ಉಪನ್ಯಾಸಗಳು

ಉಪನ್ಯಾಸ ಮಾಲಿಕೆ – 6: “ಪ್ರಜಾಪ್ರಭುತ್ವದ ಮೌಲ್ಯ ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ” – ಶ್ರೀ ರವಿ ಕುಮಾರ್ ಹೆಚ್. ಆರ್.

ಉಪನ್ಯಾಸಕರು: ಶ್ರೀ ರವಿ ಕುಮಾರ್ ಹೆಚ್ ಆರ್, ಹಿರಿಯ ಸಿವಿಲ್ ನ್ಯಾಯಾಧೀಶರು, ಉಪ ನಿರ್ದೇಶಕರು, ಕರ್ನಾಟಕ ಜ್ಯುಡೀಷಿಯಲ್ ಅಕಾಡೆಮಿ

ಬೆಂಗಳೂರು ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕವು ಆಯೋಜನೆ ಮಾಡಿದ 75ನೇ ಸ್ವತಂತ್ರದ ಅಮೃತ ಮಹೋತ್ಸವ ಪ್ರಯುಕ್ತ ವಿಚಾರ ಕಲರವದಲ್ಲಿ 6ನೇ ದಿನದ ವಿಷಯ ಪ್ರಜಾಪ್ರಭುತ್ವದ ಮೌಲ್ಯ ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ. ಉಪನ್ಯಾಸ ನೀಡಿದ್ದು ಶ್ರೀ ರವಿ ಕುಮಾರ್ ಹೆಚ್ ಆರ್, ಹಿರಿಯ ಸಿವಿಲ್ ನ್ಯಾಯಾಧೀಶರು, ಉಪ ನಿರ್ದೇಶಕರು, ಕರ್ನಾಟಕ ಜ್ಯುಡೀಷಿಯಲ್ ಅಕಾಡೆಮಿ.

ಶ್ರೀಯುತರು ನ್ಯಾಯಾಂಗದ ಮಹತ್ವವನ್ನು ಮಹತ್ವವನ್ನು ವಿವರಿಸುತ್ತಾ ಉಪನ್ಯಾಸ ಆರಂಭಿಸಿ, ಸಂವಿಧಾನದಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ, ಈ ಮೂರು ಅಂಶಗಳು ಮಹತ್ವವಾದದ್ದು, ಒಂದರಲ್ಲಿ ಇನ್ನೊಂದು ಹಸ್ತಕ್ಷೇಪ ಮಾಡುವಂತಿಲ್ಲ, ಆದರೆ ಈ ಮೂರೂ ಅಂಗಗಳಲ್ಲಿ ಶಾಸಕಾಂಗ ಅಥವಾ ಕಾರ್ಯಾಂಗ ಎಡವಿದರೆ ಮುತ್ತು ವಿಫಲತೆಯನ್ನು ತೋರಿದರೆ, ಅಲ್ಲಿ ಹಸ್ತಕ್ಷೇಪ ಮಾಡಿ, ಪ್ರಜಾಪ್ರಭುತ್ವವನ್ನು ಸಂರಕ್ಷಣೆಯನ್ನು ನ್ಯಾಯಾಂಗವು ಮಾಡುತ್ತದೆ ಎಂದು ಹೇಳಿದರು.

ಶ್ರೀಯುತರು ಈ ದಿನದ ವಿಷಯವನ್ನು ಎರಡು ವಿಭಾಗಗಳಾಗಿ ಪ್ರಸ್ತುತ ಮಾಡಿದರು. ಮೊದಲನೆಯದಾಗಿ ಪ್ರಜಾಪ್ರಭುತ್ವ ಮೌಲ್ಯಗಳು ಯಾವು ಇವೆ, ಮತ್ತು ಎರಡನೆಯದಾಗಿ ಈ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದರೆ ನಮ್ಮ ನ್ಯಾಯಾಂಗವೂ ಅಂದರೆ ಸರ್ವೋಚ್ಚ ನ್ಯಾಯಾಲಯ, ಎಲ್ಲ ಉಚ್ಚ ನ್ಯಾಯಾಲಯಗಳು, ಎಲ್ಲಾ ಜಿಲ್ಲಾ ನ್ಯಾಯಾಲಯಗಳು, ಎಲ್ಲಾ ತಾಲೂಕು ನ್ಯಾಯಾಲಯಗಳು ಯಾವ ರೀತಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದು ಹೇಗೆ ನ್ಯಾಯವನ್ನು ನೀಡುತ್ತಿದೆ ಎನ್ನುವುದರ ಬಗ್ಗೆ.

ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಮಾತನಾಡುತ್ತಾ, ಶ್ರೀ ರವಿಕುಮಾರರು ಸಂವಿಧಾನದ ಬಗ್ಗೆ ಮತ್ತು ಸಂವಿಧಾನದ ಪೀಠಿಕೆ ಹಾಗೂ ಅದರ ಮಹತ್ವದ ಬಗ್ಗೆ ಹೇಳುತ್ತಾರೆ. ಸಂವಿಧಾನದ ಪೀಠಿಕೆಯಲ್ಲಿ ಸಾರ್ವಭೌಮತೆ, ಪ್ರಜಾಸತ್ತಾತ್ಮಕತೆ, ಸಾಮಾಜಿಕ ನ್ಯಾಯ, ಜಾತ್ಯಾತೀತತೆ ಮುಂತಾದ ಮೌಲ್ಯಗಳು ಒಳಗೊಂಡಿವೆ. ಈ ದೇಶದ ಸಂಪನ್ಮೂಲ ಎಲ್ಲರಿಗೂ ಹಂಚಲ್ಪಡಬೇಕು, ಅಲ್ಲದೆ ನ್ಯಾಯ ಎನ್ನುವುದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನೂ ಒಳಗೊಂಡಂತ ಸಂಪೂರ್ಣವಾದ ನ್ಯಾಯ ಆಗಿರಬೇಕು ಎಂಬುದು ಸಂವಿಧಾನ ರಚನೆ ಮಾಡಿದವರ ಆಶಯವಾಗಿತ್ತು ಎಂದು ಹೇಳಿದರು. ಅಂತೆಯೇ ಮುಂದುವರೆದು ಸ್ವಾತಂತ್ರ್ಯದ ಬಗ್ಗೆ ಒಂದು ಮೌಲ್ಯವಾಗಿ ಅಡಕಗೊಂಡಿರುವ ಬಗ್ಗೆ ಹೇಳುತ್ತಾ, ವಾಕ್ ಸ್ವಾತಂತ್ರ್ಯ, ನಂಬಿಕೆಯ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಮುಂತಾದ ಸ್ವಾತಂತ್ರ್ಯದ ಹಲವು ಮಜಲುಗಳೂ ಸಂವಿಧಾನದ ಮೌಲ್ಯಗಳಾಗಿ ಇರುವುದನ್ನು ಹೇಳಿದರು. ಇನ್ನು ಭಾತೃತ್ವದಂತಹ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾವು ದಿನನಿತ್ಯದ ಜೇವನದಲ್ಲಿ ಅಳವಡಿಸಿಕೊಂಡಿದ್ದೇ ಆದರೆ, ಯಾವ ರೀತಿಯ ಕಲಹಗಳೂ ನಮ್ಮಲ್ಲಿ ಆಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಇನ್ನೊಂದು ಪ್ರಮುಖವಾದ ಪ್ರಜಾಪ್ರಭುತ್ವದ ಮೌಲ್ಯ ನಮ್ಮ ಸಂವಿಧಾನದಲ್ಲಿ ಇರುವುದು ಅಂದರೆ, ಸಮಾನತೆ. ಸ್ಥಾನಮಾನ, ಅವಕಾಶ, ಉದ್ಯೋಗ ಇವುಗಳೆಲ್ಲದರಲ್ಲಿ ಸಮಾನತೆಯ ಹಕ್ಕು ಇದೆ ಎಂದು ಅದನ್ನು ಮೂಲಭೂತ ಹಕ್ಕಾಗಿಯೇ ಗುರುತಿಸಲಾಗಿದೆ. ಮೂಲಭೂತ ಹಕ್ಕುಗಳನ್ನೇ ಪ್ರಜಾಪ್ರಭುತ್ವದ ಒಂದು ಮೌಲ್ಯ ಅಂತ ಗುರುತಿಸಿದರೆ, ಎಷ್ಟೊಂದು ಹಕ್ಕುಗಳನ್ನು ಮೂಲಭೂತ ಹಕ್ಕುಗಳಾಗಿ ರಕ್ಷಣೆ ಮಾಡಲಿಕ್ಕೆ ಅವಕಾಶವಿದೆ. ಸಮಾನತೆ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆ ವಿರುದ್ಧ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಮಾಜಿಕ ಹಾಗೂ ಶೈಕ್ಷಣಿಕಗಳು ಹಕ್ಕು ಮತ್ತು ಸಂವಿಧಾನಾತ್ಮಕ ಪರಿಹಾರದ ಹಕ್ಕುಗಳು, ಮುಂತಾದವುಗಳನ್ನು ಮೂಲಭೂತ ಹಕ್ಕುಗಳಾಗಿ ಸಂವಿಧಾನದಲ್ಲಿ ಹೇಳಲಾಗಿದೆ. ಈ ಎಲ್ಲಾ ಮೂಲಭೂತ ಹಕ್ಕುಗಳ ಸಂರಕ್ಷಣೆ ಮಾಡುವಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ಹಿಡಿದು ಉಳಿದೆಲ್ಲ ದೇಶದ ನ್ಯಾಯಾಲಯಗಳು ಮಹತ್ವದ ಪಾತ್ರವನ್ನುವಹಿಸಿವೆ ಎಂದು ಶ್ರೀಯುತರು ಹೇಳಿದರು.

ನಂತರ ರಾಜ್ಯ ನಿರ್ದೇಶಕ ತತ್ವಗಳ ಮಹತ್ವವನ್ನು ತಿಳಿಸುತ್ತಾ, ಇವು ಕೂಡ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಇವುಗಳು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಳಿಗೆ ಒಂದು ಮಾರ್ಗಸೂಚಿಯಾಗಿವೆ, ಇವುಗಳನ್ನು ಯಥಾವತ್ತಾಗಿ ಪಾಲಿಸಿದಲ್ಲಿ ಕಲ್ಯಾಣ ರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಬಹುದಾಗಿದೆ ಎಂದರು.

ಮುಂದುವರಿದು ಮೂಲಭೂತ ಕರ್ತವ್ಯಗಳ ಬಗ್ಗೆ ಶ್ರೀಯುತರು ತಿಳಿಸುತ್ತಾ, 42ನೇ ತಿದ್ದುಪಡಿಯಲ್ಲಿ 19 76 ರಲ್ಲಿ 10 ಮೂಲಭೂತ ಕರ್ತವ್ಯಗಳು ಮತ್ತು 2002ರಲ್ಲಿ 86ನೇ ತಿದ್ದುಪಡಿ ಮೂಲಕ 11 ಮೂಲಭೂತ ಕರ್ತವ್ಯಗಳನ್ನು ಸೇರಿಸಿರುವ ಬಗ್ಗೆ ತಿಳಿಸಿ, ನಾವು ಸಂವಿಧಾನದ ಮೂಲಭೂತ ಕರ್ತವ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ದೇಶದಲ್ಲಿ ಯಾವ ಸಮಸ್ಯೆಗಳು ಇರುವುದಿಲ್ಲವೆಂದು ತಮ್ಮ ಖಚಿತವಾದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಶ್ರೀ ರವಿಕುಮಾರರು ತಾವು ಎನ್ಎಸ್ಎಸ್ ಸಂಚಾಲಕರಾಗಿದ್ದಾಗ, 100 ವಿದ್ಯಾರ್ಥಿಗಳೊಂದಿಗೆ ಗ್ರಾಮಗಳಿಗೆ ತೆರಳಿ ಅಲ್ಲಿ ಶ್ರಮದಾನದೊಂದಿಗೆ ನೈರ್ಮಲ್ಯದ ಕಾರ್ಯ ಕೆಲಸಗಳನ್ನೂ ಶ್ರದ್ಧೆಯಿಂದ ಮಾಡಿದ್ದನ್ನು ನೆನೆಸಿಕೊಂಡರು. ಸಂಜೆಯ ತಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉಪನ್ಯಾಸಕ್ಕಿಂತ ಮೊದಲು ಗ್ರಾಮೀಣ ವ್ಯಕ್ತಿಗಳಿಗೆ ಅರ್ಥವಾಗುವ ರೀತಿಯಲ್ಲಿ ಅವರದೇ ಭಾಷೆಯಲ್ಲಿ ಕಾನೂನುಗಳ ಸೇವೆಗಳ ಜೀವನಾಂಶ, ವಿವಾಹ ವಿಚ್ಛೇದನ, ತಂದೆ-ತಾಯಿಯರನ್ನು ತಿರಸ್ಕರಿಸಿದರೆ ಅದರ ಪರಿಣಾಮ ಏನು ಅನ್ನುವುದನ್ನು ಇವುಗಳ ಬಗ್ಗೆ ವಿದ್ಯಾರ್ಥಿಗಳಿಂದ ಎಂಟು-ಹತ್ತು ಕಿರು ನಾಟಕಗಳನ್ನು ಪ್ರದರ್ಶಿಸಿ ಗ್ರಾಮೀಣ ಜನರಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಿದ್ದನ್ನೂ ಜ್ಞಾಪಿಸಿಕೊಂಡರು. ಅಲ್ಲದೆ, ಮೂಲಭೂತ ಕರ್ತವ್ಯದಲ್ಲಿ ಬರುವ ಅಂಶಗಳನ್ನು ಈ ರೀತಿ ಕಾರ್ಯಗಳಿಂದ ಎಲ್ಲರಿಗೂ ತಿಳಿಸಬೇಕು, ಅಂದರೆ ಮಾತ್ರ ಹಳ್ಳಿಯ ಜನರಿಗೆ ಮತ್ತು ಸಾಮಾನ್ಯ ಜನರಿಗೆ ಮೂಲಭೂತ ಹಕ್ಕುಗಳ ಬಗ್ಗೆ ತಿಳಿಯುತ್ತದೆ ಎಂದರು. ಅಷ್ಟೇ ಅಲ್ಲದೆ, ಶಿಕ್ಷಣದ ಮಹತ್ವವನ್ನು ತಿಳಿಸುತ್ತಾ ತಮ್ಮದೇ ಜೀವನದ ದೃಷ್ಟಾಂತವನ್ನು ನೀಡುತ್ತಾ, ಶಿಕ್ಷಣವು ಯಾವ ರೀತಿಯಲ್ಲಿ ಅವರ ಜೀವನದಲ್ಲಿ ಬದಲಾವಣೆ ತಂದಿತು ಎಂದು ವಿವರಿಸುತ್ತಾ, ಶಿಕ್ಷಣವು ಒಂದು ಶಕ್ತಿ ಇದ್ದಂತೆ ಎಂದು ಹೇಳಿದರು. ಹೀಗೆ ಹಲವು ಪ್ರಮುಖವಾದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಮ್ಮ ಉಪನ್ಯಾಸದ ಮೊದಲನೆಯ ಭಾಗದಲ್ಲಿ ವಿವರಿಸಿದರು.

ತಮ್ಮ ಉಪನ್ಯಾಸದ ಎರಡನೆಯ ಭಾಗವನ್ನು ಆರಂಭಿಸಿ ಶ್ರೀಯುತರು, ಮೇಲೆ ಹೇಳಿದ ಮೌಲ್ಯಗಳನ್ನು ಕಾಪಾಡುವಲ್ಲಿ ನ್ಯಾಯಾಂಗದ ಪಾತ್ರವನ್ನು ತಮ್ಮದೇ ಮಾತಿನಲ್ಲಿ ಸರಳವಾಗಿ ವಿವರಿಸಿದರು. ಕಾರ್ಯಂಗ ತನ್ನ ಕೆಲಸ ಮಾಡಲು ಸ್ವಲ್ಪ ವಿಫಲವಾದಲ್ಲಿ, ಆಗ ನ್ಯಾಯಾಂಗ ಕಣ್ಣುಮುಚ್ಚಿ ಕೂಡುವಂತಿಲ್ಲಎಂದು ಪ್ರತಿಪಾದಿಸಿದರು. ಉದಾಹರಣೆಗೆ, ಒಂದು ತಿಂಗಳ ಹಿಂದೆ ನಮ್ಮ ರಾಜ್ಯದಲ್ಲಿ ಕೊರೊನ ತಾಂಡವವಾಡಿದ ಕಾಲದಲ್ಲಿ, ಆಸ್ಪತ್ರೆಗಳಲ್ಲಿ ಬೆಡ್ಆ, ಕ್ಸಿಜನ್ ಮತ್ತು ಔಷಧಿಗಳ ಕೊರತೆ ಉಂಟಾದಾಗ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಇನ್ನೊಬ್ಬ ನ್ಯಾಯಾಧೀಶರು ರಾಜ್ಯಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡಲೇಬೇಕು ಎಂದು ಆದೇಶ ನೀಡಿದರು. ಇದು ಪ್ರಜೆಗಳ ಆರೋಗ್ಯದ ಹಕ್ಕನ್ನು ಕಾಪಾಡಲಿಕ್ಕಾಗಿ ನ್ಯಾಯಾಂಗ ನೀಡಿದ ಆದೇಶ ಆಗಿತ್ತು. ಇದನ್ನು ಸರ್ವೋಚ್ಚನ್ಯಾಯಾಲಯ ಅನುಮೋದಿಸಿತು, ಇದರಿಂದ ಎಷ್ಟೊಂದು ಜನರ ಜೀವ ಉಳಿಯಿತು ಎಂದು ನ್ಯಾಯಾಂಗದ ಮಹತ್ವವನ್ನು ತಿಳಿಸಿದರು. ಅದೇ ರೀತಿ, ಶಾಸಕಾಂಗ ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬರುವಂತಹ ಕಾನೂನನ್ನು ಮಾಡಿದಾಗ, ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯಗಳು ನ್ಯಾಯಾಂಗ ಪರಾಮರ್ಶೆ ಅಧಿಕಾರವನ್ನು ವನ್ನು ಉಪಯೋಗಿಸಿಕೊಂಡು ಅವುಗಳ ಪರೀಕ್ಷೆ ಮಾಡಬಹುದು. ಅಧಿಕಾರವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಅನುಚ್ಛೇದ 32 ಉಚ್ಚ ನ್ಯಾಯಾಲಯಕ್ಕೆ ಅನುಚ್ಛೇದ 226ರಲ್ಲಿ ನೀಡಲಾಗಿದೆ. ಅನುಚ್ಛೇದ 32 ರಲ್ಲಿ ಮೂಲಭೂತ ಹಕ್ಕುಗಳನ್ನು ಸಂರಕ್ಷಣೆ ಮಾಡುವ ವಿಧಾನವು ಸಂವಿಧಾನದ ಹೃದಯ ಮತ್ತು ಆತ್ಮ ಎಂದು ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಬಣ್ಣಿಸಿರುವುದನ್ನು ಹೇಳುತ್ತಾರೆ. ಅಲ್ಲದೆ 5 ರೀತಿಯ ರಿಟ್ ಗಳನ್ನು ಅಂದರೆ ಹೇಬಿಎಸ್ ಕಾರ್ಪಸ್, ಮ್ಯಾಂಡಮಸ್, ಪ್ರೋಹಿಬಿಷನ್, ಸರ್ಶಿಯೋರರಿ ಮತ್ತು ಕೋವರೆಂಟ್ ಗಳನ್ನು ಸರ್ವೋಚ್ಚ ನ್ಯಾಯಾಲಯ ಅನುಚ್ಛೇದ 32ರ ಅಡಿಯಲ್ಲಿ, ಉಚ್ಚ ನ್ಯಾಯಾಲಯದ ಅನುಚ್ಚೇದ 226 ರಲ್ಲಿ ಹೊರಡಿಸಿ, ಇವುಗಳ ಮೂಲಕ ಮೂಲಭೂತ ಹಕ್ಕುಗಳಿಗೆ ಧಕ್ಕೆ ಬಂದಾಗ ಅವುಗಳನ್ನು ರಕ್ಷಣೆ ಮಾಡಬಹುದಾಗಿದೆ ಎಂದರು.

ಪೊಲೀಸ್ ಕಸ್ಟಡಿಯಲ್ಲಿ ಮೂಲಭೂತ ಹಕ್ಕುಗಳ ಹರಣವಾಗುವ ಸಾಧ್ಯತೆ ಇದ್ದಾಗ ಹೇಬಿಯಸ್ ಕಾರ್ಪಸ್ ರಿಟ್ ಮೂಲಕ ನ್ಯಾಯ ಪಡೆಯಬಹುದು ಎಂದು ತಿಳಿಸಿದ ಶ್ರೀ ರವಿಕುಮಾರರು, ಕೆಲವು ಪ್ರಕರಣಗಳನ್ನು ಉದಾಹರಣೆಯಾಗಿ ಕೊಟ್ಟರು. ಡಿ. ಕೆ. ಬಸು ವಿ. ಪಶ್ಚಿಮ ಬಂಗಾಳ ರಾಜ್ಯ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯ ವಿಚಾರದಲ್ಲಿ ಹನ್ನೊಂದು ಸೂತ್ರಗಳನ್ನು ಸರ್ವೋಚ್ಚ ನ್ಯಾಯಾಲಯ ಕೊಟ್ಟಿದೆ. ಹೀಗೆ ನ್ಯಾಯಾಂಗ ವ್ಯವಸ್ಥೆಯ ಲೋಪ ದೋಷಗಳನ್ನು ತಿದ್ದುವಲ್ಲಿ ಸಹಕಾರಿಯಾಗಿದೆ ಎಂದರು. ಹರ್ನೇಶ್. ವಿ. ಬಿಹಾರ ರಾಜ್ಯ ಪ್ರಕರಣದಲ್ಲಿ ಏಳು ವರ್ಷದ ಕೆಳಗಿನ ಅಪರಾಧಗಳ ಆರೋಪಗಳ ಆಧಾರದ ಮೇಲೆ ಸುಮ್ಮನೆ ಯಾರನ್ನೂ ಅರೆಸ್ಟ್ ಮಾಡುವಂತಿಲ್ಲ ಎಂದು ವೈಯಕ್ತಿಕ ಸ್ವಾತಂತ್ರ್ಯಕ್ಕೆ ನ್ಯಾಯಾಂಗ ಕೊಟ್ಟ ಮಹತ್ವವನ್ನು ಮನನ ಮಾಡಿಕೊಟ್ಟರು. ಮನೇಕಾ ಗಾಂಧೀ ತೀರ್ಪಿನ ಮೂಲಕ ನಮಗೆ ಬೇಕಾದ ಸ್ಥಳಗಳಿಗೆ ಪ್ರಯಾಣ ಮಾಡುವ ಹಕ್ಕನ್ನು ನ್ಯಾಯಾಲಯ ಎತ್ತಿ ಹಿಡಿದಿದ್ದು, ನರ್ಗಿಸ್ ಮಿರ್ಜಾ ಪ್ರಕರಣದಲ್ಲಿ ಹೆಣ್ಣುಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಿದ್ದು, ವಿಶಾಖಾ ತೀರ್ಪಿನಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರಿಗೆ ಆಗುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಸುಪ್ರೀಂ ಕೋರ್ಟ್ ಮಾಗಸೂಚಿಗಳನ್ನು ಹಾಕಿಕೊಟ್ಟದ್ದು, ಸೈನ್ಯದಲ್ಲಿ ಮಹಿಳೆಯರಿಗೆ ಕೆಲವು ಪದವಿಗಳನ್ನು ನಿರಾಕರಿಸುವ ಕಾನೂನನ್ನು ಸುಪ್ರೀಂ ಕೋರ್ಟ್ ತೆಗೆದು ಹಾಕಿದ್ದು, ಮುಂತಾದವುಗಳನ್ನು ನೆನೆಸಿಕೊಂಡರು.

ಅಲ್ಲದೆ ಮುಸ್ಲಿಂ ಧರ್ಮದಲ್ಲಿ ಇದ್ದ ತ್ರಿವಳಿ ತಲಾಕ್ ಅನ್ನು ಸರ್ವೋಚ್ಚನ್ಯಾಯಾಲಯ ಪ್ರಕರಣದಲ್ಲಿ ಅಸಿಂಧು 2017ರಲ್ಲಿ ಮಾಡಿ, ಆ ರೂಢಿಯನ್ನು ಧಾರ್ಮಿಕ ಸ್ವಾತಂತ್ರ್ಯ ಎಂದು ಹೇಳುವಂತಿಲ್ಲ, ಅದು ಸಂವಿಧಾನಬಾಹಿರ ಎಂದು ತೀರ್ಪು ಕೊಟ್ಟಿತು. ನಂತರದಲ್ಲಿ 2019ರಲ್ಲಿ ಈ ತ್ರಿವಳಿ ತಲಾಕ್ ಒಂದು ಶಿಕ್ಷಾರ್ಹ ಅಪರಾಧ ಎಂದು ಕಾನೂನು ಬಂತು. ಹೀಗೆ ನ್ಯಾಯಾಂಗ ಹಾಕಿಕೊಟ್ಟ ದಾರಿಯಲ್ಲಿ ಶಾಸಕಾಂಗ ನಡೆಯುತ್ತದೆ ಎಂಬ ಸೂಚನೆಯನ್ನು ಕೊಟ್ಟರು. ಮಹಿಳೆಯರ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ ಶಬರಿಮಲೆ ದೇವಾಲಯದ ಪ್ರವೇಶ ದ ತೀರ್ಪು ಬಂದದ್ದನ್ನು ಹೇಳಿದ ಅವರು, ಈಗ ಆ ತೀರ್ಪು ಪುನಃ ಪರಿಶೋಧನೆಯಲ್ಲಿರುವುದನ್ನೂ ಹೇಳಿದರು. ಅಲ್ಲದೆ ಹಿಂದೂ ವಾರಸು ಕಾಯ್ದೆಯಲ್ಲಿ, ಪಿತ್ರಾರ್ಜಿತ ಆಸ್ತಿ ಹಕ್ಕಿನಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಇರುವುದಾಗಿ ಕಾನೂನು ತಂದಾಗ ಅದನ್ನು ಎತ್ತಿಹಿಡಿದು 2020 ರಲ್ಲಿ ವಿನೀತ ಶರ್ಮಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದನ್ನು ಸ್ಮರಿಸಿಕೊಂಡರು. ರಜನೀಶ್ ವಿ. ಸ್ನೇಹಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹಿಳೆಯರ ಹಕ್ಕುಗಳ ಬಗ್ಗೆ ಕೊಟ್ಟ ಒತ್ತನ್ನು ನೀಡಲಾಗಿದೆ ಎಂದರು.ಅಷ್ಟೇ ಅಲ್ಲದೆ, ಎಸ್. ಆರ್. ಬೊಮ್ಮಾಯಿ ಪ್ರಕರಣದ ಬಗ್ಗೆ ಹೇಳುತ್ತಾ, ಒಕ್ಕೂಟ ವ್ಯವಸ್ಥೆಯನ್ನು ಭಂಗ ಮಾಡಬಾರದೆಂದು ನ್ಯಾಯಾಲಯ ಹೇಳಿದೆ ಎಂದರು. ಅದೇ ರೀತಿ ಸ್ವಾತಂತ್ರ್ಯ, ಪರಿಸರ, ಶಿಕ್ಷಣ, ಸಮಾಜದ ಸ್ವಾಸ್ಥ್ಯ ಮುಂತಾದ ಕ್ಷೇತ್ರಗಳಲ್ಲಿ ಸರ್ವೋಚ್ಚ ನ್ಯಾಯಾಲಯಗಳು ತೀರ್ಪು ಬೀರಿರುವ ಪರಿಣಾಮಗಳನ್ನು ಹೇಳಿದರು. ಕೊನೆಯಲ್ಲಿ ಜಿಲ್ಲಾ ನ್ಯಾಯಾಲಯ ಮತ್ತು ತಾಲೂಕು ನ್ಯಾಯಾಲಯಗಳು ರಾಜ್ಯಮಟ್ಟದ ಪ್ರಾಧಿಕಾರಗಳಲ್ಲಿ ಉಚಿತವಾದ ಕಾನೂನು ನೆರವು ಕೊಡುವ ಬಗ್ಗೆ ತಿಳಿಸುತ್ತಾ, ಇದರಿಂದ ಮಾನವ ಹಕ್ಕುಗಳ ರಕ್ಷಣೆ ಪ್ರಾಯೋಗಿಕ ರೀತಿಯಲ್ಲಿ ಆಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಕೆ. ಆರ್. ವೇಣುಗೋಪಾಲ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಅಧಿಕಾರಿಗಳಾದ ಪ್ರತಾಪ್ ಲಿಂಗಯ್ಯರವರು ಮತ್ತು ಕಾರ್ಯಕ್ರಮದ ಸಂಯೋಜಕರಾದ ಸತೀಶ್ ಗೌಡರವರು ಉಪಸ್ಥಿತರಿದ್ದರು ಹಾಗೂ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವರದಿ: ಸುಜಾತಾ ಎಸ್. ಬಣಜಿಗೇರ

ವಿ. ಸೂ. ನ್ಯಾಯನಿಷ್ಠ ಹಲವು ವಿಚಾರಧಾರೆಗಳನ್ನು, ಮಾಹಿತಿಗಳನ್ನು ಮತ್ತು ಕಾನೂನಿನ ಮಜಲುಗಳನ್ನು ಓದುಗರ ಮುಂದಿಡಬೇಕೆಂಬ ಉದ್ದೇಶದಿಂದ ಈ ಉಪನ್ಯಾಸ ಮಾಲಿಕೆಯನ್ನು ವರದಿಯ ರೂಪದಲ್ಲಿ ಪ್ರಕಟಿಸಲು ಹೊರಟಿದೆ. ಉಪನ್ಯಾಸಕರ ಅಭಿಪ್ರಾಯಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು ನ್ಯಾಯನಿಷ್ಠ ಯಾವುದೇ ರೀತಿಯಲ್ಲಿ ಅವನ್ನು ಅನುಮೋದಿಸಿಯೋ ಅಥವಾ ತಿರಸ್ಕರಿಸಿಯೋ ಇರುವುದಿಲ್ಲ.

ಸುಜಾತಾ ಎಸ್. ಬಣಜಿಗೇರ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ.

Spread the love