ಲೇಖನಗಳು

ವೈದ್ಯಕೀಯ ನಿರ್ಲಕ್ಷ್ಯದ ಕುರಿತ ಕಾನೂನು

ಕನ್ನಡದ ಪ್ರಖ್ಯಾತ ನಟರಾದ ಪುನೀತ್ ರಾಜಕುಮಾರ್ ರವರ ಅನಿರೀಕ್ಷಿತ ಸಾವು ಕನ್ನಡಿಗರನ್ನು ಶೋಕಸಾಗರದಲ್ಲೇ ಮುಳುಗಿಸಿತು. ಅದರಲ್ಲೂ ಪುನೀತ್ ರ ಅಭಿಮಾನಿಗಳಿಗೆ ಅವರ ಮರಣ ಆಘಾತವನ್ನೇ ಉಂಟುಮಾಡಿರುವುದು ಸಹಜ. ಆದರೆ ದುರದೃಷ್ಟಕರ ಸಂಗತಿಯೆಂದರೆ ಕೆಲವು ಮನನೊಂದ ಅಭಿಮಾನಿಗಳು ಪುನೀತ್ ರಿಗೆ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ಹರಿಹಾಯುತ್ತಿದ್ದರು.  ಡಾ. ಬಿ. ರಮಣ ರಾವ್ ರ ವಿರುದ್ಧ ಈಗಾಗಲೇ ಎರಡು ದೂರುಗಳನ್ನು ಪೊಲೀಸರಿಗೆ ಸಲ್ಲಿಸಲಾಗಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಪ್ರಥಮ ವರ್ತಮಾನ ವರದಿ (FIR) ಯನ್ನು ಪೊಲೀಸರು ದಾಖಲಿಸಿದ್ದಾರೆಯೇ ಇಲ್ಲವೇ ಎಂಬುದು ಇಲ್ಲಿವರೆಗೂ ಸ್ಪಷ್ಟವಾಗಿಲ್ಲ.

ತಮ್ಮ ಹತ್ತಿರದವರನ್ನು ಕಳೆದುಕೊಂಡ ನೋವನ್ನು ಭರಿಸಲಾರದ ಎಷ್ಟೋ ಜನ ವೈದ್ಯಕೀಯ ನಿರ್ಲಕ್ಷ್ಯ/ಅಜಾಗರೂಕತೆ (Medical Negligence) ಯ ಪ್ರಕರಣಗಳನ್ನು ದಾಖಲಿಸುವ ಸಂದರ್ಭಗಳಿಗೇನೂ ಬರವಿಲ್ಲ. ನಿರ್ಲಕ್ಷ್ಯ/ಅಜಾಗರೂಕತೆಯಿಂದ ಮರಣವನ್ನುಂಟುಮಾಡುವುದು ಭಾರತೀಯ ದಂಡ ಸಂಹಿತೆಯ ಕಲಂ 304-ಎ ರಡಿ ಅಪರಾಧ.  ವೈದ್ಯಕೀಯ ವೃತ್ತಿ ಅತ್ಯಂತ ಶ್ರೇಷ್ಠವಾದ ವೃತ್ತಿಗಳಲ್ಲೊಂದು ಎಂಬುದರಲ್ಲಿ ಸಂದೇಹವೇ ಇಲ್ಲ. ಸಾಮಾನ್ಯರಿಗೆ ಯಾವ ರೋಗವೆಂದೂ, ಯಾವ ರೋಗಕ್ಕೆ ಏನು ಚಿಕಿತ್ಸೆಯೆಂದೂ, ಚಿಕಿತ್ಸೆಯ ಅಡ್ಡ ಪರಿಣಾಮಗಳು ಯಾವುದರ ಬಗ್ಗೆಯೂ ಅರಿವಿರುವುದಿಲ್ಲ. ಇದಕ್ಕೆಂದೇ ವರ್ಷಗಳ ಕಾಲ, ಮಾನವನ ಸಂಕೀರ್ಣ ದೇಹ ವ್ಯವಸ್ಥೆಯನ್ನು ಅಭ್ಯಾಸ ಮಾಡಿ ತರಬೇತಿ ಪಡೆದವರು ವೈದ್ಯರು. ಆದರೆ ವೈದ್ಯನೊಬ್ಬ ಕೇವಲ ರೋಗವೇನೆಂದು ಗುರುತಿಸಿ ಅದಕ್ಕೆ ಚಿಕಿತ್ಸೆಯನ್ನು ನೀಡಬಹುದಷ್ಟೆ. ಇದಕ್ಕೂ ಮಿಗಿಲಾಗಿ ಏನೂ ಮಾಡಲಾರನು. ಚಿಕಿತ್ಸೆಯ ಫಲವೇನು ಎಂಬುದನ್ನು ಯಾರೂ ಮೊದಲೇ ನಿಖರವಾಗಿ ಹೇಳಲಾರರು. ಏನು ಚಿಕಿತ್ಸೆ ನೀಡಬೇಕು, ಅದರ ಪರಿಣಾಮಗಳೇನು ಎಂಬುದರ ಕುರಿತು ಶಾಸ್ತ್ರೀಯವಾಗಿ ವೈದ್ಯರು ತಿಳಿದುಕೊಂಡಿರುತ್ತಾರೆ. ಒಬ್ಬ ಸಾಮಾನ್ಯ ವ್ಯಕ್ತಿಗೆ ಅಷ್ಟು ವೈದ್ಯಕೀಯ ಜ್ಞಾನವಾಗಲಿ, ಅನುಭವವಾಗಲಿ ಇರಲು ಸಾಧ್ಯವೇ ಇಲ್ಲ. ಹೀಗಾಗಿಯೇ ವೈದ್ಯಕೀಯ ಕೆಲಸವನ್ನು “ವೃತ್ತಿ” ಎಂದು ಪರಿಗಣಿಸುವುದು. 

ಇದನ್ನು ಮನಗಂಡ ಮಾನ್ಯ ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠವೊಂದು  2005 ರಲ್ಲಿ ಜೇಕಬ್ ಮ್ಯಾಥ್ಥ್ಯೂ ವಿ. ಪಂಜಾಬ್ ರಾಜ್ಯ (2005) 6 SCC 1 ಪ್ರಕರಣದಲ್ಲಿ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಹಲವಾರು ನಿರ್ದೇಶನಗಳನ್ನು ಹಾಗೂ ಮಾರ್ಗದರ್ಶಿ ಸೂಚನೆಗಳನ್ನು ನೀಡಿದೆ. ಆಸ್ಪತ್ರೆಯ ಗ್ಯಾಸ್ ಸಿಲಿಂಡರ್ ನ ಲೋಪದಿಂದ ಸಾವನ್ನಪ್ಪಿದ ವ್ಯಕ್ತಿಯೊಬ್ಬರ ಮಗ, ವೈದ್ಯರ ವಿರುದ್ಧ ಸಲ್ಲಿಸಿದ ದೂರಿನ ಮೇರೆಗೆ ದಾಖಲಾದ FIR ನ್ನು IPC ಕಲಂ 482 ರ ಅಡಿಯಲ್ಲಿ ಆ ವೈದ್ಯರು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಹೈ ಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತು. ಅದನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ, ವೈದ್ಯಕೀಯ ನಿರ್ಲಕ್ಷ್ಯವೆಂಬ ವಿಷಯದ ಪ್ರಾಮುಖ್ಯತೆನ್ನು ಲೆಕ್ಕಿಸಿ ಸುಪ್ರೀಂ ಕೋರ್ಟ್ ವೈದ್ಯಕೀಯ ಸಮುದಾಯವನ್ನು ಪ್ರತಿನಿಧಿಸುವ ಸಂಘ, ಸಂಸ್ಥೆಗಳನ್ನೂ ಪ್ರಕರಣದಲ್ಲಿ ಆಲಿಸಿತು.

ಕಾಳಜಿ ವಹಿಸಬೇಕಾದ ಕರ್ತವ್ಯವುಳ್ಳ ವ್ಯಕ್ತಿಯೊಬ್ಬ ತಾನು ಮಾಡಿದ ಕೆಲಸದಲ್ಲಿ ಆ ಕಾಳಜಿಯನ್ನು ವಹಿಸದಿದ್ದರೆ ಅದನ್ನು ನಿರ್ಲಕ್ಷ್ಯವೆಂದು ಕಾನೂನು ಪರಿಗಣಿಸುತ್ತದೆ. ನಾಗರೀಕ ಕಾನೂನಿನಲ್ಲಿ (Civil Law) ಇದೊಂದು ನಾಗರೀಕ ಅಪರಾಧ (Civil Wrong/Tort). ಅದು ದಂಡನೀಯ ಅಥವಾ Criminal ಅಪರಾಧವಲ್ಲ. ಕೃತ್ಯವೆಸಗುವ ವ್ಯಕ್ತಿ ಉದ್ದೇಶಪೂರ್ವಕವಾಗಿ, ತೊಂದೆರೆಯನ್ನುಂಟುಮಾಡಬೇಕೆಂಬ ದುರುದ್ದೇಶದಿಂದಲೇ ನಿರ್ಲಕ್ಷ್ಯದಿಂದ ವರ್ತಿಸಿದರೆ, ಆಗ ಮಾತ್ರ ಅದು ದಂಡನೀಯ ಅಪರಾಧವಾಗುತ್ತದೆ. ಇದಕ್ಕೆ “mens rea” ಎನ್ನುತ್ತಾರೆ. ಜೇಕಬ್ ಮ್ಯಾಥ್ಥ್ಯೂ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯ ನಾಗರಿಕ ಕಾನೂನಿನ ದೃಷ್ಟಿಯಲ್ಲಿ ಮತ್ತು ಅಪರಾಧ ಕಾನೂನಿನ ದೃಷ್ಟಿಯಲ್ಲಿ ನಿರ್ಲಕ್ಷ್ಯ/ಅಜಾಗರೂಕತೆಗಿರುವ ವ್ಯತ್ಯಾಸವನ್ನು ಮತ್ತೊಮ್ಮೆ ಒತ್ತಿ ಹೇಳಿತು. ಹೀಗಾಗಿ, ದಂಡ ಸಂಹಿತೆಯ ಕಲಂ 304-ಎ ರಡಿ ಒಬ್ಬ ವೈದ್ಯನನ್ನು ಅಪರಾಧಿಯೆಂದು ಗುರುತಿಸಬೇಕಾದಲ್ಲಿ ಅದು ಉದ್ದೇಶಪೂರ್ವಕ ನಿರ್ಲಕ್ಷ್ಯವಾಗಿರಬೇಕು. ವೈದ್ಯನ್ನೊಬ್ಬನಿಗೆ ತನ್ನ ಬಳಿ ಬಂದ ರೋಗಿಗೆ ತೊಂದರೆಯಾಗಲಿ ಎಂಬ ಉದ್ದೇಶವಿರುವುದು ಬಹುಶಃ ಅಸಾಧ್ಯ. ಹೀಗಾಗಿ, ಅದನ್ನು ದಂಡನೀಯ ನಿರ್ಲಕ್ಷ್ಯವೆಂದು ಪರಿಗಣಿಸಬೇಕಾದಲ್ಲಿ ಆ ನಿರ್ಲಕ್ಷ್ಯ ತೀವ್ರವಾದ ನಿರ್ಲಕ್ಷ್ಯವಾಗಿರಬೇಕು (Gross Negligence) ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. “ತೀವ್ರ” ಎಂಬ ಪದವನ್ನು ಕಲಂ 304-ಎ ನಲ್ಲಿ ಬಳಸಲಾಗಿಲ್ಲದಿದ್ದರೂ, ಅಂತಹ ನಿರ್ಲಕ್ಷ್ಯವನ್ನಷ್ಟೇ ಕಾನೂನು ಅಪರಾಧವೆಂದು ಪರಿಗಣಿಸುತ್ತದೆ.

ವೈದ್ಯನೊಬ್ಬ ಅಜಾಗರೂಕತೆಯಿಂದ ವರ್ತಿಸಿದ್ದಾನೆಯೇ ಇಲ್ಲವೇ ಎಂದು ಪರಿಗಣಿಸುವ ಸಂದರ್ಭದಲ್ಲಿ ಗಮನದಲ್ಲಿರಿಸಿಕೊಳ್ಳಬೇಕಾದ ಅಂಶವೇನೆಂದರೆ, ಒಬ್ಬ ಸಾಮಾನ್ಯ ಜ್ಞಾನವುಳ್ಳ ವೈದ್ಯ ಆ ಸಂದರ್ಭದಲ್ಲಿ ಸಾಮಾನ್ಯವಾಗಿ ಏನು ಕಾಳಜಿ ವಹಿಸುವನೋ ಆ ಕಾಳಜಿಯನ್ನು ಈ ವೈದ್ಯ ವಹಿಸಿದ್ದಾನೋ ಇಲ್ಲವೋ ಎಂಬುದಷ್ಟೇ. ತನ್ನ ರೋಗಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕೆಂಬ ಯೋಜನೆ ಮಾಡುವ ಸ್ವಾತಂತ್ರ್ಯ ವೈದ್ಯನಿಗಿರುತ್ತದೆ. ಕ್ರಿಮಿನಲ್ ಮೊಕದ್ದಮ್ಮೆಯ ತೂಗುಗತ್ತಿ ತನ್ನ ತಲೆಯ ಮೇಲೆ ತೂಗುತ್ತಿದ್ದರೆ ಯಾವ ವೈದ್ಯನು ಹೆದರಿಕೆಯಿಲ್ಲದೆ ಚಿಕಿತ್ಸೆ ಕೊಡಬಹುದು ಹೇಳಿ? ಹಾಗೊಂದು ವೇಳೆ ಆದರೆ ಇದರ ನಷ್ಟವನ್ನು ಸಮಾಜ ಭರಿಸಬೇಕಾಗುತ್ತದೆ. ಹೀಗಾಗಿ, ವೈದ್ಯಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ವೈದ್ಯಕೀಯ ವೃತ್ತಿ ಸ್ವಾತಂತ್ರ್ಯವನ್ನು ಕಾನೂನು ಗೌರವಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಅಷ್ಟೇ ಅಲ್ಲದೆ, ನಿರ್ಲಕ್ಷ್ಯ ವೈದ್ಯರಿಂದ ಆಗಿದೆ ಎಂದು ಸಾಬೀತುಪಡಿಸುವ ಹೊರೆ ಯಾರು ದೂರು ಸಲ್ಲಿಸುತ್ತಾರೆಯೋ ಅವರ ಮೇಲೆಯೇ ಇರುತ್ತದೆ.

ಒಂದು ಪ್ರಕರಣದಲ್ಲಿ ವೈದ್ಯಕೀಯ ನಿರ್ಲಕ್ಷ್ಯವಾಗಿದೆಯೋ ಇಲ್ಲವೋ ಎಂಬ ತರ್ಕಬದ್ಧ ನಿರ್ಣಯಕ್ಕೆ ಬರಲು ಒಬ್ಬ ಪೊಲೀಸ್ ಅಧಿಕಾರಿಗಾಗಲಿ, ನ್ಯಾಯಾಧೀಶನಿಗಾಗಲಿ ಅಗತ್ಯ ವೈದ್ಯಕೀಯ ಜ್ಞಾನವಾಗಲಿ, ಅನುಭವವಾಗಲಿ ಇಲ್ಲ. ಹೀಗಾಗಿಯೇ, ಒಬ್ಬ ವೈದ್ಯನ ಮೇಲೆ ನಿರ್ಲಕ್ಷ್ಯವೆಂಬ ದೂರು ಸಲ್ಲಿಕೆಯಾದ ಕೂಡಲೇ ಪೊಲೀಸರು ಪ್ರಥಮ ವರ್ತಮಾನ ವರದಿ (FIR) ಯನ್ನು ದಾಖಲಿಸುವಂತಿಲ್ಲ. FIR ದಾಖಲಿಸುವ ಮುನ್ನ ಮತ್ತೊಬ್ಬ ನುರಿತ ಸರ್ಕಾರಿ ವೈದ್ಯನೊಬ್ಬನ ಸ್ವತಂತ್ರ ವೈದ್ಯಕೀಯ ಅಭಿಪ್ರಾಯವನ್ನು ಪಡೆದು ಅದರ ಆಧಾರದ ಮೇಲೆ ಮುಂದೆ ಕ್ರಮ ಕೈಗೊಳ್ಳಬೇಕು. ನ್ಯಾಯಾಲಯಕ್ಕೆ ಯಾವುದೇ ಖಾಸಗಿ ದೂರು ಸಲ್ಲಿಸುತ್ತಿದ್ದಲ್ಲಿ ದೂರುದಾರ ತನ್ನ ದೂರಿನ ಜೊತೆ ನಿರ್ಲಕ್ಷ್ಯವನ್ನು ಸಮರ್ಥಿಸುವ ಮತ್ತೊಬ್ಬ ಅರ್ಹ ವೈದ್ಯನೊಬ್ಬನ ವೈದ್ಯಕೀಯ ಅಭಿಪ್ರಾಯವನ್ನು ಸಲ್ಲಿಸಬೇಕು. ಇಲ್ಲವಾದಲ್ಲಿ ನ್ಯಾಯಾಲಯ ಆ ದೂರನ್ನು ತಿರಸ್ಕರಿಸಬೇಕು.

ಸಾಮಾನ್ಯವಾಗಿ ದೂರೊಂದನ್ನು ಸಲ್ಲಿಸಿದ ಕೂಡಲೇ ಅದರ ಸತ್ಯಾಸತ್ಯತೆಯ ಅನ್ವೇಷಣೆಯವರೆಗೂ ಹೋಗದೆ, ಅಪರಾಧವನ್ನು ತೋರುವ ಅಂಶಗಳು ದೂರಿನಲ್ಲಿ ಕಂಡುಬಂದಲ್ಲಿ ಪ್ರಥಮ ವರ್ತಮಾನ ವರದಿಯನ್ನು ಕಡ್ಡಾಯವಾಗಿ ದಾಖಲಿಸಲೇಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ಐದು ಸದಸ್ಯರ ಸಂವಿಧಾನ ಪೀಠ ಲಲಿತಾ ಕುಮಾರಿ ಪ್ರಕರಣದಲ್ಲಿ (2014) 2 SCC 1 ನಿರ್ದೇಶಿಸಿದೆ. ಆದರೆ, ಜಾಕೋಬ್ ಮಾಥ್ಯು ಪ್ರಕರಣದಲ್ಲಿ ಸೂಚಿಸಿದಂತೆ ಪೂರ್ವಭಾವಿ ತನಿಖೆ ನಡೆಸಿ, ಮತ್ತೊಬ್ಬ ವೈದ್ಯನ ಅಭಿಪ್ರಾಯ ಪಡೆದ ನಂತರವೇ FIR ದಾಖಲಿಸಬೇಕು ಎಂದು ಸ್ಪಷ್ಟಪಡಿಸಿದೆ. 2020 ರಲ್ಲಿ ಈ ರೀತಿಯ ಮೊದಲೇ ಪ್ರಾಥಮಿಕ ಅಭಿಪ್ರಾಯ ಪಡೆಯದೇ ದಾಖಲಿಸಿದ್ದ ಕ್ರಿಮಿನಲ್ ಮೊಕದ್ದಮ್ಮೆಯನ್ನು ಸರ್ವೋಚ್ಛ ನ್ಯಾಯಾಲಯ ಅಂಜನಾ ಅಗ್ನಿಹೋತ್ರಿ ಕೇಸಿನಲ್ಲಿ ವಜಾಗೊಳಿಸಿತು.

ವೈದ್ಯಕೀಯ ಸೇವೆ ಎನ್ನುವುದು ಒಂದು ಗ್ರಾಹಕ ಸೇವೆಯಾಗಿ ಪರಿಗಣಿಸುವುದರಿಂದ, ವೈದ್ಯಕೀಯ ನಿರ್ಲಕ್ಷ್ಯವನ್ನು ಗ್ರಾಹಕ ಕಾನೂನುಗಳ ಅಡಿಯಲ್ಲಿ ತರಬಹುದು ಎಂದು ಹಲವು ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.

ಹೀಗಾಗಿ, ಸಾಮಾನ್ಯವಾಗಿ ತಾನು ತೆಗೆದುಕೊಳ್ಳಬೇಕಾದ ಕಾಳಜಿಯನ್ನೂ ತೆಗೆದುಕೊಳ್ಳದಿದ್ದರೆ ವ್ಯಕ್ತಿಯ ಸಾವು ಖಚಿತ ಎಂದು ತಿಳಿದೂ ಉದ್ದೇಶಪೂರ್ವಕವಾಗಿ ಕಾಳಜಿಯನ್ನು ವಹಿಸದೆ ತೀವ್ರ ನಿರ್ಲಕ್ಷ್ಯದಿಂದ ನಡೆದುಕೊಂಡಲ್ಲಿ ಮಾತ್ರ ವೈದ್ಯ ದಂಡನೀಯ ನಿರ್ಲಕ್ಷ್ಯವನ್ನೆಸಗಿದ್ದಾನೆ ಎನ್ನಬಹುದು.  ಯಾವುದೇ ಒಬ್ಬ ವೈದ್ಯನ ಮೇಲೆ ಕೇವಲ ಚಿಕಿತ್ಸೆ ಪರಿಣಾಮಕಾರಿಯಾಗಲಿಲ್ಲ ಎಂಬ ಕಾರಣಕ್ಕೆ ಪ್ರಕರಣವನ್ನು ದಾಖಲಿಸಲು ಸಾಧ್ಯವಿಲ್ಲ. ಇಲ್ಲವಾದಲ್ಲಿ, “ವೈದ್ಯೋ ನಾರಾಯಣೋ ಹರಿ:” ಎಂಬ ಮಾತಿಗೆ ಬೆಲೆಯಿಲ್ಲದಂತಾಗುತ್ತದೆ.

ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.

ಸುಬ್ರಹ್ಮಣ್ಯ ಕೌಶಿಕ್ ಆರ್.ಎಸ್. ರವರು ಬೆಂಗಳೂರು ಇನ್ಸ್ಟಿಟಿಯೂಟ್ ಆಫ್ ಲೀಗಲ್ ಸ್ಟಡೀಸ್ ನಲ್ಲಿ ತಮ್ಮ ಕಾನೂನು ಪದವಿಯನ್ನು ವ್ಯಾಸಂಗ ಮಾಡಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ವಕೀಲರಾಗಿದ್ದಾರೆ. ಕೌಶಿಕ್ ರವರು ಮುಖ್ಯವಾಗಿ ಸಿವಿಲ್, ರಿಟ್ ಅರ್ಜಿಗಳು, ಆರ್ಬಿಟ್ರೇಷನ್ ಕೇಸುಗಳನ್ನು ಕೆಳಹಂತದ ನ್ಯಾಯಾಲಯಗಳು ಮತ್ತು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಹಲವು ಕಾನೂನು ಸಂಸ್ಥೆಗಳ ಜತೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Spread the love