಕ್ರಿಕೆಟ್ ಆಟವನ್ನು ಪ್ರೀತಿಸುವ ಪ್ರತಿಯೊಬ್ಬ ಭಾರತೀಯನ ಹೆಬ್ಬಯಕೆ!


[i] (2015) 3 SCC 251

ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.

Spread the love