ಉಪನ್ಯಾಸಗಳು

ಉಪನ್ಯಾಸ ಮಾಲಿಕೆ – 8: “75ರ ಸ್ವಾತಂತ್ರದ ಹೊಸ್ತಿಲಲ್ಲಿ ಭಾರತ” – ಪ್ರೊ. ಡಾ. ಸಂದೀಪ್‌ ಶಾಸ್ತ್ರಿ

ಉಪನ್ಯಾಸಕರು: ಪ್ರೋ. ಡಾ. ಸಂದೀಪ್‌ ಶಾಸ್ತ್ರಿ, ಕುಲಪತಿಗಳು, ಜಗ್ರನ್‌ ಲೇಕ್‌ ಸಿಟಿ ವಿಶ್ವವಿದ್ಯಾಲಯ, ಭೂಪಾಲ್‌

ಬೆಂಗಳೂರು ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕವು ಆಯೋಜನೆ ಮಾಡಿದ 75ನೇ ಸ್ವತಂತ್ರದ ಅಮೃತ ಮಹೋತ್ಸವ ಪ್ರಯುಕ್ತ ವಿಚಾರ ಕಲರವದಲ್ಲಿ 8ನೇ ದಿನದ ವಿಷಯ “75ರ ಸ್ವಾತಂತ್ರದ ಹೊಸ್ತಿಲಲ್ಲಿ ಭಾರತ” ಉಪನ್ಯಾಸ ನೀಡಿದ್ದು ಪ್ರೊ. ಡಾ. ಸಂದೀಪ್‌ ಶಾಸ್ತ್ರಿ, ಕುಲಪತಿಗಳು, ಜಗ್ರನ್‌ ಲೇಕ್‌ ಸಿಟಿ ವಿಶ್ವವಿದ್ಯಾಲಯ, ಭೂಪಾಲ್‌.

ರಾಜ್ಯಶಾಸ್ತ್ರ ಸಂಶೋಧಕರು ಮತ್ತು ಚುನಾವಣಾ ಅಧ್ಯಯನ ತಜ್ಞರು ಆಗಿರುವ ಪ್ರೋ. ಡಾ. ಸಂದೀಪ್‌ ಶಾಸ್ತ್ರಿಗಳು ತಮ್ಮ ಬಿ.ಎ. ಮತ್ತು ಎಂ.ಎ. ವ್ಯಾಸಂಗವನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಡೆಯುದರ ಜೊತೆಗೆ 25 ವರ್ಷಗಳ ಕಾಲ ಅಲ್ಲಿ ಅಧ್ಯಾಪಕಾರಾಗಿ ಸೇವೆ ಸಲ್ಲಿಸಿರುತ್ತಾರೆ.  

ಸ್ವಾತಂತ್ರ್ಯದ 75 ವರ್ಷಗಳಲ್ಲಿ ನಾವು ಹೇಗೆ ಅದನ್ನ ಉಪಯೋಗ ಮಾಡಿಕೊಂಡಿದ್ದೇವೆ, ಈ ಸ್ವಾತಂತ್ರ್ಯವು ಯಾರ ಸ್ವಾತಂತ್ರ್ಯ, ಯಾವುದಕ್ಕಾಗಿ ಸ್ವಾತಂತ್ರ್ಯ ಮತ್ತು ಯಾರಿಂದ ಸ್ವಾತಂತ್ರ್ಯ ಎಂಬುದರ ಕುರಿತಾಗಿ ಆತ್ಮಾವಲೋಕನ ಮಾಡುವ ಸಂದರ್ಭ ಇದಾಗಿದೆ ಎಂದು ಹೇಳುತ್ತಾ ಉಪನ್ಯಾಸ ಆರಂಭಿಸಿದ ಶ್ರೀಯುತರು, ಜಾನ್ ಸ್ಟುವರ್ಟ್ ಮಿಲ್ರವರ ಉಲ್ಲೇಖ “Liberty From or Liberty For?”, ಅಂದರೆ “ಯಾವುದರಿಂದ ಸ್ವಾತಂತ್ರ್ಯ ಅಥವಾ ಯಾವುದಕ್ಕಾಗಿ ಸ್ವಾತಂತ್ರ್ಯ?”, ಪ್ರಸ್ತುತ ಪಡಿಸುತ್ತಾ ಯಾವುದು ಬಹಳ ಮುಖ್ಯ ಎಂಬುದನ್ನು ನಾವೆಲ್ಲರೂ ವಿಮರ್ಶೆ ಮಾಡಬೇಕು ಎಂದರು.

ಈ ಸ್ವಾತಂತ್ರ್ಯದ ಮಹೋತ್ಸವದ ಸಂದರ್ಭದಲ್ಲಿ, ಪ್ರಜೆಗಳಾಗಿ ಮತ್ತು ಒಂದು ದೇಶವಾಗಿ ನಾವು ಏನನ್ನು ಸಾಧಿಸಿದ್ದೇವೆ ಎಂದು ವಿಶ್ಲೇಷಣೆ ಮಾಡಬೇಕಾಗಿದೆ. ಸ್ವಾತಂತ್ರ್ಯ ಮಹೋತ್ಸವ ಒಂದು ಆಚರಣೆ ಆಗಿರದೆ ನಿರಂತರ ಪ್ರಕ್ರಿಯೆ ಆಗಿರಬೇಕು ಎಂದು ಹೇಳುತ್ತಾ 75 ವರ್ಷಗಳ ಒಂದು ರಾಜಕೀಯ ಪ್ರಗತಿ ಪತ್ರ ಅಥವಾ ರಾಜಕೀಯ ಲೆಕ್ಕಪತ್ರದ ಚರ್ಚೆಯನ್ನು ಮುಂದಿಟ್ಟರು.

ರಾಜಕೀಯ ಪ್ರಗತಿ ಪತ್ರ/ಲೆಕ್ಕಪತ್ರದಲ್ಲಿನ 5 ಯಶಸ್ಸುಗಳನ್ನು ವಿವರಿಸುತ್ತಾ, ಶ್ರೀಯುತರು ಮೊದಲಿಗೆ ಪ್ರಜಾಪ್ರಭುತ್ವದಲ್ಲಿನ ಹೆಚ್ಚಿನ ಭಾಗವಹಿಸುವಿಕೆ ಈ 75 ವರ್ಷಗಳ ಯಶಸ್ಸಿನ ಮೊದಲ ಹೆಜ್ಜೆಯಾಗಿದೆ ಎಂದರು. 2019ರ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದನ್ನು ಹೇಳುತ್ತಾ ನಮ್ಮ ದೇಶದಲ್ಲಿ ಬಡವರು, ಗ್ರಾಮೀಣ ಭಾಗದವರು, ಅನಕ್ಷರಸ್ತರು ಹೆಚ್ಚಾಗಿ ಚುನಾವಣೆಯಲ್ಲಿ ಭಾಗವಹಿಸುತ್ತಾರೆ ಮತ್ತು ಎಲ್ಲ ಆರ್ಥಿಕ ಹಿನ್ನೆಲೆಯ ಜನರ ಭಾಗವಹಿಸುವಿಕೆ ಮೊದಲ ಶ್ಲಾಘನೀಯ ವಿಚಾರ ಎಂದರು.

ಎರಡನೇಯದಾಗಿ, ಶ್ರೀಯುತರು ತಮ್ಮ ಬಾಲ್ಯದ ಘಟನೆಯೊಂದನ್ನು ಮೆಲುಕು ಹಾಕುತ್ತಾ ಹೇಗೆ ಚುನಾವಣೆಗಳಲ್ಲಿ ಸ್ಪರ್ಧೆ ಹೆಚ್ಚಾಗಿದೆ ಎಂದು ವಿವರಿಸಿದರು. 1968ರಲ್ಲಿ, ಕಾಂಗ್ರೆಸ್‌ ಪಕ್ಷದ “ವಿರೋಧ ಪಕ್ಷಕ್ಕೆ ಮತ ಹಾಕಿ, ವಿರೋಧ ಪಕ್ಷ ನಿಮಗೆ ಕಂಡಲ್ಲಿ” ಎಂಬ ಭಿತ್ತಿಚಿತ್ರ ಅರ್ಥವಾಗದೇ ಇದ್ದಾಗ ಅವರ ತಂದೆ ವಿವರಿಸಿದರಂತೆ, ಆಗ ದೇಶದಲ್ಲಿ ಇದ್ದದ್ದು ಒಂದೇ ಅತಿದೊಡ್ಡ ಪ್ರಮುಖ ರಾಜಕೀಯ ಪಕ್ಷ, ಅದುವೇ ಕಾಂಗ್ರೆಸ್.‌ ಅಂದರೆ ಆಡಳಿತ ಪಕ್ಷವು ಅಷ್ಟರಮಟ್ಟಿಗೆ ಬಲಿಷ್ಠವಾಗಿತ್ತು. ಹಾಗೆ ನೋಡಿದರೆ, ಇಂದಿನ ಚುನಾವಣೆಗಳಲ್ಲಿ ಹೆಚ್ಚಿನದಾಗಿ ಸ್ಪರ್ಧೆಯನ್ನು ಕಾಣಬಹುದು, ಇಂದಿನ ದಿನಮಾನದಲ್ಲಿ ಯಾವ ಪಕ್ಷವೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಮುಂದುವರೆದು, ಶ್ರೀಯುತರು ಹೇಗೆ ಸ್ಪರ್ಧೆಯ ಜೊತೆಗೆ ನಮ್ಮ ದೇಶದಲ್ಲಿ ಅಧಿಕಾರದ ಶಾಂತಿಯುತ ವರ್ಗಾವಣೆಯನ್ನು ಕಾಣಬಹುದು ಎಂದು ವಿವರಿಸಿದರು.

ಮೂರನೇಯದಾಗಿ, ಒಂದು ಸ್ಪರ್ಧಾತ್ಮಕ ವ್ಯವಸ್ಥೆಯು ನಮ್ಮ ಪ್ರಜಾಪ್ರಭುತ್ವದ ಯಶಸ್ಸು ಎಂದ ಶ್ರೀಯುತರು, ಇಂದಿನ ದಿನಮಾನದಲ್ಲಿ ಒಂದೇ ಪಕ್ಷದ ಪ್ರಾಬಲ್ಯ ವ್ಯವಸ್ಥೆಯನ್ನು ಕಾಣಲು ಸಾಧ್ಯವಿಲ್ಲ, ದೇಶದ ತುಂಬ ಹಲವು ಪಕ್ಷಗಳ ಸ್ಪರ್ಧೆಯನ್ನು ಕಾಣಬಹುದಾಗಿದೆ ಮತ್ತು ನಮ್ಮ ಪ್ರಜೆಗಳು ಎಷ್ಟು ಪ್ರಜ್ಞಾವಂತರಾಗಿ ಇದ್ದಾರೆ ಎಂದರೆ, ಕೇಂದ್ರದಲ್ಲಿ ಒಂದು ಪಕ್ಷಕ್ಕೆ,ರಾಜ್ಯದಲ್ಲಿ ಮತ್ತೊಂದು ಪಕ್ಷಕ್ಕೆ ಮತದಾನ ಮಾಡಿರುವುದನ್ನು ಕಾಣಬಹುದು ಎಂದರು. ಅನ್ಯ ರಾಜ್ಯಗಳಲ್ಲಿ ಇಂತಹ ಬೆಳವಣಿಗೆ ಇತ್ತೀಚೆಗೆ ಕಾಣ ಸಿಕ್ಕರೂ ನಮ್ಮ ಕರ್ನಾಟಕದಲ್ಲಿ 1984ರಲ್ಲಿ, ಜನತಾ ಪಕ್ಷ ಅಧಿಕಾರಕ್ಕೆ ಬಂದರೆ ಅದೇ ವರ್ಷ ಲೋಕಸಭೆಯ ಚುನಾವಣೆಯಲ್ಲಿ ರಾಜೀವ ಗಾಂಧಿ ಸರ್ಕಾರ ಬಹುಮತ ಗಳಿಸಿತ್ತು ಎಂದು ನೆನಪು ಮಾಡಿಕೊಂಡರು. ಹಾಗೇಯೆ, ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ದರೂ, ಆದರೆ ಅರ್ಧಕ್ಕಿಂತ ಜಾಸ್ತಿ ರಾಜ್ಯಗಳಲ್ಲಿ ಬಿಜೆಪಿ ಮತ್ತು ಎನ ಡಿ ಯ ಬಿಟ್ಟು ಬೇರೆ ಪಕ್ಷಗಳನ್ನು ಕಾಣಬಹುದು ಎಂದರು. ಹೀಗೆ ಒಂದು ಸ್ಪರ್ಧಾತ್ಮಕ ಚುನಾವಣಾ ವ್ಯವಸ್ಥೆ ಇಲ್ಲಿ ಹುಟ್ಟಿದೆ ಎಂದು ಹೇಳಿದರು.

ನಾಲ್ಕನೇಯದಾಗಿ, ರಾಜ್ಯಗಳು ದೇಶದ ಕೇಂದ್ರ ಬಿಂದುವಾಗಿವೆ, ಕೇಂದ್ರ ಅಲ್ಲ ಎಂದು ಪ್ರಜಾಪ್ರಭುತ್ವದ ಯಶಸ್ಸನ್ನು ವಿವರಿಸುತ್ತಾ ಹೇಳಿದರು. ಚುನಾವಣೆಯಲ್ಲಿ ಸೋತ 3 ತಿಂಗಳುಗಳ ನಂತರ ವಾಜಪೇಯಿ ಅವರು ಆಡಿದ ಮಾತು ʼಗೆದ್ದವರಿಗೆ ಯಾಕೆ ಗೆದ್ವಿ ಅಂತ ಗೊತ್ತಿಲ್ಲ, ಸೋತವರಿಗೆ ಯಾಕೆ ಸೋತ್ವಿ ಅಂತ ಗೊತ್ತಿಲ್ಲ’ ಎಂದ ಮಾತನ್ನು ಜ್ಞಾಪಿಸಿಕೊಂಡರು. ಇಂದು ಲೋಕಸಭೆಯ ಚುನಾವಣೆಯಲ್ಲಿ, 28 ರಾಜ್ಯಗಳಲ್ಲಿ ಬೇರೆಬೇರೆ ಫಲಿತಾಂಶಗಳನ್ನು ನೋಡಬಹುದೆಂದು ಹೇಳುತ್ತಾ ಶ್ರೀಯುತರು ದಕ್ಷಿಣ ಭಾರತದ ರಾಜ್ಯಗಳ ಉದಾಹರಣೆ ಕೊಟ್ಟರು. ದಕ್ಷಿಣ ಭಾರತದ 5 ರಾಜ್ಯಗಳಲ್ಲಿಯೇ ಪ್ರಾದೇಶಿಕವಾಗಿ ಹಲವು ಮೈತ್ರಿ ಪಕ್ಷಗಳ ಜೊತೆಗೆ ಪ್ರಮುಖ ಪಕ್ಷಗಳನ್ನು ಕಾಣಬಹುದು. ಪ್ರತಿಯೊಂದು ರಾಜ್ಯದಲ್ಲಿ ಬೇರೆ-ಬೇರೆ ತರದ ಫಲಿತಾಂಶವನ್ನು ಕಾಣಬಹುದು. ರಾಷ್ಟ್ರ ರಾಜಕಾರಣವನ್ನು ಅರ್ಥಮಾಡಿಕೊಳ್ಳಬೇಕಾದರೆ ರಾಜ್ಯ ರಾಜಕಾರಣ ಅರ್ಥ ಮಾಡಿಕೊಳ್ಲುವುದು ಅತಿ ಅವಶ್ಯ ಎಂದು ಹೇಳತ್ತಾ 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಮಂತ್ರಿಯಾದಾಗ, ಒಂದು ರಾಷ್ಟ್ರೀಯ ಪಕ್ಷ, ಚುನಾವಣೆಯ ಎಂಟು ತಿಂಗಳ ಮೊದಲು ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ, ಆ ಅಭ್ಯರ್ಥಿ ಮುಖ್ಯಮಂತ್ರಿ ಆಗಿದ್ದುಕೊಂಡೇ ಸ್ಪರ್ಧಿಸಿ ವಿಜಯ ಸಾಧಿಸಿದ ಒಂದು ಉದಾಹರಣೆಯೂ ರಾಜ್ಯಗಳು ನಮ್ಮ ದೇಶದ ಕೇಂದ್ರಬಿಂದು ಎಂದು ಹೇಳುವುದಕ್ಕೆ ಸಾಕು ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

ಕೊನೆಯ ಮತ್ತು ಐದನೇಯ ಯಶಸ್ಸಾಗಿ ಪ್ರಜಾಪ್ರಭುತ್ವದಲ್ಲಿನ ನಾಗರಿಕ ಸಂಸ್ಥೆಗಳ ಹೆಚ್ಚಿನ ಉಪಸ್ಥಿತಿ/ಪಾತ್ರ ಎಪ್ಪತ್ತೈದು ವರ್ಷಗಳಲ್ಲಿ ಹೆಚ್ಚಾಗಿ ಕಾಣಬಹುದೆಂದು ಸಂಕ್ಷಿಪ್ತವಾಗಿ ತಿಳಿಸಿದರು.

75 ವರ್ಷದ ಸ್ವಾತಂತ್ರ್ಯದಲ್ಲಿ ಪ್ರಜಾಪ್ರಭುತ್ವದ 5 ಸವಾಲುಗಳನ್ನು ಪ್ರಸ್ತುತ ಪಡಿಸಿದ ಶ್ರೀಯುತರು ಮೊದಲನೇಯ ಸವಾಲಾಗಿ ಸಾಮಾನ್ಯರ ನಿರೀಕ್ಷೆ ಮತ್ತು ಅನುಭವ ಅಥವಾ ಪಡೆಯುವ ಫಲಿತಾಂಶದಲ್ಲಿ ಇದ್ದ ವ್ಯತ್ಯಾಸದ ಕುರಿತು ಉದಾಹರಣೆ ಸಮೇತ ವಿವರಿಸಿದರು. ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಯ ಪ್ರಚಾರಗಳಲ್ಲಿ ಭಾಗವಹಿಸಿದ್ದ ಶ್ರೀಯುತರು ಬಹು ದೊಡ್ಡ ಬದಾಲವಣೆಯ ನಿರೀಕ್ಷೆಯಲ್ಲಿ ಎಲ್ಲರೂ ರಾತ್ರಿಯೆಲ್ಲಾ ನಿದ್ದೆಬಿಟ್ಟು ಕಾದಾಗ, ಫಲಿತಾಂಶ ಬೇರೆಯದೇ ಆಗಿತ್ತು. ಹೀಗೆ, ನಿರಿಕ್ಷೆ ಮತ್ತು ಫಲಿತಾಂಶದ ನಡುವಿನ ವ್ಯತ್ಯಾಸ ಪ್ರಜಾಪ್ರಭುತ್ವದ ದೊಡ್ಡ ಸವಾಲು ಎನ್ನುತ್ತಾ ಮುಂದೆವರೆದು, ಇದರಿಂದ ಜನರಿಗೆ ಪ್ರಜಾಪ್ರಭುತ್ವದಲ್ಲಿನ ನಂಬಿಕೆ ಕಡಿಮೆ ಆಗಿಲ್ಲ ಮತ್ತು ಭಾರಿ ಬಹುಮತದಲ್ಲಿ ಆಯ್ಕೆಯಾದ ಪಕ್ಷ 5 ವರ್ಷಗಳ ನಂತರ ಸೋಲನುಭವಿಸುತ್ತೆ ಎಂದು ನಿರೀಕ್ಷೆ ಮತ್ತು ಫಲಿತಾಂಶದ ನಡುವಿನ ವ್ಯತ್ಯಾಸಕ್ಕೆ ಇನ್ನೊಂದು ಉದಾಹರಣೆ ಕೊಟ್ಟರು.

ಎರಡನೇಯ ಸವಾಲಾಗಿ ತೀವ್ರವಾದ ಧ್ರುವೀಕರಣ(Polarization)ವನ್ನು ಹೆಸರಿಸಿದ ಶ್ರೀಯುತರು, ಇಂದಿನ ದಿನ ಸಾಮಾಜಿಕ ಜಾಲತಾಣಗಳಲ್ಲಿ ಏನಾದ್ರು ಬರಿಬಹುದಾಗಿದೆ, ಯಾಕೆ ಈ ಧ್ರುವೀಕರಣ ಉಂಟಾಗುತ್ತುದೆ ಎಂದು ನಮ್ಮನ್ನ ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದರು. ಇದರಲ್ಲಿ ಸಮೂಹ ಮಾಧ್ಯಮಗಳ ಪಾತ್ರಗಳ ಕುರಿತು ಹೇಳುತ್ತಾ ಈ ದಿನ ವಿಚಾರಗಳು ಚರ್ಚೆ ಆಗಿತ್ತಿಲ್ಲ ಎಂದು ವಿಶಾದಿಸಿದರು. ಹಾಗೆ ಮುಂದುವರೆದು ಮೂರನೇಯ ಸವಾಲೆಂದರೆ ಇಲ್ಲಿ ಒಬ್ಬ ವ್ಯಕ್ತಿ ಯಾರು ಮತ್ತು ಅವನ ಇತಿಹಾಸ ಏನು ಎನ್ನುವುದರ ಮೇಲೆ ಯಾರಿಗೆ ಸಹಕಾರ ಕೊಡಬೇಕು ಎಂದು ಜನರು ಮೊದಲು ತೀರ್ಮಾನಿಸಿ ನಂತರ ತಮ್ಮ ತೀರ್ಮಾನ ಸಮರ್ಥಿಸಲು ದಾಖಲೆಗಳನ್ನು ಹುಡುಕುತ್ತಾರೆ ಎಂದರು. ಹಾಗೆಯೇ ನಮ್ಮ ಜನರು ಸತ್ಯಾಂಶಗಳನ್ನು ಮುಂದಿಟ್ಟಾಗ ಹೇಗೆ ಅದನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದರು.

ನಾಲ್ಕನೇಯ ಸವಾಲಾಗಿ, ನಾವು ಎಪ್ಪತ್ತೈದು ವರ್ಷಗಳಲ್ಲಿ ಕೇವಲ ಒಂದು ಚುನಾವಣೆಯ ಪ್ರಜಾಪ್ರಭುತ್ವವಾಗಿದೆವಾ ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಕೊನೆಯ ಸವಾಲಾಗಿ, ಸಮಾಜದಲ್ಲಿ ಇಂದು ನಿರಾಶಾವಾದದ ಭಾವನೆ ಕಾಣಬಹುದು ಎಂದು ಹೇಳುತ್ತಾರೆ. ಶ್ರೀಯುತರ ಪ್ರಕಾರ ಪ್ರಜಾಪ್ರಭುತ್ವದ ಗುರಿ ಏನೆಂದರೆ ಒಂದು ಭಯದಿಂದ ಮತ್ತು ಬಡತನದಿಂದ ಸ್ವಾತಂತ್ರ್ಯ. ಬಡತನವನ್ನು ನಾವು ಕೇವಲ ಆರ್ಥಿಕ ದೃಷ್ಟಿಯಿಂದ ನೋಡದೆ, ವಿಚಾರಗಳ ಮತ್ತು ಆಲೋಚನೆಯ ಬಡತನಗಳಿಂದಲೂ ನಾವು ಹೊರಬರಬೇಕಾಗಿದೆ ಮತ್ತು ಇದೆಲ್ಲವೂ, ನಮ್ಮ 75 ವರ್ಷಗಳ ಸ್ವಾತಂತ್ರ್ಯದ ಗುರಿಯಾಗಿರಬೇಕು ಎಂದು ತಮ್ಮ ಕಳಕಳಿ ವ್ಯಕ್ತಪಡಿಸಿದರು. 75ನೇ ಸ್ವಾತಂತ್ರ್ಯದ ಸಂಭ್ರಮದಲ್ಲಿ ಎಲ್ಲೆಡೆ ಕೆಳುತ್ತಿರುವ “ಆತ್ಮ ನಿರ್ಭರ ಭಾರತ” ಎಂಬ ಘೋಷಣೆಯ ಹಿನ್ನೆಲೆಯಲ್ಲಿ, ಆತ್ಮ ನಿರ್ಭರ ಭಾರತ ಯಾವ ಕಡೆ ಹೋಗುತ್ತಿದೆ, ಇದರ ಮಾರ್ಗ ಯಾವುದು ಎಂಬ ಪ್ರಶ್ನೆಗಳೊಂದಿಗೆ ರಾಷ್ಟ್ರೀಯ ಸೇವಾ ಯೋಜನೇಯ ಸ್ವಯಂ ಸೇವಕರಿಗೆ “ಆತ್ಮ ನಿರ್ಭರ ಅನ್ನೋದು ಒಂದು ಮಾನಸಿಕ ಮುಕ್ತಿಯೇ?, ಮಾನಸಿಕ ಮುಕ್ತಿ 75ರ ಸ್ವಾತಂತ್ರ್ಯ ಸಂಭ್ರಮದ ಒಂದು ಮುಖ್ಯ ಗುರಿಯಾಗ್ಬೇಕಾ?” ಎಂಬ ಪ್ರಶ್ನೆಗಳೊಂದಿಗೆ ತಮ್ಮ ಉಪನ್ಯಾಸವನ್ನು ಮುಗಿಸಿದರು.

ನಂತರ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಶ್ರೀಯುತರು, ಎಲ್ಲಿವರೆಗೂ ಒಬ್ಬ ಭ್ರಷ್ಟನನ್ನು ಬೆಂಬಲಿಸುತ್ತೇವೆ ಮತ್ತು ಒಬ್ಬ ಸಮರ್ಥನನ್ನು ಓಲೈಸುವುದಿಲ್ಲ ಅಲ್ಲಿಯವರೆಗೆ ಒಳ್ಳೆಯ ಬೆಳವಣಿಗೆ ಆಗಲು ಸಾಧ್ಯವಿಲ್ಲ ಎಂದರು. ಈ ನಿಟ್ಟಿನಲ್ಲಿ ಯುವಜನರಿಗೆ ಸಲಹೆ ನೀಡುತ್ತಾ ಭ್ರಷ್ಟರಿಗೆ ಅಧಿಕಾರ ತಾಣದಲ್ಲಿ ಅವಕಾಶವಿರಬಾರದು. ಭ್ರಷ್ಟಾಚಾರ ರಾಜಕೀಯದಲ್ಲಿ ಅಷ್ಟೇ ಅಲ್ಲ ಆಡಳಿತದಲ್ಲಿ, ಆಸ್ಪತ್ರೆಯಲ್ಲಿ, ಕಾನೂನು ಸಂಸ್ಥೆಗಳಲ್ಲಿ, ಉದ್ಯಮದಲ್ಲಿ, ವಿದ್ಯಾಸಂಸ್ಥೆಗಳಲ್ಲಿ ಹೀಗೆ ಎಲ್ಲೆಡೆ ಹೆಚ್ಚಾಗಿದೆ, ನಾವು ಎಲ್ಲಿವರೆಗೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ, ಅಲ್ಲಿಯವರೆಗೆ ರಾಜಕೀಯದಲ್ಲಿ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಿಲ್ಲ. ರಾಜಕೀಯ ಎಂಬುದು ಸಮಾಜದ ಒಂದು ಪ್ರತಿಬಿಂಬ ಎಂದು ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನೊಂದು ಪ್ರಶ್ನೆಗೆ ಉತ್ತರಿಸುತ್ತ ಶ್ರೀಯುತರು, ಭಾರತದ ಬೆಳವಣಿಗೆಗೆ ಮತ್ತು ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ಕೊಂಡೊಯ್ಯಲು ದೇಶದ ಜನ ಮತ್ತು ಯುವಜನರ ಪಾತ್ರದ ಬಗ್ಗೆ ಹೇಳಿದರು. ಭಾರತ ವಿಶ್ವಗುರು ಆಗಬೇಕೆಂದರೆ ಸ್ಥಳೀಯ ಬದಲಾವಣೆ, ಜೀವನದ ಮೌಲ್ಯಗಳಲ್ಲಿ ಬದಲಾವಣೆ ಅವಶ್ಯ ಎಂದರು. ವಿಶ್ವವೇ ಭಾರತವನ್ನು ವಿಶ್ವಗುರುವೆಂದು ಕರೆಯುವುದು ನಮ್ಮ ಗುರಿಯಾಗಿರಬೇಕು ಎಂದೂ ಹೇಳಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಆರ್.ವೇಣುಗೋಪಾಲ ಅವರು ವಹಿಸಿದ್ದರು.
ಕಾನೂನು ಸಹ ಪ್ರಾಧ್ಯಾಪಕರು ಮತ್ತು ಎನ್.ಎಸ್.ಎಸ್. ಸಂಯೋಜನಾಧಿಕಾರಿಯಾಗಿ ಡಾ.ಸತೀಶ ಗೌಡ ಎನ್ ರವರು ಉಪಸ್ಥಿತರಿದ್ದರು.

ವರದಿ : ಪ್ರಕಾಶ ಪತ್ತಾರ

ವಿ. ಸೂ. ನ್ಯಾಯನಿಷ್ಠ ಹಲವು ವಿಚಾರಧಾರೆಗಳನ್ನು ಮತ್ತು ಕಾನೂನಿನ ಮಜಲುಗಳನ್ನು ಓದುಗರ ಮುಂದಿಡಬೇಕೆಂಬ ಉದ್ದೇಶದಿಂದ ಈ ಉಪನ್ಯಾಸ ಮಾಲಿಕೆಯನ್ನು ವರದಿಯ ರೂಪದಲ್ಲಿ ಪ್ರಕಟಿಸುತ್ತಿದೆ. ಉಪನ್ಯಾಸಕರ ಅಭಿಪ್ರಾಯಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು ನ್ಯಾಯನಿಷ್ಠ ಯಾವುದೇ ರೀತಿಯಲ್ಲಿ ಅವನ್ನು ಅನುಮೋದಿಸಿಯೋ ಅಥವಾ ತಿರಸ್ಕರಿಸಿಯೋ ಇರುವುದಿಲ್ಲ.

ಪ್ರಕಾಶ ಪತ್ತಾರ ಮೂಲತಃ ಕೊಪ್ಪಳ ಜಿಲ್ಲೆಯ ಹುಲಿಗಿ ಗ್ರಾಮದವರಾಗಿದ್ದು, ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದಾರೆ.

Spread the love