ಲೇಖನಗಳು

ಬೌದ್ಧಿಕ ಆಸ್ತಿ ಹಕ್ಕುಗಳ ಮೇಲಣ ಮನ್ನಾ ಕೋವಿಡ್ ಲಸಿಕೆಯ ಕುರಿತ ಸದ್ಯದ ಪ್ರಾಮುಖ್ಯತೆ ಅಲ್ಲ

ಇವತ್ತು ಎಲ್ಲರ ಅತಿ ಮುಖ್ಯವಾದ ಆದ್ಯತೆ ಸಾರ್ವತ್ರಿಕವಾಗಿ ಎಲ್ಲರಿಗೂ ಲಸಿಕೆ ಸಿಗುವಂತೆ ಮಾಡುವುದು. ಜನಾಂಗೀಯತೆ, ಮೂಲ, ರಾಷ್ಟ್ರೀಯತೆ, ಧರ್ಮ, ಲಿಂಗ, ಭಾಷೆ, ಸಾಮಾಜಿಕ ಸ್ತರ ಅಥವಾ ಆರ್ಥಿಕ ಸಾಮರ್ಥ್ಯ ಇವಾವುಗಳನ್ನೂ ಲೆಕ್ಕಿಸದೆ, ಪ್ರತಿಯೊಬ್ಬ ವ್ಯಕ್ತಿಯನ್ನೂ ವೈರಸ್ನಿಂದ ರಕ್ಷಿಸಬೇಕಾದ ನೈತಿಕತೆ ಎಂದಿಗಿಂತಲೂ ಇಂದು ಸ್ಪಷ್ಟವಾಗಿದೆ. ಆದರೆ ಲಸಿಕೆ ಎಲ್ಲರಿಗೂ ಸಿಗುವುದು ಸಿಟ್ಟು ತರಿಸುವಷ್ಟು ನಿಧಾನವಾಗಿ ಸಾಗುತ್ತಿದೆ. ಬಡರಾಷ್ಟ್ರಗಳಿಗೆ ತಮ್ಮ ಪ್ರಜೆಗಳು ಕೋವಿಡ್ ವಿರುದ್ಧ ಅಗತ್ಯವಿರುವಷ್ಟು ಪ್ರತಿರೋಧವನ್ನು ಪಡೆದುಕೊಳ್ಳಬೇಕಾದರೆ 2023- 24ರವರೆಗೆ ಕಾಯಬೇಕಾದ ಪರಿಸ್ಥಿತಿಯಿದ್ದರೆ, ಶ್ರೀಮಂತ ರಾಷ್ಟ್ರಗಳು ಲಸಿಕೆಗಳನ್ನು ದಾಸ್ತಾನು ಮಾಡಿಕೊಳ್ಳುತ್ತಿರುವುದು ನಾವು ಜೀವಿಸುತ್ತಿರುವ ಅಸಮಾನ ಪ್ರಪಂಚಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಎಲ್ಲಾ ಸರ್ಕಾರಗಳಂತೆ ಶ್ರೀಮಂತ ರಾಷ್ಟ್ರಗಳು ಸಹ ತಮ್ಮ ಜನರನ್ನು ರಕ್ಷಿಸುವ ಹೊಣೆಯನ್ನು ಹೊಂದಿವೆ. ಹಾಗಾಗಿ, ಶ್ರೀಮಂತ ರಾಷ್ಟ್ರಗಳು ತಮಗೆ ಅಗತ್ಯವಿರುವ ಪೂರೈಕೆಗಳನ್ನು ಹೊಂದಿಸಿಕೊಳ್ಳುತ್ತಿರುವ ಕ್ರಮವನ್ನು  ಸರಿಯೆನ್ನಬಹುದು. ಆದರೆ ಹೆಚ್ಚಿನ ರಾಷ್ಟ್ರಗಳು  ಸೀಮಿತ ಪೂರೈಕೆಯ ಜಗತ್ತಿನಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಲಸಿಕೆ ದಾಸ್ತಾನು ಮಾಡುವುದು ಅಥವಾ ತಮ್ಮ ಸರಹದ್ದಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳನ್ನು ಲಸಿಕೆ ರಫ್ತು ಮಾಡುವುದರಿಂದ ತಡೆಯುವುದು (ಟ್ರಂಪ್ ಆಡಳಿತದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ ಮಾಡಿದಂತೆ) ಮಾಡುತ್ತಿವೆ, ಅದು  ತಪ್ಪು.  ಯಾಕೆಂದರೆ ವೈರಸ್ಗಳು ಅಂತರಾಷ್ಟ್ರೀಯ ಗಡಿಗಳನ್ನಾಗಲಿ ಅಥವಾ ಅಲ್ಲಿ ಕಟ್ಟಲ್ಪಟ್ಟ ಗೋಡೆಗಳಲ್ಲಿ ಗುರುತಿಸುವುದಿಲ್ಲ.

ಸದ್ಯಕ್ಕೆ ಪ್ರಪಂಚಕ್ಕೆ ಅಗತ್ಯವಿರುವುದು ತಯಾರಿಕಾ ಗುಣಮಟ್ಟವನ್ನು  ಕಡೆಗಣಿಸಿದೆ ತಯಾರಿಸಲ್ಪಟ್ಟ ಲಸಿಕೆಗಳ  ದೊಡ್ಡ ಸಂಖ್ಯೆಯ ಪೂರೈಕೆ. ಅದನ್ನು ಬಿಟ್ಟು, ರಾಷ್ಟ್ರಗಳು ಕೋವಿಡ್ ಲಸಿಕೆಗಳ ಮೇಲಿನ ಬೌದ್ಧಿಕ ಆಸ್ತಿ ಹಕ್ಕಿನ ಮನ್ನಾದಂತಹ ವ್ಯಾಪಕ ಚರ್ಚೆಗಳಿಗೆ ಇಳಿಯುತ್ತಿವೆ. ಇದು ಪರಿಹಾರದವೊಂದರ ಭ್ರಮೆ ಸೃಷ್ಟಿಸುತ್ತದೆಯೇ ಹೊರತು, ಪರಿಹಾರವನ್ನಲ್ಲ. ಅದಷ್ಟೇ ಮಾಡಿದರೆ ಸಾಕಾಗುವುದೂ ಇಲ್ಲ.

ಔಷಧೀಯ ಕಂಪನಿಗಳ ಬಳಿಯಿರುವ ಬೌದ್ಧಿಕ ಆಸ್ತಿ ಹಕ್ಕಿನ ಚರ್ಚೆಯು ಹೊಸದೇನಲ್ಲ. 2020ರ ಕೊನೆಯಿಂದ ಭಾರತ ಹಾಗೂ ದಕ್ಷಿಣ ಆಫ್ರಿಕಾ ಈ ಚರ್ಚೆಗೆ ಮರುಜೀವ ನೀಡಿದ್ದಲ್ಲದೆ, ಜಾಗತಿಕ ವ್ಯಾಪಾರ ಸಂಸ್ಥೆಗೆ ಕೋವಿಡ್ ಲಸಿಕೆಗಳ ಮೇಲಿನ ಬೌದ್ಧಿಕ ಆಸ್ತಿ ಹಕ್ಕುಗಳ ಮನ್ನಾ ಕುರಿತು ಕರೆ ನೀಡುವಲ್ಲಿ ಮುಂಚೂಣಿಯಲ್ಲಿವೆ. ಆಶ್ಚರ್ಯಕರವಾಗಿ, ಯಾವಾಗಲೂ ಬೌದ್ಧಿಕ ಆಸ್ತಿ ಹಕ್ಕುಗಳನ್ನು ತಾತ್ವಿಕ ವಿಷಯವಾಗಿ ಸಮರ್ಥಿಸುತ್ತಿದ್ದ ಅಮೆರಿಕ ಸಂಯುಕ್ತ ಸಂಸ್ಥಾನವೂ ಈ ಪ್ರಸ್ತಾಪಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಒಪ್ಪಿದೆ. ಹಾಗೂ, ಸಾಮಾನ್ಯವಾಗಿ ಅಂತರ್ರಾಷ್ಟ್ರೀಯ ಸಹಕಾರದ ಪರವಾಗಿದ್ದ ಜರ್ಮನಿ ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ.

ವ್ಯಾಪಾರ ರಾಯಭಾರಿಗಳು ಈ ಮನ್ನಾ ಕುರಿತು (ಸಮಯ ಪರಿಮಿತಿಯುಳ್ಳ ಅಥವಾ ಕಾಯಂ ಮನ್ನಾ) ಸಮಾಲೋಚನೆಗೆ ಇಳಿಯುತ್ತಿದ್ದಂತೆ ಕೆಲವು ವಿಷಯಗಳು ಸ್ಪಷ್ಟವಾಗುತ್ತಿವೆ. ಅದೇನೆಂದರೆ, ಈ ಒಪ್ಪಂದಕ್ಕೆ ತಲುಪಲು ದೀರ್ಘ ಸಮಯ ಹಿಡಿಯುತ್ತದೆ. ಬಹುಮುಖ್ಯವಾಗಿ, ಕಂಪನಿಗಳು ತಂತ್ರಜ್ಞಾನ ವರ್ಗಾವಣೆ ಮಾಡಲು ಒಪ್ಪದ ಹೊರೆತು ಚಮತ್ಕಾರಿಯಾಗಿ ಹೆಚ್ಚು ಲಸಿಕೆಗಳನ್ನು ಉತ್ಪಾದಿಸಲಾಗುವುದಿಲ್ಲ. ಅಷ್ಟೇ ಮುಖ್ಯವಾಗಿ, ಪ್ರಪಂಚದಾದ್ಯಂತ ಇರುವ ಉನ್ನತ ದರ್ಜೆಯ ತಯಾರಿಕಾ ಘಟಕಗಳಲ್ಲಿ ಲಸಿಕೆಗಳನ್ನು ತಯಾರಿಸಲು ಬೇಕಾಗುವಷ್ಟು ಸಾಮರ್ಥ್ಯ ಹಾಗೂ ಸಾಮಾಗ್ರಿಗಳು ಇವೆಯೇ ಎಂಬುದು ಇನ್ನೂ ತಿಳಿದಿಲ್ಲ. ಈ ಮಧ್ಯೆ ಸಾವಿನ ಸಂಖ್ಯೆ ಹೆಚ್ಚುತ್ತದೆ, ವೈರಸ್ ಎಲ್ಲೆಡೆ ಹಬ್ಬುತ್ತದೆ ಹಾಗೂ ರೂಪಾಂತರಗೊಳ್ಳುತ್ತದೆ.

ಅಭಿವೃದ್ಧಿ ಹಾಗೂ ನೆರವು ಸಂಸ್ಥೆಗಳು ಬಹಳ ಹಿಂದಿನಿಂದಲೂ ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಸಂದೇಹ ಹೊಂದಿದ್ದು, ಬೌದ್ಧಿಕ ಆಸ್ತಿ ವ್ಯವಸ್ಥೆಯು ಬಡರಾಷ್ಟ್ರಗಳಿಗೆ ಅಗತ್ಯ ಔಷಧಗಳನ್ನು ಕೈಗೆಟುಕದಂತೆ ಮಾಡುತ್ತವೆ ಎಂದು ವಾದಿಸುತ್ತಾ  ಬೌದ್ಧಿಕ ಆಸ್ತಿಗಳ ವಿರುದ್ಧ ಧ್ವನಿ ಎತ್ತುತ್ತಾ ಬಂದಿವೆ. ದೇಶ – ದೇಶಗಳ ನಡುವೆ ಇರುವ ಲಸಿಕೆಯ ಬೆಲೆಯ ವ್ಯತ್ಯಾಸವು ತರ್ಕಕ್ಕೆ ನಿಲುಕದ್ದು ನಿಜವಾದ್ದರೂ, ಈ ಅಸಮಾನತೆ ಒಂದೆಡೆ ಕಂಪೆನಿಗಳಿಗಿರುವ ಶಕ್ತಿಯನ್ನೂ ಮತ್ತು ಮತ್ತೊಂದೆಡೆ ಅಗತ್ಯ ಫಲಿತಾಂಶಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರಗಳ ಸಾಮರ್ಥ್ಯ ಹಾಗೂ ಇಚ್ಛಾಶಕ್ತಿಗಳನ್ನು ತೋರಿಸುತ್ತದೆ. ಕಂಪನಿಗಳು ಸಾಮಾನ್ಯವಾಗಿ ತಮ್ಮ ಉತ್ಪನ್ನಗಳ ಮೇಲಿನ ಏಕಸ್ವಾಮ್ಯವನ್ನು ಸಾಧಿಸಲು ಸ್ವಾಮ್ಯ ಸನ್ನದಿನಲ್ಲಿ (Patent) ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವ ಮೂಲಕ ಅದನ್ನು ಸದಾ ಜೀವಂತವಾಗಿ ಇಟ್ಟುಕೊಂಡು ಮಿತಿಮೀರಿದ ಲಾಭ ಮಾಡುತ್ತಿರುವ ಆರೋಪವನ್ನೂ ಎದುರಿಸುತ್ತವೆ. ಆದರೂ ಈ ಚರ್ಚೆ ಕುತೂಹಲಕಾರಿಯಾಗುವುದು  ಏಕೆಂದರೆ, ಜಾಗತಿಕ ವ್ಯಾಪಾರ ಸಂಸ್ಥೆಯ ನಿಯಮಗಳು ತುರ್ತು ಆರೋಗ್ಯ ಸಮಯದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಕಡ್ಡಾಯ ಪರವಾನಿಗೆಯನ್ನು ನೀಡಲು ಅನುಮತಿಸುತ್ತವೆ, ಮತ್ತು ಸರ್ಕಾರಗಳು ಬಯಸಿದರೆ ಸಾಂಕ್ರಾಮಿಕ ರೋಗಗಳನ್ನು ಸದೆ ಬಡಿಯುವ ಸಲುವಾಗಿ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಮನ್ನಾ ಮಾಡಬಹುದು.

ಆದಾಗ್ಯೂ, ಸರ್ಕಾರಗಳು ಹೀಗೆ ಮಾಡಿಲ್ಲವೆಂದರೆ ಅದು ಅಂತರಾಷ್ಟ್ರೀಯ ಕಾನೂನುಗಳ ಮೇಲಿನ ಗೌರವದಿಂದಲ್ಲ ಅದು ಈ ಹೊತ್ತಿಗೆ ಅಗತ್ಯವಿರುವ ವಿಸ್ತೃತ ತಯಾರಿಕಾ ಸಾಮರ್ಥ್ಯದ ಕೊರತೆಯನ್ನು ಗುರುತಿಸಿರುವುದರಿಂದ. ಬರಿಯ ಬೌದ್ಧಿಕ ಆಸ್ತಿ ಹಕ್ಕಿನ ಮನ್ನಾದಿಂದ ಈ ಕೊರತೆಯನ್ನು ನೀಗಿಸುವುದು ಸಾಧ್ಯವಿಲ್ಲ. ಪ್ರಪಂಚದಾದ್ಯಂತ ಬೌದ್ಧಿಕ ಆಸ್ತಿ ಹಕ್ಕಿನ ಮನ್ನಾ ಅಗತ್ಯವೇ, ಆದರೆ, ಲಸಿಕೆ ತಯಾರಿಕೆಯನ್ನು ಹೆಚ್ಚಿಸುವಲ್ಲಿ ಅದು ಮಾತ್ರ ಸಾಕಾಗುವುದಿಲ್ಲ. ತಯಾರಿಕೆ ಹೆಚ್ಚಿಸಲು ಲಸಿಕೆ ಮಾಡುವ ವಿಧಾನದ ಅರಿವನ್ನು ಸ್ವಾಮ್ಯ ಹೊಂದಿದ ಕಂಪನಿಗಳು ಬೇರೆ ಸಂಸ್ಥೆಗಳು ವರ್ಗಾಯಿಸಲು ತಯಾರಾದರೆ ಮಾತ್ರ, ಲಸಿಕೆ ತಯಾರಿಕೆಯಲ್ಲಿ ಸುಧಾರಣೆಯಾಗುವುದು ಸಾಧ್ಯ. ಒಂದು ವೇಳೆ ಕಂಪನಿಗಳು ತಂತ್ರಜ್ಞಾನ ವರ್ಗಾಯಿಸಲು ಹಿಂದೇಟು ಹಾಕಿ, ಸರ್ಕಾರಗಳು ತಂತ್ರಜ್ಞಾನ ವರ್ಗಾವಣೆಗೆ ಒತ್ತಾಯ ಮಾಡಿದರೂ  (ಕೆಲವು ಸಂಶೋಧನೆಗಳು ಸರಕಾರದ ಹಣ ಸಹಾಯನ್ನು ಅಥವಾ ಸರಕಾರೀ ಸಂಸ್ಥೆಯ ವತಿಯಿಂದ ಮಾಡಿದ್ದರಿಂದ), ಫಲಿತಾಂಶಗಳೇನು ಶೀಘ್ರವಾಗಿರುವುದಿಲ್ಲ. ಏಕೆಂದರೆ, ಉತ್ಪಾದನಾ ಘಟಕಗಳನ್ನು ರಾತ್ರೋರಾತ್ರಿ ಕಟ್ಟಲಾಗುವುದಿಲ್ಲ ಹಾಗೂ ಲಸಿಕೆ ತಯಾರಿಸಲು ಇಚ್ಚಿಸುವ ಎಲ್ಲ ರಾಷ್ಟ್ರಗಳಲ್ಲೂ ನುರಿತ ಕಾರ್ಮಿಕರ ಪಡೆ ಲಭ್ಯವಿರುವುದಿಲ್ಲ.

ಒಂದು ವೇಳೆ ಲಸಿಕೆಯ ಬೌದ್ಧಿಕ ಆಸ್ತಿ ಹಕ್ಕನ್ನು ಹೊಂದಿರುವವರು ತಂತ್ರಜ್ಞಾನವನ್ನು ವರ್ಗಾಯಿಸಲು ಒಪ್ಪಿದರೂ ಸಹ ಎಲ್ಲಾ ರಾಷ್ಟ್ರಗಳಲ್ಲೂ ಲಸಿಕೆಗಳನ್ನು ತಯಾರಿಸಲು ಅಗತ್ಯ ಸಾಮರ್ಥ್ಯ ಇಲ್ಲ. ಲಸಿಕೆಯ ಗುಣಮಟ್ಟ ತಗ್ಗಿಸದೆ, ವೆಚ್ಚ ಕಡಿಮೆ ಮಾಡಲು ತಯಾರಿಕಾ ಘಟಕಗಳನ್ನು ಅಳತೆಗೆ ತಕ್ಕಂತೆ ನಿರ್ಮಿಸಬೇಕಾಗುತ್ತದೆ. ಹಾಗೂ, ಇದಕ್ಕೆ ಸಮಯ ಹಿಡಿಯುತ್ತದೆ. ಉದಾಹರಣೆಗೆ, ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರಪಂಚದ ಅತಿ ಹೆಚ್ಚು ಲಸಿಕೆ ಡೋಸ್ಗಳನ್ನು ತಯಾರಿಸಿದ ಸಂಸ್ಥೆಯಾಗಿ ಬೆಳೆಯಲು 50 ವರ್ಷಗಳೇ ಹಿಡಿದಿವೆ.

ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅತಿ ಬಹುಮುಖ್ಯವಾದದ್ದು ಏಕೆಂದರೆ, ಇಲ್ಲಿ ನಿಖರತೆಯ ಅವಶ್ಯಕತೆ ಇದೆ. ಎಮರ್ಜೆಂಟ್ ಬಯೋ ಸಲ್ಯೂಷನ್ ಎಂಬ ಬಾಲ್ಟಿಮೋರ್ (ಅಮೇರಿಕಾದ ಒಂದು ನಗರ) ಮೂಲದ ಕಂಪನಿ ತನ್ನ ಎಡವಟ್ಟಿನಿಂದಾಗಿ ಜಾನ್ಸನ್ ಅಂಡ್ ಜಾನ್ಸನ್ ಹಾಗೂ ಆಸ್ಟ್ರಾಜನೆಕಾ ಲಸಿಕೆಗಳ ಪದಾರ್ಥಗಳನ್ನು ಬೆರೆಸಿದ ಕಾರಣ ಒಂದೂವರೆ ಕೋಟಿಗೂ ಹೆಚ್ಚು ಲಸಿಕೆ ಡೋಸ್ಗಳು ಕಲುಷಿತಗೊಂಡಿವೆ. ಎರಡು ದಶಕಗಳಿಗಿಂತಲೂ ಹೆಚ್ಚು ಅನುಭವವಿರುವ ಕಂಪನಿ ಅದಾಗಿದ್ದರೂ ಸಹ ಅಂತಹ ಅವಘಡವೊಂದು  ಸಂಭವಿಸಿದೆ. ಬಿಗಿ ಮಾನದಂಡಗಳಿಲ್ಲದೆ ಲಸಿಕೆಯ ಉತ್ಪಾದನೆಯನ್ನು ವಿಶ್ವದಾದ್ಯಂತ ತಯಾರಿಸಲು ಅನುಮತಿ ಕೊಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ. ಅದಲ್ಲದೆ, ಬೌದ್ಧಿಕ ಆಸ್ತಿ ಹಕ್ಕುಗಳ ಅಧಿಕಾರ ವ್ಯಾಪ್ತಿಯಿಂದ ಹೊರಗಿರುವ ದೇಶಗಳಲ್ಲಿ ತಯಾರಿಸಬಹುದಾದ ನಕಲಿ ಲಸಿಕೆಗಳ ಪಿಡುಗು ಸಹ ಇದೆ. ಒಂದು ನಕಲಿ ಗುಚ್ಚಿ (ಪ್ರತಿಷ್ಠಿತ ಬ್ರಾಂಡ್ Gucci) ಕೈಚೀಲ ಯಾರನ್ನು ಕೊಲ್ಲುವುದಿಲ್ಲ; ಆದರೆ, ನಕಲಿ ಲಸಿಕೆಯು ಅದೃಷ್ಟ ನೆಟ್ಟಗಿಲ್ಲದಿದ್ದರೆ ನಿಷ್ಪರಿಣಾಮಕಾರಿಯಷ್ಟೇ ಆಗುವುದಲ್ಲ, ಗಂಭೀರ  ಅನಾರೋಗ್ಯವನ್ನೂ  ಉಂಟುಮಾಡಬಹುದು.

ಅಸ್ತಿತ್ವದಲ್ಲಿರುವ ಘಟಕಗಳಲ್ಲಿ ಉತ್ಪಾದನೆಯ ಹೆಚ್ಚಳ, ಸುರಕ್ಷಿತ ಮತ್ತು ಯೋಜಿತ ಸಾಮರ್ಥ್ಯ ವಿಸ್ತರಣೆ, ಪೂರೈಕೆ ಸರಪಳಿಯ ರಕ್ಷಣೆ, ಪ್ರಪಂಚದಾದ್ಯಂತ ಹೆಚ್ಚಿನ ಲಸಿಕೆ ಪೂರೈಕೆಯ ಖಾತ್ರಿ ಹಾಗೂ ಲಸಿಕೆ ಕುರಿತಾದ ಸಂದೇಹಗಳ ವಿರುದ್ಧದ ಜಾಗೃತಿಯಂತಹ ಹೊಸ ಪ್ರಯತ್ನಗಳು, ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಜಿನಿವಾದಲ್ಲಿನ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ನಡೆಸುವ ತಿಂಗಳುಗಳ ಮಾತುಕತೆಗಿಂತ ಹೆಚ್ಚು ಪರಿಣಾಮಕಾರಿ.

ಈ ಅಂಕಣವನ್ನು ಅಸಲು ದಿ ಮಿಂಟ್ ಪತ್ರಿಕೆಯಲ್ಲಿ 13 May, 2021 ರಂದು ಪ್ರಕಟಿಸಲಾಗಿದೆ ಹಾಗೂ ಅವರ ಅನುಮತಿಯೊಂದಿಗೆ ಅನುವಾದಿಸಿ ಪ್ರಕಟಿಸಿದೆ.

ಅನುವಾದ: ಲೋಕೇಶ ಕೆಂಪಣ್ಣ

ಇದನ್ನೂ ಓದಿ:

ಸಲೀಲ್ ತ್ರಿಪಾಠಿಯವರು ಹೆಸರಾಂತ ಲೇಖಕರೂ ಮತ್ತು ಸಂಪಾದಕರೂ ಆಗಿದ್ದಾರೆ. ಪ್ರಸ್ತುತ ಅವರು ಅಮೆರಿಕಾದಲ್ಲಿರುವ ಅಂತಾರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ವ್ಯವಹಾರಗಳ ಸಂಸ್ಥೆಯಲ್ಲಿ ಹಿರಿಯ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಲೇಖನಗಳು ‘ದಿ ವಾಷಿಂಗ್ಟನ್ ಪೋಸ್ಟ್’, ‘ದಿ ನ್ಯೂಯಾರ್ಕ್ ಟೈಮ್ಸ್’, ‘ದಿ ವಾಲ್ ಸ್ಟ್ರೀಟ್ ಜರ್ನಲ್’, ‘ದಿ ಗಾರ್ಡಿಯನ್’, ‘ದಿ ನ್ಯೂ ಸ್ಟೇಟ್ಸ್ಮನ್’ ಮುಂತಾದ ಹೆಸರಾಂತ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತ್ರಿಪಾಠಿಯವರು ಹಾರ್ವರ್ಡ್ ಯೂನಿವರ್ಸಿಟಿಯ ಹಿರಿಯ ಅತಿಥಿ ಉಪನ್ಯಾಸಕರಾಗಿದ್ದಾರೆ. ಅವರು ಲಂಡನ್ನಿನ ‘ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್’ ಸಂಸ್ಥೆಯ ಕಾರ್ಯನಿರ್ವಾಹಕ ಸಮಿತಿಯ ಅಧ್ಯಕ್ಷರೂ ಮತ್ತು ಅಂತರಾಷ್ಟ್ರೀಯ ‘ರೈಟರ್ಸ್ – ಇನ್ – ಪ್ರಿಸನ್’ ಸಮಿತಿಯ ಅಧ್ಯಕ್ಷರಾಗಿದ್ದಾರೆ. 

Spread the love