ಲೇಖನಗಳು

ಕೋವಿಡ್-19 ಜಾಗತಿಕ ಪ್ರತಿಕ್ರಿಯೆ: TRIPS ಕರಾರಿನ ಷರತ್ತುಗಳನ್ನು ಏಕೆ ಮನ್ನಾ ಮಾಡಲೇಬೇಕು?

ಈ ಮನ್ನಾ ಜಾರಿಗೆ ಬಂದರೆ ಕೃತಿಸ್ವಾಮ್ಯ, (ಕಾಪಿರೈಟ್) ಸ್ವಾಮ್ಯ ಸನ್ನದು (ಪೇಟೆಂಟ್), ಕೈಗಾರಿಕಾ ವಿನ್ಯಾಸಗಳು ಹಾಗೂ ರಹಸ್ಯ ಮಾಹಿತಿ ಯಂತಹ ಬೌದ್ಧಿಕ ಆಸ್ತಿಗಳನ್ನು ಕಾಪಾಡಲು ಇರುವಂತಹ ಕೃತಕ ತಡೆಗೋಡೆಗಳು ಇಲ್ಲದಂತಾಗುತ್ತವೆ.

ಇದೇ 2 ಅಕ್ಟೋಬರ್ 2020ರಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ, ವಿಶ್ವ ವ್ಯಾಪಾರ ಸಂಸ್ಥೆಯ ಟ್ರಿಪ್ಸ್ (TRIPS) ಪರಿಷತ್ತಿಗೆ ಹೊರಡಿಸಿದ ತಮ್ಮ ಜಂಟಿ ಹೇಳಿಕೆಯಲ್ಲಿ ಕೋವಿಡ್ 19 ಅವಧಿಯ ನಂತರದ ದಿನಗಳಲ್ಲಿ ಕೈಗೆಟುಕದ ವೈದ್ಯಕೀಯ ಉತ್ಪನ್ನಗಳು, ಹೆಚ್ಚಿಸಬೇಕಾದ ಸಂಶೋಧನೆ ಹಾಗೂ ಅಭಿವೃದ್ಧಿ, ಕೋವಿಡ್-19 ವಿರುದ್ಧ ಹೋರಾಡಲು ಅಗತ್ಯವಿರುವ ಅಗತ್ಯ ವೈದ್ಯಕೀಯ ಉತ್ಪನ್ನಗಳ ತಯಾರಿಕೆ ಹಾಗೂ ಪೂರೈಕೆಯಂತಹ ಸಮಸ್ಯೆಗಳ ಕುರಿತು ಕಾಳಜಿ ವ್ಯಕ್ತಪಡಿಸಿವೆ.

ಕೋವಿಡ್ 19 ಕ್ಕೆ ಸಂಬಂಧಿಸಿದಂತೆ ಸ್ವಾಮ್ಯ ಸನ್ನದು, ಹಕ್ಕುಸ್ವಾಮ್ಯಗಳು, ವ್ಯಾಪಾರ ರಹಸ್ಯಗಳು ಮತ್ತು ಕೈಗಾರಿಕಾ ವಿನ್ಯಾಸ ಗಳಿಗೆ ಸಂಬಂಧಿಸಿದ ಟ್ರಿಪ್ಸ್ ಒಪ್ಪಂದದ ನಿಬಂಧನೆಗಳ ಅನುಷ್ಠಾನ, ಅನ್ವಯ, ಮತ್ತು ಜಾರಿಗೊಳಿಸುವಿಕೆಯನ್ನು ತಾತ್ಕಾಲಿಕವಾಗಿ ಮನ್ನಾ ಮಾಡಲು ಈ ದೇಶಗಳು ಕರೆ ನೀಡಿವೆ.

ಈ ಮನ್ನಾ, ಅಗತ್ಯ ವೈದ್ಯಕೀಯ ಉತ್ಪನ್ನಗಳ ಮೇಲಿನ ಬೌದ್ಧಿಕ ಆಸ್ತಿಯ ಏಕಸ್ವಾಮ್ಯವನ್ನು ತೊಡೆದುಹಾಕಲು ಮತ್ತು ಸಾರ್ವತ್ರಿಕ ಉತ್ಪಾದನೆಯ ಮೂಲಕ ಕೋವಿಡ್-19 ಸಂಬಂಧಿಸಿದ ವೈದ್ಯಕೀಯ ಉತ್ಪಾದನೆಯನ್ನು ಹೆಚ್ಚಿಸಲು ಉದ್ದೇಶಿಸಿದೆ.
ಈ ವಿನಂತಿಯನ್ನು ವಿಶ್ವ ವ್ಯಾಪಾರ ಸಂಸ್ಥೆಯ ಒಪ್ಪಂದ ವಿಧಿ 19 3b ಅಡಿಯಲ್ಲಿ ಟ್ರಿಪ್ಸ್ ಪರಿಷತ್ತಿಗೆ ಸಲ್ಲಿಸಲಾಗಿದೆ. ಈ ವಿನಂತಿ ಮತ್ತು ಅದರೊಂದಿಗಿನ ಕರಡು ನಿರ್ಧಾರವು ಅಂತಹ ನಿರ್ಧಾರಗಳನ್ನು ಸಮರ್ಥಿಸುವಂತಹ ಅಸಾಧಾರಣ ಸಂದರ್ಭಗಳು, ಮನ್ನಾ ಅನ್ವಯವನ್ನು ನಿಯಂತ್ರಿಸುವ ನಿಯಮಗಳು ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ವಿವರಿಸುತ್ತವೆ. ಇಂತಹ ಮನ್ನಾಗಳನ್ನೂ ಹಿಂದೆಯೂ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಅನುಮತಿಸಲಾಗಿದೆ ಮತ್ತು ಟ್ರಿಪ್ಸ್ ನಲ್ಲಿಯೇ ಈ ಪ್ರಕ್ರಿಯೆಗೆ ಪರವಾನಗಿ ಇದೆ.

ಈ ಬಿಕ್ಕಟ್ಟಿಗೆ ತಾತ್ಕಾಲಿಕ ಕ್ರಮಗಳು ಸರಿಯಾದ ಪರಿಹಾರವಲ್ಲ. ಮುರಿದ ಸರಬರಾಜು ಸರಪಳಿಗಳು ಮತ್ತು ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆ, ಜೀವರಕ್ಷಕ ವೈದ್ಯಕೀಯ ತಂತ್ರಜ್ಞಾನಗಳ ಮತ್ತು ಔಷಧಗಳ ತೀವ್ರ ಕೊರತೆಗೆ ಕಾರಣವಾಗುತ್ತದೆ. ಇದಕ್ಕೆ ಯಶಸ್ವಿ ಮತ್ತು ಸುಸ್ಥಿರ ಮಾರ್ಗೋಪಾಯವೆಂದರೆ ದೇಶೀಯ ಉತ್ಪಾದನೆಯನ್ನು ಹಲವಾರು ಬೌದ್ಧಿಕ ಆಸ್ತಿಗಳಿಂದ ಉಂಟಾಗಿರುವ ತಡೆಗೋಡೆಗಳನ್ನು ಪಾರು ಮಾಡುವುದು.

ಈ ಪ್ರಕ್ರಿಯೆ ನಂತರ ಹುಟ್ಟುವ ಪ್ರಶ್ನೆಯೆಂದರೆ, ಜಾಗತಿಕ ಬೌದ್ಧಿಕ ಆಸ್ತಿ ವ್ಯವಸ್ಥೆಯಿಂದ ಸೃಷ್ಟಿಸಲ್ಪಟ್ಟ ಅಡೆತಡೆಗಳನ್ನು ನಿವಾರಿಸಲು ದೇಶಗಳಿಗೆ ಅವಕಾಶ ನೀಡುವಂತಹ ಅವಕಾಶವನ್ನು ಟ್ರಿಪ್ಸ್ ಹೊಂದಿದೆ. ಆದರೂ, ತಾತ್ಕಾಲಿಕ ಮನ್ನಾ ಏಕೆ?
ಟ್ರಿಪ್ಸ್ ಒಪ್ಪಂದವು ಬೌದ್ಧಿಕ ಆಸ್ತಿ ರಕ್ಷಣೆ ಮತ್ತು ಜಾರಿಗೊಳಿಸುವಿಕೆಗೆೆ ಕೆಲವು ಕನಿಷ್ಠ ಮಾನದಂಡಗಳನ್ನು ಕಡ್ಡಾಯಗೊಳಿಸುತ್ತದೆ. ಕಡ್ಡಾಯ ಪರವಾನಿಗೆ ಅಥವಾ ಸರ್ಕಾರಿ ಬಳಕೆಯ ಪರವಾನಿಗೆಯ ಮೂಲಕ, ಬೌದ್ಧಿಕ ಆಸ್ತಿ ಹೊಂದಿರುವವರ ಹಿತಾಸಕ್ತಿಯನ್ನು ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಸಮತೋಲನಗೊಳಿಸಲಾಗಿದೆ. ಆದಾಗ್ಯೂ, ಕೋವಿಡ್-19 ಪ್ರತಿಕ್ರಿಯೆಗಳಿಗೆ ವೈದ್ಯಕೀಯ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸಲು ಬೌದ್ಧಿಕ ಆಸ್ತಿ ವ್ಯವಸ್ಥೆಗಳು ಅಡೆತಡೆಗಳನ್ನು ಸೃಷ್ಟಿಸಿವೆ.

ಉದಾಹರಣೆಗೆ, ಕೋವಿಡ್ ವಿರುಧ್ಧದ ಹೋರಾಟದಲ್ಲಿ ಲೈಸಿಸ್ ಬಫರ್ ದ್ರಾವಣದ ಕೊರತೆಯಿಂದಾಗಿ ನೆದರ್ಲ್ಯಾಂಡ್ಸ್ ದೇಶ ಸೀಮಿತ ಪರೀಕ್ಷಾ ನೀತಿಗೆ ಮೊರೆಹೋಗಬೇಕಾಯಿತು. ಕೋವಿಡ್ ಪರೀಕ್ಷೆಯಲ್ಲಿ ಈ ದ್ರಾವಣ ನಿರ್ಣಾಯಕ ಅಂಶವಾಗಿದ್ದು, ಇದರ ಕೊರತೆಯನ್ನು ಸೃಷ್ಟಿಸಿದ್ದು ಒಂದು ಔಷಧೀಯ ಕಂಪನಿ ರೋಸೆ (ROCHE). ರಾಸಾಯನಿಕ ಕಾರಕಗಳ ಮಾರಾಟವು ಈ ಕಂಪನಿಯ ಆದಾಯದ ಮಾರ್ಗವಾಗಿತ್ತು ಮತ್ತು ಈ ಕಂಪನಿಯ ರಾಸಾಯನಿಕ ಕಾರಕಗಳ ಮೇಲೆ ಡಚ್ ಪ್ರಯೋಗಾಲಯಗಳು ಅವಲಂಬಿತವಾಗಿದ್ದವು. ಪ್ರಯೋಗಾಲಯಗಳು, ರೋಚೆ ಅವರೊಂದಿಗೆ ಮಾರಾಟಗಾರ ಬಂಧೀ (vendor lock) ಒಪ್ಪಂದದಲ್ಲಿ ಇದ್ದವು ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯನ್ನು ಅಪಾಯಕ್ಕೆ ತಳ್ಳಿ ರೋಚೆ ತಯಾರಿಕಾ ವಿಧಾನವನ್ನು ರಹಸ್ಯವಾಗಿಟ್ಟಿತ್ತು. ಆದ್ದರಿಂದ, ರೋಚೆ ಪರೀಕ್ಷಾ ಕಿಟ್ ಗಳೊಂದಿಗೆ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಿದಾಗ ರಾಸಾಯನಿಕ ಕಾರಕಗಳ ಬೇಡಿಕೆಗೆ ತಕ್ಕ ಪೂರೈಕೆ ನೀಡಲು ಸಾಧ್ಯವಾಗಲಿಲ್ಲ. ರೋಚೆ ಹೀಗೆ ತಯಾರಿಕಾ ವಿಧಾನವನ್ನು ಕನಿಷ್ಠ ತಮ್ಮ ಜೊತೆ ಒಪ್ಪಂದ ಹೊಂದಿರುವ ಪ್ರಯೋಗಾಲಗಳೊಂದಿಗೆ ಹಂಚಿಕೊಂಡಿದ್ದಲ್ಲಿ ಸುಲಭವಾಗಿ ಈ ಕೃತಕ ಕೊರತೆಯನ್ನು ತಡೆಯಬಹುದಿತ್ತು.

ವೆಂಟಿಲೇಟರ್ ಕೊರತೆಗೆ ಸಂಬಂಧಿಸಿದಂತೆ ಇಟಲಿಯಲಿ ಬಿಕ್ಕಟ್ಟಿನದೂ ಇಂಥದೇ ಕಥೆ. 3ಡಿ ತಂತ್ರಜ್ಞಾನದ ಸಹಾಯದಿಂದ ಗಮನಾರ್ಹವಾದ ಕಡಿಮೆ ಬೆಲೆಯಲ್ಲಿ ಬಿಕ್ಕಟ್ಟನ್ನು ಪರಿಹರಿಸಬಹುದಾಗಿತ್ತು, ಆದರೆ 3ಡಿ ಮುದ್ರಣ ತಂತ್ರಜ್ಞಾನಕ್ಕೆ ಸಂಬಂಧಿಸಿದ ಒಂದು ಸಂಕೀರ್ಣ ಬೌದ್ಧಿಕ ಆಸ್ತಿ ಸಮಸ್ಯೆ ಪ್ರತಿಕ್ರಿಯೆಯನ್ನು ಅಳೆಯಲು ಅಡ್ಡಿಯಾಯಿತು. ಕವಾಟದಂತಹ ಘಟಕವನ್ನು ಸ್ಕ್ಯಾನ್ ಮಾಡುವಲ್ಲಿ ಮತ್ತು ಮುದ್ರಣ ಸಾಧನಗಳನ್ನು ಬಳಸಿಕೊಂಡು ಒಂದು ಭಾಗವನ್ನು ತಯಾರಿಸುವ ಕ್ರಿಯೆಯಲ್ಲಿ ಅಸ್ತಿತ್ವದಲ್ಲಿರುವ ಪೇಟೆಂಟ್ ವಿನ್ಯಾಸ ಅಥವಾ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುವ ಅಪಾಯವಿದೆ ಹಾಗೂ ಇದು ನ್ಯಾಯಾಲಯದಲ್ಲಿ ಪ್ರಕರಣಗಳಿಗೆ ಎಡೆ ಮಾಡಿಕೊಡಬಹುದೆಂದು ಕಾನೂನು ಸಂಸ್ಥೆಯೊಂದು ಎಚ್ಚರಿಸಿತ್ತು. ಇದು ಸಾಂಕ್ರಾಮಿಕ ರೋಗದ ವಿರುದ್ಧದ ಪ್ರತಿಕ್ರಿಯೆ ಹೇಗೆ ದುಬಾರಿ ಬೌದ್ಧಿಕ ಆಸ್ತಿ ವ್ಯವಸ್ಥೆಗಳ ಅವಲಂಬಿಸಿದೆ ಎಂದು ತೋರಿಸುತ್ತದೆ.

ಬೌದ್ಧಿಕ ಆಸ್ತಿ ರಚಿಸಿದ ಅಡೆತಡೆಗಳು ಎನ್ 95 ಮುಖಗವಸುಗಳಂತಹ ದಿನನಿತ್ಯದ ಮುಂಚೂಣಿ ರಕ್ಷಣಾತ್ಮಕ ಉಪಕರಣಗಳ ನಡುವೆಯೂ ನಿಂತಿವೆ. ಅಮೇರಿಕ ಸಂಯುಕ್ತ ಸಂಸ್ಥಾನದ ಕೆಂಟಕಿಯ ರಾಜ್ಯಪಾಲರು ಅಲ್ಲಿನ 3m ಎಂಬ ಬಹುರಾಷ್ಟ್ರೀಯ ಕಂಪನಿಯನ್ನು ಎನ್ 95 ಶ್ವಾಸ ಯಂತ್ರಗಳ ಮೇಲಿನ ಪೇಟೆಂಟನ್ನು ಬಿಡುಗಡೆಗೊಳಿಸಲು ಕರೆ ನೀಡಿದ್ದರೂ, ದುರದೃಷ್ಟವಶಾತ್ ಆ ಕೆಲಸ ಇಲ್ಲಿಯವರೆಗೂ ಆಗಿಲ್ಲ. ಇದಲ್ಲದೆ, ಲಸಿಕೆ ಅಭಿವೃದ್ಧಿಪಡಿಸುವ ತಂತ್ರಜ್ಞಾನದ ಮೇಲೆ ಅನೇಕ ಪೇಟೆಂಟ್ ಕ್ಲೇಮುಗಳಿವೆ. ಇದರ ಸಾರಾಂಶವೇನೆಂದರೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನಮಗೆ ಅಗತ್ಯವಿರುವ ಹೆಚ್ಚಿನ ಯುದ್ಧೋಪಾದಿಯ ಪ್ರಕ್ರಿಯೆಯನ್ನು ಬೌದ್ಧಿಕ ಆಸ್ತಿ ಹಕ್ಕುಗಳ ವ್ಯವಸ್ಥೆಯು ನಿಗ್ರಹಿಸುತ್ತಿದೆ.

ಕಡ್ಡಾಯ ಪರವಾನಿಗೆ ಅಂತಹ ಸಾಧನಗಳೂ ಎರಡು ಪ್ರಮುಖ ಕಾರಣಗಳಿಂದಾಗಿ ಬಿಕ್ಕಟ್ಟನ್ನು ಎದುರಿಸಲು ಅಸಮರ್ಥವಾಗಿವೆ. ಮೊದಲನೇದಾಗಿ, ಆರ್ಟಿಕಲ್ 31 ರ ಪ್ರಕಾರ ಬಹಳ ದೀರ್ಘವಾದ ಷರತ್ತುಗಳು ಮತ್ತು ಪ್ರಕ್ರಿಯೆಯನ್ನು ಒಂದು ಕೋರಿಕೆ ಹಾದು ಹೋಗಬೇಕಾಗುತ್ತದೆ. ಇದು ಸಮಾಲೋಚನೆ, ಕಾರ್ಯಾಚರಣೆಯ ವ್ಯಾಪ್ತಿಯ ಪೇಟೆಂಟಿನ ಪೂರ್ವ ವ್ಯಾಖ್ಯಾನ ಮತ್ತು ಪರವಾನಗಿಯ ಅವಧಿ, ಅಧಿಕಾರಗಳು ಮತ್ತು ಪರಿಹಾರಗಳನ್ನು ಮುಂತಾದ ಹಂತಗಳನ್ನೊಳಗೊಂಡಿವೆ. ತುರ್ತು ಸಂದರ್ಭಗಳಲ್ಲಿ ಸಮಾಲೋಚನೆಗಳಂತಹ ಕೆಲವು ನಿಬಂಧನೆಗಳನ್ನು ಬಿಡಲು ಅವಕಾಶವಿದ್ದರೂ, ಉಳಿದ ಪ್ರಕ್ರಿಯೆಗಳು ಕಾನೂನು, ರಾಜಕೀಯ ಮತ್ತು ವಹಿವಾಟು ವೆಚ್ಚಗಳಿಗೆ ಕಾರಣವಾಗುತ್ತವೆ. ಈ ಮಟ್ಟಿನ ವೆಚ್ಚವು ಒಂದು ಪೇಟೆಂಟಿಗೆ ನಗಣ್ಯವೆಂದು ತೋರುತ್ತದೆ. ಆದರೆ, ಒಂದೇ ಬಾರಿಗೆ, ದುಬಾರಿ ಪ್ರಕ್ರಿಯಾ ವೆಚ್ಚದ ಅನೇಕ ಪೇಟೆಂಟ್ ಗಳನ್ನು ಪರಿಷ್ಕರಿಸುವುದು ದುಬಾರಿಯಾಗುತ್ತದೆ.

ಎರಡನೆಯದಾಗಿ, ಕಡ್ಡಾಯ ಪರವಾನಿಗೆಗಳನ್ನು ನೀಡುವುದನ್ನು ನಿಲ್ಲಿಸಲು, ಅದರಲ್ಲೂ ಔಷಧೀಯ ಮತ್ತು ಸಂಬಂಧಿತ ಕೈಗಾರಿಕೆಗಳಲ್ಲಿ ನಿಲ್ಲಿಸಲು, ಅಂತರಾಷ್ಟ್ರೀಯ ಮಟ್ಟದ ರಾಜಕೀಯ ಒತ್ತಡವಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು, ಸಾಂಕ್ರಾಮಿಕ ರೋಗದಂತಹ ಸಮಯಗಳಲ್ಲಿ ಅಂತಹ ಬೆದರಿಕೆ ಅಥವಾ ಪೀಡಕಗಳಿಗೆ ಶರಣಾಗುತ್ತವೆ. ಏಕೆಂದರೆ ಈಗಾಗಲೇ ಜರ್ಜರಿತವಾದ ಆರ್ಥಿಕತೆಯನ್ನು ಮತ್ತಷ್ಟು ವ್ಯಾಪಾರ ನಿರ್ಬಂಧಗಳ ಅಪಾಯಕ್ಕೆ ತಳ್ಳಲು ಈ ದೇಶಗಳು ಬಯಸುವುದಿಲ್ಲ.
ಮುಂದುವರಿದು, ಸಾಕಷ್ಟು ಉತ್ಪಾದನಾ ಸಾಮರ್ಥ್ಯಗಳಿಲ್ಲದಿದ್ದಾಗ ಅಥವಾ ಉತ್ಪಾದನಾ ಸಾಮರ್ಥ್ಯ ಇಲ್ಲದಿದ್ದಾಗ ಪರಿಸ್ಥಿತಿ ಹದಗೆಡುತ್ತದೆ. ಇದಕ್ಕೆ ಆರ್ಟಿಕಲ್ 31 ಎಫ್ ಅನ್ನು ಉತ್ತರವಾಗಿ ತರಬಹುದು. ಆದರೆ, ಇತ್ತೀಚಿನ ಪ್ರವೃತ್ತಿಗಳಾದ ‘ಲಸಿಕೆ ರಾಷ್ಟ್ರೀಯತೆ’ಯೊಂದಿಗೆ ಯಶಸ್ಸನ್ನು ಗ್ರಹಿಸುವುದು ಅಕೃತ್ರಿಮವಾಗಿದೆ. ಇದಲ್ಲದೆ, ‘ವ್ಯಾಪಾರ ಪಲ್ಲಟ’ವನ್ನು ತಡೆಗಟ್ಟಲು ಆರ್ಟಿಕಲ್ 31 ಬಿಐಎಸ್ ಇದರ ವ್ಯಾಪ್ತಿಯನ್ನು ಸೀಮಿತಗೊಳಿಸಿದೆ.

ಈ ಎಲ್ಲಾ ಆತಂಕಗಳಿಗೆ ಉತ್ತರಿಸುವ ಪ್ರಸ್ತುತ ವಿಧಾನವೆಂದರೆ ಸ್ವಯಂಪ್ರೇರಿತ ಉಪಕ್ರಮಗಳು (ಉದಾಹರಣೆಗೆ ACT, COVID 19 technology access framework and covid-19 patent pool). ಈ ಉಪಕ್ರಮಗಳು ಎಷ್ಟೇ ಶ್ಲಾಘನೀಯವಾಗಿದ್ದರೂ, ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಲು ಅವು ಸಾಲದು. ಇವುಗಳ ಸಂಭವನೀಯ ಯಶಸ್ಸು ಬೌದ್ಧಿಕ ಆಸ್ತಿ ಹೊಂದಿರುವವರ ಸ್ವಯಂಪ್ರೇರಿತ ಪಾಲ್ಗೊಳ್ಳುವಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ, ಮೇಲೆ ವಿವರಿಸಿದ ಅಂಶಗಳನ್ನು ಮೇರೆಗೆ, ಹೆಚ್ಚು ಅಸಂಭವನೀಯ.

ಮೂಲಭೂತವಾಗಿ, ಪ್ರಸ್ತುತ ವ್ಯವಸ್ಥೆಯು ಅಭಿವೃದ್ಧಿಹೊಂದುತ್ತಿರುವ ಮತ್ತು ಕಡಿಮೆ ಅಭಿವೃದ್ಧಿ ಹೊಂದಿರುವ ದೇಶಗಳ ಜನರಿಗೆ ಜೀವ ಉಳಿಸುವ ಅವಧಿಗಳನ್ನು ಪಡೆಯುವಲ್ಲಿ ವಿಳಂಬವನ್ನು ಸೃಷ್ಟಿಸುತ್ತದೆ. ಈ ಮನ್ನಾ ಜಾರಿಗೆ ಬಂದರೆ ಕೃತಿಸ್ವಾಮ್ಯ, ಪೇಟೆಂಟ್ ಗಳು, ರಕ್ಷಿತ ಕೈಗಾರಿಕಾ ವಿನ್ಯಾಸ ಮತ್ತು ರಹಸ್ಯ ಮಾಹಿತಿ ರೂಪದಲ್ಲಿ ಇರುವ ಜ್ಞಾನ ಸ್ವತ್ತು/knowledge asset ಗಳನ್ನು ರಕ್ಷಿಸಲು ರಚಿಸಲಾದ ಕೃತಕ ತಡೆಗೋಡೆಗಳು ಕಡಿಮೆಯಾಗುತ್ತವೆ. ಕೋವಿಡ್ 19 ರ ಪ್ರಕ್ರಿಯೆಗೆ ಅಗತ್ಯವಾದ ವೈದ್ಯಕೀಯ ಉತ್ಪನ್ನವನ್ನು ಉತ್ಪಾದಿಸಲು, ಕಾರ್ಯತಂತ್ರದ ಮಾಹಿತಿ, ತಂತ್ರಜ್ಞಾನ ಮತ್ತು ಮೂಲಭೂತ ಜ್ಞಾನಕ್ಕೆ ಸುಲಭ ಮತ್ತು ಸಮಾನವಾಗಿ ನಿಲುಕಲು ಅವಕಾಶ ಸೃಷ್ಟಿಸುತ್ತವೆ. ಹೀಗಾಗಿ, ಪ್ರಸ್ತಾಪವು ಸಮಯಕ್ಕೆ ತಕ್ಕಂತೆ ಬಿಕ್ಕಟ್ಟಿಗೆ ಒಂದು ಜಾಗತಿಕ ಪ್ರತಿರೋಧವನ್ನು ನಿರ್ಭಯವಾಗಿ ತೋರಿಸಲು ಅವಕಾಶ ಸೃಷ್ಟಿಸುತ್ತಿದೆ.

ಸಂಪಾದಕರ ಟಿಪ್ಪಣಿ : ಪ್ರಸ್ತುತ ಈ ಹೇಳಿಕೆಯ ಮೇಲೆ TRIPS ಪರಿಷತ್ತಿನಲ್ಲಿ ಮಾತುಕತೆ ನಡೆಯುತ್ತಿದೆ.

(ಮೂಲತಃ ದೆಲ್ಲಿಪೋಸ್ಟ್ ಪತ್ರಿಕೆಯಲ್ಲಿ 18.10.2020ರಂದು ಪ್ರಕಟವಾದ ಲೇಖನವಾಗಿದ್ದು, ಕನ್ನಡಕ್ಕೆ ಅನುವಾದಿಸಿದ್ದು ಲೋಕೇಶ್ ಕೆಂಪಣ್ಣ ಅವರು.)

ವಿ.ಸೂ.: ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿದೆ.

Spread the love