ಉಪನ್ಯಾಸಗಳು

ಉಪನ್ಯಾಸ ಮಾಲಿಕೆ – 3 : “ಭಾರತದ ಸಂವಿಧಾನದ ಅಡಿಯಲ್ಲಿ ಸಾಮಾಜಿಕ ನ್ಯಾಯ” – ಗೌರವಾನ್ವಿತ ನಿವೃತ್ತ ನ್ಯಾ. ಹೆಚ್. ಎನ್. ನಾಗಮೋಹನ್ ದಾಸ್

ಉಪನ್ಯಾಸಕರು: ಗೌರವಾನ್ವಿತ ನ್ಯಾ. ಹೆಚ್. ಎನ್. ನಾಗಮೋಹನ್ ದಾಸ್, ನಿವೃತ್ತ ನ್ಯಾಯಾಧೀಶರು, ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ, ಬೆಂಗಳೂರು.

ಬೆಂಗಳೂರು ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕವು ಆಯೋಜಿಸಿದ್ದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ವಿಚಾರ ಕಲರವದಲ್ಲಿ, ಮೂರನೇ ದಿನದ ವಿಷಯ “ಭಾರತ ಸಂವಿಧಾನದ ಅಡಿಯಲ್ಲಿ ಸಾಮಾಜಿಕ ನ್ಯಾಯ “, ಮಾತನಾಡಿದ್ದು, ಗೌರವಾನ್ವಿತ ನ್ಯಾ. ಹೆಚ್. ಎನ್. ನಾಗಮೋಹನ್ ದಾಸ್, ನಿವೃತ್ತ ನ್ಯಾಯಾಧೀಶರು, ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ, ಬೆಂಗಳೂರು.

ಜಗತ್ತಿನಲ್ಲಿ ವರ್ಣಭೇದ, ಜನಾಂಗೀಯ ಭೇದ, ಜಾತಿಭೇದ, ವರ್ಗಭೇದ ಇವುಗಳಿಂದ ಸಮಾಜದ ಬಹುದೊಡ್ಡ ವರ್ಗವು ಹಸಿವು, ಹಾಗೂ ದಬ್ಬಾಳಿಕೆಗೆ ತುತ್ತಾಗಿದೆ, ಕ್ರೌರ್ಯವನ್ನು ಅನುಭವಿಸಬೇಕಾಗಿದೆ ಎಂದು ನ್ಯಾ. ಹೆಚ್. ಎನ್. ನಾಗಮೋಹನ್ ದಾಸ್ ಖೇದಪಟ್ಟರು. ಇಂತಹ ವಿಚಾರಗಳನ್ನು ಹೆಚ್ಚು ಹೆಚ್ಚು ಚರ್ಚೆ ಮಾಡುವುದರಿಂದ ಇಂತಹ ವಿಚಾರಗಳು ಬೆಳಕಿಗೆ ಬಂದು ನ್ಯಾಯ ಸಿಗುವ ಸಾಧ್ಯತೆಯಿದೆ ಎಂದು ಹೇಳಿದರು. ಪ್ರತಿವರ್ಷ 2007 ರಿಂದ ಫೆಬ್ರುವರಿ 20 ರಂದು ಸಾಮಾಜಿಕ ನ್ಯಾಯದ ದಿನವನ್ನಾಗಿ ಆಚರಿಸಲಾಗುತ್ತದೆ, ಎಂದೂ ನೆನಪಿಸಿಕೊಂಡರು.

ಭಾರತದಲ್ಲಿ ಅಂದಾಜು ಸರ್ವೇ ಪ್ರಕಾರ 4635 ಜಾತಿ ಮತ್ತು ಉಪಜಾತಿಗಳಿವೆ, ಆದರೆ ಹೊರಗಡೆಯಿಂದ ಬಂದಂತಹ ಇಸ್ಲಾಂ ಧರ್ಮದಲ್ಲಿ ಕೂಡ ಎರಡು ನೂರಕ್ಕೂ ಅಧಿಕ ಪಂಗಡಗಳು ನಮ್ಮ ದೇಶದಲ್ಲಿವೆ. ಅದೇ ರೀತಿ ಕ್ರಿಶ್ಚಿಯನ್ ಧರ್ಮದಲ್ಲಿ ಬೇರೆ ಕಡೆಗಳಲ್ಲಿ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟಂಟ್ ಪಂಥಗಳು ಮಾತ್ರ ಇವೆ, ಆದರೆ ನಮ್ಮ ದೇಶದಲ್ಲಿ 400 ಕ್ಕೂ ಅಧಿಕ ಪಂಗಡಗಳನ್ನು ಒಳಗೊಂಡಿದೆ. ಹಾಗಾಗಿ ವಿಶಿಷ್ಟ ರೀತಿಯ ಸಾಮಾಜಿಕ ನ್ಯಾಯದ ಪರಿಕಲ್ಪನೆ ನಮಗೆ ಇರಬೇಕಾಗುತ್ತದೆ ಎಂದೂ ಅಭಿಪ್ರಾಯಪಟ್ಟರು ನ್ಯಾ. ನಾಗ ಮೋಹನ್ ದಾಸ್ ಅವರು.

ಮುಂದುವರಿದು ನ್ಯಾಯಮೂರ್ತಿಗಳು, “ಸಂವಿಧಾನ ಓದು” ಕಾರ್ಯಕ್ರಮದ ಮುಖಾಂತರ ಭಾರತ ಸಂವಿಧಾನದ ಕುರಿತು ವಿದ್ಯಾರ್ಥಿ ಮತ್ತು ಉಪನ್ಯಾಸಕರ ಜೊತೆ ಹಲವಾರು ಸಂದರ್ಭಗಳಲ್ಲಿ ಸಂವಾದವನ್ನು ಮಾಡಿದ ತಮ್ಮ ಅನುಭವಗಳನ್ನು ನೆನಪಿಸಿಕೊಂಡರು. ಸ್ವಾತಂತ್ರ್ಯ ಬಂದ ನಂತರ ಕೆಲವು ವ್ಯಕ್ತಿಗಳು “ಹಿಂದೂರಾಷ್ಟ್ರ” ಮಾಡಲು ಪ್ರಯತ್ನಿಸಿದ್ದಾರೆ ಎಂಬುದನ್ನು ಉಲ್ಲೇಖ ಮಾಡುತ್ತಾ, ಅನೇಕ ವರ್ಷಗಳ ಕಾಲ ನಾವು ಒಟ್ಟಿಗೆ ಬದುಕಿದ್ದೇವೆ, ಹಾಗಾಗಿ ನಾವೆಲ್ಲರೂ ಒಂದೇ ಎಂದು ತಿಳಿದು ಸಮಸಮಾಜ ನಿರ್ಮಾಣ ಮಾಡುವದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. 1973 ರಲ್ಲಿ ‘ಕೇಶವಾನಂದ ಭಾರತೀ’ ಪ್ರಕರಣದಲ್ಲಿ ಜಾತ್ಯಾತೀತತೆ, ಸಾಮಾಜಿಕ ನ್ಯಾಯ, ಗಣರಾಜ್ಯ ಮತ್ತು ಪ್ರಜಾಪ್ರಭುತ್ವ ಗಳನ್ನು ಸಂವಿಧಾನದ ಮೂಲ ತತ್ವಗಳು ಎಂದು ಈ ಪ್ರಕರಣದಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿಸಿದರು. ಯಾವುದೇ ಸರ್ಕಾರ ಬಂದರೂ ಇವುಗಳ ತಿದ್ದುಪಡಿ ಮಾಡಲು ಬರುವುದಿಲ್ಲ ಎಂದು ಹೇಳಿದರು.

ಕಳೆದ 72 ವರ್ಷಗಳಲ್ಲಿ ಸಾಮಾಜಿಕ ನ್ಯಾಯ ಕೊಡುವಲ್ಲಿ ಒಂದಿಷ್ಟು ಸಾಧನೆ ನಾವು ಮಾಡಿದ್ದೇವೆ ಎಂದರೆ ತಪ್ಪಾಗಲಿಕ್ಕಿಲ್ಲ ಎಂದ ಅವರು, 1947 ರಲ್ಲಿ ಶೇಕಡಾ 70 ಕ್ಕಿಂತ ಅಧಿಕವಿದ್ದ ಬಡತನ, ಪ್ರಸ್ತುತ ದಿನಮಾನಗಳಲ್ಲಿ 21ಕ್ಕೆ ಇಳಿದಿದೆ ಎಂದರು. ಮೀಸಲಾತಿ ಅದಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ ಎಂದು ಹೇಳಿದರು ನ್ಯಾ. ನಾಗಮೋಹನ್ ದಾಸ್ ರವರು. ಎಲ್ಲಾ ಕ್ಷೇತ್ರಗಳಲ್ಲಿ ‘ಪರಿಶಿಷ್ಟ ಜಾತಿ’, ‘ಪರಿಶಿಷ್ಟ ಪಂಗಡ’ದವರು ಮತ್ತು ಮಹಿಳೆಯರು ಮಾಡಿ, ಕೊಡುಗೆಯನ್ನು ನೀಡಿದ್ದಾರೆ. ಆದರೆ, ನ್ಯಾಯಾಂಗವು ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸಲು ಕಳೆದ 72ವರ್ಷಗಳಿಂದ ಎಲ್ಲೊ ಹಿಂದೆ ಬಿದ್ದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದಕ್ಕೆ ಸಂಬಂಧಿಸಿದಂತೆ ಕೆಲವೊಂದಿಷ್ಟು ಪ್ರಕರಣಗಳನ್ನು ಕೂಡ ಅವರು ಉದಾಹರಿಸಿದರು : 1947ರಲ್ಲಿ ಮದ್ರಾಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವೃತ್ತಿಪರ ಕೋರ್ಸುಗಳಲ್ಲಿ ಮೀಸಲಾತಿಯನ್ನು ನೀಡಿತ್ತು ಆದರೆ ಅದನ್ನು “ಸಂವಿಧಾನ ವಿರೋಧಿ” ನಿಯಮ ಎಂದು ಕೋರ್ಟ್ ಹೇಳಿತು. ಹಾಗೆಯೇ ಬಾಲಾಜಿ ಪ್ರಕರಣದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮೀಸಲಾತಿ ಇರುವಂತಿಲ್ಲ ಎಂದೂ ಹೇಳಿತು. ಚಂಪಕಮ್ ದೊರೈರಾಜನ್ ಮತ್ತು ಇಂದಿರಾ ಸಹಾನಿ ಪ್ರಕರಣಗಳಲ್ಲೂ ಹಿಂದುಳಿದವರ್ಗದವರ ಮೀಸಲಾತಿಗೆ ಎಲ್ಲೋ ಒಂದು ಕಡೆ ಹಿನ್ನಡೆಯಾಗಿದೆ ಎಂದು ಹೇಳಬಹುದು ಎಂದರು. ಮುಂದುವರೆದು, ಎಂ. ನಾಗರಾಜ್” ಪ್ರಕರಣದಲ್ಲಿ ಇದೇ ಪ್ರಶ್ನೆಯ ಕುರಿತು, ಯಾವ ರೀತಿಯಲ್ಲಿ ಯಾವ ಯಾವ ಪಂಗಡಗಳು ನಿಜಕ್ಕೂ ಉದ್ಯೋಗದಲ್ಲಿ ಹಿನ್ನಡೆ ಹೊಂದಿವೆ ಅಂತಹ ಪಂಗಡಗಳಿಗೆ ಮೀಸಲಾತಿ ಕೊಡುವಂತೆ ಸರಕಾರ ತಯಾರಿಸಿದ ವರದಿಯ ಆಧಾರದ ಮೇಲೆ ಮಾತ್ರ ಬಡ್ತಿಯ ಸಂದರ್ಭದಲ್ಲಿ ಮೀಸಲಾತಿ ಕೊಡಬಹುದು ಎಂದು ಹೇಳಿತು. ಕರ್ನಾಟಕ ಸರಕಾರ ನಂತರದ ಕಾಲಾವಧಿಯಲ್ಲಿ ಅಂತಹ ವರದಿಯನ್ನು ತಯಾರಿಸಿ ಕೊಟ್ಟ ಮಾತ್ರವೇ ಅಂತಹ ಬಡ್ತಿಗಳನ್ನು ಮಾನ್ಯ ಮಾಡಲಾಯಿತು ಎಂದು ನೆನಪಿಸಿಕೊಂಡರು. ಪ್ರಸ್ತುತ ಮಾರಾಠಾ ಮೀಸಲಾತಿ ಶೇಕಡಾ 50 ಕ್ಕೂ ಮೇಲಿರುವುದರಿಂದ ಅದನ್ನು ಸರ್ವೋಚ್ಚ ನ್ಯಾಯಾಲಯ ಒಪ್ಪಿಕೊಂಡಿಲ್ಲ, ಆದರೆ ಅಪವಾದದ ಸಂದರ್ಭಗಳಲ್ಲಿ ಐವತ್ತಕ್ಕಿಂತ ಹೆಚ್ಚಿಗೆ ಮೀಸಲಾತಿ ಇರಬಹುದು ಎಂದು ಇಂದಿರಾ ಸಹಾನಿ ಹೇಳುತ್ತದೆ ಎಂದು ತಿಳಿಸಿದರು. ತದನಂತರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪರಿಣಾಮ ಇತರ ಹಿಂದುಳಿದ ವರ್ಗಗಳನ್ನು ಇನ್ನು ಕೇಂದ್ರ ಸರಕಾರವೇ ತೀರ್ಮಾನಿಸಲಿದೆ ಎಂದು ವಿವರಣೆ ಕೊಟ್ಟರು. ಈ ರೀತಿ ಹಲವಾರು ಬಾರಿ ಮೀಸಲಾತಿ ವಿರುದ್ಧವೇ ತೀರ್ಪುಗಳು ಬಂದಿವೆ ಎಂಬುದು ಅವರು ಅಭಿಪ್ರಾಯಪಟ್ಟರು.

ಎಷ್ಟೊಂದು ಸರಕಾರೀ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತದೆ, ಕೆಲವೊಂದನ್ನು ಮುಚ್ಚಲಾಗುತ್ತಿದೆ; ಖಾಸಗಿ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡುತ್ತಾರೆ, ಇದರಿಂದಾಗಿ ಮತ್ತು ಮೀಸಲಾತಿಗೆ ಯಾವುದೇ ಅವಕಾಶವೇ ಇರುವುದಿಲ್ಲ ಎಂದು ನ್ಯಾ. ನಾಗಮೋಹನ್ ದಾಸ್ ಅವರು ಸೂಚಿಸಿದರು.

ನಮ್ಮ ರಾಜ್ಯದಲ್ಲಿ ಕೂಡ ಪ್ರಬಲ ಪಂಚಮಸಾಲಿ ಸಮುದಾಯ ಕೂಡ ಮೀಸಲಾತಿಗೆ ಹೋರಾಟ ಮಾಡುತ್ತಿದೆ ಅದೇ ರೀತಿ ಕುರುಬ ಸಮುದಾಯ ಕೂಡ ಎಸ್ಟಿ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿದೆ, ಆದರೆ ಸಣ್ಣ ಸಮುದಾಯಗಳ ಧ್ವನಿ ಕೇಳಿಬರುತ್ತಿಲ್ಲ ಎಂಬುದೇ ವಿಷಾದನೀಯ ಎಂದರು ನಿವೃತ್ತ ನ್ಯಾಯಮೂರ್ತಿಗಳು.

ಈ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ರೈತರು ಮೀಸಲಾತಿ ವಿರೋಧಿಸಲಿಲ್ಲ ಮತ್ತು ಮೀಸಲಾತಿ ಕೇಳಲಿಲ್ಲ ಯಾಕೆಂದರೆ ಅವರೇ ಹತ್ತು ಜನರಿಗೆ ಕೆಲಸವನ್ನು ಕೊಡುತಿದ್ದರು ಇವತ್ತು ರೈತರು ನಮಗೆ ಮೀಸಲಾತಿ ಬೇಕು ಎನ್ನುವ ಪರಿಸ್ಥಿತಿ ಉದ್ಭವವಾಗಿದೆ. ಹಲವಾರು ರಾಜ್ಯಗಳಲ್ಲಿ ಹರಿಯಾಣದಲ್ಲಿ ಜಾಟರು, ಆಂಧ್ರದಲ್ಲಿ ಖಾಪು, ಗುಜರಾತಿನಲ್ಲಿ ಪಟೇಲರು, ರಾಜಸ್ಥಾನದಲ್ಲಿ ಗುಜ್ಜರು ಕರ್ನಾಟಕದಲ್ಲಿ ಲಿಂಗಾಯತ ಸಮುದಾಯ ಮೀಸಲಾತಿಗಾಗಿ ಹೋರಾಟವನ್ನು ಮಾಡುತ್ತಿವೆ. ಆದರೆ ಇವೆಲ್ಲದರ ಮಧ್ಯೆ ಮೀಸಲಾತಿಯೇ ಅಪ್ರಸ್ತುತ ಎಂದು ಜನರನ್ನು ದಾರಿ ತಪ್ಪಿಸುವವರೂ ಇದ್ದಾರೆ ಎಂದರು.

ಕೀಳರಿಮೆಯಿಂದ ಕೆಲವೊಂದಿಷ್ಟು ಜನವನ್ನು ದೂರಮಾಡಬೇಕು ಹಾಗಯೇೆ ಅವಕಾಶದಿಂದ ವಂಚಿತರಾದವರು ಅವಕಾಶವನ್ನು ಬಳಕೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ವಯೋವೃದ್ಧರಿಗೆ ಆಶ್ರಯದ ಅವಶ್ಯಕತೆ ಇದೆ, ಉದ್ಯೋಗದಲ್ಲಿ ಕಾರ್ಮಿಕರಿಗೆ ಭದ್ರತೆಯಿಲ್ಲ. ಇವರೆಲ್ಲರನ್ನೂ ಒಳಗೊಂಡು ಮುಂದುವರಿಯುವುದೇ ಸಾಮಾಜಿಕ ನ್ಯಾಯ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ನ್ಯಾಯಾಂಗವು ಶಾಸಕಾಂಗ ಹಾಗೂ ಕಾರ್ಯಾಂಗದ ಕಿವಿ ಹಿಂಡಬೇಕು, ಜಾತಿ-ವರ್ಗಗಳ ನಿರ್ಮೂಲನೆ ಮಾಡಬೇಕು, ಇಲ್ಲ ಕನಿಷ್ಠ ಪಕ್ಷ ಅದನ್ನು ಕಡಿಮೆಯಾದರೂ ಮಾಡಬೇಕು ಎಂದು ಎಚ್ಚರಿಸಿದರು. ಮೀಸಲಾತಿ ವ್ಯವಸ್ಥೆ ಪುನರ್ ರಚನೆಯಾಗಬೇಕು ಹಾಗೂ ಚರ್ಚೆಗಳ ಮುಖಾಂತರ ನಡೆಯಬೇಕು ಅಭಿಪ್ರಾಯವನ್ನೂ ತಿಳಿಸಿದರು. ಅದರ ಜೊತೆಗೆ, ಆರ್ಥಿಕವಾಗಿ ಹಿಂದುಳಿದಂತಹ ಸಾಮಾನ್ಯ ವರ್ಗದ ಜನರಿಗೆ ಶೇಕಡ 10 ರಷ್ಟು ಮೀಸಲಾತಿಯನ್ನು ನೀಡಿದ ಕುರಿತು ಚರ್ಚಿಸುತ್ತಾ ಅದು ಒಂದು ಸಂವಿಧಾನ ವಿರೋಧಿ ಸಾಮಾಜಿಕ ನೀತಿ ಎಂದರು ನಿವೃತ್ತ ನ್ಯಾಯಾಧೀಶರು. ಸರಿಯಾಗಿ ಮಾಹಿತಿ ಸಂಗ್ರಹಣೆ ಮಾಡದೆ, ಕನಿಷ್ಠ ಪಕ್ಷ ಸರಿಯಾಗಿ ಸಂಸತ್ತಿನಲ್ಲಿ ಚರ್ಚೆಯೂ ಮಾಡದೆ ಕಾನೂನಾಗಿಸಿದ್ದಾರೆ ಎಂದೂ ಸೇರಿಸಿದರು. ಕಲ್ಯಾಣ ರಾಜ್ಯವನ್ನು ಕಟ್ಟುವುದೆಂದರೆ ಜನಸಾಮಾನ್ಯರಿಗೆ ಕನಿಷ್ಠಪಕ್ಷ ಸಿಗುವಂತ ಎಲ್ಲಾ ಸೌಲಭ್ಯಗಳು ಎಲ್ಲರಿಗೂ ಸಿಗಬೇಕು ಎಂದು ವಿವರಿಸಿದರು. ಸಪಾಯಿಕರ್ಮಚಾರಿಗಳಿಗೆ, ದೇವದಾಸಿ ಮಕ್ಕಳಿಗೆ, ಆದಿವಾಸಿಗಳಿಗೆ ಇಂಥವರಿಗೆ ನಿಜವಾಗಿಯೂ ಒಳಮೀಸಲಾತಿಯ ಅವಶ್ಯಕತೆಯಿದ್ದೂ ಹಲವರಿಗೆ ಅದು ದೊರಕುತ್ತಿಲ್ಲ ಎಂದು ವಿಷಾದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಕೆ. ಆರ್. ವೇಣುಗೋಪಾಲ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಅಧಿಕಾರಿಗಳಾದ ಪ್ರತಾಪ್ ಲಿಂಗಯ್ಯರವರು ಮತ್ತು ಕಾರ್ಯಕ್ರಮದ ಸಂಯೋಜಕರಾದ ಸತೀಶ್ ಗೌಡರವರು ಉಪಸ್ಥಿತರಿದ್ದರು.

ವರದಿ: ರವಿಚಂದ್ರ ಎಂ. ದದೆಗಲ್,

ವಿ. ಸೂ. ನ್ಯಾಯನಿಷ್ಠ ಹಲವು ವಿಚಾರಧಾರೆಗಳನ್ನು, ಮಾಹಿತಿಗಳನ್ನು ಮತ್ತು ಕಾನೂನಿನ ಮಜಲುಗಳನ್ನು ಓದುಗರ ಮುಂದಿಡಬೇಕೆಂಬ ಉದ್ದೇಶದಿಂದ ಈ ಉಪನ್ಯಾಸ ಮಾಲಿಕೆಯನ್ನು ವರದಿಯ ರೂಪದಲ್ಲಿ ಪ್ರಕಟಿಸಲು ಹೊರಟಿದೆ. ಉಪನ್ಯಾಸಕರ ಅಭಿಪ್ರಾಯಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು ನ್ಯಾಯನಿಷ್ಠ ಯಾವುದೇ ರೀತಿಯಲ್ಲಿ ಅವನ್ನು ಅನುಮೋದಿಸಿಯೋ ಅಥವಾ ತಿರಸ್ಕರಿಸಿಯೋ ಇರುವುದಿಲ್ಲ.

ರವಿಚಂದ್ರ ಎಂ ದದೆಗಲ್ ಅವರು ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಕಾಲೇಜಿನ ಎರಡನೆ ವರ್ಷದ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ.

Spread the love